ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹಳ್ಳದ ನೀರನ್ನು ಬಾವಿಗೆ ತಿರುಗಿಸಿದ ಜಯಂತಣ್ಣ

ಹಳ್ಳದಲ್ಲಿ ಹರಿಯುವ ನೀರಿನಲ್ಲಿ ಸ್ವಲ್ಪ ಪ್ರಮಾಣವನ್ನು ಸ್ವಂತ ಬಾವಿಗೆ ತಿರುಗಿಸಿ ಯಶಸ್ವಿಯಾದ ಪ್ರಯತ್ನವಿದು. ಕೊಪ್ಪಳ ತಾಲ್ಲೂಕು ಬಿಕನಹಳ್ಳಿಯ ಜಯಂತನಾಥರು ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ೨೦೧೧ರಲ್ಲಿ ಮೂರು ಬಾರಿ ಹಳ್ಳದ ನೀರಿನಿಂದಲೇ ಇವರ ತೆರೆದಬಾವಿ ತುಂಬಿದ್ದು, ಇದರಿಂದಾಗಿ ಇವರ ಕೊಳವೆಬಾವಿಯ ನೀರಿನಲ್ಲಿದ್ದ ಉಪ್ಪಿನಂಶ ಸಾಕಷ್ಟು ಕಡಿಮೆಯಾಗಿದೆ.

Jayant (1)೨೦೧೧ರ ಮೇ ತಿಂಗಳು. ಜಲಾನಯನ ಇಲಾಖೆ ಅಧಿಕಾರಿಗಳು ಜಯಂತರ ಹೊಲದಲ್ಲಿ ಒಂದು ಕೃಷಿಹೊಂಡ ನಿರ್ಮಿಸುತ್ತೇವೆಂದು ಬಂದರು. ಆ ವ್ಯಾಪ್ತಿಯಲ್ಲಿ ಜಲಾನಯನ ಯೋಜನೆ ಜಾರಿಯಲ್ಲಿತ್ತು. ಆದರೆ ಜಯಂತರ ಹೊಲದಲ್ಲಿ ಹೆಚ್ಚು ಸ್ಥಳಾವಕಾಶ ಲಭ್ಯವಿರಲಿಲ್ಲ. ಆದ್ದರಿಂದ ತಮ್ಮ ಹೊಲಕ್ಕೆ ತಾಗಿಕೊಂಡಂತೆಯೇ ಹರಿಯುತ್ತಿದ್ದ ಹಳ್ಳದಲ್ಲಿ ಸಣ್ಣ ತಡೆ ಹಾಕಿ ಆ ನೀರನ್ನು ತಮ್ಮ ಬಾವಿಗೆ ಪೈಪ್ ಮೂಲಕ ಹರಿಸುವಂತೆ ಜಯಂತ್ ಕೇಳಿಕೊಂಡರು. ಸ್ಥಳ ಪರಿಶೀಲನೆಯ ನಂತರ ಅಧಿಕಾರಿಗಳೂ ಒಪ್ಪಿಗೆ ಸೂಚಿಸಿದರು.

