ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಆ ಊರಿನ ನೀರ ನಿಶ್ಚಿಂತೆಗೀಗ ೨೦ ವರ್ಷ

ಅದು ೧೯೯೫ರ ಕಡು ಬೇಸಿಗೆಯ ಸಮಯ. ಉತ್ತರ ಕನ್ನಡ ಜಿಲ್ಲೆಯ  ಶಿರಸಿ ತಾಲ್ಲೂಕಿನ ಪಡಿಗೇರಿ ಗ್ರಾಮದ  ಅರಸಿಕೇರಿ ಊರಿನವರ ಮುಖದಲ್ಲಿ ಅಂದು ಎಂದಿನಂತೆ ನಗು ಇರಲಿಲ್ಲ. ಯಾವುದೋ ಒಂದು ಜಟಿಲ ಸಮಸ್ಯೆಯ ಬಿಂಬ ಅವರ ಮುಖದಲ್ಲಿತ್ತು. ಕಾರಣ ಇಷ್ಟೆ -kanour 012 ಆ ದಿನಗಳಲ್ಲಿ ಮಲೆನಾಡಿಗೆ ಮಲೆನಾಡೇ ಜಲಕ್ಷಾಮದ ಸಮಸ್ಯೆಯನ್ನು ಎದುರಿಸುತ್ತಿತ್ತು. ಹಾಗೆಯೇ, ಈ ಊರೂ ಸಹ ನೀರಿನ ಸಮಸ್ಯೆಯನ್ನು ಅನುಭವಿಸುತ್ತಿತ್ತು. ವೈಯಕ್ತಿಕ ಮಟ್ಟದಲ್ಲಷ್ಟೇ ಅಲ್ಲದೆ, ಸಮುದಾಯದ ಮಟ್ಟದಲ್ಲಿಯೂ ಈ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ತವಕ ಊರಿನ ಯುವಕರ ಮನದಲ್ಲಿತ್ತು. ಅದಕ್ಕಾಗಿಯೇ ಊರಿನ ಅಶ್ವತ್ಥ ಕಟ್ಟೆಯ ಬಳಿ ಊರಿನ ಮಂದಿಯೆಲ್ಲ ಸಭೆ ಸೇರಿದರು. ಮೊದಲೇ ವಿದ್ಯುತ್‌ನ ಕೊರತೆ, ಹಾಗಾಗಿ, ವಿದ್ಯುತ್‌ನ ಬಳಕೆ ಇಲ್ಲದೆ ಹೇಗೆ ನೀರ ನೆಮ್ಮದಿಯನ್ನು ಕಾಣುವುದು ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಶುರುವಾಯಿತು.

ಹಲವರ ಸಲಹೆಯ ನಂತರ, ಊರಿನ ಹಿರಿಯರಾದ ಕಮಲಾಕರ ಹೆಗಡೆಯವರು ಊರಾಚೆ ಇರುವ  ಝರಿಯ ನೀರನ್ನು ಊರಿಗೆ ತಂದರೆ, ಜಲದಾಹವೂ ತಪ್ಪತ್ತುತ್ತದೆ ಮತ್ತು ವಿದ್ಯುತ್ ಸಹ ಬೇಕಾಗಿಲ್ಲ ಎನ್ನುವ ಸಲಹೆ ನೀಡಿದರು. ಎಲ್ಲರಿಗೂ ಸಹ ಈ ಸಲಹೆ ಇಷ್ಟವಾಯಿತು  ಇದರ ಪರಿಣಾಮವಾಗಿ, ಇಂದು ಅರಸಿಕೇರಿ ನೀರಿನ ಸಮಸ್ಯೆಯಿಂದ ಮುಕ್ತವಾಗಿ ಎರಡು ದಶಕಗಳನ್ನು ದಾಟಿ ಮುನ್ನುಗ್ಗುತ್ತಿದೆ. ನೀರಿಗಾಗಿ ವಿದ್ಯುತ್‌ನ್ನು ನಂಬಿ ಕೂರುವ ಪ್ರಮೇಯವೂ ಇಲ್ಲ. ಸತತ ೨೪ ಘಂಟೆಗಳೂ ಊರಿನ ಎಲ್ಲ ಮನೆಗಳನ್ನು ಸ್ವಚ್ಛ ನೀರು ಲಭ್ಯ. ಇದು ಸಾಧ್ಯವಾದ ಯಶಸ್ಸಿನ ಕಥೆ ಇಂತಿದೆ.

