ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕರುನಾಡಿನ ಕಡುಬೇಸಿಗೆಯ ಜೀವಜಲದ ಕಥೆ – ವ್ಯಥೆ

ರ್ನಾಟಕದಲ್ಲಿ ಪ್ರಸ್ತುತ ಅನೇಕ ಜಟಿಲ ಸಮಸ್ಯೆಗಳು ಎದುರಾಗಿರುವುದು ಜನರಿಗೆಲ್ಲ ಗೊತ್ತು. ಲೋಕಾಯುಕ್ತ ಸಂಸ್ಥೆಯನ್ನ ನಿಷ್ಕ್ರಿಯಗೊಳಿಸಿ ಎಸಿಬಿಯೆಂಬ ಸರ್ಕಾರಿ ಕೃಪಾಪೋಷಿತ ಭ್ರಷ್ಟಾಚಾರ ನಿಗ್ರಹದಳ ಸ್ಥಾಪಿಸಿದ್ದು, ಪಿಯುಸಿ ಪ್ರಶ್ನೆಪತ್ರಿಕೆ ಬಯಲಾಗಿ ಎರಡು ಬಾರಿ ಪರೀಕ್ಷೆ ಮುಂದೂಡಿಕೆ, ಏಪ್ರಿಲ್ ೧ರಿಂದ ಜನಸಾಮಾನ್ಯರ ಮೇಲೆ ವಿದ್ಯುತ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ತೆರಿಗೆಭಾರ ಹೇರಿಕೆ … ಹೀಗೆ ಹಲವು ಸಮಸ್ಯೆಗಳಿರುವುದು ನಿಜ. ಆದರೆ ಇವೆಲ್ಲಕ್ಕಿಂತಲೂ ಇಡೀ ರಾಜ್ಯವನ್ನು ಕಾಡುತ್ತಿರುವ ಭೀಕರ ಸಮಸ್ಯೆಯೆಂದರೆ ಕುಡಿಯುವ ನೀರಿನದು. ಈ ಸಮಸ್ಯೆ ಪ್ರತಿವರ್ಷ ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳ ಕಡುಬೇಸಿಗೆಯಲ್ಲಿ ಕಾಡುವುದುಂಟು. ಆದರೆ ಈ ವರ್ಷ ಅದು ಫೆಬ್ರವರಿ ತಿಂಗಳಲ್ಲೇ ಕಾಡಿರುವುದು ರಾಜ್ಯ ಸರ್ಕಾರ ಹಾಗೂ ಜನಸಾಮಾನ್ಯರನ್ನು ತೀವ್ರ ಚಿಂತೆಗೀಡುಮಾಡಿರುವ ಸಂಗತಿ. ನೀರಿಗಾಗಿ ರಾಜ್ಯದಾದ್ಯಂತ ಹಾಹಾಕಾರ ಆರಂಭವಾಗಿ ಆಗಲೇ ಎರಡು ತಿಂಗಳು ಕಳೆದಿದೆ. ರಾಜಧಾನಿ ಬೆಂಗಳೂರಿನಲ್ಲೇ ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ತತ್ವಾರ. ಇನ್ನು ಉತ್ತರ ಕರ್ನಾಟಕದ ಗುಲಬರ್ಗಾ, ಬೀದರ್, ಕೊಪ್ಪಳ, ರಾಯಚೂರು, ದಾವಣಗೆರೆ ಮೊದಲಾದ ಜಿಲ್ಲೆಗಳಲ್ಲಂತೂ ನೀರಿನ ಅಭಾವದ ಭೀಕರತೆಯನ್ನು ವರ್ಣಿಸಲಸದಳ. ಒಂದು ಸಮೀಕ್ಷೆಯಂತೆ, ಈ ಜಿಲ್ಲೆಗಳಲ್ಲಿ ಕಾಡುತ್ತಿರುವ ನೀರಿನ ಕ್ಷಾಮದ ಪ್ರಮಾಣ ಹೀಗಿದೆ: ಬೀದರ್-ಶೇ. ೪೭, ವಿಜಯಪುರ-ಶೇ. ೬೮, ಗುಲಬರ್ಗಾ-ಶೇ. ೧೧೩, ಬೆಳಗಾವಿ-ಶೇ. ೫೮, ಬಳ್ಳಾರಿ-ಶೇ. ೨೫, ಕೊಪ್ಪಳ-ಶೇ. ೩೦೪, ರಾಯಚೂರು-ಶೇ. ೧೫, ದಾವಣಗೆರೆ-ಶೇ. ೧೦, ಹಾವೇರಿ-ಶೇ. ೧೨.

