ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಂತರ್ಜಲದ ವೃದ್ದಿಗೆ ಕೊಳವೆ ಬಾವಿ ಬಳಸಿ……ಮಗು ಉಳಿಸಿ

ಬೋರ್‌ವೆಲ್‌ನಲ್ಲಿ ನೀರು ಬರಲಿಲ್ಲ, ನೀರು  ಕಡಿಮೆಯಾಯಿತು, ಮಗು ಕೊಳವೆ ಬಾವಿಗೆ ಬಿತ್ತು, ದುರಂತ ನಡಯಿತು, ಇನ್ನು ಅನುಪಯುಕ್ತ ಎಂಬೆಲ್ಲಾ ಕಾರಣಕ್ಕೆ ಇದ್ದಬದ್ದ ಎಲ್ಲಾ ಕೊಳವೆ ಬಾವಿಗಳನ್ನೂ ಶಾಶ್ವತವಾಗಿ ಸಮಾಧಿ ಮಾಡುವುದೊಂದೇ ಅದಕ್ಕೆ ಪರಿಹಾರವಲ್ಲ. ಸರ್ಕಾರ, ರಾಜಕಾರಣಿಗಳು, ಮಾಧ್ಯಮಗಳು ಕಂಡಕಂಡ ಕೊಳವೆಬಾವಿ ಮುಚ್ಚಿಸಿ, ಅದೇ ಸಾಧನೆ ಎಂದು ಬೆನ್ನುತಟ್ಟಿಕೊಳ್ಳವುದು  ಸಾಮಾನ್ಯ. ಅದಕ್ಕಾಗಿ  ಲಕ್ಷಾಂತರ ವ್ಯಯಿಸಬಹುದು. ಸಂಘ-ಸಂಸ್ಥೆಗಳು  ಕಲ್ಲುಚಪ್ಪಡಿ ಹಾಕಿ, ಚಪ್ಪಾಳೆ ಗಿಟ್ಟಿಸಿ, ಪ್ರಚಾರ ತೆಗದುಕೊಳ್ಳಬಹುದು. ಆದರೆ, ಉಪಯುಕ್ತ-ಅನುಪಯುಕ್ತ ಕೊಳವೆ ಬಾವಿಗಳು ಸತತ ಸರಾಗವಾಗಿ ನೀರು ಕುಡಿಯುತ್ತದೆ, ಅದೇ ಪ್ರಮಾಣದ ನೀರು ಪುನ: ನೀಡುತ್ತದೆ  ಎಂಬುದನ್ನು ಮನವರಿಕೆ ಮಾಡಬೇಕಿದೆ.

2015-02-04 18.42.53ಕೊಳವೆ ಬಾವಿಗಳನ್ನು ಅಂತರ್ಜಲ ಮಟ್ಟ ಹೆಚ್ಚಿಸುವ ರೆಡಿಮೇಡ್  ಸಾಧನವಾಗಿ ಬಳಸಬಹುದು. ಅಂತರ್ಜಲ ಕುಸಿಯಲು ಕಾರಣವಾದದ್ದು ಕೊಳವೆ ಬಾವಿ ಎಂಬುದನ್ನ ಎಲ್ಲರೂ ಅರಿತಿದ್ದರೂ, ಅದೇ  ಕೊಳವೆ ಬಾವಿಗಳನ್ನು ಭೂಮಿಗೆ ನೀರು ತುಂಬಿಸುವ, ಸುಲಭ-ಸರಳ ಸಾಧನವಾಗಿ ಬಳಸಬಹುದೆಂದು ಅರಿವು ಮೂಡಿಸಬೇಕಾಗಿದೆ. ಮಾದ್ಯಮಗಳು ಮತ್ತು ಜನ ಕೂಗಿದ ತಕ್ಷಣ, ಸರ್ಕಾರ ಎಲ್ಲಾ ಕೊಳವೆ ಬಾವಿ ಮುಚ್ಚಿಸಬೇಕೆಂದು ನಿರ್ದೇಶನ ಕೊಟ್ಟರು. ನೀರು ಬತ್ತಿದ, ಬಾರದ ಕೊಳವೆ ಬಾವಿಯನ್ನು ಹೇಗೆ ಅಂತರ್ಜಲ ಹೆಚ್ಚಿಸುವ ಸಾಧನವಾಗಿಸಬಹುದು ಎಂಬುದನ್ನ, ಇಲ್ಲಿಯವರೆಗೆ ಜವಾಬ್ದಾರಿ ಸ್ಥಾನದಲ್ಲಿರುವವರು ಯಾರೂ ಸಹ ಕರೆಕೊಟ್ಟಿಲ್ಲ.