Jayant (2)ಜಯಂತರ ಆರು ಎಕರೆ ಮಸಾರಿ (ಕೆಂಪು ಮಣ್ಣು) ಹೊಲದ ಪಕ್ಕದಲ್ಲಿಯೇ ಹಳ್ಳವೊಂದಿದೆ. ಸುಮಾರಾಗಿ ಮಳೆ ಬಂದರೂ ವರ್ಷದಲ್ಲಿ ನಾಲ್ಕೈದು ಬಾರಿ ಹರಿಯುತ್ತದೆ. ಹಳ್ಳಕ್ಕೆ ಸುಮಾರು ೪೦ ಅಡಿ ದೂರದಲ್ಲಿ ತೆರೆದಬಾವಿ ಇದ್ದು, ಅದರ ಆಳ ಸುಮಾರು ೨೫ ಅಡಿ.   ಈ ಬಾವಿಗೆ ತುಸು ದೂರದಲ್ಲೇ ಕೊಳವೆಬಾವಿ ಕೊರೆಸಿದ್ದಾರೆ.  ಅದರಲ್ಲಿ ಉತ್ತಮವಾಗಿ ನೀರು ಸಿಕ್ಕಿದೆಯಾದರೂ, ಉಪ್ಪಿನಂಶ ಜಾಸ್ತಿ. ಬೆಳೆಗಳಿಗೆ ಅಷ್ಟೊಂದು ಸೂಕ್ತವಲ್ಲ. ಜಯಂತರು ನೈಸರ್ಗಿಕ ಕೃಷಿ ಅಳವಡಿಸಿದ್ದು, ಯಥೇಚ್ಛ ಗಿಡ-ಮರ ಹಾಕಿದ್ದಾರೆ. ಹಳ್ಳದ ನೀರನ್ನು ಬಾವಿಗೆ ತಿರುಗಿಸಿದರೆ ತಮ್ಮ ಜಮೀನಿಗೆ ಎಲ್ಲಾ ರೀತಿಯಿಂದಲೂ ಅನುಕೂಲವಾಗುತ್ತದೆ ಎಂಬ ಅರಿವಿದ್ದ ಜಯಂತ್ ಈ ನಿಟ್ಟಿನಲ್ಲಿ ಅಧಿಕಾರಿಗಳ iನವೊಲಿಸುವಲ್ಲಿ ಯಶಸ್ವಿಯಾದರು.

ಇಲಾಖೆಯ ಒಪ್ಪಿಗೆ ಸಿಕ್ಕ ನಂತರ ಕೆಲಸ ಆರಂಭವಾಯಿತು. ತೆರೆದ ಬಾವಿಗೆ ನೇರವಾಗಿ ಹಳ್ಳದಲ್ಲಿ ಸ್ಥಳದ ಆಯ್ಕೆ ಮಾಡಿ ಜೆಸಿಬಿಯಿಂದ ಗುಂಡಿ ತೆಗೆಯಲಾಯಿತು. ನಂತರ ಆರು ಅಡಿ ಉದ್ದ, ಆರು ಅಡಿ ಅಗಲ ಮತ್ತು ಐದು ಅಡಿ ಆಳದ ತೊಟ್ಟಿಯನ್ನು ಭೂಮಿ ಮಟ್ಟಕ್ಕಿಂತ ಕೆಳಗೆ ನಿರ್ಮಿಸಲಾಯಿತು. ತೊಟ್ಟಿಯಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗ ಶೋಧಕವಾಗಿ ಕೆಲಸ ಮಾಡುತ್ತದೆ. ನೀರಿನ ಜೊತೆ ಬರುವ ಮಣ್ಣು, ಕಸ-ಕಡ್ಡಿ ಇಲ್ಲಿ ಶೇಖರವಾಗಿ ಸ್ವಚ್ಛ ನೀರು ಮುಂದಿನ ಭಾಗಕ್ಕೆ ಹರಿಯುತ್ತದೆ. ಹಳ್ಳದ ಮಟ್ಟದಿಂದ ಎರಡು ಅಡಿ ಕೆಳಗೆ ಆರು ಇಂಚು ಅಳತೆಯ ಪಿವಿಸಿ ಪೈಪ್ ಅಳವಡಿಸಿದ್ದು, ಅದರ ಮೂಲಕ ನೀರು ಬಾವಿಗೆ ಮರುಪೂರಣವಾಗುತ್ತದೆ. ತೊಟ್ಟಿ ಅಳತೆಗೆ ಹೆಚ್ಚಾದ ನೀರು ಹಳ್ಳದ ಮೂಲಕ ಮುಂದಕ್ಕೆ ಹರಿಯುತ್ತದೆ.

