ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬಿಸಿಲೂರಿನ ರೈತನ ನೀರು ಮಿತ ಬಳಕೆಯ ಪಾಠ

p-2ಕೃಷಿ ಮಾಡಲು ಯಥೇಚ್ಛವಾಗಿ ನೀರು ಬೇಕೆ ಬೇಕು – ಇಲ್ಲದಿದ್ದರೆ ಬೆಳೆ ಸರಿಯಾಗಿ ಬರುವುದಿಲ್ಲ, ಇದಕ್ಕಾಗಿ ಕಣ್ಣಾಮುಚ್ಚಾಲೆಯಾಡುವ ವಿದ್ಯುತ್‌ನ್ನು ನಂಬಿಕೊಂಡು ಕೃಷಿಯೇ ಬೇಡವೆಂದು ಹೈರಾಣಾಗಿ ಹೋಗಿರುವ ರೈತರ ಮಧ್ಯೆ, ಕಲಬುರುಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲಗಗಾಣಗಾಪುರ ಗ್ರಾಮದ ದತ್ತಾತ್ರೇಯ ಕೊಳ್ಳೂರು ಅವರು ಇತರೆ ರೈತರಿಗೆ ಪಾಠವಾಗಿದ್ದಾರೆ.

ನೀರನ್ನು ಪೋಲು ಮಾಡದೇ ವಿದ್ಯುತ್‌ನ್ನು ನಂಬಿಕೊಂಡು ಕೂರದೆ ತಮ್ಮ ೨೨ ಎಕರೆ ಜಮೀನಿಗೂ ಗುರುತ್ವಾಕರ್ಷಣೆಯ ಮೂಲಕ ನೀರು ಪಡೆದು ಕೃಷಿ ಮಾಡುತ್ತಿದ್ದಾರೆ. ಜೊತೆಗೆ ಸೋಲಾರ್‌ನ ಅನುಕೂಲವನ್ನು ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಬರಡು ಭೂಮಿಯನ್ನು ಹೊಂದಿರುವ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಹೊಂದಿರುವ ಕಲಬುರುಗಿಗೆ (ಗುಲ್ಬರ್ಗ) ಜೀವ ಜಲವಾದ ನೀರಿನ ಕೊರತೆ ಒಂದೆಡೆಯಾದರೆ, ಅತಿವೃಷ್ಠಿ ಅನಾವೃಷ್ಠಿಗಳು ಮತ್ತೊಂದೆಡೆ. ನೀರನ್ನು ಸಂಗ್ರಹಿಸಿಕೊಳ್ಳುವ ವಿಧಾನಗಳಿಲ್ಲದೇ ಇರುವುದು, ಜಲ ಮರುಪೂರಣದ ಬಗ್ಗೆ ಜಾಗೃತರಾಗದೆ ಇರುವುದು, ಮಳೆ ಬಿದ್ದಾಗಲಾದರೂ ಆ ಹನಿಗಳನ್ನು ಸಂಗ್ರಹಿಸಿಕೊಳ್ಳಲಾಗದೆ, ರೈತ ಇಲ್ಲಿ ಸಂಕಷ್ಟ ಪಡುತ್ತಲೇ ಬಂದಿದ್ದಾನೆ. ನೀರಿನ ಪ್ರಮಾಣ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕೃಷಿಗಾಗಿ ನೀರನ್ನು ದುಂದುವೆಚ್ಚ ಮಾಡುತ್ತ ಅಂತರ್ಜಲವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾನೆ. ಇಂತಹವರೆಲ್ಲರಿಗೂ, ಬಿಸಿಲೂರಿನ ರೈತ ದತ್ತಾತ್ರೇಯ ಕೊಳ್ಳೂರು ಮಾದರಿಯಾಗಿದ್ದಾರೆ.

