ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕುಡಿಯುವ ನೀರಿಗೇ ಬರ; ಆದರೂ ಐಪಿಎಲ್ ಕ್ರಿಕೆಟ್ ಜ್ವರ!

ಕುಡಿಯುವ ನೀರಿಗೂ ಐಪಿಎಲ್ ಕ್ರಿಕೆಟ್‌ಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ನೀವು ಕೇಳಬಹುದು. ಆದರೆ ಖಂಡಿತ ಸಂಬಂಧವಿದೆ. ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ಬಾಂಬೆ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದರಲ್ಲಿ ಈ ಪ್ರಶ್ನೆಯನ್ನು ಎತ್ತಿದೆ.

ಹೌದು, ಮಹಾರಾಷ್ಟ್ರದ ೨೧ ಜಿಲ್ಲೆಗಳು ಈಗ ತೀವ್ರ ಬರಪೀಡಿತ. ಅದರಲ್ಲೂ ಲಾತೂರು ಮತ್ತು ಪರ್ಬನಿ ಜಿಲ್ಲೆಗಳಲ್ಲಂತೂ ಕುಡಿಯುವ ನೀರಿಗೇ ತತ್ವಾರ. ipl + drought article pictureಲಾತೂರು ಯಾವಾಗಲೂ ಬರಪೀಡಿತ ಪ್ರದೇಶವೆಂದ ಪ್ರಸಿದ್ಧಿ. ಈ ಬಾರಿಯಂತೂ ಲಾತೂರಿನಲ್ಲಿ ೧೫ ದಿನಗಳಿಗೊಮ್ಮೆ ಕುಡಿಯುವ ನೀರು ಸಿಕ್ಕಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಅಲ್ಲೀಗ ರಾಜ್ಯಸರ್ಕಾರ ಭಾರತೀಯ ದಂಡ ಸಂಹಿತೆಯ ೧೪೪ನೇ ಸೆಕ್ಷನ್ ಜಾರಿಗೊಳಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಕಳೆದ ಕೆಲವು ತಿಂಗಳಿನಿಂದ ಮರಾಠವಾಡ ಪ್ರದೇಶದಲ್ಲಿ ನೀರಿನ ತೀವ್ರ ಕೊರತೆ ನಿರ್ಮಾಣವಾಗಿದ್ದು, ಜಲಮೂಲಗಳ ಬಳಿ ಸೇರುವ ಜನರು ನೀರಿಗಾಗಿ ಸಿಟ್ಟಿನ ಬರದಲ್ಲಿ ಜಗಳ ಮಾಡಬಹುದು, ಘರ್ಷಣೆಗೂ ಕಾರಣವಾಗಬಹುದು ಎಂಬ ಭೀತಿ ಸರ್ಕಾರವನ್ನು ಕಾಡಿದೆ. ಅದಕ್ಕಾಗಿಯೇ ೧೪೪ನೇ ಸೆಕ್ಷನ್ ಜಾರಿಗೊಳಿಸಿದೆ.

