ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿ ಮತ್ತು ಹಬ್ಬಗಳು: ಸುಗ್ಗಿ ಹಬ್ಬ

“ಈ ವರ್ಷ ಇನ್ನೂ ಮಳೆ ನಿಂತೇ ಇಲ್ಲ.  ಗದ್ದೆ ಕೊಯ್ಲು ಮಾಡ್ದಂಗೆ ಆತು,” ಕಣಸೆ ಹುಚ್ಚಪ್ಪ ಮೋಡ ತುಂಬಿದ ಆಕಾಶ ನೋಡುತ್ತಾ ಹೇಳುತ್ತಿದ್ದರು.  ಗದ್ದೆಯಲ್ಲಿ ನೀರು ಆರದೇ ಇದ್ರೆ ಮುಗ್ಗಲು ಬಂದಂಗೆ ಸೈಯಿ ಕಾನ್ಲೆ ಜಟ್ಸಿಪ್ಪ ಬೆಂಕಿ ಮುಂದೂಡುತ್ತಾ ಮಾಳದ (ಗದ್ದೆಯೊಳಗೆ ಕಾವಲಿಗೆ ಕಟ್ಟಿದ ಪುಟ್ಟ ಗುಡಿಸಲು) ಒಳಗಿನಿಂದಲೇ ಉತ್ತರಿಸಿದರು.

Wester-Ghats-Coorg-Rice-Fields - for pp articleಸಾಗರದಿಂದ ತಾಳಗುಪ್ಪದವರೆಗೆ (ರಾಷ್ಟ್ರೀಯ ಹೆದ್ದಾರಿ) ಕಣ್ಣು ನೋಡುವಷ್ಟು ಗದ್ದೆಬಯಲು.  ಮಳೆಗಾಲದಲ್ಲಿ ಹಸಿರುಹಬ್ಬ.  ದೀಪಾವಳಿಯ ನಂತರ ಸುಗ್ಗಿಯ ಸಂಭ್ರಮ.  ತುಂಬಿದ ತೆನೆಗಳ ತೊನೆದಾಟ.  ಹಂದಿ, ದನ, ಮಂಗಗಳ ಕಾಟ.  ಹಗಲು ರಾತ್ರಿ ಕಾವಲು.  ರಾತ್ರಿ ಕಾವಲಿಗೆ ಗದ್ದೆಯ ಮಧ್ಯದಲ್ಲೊಂದು ಎತ್ತರದ ಮಾಳ.  ಚಳಿಗೆ ಬೆಂಕಿಯ ಹೊಡಚಲು.

ರಾತ್ರಿಯಲ್ಲಿ ಸರ್ರನೆ ಕಿವಿಗಡಚಿಕ್ಕುವ ಡಮ ಡಮ ಸದ್ದು.  ಇಲಿ ಹಿಡಿಯಲು ಬಂದ ಗೂಬೆಯೊಂದರ ಪಟಪಟ ರೆಕ್ಕೆ ಬಡಿತ.  ಹಂದಿಗಳ ವಾಸನೆಗೆ ಊಳಿಡುವ ನಾಯಿಗಳು.  ನೀರವ ರಾತ್ರಿಯ ಗಪ್ಪೆನ್ನುವ ಕತ್ತಲೆಗೆ ವಿಚಿತ್ರ ಬಣ್ಣ ಕೊಡುತ್ತದೆ.  ಎದೆಯೊಳಗೆ ಚಳಿಯ ನಡುಕ ದುಪ್ಪಟ್ಟಾಗುತ್ತದೆ.  ನಾಲ್ಕು ಕಂಬಳಿ ಹೊದ್ದು ಮಲಗಿದರೂ ರಪ್ಪನೆ ರಾಚುವ ಇಬ್ಬನಿ ಮಂಜು ನಿದ್ದೆ ಕೆಡಿಸಿ ವಿಕಾರ ಆಕಾರದಲ್ಲಿ ತೇಲುತ್ತಾ ಸಾಗುತ್ತದೆ.