ದತ್ತಾತ್ರೇಯ ಅವರು ಮೂಲತಃ ಕೃಷಿಕ ಕುಟುಂಬದವರು; ಕೃಷಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದವರು. ಮಳೆ ಬಿದ್ದರಷ್ಟೇ ಉಳುಮೆ ಮಾಡುವುದು, p-8ಇಲ್ಲದಿದ್ದರೆ ಕೂಲಿ ಕೆಲಸವೇ ಗತಿ. ಇವರ ಜಮೀನಿನ ಪಕ್ಕದಲ್ಲಿ ಭೀಮಾ ನದಿ ಹರಿದರೂ, ಅಲ್ಲಿಂದ ನೀರು ಪಡೆದು ಕೃಷಿ ಮಾಡಲಾಗದ ಪರಿಸ್ಥಿತಿ. ನದಿಯಲ್ಲಿಯೂ ಹೆಚ್ಚು ಕಾಲ ನೀರು ನಿಲ್ಲುತ್ತಿರಲಿಲ್ಲ – ಹಾಗೇ ಹರಿದು ಹೋಗಿ ಬಿಡುತ್ತಿತ್ತು. ಮತ್ತೆ ಇಲ್ಲಿ ಬರದ ಪರಿಸ್ಥಿತಿ.   ಪರಿಸ್ಥಿತಿ ಹೀಗೆಯೇ ಮುಂದುವರೆದಿತ್ತು. ಇದೇ ಸಮಯದಲ್ಲಿ, ಸರ್ಕಾರ ಈ ಗ್ರಾಮದಲ್ಲಿ (ದೇವಲಗ ಗಾಣಗಾಪುರ) ಭೀಮಾ ನದಿಗೆ ಬಂದಾರವೊಂದನ್ನು ನಿರ್ಮಾಣ ಮಾಡಿತು. ಇದರಿಂದ ಇಲ್ಲಿ ನೀರು ಸಂಗ್ರಹವಾಗಲು ಆರಂಭವಾಯಿತು. ನಂತರ, ಈ ಭಾಗದ ರೈತರ ಪರಿಸ್ಥಿತಿ ಬದಲಾಗ ತೊಡಗಿತು. ಉಳಿದ ರೈತರೂ ಸಹ ಭೀಮಾ ನದಿಯಿಂದ ಯಥೇಚ್ಛವಾಗಿ ನೀರು ಪಡೆದು ಕೃಷಿ ಮಾಡಲು ಆರಂಭಿಸಿದರು. ಆದರೆ, ದತ್ತಾತ್ರೇಯ ಅವರು ಮಾತ್ರ ಇವರೆಲ್ಲರಿಗೂ ವಿಭಿನ್ನವಾಗಿ ನೀರು ಪಡೆದು ಕೃಷಿ ಮಾಡಲು ಆರಂಭಿಸಿದರು.

p-5ನೀರಿಗಾಗಿ ಅತ್ಯಂತ ಸಂಕಷ್ಟದ ದಿನಗಳನ್ನು ಅನುಭವಿಸಿದ್ದ ಕೊಳ್ಳೂರು ಅವರು ನೀರನ್ನು ದುಂದುವೆಚ್ಚ ಮಾಡಬಾರದು ಎಂದು ಅರಿತು, ತಮ್ಮಲ್ಲಿದ್ದ ಅಷ್ಟು-ಇಷ್ಟು ಹಣವನ್ನು ಹೊಂದಿಸಿಕೊಂಡು, ನದಿಯಿಂದ ತಮ್ಮ ಜಮೀನಿಗೆ ಪೈಪುಗಳ ಮೂಲಕ ನೀರು ತಂದರು. ನದಿಯಿಂದ ತಂದ ನೀರನ್ನು ನೇರವಾಗಿ ಜಮೀನುಗಳಿಗೆ ಬಿಟ್ಟು ಪೋಲು ಮಾಡದೆ, ೬೦x೬೦ ಅಳತೆಯ ೮ ಅಡಿ ಆಳವುಳ್ಳ ಹೊಂಡವನ್ನು ಮರಳು ಮಿಶ್ರಿತ ಮಣ್ಣಿನಿಂದ ಜಮೀನಿನಲ್ಲಿ ಎತ್ತರವಾಗಿ ನಿರ್ಮಿಸಿಕೊಂಡು, ಅದರಲ್ಲಿ ನೀರನ್ನು ಸಂಗ್ರಹಿಸಿಕೊಳ್ಳಲು ಆರಂಭಿಸಿದರು. ಜಮೀನಿಗಿಂತ ಸ್ವಲ್ಪ ಎತ್ತರದಲ್ಲಿ ಈ ಹೊಂಡ ಇದ್ದುದ್ದರಿಂದ, ಅಲ್ಲಿ ಸಂಗ್ರಹಗೊಂಡ ನೀರು ಗುರುತ್ವಾಕರ್ಷಣೆಯ ಮೂಲಕ ೨೨ ಎಕರೆ ಭೂಮಿಗೂ ಹನಿ ನೀರಾವರಿಯ ಮೂಲಕ ನೀರಾವರಿಯಾಗಲು ಆರಂಭವಾಯಿತು. ಹೊಂಡದ ಕೆಳಭಾಗದಲ್ಲಿ ಜಮೀನುಗಳಿಗೆ ನೀರು ಹೋಗಲು ಇಳಿಮುಖವಾಗಿ ಪೈಪುಗಳನ್ನು ಅಳವಡಿಸಲಾಗಿದೆ. ನೀರು ಹರಿದು ಹೋಗುವ ಪ್ರತಿ ಹಂತದಲ್ಲಿಯೂ ನೀರಿನ ಕಂಟ್ರೋಲರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ. ನೀರು ಬೇಡವೆಂದಾಗ ಹೊಂಡದ ಬಳಿಯಲ್ಲಿ  ಪೈಪುಗಳಿಗೆ ಮುಚ್ಚಳವನ್ನು ಹಾಕಲಾಗುತ್ತದೆ.