for duggu articleಶೇ. ೩೦೪ ನೀರಿನ ಕೊರತೆ ಎದುರಿಸುತ್ತಿರುವ ಕೊಪ್ಪಳ ಜಿಲ್ಲೆಯ ಜೀವಜಲದ ಕಥೆ-ವ್ಯಥೆ ಅತ್ಯಂತ ದಾರುಣ. ಅಲ್ಲಿನ ನಾಲ್ಕೈದು ಹಳ್ಳಿಗಳಿಗೆ ಇರುವುದು ಒಂದೇ ಕೆರೆ. ಆ ಕೆರೆಯ ನೀರೇ ಎಲ್ಲರಿಗೂ ಆಸರೆ. ಆದರೆ ನಾಲ್ಕೈದು ಹಳ್ಳಿಗಳಿಗೆ ಒಂದೇ ಒಂದು ಕೆರೆಯ ನೀರು ಸಾಕಾಗುವುದಾದರೂ ಹೇಗೆ? ಒಂದು ರೀತಿ ಅಲ್ಲಿ ಭೀಕರ ಬರಗಾಲದಿಂದಾಗಿ ಜೀವಜಲಕ್ಕೆ ತತ್ವಾರ. ಇದರಿಂದಾಗಿ ಜನರು ನೀರಿನ ಕಳ್ಳತನಕ್ಕೂ ಮುಂದಾಗಿದ್ದಾರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರಿದು ವಾಸ್ತವ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪದ ಸುತ್ತ ಇರುವುದು ನಾಲ್ಕೈದು ಗ್ರಾಮಗಳು. ಆ ಗ್ರಾಮಗಳಿಗೆ ಚಿಕ್ಕೇನಕೊಪ್ಪದ ಕೆರೆ ಬಿಟ್ಟರೆ ಬೇರಿನ್ನಾವ ನೀರಿನ ಮೂಲವೂ ಇಲ್ಲ. ಹೀಗಾಗಿ ಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ. ದೂರದ ಹಳ್ಳಿಗಳ ಜನ ರಾತ್ರಿಯ ವೇಳೆ ಬಂದು ಕೆರೆಯ ನೀರನ್ನು ಕದ್ದೊಯ್ಯುವ ಪರಿಸ್ಥಿತಿ ಬಂದಿದೆ. ಕೆರೆಯ ನೀರನ್ನು ಉಳಿಸಿಕೊಳ್ಳಲು ಚಿಕ್ಕೇನಕೊಪ್ಪದ ಜನರು ಕೆರೆಯ ಸುತ್ತ ಗಸ್ತು ತಿರುಗುತ್ತಾ ನೀರನ್ನು ಯಾರೂ ಕದಿಯದಂತೆ ಪಹರೆ ನಡೆಸುತ್ತಿದ್ದಾರೆ. ಜೀವಜಲಕ್ಕಾಗಿ ಇಂತಹ ಸಾಹಸವನ್ನೂ ಮಾಡಬೇಕಾಗಿರುವುದು ವರ್ತಮಾನದ ಅನಿವಾರ್ಯ ಸ್ಥಿತಿ.

ಚಿಕ್ಕೇನಕೊಪ್ಪದ ಕೆರೆ ಬಿಟ್ಟರೆ ಆ ತಾಲ್ಲೂಕಿನ ಉಳಿದ ಕೆರೆಗಳು ಕ್ರೀಡಾಂಗಣದಂತೆ ಕಾಣುತ್ತಿವೆ. ಇದರಿಂದಾಗಿ ಗ್ರಾಮಸ್ಥರಿಗೆ ಇರುವುದು ಅದೊಂದೇ ಕೆರೆಯ ಆಸರೆ. ಮಳೆಯಾಗುವ ತನಕವೂ ಕೆರೆ ನೀರು ಕಾಪಾಡಿಕೊಳ್ಳಬೇಕೆನ್ನುವುದು ಗ್ರಾಮದವರ ಹಂಬಲ. ಅದಕ್ಕಾಗಿ ಸುತ್ತಮುತ್ತಲ ಗ್ರಾಮಸ್ಥರಿಗೆ ನೀರಿಗಾಗಿ ರೇಷನ್ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚೆಂದರೆ ನಾಲ್ಕಾರು ಕೊಡ, ಬಕೆಟ್‌ನಲ್ಲಿ ನೀರು ಒಯ್ಯಬಹುದು. ಆದರೆ ಟ್ರಾಕ್ಟರ್, ಎತ್ತಿನಗಾಡಿಯಲ್ಲಿ ಡ್ರಮ್, ಟ್ಯಾಂಕ್ ಇಟ್ಟುಕೊಂಡು ನೀರು ಒಯ್ಯುವಂತಿಲ್ಲ. ಹೀಗಾಗಿ ರಾತ್ರಿ ವೇಳೆ ಅಲ್ಲಿ ನೀರಿನ ಕಳ್ಳತನಕ್ಕೂ ಜನರು ಹೇಸುತ್ತಿಲ್ಲ.

ಇನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣಗ್ರಾಮದ ಜನರು ದಾಹ ನೀಗಿಕೊಳ್ಳಲು ನೀರಿಗಾಗಿ ದುಡ್ಡು ತೆರಬೇಕಾದ ದುಃಸ್ಥಿತಿಗೆ ಸಿಲುಕಿದ್ದಾರೆ. ಕುಡಿಯುವ ನೀರಿನ ಸಣ್ಣ ಕೊಡಕ್ಕೆ ೫ ರೂ., ದೊಡ್ಡ ಕೊಡಕ್ಕೆ ೧೦ ರೂ. ತೆತ್ತು ನೀರು ಖರೀದಿಸುವಂತಾಗಿದೆ. ಅಲ್ಲಿನ ಪ್ರತಿ ಕುಟುಂಬವೂ ವಾರಕ್ಕೆ ಕುಡಿಯುವ ನೀರಿಗೆಂದೇ ೧೫೦ ರೂ. ಮೀಸಲಿಡಬೇಕಾದ ಅನಿವಾರ್ಯತೆ.

ಚಡಚಣಕ್ಕೆ ಭೀಮಾನದಿ ಹೊರತುಪಡಿಸಿದರೆ ಕುಡಿಯುವ ನೀರಿಗೆ ಪ್ರತ್ಯೇಕ ಮೂಲವೇ ಇಲ್ಲ. ನದಿಯಿಂದ ಬರುತ್ತಿದ್ದ ನೀರನ್ನು ಗ್ರಾಮದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ಪೂರೈಸಲಾಗುತ್ತಿತ್ತು. ಆದರೆ ಕಳೆದೆರಡು ತಿಂಗಳಿಂದ ಶುದ್ಧ ನೀರಿನ ಘಟಕ ಕೆಟ್ಟಿದೆ. ಅದನ್ನು ದುರಸ್ಥಿ ಮಾಡಿಸಿಲ್ಲ. ಸದ್ಯ ನದಿ ನೀರನ್ನು ನೇರವಾಗಿಯೇ ಗ್ರಾಮಕ್ಕೆ ಪೂರೈಸಲಾಗುತ್ತಿದೆ. ಈ ನೀರು ಕಲುಷಿತಗೊಂಡಿರುವುದರಿಂದ ಬಟ್ಟೆ, ಪಾತ್ರೆ ತೊಳೆಯಲು ಮಾತ್ರ ಉಪಯೋಗ. ಗ್ರಾಮಕ್ಕೆ ನದಿ ನೀರು ಪೂರೈಸುತ್ತಿರುವ ಕಾರಣ ಉಚಿತ ಟ್ಯಾಂಕರ್ ನೀರು ಸರಬರಾಜು ಮಾಡುವುದಿಲ್ಲವೆಂಬುದು ಅಧಿಕಾರಿಗಳ ತಾಕೀತು. ಹೀಗಾಗಿ ಗ್ರಾಮಸ್ಥರೇ ಹಣ ನೀರು ಖರೀದಿಸುವ ಅನಿವಾರ್ಯ ಪರಿಸ್ಥಿತಿ. ಇನ್ನು ಎಂಟು ದಿನಗಳಲ್ಲಿ ಭೀಮಾ ನದಿ ನೀರು ಕೂಡ ಬತ್ತುವ ಸಾಧ್ಯತೆ ಇದೆ. ಆಗ ಜನರ ಪರಿಸ್ಥಿತಿ ದೇವರಿಗೇ ಪ್ರೀತಿ.