ಎಲ್ಲೋ ಹುಟ್ಟಿ, ಹರಿದು ಸಮುದ್ರ ಸೇರಿ, ವ್ಯರ್ಥವಾಗುವ ನೀರು, ಮಳೆನೀರು, ಕೆರೆ, ಬಾವಿ, ಮದಗಗಳಲ್ಲಿ ಪೋಲಾಗುವ ನೀರನ್ನು ನಮ್ಮದೇ ಹೊಲದಲ್ಲಿರುವ  ಕೊಳವೆ ಬಾವಿಗಳಿಗೆ ಮರುಪೂರಣ ಮಾಡಿದರೆ, ನೀರ ನಿಶ್ಚಿಂತೆಗೆ ದಾರಿಯಾದೀತು; ಜೊತೆಗೆ, ಜೀವಜಲದ ಸೆಲೆಗೆ ಮತ್ತೆ ಮರುಜೀವ ನೀಡಲು ಸಾಧ್ಯ. ಅಂತರ್ಜಲ ಹೆಚ್ಚಿಸಲು ಸರ್ಕಾರ ಎನೇನೋ ಯೋಜನೆ ಅನ್ನುತ್ತದೆ, ಆದರೆ ಇಷ್ಟು ಸುಲಭ, ಸರಳವಾದ ಕ್ರಮ ಇದ್ದರೂ ಯಾರೂ ಅನುಸರಿಸದೇ ಇರುವುದು ವಿಪರ್ಯಾಸ.

ಕಾರಣ ಮಾಹಿತಿ, ಅರಿವಿನ ಕೊರತೆ. ಈ ಕುರಿತು ತಿಳುವಳಿಕೆ, ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ.  ಎಲ್ಲಾ ಕೊಳವೆ ಬಾವಿಗಳನ್ನು ಇಂಗು2015-02-04 18.43.32 ಗುಂಡಿಗಳಾಗಿ ಬದಲಾಯಿಸಿದರೆ, ಸುರಕ್ಷಿತ ಕ್ರಮವನ್ನು ಅಳವಡಿಸಿಕೊಂಡರೆ, ಯಾವ ಮಗುವೂ ಕೊಳವೆ ಬಾವಿಗೆ ಬೀಳಲಾರದು. ಜೊತೆಗೆ, ಅತ್ಯಂತ  ಕಡಿಮೆ ಹಣದಲ್ಲಿ ಹೆಚ್ಚು ನೀರನ್ನು ಭೂಮಿಗೆ ಇಂಗಿಸಿ, ಅಂತರ್ಜಲ ಏರಿಕೆಗೆ ಕಾರಣಕರ್ತರಾಗಬಹುದು.  ಅನುಪಯುಕ್ತ ಕೊಳವೆ ಬಾವಿಯಿಂದ ಒಂದು ಜೀವವನ್ನು ಉಳಿಸುವುದರ ಜೊತೆಗೆ, ಪರಿಸರದ ನೀರಿನ ಬರಕ್ಕೆ ಕಡಿವಾಣ ಹಾಕಬಹುದು.

ವಿಷಯ ಚಿಕ್ಕದಾದರೂ, ವಿಚಾರಕ್ಕೆ, ಮಹತ್ವಕ್ಕೆ ಮನ್ನಣೆ ನೀಡಬೇಕಾಗಿದೆ. ಯಾವುದೇ ಕೊಳವೆ ಬಾವಿ ತೆರೆದಿದ್ದರೆ, ಕೂಡಲೇ ಸರ್ಕಾರಕ್ಕೆ ಮಾಹಿತಿ ನೀಡಿ, ಅದನ್ನು ಜಲ ಮರುಪೂರಣಕ್ಕೆ ಅವಕಾಶ ಮಾಡಿಕೊಡುವುದು, ಜೊತಗೆ ಹೊಸದಾಗಿ ತೋಡಿದ ಕೊಳವೆ ಬಾವಿಗಳಿಗೆ ಕಂಪನಿಯೇ  ನೀರು ಮರುಪೂರಣಕ್ಕೆ ವ್ಯವಸ್ಥೆ ಮಾಡುವಂತೆ ಕಡ್ಡಾಯ ಮಾಡಬೇಕು.