ಲಾತೂರು ನಗರದಲ್ಲಿ ಮಾತ್ರವಲ್ಲ, ಮರಾಠವಾಡ ಪ್ರದೇಶದ ಎಲ್ಲ ೮ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳಿಂದ ತೀವ್ರ ಬರ. ಮಳೆಗಾಲದಲ್ಲಿ ಸಾಕಷ್ಟು ಮಳೆಯಾಗಿಲ್ಲ. ಬಿರುಮಳೆ ಮತ್ತು ಅಕಾಲಿಕ ಮಳೆ ಕೂಡ ಬಿದ್ದಿಲ್ಲ. ರೈತರು ಮುಂಗಾರು ಮತ್ತು ಹಿಂಗಾರು ಋತುವಿನಲ್ಲಿ ಪದೇ ಪದೇ ಬೆಳೆ ವೈಫಲ್ಯ ಕಂಡಿದ್ದಾರೆ. ಕೃಷಿ ಭೂಮಿ ಪಾಳು ಬಿದ್ದಿದೆ. ರೈತರ ಸಾಲದ ಮೊತ್ತ ಹಿಮಾಲಯದಂತೆ ಬೆಳೆದಿದೆ. ಸಾಲ ಮರುಪಾವತಿಸಲಾಗದೆ ಕಳೆದ ವರ್ಷ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡ ವಿದ್ಯಮಾನ ಈಗಲೂ ಕಹಿನೆನಪು. ರೈತರು ಗುಳೆ ಹೋಗುತ್ತಿದ್ದಾರೆ. ಹಳ್ಳಿಗಳಿಗೆ ಹೋಲಿಸಿದರೆ ನಗರಗಳಲ್ಲಿ ಕುಡಿಯುವ ನೀರು, ನೈರ್ಮಲ್ಯ ಇತ್ಯಾದಿ ಸೌಲಭ್ಯಗಳಲ್ಲಿ ಸುಧಾರಣೆ ಕಂಡಿದೆ. ಆದರೆ ಮರಾಠವಾಡ ಪ್ರದೇಶದ ನಗರಗಳಲ್ಲಿ ಈ ಮಾತು ಹೇಳುವಂತಿಲ್ಲ. ಅಲ್ಲಿನ ನಗರಗಳು ನೀರಿನ ಅಭಾವದಿಂದ ತತ್ತರಿಸಿವೆ. ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಔರಂಗಾಬಾದ್, ಸಿಖ್ ಪಂಥದ ಗುರುಗಳ ಪವಿತ್ರಸ್ಥಾನವೆನಿಸಿರುವ ನಾಂದೇಡ್ ಮತ್ತು ನೇಯ್ಗೆ ಸೀರೆಗಳಿಗೆ ಹೆಸರುವಾಸಿಯಾಗಿರುವ ಪೈಥಾನಿ – ಈ ಎಲ್ಲ ನಗರಗಳಲ್ಲೂ ಇದೇ ಕಥೆ.

ಲಾತೂರು ಸುಮಾರು ೫ ಲಕ್ಷ ಜನಸಂಖ್ಯೆಯ ನಗರ. ೨೦೧೫ರ ಅವಧಿಯಲ್ಲಿ ಇಲ್ಲಿನ ನಿವಾಸಿಗಳಿಗೆ ೨-೩ ವಾರಕ್ಕೊಮ್ಮೆ ನಗರಸಭೆಯ ನಲ್ಲಿಗಳಲ್ಲಿ ನೀರು ಸರಬರಾಜು ಆಗಿತ್ತು. ಜನರಿಗೆ ಮನೆಗಳಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದು ಮತ್ತು ಮಿತವಾಗಿ ಬಳಸುವುದು ಬಹುದೊಡ್ಡ ಸವಾಲು. ಚಿಕ್ಕ ಪುಟ್ಟ ಮನೆಗಳಲ್ಲಿ ವಾಸಿಸುವ ಬಡವರ ಗೋಳನ್ನಂತೂ ಕೇಳುವುದೇ ಬೇಡ. ೨೦೧೬ರ ಆರಂಭದಲ್ಲಿ ಚಳಿಗಾಲದ ಸಮಯದಲ್ಲೇ ಕುಡಿಯುವ ನೀರಿನ ಪೂರೈಕೆ ಪರಿಸ್ಥಿತಿ ಹದಗೆಟ್ಟುಹೋಗಿತ್ತು. ಈಗ ಲಾತೂರು ನಗರಕ್ಕೆ ಪ್ರತಿದಿನ ಅಗತ್ಯವಿರುವ ೮೦ ದಶಲಕ್ಷ ಲೀಟರ್ ನೀರಿನ ಬದಲಿಗೆ, ಕೇವಲ ೧೫ ದಶಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. ೩ ವಾರಕ್ಕೊಮ್ಮೆ ನಲ್ಲಿಯಲ್ಲಿ ನೀರು ಕಂಡರೆ ಅದು ಅಲ್ಲಿನ ಜನರ ಪುಣ್ಯ. ನೀರಿಗಾಗಿ ಜನರು ನೀರಿನ ಟ್ಯಾಂಕರ್‌ನ್ನೇ ಅವಲಂಬಿಸಬೇಕಾಗಿದೆ. ಮರಾಠವಾಡದ ಉದ್ದಕ್ಕೂ ಎಲ್ಲ ಹಳ್ಳಿಗಳಲ್ಲಿ ಕೃಷಿ ಮತ್ತು ವ್ಯಾಪಾರ ಚಟುವಟಿಕೆ ಸ್ಥಗಿತಗೊಂಡಿದೆ. ನೀರಿನ ಟ್ಯಾಂಕರ್‌ಗಳ ವಹಿವಾಟು ಮಾತ್ರ ಚೆನ್ನಾಗಿದ್ದು, ನೀರಿನ ಟ್ಯಾಂಕರ್ ಮಾಫಿಯಾ ಈಗ ಅಲ್ಲಿ ಪೈಪೋಟಿಗೆ ಮುಂದಾಗಿದೆ. ಬರಪೀಡಿತ ಮರಾಠವಾಡ ಪ್ರದೇಶದ ನಗರಗಳು ಮತ್ತು ಹಳ್ಳಿಗಳ ೪.೪ ದಶಲಕ್ಷ ಜನರು ಖಾಸಗಿ ನೀರಿನ ಟ್ಯಾಂಕರ್‌ಗಳನ್ನೇ ಅವಲಂಬಿಸಿದ್ದಾರೆಂದರೆ ಪರಿಸ್ಥಿತಿ ಎಷ್ಟು ಭೀಕರ ಎಂಬುದು ವೇದ್ಯ. ಅಲ್ಲಿನ ಮುನಿಸಿಪಲ್ ಕಾರ್ಪೊರೇಷನ್‌ಗಳಂತೂ ನೀರು ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದು, ಮಕ್ಕಳು ಮತ್ತು ವಯೋವೃದ್ಧರನ್ನು ಹೊರತುಪಡಿಸಿ ಉಳಿದವರೆಲ್ಲರೂ ನೀರಿಗಾಗಿ ಇಡೀ ರಾತ್ರಿ ಕಾಯಬೇಕಾದ ಪರಿಸ್ಥಿತಿ. ಜನರು ನೀರಿಗಾಗಿ ೩ ಗಂಟೆಗೂ ಹೆಚ್ಚುಕಾಲ ಕಾದ ನಿದರ್ಶನಗಳು ಲಾತೂರಿನಲ್ಲಿ ಸಾಕಷ್ಟು ಇವೆ.

ಲಾತೂರಿನ ಅಂಗನವಾಡಿ ಕೇಂದ್ರಗಳಂತೂ ಈಗ ಮಕ್ಕಳನ್ನು ಮನೆಗೆ ವಾಪಸ್ಸು ಕಳುಹಿಸತೊಡಗಿವೆ. ಮಕ್ಕಳಿಗೆ ನೀರಿನ ಸೌಲಭ್ಯವನ್ನು ಒದಗಿಸಲಾಗದೆ ಅಲ್ಲಿನ ಶಿಕ್ಷಕಿಯರು ಈ ತಂತ್ರಕ್ಕೆ ಮೊರೆಹೋಗಿದ್ದಾರೆ. ನೀರಿನ ಕೊರತೆಯಿಂದಾಗಿ ಮಕ್ಕಳಿಗೆ ಸೂಕ್ತ ಆಹಾರ ತಯಾರಿಸಲಾಗುತ್ತಿಲ್ಲ. ಜೊತೆಗೆ ಮಕ್ಕಳಿಗೆ ಅಗತ್ಯವಿರುವ ನೀರನ್ನು ಪೂರೈಸಲಾಗುತ್ತಿಲ್ಲ ಹಾಗಾಗಿ ನಾವು ಇನ್ನೇನು ಮಾಡಲು ಸಾಧ್ಯ ಎಂಬುದು ಅಲ್ಲಿನ ಶಿಕ್ಷಕಿಯರ ಅಳಲು.