DSC_0405ಊರಿನಿಂದ ಒಂದೂವರೆ ಕಿ.ಮೀ ದೂರದ ‘ನಾಳೆಸರ’ ಎಂಬಲ್ಲಿ ನೀರಿನ ಚಿಲುಮೆ(ಒರತೆ)ಯಿದೆ. ಇಲ್ಲಿಯವರೆಗೆ ಎಂಥಹ ಕಡು ಬೇಸಿಗೆಯಲ್ಲೂ ಇದು ಬತ್ತಿದ ದಾಖಲೆಯಿಲ್ಲ. ಎತ್ತರದ ಸ್ಥಳದಲ್ಲಿರುವ ಈ ಚಿಲುಮೆಯಿಂದ ಊರಿಗೆ ನೀರುವ ಉಪಾಯವೇನೋ ಚೆನ್ನಾಗಿತ್ತು. ಆದರೆ ತರುವ ಬಗೆ ಹೇಗೆ? ಇದಕ್ಕೂ ಸರಳ ಮಾರ್ಗ ಅನುಸರಿಸಲಾಗಿದೆ.

ಮೊದಲಿಗೆ ಊರಿನವರು ಒರತೆ ಎತ್ತರ ಮತ್ತು ಊರು ಇರುವ ತಗ್ಗಿನ ಮಟ್ಟವನ್ನು  ಹಲವು ಬಾರಿ ವಾಟಲ್ ಲೆವಲ್ ಮೂಲಕ ಅಳತೆ ಮಾಡಿದರು. ಪೈಪ್ ಮೂಲಕ ಈ ನೀರನ್ನು ಸಾಗಿಸಲು ಸಾಧ್ಯವೇ ಎಂಬುದನ್ನು ಪರೀಕ್ಷಿಸಲು ಮುಂದಾದರು. ಇದಕ್ಕಾಗಿ ಶಿರಸಿ ಪಟ್ಟಣದ  ಪೈಪ್ ವ್ಯಾಪಾರಿಯೊಬ್ಬರಿಗೆ ತಮ್ಮ ಯೋಜನೆ ತಿಳಿಸಿ ನೆರವು ಕೋರಿದರು. ಇದನ್ನು ಒಪ್ಪಿದ ವ್ಯಾಪಾರಿ ೧.೫ ಕಿಮೀಗಾಗುವಷ್ಟು ಪೈಪ್‌ಗಳನ್ನು ನೀಡಿದರು. ಒಂದು ವೇಳೆ ಯೋಜನೆ ನಿಷ್ಫಲವಾದರೆ, ಎಲ್ಲ ಪೈಪ್‌ಗಳನ್ನು ವಾಪಸ್ ತೆಗೆದುಕೊಳ್ಳುವುದಾಗಿಯೂ ಭರವಸೆ ನೀಡಿದರು. ಆದರೆ ಯೋಜನೆ ಸಫಲವಾದರೆ ತಮ್ಮಲ್ಲಿಯೇ  ಯೋಜನೆಗೆ ಬೇಕಾದ ಎಲ್ಲ ಸರಕಣೆಗಳನ್ನು ತೆಗೆದುಕೊಳ್ಳುವಂತೆ ಕರಾರು ಹಾಕಿದರು.  ಅದರಂತೆ  ೨೦ ಅಡಿ ಉದ್ದ, ೨ ಇಂಚು ಅಗಲದ ೩೦೦ ಪೈಪ್‌ಗಳನ್ನು ಇವರ ಬಳಿ ಊರವರು ಖರೀದಿಸಿದರು. ಇದಲ್ಲದೆ ೪೦೦ ಕಪ್ಲಿಂಗ್‌ಗಳು, ೩೫ಎಲ್‌ಬೊಗಳು. ಮೊದಲಾದ ಸಾಮಗ್ರಿಗಳು ಇದರಲ್ಲಿ ಸೇರಿದ್ದವು.

