ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ 2 : ನೂರಾರು ಕೆರೆಗಳ ದಾಖಲೆಯೂ ಮಂಗಮಾಯ!

ರಾಜಧಾನಿ ಬೆಂಗಳೂರು ಹವಾನಿಯಂತ್ರಿತ ನಗರದ ಹೆಗ್ಗಳಿಕೆಯನ್ನು ಈಗ ಉಳಿಸಿಕೊಂಡಿಲ್ಲ ಬಿಡಿ. ಏಕೆಂದರೆ ಈಗಿನ ಬಿಸಿಲಿನ ತಾಪವನ್ನು ಅನುಭವಿಸಿದರೆ ಎಸಿ ಸಿಟಿ ಎಂದು ಯಾವ ‘ಪುಣ್ಯಾತ್ಮ’ ಕರೆದನೋ ಎಂದು ಕಿರಿಕಿರಿಯಾಗುವುದಂತೂ ಸತ್ಯ. ಈ ಬಾರಿಯ ನಗರದ ಧಗೆ ಇದನ್ನು ಪುಷ್ಠೀಕರಿಸುತ್ತದೆ. ಇನ್ನೂ ಏಪ್ರಿಲ್ ತಿಂಗಳೇ ಬಂದಿಲ್ಲ, ಮಾರ್ಚ್ ಮಧ್ಯಭಾಗದಲ್ಲಿ ನಗರದ ಉಷ್ಣಾಂಶ ೩೮ ಡಿಗ್ರಿ!

ತುಂಬಾ ದೂರಕ್ಕೇನೂ ಹೋಗಬೇಕಾಗಿಲ್ಲ. ೧೯೯೦ರ ಆಸುಪಾಸನ್ನೇ ಗಮನಿಸೋಣ. ರಾಜ್ಯದ ಅಧಿಕೃತ ದಾಖಲೆ ‘ಗೆಜೆಟಿಯರ್-೧೯೯೦’ ಪ್ರಕಾರ ಬೆಂಗಳೂರಿನಲ್ಲಿ ೩೩ ಡಿಗ್ರಿಯೇ ಅತಿ ಹೆಚ್ಚು ಉಷ್ಣಾಂಶ.  ಅದೂ ಏಪ್ರಿಲ್ ಅಂತ್ಯದಲ್ಲಿ. ಇನ್ನು ೧೯೩೧ ಮೇ ೨೨ರಂದು ೩೮.೯ ಡಿಗ್ರಿ ಉಷ್ಣಾಂಶ ದಾಖಲಾಗಿದ್ದೇ ಅತ್ಯಂತ ಹೆಚ್ಚು. ಆದರೆ, ಈ ಬಾರಿ ಮಾರ್ಚ್‌ನಲ್ಲೇ ಈ ದಾಖಲೆಯನ್ನು ಮುರಿದಿದ್ದಾಗಿದೆ. ನಗರದ ವಾತಾವರಣ ಯಾವುದೇ ಮರುಭೂಮಿಗೂ ಕಮ್ಮಿ ಇಲ್ಲದಂತೆ ಕಾವು ಪಡೆದುಕೊಳ್ಳುತ್ತಿದೆ.

ಬೇಸಿಗೆ ಎಂದರೇ ಉಷ್ಣಾಂಶ, ಬೇಗೆ, ಧಗೆ, ಕಾವು ಇದೆಲ್ಲ ಸಹಜವೇ ಅಲ್ಲವೇ ಎಂದು ಕೊಂಕು ನುಡಿದರೆ, ಅವರಿಗೆ ಬೆಂಗಳೂರಿನ ವಾತಾವರಣದ ಅರಿವು ಇಲ್ಲ ಎಂಬುದು ಸಾಬೀತಾಗುತ್ತದೆ. ಹವಾನಿಯಂತ್ರಿತ ನಗರಿ ಎಂದು ಹೆಸರು ಬಂದಿದ್ದೇ ಬೇಸಿಗೆಯಲ್ಲೂ ಈ ನಗರ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತದೆ ಎಂದೇ. ಆದರೆ, ಇದಕ್ಕೆ ಪರಿಸರವಷ್ಟೇ ಮುಖ್ಯ. ಇದರಲ್ಲಿ ಜಲಮೂಲ ಹಾಗೂ ಮರಗಳದ್ದೇ ಅತಿಹೆಚ್ಚು ಪಾತ್ರ. ಕೆರೆಗಳ ಅವನತಿ ಹಾಗೂ ಮರಗಳಿಗೆ ಕೊಡಲಿ ಪೆಟ್ಟು ಹೆಚ್ಚಾಗುತ್ತಿದ್ದಂತೆಯೇ ನಗರದ ಕಾವು ವೃದ್ಧಿಯಾಗುತ್ತಲೇ ಇದೆ. ನೂರಾರು ಕೆರೆಗಳು ಮೈದಾನ, ಬಡಾವಣೆಯಾದರೆ, ಲಕ್ಷಾಂತರ ಮರಗಳು ಅಭಿವೃದ್ಧಿ ಹಾಗೂ ‘ತೊಡಕಿ’ನ ನೆಪದಲ್ಲಿ ನಾಶವಾದವು. ಅವುಗಳಿಗೆ ಪರ‍್ಯಾಯವಾಗಿ ಸಸಿಗಳು ‘ಹುಟ್ಟಿ’ಕೊಳ್ಳಲೇ ಇಲ್ಲ.