ಲಾತೂರು ಪ್ರದೇಶದಲ್ಲಿ ವರುಣದೇವ ಜನರ ಮೊರೆಗೆ ಓಗೊಟ್ಟು ಸಕಾಲದಲ್ಲಿ ಮಳೆ ಸುರಿಸದಿದ್ದರೆ, ಮುಂದೊಂದು ದಿನ ಅದು ದೆವ್ವಗಳ ನಗರವಾಗಿ ಮರ್ಪಡುವುದರಲ್ಲಿ ಆಶ್ಚರ್ಯವಿಲ್ಲ. ಮಹಾರಾಷ್ಟ್ರ ಸರ್ಕಾರವೇನೋ ೧೨ ಸಾವಿರ ಹಳ್ಳಿಗಳು ಬರಪೀಡಿತ ಗ್ರಾಮಗಳೆಂದು ಘೋಷಿಸಿ ಕೈ ತೊಳೆದುಕೊಂಡಿದೆ. ಇಂತಹ ಘೋಷಣೆ ಕೆಲವು ಸ್ಥಾಪಿತಹಿತಾಸಕ್ತಿಗಳಿಗೆ ಸರ್ಕಾರದ ಸಬ್ಸಿಡಿ ಗಿಟ್ಟಿಸಲು ನೆರವಾಗಬಹುದಷ್ಟೆ. ಇಷ್ಟಕ್ಕೂ ಲಾತೂರಿನಲ್ಲಿ ಬೇರೆಲ್ಲ ಕಡೆಗಳಿಗಿಂತ ನೀರಿನ ಬರ ಪ್ರತಿವರ್ಷ ಹೆಚ್ಚಲು ಕಾರಣವೇನು? ಜಿಲ್ಲೆಯಲ್ಲಿ ಸತತ ಅರಣ್ಯನಾಶ, ಹೆಚ್ಚುತ್ತಿರುವ ಕಾರ್ಖಾನೆಗಳಿಂದ ಅಂತರ್ಜಲದ ದುರ್ಬಳಕೆ, ದೋಷಪೂರಿತ ಕೃಷಿ ವಿಧಾನ … ಇತ್ಯಾದಿಗಳ ಪರಿಣಾಮವಾಗಿ ಅಂತರ್ಜಲದ ಪ್ರಮಾಣ ತೀವ್ರ ಕುಗ್ಗಿದೆ. ಆದರೆ ಅಲ್ಲಿನ ಜನಸಂಖ್ಯೆ ಮಾತ್ರ ವಿಪರೀತ ಹಿಗ್ಗಿದೆ.

ಅಕಸ್ಮಾತ್ ಮರಾಠವಾಡ ಪ್ರದೇಶದಲ್ಲಿ ಮಳೆ ಬಂದರೂ ಆ ಮಳೆ ನೀರನ್ನು ಹಿಡಿದಿಡುವ ಯಾವುದೇ ವ್ಯವಸ್ಥೆ ಇಲ್ಲ. ಮಳೆ ನೀರೆಲ್ಲಾ ನದಿಗಳಿಗೆ ಹರಿದು ಹೋಗಿ, ಅನಂತರ ಸಮುದ್ರಕ್ಕೆ ಸೇರುತ್ತದೆ. ಕೊಳ, ಟ್ಯಾಂಕ್‌ಗಳು, ಜಲಾಶಯಗಳಲ್ಲಿ ನೀರನ್ನು ಸಂಗ್ರಹಿಸುವ ವ್ಯವಸ್ಥೆಗೆ ಆಡಳಿತ ಗಮನ ಹರಿಸಿಲ್ಲ. ಮಳೆ ಕೊಯ್ಲಿನ ಅನುಷ್ಠಾನವಂತೂ ಇಲ್ಲವೇ ಇಲ್ಲ. ಹೀಗಿರುವಾಗ ಅಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚುವುದಾದರೂ ಹೇಗೆ?