ಆರಂಭದಲ್ಲಿ ನೀರಿನ ಒರತೆ ಇರುವಲ್ಲಿಂದ ಊರಿನ ಮೊದಲಿನ ಮನೆಯವರೆಗೆ ನೆಲದ ಮೇಲೆಯೇ ಪೈಪ್‌ಗಳನ್ನು ಅಚ್ಚುಕಟ್ಟಾಗಿ ಜೋಡಿಸಿದರು. ನೀರೇನೋ ಬಂತು; ಆದರೆ ಒತ್ತಡ ತೀರ ಕಡಿಮೆ ಇತ್ತು. ಹಾಗಾಗಿ  ಮನೆಯ ನಳದಲ್ಲಿ ಬಲು ನಿಧಾನ ಗತಿಯಲ್ಲಿ ನೀರು ತಲುಪುತ್ತಿತ್ತು. ಇದಕ್ಕಾಗಿ ಪೈಪ್‌ಗಳನ್ನು ತೆಗೆದು, ಒರತೆಯಿಂದ ಪೈಪ್‌ನ್ನು ಬೆಟ್ಟದ ಮೇಲ್ಭಾಗಕ್ಕೆ  ಜೋಡಿಸಿ ಪುನಃ ಬೆಟ್ಟದ ಕೆಳಗಡೆ ತಂದು ಮತ್ತೆ ಊರಿನೆಡೆಗೆ ಜೋಡಿಸಲಾಯಿತು. ಆಗ ನೀರಿನ ವೇಗ ಹೆಚ್ಚಿತಲ್ಲದೇ, ಎಲ್ಲರ ಮನೆಗಳಿಗೂ ತ್ವರಿತ ಗತಿಯಲ್ಲಿ ಹರಿಯಲಾರಂಭಿಸಿತು. ಸುಲಭ ಮತ್ತು ಕಡಿಮೆ ಖರ್ಚಿನಲ್ಲಿ ಮೊದಲ ಪ್ರಯತ್ನಕ್ಕೇ ಯಶಸ್ಸು ಸಿಕ್ಕದ್ದು ಊರಿನವರ ಶ್ರಮದಿಂದಾಗಿ.

ಒರತೆಯ ಬಳಿ ಪುಟ್ಟ ಕೆರೆಯ ನಿರ್ಮಾಣ

DSC_0411ನೀರನ್ನು ನೇರವಾಗಿ ಒರತೆಯ ಬುಡದಿಂದ ತರುವುದು ಅಷ್ಟು ಸಮಂಜಸ ಅಲ್ಲ ಎಂಬುದು ಹಿರಿಯರ ಅನಿಸಿಕೆಯಾಗಿತ್ತು. ಇದಕ್ಕಾಗಿ ಒರತೆಯ ಕೆಳ ಭಾಗದಲ್ಲಿ ಪುಟ್ಟ ಕೆರೆಯನ್ನು ನಿರ್ಮಿಸಲು ಆರಂಭಿಸಲಾಯಿತು. ೨೦ ಅಡಿ ಅಗಲ ಮತ್ತು ಉದ್ದ, ೩ ಅಡಿ ಆಳದ ಚಿಕ್ಕ ಕೆರೆಯನ್ನು ಊರಿನವರು ಶ್ರಮದಾನದ ಮುಖಾಂತರ ನಿರ್ಮಿಸಿದರು. ಕೆರೆಯಲ್ಲಿ ಸಂಗ್ರಹವಾದ ನೀರು ಸ್ವಚ್ಛವಾಗಿ ಮನೆಗಳಿಗೆ ಲಭ್ಯವಾಗಲಿ ಎಂದು ಫಿಲ್ಟರ್‌ನ್ನು ಅಳವಡಿಸಲಗಿದೆ. ಅದರ ಮೂಲಕ ಸಾಗುವ ನೀರು ಊರಿನ ಮನೆಗಳನ್ನು ತಲುಪುತ್ತಿದೆ.