ಈ ಪ್ರಕ್ರಿಯೆಗೆ ಇವರು ಯಾವುದೇ ವಿದ್ಯುತ್‌ನ್ನು ಬಳಸುತ್ತಿಲ್ಲ. ಅತ್ಯಂತ ಸುಲಭವಾದ, ಸರಳವಾದ, ಆರ್ಥಿಕವಾಗಿ ಹೊರೆಯಾಗದ  ಈ ತಾಂತ್ರಿಕತೆಯನ್ನು ತಾವೇ ಸ್ವತಃ ಅಳವಡಿಸಿಕೊಂಡು ನೀರನ್ನು ಹಿತ ಮಿತವಾಗಿ ಬಳಸುತ್ತಿದ್ದಾರೆ.

ಇದರ ಜೊತೆಗೆ, ವಿದ್ಯುತ್‌ನ ಕಣ್ಣಾಮುಚ್ಚಾಲೆಯನ್ನು ಅರಿತಿದ್ದ ಇವರು ತಮ್ಮ ಜಮೀನಿಗೆ ಸೋಲಾರ್ ಪದ್ದತಿಯನ್ನು ಅಳವಡಿಸಿಕೊಂಡರು. ಇವರಿಗೀಗ ವಿದ್ಯುತ್‌ನ ಅವಶ್ಯಕತೆ ಇಲ್ಲ.  ಜಮೀನಿನಲ್ಲಿ ಯಾರಾದರೂ ನೀರನ್ನು ವ್ಯಯ ಮಾಡಿದರೆ, ಇವರಿಗೆ ಸಿಟ್ಟು ತಾರಕಕ್ಕೆ ಏರಿ ಬಿಡುತ್ತದೆ.

ಹನಿ ಹನಿ ನೀರಿಗೆ ಬರಡು ನೆಲ ಹಸಿರಾಯ್ತು

ಕಲಬುರಗಿ (ಗುಲಬರ್ಗ) ಎಂದಾಕ್ಷಣ ಬರಡ ಭೂಮಿಯೇ ಕಣ್ಮುಂದೆ ಬರುತ್ತದೆ. ಅದೇ ರೀತಿ ದತ್ತಾತ್ರೇಯ ಅವರ ಜಮೀನಿನಲ್ಲೂ ಏನನ್ನು DSC_0067ಬೆಳೆಯಲಾಗದಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇವರು ಭೂಮಿಯನ್ನು ಹದಮಾಡಿಕೊಂಡು, ನೀರನ್ನು ಎಚ್ಚರಿಕೆಯಿಂದ ಜತನದಿಂದ ಬಳಸಿ ಬಾಳೆ, ಮಾವು, ಪೆರಲಾ, ಕಬ್ಬು, ಭತ್ತ ವಿವಿಧ ರೀತಿಯ ಹಣ್ಣು-ಹಂಪಲು, ತರಕಾರಿ, ಕಿರುಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಬರಡು ನೆಲ ಈಗ ಹಸಿರಾಗಿದೆ. ಇವರ ತೋಟಕ್ಕೆ ಹೋದರೆ, ಮಲೆನಾಡಿನ ಅನುಭವವಾಗುತ್ತದೆ.  ಇವರು ಯಾವುದೇ ಬೆಳೆ ಬೆಳೆದರೂ, ಈಗ ಅದರಲ್ಲಿ ಒಂದು ವಿಶೇಷತೆ ಇದ್ದೇ ಇರುತ್ತದೆ. ಹನಿ ಹನಿ ನೀರನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಲಾಗಿದೆ ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ.

