ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಲತಕ್ಕನ ಕೈಯಲ್ಲಿ ಅರಳಿದ ಕೈ ತೋಟ

ಅಕ್ಷರ ಜ್ಞಾನ ಇಲ್ಲದಿದ್ದರೆ ಏನಂತೆ? ಕೃಷಿ ಜ್ಞಾನಕ್ಕೆ ಕೊರತೆ ಇಲ್ಲ ಎಂಬುವುದನ್ನು ಅತಿ ಕಡಿಮೆ ನೀರಿನಲ್ಲಿ ಕೈ ತೋಟ ಮಾಡುವುದರ ಮೂಲಕ ಸಾಬೀತು ಪಡಿಸಿದವರು. ಈ ಲತಕ್ಕ…

1ಲತಕ್ಕ ಗ್ರಾಮೀಣ ಮಹಿಳೆ, ಪತಿಯ ಹೆಸರು ನರಸಿಂಹಮೂರ್ತಿ, ಗಂಡ-ಹೆಂಡತಿ ಇರುವ ಚಿಕ್ಕ-ಚೊಕ್ಕ ಕುಟುಂಬ ಇವರದ.  ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಲತಕ್ಕ ಅರಳಿಸಿದ ಕೈ ತೋಟ ನಿಮಗೆ ನೋಡಲು ಸಿಗುತ್ತದೆ.

ಇವರಿಗೆ ಪ್ರಾರಂಭದಲ್ಲಿ ಕೈ ತೋಟದ ಬಗ್ಗೆ ಅಷ್ಟೊಂದು ಕಲ್ಪನೆ ಇರಲಿಲ್ಲ, ಇವರು ಸದಸ್ಯರಾಗಿದ್ದ ಮಹಿಳಾ ಸಶಕ್ತೀಕರಣ ಪರಿಯೋಜನೆಯಲ್ಲಿ ಕಡಿಮೆ ನೀರಿನಲ್ಲಿ, ಕಡಿಮೆ ಜಾಗದಲ್ಲಿ ಕೈ ತೋಟ ಮಾಡಿಕೊಳ್ಳಬಹುದಾದ ವಿಧಾನದ ಬಗ್ಗೆ ಸಂಬಂಧಿಸಿದ ವಿಡಿಯೋ ತೋರಿಸಿದರು. ಜೊತೆಗೆ, ರೈತ ಪಾಠ ಶಾಲೆಗಳಲ್ಲಿ ಭಾಗವಹಿಸಿ ಸುಸ್ಥಿರ ಕೈ ತೋಟ  ಮಾಡುವುದರ ಬಗ್ಗೆ ಸೂಕ್ತವಾದ ಮಾಹಿತಿಯನ್ನು ಸಂಗ್ರಹಿಸಿ, ಆ ಪ್ರೇರಣೆಯಿಂದ ಕೈ ತೋಟ ಮಾಡಲು ಆರಂಭಿಸಿದರು.

3ಇಂದು ಲತಕ್ಕ  ತಮ್ಮ ಮನೆಯ ಪಕ್ಕದಲ್ಲಿದ್ದ ಕೇವಲ ಎರಡು ಗುಂಟೆ ಖಾಲಿ ಜಾಗದಲ್ಲಿ ಕೈ ತೋಟ ಅರಳಿಸದ್ದಾರೆ. ಇದರಲ್ಲಿ ಮೆಣಸಿನಕಾಯಿ, ಟೊಮೊಟೊ, ಬದನೆಕಾಯಿ, ಕುಂಬಳ, ಹಾಗೂ ಸೊಪ್ಪುಗಳಾದ ಕೊತ್ತಂಬರಿ, ಮೂಲಂಗಿ, ಈ ರೀತಿಯ ವೈವಿಧ್ಯವಾದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ ಲತಕ್ಕ.

“ನಾನು ಕೈ ತೋಟ ಮಾಡುವುದಕ್ಕೂ ಮೊದಲು ಪ್ರತಿ ವಾರಕ್ಕೆ ರೂ.೧೦೦/- ತರಕಾರಿಗೆಂದೆ ವೆಚ್ಚ ಮಾಡುತ್ತಿದ್ದೆ. ಆದರೆ, ಈಗ ಈ ವಚ್ಚವನ್ನು ತಗ್ಗಿಸಿದ್ದು, ಪ್ರತಿ ತಿಂಗಳೂ ರೂ.೪೦೦/- ಉಳಿತಾಯ ಮಾಡುತ್ತಿದ್ದೇನೆ” ಎಂದು ತಮ್ಮ ಕೈತೋಟದ ಪರಿಣಾಮದ ಬಗ್ಗೆ ಹೇಳುತ್ತಾರೆ.

