ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹಳಬ ಕೃಷಿಕ’; ಹೊಸಬ ‘ನೀರಿನ ದಲ್ಲಾಳಿ’!

ನಮ್ಮೂರು ಧಾರವಾಡದ ೫ ತಾಲ್ಲೂಕುಗಳ ಬಹುತೇಕ ಸ್ಥಿತಿವಂತ ರೈತರು ಈಗ ಕೃಷಿ ಕಡೆ ಹೆಚ್ಚು ಗಮನ ನೀಡುತ್ತಿಲ್ಲ! ಅಂದರೆ, ಕೃಷಿಕರಾಗಿ ಉಳಿದಿಲ್ಲ. ನಿಜಾರ್ಥದಲ್ಲಿ, ಅವರು ಹೆಚ್ಚು ಸಮಯ ನೀಡುತ್ತಿರುವುದು ತಮ್ಮ ಖಾಸಗಿ ಬೋರ್‌ವೆಲ್‌ನಿಂದ ನೀರೆತ್ತಿ ಹಗಲಿರುಳು ಮಾರಾಟ ಮಾಡುವುದಕ್ಕೆ!

ಕೆಲವೊಮ್ಮೆ ಗ್ರಾಮ ಪಂಚಾಯ್ತಿ ಒಡೆತನದ ಬೋರ್‌ವೆಲ್‌ಗಳಿಗೂ ಕೈ ಹಚ್ಚಿದ ಉದಾಹರಣೆಗಳಿವೆ. ಹಾಗಾಗಿ, ಹಳೆಯ ಕೃಷಿಕ ಈಗ ನವ ಅವತಾರದಲ್ಲಿ ‘ನೀರು ಮಾರಾಟ’ಗಾರ!

ಹೇಗೆ? ಕೃಷಿಗಾಗಿ ಮಾಡಿದ ಸಾಲ, ಕೃಷಿಗೇ ಬಳಸಿದರೂ ಅಸಲು ಹೋಗಲಿ, ಸಾಲದ ಬಡ್ಡಿಯನ್ನಾದರೂ ಕಟ್ಟುವಷ್ಟು ಆರ್ಥಿಕ ಚೈತನ್ಯ ನಮಗೆ ಹುಟ್ಟದಿದ್ದರೆ..? ಬದುಕಿಗೆ ಏನು ಆಸರೆ? ಬೇಸರದಿಂದ ಪ್ರಶ್ನಿಸುತ್ತಾರೆ, ಹಿಂದೊಮ್ಮೆ ಪ್ರಗತಿಪರ ಕೃಷಿಕ ಎನಿಸಿದ ಕುಂದಗೋಳದ ಹಿರೀಕರೋರ್ವರು. ಹಾಗಾಗಿ, ಬೋರ್‌ವೆಲ್ ಕೃಷಿಕನ ಉಪಜೀವನಕ್ಕೆ ಆಧಾರ. ಕೃಷಿ ನಷ್ಟ ಭರ್ತಿಗಾಗಿ ಉಪಕಸುಬು!

ಖಾಸಗಿ ಬೋರ್‌ವೆಲ್ –ಕಾಮಧೇನು!

