ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕುಡಿಯುವ ನೀರ ನೆಲೆ ಅರಸುತ್ತ

ಗುಲ್ಬರ್ಗ ನಗರದಿಂದ 21 ಕಿ.ಮೀ. ದೂರದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕ್ಯಾಂಪಸ್ ಇದೆ. ತಾಲೂಕು ಕೇಂದ್ರ ಆಳಂದಕ್ಕೆ (ಗುಲ್ಬರ್ಗದಿಂದ 38 ಕಿ.ಮೀ.) ಹೋಗುವ ಮಾರ್ಗದಲ್ಲಿ ಇರುವ ಕಡಗಂಚಿ ಗ್ರಾಮದ ಬಳಿ ಇರುವ ನೂತನ ಕ್ಯಾಂಪಸ್ ನೋಡುವುದಕ್ಕೇನೋ ಚೆನ್ನಾಗಿದೆ. ಆದರೆ, ಆವರಣದಲ್ಲಿ ಅಥವಾ ಸಮೀಪದಲ್ಲಿ ಕುಡಿಯುವ ನೀರಿನ ಮೂಲ ಇಲ್ಲದೇ ಇರುವುದರಿಂದ, ನೀರಿನ ಸಮಸ್ಯೆ ವ್ಯಾಪಕವಾಗಿದೆ. ಕ್ಯಾಂಪಸ್‌ನಲ್ಲಿ ಕಾಮಗಾರಿ ಕೈಗೆತ್ತಿಕೊಂಡ ಮೊದಲ ಹಂತದಲ್ಲಿಯೇ ನೀರಿನ ಕೊರತೆ ಸಮಸ್ಯೆಯಾಗಬಹುದು ಎಂಬ ಸೂಚನೆಗಳು ದೊರೆತಿದ್ದವು. ಈಗ ಸಮಸ್ಯೆಯು ಗಂಭೀರ ಸ್ವರೂಪದ್ದಾಗಿದೆ. ಇದು ಕೇವಲ ಸಿಯುಕೆ ಕ್ಯಾಂಪಸ್‌ನ ಸಮಸ್ಯೆಯಲ್ಲ. ಆಳಂದ ಪಟ್ಟಣಕ್ಕೂ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಅದನ್ನು ಬಗೆ ಹರಿಸುವ bhima-bijapur - for devu pattar articleಉದ್ದೇಶದಿಂದಲೇ ಸಿಯುಕೆ ಮತ್ತು ಆಳಂದ ಪಟ್ಟಣಕ್ಕೆ ಅಮರ್ಜಾ ಜಲಾಶಯದಿಂದ ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿತ್ತು. ಬೇಸಿಗೆಯಲ್ಲಿ ಅಮರ್ಜಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವುದರಿಂದ ಸಹಜವಾಗಿಯೇ ಜಲಾಶಯದ ನೀರಿನ ಮಟ್ಟವೂ ಕುಸಿಯುತ್ತದೆ. ಅಂದರೆ ಬೇಸಿಗೆ ಅಥವಾ ಮಳೆ ಕಡಿಮೆಯಾದ ದಿನಗಳಲ್ಲಿ ಅಮರ್ಜಾ ಜಲಾಶಯದ ನೀರನ್ನು ಕುಡಿಯುವ ನೀರಿನ ಉದ್ದೇಶದಿಂದ ಆಳಂದ ಪಟ್ಟಣಕ್ಕೆ ಮತ್ತು ಸಿಯುಕೆ ಕ್ಯಾಂಪಸ್‌ಗೆ ಬಳಸುವುದು ಸಾಧ್ಯವಾಗುವುದಿಲ್ಲ. ಈಗ ಈ ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನ ಆರಂಭವಾಗಿದೆ. ಅಮರ್ಜಾ ಜಲಾಶಯಕ್ಕೆ  66 ಕಿ.