ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜೀವಜಲದ ಕಳಕಳಿಯ ಶಿಕ್ಷಕ: ನೀರು ಸಂಗ್ರಹದ ಬಗ್ಗೆ ತರಬೇತಿ ನೀಡುವ ತಿಪ್ಪಾಪೂರ ಶಾಲೆಯ ಆವರಣ

ಆ ಗ್ರಾಮ ಕೇವಲ ೩೫೦ ಜನಸಂಖ್ಯೆಯನ್ನು ಹೊಂದಿದೆ. ಆ ಗ್ರಾಮದಲ್ಲಿ ಒಂದು ಕಿರಿಯ ಪ್ರಾಥಮಿಕ ಶಾಲೆ ಕೂಡ ಇದೆ. ಅದರಲ್ಲಿ ೪೦ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಮೂರು ಜನ ಶಿಕ್ಷಕರನ್ನು ಹೊಂದಿದ ಆ ಶಾಲೆಯಲ್ಲಿ ವರ್ಷ ಪೂರ್ತಿ ಶಾಲಾ ಮಕ್ಕಳು ಮಳೆಯಿಂದ ಸಂಗ್ರಹಿಸಿದ ಮಳೆಕೊಯ್ಲಿನ ನೀರನ್ನು ಕುಡಿಯಲು ಬಳಸುತ್ತಿದ್ದಾರೆ. ಇದರಿಂದಾಗಿ ಆ ಗ್ರಾಮದ ಶಾಲೆ ಮಾದರಿ ಗ್ರಾಮವಾಗಿದೆ.

tippapur shale photo-6(s.k.rajur)ಹೌದು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಿಪ್ಪಾಪೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದ್ದು, ಮಳೆ ಸಂಗ್ರಹ ನೀರನ್ನು ಮಕ್ಕಳು ಕುಡಿಯಲು ಬಳಸುತ್ತಿದ್ದಾರೆ. ಈ ಮೂಲಕ ತಿಪ್ಪಾಪೂರ ಶಾಲೆಯ ಮಕ್ಕಳಿಗೆ ಆರೋಗ್ಯದ ಜೊತೆಗೆ ನೀರಿನ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಶಾಲೆಯ ಮುಖ್ಯ ಶಿಕ್ಷಕ ಶಿವಾನಂದ ಕನಕಪ್ಪ ರಾಜೂರ ಮಾದರಿಯಾಗಿದ್ದಾರೆ.

ಸರಕಾರ ಮಕ್ಕಳ ಶಿಕ್ಷಣದ ಜೊತೆಗೆ ಆರೋಗ್ಯ ವೃದ್ಧಿಗಾಗಿ ಏನೆಲ್ಲ ಯೋಜನೆಗಳನ್ನು ರೂಪಿಸುತ್ತಿದೆ. ಹಾಗಾಗಿ ಮುಖ್ಯವಾಗಿ ಶುದ್ಧ ನೀರು ಕೊಡುವ ಮೂಲಕ ಮಕ್ಕಳ ಆರೋಗ್ಯ ವೃದ್ಧಿಯ ಬಗ್ಗೆ ಚಿಂತಿಸಿದರೆ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ಸಹಕರಿಸಿದಂತಾಗುತ್ತದೆ ಎಂಬುದು ಜನರ ಅಭೀಪ್ರಾಯವಾಗಿದೆ.