ಬರದ ಭೀಕರತೆ ದೇವರ ಹರಕೆಗೂ ತಟ್ಟಿದೆ. ನಿಂತ ನೀರಲ್ಲಿ ಪವಿತ್ರ ಸ್ನಾನ ಮಾಡಬೇಕೆಂಬ ಕಾರಣಕ್ಕೆ ಕೆಲವರು ತಮ್ಮ ಹರಕೆಯನ್ನೇ ಮುಂದೂಡಿದ ಪ್ರಸಂಗವೂ ನಡೆದಿದೆ. ಧಾರವಾಡ ಜಿಲ್ಲೆಯ ಯಮನೂರು ಚಾಂಗದೇವರ ಉರುಸ್ ಹಿಂದೂ-ಮುಸ್ಲಿಂಮರ ಭಾವೈಕ್ಯ ಸ್ಥಳ. ಇಲ್ಲಿನ ಉರುಸ್‌ನಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ಗ್ರಾಮದ ಬಳಿ ಹರಿಯುವ ಬೆಣ್ಣೆಹಳ್ಳಕ್ಕೂ ಉರುಸಿಗೂ ಅವಿನಾಭಾವ ಸಂಬಂಧ. ಬೆಣ್ಣೆಹಳ್ಳದಲ್ಲಿ ದೇವರಮೂರ್ತಿಗಳಿಗೆ ಸ್ನಾನದ ನಂತರವೇ ಮುಂದಿನ ಎಲ್ಲ ಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಆದರೆ ಈ ಬಾರಿ ನೀರು ಹರಿಯದ ಕಾರಣ ಮೂರ್ತಿಗಳ ಸ್ನಾನಕ್ಕೆ ಒರತೆ ನೀರಿನ ಮೊರೆಹೋಗುವ ಸ್ಥಿತಿ ಎದುರಾಗಿದೆ. ದೇವರ ಮೂರ್ತಿಗಳಿಗೇ ಸ್ನಾನಕ್ಕೆ ನೀರಿಲ್ಲದಿರುವಾಗ ಇನ್ನು ಜನರಿಗೆ ಸ್ನಾನಮಾಡಿ ಹರಕೆ ತೀರಿಸಲು ನೀರೆಲ್ಲಿ?

ರಾಜಧಾನಿಯಲ್ಲೂ ಹಾಹಾಕಾರ

ರಾಜಧಾನಿ ಬೆಂಗಳೂರಿನ ಕೆಲವೆಡೆಗಳಲ್ಲಿ ನೀರು ದೊರಕಿದರೂ, ಅದು ಕುಡಿಯಲು ಯೋಗ್ಯವಾಗಿಲ್ಲ. ಬೆಂಗಳೂರಿನ ಪಶ್ಚಿಮ ಭಾಗದ ಹಲವು ಪ್ರದೇಶಗಳಲ್ಲಿ ಜನ ಕುಡಿಯುವ ನೀರಿಲ್ಲದೆ ಪರದಾಡುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇಲ್ಲಿ ಕೊಳವೆ ಬಾವಿಗಳಿದ್ದರೂ, ಅದರಿಂದ ಸಿಗುವುದು ಬರೀ ಕಲುಷಿತ ನೀರು. ಹೀಗಾಗಿ ಜನ ಕುಡಿಯುವ ನೀರಿಗಾಗಿ ಟ್ಯಾಂಕರ್‌ಗಳು, ಕ್ಯಾನ್‌ಗಳಿಗೆ ಮೊರೆಹೋಗಬೇಕಾದ ದುಃಸ್ಥಿತಿ. ಮಧ್ಯಮ ಹಾಗೂ ಕೆಳ ಮಧ್ಯಮವರ್ಗದ ಜನರು ಹೆಚ್ಚಾಗಿರುವ ಪೀಣ್ಯ, ಯಶವಂತಪುರ, ಜಾಲಹಳ್ಳಿ, ಸುತ್ತಮುತ್ತಲ ಪ್ರದೇಶದಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಕೈಗಾರಿಕೆಗಳಿಂದ ಹರಿದುಬರುವ ಕಲುಷಿತ ನೀರು ಜಲಮೂಲ ಸೇರಿ, ಕುಡಿಯುವ ನೀರು ಸಂಪೂರ್ಣ ಕಲುಷಿತಗೊಂಡಿದೆ.