WATER 3ಒಂದು ಬೋರ್‌ವೆಲ್, ಕನಿಷ್ಟ ಎರಡು ವಿದ್ಯುತ್/ ಒಂದು ಡೀಸೆಲ್ ಪಂಪ್‌ಸೆಟ್ ಹೊಂದಿರುವವ ಊರಿಗೇ ಸ್ಥಿತಿವಂತ ಎಂಬುವ ಪರಿಸ್ಥಿತಿ. ಅನುಕ್ರಮವಾಗಿ ಇಳಿಕೆ ಕ್ರಮದಲ್ಲಿ, ಧಾರವಾಡ (ಗ್ರಾಮೀಣ-ಶಹರ), ಹುಬ್ಬಳ್ಳಿ (ಗ್ರಾಮೀಣ-ಶಹರ), ಕಲಘಟಗಿ, ನವಲಗುಂದ ಹಾಗೂ ಕುಂದಗೋಳ ಭಾಗದಲ್ಲಿ ಈಗ ನಿರ್ಮಾಣವಾಗಿದೆ. ಮಲೆನಾಡಿನ ಸೆರಗಿನಲ್ಲಿರುವ ಧಾರವಾಡಕ್ಕೆ, ಈಗ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಸಕಾಲಿಕವಾಗಿಯೂ ಬೀಳದಿರುವುದರಿಂದ, ಬಹುತೇಕ ಕೃಷಿ ಮಳೆ ಆಧಾರಿತ. ಒಣ ಬೇಸಾಯವೂ ಇದೆ. ಹಾಗಾಗಿ, ಅರೆಬರೆ ನೀರಾವರಿ ಭೂಮಿಗೆ ಬೋರ್‌ವೆಲ್ ಮೂಲ. ಕೆರೆ-ಕಟ್ಟೆಗಳಂತೂ ಅತಿಕ್ರಮಣಕ್ಕೆ ಮೀಸಲಾಗಿ, ಒತ್ತಿಟ್ಟಿಗೆಗಳ ಗೂಡಾಗಿ ಪರಿಣಿಮಿಸಿದ್ದರಿಂದ, ಅಕಾಲಿಕ ಮಳೆಯಾದರೂ ಒಡಲು ತುಂಬದ ಸ್ಥಿತಿ.

ಅಳಿದುಳಿದ ಸಾರ್ವಜನಿಕ ಬಾವಿಗಳ ನೀರು ಪಾತಾಳ ಕಂಡಿದ್ದು, ಬೇಸಿಗೆಗೆ ಕುಡಿಯುವ ನೀರು ಪೂರೈಸಿದರೆ ಸಾಕು ಎಂಬ ಸ್ಥಿತಿ. ಈ ಹಂತದಲ್ಲಿ ಖಾಸಗಿಯವರ ಬೋರ್‌ವೆಲ್ ಕಾಮಧೇನು.

ಕೃಷಿಕರಿಗೆ ವಿದ್ಯುತ್ ಉಚಿತ!
ಕೃಷಿಕರಿಗೆ ವಿದ್ಯುತ್ ಉಚಿತ. ಮೇಲಾಗಿ, ಹಳ್ಳಿಗಾಡಿನಲ್ಲಿ ವಿದ್ಯುತ್ ‘ಸಿಂಗಲ್ ಫೇಸ್’ ಸಮಸ್ಯೆ. ‘ಡಬಲ್ ಫೇಸ್’ ಆಗುವ ಹೊತ್ತಿಗೆ ಕಾಯುವ ಸ್ಥಿತಿ ಇಲ್ಲ. ಹಾಗಾಗಿ, ೩ ರಿಂದ ೫ ಅಶ್ವ ಶಕ್ತಿಯ ಪಂಪ್ ಸೆಟ್‌ಗಳನ್ನು ಅವಶ್ಯಕತೆಗಿಂತ ಎರಡು-ಮೂರು ಪಟ್ಟು ಹೆಚ್ಚು ಉರಿಸಿ (ವಿದ್ಯುತ್/ಡೀಸೆಲ್) ನೀರೆತ್ತಿ, ಹರಿಸಬೇಕಾದ ಪರಿಸ್ಥಿತಿ. ಉಚಿತದ ಸದ್ಬಳಕೆ!