ಮೀ. ದೂರದ ಭೀಮಾನದಿಯ ಸೊನ್ನ ಬ್ಯಾರೇಜ್‌ನಿಂದ ಪೈಪ್‌ಲೈನ್ ಮೂಲಕ ನೀರು ತರುವ ಹೊಸ ಯೋಜನೆಯದು. ಅಂದ ಹಾಗೆ ಭೀಮಾ ಕೂಡ ಸಾವಿನ ಕಡೆಗೆ ಮುಖ ಮಾಡಿರುವ ನದಿ. ಮಹಾರಾಷ್ಟ್ರದಲ್ಲಿ ಭೀಮಾನದಿ ನೀರಿನ ಬಳಕೆಯ ಉದ್ದೇಶದಿಂದ ಕೈಗೊಂಡಿರುವ ಯೋಜನೆಗಳು ಭೀಮೆಯ ಒಡಲನ್ನು ಬರಿದಾಗಿಸಿದೆ. ಆದರೂ ಸದ್ಯ ಅಮರ್ಜಾ ನದಿ ಎದುರಿಸುತ್ತಿರುವ ಸಮಸ್ಯೆ ನಾಳೆಯ ಭೀಮೆಗೂ ಎದುರಾಗುವ ದಿನಗಳು ದೂರವಿಲ್ಲ. ಬರಿದಾಗುತ್ತಿರುವ ನದಿಗಳ ಒಡಲು ಆತಂಕ ಹುಟ್ಟಿಸದೇ ಇರದು. ಒಣಗಿ ಹೋಗುವ ನದಿಗಳಿಗೆ ಪುನಶ್ಚೇತನ ಕಲ್ಪಿಸುವುದು ಸಾಧ್ಯವಿಲ್ಲವೇ? ಆ ನಿಟ್ಟಿನಲ್ಲಿ ಯೋಚಿಸಲು- ಯೋಜಿಸಲು ಇದು ಸಕಾಲವಲ್ಲವೇ?

ruparel river - for devu pattar articleಒಂದು ಕಾಲಕ್ಕೆ ವರ್ಷದ ಹನ್ನೆರಡೂ ತಿಂಗಳು ಹರಿಯುತ್ತಿದ್ದ ರಾಜಸ್ಥಾನದ ನದಿ ರೂಪಾರೇಲ್ ನಂತರದ ದಿನಗಳಲ್ಲಿ, ಅಂದರೆ ಮಾನವನ ದುರಾಸೆ, ದುಷ್ಕೃತ್ಯದ ಪರಿಣಾಮವಾಗಿ ನದಿ ಬತ್ತಿ ಕೇವಲ ಮೂರು ತಿಂಗಳು ಮಾತ್ರ ಹರಿಯತೊಡಗಿತು. ಅಂದರೆ ಮಳೆಗಾಲದಲ್ಲಿ ಮಾತ್ರ ರೂಪಾರೇಲ್ ನದಿಯಲ್ಲಿ ನೀರು ನೋಡಬಹುದಿತ್ತು. ಉಳಿದ ಒಂಬತ್ತು ತಿಂಗಳು ಒಣಗಿ ಹೋಗಿರುತ್ತಿತ್ತು. ನದಿಯ ಪಾತ್ರದ ಗುಂಟ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ ನೀರು ನಿರ್ವಹಣೆ ಮತ್ತು ಸಂರಕ್ಷಣಾ ಯೋಜನೆಗಳು ಫಲ ಕೊಡದೇ ಇರಲಿಲ್ಲ. ಅದರ ಫಲವಾಗಿ ರೂಪಾರೆಲ್ ಮತ್ತೆಂದೂ ಬತ್ತಲಿಲ್ಲ. ವರ್ಷವಿಡೀ ನದಿಯಲ್ಲಿ ನೀರು ಹರಿಯುತ್ತಲೇ ಇರುತ್ತದೆ. ನದಿಗಳ ಪುನಶ್ಚೇತನದ ಬಗ್ಗೆ ಯೋಚಿಸುವವರಿಗೆ ರೂಪಾರೆಲ್ ನದಿ ಒಂದು ಅತ್ಯುತ್ತಮ ಉದಾಹರಣೆ.

