ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೩: ಏನಾದವು ಆ ೭೫ ಕೆರೆಗಳು? ಬಿಬಿಎಂಪಿ ನುಂಗಿತೇ!

ನಮ್ಮ ಸರ್ಕಾರಕ್ಕೆ ನಮ್ಮನ್ನು ಆಳುವ ಸ್ಥಳೀಯ ಸಂಸ್ಥೆಗಳಿಗೆ ಏನಾಗಿದಿಯೋ ಗೊತ್ತಿಲ್ಲ. ಆಡುವುದು ಒಂದು ಮಾಡುವುದು ಮತ್ತೊಂದು! ಅದರಲ್ಲೂ ಪರಿಸರ ವಿಷಯಕ್ಕೆ ಬಂದರೆ, ವಿರುದ್ಧದ ದಿಕ್ಕಿನಲ್ಲೇ ಕಾರ್ಯನಿರ್ವಹಣೆ ಮಾಡುತ್ತವೆ. ಅದಕ್ಕೇ ಬೆಂಗಳೂರೆಂಬ ಸಾವಿರಾರು ಕೆರೆಗಳ ನಗರಿಯನ್ನು ‘೧೦೮ ಕೆರೆಗಳ ನಗರಿ’ಗೆ ಇಳಿಸಿಬಿಟ್ಟಿದ್ದಾರೆ…... ಅದೂ ಕೆರೆಗಳನ್ನು ಕಾಪಾಡುವ ಹೊಣೆ ಹೊತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ೭೫ ಕೆರೆಗಳನ್ನು ನುಂಗಿಹಾಕಲಾಗಿದೆ!

ಹೌದು, ಹಿಂದಿನ ‘ನೋಟ’ದಲ್ಲಷ್ಟೇ ಬೆಂಗಳೂರಿನಲ್ಲಿ ಬಿಬಿಎಂಪಿ ದಾಖಲೆಯಲ್ಲೇ ೧೮೩ ಕೆರೆಗಳು ಜೀವಂತ ಉಳಿದುಕೊಂಡಿವೆ ಎಂದು ಹೇಳಿದ್ದೆ. ಆದರೆ ಅದೇ ಬಿಬಿಎಂಪಿ ೨೦೧೬-೧೭ರ ಬಜೆಟ್‌ನಲ್ಲಿ ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ಕೆರೆಗಳ ಸಂಖ್ಯೆ ೧೦೮ ಎಂದು ನಮೂದಿಸಿ ಅಚ್ಚರಿ ಮೂಡಿಸಿದ್ದಾರೆ. ಪರಿಸರಕ್ಕೆ ಕಪ್ಪುಚುಕ್ಕಿ ಇರಿಸಿದ್ದಾರೆ. ಬಿಬಿಎಂಪಿಯ ದಾಖಲೆಯನ್ನೇ ಸುಳ್ಳು ಎನ್ನುವ ರೀತಿಯಲ್ಲಿ ಕೆರೆಗಳ ದಾಖಲೆಯನ್ನೇ ಮುಳುಗಿಸಿದ್ದಾರೆ.