ವಿದ್ಯುತ್ ಪಂಪ್ ಸೆಟ್ ಹೊಂದಿದವರು ತುಸು ಕೈಗೆಟಕುವ ದರದಲ್ಲಿ ಬಾಡಿಗೆ ನಿಗದಿ ಪಡಿಸಿದ್ದರೆ (ತಾಸಿಗೆ ೫೦ ರೂ. ಯಿಂದ ೭೫ ರೂ. ವರೆಗೆ), ಕಾರಣ ವಿದ್ಯುತ್ ಉಚಿತ; ಡೀಸೆಲ್ ಪಂಪ್ ಸೆಟ್ ಹೊಂದಿದವರು, ‘ಅಡ್ವಾನ್ಸ್ ಬುಕ್ಕಿಂಗ್’, ಮತ್ತು ‘ಅಡ್ವಾನ್ಸಡ್ ಪೇಮೆಂಟ್’ – ‘ಸೀಸನಲ್ ಡಿಮಾಂಡ್’ ಹೀಗೆ ಬೇಡಿಕೆ ಸೃಷ್ಟಿಸಿರುವವರು (ತಾಸಿಗೆ ರೂ.೧೦೦ ರಿಂದ ೧೭೫ರ ವರೆಗೂ!). ವಿದ್ಯುತ್ತಿನಂತೆ ಡೀಸೆಲ್ ಉಚಿತವಾಗಿ ಲಭಿಸದು! ಅರ್ಥಾತ್, ಬರಗಾಲ ಇಲ್ಲಿ ಎಲ್ಲರಿಗೂ ಇಲ್ಲ! ಬರದಲ್ಲೂ ಸಾಹುಕಾರರಾದವರಿದ್ದಾರೆ!

ಇಲ್ಲಿ ಸಾಮ್ಯತೆಯ ಅಂಶಗಳೆಂದರೆ, ನೀರು ಮಾರಾಟಗಾರರೆಲ್ಲ ಒಳ್ಳೆಯ ಹಿಡುವಳಿ ಹೊಂದಿದವರು, ಸಾಕಷ್ಟು ಅಂತರ್ಜಲ ಮಟ್ಟ ಸದ್ಯಕ್ಕೆ ಜಮೀನಿನಲ್ಲಿ ಹೊಂದಿರುವವರು, ಸ್ಥಳೀಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದುಕೊಂಡು, ಅನುಕೂಲಕ್ಕೆ ತಕ್ಕಂತೆ ಕಾಯ್ದೆಗಳನ್ನು ಬಾಗಿಸಿಕೊಳ್ಳಬಲ್ಲ ಮುಂಗೈ ಜೋರು ಹೊಂದಿದವರು. ಹಾಗೆಯೇ, ಪಾಯಿಂಟ್ ಗುರುತಿಸುವುದು ಬೋರ್‌ವೆಲ್ ಕೊರೆಯಿಸುವುದು.. ಆಮೇಲೆ ಅಕ್ರಮ-ಸಕ್ರಮ ವ್ಯವಹಾರ ಬಲು ಜೋರು.

ತೊಟ್ಟು ಕುಡಿಯುವ ನೀರಿಗೂ..
WATER 1ಬಾಕಿ ಹಳ್ಳಿಗರು, ಮಕ್ಕಳು, ಮುದುಕರು, ಹೆಣ್ಣುಮಕ್ಕಳು ಎಂಬ ಬೇಧವಿಲ್ಲದೆ, ಹೆಗಲು, ಸೊಂಟ, ತಳ್ಳುವ ಗಾಡಿ, ಸೈಕಲ್, ಬೈಕ್, ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಕುಡಿಯುವ ನೀರಿಗಾಗಿ ಬಿಂದಿಗೆಗಳನ್ನಿಟ್ಟುಕೊಂಡು, ಫರ್ಲಾಂಗು ದೂರ ಕ್ರಮಿಸುತ್ತಾರೆ. ಈ ನಿತ್ಯದ ಸಾಮಾನ್ಯ ಚಿತ್ರಣದಲ್ಲಿ ಕೆಲ ಅಳಿದುಳಿದ ಕೆರೆಗಳಿಂದಲೂ ನೀರು ಸಂಗ್ರಹಿಸಿ ಹಂಚುವ ಪಡಿಪಾಟಲು ದೇವರಿಗೇ ಪ್ರೀತಿ.