ಗೆಜೆಟಿಯರ್ ಬಗ್ಗೆ ಮಾತನಾಡುತ್ತಿದ್ದೆ. ೧೯೯೦ರಲ್ಲಿ ಪ್ರಕಟವಾಗಿರುವ ಬೆಂಗಳೂರು ಜಿಲ್ಲೆಯ ಗೆಜೆಟಿಯರ್‌ನಲ್ಲೇ ದಾಖಲಾಗಿರುವಂತೆ ನಗರದಲ್ಲಿ ೪೬೧ ಜೀವಂತ ಅಂದರೆ ಕುಡಿಯುವ ನೀರು ಹಾಗೂ kere nota 2ನೀರಾವರಿ ಒದಗಿಸುವ ಕೆರೆಗಳಿದ್ದವು. ನಿಮಗೆ ಈ ಅಂಕಿ-ಅಂಶ ಗೊತ್ತಿರಲಿ: ಬೆಂಗಳೂರು ಉತ್ತರ ತಾಲೂಕಿನಲ್ಲಿ ೯೮ ಕೆರೆಗಳಿದ್ದವು. ಅವುಗಳು ೨,೧೦೨ ಹೆಕ್ಟೇರ್ ಪ್ರದೇಶದ ನೀರಾವರಿಗೆ ಮೂಲವಾಗಿದ್ದವು. ೪೯೦ ಚದರ ಕಿಮೀ ಅಚ್ಚುಕಟ್ಟು ಪ್ರದೇಶ ಹೊಂದಿದ್ದ ಹೆಸರಘಟ್ಟವೂ ಈ ವ್ಯಾಪ್ತಿಗೆ ಸೇರಿತ್ತು. ಬ್ಯಾತ ಮತ್ತು ಕಾಕೋಲು ಕೆರೆಗಳು ಸುಮಾರು ೩೧ ದಶಲಕ್ಷ ಕ್ಯೂಬಿಕ್ ಮೀಟರ್ ಸಾಮರ್ಥ್ಯ ಹೊಂದಿದ್ದವು. ಈ ತಾಲೂಕಿನ ಒಟ್ಟಾರೆ ಮೇಲ್ಮೈ ನೀರಿನ ಸಾಮರ್ಥ್ಯವೇ ೨,೩೩೦ ಹೆಕ್ಟೇರ್‌ನಷ್ಟಿತ್ತು. ಇನ್ನು ದಕ್ಷಿಣ ತಾಲೂಕಿನಲ್ಲಿದ್ದ ೧೬೬ ಕೆರೆಗಳು ೪,೪೫೦ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತಿದ್ದವು. ಬೆಳ್ಳಂದೂರು ಕೆರೆ ೩.೫ ಚದರ ಕಿಮೀ ಮತ್ತು ವರ್ತೂರು ಕೆರೆ ೧.೮ ಚದರ ಕಿಮೀ ಅಚ್ಚುಕಟ್ಟು ಹೊಂದಿದ್ದವು. ಈ ತಾಲೂಕಿನ ಒಟ್ಟಾರೆ ಮೇಲ್ಮೈ ನೀರಿನ ಸಾಮರ್ಥ್ಯ ೫,೬೧೦ ಹೆಕ್ಟೇರ್. ಇದಾದ ಮೇಲೆ ಆನೇಕಲ್ ತಾಲೂಕಿನಲ್ಲಿದ್ದ ೧೯೭ ಕೆರೆಗಳು ೪,೫೦೦ ಹೆಕ್ಟೇರ್‌ಗೆ ನೀರು ಒದಗಿಸುತ್ತಿದ್ದವು. ಮೇಲ್ಮೈ ನೀರಿನ ಸಾಮರ್ಥ್ಯ ೪,೬೦೦ ಹೆಕ್ಟೇರ್. ಅಂದರೆ, ಒಟ್ಟು ೪೬೧ ಕೆರೆಗಳಿಂದ ೧೨,೫೪೧ ಹೆಕ್ಟೇರ್‌ಗೆ ಮೇಲ್ಮೈ ನೀರು ನಗರಕ್ಕೆ ಲಭ್ಯವಾಗುತ್ತಿತ್ತು. ಮೇಲ್ಮೈ ನೀರು ಎಂದರೆ ಬಳಸಲು ಯೋಗ್ಯವಾದಂತಹ ಅಥವಾ ಮಾನವ ಉಪಯೋಗಿಸುವಂತಹ ನೀರು. ಇದಕ್ಕೆಲ್ಲ ಸ್ಪಷ್ಟವಾಗಿ ಇಂದಿನ ಉದಾಹರಣೆ ನೀಡಬೇಕೆಂದರೆ, ಅಂದಿನ ಕಾಲ ಅಂದರೆ ೧೯೯೦ರಲ್ಲಿ ಬೆಂಗಳೂರಿನಲ್ಲಿ ಬೋರ್‌ವೆಲ್‌ನ ಗರಿಷ್ಠ ಆಳ ೩೦ ಮೀಟರ್. ಅಂದರೆ ೯೮ ಅಡಿ. ಊಹಿಸಿಕೊಳ್ಳಿ ಇಂದಿನ ಬೋರ್‌ವೆಲ್‌ಗಳ ಸ್ಥಿತಿ? ಅದಕ್ಕೇನು ಕಾರಣ ಎಂಬುದನ್ನು?