ಮಗು  ಕೊಳವೆ ಬಾವಿಗೆ ಬಿದ್ದ ತಕ್ಷಣದಿಂದ, ಮಗುವನ್ನು ಹೊರತೆಗೆಯುವವರೆಗೆ ನೀಡುವ ಮಾದ್ಯಮಗಳ ವರದಿಯಂತೆ, ಕೊಳವೆ ಬಾವಿ ನೀರು ಮರುಪೂರಣ ಮಾಡಿ, ಅದರಿಂದ ನೀರು ಹೊರಬರವವರೆಗಿನ ವರದಿಯನ್ನು ಸಮಗ್ರವಾಗಿ ಬಿತ್ತರಿಸಿದರೆ, ಮನೆ-ಮನಕ್ಕೂ ಅರಿವು ಮೂಡಿಸಲು ಸಾಧ್ಯ.

 

  • ಒಂದು ಮೂಲದ ಪ್ರಕಾರ, ರಾಜ್ಯದಲ್ಲಿ ೧.೭೫ ಲಕ್ಷ ಕೊಳವೆ ಬಾವಿಗಳಿದ್ದು, ಅದರಲ್ಲಿ ೪೯ ಸಾವಿರ ಕೊಳವೆ ಬಾವಿಗಳು ನೋಂದಣಿಯಾಗಿದೆ.
  • ೧.೪೫ ಲಕ್ಷ ಅನುಪಯುಕ್ತ ಕೊಳವೆ ಬಾವಿಗಳೆಂದು ಪರಿಗಣಿಸಿ, ಮುಚ್ಚಲು, ಆದೇಶಿಸಲಾಗಿದೆ.
  • ೯೯ ಸಾವಿರ ಕೊಳವೆಬಾವಿಗಳು ಖಾಸಗಿ ಒಡೆತನದಲ್ಲಿದೆ. ಅಂಕಿ-ಅಂಶ ಹೊರತುಪಡಿಸಿಯೂ, ಇನ್ನು ಹೆಚ್ಚಿನ ಕೊಳವೆ ಬಾವಿಗಳು ರಾಜ್ಯದಲ್ಲಿದೆ.

 

2015-02-04 18.42.21ನೀರು ನಿರ್ವಹಣೆಗಾಗಿಯೇ ಇರುವ ರಾಜ್ಯದ ದೊಡ್ಡ ನೀರಾವರಿ, ಕಿರು ನೀರಾವರಿ, ಜಲಾನಯನ ಇಲಾಖೆಗಳಿಗೆ, ಕೊಳವೆ ಬಾವಿ ಮರುಪೂರಣದ ಜವಾಬ್ದಾರಿ ವಹಿಸಿದರೆ, ಇಲಾಖೆಗಳ ಕಾರ್ಯಕ್ಕೆ ಮಹತ್ವ ಬರಬಹುದು. ಶ್ರೀಪಡ್ರೆಯಂತಹ ನಾಡಿನ ಅನುಭವೀ ಜಲಜನಕರೊಂದಿಗೆ, ಸರ್ಕಾರ, ಇಲಾಖೆಗಳು, ಮಾತಿಗೆ ಕುಳಿತು, ಸಂವಾದ, ವಿಮರ್ಶೆ ನಡೆಸಿದರೆ, ವಿಚಾರಕ್ಕೆ ಬಾಹುಬಲ ಬರಲು ಸಾಧ್ಯ.

 ಚಿತ್ರ-ಲೇಖನ: ಕೆ.ಶಶಿಧರ ಹೆಮ್ಮಣ್ಣ, ಉಡುಪಿ.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*