ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೪: ಬೇಕಿರುವುದು ೧೦೦ ಅಲ್ಲ ೧೦೦೦ ಕೋಟಿ!

ರಾಜಧಾನಿಯಲ್ಲಿರುವ ಕೆರೆಗಳೆಲ್ಲ ನಳನಳಿಸುವಂತೆ ಮಾಡುತ್ತೇವೆ. ಒತ್ತುವರಿ ಇರಲಿ ಸಣ್ಣ ಮಾಲಿನ್ಯವೂ ಕೆರೆ ಒಳಗೆ ಹೋಗದಂತೆ ಮಾಡುತ್ತೇವೆ. ಹಾಗೆ, ಹೀಗೆ… ಇಂತಹ ನೂರಲ್ಲ ಸಾವಿರಾರು ಮಾತು, ಭರವಸೆಗಳು ಸರಕಾರ, ಬಿಬಿಎಂಪಿ, ಜನಪ್ರತಿನಿಧಿಗಳಿಂದ ಕಳೆದ ೮ ವರ್ಷಗಳಲ್ಲಿ ಅದೆಷ್ಟು ಬಾರಿ ಬಂದಿದೆಯೋ? ಅದಕ್ಕೆ ಲೆಕ್ಕವೇ ಇಲ್ಲ. ಆದರೆ, ನಿಜವಾಗಿ ರಾಜಧಾನಿಯ ಎಲ್ಲ ಕೆರೆಗಳು ಅಭಿವೃದ್ಧಿ ಆಗಬೇಕಾದರೆ ಎಷ್ಟು ಹಣ ಬೇಕು ಗೊತ್ತೇ?

HD halli lakeಖಂಡಿತಾ, ಇದೆಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳಿಗಲ್ಲದೆ ಇನ್ನಾರಿಗೆ ಗೊತ್ತಾಗುತ್ತದೆ? ಬೆಂಗಳೂರಿನಲ್ಲಿರುವ ಅದೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ೧೪೪ ಕೆರೆಗಳ ಅಭಿವೃದ್ಧಿಗೆ ಬೇಕಿರುವುದು ೯೮೫ ಕೋಟಿ ರುಪಾಯಿಗಳಂತೆ. ಹೌದು, ಬಿಬಿಎಂಪಿಯೇ ಎಲ್ಲ ‘ಲೆಕ್ಕ’ವನ್ನೂ ಅಳೆದು-ತೂಗಿ ಈ ಅಂಕಿಯನ್ನು ನೀಡಿರುವುದು. ಆದರೆ, ಈ ಅಂಕಿ ೨೦೦೯ರದ್ದು. ಅಂದರೆ ಏಳು ವರ್ಷ ಕಳೆದ ಮೇಲೆ ಅಂಕಿ ಸಾಕಷ್ಟು ಏರಿಕೆ ಆಗಿರುತ್ತದೆ ಬಿಡಿ. ಏಕೆಂದರೆ ಈಗ ಲಕ್ಷಗಳಿಗೆ ಬೆಲೆ ಇಲ್ಲವಲ್ಲ! ಬಿಬಿಎಂಪಿಯಲ್ಲಿರುವ ೧೪೪ ಕೆರೆಗಳ ಅಭಿವೃದ್ಧಿಗೆ ೯೮೫ ಕೋಟಿ ರುಪಾಯಿಗಳು ಬೇಕೆಂದು ಆಗ ಮಾಡಿರುವ ಲೆಕ್ಕಾಚಾರ ಇದೀಗ ದ್ವಿಗುಣವಾಗಿರುವುದಕ್ಕೂ ಸಾಧ್ಯ. ಸರಕಾರಿ ಅಂದಾಜು ದರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಅಂದರೆ ಎಸ್‌ಆರ್ ರೇಟ್. ಅದಕ್ಕೆ ಈಗ ಸುಮಾರು ೨೦೦೦ ಕೋಟಿ ಹಣ ಇದ್ದರೆ ಈ ಕೆರೆಗಳನ್ನು ಅಭಿವೃದ್ಧಿ ಮಾಡಬಹುದೇನು?