ಜೀವಾಮೃತವೇ ಇವರಿಗೆ ಜೀವಾಳ

ಕೊಳ್ಳೂರು ಅವರು ತಾವು ಬೆಳೆಯುವ ಪ್ರತಿ ಬೆಳೆಗೂ ಸಾವಯವ, ಪಂಚಗವ್ಯ, ಜೀವಾಮೃತವನ್ನು ಬಳಸುತ್ತಾರೆ. ತಾವೇ ಸ್ವತಃ ಇವುಗಳನ್ನು ತಯಾರಿಸಿp-7 ಬಳಸುತ್ತಾರೆ. ಆದ್ದರಿಂದ, ಇವರು ಬೆಳೆಯುವ ಪ್ರತಿ ಬೆಳೆಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತದೆ. ಈ ಪದ್ಧತಿಯನ್ನು ಪ್ರತಿಯೊಬ್ಬ ರೈತರೂ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ಇವರು.

ನೀರು ಸಂಗ್ರಹಣೆಗೆ ಬದುಗಳ ನಿರ್ಮಾಣ

ಮಳೆಗಾಲದಲ್ಲಿ ತಮ್ಮ ಜಮೀನಿನಲ್ಲಿ ಹರಿದು ಹೋಗುವ ನೀರನ್ನು ತಡೆದು ಇಂಗಿಸುವ ಸಲುವಾಗಿ, ಬದುಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಿಂದ ಮಳೆಯ ನೀರು ಇಂಗುತ್ತಿದೆ. ಅಂತರ್ಜಲವು ಅಭಿವೃದ್ದಿಗೊಂಡಿದೆ. ಇವರ ಜಮೀನಿನಲ್ಲಿ ಬತ್ತಿ ಹೋಗಿದ್ದ ತೆರೆದ ಬಾವಿಯಲ್ಲಿ ಈಗ ಸದಾ ನೀರು ಇರುತ್ತದೆ; ಇದರಿಂದ ಬೇಸಿಗೆಯಲ್ಲಿ ಇವರಿಗೆ ನೀರಿನ ತೊಂದರೆಯಾಗುತ್ತಿಲ್ಲ.

 ಸಾಧನೆಗೆ ಸಂದ ಗೌರವ

೨೦೧೩ರಲ್ಲಿ ನೀರನ್ನು ಸದ್ಬಳಕೆ ಮಾಡಿಕೊಂಡು ಕಡಿಮೆ ನೀರಿನಲ್ಲಿ ಉತ್ತಮ ಕೃಷಿ ಮಾಡುವ ರೈತ ಎಂಬ ಪ್ರಶಸ್ತಿಯನ್ನು ರಾಯಚೂರು ಕೃಷಿ ವಿಶ್ವವಿದ್ಯಾನಿಲಯವು ಇವರಿಗೆ ನೀಡಿ ಗೌರವಿಸಿತು. ೨೦೧೪ರ ಡಿಸೆಂಬರ್‌ನಲ್ಲಿ ರಾಜ್ಯದ ಶ್ರೇಷ್ಟ ತೋಟಗಾರಿಕಾ ರೈತ ಎಂಬ ಪ್ರಶಸ್ತಿ ಪಡೆದರು. ಲಖನೌದಿಂದ ತಂದ ಎಲ್-೪೬ ಎಂಬ ಪೆರಲಾ ಹಣ್ಣು ಇವರ ತೋಟದ ವಿಶೇಷ. ಗುಜರಾತ್, ರಾಜಸ್ಥಾನದಿಂದ ತಂದ ೧೦ ಗೀರ್ ತಳಿಯ ಆಕಳನ್ನು ಸಾಕುವ ಮೂಲಕ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಇದರಿಂದ ಪಂಚಗವ್ಯ, ಜೀವಾಮೃತ, ಸಾವಯವ ತಯಾರಿಸಿಕೊಂಡು ಉಪಯೋಗಿಸುತ್ತಾರೆ. ಇದಕ್ಕಾಗಿ ಇವರಿಗೆ ಬೀದರ್ ಪಶು ಸಂಗೋಪನೆ ವಿಶ್ವ ವಿದ್ಯಾನಿಲಯವು ‘ಉತ್ತಮ ಹೈನುಗಾರಿಕಾ ರೈತ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