ಶಾಲೆಯಲ್ಲಿದೆ ಮಳೆಕೊಯ್ಲು ಘಟಕ

tippapur shale photo-2ಗ್ರಾಮದ ಕುಡಿಯುವ ನೀರಿನಲ್ಲಿದ್ದ, ಅತೀ ಹೆಚ್ಚಿನ ಪ್ಲೋರೈಡ್ ಅಂಶದಿಂದಾಗಿ ಈ ಗ್ರಾಮಕ್ಕೆ ಸೇವೆ ಸಲ್ಲಿಸಲು ಯಾವ ಶಿಕ್ಷಕರೂ ಬರುತ್ತಿರಲಿಲ್ಲ. ಪ್ಲೋರೈಡ್ ಸಮಸ್ಯೆಯಿಂದಾಗಿ ಇಲ್ಲಿನ ಜನತೆ ತುಂಬ ಸಂಕಷ್ಟವನ್ನು ಅನುಭವಿಸಿದ್ದರು. ಹಾಗಾಗಿ ತಿಪ್ಪಾಪೂರ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆ ನೀರು ಸಂಗ್ರಹ ಘಟಕವನ್ನು ಶಿಕ್ಷಕ ರಾಜೂರ ಅವರ ಸರ್ಕಾರೇತರ ಸಂಸ್ಥೆಯೊಂದರ ಸಹಕಾರದೊಂದಿಗೆ ೪ ಲಕ್ಷಕ್ಕೂ ಅಧಿಕ ಲೀಟರ್ ಸಾಮಾರ್ಥ್ಯದ ಮಳೆಕೊಯ್ಲು ಘಟಕವನ್ನು ಸ್ಥಾಪಿಸಿದ್ದಾರೆ. ಈ ಮಳೆಕೊಯ್ಲು ಘಟಕದಲ್ಲಿ ಸಂಗ್ರಹವಾದ ನೀರು ಶಾಲೆಯಲ್ಲಿನ ೪೦ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ೧ ವರ್ಷದವರೆಗೂ ಕುಡಿಯಲು ಅನುಕೂಲವಾಗುತ್ತಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಸರಕಾರವೇ ಮಳೆಕೊಯ್ಲು ಘಟಕಗಳನ್ನು ಸ್ಥಾಪಿಸಿಕೊಟ್ಟಲ್ಲಿ, ನೀರನ್ನು ಮಿತವಾಗಿ ಬಳಸುವುದರ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದರ ಜೊತೆಗೆ, ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರನ್ನು ಕೊಡಬಹುದಾಗಿದೆ.

ಶಾಲಾ ಆವರಣದಲ್ಲಿ ಜಲಸ್ಥರ ಮರಪೂರ್ಣ ಘಟಕ

tippapur shale photo-3ಶಿಕ್ಷಕರ ರಾಜೂರ ಅವರು ೨೦೦೦ದಲ್ಲಿ ತಿಪ್ಪಾಪೂರ ಶಾಲೆಗೆ ಶಿಕ್ಷಕರಾಗಿ ನೇಮಕವಾದರು. ಆ ಸಂದರ್ಭದಲ್ಲಿ ಮುಳ್ಳುಕಂಟಿಯಿಂದ ಕೂಡಿದ ಶಾಲಾ ಆವರಣ, ಮಕ್ಕಳೇ ಇಲ್ಲದ ಶಾಲೆಯನ್ನು ನೋಡಿದ ಶಿಕ್ಷಕ ರಾಜೂರ ಅವರಿಗೆ ಇಲ್ಲೊಂದು ಶೈಕ್ಷಣಿಕ ಬದಲಾವಣೆಯನ್ನು ತರಬೇಕು ಎಂಬ ಛಲ ತೊಟ್ಟರು. ದನ-ಕುರಿ ಕಾಯಲು ಹೋದ ವಿದ್ಯಾರ್ಥಿಗಳನ್ನು ಹಟ್ಟಿಯಲ್ಲಿದ್ದ ಮಕ್ಕಳಿಗೆ ಹಾಗೂ ಪಾಲಕರಿಗೆ ಶಿಕ್ಷಣದ ಬಗ್ಗೆ ತಿಳುವಳಿಕೆ ಮೂಡಿಸಿ ಶಾಲೆಯತ್ತ ಕರೆತಂದರು. ಶಿಕ್ಷಕ ರಾಜೂರ ಹಾಗೂ ಗ್ರಾಮದ ಪಾಲಕರು, ವಿದ್ಯಾರ್ಥಿಗಳ ೮ ವರ್ಷದ ನಿರಂತರ ಪರಿಶ್ರಮದಿಂದಾಗಿ ಶಾಲಾ ಆವರಣದಲ್ಲಿ ಸ್ವಚ್ಛಂದ ಪರಿಸರ ನಿರ್ಮಾಣವಾಗುವುದರ ಜೊತೆಗೆ ನೀರಿನ ಬಳಕೆ ಕುರಿತು ಸಮಾಜಕ್ಕೆ ಜನಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವಂತಹ ತರಬೇತಿ ನೀಡುವ ತರಬೇತಿ ಕೇಂದ್ರದಂತೆ ನಿರ್ಮಾಣಮಾಡಿದ್ದಾರೆ.