ಇದರ ನಡುವೆ ಒಂದು ಅಂಶ ನೆನಪಿರಲಿ. ಬಿಬಿಎಂಪಿ ವ್ಯಾಪ್ತಿಯ ೧೮೩ ಜೀವಂತ ಕೆರೆಗಳಲ್ಲಿ ೧೪೪ ಅಭಿವೃದ್ಧಿ ಆಗಬೇಕಿವೆ. ಇದರಲ್ಲಿ ಬಿಡಿಎ ಅಭಿವೃದ್ಧಿಪಡಿಸಿರುವ ೧೨ ಕೆರೆಗಳು, ಎಲ್‌ಡಿಎ ೨ ಕೆರೆಗಳು ಇಲ್ಲ. ಬಿಬಿಎಂಪಿ ಈಗಾಗಲೇ ಅಭಿವೃದ್ಧಿಪಡಿಸಿರುವ ೨೧ ಕೆರೆಗಳು ೧೪೪ರಲ್ಲಿ ಇವೆ. ಈಗ ಯಾವ ಕೆರೆ ಯಾವ ಇಲಾಖೆ ಅಂದರೆ ಬಿಬಿಎಂಪಿ ಅಥವಾ ಬಿಡಿಎ ಅಭಿವೃದ್ಧಿಪಡಿಸುತ್ತದೆ ಎಂಬ ಗೊಂದಲ ಇನ್ನೂ ಮುಂದುವರಿದೇ ಇದೆ. ಆದರೆ ಅನುದಾನವನ್ನು ಸರಕಾರ ಮಾತ್ರ ಅಗತ್ಯದಷ್ಟು ನೀಡುತ್ತಲೇ ಇಲ್ಲ. ಬಹುತೇಕ ೨೦೦೯-೧೦ನೇ ಸಾಲಿನ ಬಜೆಟ್‌ನಿಂದ ಹಿಡಿದು ಈವರೆಗಿನ ಬಜೆಟ್‌ವರೆಗೆ ಪ್ರತಿ ವರ್ಷ ೧೦೦ ಕೋಟಿಯನ್ನು ಕೆರೆಗಳ ಅಭಿವೃದ್ಧಿಗೆ ಘೋಷಿಸಲಾಗುತ್ತಿದೆ. ಆದರೆ, ಬಿಬಿಎಂಪಿ ೨೧ ಕೆರೆಗಳನ್ನು ಅಭಿವೃದ್ಧಿ ಪಥಕ್ಕೆ ತಂದಿದ್ದು ಬಿಟ್ಟರೆ ಇನ್ನೇನು ಕೆಲಸ ಆಗಿಲ್ಲ. ಅಂದರೆ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಬೇಕಿರುವ ಹಣ ಸರಕಾರ ಅಥವಾ ಬಿಬಿಎಂಪಿಯಲ್ಲಿ ಇಲ್ಲ ಅಥವಾ ಮೀಸಲಾಗಿಲ್ಲ.

ಇನ್ನು ೧೪೪ ಕೆರೆಗಳಲ್ಲಿ ಬಿಬಿಎಂಪಿ ೨೧ ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಬೃಹತ್ ಕೆರೆಗಳಾದ ಬೆಳ್ಳಂದೂರು, ವರ್ತೂರು ಸೇರಿದಂತೆ ೨೧ ಕೆರೆಗಳ ಅಭಿವೃದ್ಧಿಗೇ ೩೩೭ ಕೋಟಿ ಅಗತ್ಯ. ಅದೂ ಈ ೯೮೫ ಕೋಟಿಯಲ್ಲೇ ೨೦೦೯ರಲ್ಲಿ ಸೇರಿತ್ತು. ಆದರೆ ಈಗ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಅಭಿವೃದ್ಧಿಗೇ ೬೭೫ ಕೋಟಿಗಳು ಬೇಕಿವೆ. ಅದರ ಯೋಜನೆ ತಯಾರಾಗಿ ಕೇಂದ್ರ ಸರಕಾರದ ಅನುದಾನಕ್ಕೆ ಕಾಯಲಾಗುತ್ತದೆ. ಬಿಡಿಎ ಈ ಅನುದಾನದತ್ತ ದೃಷ್ಟಿಹರಿಸಿದೆ.