ಲಾತೂರಿನ ಬರ ಕೇವಲ ಒಂದು ನಿದರ್ಶನ. ಭಾರತದ ಬೇರೆ ನಗರಗಳಿಗೂ ಲಾತೂರಿನ ಬರ ಒಂದು ಎಚ್ಚರಿಕೆಯ ಗಂಟೆ. ಏಕೆಂದರೆ ಭವಿಷ್ಯದ ಯೋಜನೆಗಳು ಹೇಗಿರಬೇಕೆಂದು ಬಹುತೇಕ ನಗರಗಳಲ್ಲಿ ಯಾವುದೇ ಸ್ಪಷ್ಟ ಪರಿಕಲ್ಪನೆ ಇಲ್ಲ. ದೀರ್ಘಾವಧಿ ನೀರಿನ ಅಗತ್ಯಗಳ ಪೂರೈಕೆ ಬಗ್ಗೆ ದೂರದೃಷ್ಟಿಯ ಯೋಜನೆಗಳನ್ನೂ ಮಾಡಿಲ್ಲ.

ಮರಾಠವಾಡ ಪ್ರದೇಶದಲ್ಲಿ ತೀವ್ರ ಬರಪರಿಸ್ಥಿತಿ ಇದ್ದರೂ ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ನಾಗ್ಪುರಗಳಲ್ಲಿ ಈಗಾಗಲೇ ನಿರ್ಧಾರವಾಗಿರುವ ಐಪಿಎಲ್ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಇದರಲ್ಲೇನು ತಪ್ಪು ಎಂಬು ನೀವು ಪ್ರಶ್ನಿಸಬಹುದು. ಈ ಮೂರು ಕಡೆಗಳಲ್ಲಿ ಈ ಬಾರಿ ನಡೆಯಲಿರುವ ಐಪಿಎಲ್ ಪಂದ್ಯಗಳಿಗೆ ಪಿಚ್ ಸಿದ್ಧಪಡಿಸಲು ಬೇಕಾಗುವ ನೀರಿನ ಪ್ರಮಾಣ ಎಷ್ಟು ಗೊತ್ತೇ? ಒಂದು ಅಂದಾಜಿನಂತೆ ೭೦ ಲಕ್ಷ ಲೀಟರ್ ನೀರು ಬೇಕು ಎಂದು ಬಿಸಿಸಿಐ ಪದಾಧಿಕಾರಿಗಳೇ ಬಾಂಬೆ ಹೈಕೋರ್ಟಿನಲ್ಲಿ ನ್ಯಾಯಾಧೀಶರ ಪಾಟಿ ಸವಾಲಿಗೆ ಉತ್ತರಿಸುತ್ತಾ ತಿಳಿಸಿದ್ದಾರೆ. ಮಹಾರಾಷ್ಟ್ರದ ಮೂರು ಕಡೆಗಳಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ದೂರು ಅರ್ಜಿಯ ವಿಚಾರಣೆ ಬಾಂಬೆ ಹೈಕೋರ್ಟ್‌ನಲ್ಲಿ ಈಗ ನಡೆದಿದೆ. ಈ ಅರ್ಜಿ ಸಲ್ಲಿಸಿದ್ದು ಲೋಕಸತ್ತಾ ಆಂದೋಲನ ಎಂಬ ಒಂದು ಸರ್ಕಾರೇತರ ಸಂಸ್ಥೆ. ನ್ಯಾಯಾಲಯ ಬಿಸಿಸಿಐ ಹಾಗೂ ಸಂಬಂಧಿತ ಮುಂಬೈ ಕ್ರಿಕೆಟ್ ಅಸೋಸಿಯೇಷನ್, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಹಾಗೂ ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌ಗಳಿಗೆ ಈ ಕುರಿತು ನೋಟೀಸ್ ಜಾರಿ ಮಾಡಿ, ಐಪಿಎಲ್ ಕ್ರಿಕೆಟ್ ಪಿಚ್‌ಗಳಿಗೆ ಬಳಸುವ ನೀರಿನ ಬಗ್ಗೆ ವಿವರ ನೀಡಬೇಕೆಂದು ಆದೇಶಿಸಿದೆ. ಕುಡಿಯುವ ನೀರಿನ ತೀವ್ರ ಬರ ಎದುರಾಗಿರುವಾಗ ಕ್ರಿಕೆಟ್ ಪಂದ್ಯಗಳು ಅಗತ್ಯವೇ? ಎಂದೂ ನ್ಯಾಯಾಲಯ ಪ್ರಶ್ನಿಸಿದೆ.