ನದಿಗಳಲ್ಲಿನ ನೀರು ಕಡಿಮೆಯಾಗುವುದಕ್ಕೆ  ಏನು ಕಾರಣ? ಗುಲ್ಬರ್ಗ- ಬೀದರ್- ಯಾದಗಿರಿ ಜಿಲ್ಲೆಗಳಲ್ಲಿ ವಾರ್ಷಿಕ ಮಳೆ ಬೀಳುವ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಸರಾಸರಿ ಮಳೆಯ ಪ್ರಮಾಣದಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಆದರೆ, ಅದು ಬೇಕಾದ ಕಾಲದಲ್ಲಿ ಸುರಿಯದೇ ಇರುವುದರಿಂದ ಕೃಷಿಗೆ ಅನುಕೂಲಕರ ಆಗುತ್ತಿಲ್ಲ ಎಂಬುದು ಬೇರೆ ಮಾತು.

ಹಿಂದೆ ಸುರಿಯುವಷ್ಟೇ ಪ್ರಮಾಣದ ಮಳೆ ಸುರಿದರೂ ನದಿಗಳು ಬತ್ತುತ್ತಿರುವುದು ಏತಕ್ಕೆ? ಅಂತರ್ಜಲ ಮಟ್ಟದ ಕುಸಿತ ಯಾಕೆ? ಎಂಬ ಪ್ರಶ್ನೆ ಎದುರಾಗದೇ ಇರದು. ಅಂತರ್ಜಲವನ್ನು  ಮಿತಿ ಮೀರಿ ಬಳಸಲು ಆರಂಭಿಸಿದ್ದು ಒಂದು ಕಾರಣವಾದರೆ, ಸುರಿದ ಮಳೆ ನೀರು ಹಿಡಿದಿಟ್ಟುಕೊಳ್ಳುವುದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಂಡಿಲ್ಲದೇ ಇರುವುದು ಮತ್ತೊಂದು ಕಾರಣ. ಹಿಂದೆ ಇದ್ದ ಈಗ  ಕುರುಹಾಗಿ ಉಳಿದಿರುವ ಕೆರೆ ಕಟ್ಟೆಗಳು ಅಂತರ್ಜಲ ಮಟ್ಟವನ್ನು ಕಾಪಾಡುವಲ್ಲಿ  ಗಣನೀಯ ಕೊಡುಗೆ ನೀಡುತ್ತಿದ್ದವು. ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶದಿಂದ ಕೆರೆಗಳನ್ನೆಲ್ಲ ಹಾಳುಗೆಡವಲಾಗಿದೆ. ಹಾಗೆಯೇ ಅದಕ್ಕೆ ಪರ್ಯಾಯವಾಗಿ ನೀರು ನಿಲ್ಲಿಸುವ, ಇಂಗಿಸುವ ಕಡೆಗೆ ಮನಸ್ಸು ಕೂಡ ಮಾಡುತ್ತಿಲ್ಲ.

ಕೊಟ್ಯಾಂತರ ರೂಪಾಯಿ ಸುರಿದು ಬೃಹತ್ ಯೋಜನೆ ರೂಪಿಸಿರುವ ಸರಕಾರಕ್ಕೆ ಮಳೆ ನೀರು ನಿಲ್ಲಿಸುವುದಕ್ಕೆ ಪೂರಕವಾಗಿರುವ ಯೋಜನೆಗಳತ್ತ ವಿಶೇಷ ಗಮನ ಹರಿಸುವುದು ಸಾಧ್ಯವಾಗಿಲ್ಲ. ಅಂದರೆ ಸರಕಾರದ ಬಳಿ ಇದಕ್ಕೆ ಸಂಬಂಧಿಸಿದ ಯೋಜನೆಗಳಿಲ್ಲ ಎಂದೇನಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ  ಜಾರಿಗೆ ತರುವುದು ಸಾಧ್ಯವಾಗುತ್ತಿಲ್ಲ. ನೀರು ಸಂರಕ್ಷಣೆಯ ಬಗ್ಗೆ ಕಾಳಜಿ ಮತ್ತು ಅರಿವು ಇರುವ ಅಧಿಕಾರಿಗಳಿದ್ದಾಗ ಒಂದಷ್ಟು ಕೆಲಸ ನಡೆಯುತ್ತವೆ. ಅವರ ವರ್ಗಾವಣೆಯ ಜತೆಗೆ ಅವು ಕೂಡ ಇಲ್ಲವಾಗಿ ಬಿಡುತ್ತವೆ. ಬೀದರ್ ಜಿಲ್ಲೆಯ ಸ್ಥಿತಿ ಉಳಿದೆರಡು ಜಿಲ್ಲೆಗಳಿಗಿಂತ ಚೆನ್ನಾಗಿದೆ. ಐಎಎಸ್ ಅಧಿಕಾರಿ ನವೀನ್‌ರಾಜ್‌ಸಿಂಗ್ ಅವರು ಬೀದರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದ  ದಿನಗಳಲ್ಲಿ ತೋರಿಸಿದ ಕಾಳಜಿ ಮತ್ತು ಕ್ಷಮತೆಯ ಕಾರಣದಿಂದ, ಜಿಲ್ಲೆಯಾದ್ಯಂತ ವಿನೂತನ ಮಾದರಿಯ ಚೆಕ್‌ಡ್ಯಾಮ್‌ಗಳು ತಲೆ ಎತ್ತಿವೆ. ಜಿಲ್ಲೆಯಾದ್ಯಂತ ನಿರ್ಮಿಸಲಾಗಿರುವ ಆರು ಸಾವಿರಕ್ಕೂ ಹೆಚ್ಚು ಚೆಕ್‌ಡ್ಯಾಮ್‌ಗಳು ನೀರಿನ ಅಂತರ್ಜಲ ಮಟ್ಟ ಹೆಚ್ಚಿಸುವುದಕ್ಕೆ ಕಾರಣವಾಗಿವೆ. ಅರ್ಧ ಕಮಾನು ಮಾದರಿಯ ಹಾಗೂ ಬಹುಕಮಾನು ಮಾದರಿಯ ಚೆಕ್‌ಡ್ಯಾಮ್‌ಗಳನ್ನು ಕಡಿಮೆ ವೆಚ್ಚದಲ್ಲಿ  ನಿರ್ಮಿಸಬಹುದು ಎಂಬುದನ್ನು ಸ್ವತಃ ಎಂಜಿನಿಯರ್ ಆಗಿದ್ದ ನವೀನ್‌ರಾಜ್ ತೋರಿಸಿಕೊಟ್ಟಿದ್ದರು. ಅದರ ಫಲ ಈಗ ದೊರೆಯುತ್ತಿದೆ. ಚೆಕ್‌ಡ್ಯಾಮ್ ನಿರ್ಮಿಸಲಾದ ಕಡೆಗಳಲ್ಲೆಲ್ಲ ಹಸಿರು ನಳನಳಿಸುತ್ತಿದೆ. ದನಕರುಗಳು- ಖಗಮೃಗಗಳು ಸಂಭ್ರಮಿಸುತ್ತಿವೆ. ಚೆಕ್‌ಡ್ಯಾಮ್‌ಗಳು ಹಲವು ರೈತರಿಗೆ ಜೀವದಾಯಿನಿ ಆಗಿವೆ.

ಗುಲ್ಬರ್ಗ-ಯಾದಗಿರಿ ಜಿಲ್ಲೆಗಿಂತ ಸ್ವಲ್ಪ ಹೆಚ್ಚು ಮಳೆ ಸುರಿಯುವ ಬೀದರ್‌ನಲ್ಲಿ ಅಲ್ಲಿನ ಜಿಲ್ಲಾ ಪಂಚಾಯಿತಿ ತೋರಿದ ಆಸಕ್ತಿಯಿಂದ ರೂಪುಗೊಂಡ ಚೆಕ್‌ಡ್ಯಾಮ್‌ಗಳು ನೀರು ನಿಲ್ಲಿಸುವ ನೆಲೆಯಲ್ಲಿ ಕ್ರಾಂತಿಯನ್ನೇ ಮಾಡಿವೆ. ಅಲ್ಲಿಯೂ ಚೆಕ್‌ಡ್ಯಾಮ್‌ಗಳಲ್ಲಿ ಗುಣಮಟ್ಟ ಕಾಪಾಡದೇ ಇರುವುದೂ ಸೇರಿದಂತೆ ಹಲವು ಅಕ್ರಮಗಳು ಇವೆ. ಆದರೂ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಬೀದರ್‌ನ ಆಸಕ್ತಿ-ಕಾಳಜಿ ಉಳಿದೆರಡು ಜಿಲ್ಲೆಗಳಿಗೆ ಮತ್ತು ಇತರರಿಗೆ ಮಾದರಿ ಆಗಬೇಕಿತ್ತು. ರಾಜಕೀಯವಾಗಿ ಹೆಚ್ಚು ಜಾಗೃತವಾಗಿರುವ ಗುಲ್ಬರ್ಗದ ಜನ ನೀರಿನ ವಿಷಯಕ್ಕೆ ಅಷ್ಟೊಂದು ಎಚ್ಚರ ವಹಿಸುವುದಿಲ್ಲ ಎಂಬುದಕ್ಕೆ ಕೇವಲ ಕಾಗದದಲ್ಲಿ ಮಾತ್ರ ರೂಪು ತಳೆದಿರುವ ಚೆಕ್‌ಡ್ಯಾಮ್‌ಗಳೇ ಸಾಕ್ಷಿ. ಬೀದರ್  ಜಿಲ್ಲೆಯ ಯಾವುದೇ ರಸ್ತೆಯಲ್ಲಿ ಹೋದರೂ ಒಂದು ಕಿ.