ಬೆಂಗಳೂರಿನಲ್ಲಿ ಕೆರೆಗಳ ಅವನತಿ ಬಗ್ಗೆ ೨೦೦೮ರಲ್ಲಿ ನಾನು ವಿಜಯ ಕರ್ನಾಟಕದಲ್ಲಿದ್ದಾಗ ‘ನಮ್ಮೂರ್  ಕೆರೆ’ ಎಂಬ ೩೧ ದಿನಗಳ ತನಿಖಾ ಲೇಖನ ಮಾಲಿಕೆಯನ್ನು ಬರೆದಿದ್ದೆ. ೧೦೮ ಕೆರೆಗಳನ್ನು ಹುಡುಕಾಡಿ, ಅದರ ಶೋಚನೀಯ ಪರಿಸ್ಥಿತಿಯನ್ನು ಚಿತ್ರ ಸಹಿತ ಅನಾವರಣಗೊಳಿಸಿದ್ದೆ. ಅದಾದ ನಂತರ, ಬೆಂಗಳೂರಿನಲ್ಲಿ ಕೆರೆ ಉಳಿಸುವ ಬಗ್ಗೆ ಸರ್ಕಾರ ಹಾಗೂ ಬಿಬಿಎಂಪಿ ಸ್ವಲ್ಪ ಆಸಕ್ತಿ ವಹಿಸಿದವು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆರೆಗಳನ್ನು ಉಳಿಸಲು ಆದೇಶಿಸಿ, ಕೆಲವು ನೂರು ಕೋಟಿ ಹಣವನ್ನೂ ಮೀಸಲಿಟ್ಟರು. ಇದಾದ ಮೇಲೆ ಬಿಬಿಎಂಪಿ ಹಾಗೂ ಬಿಡಿಎಗೆ ಕೆರೆಗಳ ಅಭಿವೃದ್ಧಿಯ ಜವಾಬ್ದಾರಿ ವಹಿಸಲಾಯಿತು. ಅಂದಿನಿಂದ ಇಂದಿನವರೆಗೆ, ಸಾವಿರ ಕೆರೆಗಳ ನಗರಿಯಲ್ಲಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ವ್ಯಾಪ್ತಿ, ಗುರುತಿಸುವಿಕೆ ನಡೆಯುತ್ತಲೇ ಇದೆ.

ಇಷ್ಟೆಲ್ಲ ಏಕೆ ಹೇಳಿದೆ ಎಂದರೆ, ೨೦೦೯ರಲ್ಲಿ ಬಿಬಿಎಂಪಿ ವಿಐಎಂಎಸ್ ಎಂಬ ಸಂಸ್ಥೆಯ ಜತೆಗೂಡಿ ಬೆಂಗಳೂರು ಅಲ್ಲಲ್ಲ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ಸಮೀಕ್ಷೆ ನಡೆಸಿ ಅವುಗಳ ಅಭಿವೃದ್ಧಿ ಮುಂದಾಯಿತು. ಅದಕ್ಕಾಗಿ ಕ್ರಿಯಾ ಯೋಜನೆ ಸಿದ್ಧವಾಯಿತು. ‘ನಮ್ಮ ಬೆಂಗಳೂರು ನಿಸರ್ಗ’ ಎಂಬ ಮುಖ್ಯ ಶೀರ್ಷಿಕೆಯಲ್ಲಿ ‘ಆನ್ ಆಕ್ಷನ್ ಪ್ಲಾನ್ ಫಾರ್ ಡೆವೆಲಪ್‌ಮೆಂಟ್ ಆಫ್ ಲೇಕ್ಸ್- ಇನ್ ಬಿಬಿಎಪಿ ಜುರಿಸ್ಡಿಕ್ಷನ್’ ಎಂಬ ಉಪ ಶೀರ್ಷಿಕೆಯಲ್ಲಿ ಬಿಬಿಎಂಪಿ ೧೦೬ ಪುಟಗಳ ವರದಿ ಸಿದ್ಧಪಡಿಸಿತು. ಈ ವರದಿಯಲ್ಲಿ ಇರುವುದೇ ೧೮೩ ಕೆರೆಗಳು.

ಬಿಬಿಎಂಪಿಯ ವರದಿಯೇ ಹೇಳುವಂತೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ೧೮೩ ಕೆರೆಗಳಿವೆ. ಅದರಲ್ಲಿ ೨೫ ಕೆರೆಗಳನ್ನು ಈಗಾಗಲೇ ಹಲವು ಸಂಸ್ಥೆಗಳ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿದೆ. ೨೧ ಕೆರೆಗಳನ್ನು ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿದೆ. ೧೨ ಕೆರೆಗಳನ್ನು ಬಿಡಿಎ ಅಭಿವೃದ್ಧಿ ಪಡಿಸುತ್ತಿದೆ. ಲೇಕ್ ಡೆವೆಲಪ್‌ಮೆಂಟ್ ಅಥಾರಿಟಿ (ಎಲ್‌ಡಿಎ) ೨ ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ೧೨೩ ಕೆರೆಗಳನ್ನು ಅಭಿವೃದ್ಧಿಪಡಿಸಬೇಕಿದ್ದು, ಇದಕ್ಕಾಗಿ ಬಿಬಿಎಂಪಿ ಪ್ರಸ್ತಾಪವನ್ನು ಮುಂದಿಡುತ್ತಿದೆ ಎಂದು ಈ ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಇದಕ್ಕಾಗಿ ಬೇಕಾಗಿರುವ ಹಣವನ್ನೂ ಸವಿವರವಾಗಿ ಕ್ರಿಯಾಯೋಜನೆ ಮೂಲಕವೇ ವಿವರಿಸಲಾಗಿದೆ. ಅಲ್ಲದೆ, ಬೇರೆ ಉದ್ದೇಶಕ್ಕೆ ಬಳಕೆಯಾಗಿರುವ ೪೩ ಕೆರೆಗಳ ವಿವರವನ್ನೂ ನೀಡಲಾಗಿದೆ. ಇದು ೧೮೩ರ ಹೊರತಾದ ೪೩ ಕೆರೆಗಳು.

ಸಾವಿರ ಬಿಡಿ, ಹೋಗಲಿ ೧೮೩ ಆಗಲೀ ಉಳಿಯಲಿ ಎಂಬುದೇ ಆಶಯವಾಗಿತ್ತು. ಈವರೆಗೆ ಈ ಸಂಖ್ಯೆಯನ್ನೂ ಎಲ್ಲರೂ ಅಧಿಕೃತ ಎಂದೇ ಭಾವಿಸಿ ಅದನ್ನು ಅಭಿವೃದ್ಧಿಗೆ ಮುಂದುವರಿಸಿದ್ದರು. ಆದರೆ, ಈ ಬಾರಿಯ ಬಿಬಿಎಂಪಿ ಬಜೆಟ್‌ನಲ್ಲಿ ೭೫ ಕೆರೆಗಳನ್ನೇ ಮಾಯ ಮಾಡಲಾಗಿದೆ. ಬಿಬಿಎಂಪಿಯ ೨೦೧೬-೧೭ನೇ ಸಾಲಿನ ಬಜೆಟ್ ಪುಸ್ತಕದ ೨೯ನೇ ಪುಟದಲ್ಲಿ ‘ಬಿಬಿಎಂಪಿ ವ್ಯಾಪ್ತಿಯಲ್ಲಿ ೧೦೮ ಕೆರೆಗಳಿದ್ದು, ಈ ಪೈಕಿ ೮೯ ಜೀವಂತ ಕೆರೆಗಳಾಗಿದ್ದು, ಈಗಾಗಲೇ ೫೦ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಬಾಕಿ ಕೆರೆಗಳ ಅಭಿವೃದ್ಧಿ ಕಾರ್ಯವೂ ಪ್ರಗತಿಯಲ್ಲಿವೆ’ ಎಂದು ತಿಳಿಸಲಾಗಿದೆ.

ಅಲ್ಲಾ ಸ್ವಾಮಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ ಎಂಬುದರ ಅರಿವಿಲ್ಲದೆಯೇ ಬಜೆಟ್ ರೂಪಿಸಿದರೆ ಹೇಗೆ? ೧೦೦ ಕೋಟಿ ಕೆರೆಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಬೊಬ್ಬೆ ಹೊಡೆದುಕೊಳ್ಳುತ್ತೀರಿ. ಆದರೆ, ಇರುವ ಕೆರೆಗಳನ್ನೇ ಮಂಗಮಾಯ ಮಾಡಲು ಬಜೆಟ್‌ನಂತಹ ಅಧಿಕೃತ ದಾಖಲೆಯನ್ನೇ ಬಳಸಿಕೊಂಡು ಭೂಗಳ್ಳರಿಗೆ ಸಹಾಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಹೇಳಿ? ಈ ಬಗ್ಗೆ ದನಿ ಎತ್ತುವವರು ಯಾರು?

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*