ಪೈಪ್‌ಗಳ ಜೋಡಣೆ

ನೀರು ಸರಬರಾಜು ಮಾಡುವ ಪೈಪ್‌ಗಳನ್ನು ನೆಲದ ಮೇಲೆಯೇ ಬಿಟ್ಟರೆ, ಅದು ಒಡೆದು ಹೋಗುವ ಸಾಧ್ಯತೆಗಳೇ ಹೆಚ್ಚು. ಅದಕ್ಕಾಗಿ ನೆಲದಿಂದ ೧ ಅಡಿ ಆಳದ ಮತ್ತು ೧ ಅಡಿ ಅಗಲದ  ಕಾಲುವೆ ನಿರ್ಮಿಸಿ ಪೈಪ್‌ಗಳನ್ನು ಜೋಡಿಸಲಾಗಿದೆ. ಜತೆಗೆ ‘ಏರ್ ಟೈಟ್’ ಆಗದಂತೆ ‘ಏರ್ ಕ್ಯಾಪ್’ಗಳನ್ನು ಅಳವಡಿಸಲಾಗಿದೆ. ಅಲ್ಲದೇ ಯಾವುದಾದರೂ ಸಂದರ್ಭದಲ್ಲಿ ಪೈಪ್ ಒಡೆದು ಹೋದರೆ, ನೀರು ವ್ಯರ್ಥವಾಗಬಾರದು ಎಂದು ಅರ್ಧ ಕಿ.ಮೀ.ಗೆ ಒಂದರಂತೆ ೩ ‘ವಾಲ್’ಗಳನ್ನು ಜೋಡಿಸಲಾಗಿದೆ. ಈ ಎಲ್ಲ ಕೆಲಸವನ್ನೂ ಊರಿನ ಯುವಕರು ಸ್ವಶ್ರಮದಾನದ ಮೂಲಕ ಮಾಡಿತೋರಿಸಿದ್ದಾರೆ.

ಸುಸುಜ್ಜಿತ ಟ್ಯಾಂಕ್‌ನ ನಿರ್ಮಾಣ

ನೀರನ್ನು ನೇರವಾಗಿ ಮನೆಗಳಿಗೆ ಸರಬರಾಜು ಮಾಡುವ ಬದಲು, ನೀರನ್ನು ಸಂಗ್ರಹಿಸುವುದಕ್ಕಾಗಿ ಟ್ಯಾಂಕ್‌ನ್ನ ನಿರ್ಮಿಸುವ ಯೋಜನೆಯನ್ನು ಊರನವರು ಅನುಷ್ಠಾನಕ್ಕೆ ತಂದಿದ್ದಾರೆ. ಇದರ ಉದ್ದೇಶವೆಂದರೆ, ಊರಿನಲ್ಲಿ ನಡೆಯುವ ವಿಶೇಷ ಸಮಾರಂಭಗಳಿಗೆ ಯಾವತ್ತೂ ನೀರಿನ ಕೊರತೆ ಕಾಡಬಾರದು ಎಂಬುದಷ್ಟೇ. ೨೪ ಅಡಿ ಉದ್ದ, ೬ ಅಡಿ ಅಗಲ ಮತ್ತು ಎತ್ತರದ ಸುಸಜ್ಜಿತ ಟ್ಯಾಂಕ್‌ನ್ನು ನಿರ್ಮಾಣ ಮಾಡಲಾಗಿದೆ. ಆರಂಭದಲ್ಲಿ ಚಪ್ಪಡಿ ಕಲ್ಲುಗಳನ್ನು ನಿಲ್ಲಿಸಿ, ಅದಕ್ಕೆ ಸಿಮೆಂಟ್‌ನ ಪ್ಲಾಸ್ಟ್‌ರ್‌ನ್ನು ಹಾಕಲಾಗಿತ್ತು.  ಇಲ್ಲಿ ಶೇಖರಣೆಗೊಂಡ ನೀರು ಮನೆಮನೆಯನ್ನು  ತಲುಪಿ ಜಲದಾಹ ನೀಗಿಸುತ್ತಿದೆ

ಉಳಿದ ಊರುಗಳಿಗೆ ಮಾದರಿಯಾದ ವ್ಯವಸ್ಥೆ

ಈ ಮಾದರಿಯನ್ನು ಗಮನಿಸಿದ ಅಕ್ಕ-ಪಕ್ಕದ ಊರುಗಳಾದ ಬೆಳಖಂಡ, ಶೇಡಿಕುಳಿ, ಕಾಗೇರಿ, ನೇಗಾರು ಅಲ್ಲದೇ ಪಕ್ಕದ ತಾಲ್ಲೂಕಿನ ಸಾಕಷ್ಟು ಹಳ್ಳಿಗಳ ರೈತರು ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಜೊತೆಗೆ ತಮಗೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡು ಜಲದಾಹವನ್ನು ನೀಗಿಸಿಕೊಳ್ಳುತ್ತಿದ್ದಾರೆ. ಇಂದು ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೆ, ಹಲವು ಜಿಲ್ಲೆಗಳಲ್ಲಿ ಈ ನೀರಿನ  ವ್ಯವಸ್ಥೆ ಸಾಮಾನ್ಯವಾದರೂ ಸಹ,  ಕಡಿಮೆ ವೆಚ್ಚ ಮತ್ತು  ಪರಿಸರ ಸ್ನೇಹಿಯಾಗಿದೆ.

