ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜಕ್ಕೂರು ಕೆರೆಯ ಯಶೋಗಾಥೆ: ಆಗುವುದೇ ನಗರದ ಮಿಕ್ಕ ಕೆರೆಗಳಿಗೂ ಸ್ಪೂರ್ತಿಯ ಕಥೆ……..

ನಗರದ ಪ್ರತಿಷ್ಟಿತ ಬಡಾವಣೆ ಎಚ್.ಎಸ್.ಆರ್. ಲೇಔಟ್, ಅದಕ್ಕೆ ಅಂಟಿ ಕೊಂಡೇ ಇರುವಂತಹ ಮತ್ತೊಂದು ಪಾರ್ಶ್ವ ಎನಿಸಿಕೊಂಡಿರುವುದು ಕೋರಮಂಗಲ. ಇವೆರಡರ ಮಧ್ಯೆ ಇರುವುದು ಅಗರ ಲೇಕ್ ಅರ್ಥಾತ್ ಅಗರ ಕೆರೆ. ಅಗರ ಕೆರೆ ಬಂದಿತೆನ್ನುವುದಕ್ಕೆ ಸಂಕೇತ ಮೂಗಿಗೆ ಹೊಡೆಯುವ ದುರ್ನಾತ. ಅಲ್ಲಿಂದ ಹಾದುಹೋಗುವಾಗ ಪ್ರತಿಸಲವೂ ನನಗನ್ನಿಸುವುದು, ಇದೇಕೆ ಹೀಗೆ? ಇದಕ್ಕೆ ಪರಿಹಾರವಿಲ್ಲವೇ? ನಮ್ಮ ಬೆಂಗಳೂರು ಇಡೀ ವಿಶ್ವದಲ್ಲೇ ಹೆಸರು ಮಾಡಿದೆ, ಆದರೂ ನಮ್ಮ ಕೆರೆಗಳನ್ನು ನಾವು ಕಾಪಾಡುತ್ತಿಲ್ಲವೇಕೆ? ಇಷ್ಟೊಂದು ದುಃಸ್ಥಿತಿಗೆ ಬರಲು ಕಾರಣವಾದರೂ ಏನು? ಎನ್ನುವ ಹಲವಾರು ಪ್ರಶ್ನೆಗಳು.

ಬೆಂಗಳೂರಿನ ಇದೊಂದೇ ಕೆರೆ ಹೀಗಾ? ಅಥವಾ ಇರುವ ಬಹಳಷ್ಟು ಕೆರೆಗಳ ಸ್ಥಿತಿಯೂ ಇದೇನಾ? ಸ್ವಲ್ಪ ದಿನಗಳ ಹಿಂದೆ ಮತ್ತೊಂದು ಕೆರೆಯಲ್ಲಿ ಮಿತಿ ಮೀರಿದ ನೊರೆ ಒಳಗಿರಲಾರದೆ ಹೊರಗೆ ಬಂದು ರಸ್ತೆಯನ್ನಾವರಿಸಿತ್ತು. ಒಂದಷ್ಟು ದಿನ ಮಾಧ್ಯಮಗಳಲ್ಲಿ ಅದರದೇ ಮಾತು. ನಂತರ ಎಲ್ಲವೂ ತಣ್ಣಗಾಯಿತು.