ಮಳೆಯಿಂದಾಗಿ ಶಾಲೆಯಲ್ಲಿ ವ್ಯರ್ಥ ಹರಿದು ಹೋಗುತ್ತಿದ್ದ ನೀರನ್ನು ಬಳಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲೆ ಆವರಣದಲ್ಲಿ ಜಲಸ್ಥರ ಮರುಪೂರ್ಣ ಘಟಕವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಶಾಲಾ ಆವರಣದಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ಸಂಗ್ರಹಿಸಿ ಪಾತಾಳಕ್ಕಿಳಿದ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಿದ್ದಾರೆ.

ಮಳೆ ಮಾಪನ ಯಂತ್ರ ಅಳವಡಿಕೆ

tippapur shale photo-4 for noor ahmed articleನೀರಿನ ಬಗ್ಗೆ ಬಹಳಷ್ಟು ಕಾಳಜಿ ವಹಿಸುವ ಶಿಕ್ಷಕ ರಾಜೂರ ಅವರ ಜಲಸಂಪತ್ತಿನ ನಿಜವಾದ ಕಳಕಳಿ ಇರುವ ಶಿಕ್ಷಕ. ಹಾಗಾಗಿ ಶಾಲೆಯಲ್ಲಿ ಮಳೆಮಾಪನ ಯಂತ್ರವನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಶಾಲಾ ಆವರಣದಲ್ಲಿ ಎಷ್ಟು ನೀರು ಸಂಗ್ರಹಿಸಲಾಯಿತು ಎಂಬುದನ್ನು ಕೂಡ ತಿಳಿದುಕೊಳ್ಳುತ್ತಾರೆ. ಹನಿ ನೀರು ವ್ಯರ್ಥವಾಗದಂತೆ ನೀರಿನ ಸದ್ಬಳಕೆಯಾಗಬೇಕು ಎನ್ನುವ ಉದ್ದೇಶದಿಂದಾಗಿ ಮಳೆ ಮಾಪನ ಯಂತ್ರವನ್ನು ಶಾಲಾ ಆವರಣದಲ್ಲಿ ಅಳವಡಿಸಿದ್ದಾರೆ.

ಕಳೆದ ವರ್ಷ ೨೦೧೪ರಲ್ಲಿ ಒಟ್ಟು ವರ್ಷದ ೩೬೫ ದಿನಗಳಲ್ಲಿ ೪೩ ದಿನಗಳುಲ್ಲಿ ೯೧೯ ಮಿ.ಮೀ ಮಳೆಯಾಗಿದೆ. ಈ ಮಳೆಯಿಂದ ಈ ಶಾಲಾ ಆವರಣದಲ್ಲಿ ೭.೪೮ ಲಕ್ಷ ಲೀಟರ್ ನೀರು ಶಾಲಾ ಆವರಣದಲ್ಲಿ ಬಂದಿದೆ. ಈ ನೀರು ಹೊರೆಗೆ ಹೋಗಲು ಯಾವುದೇ ಅವಕಾಶ ಇಲ್ಲಿ ಇಲ್ಲ. ನೀರನ್ನು ಶಾಲಾ ಆವರಣದಲ್ಲಿರುವ ಮರಗಿಡಗಳಿಗೆ ಬಳಕೆಯಾಗಿ, ಉಳಿದ ನೀರು ಶಾಲೆಯ ಆವರಣದಲ್ಲಿ ನಿರ್ಮಿಸಿರುವ ವ್ಹಿ ವೈಯರ್ ಇಂಜಕ್ಸನ್ ವೆಲ್ ಮಾದರಿಯಲ್ಲಿಯ ಮರುಪೂರ್ಣಕ್ಕೆ ಬಳಕೆಯಾಗುತ್ತದೆ. ಶಾಲೆಯ ೮೧೪ ಚಮೀಟರ್ ವಿಸ್ತಿರ್ಣದಲ್ಲಿ ಬಿದ್ದ ಮಳೆಯ ನೀರು ೨+೧ರ ಹಂತದಲ್ಲಿ ಇಂಗಿ, ನಂತರ ೧೩೭ ಫೂಟ್ ಒಳಗೆ ಹೋಗಿ ಅಂತರ್ಜಲ ಸೇರುತ್ತದೆ. ಮತ್ತೆ ಶಾಲಾ ಆವರಣದ ಕೊಳವೆಬಾವಿಯ ಮೂಲಕ ಬಳಕೆಯಾಗುತ್ತದೆ.