ಶ್ರಮದಾನವೇ ಪ್ರಧಾನ

kanour 068ಸರಿಸುಮಾರು ೯ ತಿಂಗಳುಗಳ ಕಾಲ ಊರಿನ ೯ ಮನೆಯ ಯುವಕರು ಮುಂಜಾನೆ ಮನೆಯ ಕೆಲಸ ಮಧ್ಯಾಹ್ನ ಜಲದಾಹ ಇಂಗಿಸುವ ಕೆಲಸ ಮಾಡಿದ್ದಾರೆ. ಬೆಟ್ಟಗುಟ್ಟದ ಕಾಲು ದಾರಿಯಲ್ಲಿ ಕಾಲುವೆ ನಿರ್ಮಿಸಿ, ಪೈಪ್‌ಗಳ ಜೋಡಣೆ ಮಾಡಿ ಒಗ್ಗಟ್ಟಿನಲ್ಲಿ ಬಲವಿದೆ ಸಮುದಾಯದ ಕೆಲಸದಲ್ಲಿ ಹಿತವಿದೆ ಎನ್ನುವ ಮಾತನ್ನು ನಿಜವಾಗಿಸಿದ್ದಾರೆ.  ಇದರಿಂದಾಗಿ ಅವರಿಗೆ ಆ ಕಾಲದಲ್ಲಿ ಖರ್ಚೂ ಸಹ ಕಡಿಮೆಯಾಗಿದೆ.

 “ಇದು ನಮ್ಮ ಪೂರ್ವಿಕರ ಯೋಜನೆಯಾಗಿತ್ತು. ಆದರದು ಅನಿವಾರ್ಯ ಕಾರಣಗಳಿಂದ ಜಾರಿಗೊಂಡಿರಲಿಲ್ಲ. ಆದರೆ ನಮ್ಮ ಕಾಲದಲ್ಲಿ ನೀರಿನ ಅಭಾವ ಜಾಸ್ತಿಯಾಗಿದ್ದರಿಂದ, ನಾವು ಈ ಯೋಜನೆಯನ್ನು ಕೈಗೆತ್ತಿಕೊಂಡೆವು. ಪ್ರತಿ ಮನೆಗೆ ಆ ಕಾಲದಲ್ಲಿ ರೂ.೯,೦೦೦ದಷ್ಟು ಖರ್ಚು ಬಂದಿತ್ತು. ನಾವೇ ಎಲ್ಲ ಕೆಲಸಗಳನ್ನೂ ಸ್ವತಃ ಮಾಡಿದ್ದರಿಂದ ಖರ್ಚು ಕಡಿಮೆಯಾಯಿತು. ಇದಕ್ಕಾಗಿ ನಾವು ಸರ್ಕಾರದ ಧನ ಸಹಾಯವನ್ನಾಗಲಿ, ಯಾವುದೇ ಇಲಾಖೆಯ ನೆರವನ್ನಾಗಲಿ ಅಪೇಕ್ಷಿಸಲಿಲ್ಲ. ನಮ್ಮ ಕೆಲಸವನ್ನು ನಾವೇ ಮಾಡಿಕೊಂಡೆವು. ಆಗ ಮಾಡಿದ ಕೆಲಸ ಇಂದಿಗೂ ಫಲ ನೀಡುತ್ತಿದೆ. ಕೆರೆ ನಿರ್ಮಾಣವಾದ ಜಾಗ ಕೂಡ ಊರಿನವರದ್ದೇ ಆಗಿದ್ದರಿಂದ, ಜಾಗದ ತೊಂದರೆಯೂ ಉಂಟಾಗಲಿಲ್ಲ” ಎನ್ನುತ್ತಾರೆ ಊರಿನ ಹಿರಿಯರಾದ ಶ್ರೀ ವೆಂಕಟರಮಣ ಹೆಗಡೆ.