12110001_947984758595803_8982308796101978522_oಈ ರೀತಿ ಪ್ರತಿಯೊಂದು ಕೆರೆಯದೂ ಒಂದೊಂದು ಕರುಣಾಜನಕ ಕಥೆಯೇ. ಈ ಕೆರೆಗಳ ಪುನರುಜ್ಜೀವನ ಹೇಗೆ? ಯಾರು ಹೊಣೆ? ಯಾರ ಜವಾಬ್ದಾರಿ? ಆಗ ವಿಶ್ವ ಬ್ಯಾಂಕಿನ ಸಹಕಾರ ಪಡೆದು ಜಲ ಸಂವರ್ಧನಾ ಇಲಾಖೆಯ ಮೂಲಕ ಕರ್ನಾಟಕದ ಒಂದಷ್ಟು ಕೆರೆಗಳ ಜೀರ್ಣೋದ್ಧಾರವಾಯಿತು. ಕೆರೆಗಳಿಗೆ ಪುನರುಜ್ಜೀವನ ನೀಡಿ, ನಂತರ ಸರ್ಕಾರ ಆ ಕೆರೆಗಳ ನಿರ್ವಹಣಾ ಜವಾಬ್ದಾರಿಯನ್ನು ಸ್ಥಳೀಯರಿಗೆ ನೀಡಿತು; ಯಾರಿಗೂ ಅದರ ಬಗ್ಗೆ ಗಮನವಿಲ್ಲ, ನಿರ್ವಹಣೆಗೆ ಹಣವಿಲ್ಲ – ಹೀಗಾಗಿ ಮತ್ತದೇ ಕಥೆಯ ಪುನರಾವರ್ತನೆ.

ಹಾಗಾದರೆ ಈ ಸಮಸ್ಯೆಯ ಪರಿಹಾರ ಹೇಗೆ ಎನ್ನುವ ಪ್ರಶ್ನೆಗೆ, ಅಲ್ಲಲ್ಲಿ ಬೆರಳೆಣಿಕೆಯಷ್ಟು ಉದಾಹರಣೆ ಸಿಗಬಹುದು. ಅದರಲ್ಲಿ ಜಕ್ಕೂರಿನ ಕೆರೆಯ ಕಥೆಯೂ ಒಂದು.