tippapur shale photo-5ಇದರಿಂದ ಶಾಲಾ ಆವರಣದ ಕೊಳವೆಬಾವಿ ರೀಚಾರ್ಜ ಆಗುವುದರೊಂದಿಗೆ, ಶಾಲೆಯ ಸುತ್ತಲೂ ಇರುವ ಅನೇಕ ಕೊಳವೆಬಾವಿಗಳೂ ರೀಚಾರ್ಜ ಆಗಿರುವುದು ಶಾಲೆಯ ಹೆಗ್ಗಳಿಕೆಯಾಗಿದೆ. ಈ ಶಾಲೆಯ ಪ್ರಧಾನ ಗುರುಗಳಾದ ಎಸ್.ಕೆ.ರಾಜೂರ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಉಚಿತವಾಗಿ ಮಳೆಮಾಪನ ಪಡೆದುಕೊಂಡಿದ್ದಾರೆ. ಮಕ್ಕಳಿಗೆ ಮಳೆಯ ಪ್ರಮಾಣದ ದಾಖಲೆಯನ್ನು ಮಾಡುವ ಪದ್ದತಿಯನ್ನು ಕಲಿಸಿಕೊಟ್ಟಿದ್ದರಿಂದ ಮಕ್ಕಳೂ ಈ ಕಾರ್ಯವನ್ನು ಮಾಡುತ್ತಾರೆ.

ಪರಿಸರ ಸಂರಕ್ಷಣೆಯಲ್ಲಿ ಹೊಸ-ಹೊಸ ತಂತ್ರಜ್ಞಾನವನ್ನು ಬಳಿಕೆ ಮಾಡಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಈ ಶಾಲೆಯ ಪ್ರಧಾನ ಗುರುಗಳ ಮತ್ತು ಸಿಬ್ಬಂದಿಯ ಕಾರ್ಯ ಮೆಚ್ಚುವಂತಹದ್ದು ಮತ್ತು ಇತರ ಶಾಲೆಗಳಿಗೆ ಮಾದರಿಯಾಗಿದೆ. ಅಂತರ್ಜಲ ಹೆಚ್ಚಿಸುವ ಹಾಗೂ ಜಲ ಸಂರಕ್ಷಣೆಯ ಕುರಿತು ಸರಕಾರ ಇಂತಹ ಶಾಲೆಯಲ್ಲಿನ ಕಾರ್ಯ ಚಟುವಟಿಕೆಗಳನ್ನು ಗುರುತಿಸುವ ಮೂಲಕ ರಾಜ್ಯದ್ಯಂತ ಸರಕಾರ ಶಾಲೆಗಳಲ್ಲಿ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದಲ್ಲಿ ಜೀವಜಲವನ್ನು ಸಲ್ಪಪ್ರಮಾಣದಲ್ಲಾದರೂ ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ.

————————————————————————————————————–

ಜಲ ಸಂರಕ್ಷಣೆ ಎಲ್ಲರ ಹೊಣೆ
ಜೀವಕ್ಕೆ ಜೀವ ಒದಗಿಸುವ ನೀರು ಎಲ್ಲರಿಗೂ ಅತ್ಯವಶ್ಯಕವಾಗಿದೆ. ಇದನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಶಾಲೆಯ ಆವರಣದಲ್ಲಿ ಮಳೆಯಿಂದ ಬಿದ್ದ ನೀರಿನ ಒಂದು ಹನಿಯನ್ನೂ ನಾವು ಹಾಳುಮಾಡುವುದಿಲ್ಲ. ಮಳೆಯಿಂದ ಬಿದ್ದ ನೀರನ್ನು ಶಾಲಾ ತೋಟಕ್ಕೆ ಬಳಿಸಿ, ಉಳಿದಿರುವ ನೀರನ್ನು ಮರುಪೂರ್ಣಕ್ಕೆ ಉಪಯೋಗಿಸಲಾಗುತ್ತದೆ. ಶಾಲೆಯಲ್ಲಿನ ೪೦ ಮಳೆಕೊಯ್ಲಿನ ನೀರನ್ನೆ ಕುಡಿಯಲು ಬಳಸುತ್ತಿದ್ದು, ಶಾಲಾ ಮಕ್ಕಳು ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಎಸ್.ಕೆ.ರಾಜೂರ, ಪ್ರಧಾನ ಗುರುಗಳು-ತಿಪ್ಪಾಪೂರ