೯ನೇ ಆವೃತ್ತಿಯ ಈ ಬಾರಿಯ ಐಪಿಎಲ್‌ನಲ್ಲಿ ಮಹಾರಾಷ್ಟ್ರದಲ್ಲೇ ಒಟ್ಟು ೨೦ ಪಂದ್ಯಗಳು ನಡೆಯಲಿವೆ. ಈ ಪೈಕಿ ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ೮ ಪಂದ್ಯಗಳು, ಪುಣೆಯಲ್ಲಿ ೯ ಪಂದ್ಯಗಳು ಹಾಗೂ ಉಳಿದ ೩ ಪಂದ್ಯಗಳು ನಾಗ್ಪುರದಲ್ಲಿ ನಡೆಯಲಿವೆ. ‘ಟೈಮ್ಸ್ ನೌ’ ವಾಹಿನಿಯಲ್ಲಿ ಈ ಕುರಿತು ಒಂದು ಭಯಂಕರ ಚರ್ಚೆಯೇ ನಡೆದು, ಐಪಿಎಲ್ ಪಂದ್ಯಗಳನ್ನು ತೀವ್ರ ಬರದ ಹಿನ್ನೆಲೆಯಲ್ಲಿ ಏಕೆ ರದ್ದುಪಡಿಸಬಾರದು ಎಂದು ಅರ್ನಬ್ ಗೋಸ್ವಾಮಿ ಎಂದಿನಂತೆ ಆಕ್ರೋಶ ಹೊರಗೆಡವಿದ್ದಾರೆ. ಬಿಸಿಸಿಐ ಪರವಾಗಿ ಚರ್ಚೆಯಲ್ಲಿ ಪಾಲ್ಗೊಂಡ ಚಾರು ಶರ್ಮ ಅವರ ವಾದವನ್ನು ಮಂಡಿಸುವುದಕ್ಕೆ ಅರ್ನಬ್ ಅವಕಾಶವನ್ನೇ ನೀಡಲಿಲ್ಲ. ಚಾರು ಶರ್ಮ ಹೇಳಬೇಕೆಂದಿದ್ದೇನೆಂದರೆ, ಐಪಿಎಲ್ ಪಂದ್ಯಗಳನ್ನು ತೀವ್ರ ಬರದ ಹಿನ್ನೆಲೆಯಲ್ಲಿ ರದ್ದುಪಡಿಸಲು ಅಭ್ಯಂತರವಿಲ್ಲ. ಆದರೆ ಮರಾಠವಾಡ ಪ್ರದೇಶದ ಬರ ಪರಿಸ್ಥಿತಿಗೆ ಇದು ಹೇಗೆ ಪರಿಹಾರವಾಗಬಲ್ಲದು? ಏಕೆಂದರೆ ಐಪಿಎಲ್ ಪಂದ್ಯಗಳು ಆರಂಭವಾಗುವುದಕ್ಕೂ ಮುನ್ನ ಮರಾಠವಾಡದಲ್ಲಿ ಬರ ಇರಲಿಲ್ಲವೇ? ಇಂತಹ ಬರ ಪರಿಸ್ಥಿತಿಗೆ ಸರ್ಕಾರ ಶಾಶ್ವತವಾದ ಪರಿಹಾರ ಏಕೆ ಕಂಡುಕೊಳ್ಳಬಾರದು? ಇದು ಚಾರು ಶರ್ಮಾ ಚರ್ಚೆಯಲ್ಲಿ ಎತ್ತಬೇಕೆಂದಿದ್ದ ಸಂಗತಿಗಳು. ಚಾರು ಶರ್ಮಾ ಅವರ ಈ ಪ್ರಶ್ನೆಗಳಲ್ಲಿ ನಿಜಾಂಶ ಇದ್ದೇ ಇದೆ. ಬರ ಇದೆಯೆಂದು ಈ ಬಾರಿಯೇನೋ ಮಹಾರಾಷ್ಟ್ರದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಅಥವಾ ರದ್ದು ಪಡಿಸುವ ಕ್ರಮ ಕೈಗೊಳ್ಳಬಹುದು. ಆದರೆ ಬರ ಪರಿಹಾರಕ್ಕೆ ಅದೊಂದೇ ಕ್ರಮ ಸಾಕ? ಎನ್ನುವುದು ಮುಖ್ಯ ಪ್ರಶ್ನೆ. ಐಪಿಎಲ್ ಪಂದ್ಯ ನಡೆಯುವ ಪಿಚ್‌ಗಳಿಗೆ ಮಾತ್ರವಲ್ಲ, ಟೈಮ್ಸ್ ಸಮೂಹದ ಕಾರ್ಪೊರೇಟ್ ಕಚೇರಿಗಳೂ ಸೇರಿದಂತೆ ಅನೇಕ ಕಚೇರಿಗಳಲ್ಲಿ ವಿವಿಧ ಉದ್ದೇಶಗಳಿಗೆ ವ್ಯರ್ಥವಾಗುವ ನೀರಿನ ಪ್ರಮಾಣವೆಷ್ಟು ಎಂದು ಯಾರಾದರೂ ಲೆಕ್ಕ ಹಾಕಿದ್ದಾರಾ? ನಗರಗಳಲ್ಲಿ ಕಾರುಗಳನ್ನು ತೊಳೆಯಲು, ತಮ್ಮ ಕೈದೋಟಗಳಿಗೆ ಹಾಯಿಸಲು ವ್ಯರ್ಥವಾಗುವ ನೀರೆಷ್ಟು ಎಂಬುದನ್ನೂ ಲೆಕ್ಕ ಹಾಕಬೇಡವೇ? ಇಂತಹ ಪ್ರಶ್ನೆಗಳು ಈಗ ಬರದ ಹಿನ್ನೆಲೆಯಲ್ಲಿ ಪ್ರಸ್ತುತವೆನಿಸುತ್ತವೆ.

ನಗರಗಳನ್ನು ಸ್ಮಾರ್ಟ್ ಸಿಟಿ ಮತ್ತು ಡಿಜಿಟಲ್ ತಾಣಗಳಾಗಿ ಪರಿವರ್ತಿಸುವ ಕನಸು ಸರ್ಕಾರಗಳದ್ದು. ಆದರೆ, ಅದರ ಜೊತೆಗೆ ಆ ನಗರಗಳಿಗೆ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಸರ್ಕಾರಗಳು ಮೊದಲು ಆದ್ಯತೆ ನೀಡಬೇಕು. ಮೂಲ ಸೌಕರ್ಯವೆನ್ನುವುದು ಕೇವಲ ಕಡತಗಳಲ್ಲೇ ಉಳಿಯಬಾರದು ಬದಲಿಗೆ ಶೇ. ೧೦೦ರಷ್ಟು ಅನುಷ್ಠಾನಕ್ಕೆ ಬರಬೇಕು. ಆಗ ಮಾತ್ರ ಮರಾಠವಾಡದ ಬರಪೀಡಿತ ನಗರಗಳ ಸಮಸ್ಯೆಗೆ ಪರಿಹಾರ ಸಿಗಬಹುದು.

ಲೇಖನ: ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*