ಕಣ್ಣಮುಂದೆ ಕಾವೇರಿ ನೀರು ಹರಿದುಹೋಗುತ್ತಿದ್ದರೂ, ತಮ್ಮ ಮನೆಗಳಿಗೆ ಮಾತ್ರ ಅದು ಬರುತ್ತಿಲ್ಲ ಎಂಬ ವ್ಯಥೆ ಬೆಂಗಳೂರು ನಗರದ ದಕ್ಷಿಣವಲಯದ ಬೇಗೂರು ಸುತ್ತಮುತ್ತಲಿನ ಹಳ್ಳಿಗಳದು. ಬೇಗೂರು ಸುತ್ತಮುತ್ತಲ ಭಾಗಗಳಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರು ಸರಬರಾಜಾಗುತ್ತಿದೆ. ಆದರೆ ಹಳ್ಳಿಗಳಿಗೆ ಮಾತ್ರ ಕಾವೇರಿ ನೀರು ಬಂದಿಲ್ಲ. ಏಕೆಂದರೆ ಹಳ್ಳಿಗಳು ಪಾಲಿಕೆಯ ವ್ಯಾಪ್ತಿಗೆ ಸೇರಿಲ್ಲವೆಂಬ ಸಬೂಬು. ಬೇಗೂರಿಗೆ ಕಾವೇರಿ ನೀರು ತರುವ ಕೊಳವೆ ಮಾರ್ಗಗಳನ್ನು ತಿರುವಿ, ಪಕ್ಕದ ಬೊಮ್ಮನಹಳ್ಳಿಗೂ ಹರಿಸಲಾಗಿದೆ. ಆದರೆ ಬೇಗೂರು ಗ್ರಾಮದ ಅನೇಕ ಪ್ರದೇಶಗಳಿಗೆ ಪೈಪ್‌ಲೈನ್ ಹಾಕಲು ಜಲಮಂಡಳಿಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ಸಾರ್ವಜನಿಕರ ದೂರು. ತಮಾಷೆಯೆಂದರೆ ಬೇಗೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡೇ ಇದ್ದರೂ, ಅದು ಮೂಲ ಸೌಕರ್ಯಗಳಿಂದ ವಂಚಿತ.

ಮಳೆಕೊಯ್ಲು: ಜನರ ನಿರ್ಲಕ್ಷ್ಯ

ಬೇಗೂರಿನಲ್ಲಿ ಕೆರೆ ಇದ್ದರೂ ನೀರಿಲ್ಲ ಎಂಬ ಪರಿಸ್ಥಿತಿ. ಕೆರೆ ನೀರು ಬತ್ತಿಹೋಗಿರುವುದು ಇದಕ್ಕೆ ಕಾರಣ. ಜಲಮಂಡಳಿ ಅಧಿಕಾರಿಗಳು ೬ ತಿಂಗಳೊಳಗೆ ಪೈಪ್‌ಲೈನ್ ಹಾಕಿಕೊಡುತ್ತೀವಿ ಎಂದು ಹೇಳಿದ್ದರು. ಆದರೆ ವರ್ಷ ಕಳೆದರೂ ಪೈಪ್‌ಲೈನ್ ಬಂದಿಲ್ಲ ಎಂದು ಅಲ್ಲಿನ ಜನರು ನೊಂದು ಹೇಳುತ್ತಿದ್ದಾರೆ. ರಾಜಧಾನಿಯ ನೀರಿನ ಪರಿಸ್ಥಿತಿ ಉಳಿದ ಕಡೆಗಳಂತೆಯೇ ಭೀಕರ ಸ್ಥಿತಿಗೆ ತಲುಪಿರುವುದಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯೂ ಮುಖ್ಯ ಕಾರಣ. ಬೆಂಗಳೂರಿನ ಬೆಳವಣಿಗೆಗೆ ಸರ್ಕಾರ ಯಾವುದೇ ಮಿತಿ ಹಾಕಿಲ್ಲ. ಅದು ಯದ್ವಾತದ್ವಾ, ಅಡ್ಡಾದಿಡ್ಡಿ ಬೆಳೆಯುತ್ತಲೇ ಇದೆ. ಎಲ್ಲಿ ನೋಡಿದರೂ ಅಪಾರ್ಟ್‌ಮೆಂಟ್‌ಗಳು, ಮನೆಗಳ ಸಾಲುಸಾಲು. ಬಿಬಿಎಂಪಿ ವ್ಯಾಪ್ತಿಯಲ್ಲಿ ೧೩,೭೧,೯೧೯ ಮನೆಗಳಿದ್ದು, ಅವುಗಳ ಪೈಕಿ, ೮,೦೭,೫೨೮ ಮನೆಗಳಿಗೆ ಅಧಿಕೃತ ನೀರಿನ ಸಂಪರ್ಕವಿದೆ, ೪,೦೯,೧೬೦ ಮನೆಗಳಿಗೆ ಅನಧಿಕೃತ ನೀರಿನ ಸಂಪರ್ಕ. ನಗರದ ಜಲಸಂಪನ್ಮೂಲ ರಕ್ಷಣೆಗೆ ಮುಂದಾಗಿರುವ ಬೆಂಗಳೂರು ಜಲಮಂಡಳಿ ನಗರದ ವ್ಯಾಪ್ತಿಯ ಮನೆಗಳಲ್ಲಿ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವಂತೆ ಕಾನೂನು ಜಾರಿಗೆ ತಂದು ಆಗಲೇ ಎರಡು ತಿಂಗಳು ಕಳೆದಿದೆ. ಆದರೆ ಸಾರ್ವಜನಿಕರು ಇದಕ್ಕೆ ಅಷ್ಟಾಗಿ ಸ್ಪಂದಿಸದಿರುವುದರಿಂದ ಮಳೆಕೊಯ್ಲು ಅಳವಡಿಸಿಕೊಳ್ಳಲು ಏ.೧೩ರ ವರೆಗೂ ಗಡವು ನೀಡಿದೆ. ಅನಂತರವೂ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಳ್ಳದಿದ್ದರೆ, ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಈಗಾಗಲೇ ನಿರ್ಮಾಣವಾಗಿರುವ ೬೦ x ೪೦ ಅಳತೆ ಮತ್ತು ಮೇಲ್ಪಟ್ಟ ಗಾತ್ರದ ನಿವೇಶನದಲ್ಲಿ ಕಟ್ಟಡಗಳೂ ಹಾಗು ಹೊಸದಾಗಿ ನಿರ್ಮಾಣವಾಗುವ ೩೦ x ೪೦ ಅಳತೆ ಮತ್ತು ಮೇಲ್ಪಟ್ಟ ಗಾತ್ರದ ನಿವೇಶನದಲ್ಲಿ ಎಲ್ಲ ಕಟ್ಟಡಗಳಿಗೂ ಮಳೆನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆನ್ನುವುದು ಸರ್ಕಾರದ ಸೂಚನೆ. ಆದರೆ ಈ ಸೂಚನೆಗೆ ಸ್ಪಂದಿಸಿರುವವರ ಸಂಖ್ಯೆ ಮಾತ್ರ ತುಂಬಾ ಕಡಿಮೆ.