ಕಾರಣ, ಭೂ ಮಾಲೀಕರೇ ನೀರಿನ ಹಾಗೂ ಟ್ಯಾಂಕರ್-ಟ್ರ್ಯಾಕ್ಟರ್‌ಗಳ ಒಡೆಯರು! ಇವರು, ಸಂದರ್ಭ ಲೆಕ್ಕಿಸಿ ನೀರನ್ನು ತಡೆಹಿಡಿದರೆ, ಇವರನ್ನು ನಂಬಿರುವವರ ಕೃಷಿ ಅರ್ಥಶಾಸ್ತ್ರದ ಲೆಕ್ಕಾಚಾರಗಳೆಲ್ಲ ತಲೆ ಕೆಳಗಾಗಿ, ಬೇಡಿದಷ್ಟು ಹಣ ನೀಡಿ ಪಡೆಯುವ ಧಾವಂತ ಸೃಷ್ಟಿಯಾಗುತ್ತದೆ. ಇದಕ್ಕಾಗಿ, ಸಾಲವನ್ನೂ ಮಾಡಿದವರಿದ್ದಾರೆ. ತೀರಿಸಲಾಗದೇ ಸಾಲದ ಬಲೆಗೆ ಸಿಲುಕಿ ನೀರು ಕುಡಿಸಿದ ಜಮೀನ್ದಾರರಿಗೇ ಮಾರಿಕೊಳ್ಳುವ ಒತ್ತಡಕ್ಕೆ ಸಿಲುಕಿದವರಿದ್ದಾರೆ. ಗುಳೆ ಹೋಗಿ ಶೇಡಜೀಗೆ, ಮಾರವಾಡಿಗಳಿಗೆ ಮತ್ತು ದೇಸಿ ಪತ್ತಾರರಿಗೆ ಜಮೀನು ಅಡವಿಟ್ಟುಕೊಂಡು, ಪಾಲಿನ ಕೃಷಿ ಮಾಡುತ್ತಿರವವರ ಸಂಖ್ಯೆಯೂ ದೊಡ್ಡದಿದೆ. ಹಲವರು ಈಗಾಗಲೇ ಅಸಲು-ಬಡ್ಡಿಗೆ ಇದ್ದ ಸಣ್ಣ ಜಮೀನು ಲೇವಾದೇವಿಗಾರರಿಗೆ ಕಳೆದುಕೊಂಡು, ಅಮರಗೋಳದ ಸರ್ಕಾರಿ ಉಗ್ರಾಣಕ್ಕೆ, ಎಪಿಎಂಸಿಗೆ ಕೂಲಿಗಳಾಗಿ ದುಡಿಯಲು ಬಂದಿದ್ದಾರೆ.

ನೀರಿನ ಖಾಸಗೀಕರಣದ ಭರಾಟೆ
WATER 2ನೀರಿನ ಖಾಸಗೀಕರಣದ ಭರಾಟೆ, ಅವರ ಮಧ್ಯದಲ್ಲಿಯೇ ಇರುವ ಶೋಷಕರನ್ನು ‘ನಜರ್ ಅಂದಾಜ್’ ಮಾಡುತ್ತದೆ. ಸಾಮೂಹಿಕವಾಗಿ ಇಡೀ ಹಳ್ಳಿಯ ಮಾಲೀಕತ್ವದ ಕೆರೆ-ತೊರೆ-ಹಳ್ಳಗಳ ಆಧರಿಸಿದ ಕೃಷಿಗೂ, ಬೋರ್‌ವೆಲ್ ಆಧರಿಸಿ, ಪಂಪ್‌ಸೆಟ್ ಬಾಡಿಗೆ ಹಿಡಿದು ಮಾಡುವ ಕೃಷಿಗೂ ಅಜಗಜಾಂತರ ವ್ಯತ್ಯಾಸ ಕಾಣುತ್ತಿದ್ದು, ಒಂದು ಕೊಡ ಕುಡಿಯುವ ನೀರಿಗೆ ಕನಿಷ್ಟ ೫೦ ಪೈಸೆ ಈ ‘ನೀರ ಧಣಿಗಳು’ ಪಡೆದರೂ, (ಅಲ್ಲಲ್ಲಿ ರಾಜ್ಯ ಸರ್ಕಾರ ಆರಂಭಿಸಿದ ಶುದ್ಧ ಜಲ ವಿತರಣೆ ಕೇಂದ್ರಗಳಲ್ಲಿ ೧ ರೂ.ಗೆ ೫ ಲೀಟರ್ ನೀರು ಲಭ್ಯ) ಒಂದು ದಿನಕ್ಕೆ ಕನಿಷ್ಟ ೫೦೦ ಕೊಡ, ೩೦ ದಿನಗಳಿಗೆ (೭,೫೦೦ ರೂ.), ಒಟ್ಟು ೩೬೫ ದಿನಗಳಿಗೆ? (೨೭,೩೭,೫೦೦ ರೂ.) ಲಕ್ಷ ಗಟ್ಟಲೆ ಲೆಕ್ಕಾಚಾರ, ವ್ಯವಹಾರ ಇಲ್ಲಿದೆ.