ಮೀ. ದೂರ ಕ್ರಮಿಸುವುದರ ಒಳಗಾಗಿ ಕನಿಷ್ಠ ಒಂದೆರಡಾದರೂ ಚೆಕ್‌ಡ್ಯಾಮ್‌ಗಳು ನೋಡಲು ಸಿಗುತ್ತವೆ. ಗುಲ್ಬರ್ಗ ಜಿಲ್ಲೆಯಲ್ಲಿ ಚೆಕ್‌ಡ್ಯಾಮ್ ಹುಡುಕುತ್ತ 120 ಕಿ.ಮೀ. ದೂರ ಸುತ್ತಾಡಿದಾಗ ಒಂದೂ ಕೂಡ ಕಾಣಲಿಲ್ಲ. ಯಾದಗಿರಿ ಜಿಲ್ಲೆಯಲ್ಲಿ  ಕೃಷ್ಣಾ  ಮೇಲ್ದಂಡೆ ಯೋಜನೆ (ಯುಕೆಪಿ)ಯ ನೀರು ಹರಿದು ಬರುವುದರಿಂದ ಅಲ್ಲಿ ನೀರು ನಿಲ್ಲಿಸುವ, ಇಂಗಿಸುವ ಅಗತ್ಯವೇ ಇಲ್ಲ ಎಂಬ ಧೋರಣೆ  ಇದೆ. ಕೇವಲ ಚೆಕ್‌ಡ್ಯಾಮ್‌ಗಳು ಈಗ ಎದುರಿಸುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಎಂದೇನಲ್ಲ. ಆದರೆ, ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ನೆಲೆಗಳಿಂದ ಯೋಚಿಸಿ, ಸಿದ್ಧಪಡಿಸಿದ ಯೋಜನೆ ರೂಪಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ. ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಅದನ್ನು ಕೇಳಿಸಿಕೊಳ್ಳದಿದ್ದರೆ ಎದುರಾಗಲಿರುವ ಅಪಾಯದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಬೀದರ್ ನಗರ ಎದುರಿಸುತ್ತಿದ್ದ  ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ 12 ಕಿ.ಮೀ. ದೂರ ಇರುವ ಜನವಾಡ ಬಳಿ ಮಾಂಜ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಲಾಯಿತು. ಅಲ್ಲಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಮಳೆ ಕಡಿಮೆ ಸುರಿದ ಮತ್ತು ಬೇಸಿಗೆಯ ದಿನಗಳಲ್ಲಿ ಮಾಂಜ್ರಾದಲ್ಲಿ  ನೀರು ಕಡಿಮೆಯಾದಾಗ  ಸಮಸ್ಯೆ ಉಲ್ಬಣಿಸತೊಡಗಿತು. ಆಗ ಕಾರಂಜಾ ಜಲಾಶಯದ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿತ್ತು. ಜಲಾಶಯದಿಂದ ಹೊರಟ ನೀರು ಜನವಾಡ ಬ್ಯಾರೆಜ್ ತಲುಪುವುದಕ್ಕೆ ಎರಡು ದಿನ ಬೇಕಾಗುತ್ತಿತ್ತು. ಬೇಸಿಗೆಯ ದಿನಗಳಲ್ಲಿ ಒಣಗಿದ್ದ ಇದ್ದಡಗಳು ಬಹುಪಾಲು ನೀರು ಕುಡಿದು ತಣಿಯುತ್ತಿದ್ದವು. ಹರಿಸಿದ ಅರ್ಧದಷ್ಟು ನೀರು ಮಾತ್ರ ಬ್ಯಾರೆಜ್ ತಲುಪುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಬೀದರ್ ನಗರದಿಂದ 20 ಕಿ.