ಸದ್ದಿಲ್ಲದ ಜಲಕ್ರಾಂತಿ

ಇದು ರಾಜ್ಯದಾದ್ಯಂತ ಕಾಡಿರುವ ನೀರಿನ ಬರದ ಒಂದು ಸ್ಥೂಲನೋಟ. ಇಂತಹ ಕಡುಬೇಸಿಗೆಯಲ್ಲೂ ಬರಪೀಡಿತ ತಾಲ್ಲೂಕುಗಳಲ್ಲಿ ಜಲಕ್ರಾಂತಿ ನಡೆದಿರುವ ವಿದ್ಯಮಾನ ಮಾತ್ರ ವಿಸ್ಮಯ ತರುವಂತಹದು. ತುಮಕೂರು ಜಿಲ್ಲೆಗೆ ಹೇಳಿಕೊಳ್ಳುವಂತಹ ಜಲಮೂಲಗಳೇ ಇಲ್ಲ. ಅಲ್ಲಿ ಅಂತರ್ಜಲವೂ ಸಮೃದ್ಧವಾಗಿಲ್ಲ. ನಂಜುಂಡಪ್ಪ ವರದಿ ಪ್ರಕಾರ, ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ಹೊಂದಿರುವ ಜಿಲ್ಲೆ ಎಂಬ ಖ್ಯಾತಿ ಇದರದ್ದು. ಆದರೆ ಈ ಜಿಲ್ಲೆಯಲ್ಲಿ ಸದ್ದಿಲ್ಲದೆ ಜಲಕ್ರಾಂತಿ ನಡೆದಿದೆ ಎಂದರೆ ನೀವು ನಂಬಲೇಬೇಕು. ಕಡು ಬೇಸಿಗೆಯಲ್ಲೂ ಇಲ್ಲಿ ನೀರಿಗೆ ಅಷ್ಟಾಗಿ ತತ್ವಾರ ಬಂದಿಲ್ಲ ಎಂಬುದು ವಿಸ್ಮಯದ ಸಂಗತಿ. ಇದಕ್ಕೆ ಕಾರಣ ಮಾತ್ರ ಬೇರೆ.

ಗ್ರಾಮೀಣ ಭಾಗದಲ್ಲಿ ನೀರು ಉಕ್ಕುವ ಭಾಗಗಳನ್ನು ಗುರುತಿಸಿ ಜೌಗು ಪ್ರದೇಶಗಳಲ್ಲಿ ಜನರು ತಲಪರಿಕೆಗಳನ್ನು ಹಿಂದೆ ನಿರ್ಮಿಸುತ್ತಿದ್ದರು. ವ್ಯವಸಾಯಕ್ಕಾಗಿ ಕಂಡುಕೊಂಡ ಶಾಶ್ವತ ನೀರಾವರಿ ಮೂಲವೇ ಈ ವ್ಯವಸ್ಥೆ. ಅದನ್ನೇ ಈಗ ಜನರು ಮತ್ತೆ ಆರಂಭಿಸಿದ್ದಾರೆ. ಮಣ್ಣಿನಲ್ಲಿ ನಿರ್ಮಾಣಮಾಡುವ ಈ ತಲಪರಿಕೆಗಳಲ್ಲಿ ನೀರು ಸಂಗ್ರಹವಾಗುತ್ತದೆ. ಈ ನೀರನ್ನು ಬಳಸಿಕೊಂಡು ಕುಡಿಯಲು, ಜಾನುವಾರು, ವ್ಯವಸಾಯ ಮುಂತಾದವಕ್ಕೆ ಬಳಸಲಾಗುತ್ತದೆ. ಈಗಾಗಲೇ ಮುಚ್ಚಿಹೋಗಿದ್ದ ಇಂತಹ ತಲಪರಿಕೆ ರಚನೆಗಳ ಸಂರಕ್ಷಣೆಗೆ ಮುಂದಾಗಿರುವ ಕೊರಟಗೆರೆ, ಮಧುಗಿರಿ, ಪಾವಗಡ ಮತ್ತು ಶಿರಾ ತಾಲ್ಲೂಕಿನಲ್ಲಿ ಜಲಕ್ರಾಂತಿಗೆ ನಾಂದಿ ಹಾಡಲಾಗಿದೆ.

ಕಬ್ಬಿಣದ ಬಳಕೆಗೂ ಮುನ್ನ, ಶತಮಾನಗಳಿಗೂ ಹಿಂದೆ ತುಮಕೂರು ಜಿಲ್ಲೆಯಲ್ಲಿ ತಲಪರಿಕೆಗಳನ್ನು ಗ್ರಾಮೀಣ ಜನರು ನಿರ್ಮಿಸುತ್ತಿದ್ದರಂತೆ. ಆದರೆ ಕಾಲಾನುಕ್ರಮದಲ್ಲಿ ತಲಪರಿಕೆಗಳು ಮುಚ್ಚಿಹೋಗಿದ್ದವು. ಈಗ ನೀರಿನ ಸಮಸ್ಯೆ ಭೀಕರವಾಗಿ ಕಾಡಿದ್ದರಿಂದ ತಲಪರಿಕೆ ಸಂರಕ್ಷಿಸುವ ಕೆಲಸ ಸದ್ದಿಲ್ಲದೆ ಆರಂಭವಾಗಿದೆ. ತಲಪರಿಕೆಯನ್ನು ಬಾವಿಯಾಕೃತಿಯಲ್ಲಿ ಕೆಲವು ಕಡೆ ನಿರ್ಮಿಸಿದರೆ, ಮತ್ತೆ ಕೆಲವು ಕಡೆ ಕಲ್ಯಾಣಿ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ಕಲ್ಯಾಣಿಗೆ ೨೦ ಅಡಿ ಉದ್ದ ೨೦ ಅಡಿ ಅಗಲ ಹಾಗೂ ೨೦ ಅಡಿ ಆಳವಿರುತ್ತದೆ. ಪ್ರಮುಖವಾಗಿ ಕೃಷಿ ಉದ್ದೇಶಕ್ಕಾಗಿಯೇ ನಿರ್ಮಿಸಲಾಗಿರುವ ಈ ತಲಪರಿಕೆಗಳ ನೀರು ೫ ಎಕರೆಯಿಂದ ೧೦೦ ಎಕರೆವರೆಗೂ ನೀರು ಒದಗಿಸಬಲ್ಲವು. ಒಂದು ಪೈಸೆ ಕೂಡಾ ಖರ್ಚಾಗದಂತೆ ನೀರು ಕೊಡುವ ರಚನೆಗಳಾದ ತಲಪರಿಕೆಗಳನ್ನು ಸಂರಕ್ಷಿಸಿಕೊಂಡರೆ, ಭೀಕರ ಬೇಸಿಗೆಯಲ್ಲೂ ನೀರಿಗಾಗಿ ಹಾಹಾಕಾರ ಪಡುವ ಅಗತ್ಯ ಇರುವುದಿಲ್ಲ. ತುಮಕೂರು ಜಿಲ್ಲೆಯ ಬರಪೀಡಿತ ತಾಲ್ಲೂಕುಗಳಲ್ಲಿ ನಡೆದಿರುವ ಇಂತಹ ಜಲಕ್ರಾಂತಿ ನಾಡಿನ ಉಳಿದ ಬರಪೀಡಿತ ಪ್ರದೇಶಗಳಿಗೆ ಮೇಲ್ಪಂಕ್ತಿಯಾಗಬಹುದೇ?

ನಿಧಿ ಇದೆ, ನೀರಿಲ್ಲ!