ಒಂದು ಯೋಜನೆಯ ಗುರಿಗೆ ಒಂದು ಬಜೆಟ್ ಮೂಲ. ಆದರೆ ಈ ಬಜೆಟ್‌ಗೇ ಸರಕಾರ ಅಥವಾ ಬಿಬಿಎಂಪಿ ಪ್ರಥಮ ಪ್ರಾಶಸ್ತ್ಯ ನೀಡಿಲ್ಲ. ಘೋಷಣೆ ಮಾಡುವುದನ್ನು ಬಿಟ್ಟರೆ ಅದಕ್ಕೊಂದು ಹೆಡ್ ಆಫ್ ಅಕೌಂಟ್ ಅಥವಾ ಅದಕ್ಕೇ ಪ್ರತ್ಯೇಕ ನಿಧಿ ಸ್ಥಾಪನೆ ಮಾಡಬೇಕಾದ ಯಾವ ಕಾರ್ಯವನ್ನೂ ಕೈಗೊಂಡಿಲ್ಲ. ಘೋಷಣೆಗಷ್ಟೇ ಕೆರೆಗಳ ಅಭಿವೃದ್ಧಿ ಸೀಮಿತವಾಗಿದ್ದು, ಬಿಬಿಎಂಪಿಯಿಂದ ೨೧ ಹಾಗೂ ಬಿಡಿಎಯಿಂದ ೧೨ ಕೆರೆಗಳ ಅಭಿವೃದ್ಧಿ ಯೋಜನೆಯ ನಂತರ ಇನ್ಯಾವ ಕೆರೆಗಳನ್ನು ಅಭಿವೃದ್ಧಿಗೆ ತೆಗೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನು ಆಯಾ ಇಲಾಖೆ ಅಧಿಕಾರಿಗಳೇ ಹೊಂದಿಲ್ಲ. ಕೈಯಲ್ಲಿ ಕಾಸಿಲ್ಲದಿದ್ದರೂ ಟೆಂಡರ್ ಎಂಬ ಭೂತವನ್ನು ಆವರಿಸಿಕೊಳ್ಳುವಲ್ಲಿ ಈ ಇಲಾಖೆಗಳು ನಿಸ್ಸೀಮ. ಅದಕ್ಕೇ ಕೆಲವು ಕೆರೆಗಳ ಅಭಿವೃದ್ಧಿಯ ಟೆಂಡರ್ ಆಗಿದ್ದರೂ, ಅದರ ಕಾಮಗಾರಿಗಳು ಆರಂಭವಾಗುವ ಯಾವ ಲಕ್ಷಣವೂ ಇಲ್ಲ.

ಕೆರೆಗಳ ಸಂರಕ್ಷಣೆಗೆ ಅಗತ್ಯವಾದ ಮೂಲ ಹಣವನ್ನು ಹೊಂದಿಸಿಕೊಡಬೇಕಾದ್ದು ಸರಕಾರದ್ದೇ. ಆದರೆ ೧೦೦ ಕೋಟಿ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನು ಬಿಟ್ಟರೆ ಇನ್ನುಳಿದ ಯಾವುದೇ ಕೆಲಸ ಸರಕಾರದಿಂದ ಆಗಿಲ್ಲ. ಇದೇ ಬಿಬಿಎಂಪಿ ಹಾಗೂ ಬಿಡಿಎಗೆ ನೆಪವಾಗಿದೆ. ಅದಕ್ಕೇ ಪ್ರತಿಬಾರಿಯೂ ನಾಗರಿಕರು ಕೆರೆ ಅಭಿವೃದ್ಧಿ ಮಾಡೊಲ್ಲವೇ ಎಂದು ಪ್ರಶ್ನಿಸಿದಾಗ ‘ಹಣ ಇಲ್ಲ’ ಎಂಬ ಉತ್ತರ ಥಟ್ ಅಂತಾ ಬರುತ್ತದೆ. ಸರಕಾರ ನಿರ್ದಿಷ್ಟವಾದ ನಿಧಿಯನ್ನು ರೂಪಿಸದ ಹೊರತು ೯೮೫ ಕೋಟಿಯ ಒಟ್ಟಾರೆ ವೆಚ್ಚ ವರ್ಷದಿಂದ ವರ್ಷಕ್ಕೆ ೧೦ರಿಂದ ೨೦ರಷ್ಟು ಹೆಚ್ಚಾಗುತ್ತಲೇ ಹೋಗುತ್ತದೆ. ವರ್ಷಕ್ಕೆ ೧೦೦ ಕೋಟಿಯಿಂದ ಏನೂ ಪ್ರಯೋಜನವಾಗುವುದಿಲ್ಲ. ಬಜೆಟ್ ಯೋಜಿಸುವವರು ಇತ್ತ ಗಮನಹರಿಸಬೇಕು.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*