ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೧: ಸಾವಿರಾರು ಬಿಡಿ, ಒಂದೆರಡು ನೂರನ್ನಾದರೂ ಉಳಿಸೋಣ!

ಕೆರೆಗಳ ನಗರ…

ಅರೇ ಯಾವುದಿದು ಎಂಬ ಪ್ರಶ್ನೆ ಹಾಗೇ ಹರಿದುಹೋಗುತ್ತದೆ. ಇದಕ್ಕೆ ಸ್ವಲ್ಪ ಆಲೋಚಿಸಿದರೆ ಅಥವಾ ಕಾಲಘಟ್ಟದ ಹಿಂಪುಟಗಳನ್ನು ತೆರೆದುನೋಡಿದರೆ, ಉತ್ತರ ಸರ್ವಸಿದ್ಧ. ನಾವೇನು ಹೈಟೆಕ್ ಯುಗದಲ್ಲಿ ಸಿಲಿಕಾನ್ ಸಿಟಿ, ಕಾಸ್ಮೊಪಾಲಿಟನ್ ಸಿಟಿ, ಏರ್ ಕಂಡೀಷನ್ ಸಿಟಿ (ಈಗಲ್ಲ ಬಿಡಿ) ಎಂದೆಲ್ಲ ರಾಜಧಾನಿ ಬೆಂಗಳೂರನ್ನು ಹೊಗಳಿ ಕೊಂಡಾಡುತ್ತೇವೋ, ಇದೇ ನಗರವನ್ನು ಹಿಂದೆ ‘ಕೆರೆಗಳ ನಗರ’ ಎಂದೇ ಖ್ಯಾತಿ ಹೊಂದಿತ್ತು. ಬರೀ ಕೆರೆಗಳ ನಗರ ಅಲ್ಲ, ‘ಸಾವಿರ ಕೆರೆಗಳ ನಗರ’ ಎಂಬ ಹೆಗ್ಗಳಿಕೆಯೂ ಈ ನಗರದ್ದಾಗಿತ್ತು.

ಹೌದು, ಖಂಡಿತಾ ನಿಜ. ಇದು ಗತವೈಭವವೇ ಸರಿ. ವಿಜಯನಗರದ ಕೃಷ್ಣದೇವರಾಯನ ಕಾಲದ ಹಂಪಿಗೂ ಈಗಿನ ಹಾಳು-ಪಾಳು ಹಂಪಿಗೂ ಎಲ್ಲಿಂದೆಲ್ಲಿಯ
1 kere manju picಹೋಲಿಕೆ? ಬೆಂಗಳೂರಿಗೂ ಇಂತಹ ಹೋಲಿಕೆ ಮಾಡಬಹುದು. ನಗರ ನಿರ್ಮಾತೃ ಕೆಂಪೇಗೌಡರ ಕಾಲದ ‘ನೀರ ವೈಭವ’ಕ್ಕೂ, ಇಂದಿನ ಕಾಲದ ‘ಬೀರ ಉತ್ಸವ’ (ಬಿಯರ್ ಫೆಸ್ಟ್)ಗೂ ಅಜಗಜಾಂತರ. ಇಂದು ಕೆರೆಗಳು ಕೇವಲ ಹೆಸರಿಗಷ್ಟೇ ಉಳಿದಿವೆ. ಸಾವಿರ ಕೆರೆಗಳಿಂದ ಒಂದೆರಡು ನೂರು ಕೆರೆಗಳಿಗೆ ಬಂದುಳಿದಿರುವ ಜಗತ್ತಿನಲ್ಲಿ, ಅವುಗಳನ್ನು ಉಳಿಸಿಕೊಳ್ಳಲಾಗದ ದುಸ್ಥಿತಿ ನಮ್ಮದು.  ನಗರದ ಕೆರೆಗಳ ಸೃಷ್ಟಿಯ ಮೂಲೋದ್ದೇಶ ಹಾಗೂ ಅದರ ಸಂಸ್ಕೃತಿಯನ್ನು ಅರಿಯದ ಸಾಕಷ್ಟು ಮಂದಿ ಅದರ ‘ಬ್ಯೂಟಿಫಿಕೇಷನ್’ಗೆ ಮುಂದಾಗಿರುವುದಂತೂ ವಿಪರ್ಯಾಸವೇ ಸರಿ.

ಇಂದಿನ ವಾಸ್ತವದಲ್ಲಿ ಕೆರೆ ಅಲ್ಲಲ್ಲ ಲೇಕ್ ಎಂಬುದು ಬಿಕರಿ ವಸ್ತುವಾಗಿದೆ. ವ್ಯಾಪಾರದ ಬಂಡವಾಳಕ್ಕೆ ಉಪಯೋಗಿಸಿಕೊಳ್ಳುವ ಸಾಧನವಷ್ಟೇ. ಅದಕ್ಕೇ ‘ಲೇಕ್ ವ್ಯೂ’ ಅಪಾರ್ಟ್‌ಮೆಂಟ್‌ಗಳು ನಗರದಲ್ಲಿ ಸಾಕಷ್ಟಿವೆ. ಲೇಕ್ ಎಂಬುದನ್ನು ತಮ್ಮ ನಾಮಪಟ್ಟಿಯಲ್ಲಿ ಅಳವಡಿಸಿಕೊಂಡಿರುವುದು ಬಿಟ್ಟರೆ, ಇನ್ನೇನು ಇಂತಹವುಗಳಿಂದ ಆಗಿಲ್ಲ. ಬದಲಿಗೆ ಇವುಗಳಿಂದಲೇ ನಮ್ಮ ಕೆರೆಗಳ ಮಾಲಿನ್ಯ ಹೆಚ್ಚಾಗುತ್ತಲೇ ಇರುವುದು.

ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ೧೫೦೦ಕ್ಕೂ ಹೆಚ್ಚು ಕೆರೆಗಳಿದ್ದವು. ಕಾಲದಿಂದ ಕಾಲಕ್ಕೆ, ಅದರಲ್ಲೂ ರಿಯಲ್ ಎಸ್ಟೇಟ್ ಬೂಮ್ ಎಂಬುದು ಯಾವಾಗ ಜನರ ತಲೆಗೆ ಬಂತೋ, ಅಲ್ಲಿಂದ ಕೆರೆಗಳು ಕಾಣಸಿಗದಂತಾದವು. ಕಣ್ಣಮುಂದೆಯೇ ಕೆರೆಗಳು ನಾಶವಾಗಿದ್ದನ್ನು ಕಂಡವರು ಇಂದೂ ಈ ನಗರದಲ್ಲಿ ಸಾವಿರಾರು ಮಂದಿ ಇದ್ದಾರೆ. ಕೆರೆ ಎಂಬುದು ಸರ್ಕಾರಿ ಆಸ್ತಿ, ಸಾರ್ವಜನಿಕ ಸ್ವತ್ತು. ಇದನ್ನು ನಮ್ಮನಾಳುವ ಸರ್ಕಾರ ಅದ್ಯಾವ ರೀತಿ ಅರ್ಥೈಸಿಕೊಂಡಿತೋ ಕಾಣೆ. ಕೆರೆಗಳನ್ನು ಮುಚ್ಚಿ ಅಭಿವೃದ್ಧಿ ಮಾಡಲು ಮುಂದಾಯಿತು. ರಾಜಧಾನಿಯ ಹೃದಯಭಾಗದಲ್ಲೇ ಇಂತಹ ಕಾರ್ಯ ಆದ ಮೇಲೆ, ರಾಜ್ಯದ ಇತರೆ ಪ್ರದೇಶಗಳಲ್ಲಿ ಇದರ ಪ್ರಭಾವ ಕೇಳಬೇಕೇ? ರಾಜಧಾನಿಯನ್ನೇ ಉದಾಹರಣೆಯನ್ನಾಗಿಸಿಕೊಂಡು ಕೆರೆಗಳನ್ನು ಅಭಿವೃದ್ಧಿಯ ಹೆಸರಲ್ಲಿ ಸರ್ಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಭೂದಾಹಿಗಳು ನೂರಾರು ಇಲ್ಲ ಬಿಡಿ, ಸಾವಿರಾರು ಸಂಖ್ಯೆಯಲ್ಲಿ ಆಪೋಷಣ ತೆಗೆದುಕೊಂಡುಬಿಟ್ಟಿದ್ದಾರೆ. ಕೆರೆಗಳ ಸಂಖ್ಯೆ ಯಾವ್ಯಾವ ಕಾಲಘಟ್ಟದಲ್ಲಿ ಯಾವ ಪ್ರಮಾಣದಲ್ಲಿತ್ತು ಎಂಬುದನ್ನು ಮುಂದಿನ ‘ನೋಟ’ಗಳಲ್ಲಿ ತಿಳಿಯೋಣ. ಆದರೆ, ಇರುವ ಕೆರೆಗಳನ್ನು ನಾವು ಉಳಿಸಿಕೊಳ್ಳಲು ಮುಂದಾಗುವುದೇ ನಮ್ಮ ಮೇಲಿರುವ ತತ್‌ಕ್ಷಣದ ಜವಾಬ್ದಾರಿ. ಈ ಸದುದ್ದೇಶಕ್ಕೆ ಯಾರಿಂದಲಾದರೂ ಸಹಾಯ ಪಡೆದುಕೊಂಡರೂ ತಪ್ಪೇನಿಲ್ಲ.

ಕೆರೆಗಳನ್ನು ರಕ್ಷಿಸುವುದು ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯವೇನೋ ಸರಿ. ಆದರೆ ನಾಗರಿಕರಾಗಿ ನಮಗೂ ಕೆರೆಗಳನ್ನು ರಕ್ಷಿಸುವ, ಅದನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಅದರ ಉಪಯೋಗವಾಗಲು ಕಂಕಣಬದ್ಧರಾಗಬೇಕು. ಪರಿಸರಕ್ಕಾಗಿ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಮುಂದಿನ ಜನಾಂಗ, ಅಂದರೆ ನಮ್ಮ ಮಕ್ಕಳು, ಮರಿಮಕ್ಕಳು ಸ್ವಚ್ಛವಾಗಿ ಉಸಿರಾಡಲು ಹಾಗೂ ಕಲ್ಮಶವಿಲ್ಲದ ನೀರನ್ನು ಕುಡಿಯಲು ನೀಡಬೇಕಾದ್ದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ. ಅದಕ್ಕಾದರೂ ನಮ್ಮ ಸುತ್ತಮುತ್ತಲಿನ ಜಲಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು, ಸಂರಕ್ಷಿಸಲು ನಾವು ಪ್ರಯತ್ನಿಸಲೇಬೇಕಿದೆ. ಈ ನಿಟ್ಟಿನಲ್ಲಿ ಈಗಲಾದರೂ ನಾವು ಕಾರ್ಯೋನ್ಮುಖರಾಗೋಣ.

 ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*