ಕುಡಿಯುವ ನೀರಿಗೆಂದೇ ರಾಜ್ಯ ಸರ್ಕಾರ ೬೦೦ ಕೋಟಿ ರೂ. ನಿಧಿ ಮೀಸಲಿಟ್ಟಿದೆ. ಆದರೆ ಅದನ್ನು ಬಳಸಿಕೊಳ್ಳುವುದು ಮಾತ್ರ ಕಷ್ಟವಾಗಿದೆ. ಏಕೆಂದರೆ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರದ ನಿಯಮಗಳೇ ಅಡ್ಡಿಯಾಗಿವೆ. ಸರ್ಕಾರ ಪ್ರತಿ ಕ್ಷೇತ್ರಕ್ಕೆ ೫೦ ಲಕ್ಷ ರೂ. ನೀರಿನ ಪರಿಹಾರಕ್ಕೆ ಒದಗಿಸಿದೆ. ಆದರೆ ಈ ಹಣದಲ್ಲಿ ಹಳೆ ಕೊಳವೆ ಬಾವಿ ರಿಪೇರಿ ಮಾಡಿಸುವಂತಿಲ್ಲ, ಹೊಸದಾಗಿ ಕೊಳವೆ ಬಾವಿ ಕೊರೆಸುವಂತಿಲ್ಲ ಎಂಬದು ಸರ್ಕಾರಿ ನಿಯಮಗಳು. ಹೀಗಾಗಿ ನೀರು ಲಭ್ಯವಿರುವ ಕೊಳವೆಬಾವಿ ಬಳಸೋಣವೆಂದರೆ ಅದೂ ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಂತಹ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಪರಿಣಾಮವಾಗಿ ಜಿಲ್ಲಾಧಿಕಾರಿಗಳ ಪರಿಹಾರ ನಿಧಿಯಲ್ಲಿ ನೀರಿಗಾಗಿ ಮೀಸಲಿಟ್ಟಿರುವ ಹಣ ಹಾಗೇ ಕೊಳೆಯುತ್ತಿದೆ.

ವರವಾದ ಚೆನ್ನೈ ಮಹಾಮಳೆ

ಬರಪೀಡಿತ ಜಿಲ್ಲೆಗಳಾಗಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಈ ಕಡುಬೇಸಿಗೆಯಲ್ಲಿ ನೀರಿಗಾಗಿ ಅಂತಹ ಹಾಹಾಕಾರ ಕಂಡುಬಂದಿಲ್ಲವೆಂಬುದು ಸಮಾಧಾನದ ಸಂಗತಿ. ಅದಕ್ಕೆ ಕಾರಣ ಮಾತ್ರ ವಿಭಿನ್ನ. ನೆರೆಯ ಚೆನ್ನೈನಲ್ಲಿ ಕೊಚ್ಚಿಹೋಗುವಂತೆ ಸುರಿದ ಹಿಂಗಾರು ಮಳೆಯ ಪರಿಣಾಮವಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕೆರೆಗಳು ಉಕ್ಕಿ ಹರಿಯುವಂತಾಗಿತ್ತು. ಹೀಗಾಗಿ ಆ ಭಾಗದಲ್ಲಿ ಅನೇಕ ಕೆರೆಗಳ ನೀರು ಈಗಲೂ ಅರ್ಧದಷ್ಟು ತುಂಬಿವೆ. ಅಂತರ್ಜಲದ ಮಟ್ಟ ಕೂಡ ಹೆಚ್ಚಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುತ್ತಿದ್ದ ಈ ಪ್ರದೇಶ ಇದೇ ಮೊದಲ ಬಾರಿಗೆ ಕೊಂಚ ನೀರನ್ನು ಕಾಣುವಂತಾಗಿದೆ. ಆದರೆ ನೀರಿನ ಸಮಸ್ಯೆ ಸಂಪೂರ್ಣ ಪರಿಹಾರವಾಗಿದೆ ಎಂದೇನಿಲ್ಲ.

ಫೆಬ್ರವರಿ ತಿಂಗಳಲ್ಲೇ ನೀರಿಗಾಗಿ ಕರುನಾಡಿನಲ್ಲಿ ಇಂತಹ ಹಾಹಾಕಾರ ಎದ್ದಿರುವಾಗ, ಇನ್ನು ಕಡುಬೇಸಿಗೆಯ ಏಪ್ರಿಲ್, ಮೇ ತಿಂಗಳುಗಳಲ್ಲಿ ಕುಡಿಯುವ ನೀರಿಗಾಗಿ ಇನ್ನೆಷ್ಟು ಕೋಲಾಹಲ ಆಗಲಿದೆ? ಸರ್ಕಾರ ಏನೇನು ಪರಿಹಾರೋಪಾಯಗಳನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

ಲೇಖನ: ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*