‘ಆ ಕಾಲಕ್ಕೆ ನಮಗೆ ನೀರಿಗಾಗಿ ಬಹಳ  ಕಷ್ಟಪಡುವ  ಕಾಲವಿತ್ತು. ಈಗ ಅದು ತಪ್ಪಿದೆ. ಕರೆಂಟನ್ನು ನಂಬಿ ಕೂರುವ ಕಾಲ ತಪ್ಪಿದೆ. ಹಾಗೆಯೇ ನೀರಿಗಾಗಿ ವಿದ್ಯುತ್ ಬಿಲ್ ತುಂಬುವದೂ ಸಹ ತಪ್ಪಿದೆ. ಇದರಿಂದಾಗಿ ನಮಗೂ ಸಹ ಖರ್ಚಿನಲ್ಲಿ ಉಳಿತಾಯವಾಗಿ ನಿಸರ್ಗದ ಕೊಡುಗೆಯನ್ನು ಬಳಸಿಕೊಂಡಂತಾಗಿದೆ. ನಾವು ಮನೆಯ ಉಪಯೋಗಕ್ಕಾಗಿ ಮಾತ್ರ ಈ ನೀರನ್ನು ಬಳಸುತ್ತೇವೆ ಉಳಿದ ಬೇಸಾಯಗಳಿಗೆ ಬಳಸುವದಿಲ್ಲ ಅದಕ್ಕಾಗಿ ಊರಿನ ಎಲ್ಲ ಸದಸ್ಯರೂ ಸಹ ಸ್ವಯಂ-ನಿರ್ಧಾರ ತೆಗೆದುಕೊಂಡಿದ್ದಾರೆ,’ ಎನ್ನುತ್ತಾರೆ ಊರಿನ ಪ್ರಗತಿಪರ ಕೃಷಿಕರಾದ ಶ್ರೀ ಸತ್ಯನಾರಾಯಣ ಹೆಗಡೆಯವರು.

“ಈ ಯೋಜನೆಗೆ ಈಗಾಗಲೇ ೨೦ ವರ್ಷ ತುಂಬಿದೆ. ಮೊದಲು ನಿರ್ಮಿಸಿದ್ದ ಟ್ಯಾಂಕ್ ಶಿಥಿಲವಾಗಿ ನೀರು ಸೋರುವ ಹಂತ ತಲುಪಿದೆ.  ಹಾಗಾಗಿ, ಕಳೆದ ವರ್ಷ ಊರಿನವರೆಲ್ಲ ಸೇರಿ, ಶ್ರಮದಾನದ ಮುಖಾಂತರ ಪರಿಣಿತರ ಸಲಹೆಯಂತೆ,  ಅದನ್ನು ದುರಸ್ತಿ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಕಾಂಕ್ರೀಟ್ ಟ್ಯಾಂಕ್‌ನ್ನು ನಿರ್ಮಿಸುವ ಯೋಜನೆ ಇದೆ. ಉಳಿದಂತೆ ಬೇರೆಲ್ಲವೂ ಚೆನ್ನಾಗಿದೆ. ೩ ತಿಂಗಳಿಗೊಮ್ಮೆ ನಾವೇ ಕೆರೆಯನ್ನು ಮತ್ತು ಟ್ಯಾಂಕ್‌ನ್ನು ಸ್ವಚ್ಛಗೊಳಿಸುತ್ತೇವೆ”, ಎನ್ನುತ್ತಾರೆ ಅರಸಿಕೇರಿ ಊರಿನ ನಿವಾಸಿ ಶ್ರೀ ವಿಶ್ವನಾಥ ಹೆಗಡೆ.

೨೦ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಈ ಯೋಜನೆ ಹಲವರಿಗೆ ಮಾದರಿಯಾದರೆ ಮತ್ತೆ ಕೆಲವರಿಗೆ ಪ್ರೇರಣೆಯಾಗಿದೆ. ನಿಸರ್ಗಕ್ಕೆ ಧಕ್ಕೆಯಾಗದಂತೆ ಅದರ ಕೊಡುಗೆಯನ್ನು ಸದ್ವಿನಿಯೋಗ ಮಾಡಿಕೊಳ್ಳುತ್ತಿರುವ ಅರಸಿಕೇರಿ ಊರಿನವರ ಕಾರ್ಯ ನಾಳಿನ ನೀರ ನಿಶ್ಚಿಂತೆಗಾಗಿ ಎಲ್ಲರಿಗೂ ಅನುಕರಣೀಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ಚಿತ್ರ-ಲೇಖನ: ಗಣಪತಿ ಹೆಗಡೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*