ಹೆಚ್ಚುವರಿಯಾಗಿ ಬೆಳೆದ ತರಕಾರಿಯನ್ನು ಅಕ್ಕ ಪಕ್ಕದ ಮನೆಯವರಿಗೂ ನೀಡಿ ಲತಕ್ಕ ತಾಜಾ ಕೈ ತೋಟದ ತರಕಾರಿ ರುಚಿ ತೋರಿಸಿದ್ದಾರೆ. ಕೆಲವು2 ತರಕಾರಿಗಳ ಬೀಜವನ್ನು ಇವರೇ ಸಂಗ್ರಹಿಸಿ ಇಡುತ್ತಿದ್ದಾರೆ. ಅಷ್ಟೇ ಅಲ್ಲದೆ, ಗುಲಾಬಿ, ಮಲ್ಲಿಗೆ, ಚೆಂಡು, ಚಿಂತಾಮಣಿ, ರುದ್ರಾಕ್ಷಿ, ದಾಸವಾಳ ಮುಂತಾದ ಹೂವುಗಳನ್ನು ಹಾಗೂ ಔಷಧಿ ಸಸ್ಯಗಳಾದ ಲೋಳೆಸರ, ಮಳೆಕಾಳಿನ ಸೊಪ್ಪು ಮುಂತಾದವನ್ನು ಬೆಳೆದಿದ್ದಾರೆ. ಉತ್ತಮ ಆದಾಯ ಬರುವ ನಾಲ್ಕು ಚಡೆ ಮರಗಳನ್ನೂ ಬೆಳೆಸಿದ್ದಾರೆ, ಈ ಮರದ ಸೊಪ್ಪು  ಮಾರಾಟ ಮಾಡುವುದರಿಂದ ಪ್ರತಿ ವರ್ಷಕ್ಕೆ ಒಂದು ಮರಕ್ಕೆ ರೂ.೫೦೦/-ರಂತೆ, ೪ ಮರಗಳಿಗೆ ರೂ.೨,೦೦೦/- ಆದಾಯ ಪಡೆಯುತ್ತಿದ್ದಾರೆ.

ಹಲವು ಗೃಹಿಣಿಯರು ಕೈತೋಟ ಮಾಡಿಕೊಳ್ಳಲು ನೀರಿನ ಸಮಸ್ಯೆ ಬಗ್ಗೆ ಹೇಳುತ್ತಾರೆ. ಆದರೆ ಲತಕ್ಕ ತಮ್ಮ ಮನೆಯಲ್ಲಿ ಬಟ್ಟೆ ತೊಳೆದ ನೀರನ್ನು, ಸ್ನಾನ ಮಾಡಿದ ನೀರನ್ನು ನೇರವಾಗಿ ಕೈ ತೊಟಕ್ಕೆ ಸೇರುವಂತೆ ವ್ಯವಸ್ಥೆ ಮಾಡಿದ್ದಾರೆ. ಬೇಸಿಗೆ ಕಾಲದಲ್ಲಿ ಹೆಚ್ಚು ನೀರಿನ ಸಮಸ್ಯೆ ಕಂಡು ಬರುವುದರಿಂದ, ಮನೆ ಪಕ್ಕದಲ್ಲಿರುವ ತೊಟ್ಟಿಯಲ್ಲಿ ನೀರನ್ನು ಸಂಗ್ರಹಿಸಿ ತೋಟಕ್ಕೆ ಪೂರೈಕೆ ಮಾಡುತ್ತಾರೆ. ಕೈ ತೋಟಕ್ಕೆ ಕೀಟ, ರೋಗಗಳ ಸಮಸ್ಯ ಕಂಡು ಬಂದರೆ, ಸಗಣಿ, ಹಸುವಿನ ಗಂಜಲ, ಬೂದಿ ಬಳಸುತ್ತಾರೆ.

ನಗರವಾಗಲಿ, ಹಳ್ಳಿಯಾಗಲಿ, ಮನೆ ಮುಂದೆ ತಾಜಾ ತರಕಾರಿ ಬೆಳೆಯುವುದು ಹಲವು ದೃಷ್ಟಿಯಿಂದ ಪ್ರಯೋಜನಕಾರಿ. ಅದು ಇಲ್ಲ, ಇದು ಇಲ್ಲ ಎಂಬ ಸಬೂಬುಗಳನ್ನು ಹೇಳದೆ ಕಾರ್ಯಪ್ರವೃತ್ತರಾಗುವುದು ಮುಖ್ಯ. ಅಂತವರಿಗೆ ಲತಕ್ಕ ಪ್ರೇರಣೆಯಾಗಲಿ.

 ಚಿತ್ರ-ಲೇಖನ: ಈರಣ್ಣ ಕುಣಿಗಲ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*