 ನೀರು ಮಿತ ಬಳಕೆಗೆ ದತ್ತಾತ್ರೇಯ ಕೊಳ್ಳೂರು ಅವರ ಸೂತ್ರಗಳು

 • p-4ನೀರು ಯಥೇಚ್ಛವಾಗಿ ಸಿಗುತ್ತದೆ ಎಂದು ವ್ಯಯ ಮಾಡಬೇಡಿ, ಯೋಚಿಸಿ ಮಿತವಾಗಿ ಬಳಸಿ.
 • ಅಂತರ್ಜಲದಲ್ಲಿರುವ ನೀರು ಪ್ರತಿಯೊಬ್ಬರ ಹಕ್ಕು, ನಮ್ಮ ಮುಂದಿನ ಪೀಳಿಗೆಗೆ ನೀರನ್ನು ಉಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
 • ಪ್ರತಿ ಮಣ್ಣಿಗೂ ಬೇರೆ ಬೇರೆ ರೀತಿಯಲ್ಲಿ ನೀರಿನ ಅವಶ್ಯಕತೆ ಇರುತ್ತದೆ. ಅದನ್ನು ಅರಿತು ನಮ್ಮ ರೈತರು ಬಳಸಬೇಕು.
 • ಯಾವುದೇ ಬೆಳೆಗೂ ಅತಿಯಾದ ನೀರಿನ ಅವಶ್ಯಕತೆ ಇರುವುದಿಲ್ಲ. ನಾವು ಮೊದಲು ಅದನ್ನು ಅರ್ಥ ಮಾಡಿಕೊಳ್ಳಬೇಕು.
 • ಜಮೀನುಗಳಿಗೆ ಅತಿಯಾದ ನೀರನ್ನು ಉಪಯೋಗಿಸುತ್ತಿದ್ದರೆ, ಭೂಮಿಯು ಸಹ ತನ್ನ ಫಲವತ್ತತೆಯನ್ನು ಕಳೆದುಕೊಂಡು ಬಿಡುತ್ತದೆ.
 • ನೀರಿನ ಮಿತ ಬಳಕೆಯ ಬಗ್ಗೆ ಅರಿವು, ಜಾಥ, ಜಾಗೃತಿ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ನಡೆಯಬೇಕು.
 • ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಇದರಿಂದ ಬೇರೆಯವರು ಕೃಷಿ ಮಾಡಲು ಅನುಕೂಲವಾಗುತ್ತದೆ.
 • ತಮ್ಮ ಜಮೀನುಗಳಲ್ಲಿ ಇರುವ ನೀರು ಹರಿಯುವ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ನೀರು ಸಂಗ್ರಹಣ ಬದುಗಳನ್ನು ನಿರ್ಮಾಣ ಮಾಡಿಕೊಳ್ಳಿ.
 • ಜಮೀನಿನ ಸುತ್ತಮುತ್ತ ಇರುವ ಪೋಷಕ ಕಾಲುವೆಗಳನ್ನು ಸ್ವಚ್ಛಗೊಳಿಸಿಕೊಳ್ಳಿ.
 • ಗ್ರಾಮಗಳಲ್ಲಿರುವ ನೀರಿನ ಮೂಲಗಳನ್ನು ಉಳಿಸಿಕೊಳ್ಳಿ.
 • ವಾರದಲ್ಲಿ ಒಂದು ದಿನವಾದರೂ, ಗ್ರಾಮಸ್ಥರೆಲ್ಲ ಒಗ್ಗೂಡಿ ಸಮುದಾಯದ ಸಹಭಾಗಿತ್ವದಲ್ಲಿ ತಮ್ಮೂರಿನ ಕೆರೆಯನ್ನು ಸ್ವಚ್ಛಗೊಳಿಸಿಕೊಳ್ಳಿ

ದತ್ತಾತ್ರೇಯ ಕೊಳ್ಳೂರು ಅವರು ಕೃಷಿಯ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ವಿಜ್ಜಾನಿ ಹಾಗೂ ಎಂಜಿನಿಯರ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ; ೯೯೮೦೦೦೦೧೯೯

                                                                                 ಚಿತ್ರ-ಲೇಖನ: ಸೋ.ಸೋ. ಮೋಹನ್ ಕುಮಾರ್    

Share on FacebookTweet about this on TwitterShare on LinkedIn