jk -3ಜಕ್ಕೂರು ಕೆರೆ ನಗರದ ಈಶಾನ್ಯ ಭಾಗದಲ್ಲಿದೆ ಮತ್ತು ೧೦ ಎಕರೆಯಷ್ಟು ವಿಸ್ತೀರ್ಣವನ್ನು ಹೊಂದಿದೆ. ಮೇಲಿನಿಂದ ಯಲಹಂಕ ಕೆರೆ ಮತ್ತು ಕೆಳಗಿನಿಂದ ರಾಚೇನಹಳ್ಳಿಯ ಕೆರೆಗಳು ಇಲ್ಲಿಯೇ ಬಂದು ಸೇರುತ್ತವೆ. ಸ್ವಲ್ಪ ವರ್ಷಗಳ ಹಿಂದೆ ಬಿ.ಡಿ.ಎ. ಇಲಾಖೆಯವರು ಕೆರೆಯ ಸುತ್ತ ಬೇಲಿ ಹಾಕಿಸಿ ಅಭಿವೃದ್ಧಿ ಕಾರ್ಯವನ್ನು ಕೈಗೊಂಡರು. ನಂತರ ಬಿ.ಬಿ.ಎಮ್.ಪಿ. ಅವರಿಂದ ತ್ಯಾಜ್ಯ ನೀರಿನ ಚಿಕಿತ್ಸಕ ಘಟಕ ಪ್ರಾರಂಭವಾಯಿತು. ೧೨,೫೦೦ ಮನೆಗಳಿಂದ ತ್ಯಾಜ್ಯ ನೀರು ಈ ಚಿಕಿತ್ಸಕ ಘಟಕವನ್ನು ತಲುಪುತ್ತದೆ. ಅಲ್ಲಿಂದ ಪ್ರಸ್ತುತ ೮ ಮಿಲಿಯನ್ ಲೀಟರ್ ನೀರನ್ನು ಮಾನವ ನಿರ್ಮಿತ ವೆಟ್ ಲ್ಯಾಂಡ್, ಅರ್ಥಾತ್ ಕೃಷಿ ಭೂಮಿಗೆ ಹಾಯಿಸಲಾಗುತ್ತದೆ. ಆಗ ನೀರು ನೈಸರ್ಗಿಕವಾಗಿ ಮತ್ತೂ ಶುದ್ಧವಾದ ನಂತರ ಕೆರೆಯನ್ನು ತಲುಪುತ್ತದೆ, ಆದ್ದರಿಂದ ಪ್ರತಿ ದಿನ ಈ ರೀತಿ ಶುದ್ಧೀಕರಣಗೊಂಡ ೮ ಮಿಲಿಯನ್ ಲೀಟರ್ ನೀರು ಕೆರೆಯನ್ನು ತಲುಪುತ್ತದೆ. ಪರಿಣಾಮ, ಸುತ್ತಮುತ್ತಲಿನ ಅಂತರ್ಜಲ ವೃದ್ಧಿ ಆಗಿದೆ ಮತ್ತು ಅಲ್ಲಿರುವ ಬಾವಿ ಮತ್ತು ಕೊಳವೆ ಬಾವಿಗಳಲ್ಲಿನ ನೀರಿನ ಒಳಹರಿವು ಹೆಚ್ಚಾಗಿ, ಅಲ್ಲಿ ಹತ್ತಿರವಿರುವ ಕಲ್ಯಾಣಿಗಳೂ ತುಂಬಿಕೊಳ್ಳಲು ಸಾಧ್ಯವಾಗಿವೆ. ಇಂತಹ ಅದ್ಭುತ12015169_939752939418985_1020932460709144058_o ಪ್ರಕ್ರಿಯೆಯಿಂದ ಸುತ್ತಮುತ್ತಲಿರುವವರಿಗೆಲ್ಲಾ ಬಾವಿಗಳು ತುಂಬಿ, ಕುಡಿಯಲು ಯೋಗ್ಯವಾದ ನೀರು ದೊರಕುವಂತಾಗಲು ಸಾಧ್ಯವಾಯಿತು. ನಿಜಕ್ಕೂ ಇದು ಜಕ್ಕೂರಿನ ಕೆರೆಯ ವಿಶೇಷತೆಯೆನ್ನಬಹುದು. ನಿಜಕ್ಕೂ ಇದು ಅನುಕರಣೀಯ. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎನ್ನುವಂತೆ, ಕಡಿಮೆ ಸಮಯದಲ್ಲಿ ನೀರಿನ ಶುದ್ಧತೆ ಹಾಳಾಗಿದ್ದು ಇನ್ನೂ ಆ ನೀರು ಕುಡಿಯಲು ಯೋಗ್ಯವೆನಿಸಿಲ್ಲ. ಆದರೂ ಪಕ್ಷಿಗಳಿಗೆ ನೆಲೆಯಾಗಿದ್ದು, ಮೀನುಗಾರಿಕೆ ಸಾಧ್ಯವಾಗಿದೆ. ಸುತ್ತಮುತ್ತಲಿನ ನೀರಿನ ತಾಣಗಳಲ್ಲಿ ನೀರು ತುಂಬಿಕೊಳ್ಳಲು ಅನುವು ಮಾಡಿದೆ. ಒಂದೆರಡು ವರ್ಷಗಳ ಹಿಂದೆ, ಜಕ್ಕೂರಿನ ಕೆರೆ ಎಲ್ಲ ಕಸಗಳ ಆವಾಸ ಸ್ಥಾನವಾಗಿತ್ತು. ಆದರೆ, ಜನಶಕ್ತಿಯ ಮುಂದೆ ಯಾವುದೂ ದೊಡ್ಡದಲ್ಲ.  ಜನರ ಮನೋಬಲದ ಪರಿಣಾಮ ಈಗ ಜಕ್ಕೂರು ಕೆರೆ ನಳನಳಿಸುತ್ತಿದೆ.