——————————————————————————————————–

ಪ್ಲೋರೈಡ್‌ನಲ್ಲಿ ಇಳಿಕೆ
ತಿಪ್ಪಾಪೂರ ಶಾಲಾ ಆವರಣದಲ್ಲಿ ಜಲಸ್ಥರ ಮರುಪೂರ್ಣ ಘಟಕ ಸ್ಥಾಪಿಸಿರುವ ಪರಿಣಾಮವಾಗಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಇದರಿಂದಾಗಿ ೨೦೧೦ರಲ್ಲಿ ೩.೩೪ ಪಿಪಿಎಮ್ ಫ಼್ಲೋರೈಡ್ ಅಂಶವಿದ್ದ ಕೊಳವೆಬಾವಿಯ ನೀರಿನಲ್ಲಿ ವರ್ಷದಿಂದ ವರ್ಷಕ್ಕೆ ಫ಼್ಲೋರೈಡ್ ಅಂಶ ಕಡಿಮೆಯಾಗಿದೆ. ೨೦೧೧ರಲ್ಲಿ ೩.೩೧ಪಿಪಿಎಮ್, ೨೦೧೨ರಲ್ಲಿ ೩.೦೮ಪಿಪಿಎಮ್, ೨೦೧೩ರಲ್ಲಿ ೨.೨೧ಪಿಪಿಎಮ್, ೨೦೧೪ರಲ್ಲಿ ೧.೯೧ಪಿಪಿಎಮ್ ಪ್ಲೋರೈಡ್ ಅಂಶ ಇಳಿಕೆಯಾಗಿದೆ.

———————————————————————————————————

ನೀರಿನ ಮಹತ್ವ ತಿಳಿಸಿದ ಶಿಕ್ಷಕ
tippapur shale photo-7(gudadappa lingashettar)ಶಿಕ್ಷಕ ರಾಜೂರ ಅವರ ಪರಿಸರ ಹಾಗೂ ಜಲ ಸಂರಕ್ಷಣೆ ಕಳಕಳಿಯಿಂದ ನಮಗೆ ನೀರಿನ ಮಹತ್ವ ಗೊತ್ತಾಗಿದೆ. ಅವರು ಶಾಲಾ ಆವರಣದಲ್ಲಿ ನಿರ್ಮಿಸಿದ ಮಳೆಕೊಯ್ಲಿನ ಘಟಕದಿಂದಾಗಿ ಜಾಗೃತರಾಗಿ ಗ್ರಾಮದಲ್ಲಿ ೧೨ಕ್ಕೂ ಅಧಿಕ ಘಟಕಗಳನ್ನು ಸ್ಥಾಪಿಸಿಕೊಂಡಿದ್ದೇವೆ. ನೀರನ್ನು ಮಿತವಾಗಿ ಬಳಸುವ ಮೂಲಕ ಅಂತರ್ಜಲ ಹೆಚ್ಚಿಸುವತ್ತ ಸರ್ವರು ಚಿತ್ತಹರಿಸಬೇಕು. ಸರಕಾರವು ಕೂಡ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಶಾಲಾ ಮಕ್ಕಳಿಗೆ ಮಳೆ ಸಂಗ್ರಹ ನೀರನ್ನು ಕುಡಿಯಲು ಒದಗಿಸುವ ನಿಟ್ಟಿನಲ್ಲಿ ಚಿಂತಿಸಬೇಕು.

ಗುಡದಪ್ಪ ಲಿಂಗಶೆಟ್ಟರ್- ತಿಪ್ಪಾಪೂರ ಗ್ರಾಮಸ್ಥ

ಚಿತ್ರ-ಲೇಖನ: ಎನ್. ಅಹಮದ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*