ಜಯಂತರು ನಿಯಮಿತವಾಗಿ ತೊಟ್ಟಿಯನ್ನು ಸ್ವಚ್ಚಗೊಳಿಸುತ್ತಾರೆ. ತೊಟ್ಟಿಯ ಮೊದಲ ಭಾಗದಲ್ಲಿ ಶೇಖರವಾದ ಮಣ್ಣು, ಕಲ್ಲು, ಕಸವನ್ನೆಲ್ಲಾ ತೆಗೆದು ಹಾಕುತ್ತಾರೆ. ಎರಡನೆಯ ಭಾಗದಲ್ಲೂ ಸ್ವಲ್ಪಮಟ್ಟಿಗೆ ಮಣ್ಣು ಬಂದಿರುತ್ತದೆ. ಅದನ್ನೂ ಸಹ ತೆಗೆದು ಹಾಕಿ ಸ್ವಚ್ಛ ನೀರು ಮಾತ್ರ ಬಾವಿಗೆ ಹರಿಯುವಂತೆ ಆಗಾಗ ನಿಗಾ ಮಾಡುತ್ತಾರೆ.

Samudaaya Kolave Baavi Marupoorana, Kabbigere Maraathipalyaತೊಟ್ಟಿ ನಿರ್ಮಾಣಕ್ಕೆ ೨೦೦ ಸೈಜು ಕಲ್ಲು, ಅರ್ಧ ಟ್ರ್ಯಾಕ್ಟರ್ ಮರಳು, ನಾಲ್ಕು ಚೀಲ ಸಿಮೆಂಟ್ ಬಳಸಲಾಗಿದೆ. ೪೫ ಅಡಿ ಉದ್ದದ ಪೈಪನ್ನು ಅಳವಡಿಸಲಾಗಿದೆ. ಪೂರ್ತಿ ನಿರ್ಮಾಣಕ್ಕೆ ಮೂರು ದಿನ ಹಿಡಿದಿದ್ದು, ಆರು ಜನ ಆಳುಗಳು ಕೆಲಸ ಮಾಡಿದ್ದಾರೆ.

೨೦೧೧ರಲ್ಲಿ ನಿರ್ಮಾನವಾದ ಈ ತೊಟ್ಟಿ ನಿಯಮಿತ ನಿರ್ವಹಣೆಯಿಂದಾಗಿ ಈಗಲೂ ಕಾರ್ಯನಿರ್ವಹಿಸುತ್ತಿದೆ. ಬಾವಿಯಲ್ಲಿ ಶೇಖರಣೆಯಾದ ನೀರು ಅಂತರ್ಜಲಕ್ಕಿಳಿದು ಜಯಂತರ ಕೊಳವೆಬಾವಿ ನೀರೂ ಸಹ ಸಿಹಿಯಾಗಿದೆ. ಇದೊಂದು ದೊಡ್ಡ ಬದಲಾವಣೆ. ‘ನಮ್ಮ ಶ್ರಮಕ್ಕೆ ಫಲಿತಾಂಶ ಸಿಕ್ಕಿದ್ದು ತುಂಬಾ ಖುಷಿ’ ಎನ್ನುತ್ತಾರೆ ಜಯಂತ್. ನಿಯಮಿತವಾಗಿ ಕೊಳವೆಬಾವಿಯ ನೀರನ್ನು ನಾಲಿಗೆಯಲ್ಲಿ ಚಪ್ಪರಿಸುವ ಮೂಲಕ ಉಪ್ಪಿನಂಶ ಕಡಿಮೆಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಇದೊಂದು ಸಣ್ಣ ಹಾಗೂ ಅತೀ ಕಡಿಮೆ ಖರ್ಚಿನ ಕೆಲಸ. ಇಂತಹ ಜಾಣ್ಮೆಗಳನ್ನು ಕೃಷಿಕರು ಅಳವಡಿಸಿಕೊಳ್ಳಬೇಕು. ಈ ರೀತಿಯ ಪರ್ಯಾಯಗಳು ಎಲ್ಲರ ಹೊಲ-ಗದ್ದೆ-ತೋಟಗಳಲ್ಲಿಯೂ ಲಭ್ಯವಿರುತ್ತವೆ, ಗಮನಿಸುವ ತಾಳ್ಮೆ ಹಾಗೂ ಕಣ್ಣು ಮುಖ್ಯ.

ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*