jk-10ಈಗ ಎರಡು ವರ್ಷಗಳಿಂದ, ಅಂದರೆ ಅಕ್ಟೋಬರ್ ೨೦೧೪ರಿಂದ ಸತ್ಯ ಫ಼ೌಂಡೇಷನ್‌ನ ಮೂಲಕ ಪ್ರಾರಂಭವಾದ ಜಲ ಪೋಷಣ್ ಯೋಜನೆ ಎರಡು ವರ್ಷಗಳಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಿದೆ. ಜನರಿಂದ ಜನರೇ ನಡೆಸುವ ಈ ಯೋಜನೆ ನಿಜವಾದ ಅರ್ಥದಲ್ಲಿ ನೀರಿನ ಪವಿತ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿ ಭಾನುವಾರ ಮುಂಜಾನೆ ಏಳಕ್ಕೆ ಒಟ್ಟಿಗೆ ಸೇರುವ ಗುಂಪು, ಒಂದಲ್ಲ ಒಂದು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. “ಪ್ರತಿಯೊಬ್ಬರಿಗೂ ಏನಾದರೂ ಮಾಡುವ ಆಸೆ, ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುವ ಬಯಕೆ ಆದರೆ ಯಾರ ಮುಂದೆಯೂ ದಾರಿ ಸ್ಪಷ್ಟವಾಗಿರುವುದಿಲ್ಲ. ಇಂತಹ ಒಂದು ಗುಂಪಿಗೆ ತಮ್ಮನ್ನು ತಾವು ಒಳಪಡಿಸಿಕೊಂಡಾಗ ಮಾಡಬಹುದಾದ ಕಾರ್ಯದ ದಾರಿ ನಿಚ್ಚಳವಾಗುತ್ತದೆ”’, ಎನ್ನುತ್ತಾರೆ ಈ ಸಂಸ್ಥೆಯ ಸದಸ್ಯೆ ಅನೂರಾಧಾ ಕಾಮತ್ ಅವರು.

12052620_939752532752359_4121145119297496361_oಆ ಕೆರೆಯ ಆವರಣವನ್ನು ಪ್ಲಾಸ್ಟಿಕ್ ರಹಿತವನ್ನಾಗಿ ಮಾಡಲಾಗಿದೆ. ನಮ್ಮಲ್ಲಿ ಎಲ್ಲಿ ಸ್ಥಳವಿದ್ದರೂ ಅಲ್ಲಿ ಕಸವನ್ನು ಸೇರಿಸುವ ಪದ್ಧತಿ – ಆದರೆ ಆ ರೀತಿ ಕಸ ಹಾಕುವುದನ್ನು ನಿಯಂತ್ರಿಸಲಾಗಿದೆ. ಸಾಕಷ್ಟು ಸಸಿಗಳನ್ನು ನೆಟ್ಟು ವನ ಮಹೋತ್ಸವವನ್ನು ನಡೆಸಲಾಗಿದೆ. ದೇಶವನ್ನು ಕಾಪಾಡುವ ಕಮ್ಯಾಂಡೋಗಳಿಂದ ಬಿದಿರಿನ ಮರಗಳನ್ನು ನೆಡಿಸಲಾಗಿದೆ. ಈ ಗುಂಪಿನ ಸದಸ್ಯರು ಆ ಆವರಣವನ್ನು ಶುದ್ಧ ಮಾಡುವ ಕಾರ್ಯವನ್ನು ಕೈಗೊಳ್ಳುತ್ತಾರೆ. ಈ ರೀತಿ ಒಂದಲ್ಲ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ನಿಜಕ್ಕೂ ಈಗ ಜಕ್ಕೂರಿನ ಕೆರೆಯನ್ನು ನೋಡಲು ಸಂತೋಷವೆನಿಸುತ್ತದೆ.