ಮೀ. ದೂರದಲ್ಲಿ ಇರುವ ಕಾರಂಜಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ತರುವ ಯೋಜನೆ ರೂಪಿಸಲಾಯಿತು. ಕುಡಿಯುವ ನೀರಿಗಾಗಿ ಒಂದು ಯೋಜನೆ ಮಾಡುವುದು ಮತ್ತು ಅಲ್ಲಿನ ನೀರು ಖಾಲಿ ಆಗುತ್ತಿದ್ದಂತೆಯೇ ಮತ್ತೊಂದು ನೀರಿನ ಮೂಲ ಹುಡುಕುತ್ತ ಹೊಸ ಯೋಜನೆ ರೂಪಿಸುವುದು ನಡೆದೇ ಇದೆ. ತಕ್ಷಣದ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಅದು ಅನಿವಾರ್ಯ ಮತ್ತು ಅಗತ್ಯ ಕೂಡ.

ಮುಂಬರುವ ದಿನಗಳಲ್ಲಿ ನೀರೇ ಇಲ್ಲದಂತಾಗುವ ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ  ಜಲಾಶಯಗಳಿಂದೇನೂ ಉಪಯೋಗ? ಕೃಷಿ ಜಮೀನಿಗೆ ನೀರು ಪೂರೈಸುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲಾಗಿಲ್ಲ ಅಥವಾ ಪೂರ್ಣಗೊಳಿಸಿಲ್ಲ. ಇದು ಗುಲ್ಬರ್ಗ ಜಿಲ್ಲೆಯ ಬೆಣ್ಣೆತೊರೆ ಮತ್ತು ಬೀದರ್ ಜಿಲ್ಲೆಯ ಕಾರಂಜಾ ಜಲಾಶಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೃಷಿ ಜಮೀನಿಗೆ ನೀರು ಒದಗಿಸಿ ಅದನ್ನು ಹಸಿರಾಗಿಸುವ ಉದ್ದೇಶದಿಂದ ರೂಪಿಸಲಾದ ನೀರಾವರಿ ಯೋಜನೆಗಳು ಕೇವಲ ಕುಡಿಯುವ ನೀರು ಪೂರೈಸುವ ಕೆರೆ ಕಟ್ಟೆಗಳಾಗಿ ಪರಿವರ್ತನೆ ಆಗಿವೆ – ಆಗುತ್ತಿವೆ. ಸಾವಿರಾರು ಕೋಟಿ ರೂಪಾಯಿ ವ್ಯಯಿಸಿ ನಿರ್ಮಿಸಲಾದ ಜಲಾಶಯಗಳ ನೀರನ್ನು ಕೃಷಿ ಜಮೀನಿಗೆ ಬಳಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಅದೊಂದು ದೊಡ್ಡ  ಮತ್ತು ಬೇರೆಯದೇ ಕಥೆ. ಕುಡಿಯುವ ನೀರು ಮತ್ತು ಅದರ ಮೂಲ-ನೆಲೆ ಹುಡುಕುತ್ತ ದೂರ-ಬಹುದೂರ ಹೋಗುವುದರ ಬದಲು ಇರುವ, ಸಿಗುವ ನೀರನ್ನು ಇಂಗಿಸುವ, ನಿರ್ವಹಿಸುವ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ  ಕ್ರಿಯಾಶೀಲ-ಸೃಜನಶೀಲವಾಗಿ ಮುಂದುವರೆಯುವ ಅಗತ್ಯವಿದೆ.

ಲೇಖನ: ದೇವು ಪತ್ತಾರ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*