ನೀರ ನೆಮ್ಮದಿಗೆ ದಾರಿ ಇದೆ..
ಪರಿಸರವಾದಿ ಪ್ರೊ.ಗಂಗಾಧರ ಕಲ್ಲೂರ ಹೇಳುವಂತೆ, “ಜಲ ಮೂಲಗಳ ಮೇಲೆ ಸಾಮುದಾಯಿಕ ಮಾಲೀಕತ್ವ ಒಂದೇ ದಾರಿ. ಸಮೂಹಗಳೇ ಜಲ ಮೂಲಗಳ ರಕ್ಷಣೆಗೆ ಮುಂದಾಗುವ ಪರಿಸರ ಪಾಠ ಸದ್ಯದ ತುರ್ತು. ತೆರೆದ ಬಾವಿಯ ನೀರು ಮಾತ್ರ ಸುರಕ್ಷಿತವೇ ಹೊರತು, ಬೋರ್‌ವೆಲ್ ನೀರಲ್ಲ. ಹಾಗಾಗಿ, ತೀರ ಆಳಕ್ಕೆ ಕೊರೆದ ಕೊಳವೆ ಬಾವಿಯ ನೀರು ಕೃಷಿಗೆ ಬಳಸುವುದೂ ಅಪಾಯಕಾರಿ. ಹೆಚ್ಚಿನಾಂಶ ಫ್ಲೋರೈಡ್, ಆರ್ಸೆನಿಕ್ ಮತ್ತು ಲವಣ ಮಿಶ್ರಿತ ನೀರು (ಪರ್ಮಿಸಿಬಲ್ ಲಿಮಿಟ್ ಪರ್ ಲೀಟರ್) ಇದ್ದಲ್ಲಿ, ದೂರಗಾಮಿ ಅಡ್ಡ ಪರಿಣಾಮ ಖಾತ್ರಿ. ಸ್ಥಳೀಯ ಗ್ರಾಮ ಪಂಚಾಯ್ತಿಗಳು, ಕನಿಷ್ಟ ಓರ್ವ ಗ್ರಾಮಸ್ಥನಿಗೆ ದಿನವೊಂದಕ್ಕೆ ೬ ಲೀಟರ್ ಶುದ್ಧ ಕುಡಿಯುವ ನೀರು ಒದಗಿಸುವ ನಿಶ್ಚಯ ಮಾಡಬೇಕು. ಖಾಸಗಿ ಬೋರ್‌ವೆಲ್ ಕೊರೆತಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಬೇಕು. ಕೃಷಿಗೂ ತುಂತುರು, ಹನಿ ಮೊದಲಾದ ವಿಶೇಷ ನೀರಾವರಿ ಸದ್ಬಳಕೆ ಯೋಜನೆ ಬಳಸಿ, ಲಭ್ಯ ಜಲ ಮೂಲವನ್ನು ‘ಜ್ಯುಡಿಷಿಯಸ್’ ಆಗಿ ಬಳಸಿಕೊಳ್ಳಲು ಸಮುದಾಯ ಸಂಘಟಕರನ್ನೇ ಜಲ ಸಾಕ್ಷರರನ್ನಾಗಿ ರೂಪಿಸಬೇಕು.”

“ಮನಿಗೆ ಹಂಡೆ ಹೆಂಗ ಆಸರೋ.. ಊರಿಗೆ ಊರ ಮುಂದಿನ ಕೆರಿ..” ಅಂತ ಹಿರೀಕರು ಹೇಳ್ತಿದ್ದ ಮಾತಿನಲ್ಲಿಯೇ ‘ಅರ್ಥ’ವಿದೆ.

ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*