ನಗರ ಅಂದು ಚೆಂದ ಇತ್ತು ಬಿಡಿ. ಆ ಕಾಲದಲ್ಲಿ ನೀರಿನ ವೈಭವವೇ ಹಾಗೆ. ಕೆರೆಗಳು ಅಂದೇನು ವರ್ಷವಿಡೀ ತುಂಬಿತುಳುಕುತ್ತಿರಲಿಲ್ಲ ಬಿಡಿ. ಆದರೆ, ವರ್ಷದ ಮುಕ್ಕಾಲು ಅವಧಿ ನೀರಿನ ಸೆಲೆಯನ್ನೇ ಹೊಂದಿದ್ದವು. ಆದರೆ ಯಾವಾಗ ಅವುಗಳ ಒಳಹರಿವಿಗೇ ತಡೆಯಾಯಿತೋ, ಕಾಲಕ್ರಮೇಣ ಅವುಗಳು ‘ಒಣಪ್ರದೇಶ’ ಎಂಬ ಹಣೆಪಟ್ಟಿಯನ್ನು ಬಲವಂತವಾಗಿ ಕಟ್ಟಿಕೊಂಡವು. ಅವುಗಳ ದಾಖಲೆಯೂ ಕಂದಾಯ ಇಲಾಖೆ ಎಂಬ ಕಂದಾಯ ಇಲಾಖೆಯಲ್ಲೇ ಇಲ್ಲ! ನಂತರ ಅವುಗಳನ್ನು ನಿವೇಶನ, ಬಡಾವಣೆ, ಬಸ್ ನಿಲ್ದಾಣ, ಕ್ರೀಡಾಂಗಣ ಎಂದು ಸರ್ಕಾರವೇ ಪರಿವರ್ತಿಸಿದ್ದು ಮಾತ್ರ ಶೋಚನೀಯ ಹಾಗೂ ಅಮಾನವೀಯ. ಯಾವ ಕೆರೆಗಳು ಏನಾದವು, ಏನಾಗಿವೆ ಎಂಬುದನ್ನು ಮುಂದಿನ ‘ನೋಟ’ದಲ್ಲಿ ವಿವರ ನೀಡುತ್ತೇನೆ. ಆದರೆ ಕೆರೆಗಳ ನಾಶಕ್ಕೆ ಜನಪ್ರತಿನಿಧಿಗಳು, ನಮ್ಮ ಪರಿಸರವನ್ನು ರಕ್ಷಿಸಬೇಕಾದ ಸರ್ಕಾರವೇ ಮುಂದಾಗಿದ್ದು ಮಾತ್ರ ಅಕ್ಷಮ್ಯ.

ಅಂದಹಾಗೆ, ಈ ಕಾಸ್ಮೊಪಾಲಿಟನ್ ಸಿಟಿಯಲ್ಲಿ ಉಳಿದಿರುವ ಕೆರೆಗಳು ೧೮೩!

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*