ಜಕ್ಕೂರಿನ ಕೆರೆಯ ಕಥೆಯನ್ನು ಕೇಳಿದಾಗ, ಅಗರದ ಕೆರೆಯ ಪಕ್ಕ ಹಾದು ಹೋಗುವಾಗ, ಖಂಡಿತ ಇದನ್ನೂ ಜಕ್ಕೂರಿನ ಕೆರೆಯಂತೆ ಮಾಡಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆ ಮೂಡಿದ್ದಂತೂ ನಿಜ. ಮತ್ತೊಂದು ಯೋಜನೆ, ಸರಕಾರದ ಸಹಕಾರ ಮತ್ತು ಅದರಲ್ಲಿ ಜನರ ಪಾಲ್ಗೊಳ್ಳುವಿಕೆ ಇದ್ದಲ್ಲಿ, ಖಂಡಿತ ಸಾಧ್ಯ ಅಲ್ಲವೇ?

12095266_947948748599404_2156983116803428838_oಬೆಂಗಳೂರು ನಗರ ಉದ್ಯಾನವನಗಳ ನಗರವಾಗಿದ್ದಂತೆ, ಕೆರೆ ಕುಂಟೆಗಳು ತುಂಬಿ ಹರಿಯುವ ನಗರವಾಗಿತ್ತು. ಒಂದೊಮ್ಮೆ ಸಾವಿರ ಕೆರೆಗಳಿದ್ದುವಂತೆ. ನಗರೀಕರಣ, ಕೆರೆಗಳ ಬಗೆಗಿನ ಉದಾಸೀನತೆ, ಹೂಳೆತ್ತದೆ ಕಸ ಕಡ್ಡಿಗಳನ್ನು ತುಂಬಿಸಿ ಬಹಳಷ್ಟು ಕೆರೆಗಳು ಹಾಳಾದುವು. ವರ್ಷಕ್ಕೊಂದು ಕೆರೆಯನ್ನು ನಾಶ ಮಾಡುವುದರಲ್ಲಿ ನಾವು ಪ್ರವೀಣರಾಗಿ, ೧೯೬೦ರಲ್ಲಿ ೨೮೨ ಕೆರೆಗಳಿದ್ದು ಈಗ ಸಧ್ಯ ೩೪ ಕೆರೆಗಳಷ್ಟೇ ಉಳಿದಿವೆ. ಮನುಷ್ಯನ ಅಗತ್ಯಕ್ಕೆ, ಆಸೆಯ ಮುಂದೆ ಯಾವುದಕ್ಕೂ ಉಳಿಗಾಲವಿಲ್ಲ. ಆದರೆ ಎಷ್ಟು ದಿನ ಹೀಗಿರಲು ಸಾಧ್ಯ. ಈಗಾದರೂ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕು. ಜಕ್ಕೂರಿನ ಕೆರೆಯನ್ನು ಮಾದರಿಯನ್ನಾಗಿಟ್ಟುಕೊಂಡು, ನಗರದ ಇತರ ಕೆರೆಗಳು ಪುನರುಜ್ಜೀವನ ಪಡೆದರೆ, ನಿಜಕ್ಕೂ ನಾವೆಲ್ಲಾ ಬೊಗಸೆ ತುಂಬಾ, ಬಾಯಿ ತುಂಬಾ ನೀರು ಕುಡಿಯಲು ಸಾಧ್ಯ. ಬೆಂಗಳೂರಿನ ಕೀರ್ತಿ ಪತಾಕೆಯನ್ನು ಇಡೀ ವಿಶ್ವಕ್ಕೆ ತಲುಪಿಸಿದ ಸಾಫ಼್ಟ್ವೇರ್ ಕಂಪೆನಿಗಳು ಮನಸ್ಸು ಮಾಡಿದಲ್ಲಿ, ಖಂಡಿತ ಕಷ್ಟವೇನಿಲ್ಲ. ಸಾಕಷ್ಟು ಸಮಾಜ ಸೇವಾ ಕಾರ್ಯಗಳನ್ನು ಕೈಗೊಂಡಿರುವ ಈ ಸಂಸ್ಥೆಗಳು ಈಗಲಾದರೂ ಮನಸು ಮಾಡಿಯಾರೆ?

ಚಿತ್ರ-ಲೇಖನ: ಮಂಜುಳಾ ರಾಜ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*