ರೈತರ ವರ್ಷದ ದುಡಿಮೆ ಸಾಕಾರಗೊಳ್ಳುವ ಸಮಯ.  ಆದರೆ ವಿಧಿಯ ನೆರಳು ಕವಿದು ಭವಿಷ್ಯವನ್ನು ಮಬ್ಬಾಗಿಸಿದೆ.  ಹಿಂದೆಲ್ಲಾ ಬರ.  ಈ ಸಾರಿ ನಿಲ್ಲದ ಮಳೆ.   ಕೊಯ್ಲಿಗೆ ಅನುವು ಮಾಡಿಕೊಡುತ್ತಿಲ್ಲ.  ಕೊಯ್ದ ಮೇಲೆ ನಾಲ್ಕು ಬಿಸಿಲು ಕಾಳುಗಳು ಒಣಗದಿದ್ದರೆ ಮುಗ್ಗಲು ಬಂದು ಫಸಲೆಲ್ಲಾ ಹಾಳು.

ಕೊಯ್ಲಿಗೆ ಎಂಟು ದಿನ ಮೊದಲೇ ಗದ್ದೆಯಲ್ಲಿ ನೀರು ಆರಿಸುತ್ತಾರೆ.  ತೆನೆಗಳು ಕಾಳುಗಟ್ಟಿದ ಭಾರಕ್ಕೆ ತಲೆತಗ್ಗಿಸಿ ಸುಳಿವ ಗಾಳಿಗೆ ಮೆಲ್ಲನೆ ತಲೆದೂಗುತ್ತಿರುತ್ತವೆ.  ಗಾಳಿಯಲೆಗೆ ಕಾಳಿನ ತೊನೆದಾಟ ಗೆಜ್ಜೆಯ ಸ್ವರ ಹೊಮ್ಮಿಸುತ್ತದೆ.  ಅಕ್ಕಿಯ ಹಿತಕರ ಪರಿಮಳ ಸುಳಿದಾಡಿ ಮೈಮನಗಳನ್ನು ಪುಳಕಿತಗೊಳಿಸುತ್ತದೆ.  ಎಲ್ಲೆಲ್ಲೂ ಹಸಿರು ನಿಂಬೆ ಬಣ್ಣ ಬಳಿದಂತೆ ಕಾಣುತ್ತದೆ.  ಬೆಳಗಿನ ಮಂಜಿನೊಂದಿಗೆ ಹಸಿರೆಲ್ಲಾ ತೇಲುತ್ತಾ ಸೂರ್ಯನೊಂದಿಗೆ ಸರಿಯುತ್ತಿದ್ದಂತೆ ಬಂಗಾರದ ಬಣ್ಣದ ತೆನೆಗಳು ತಲೆದೂಗಿ ಕರೆಯುತ್ತವೆ.

ಭೂಮಿ ಹುಣ್ಣಿಮೆಯಂದು ಗದ್ದೆಯೊಳಗೆ ಹುಗಿದ ಕಡುಬನ್ನು ಭೂರೆ ಹಬ್ಬದ ದಿನ ಹುಡುಕಿ ತೆಗೆಯುತ್ತಾರೆ.  ಕಡುಬು ಹುಳ ತುಂಬಿ ಮಿಜಿಮಿಜಿ ಎನ್ನುತ್ತಿದ್ದರೆ ಒಳ್ಳೇ ಫಸಲು ಎಂಬ ನಂಬಿಕೆ.  ಗದ್ದೆಯಲ್ಲಿ ಅಲ್ಲಲ್ಲಿ ನೆಟ್ಟ ಮುಂಡುಗದ ಗಿಡ ಹುಲುಸಾಗಿ ಬೆಳೆದು, ಕಾಯಿ ಬಿಟ್ಟಿದ್ದರೆ ! ಫಸಲಿಗೆ ಯಾವುದೇ ರೋಗ ಬಂದಿಲ್ಲ ಎನ್ನುವ ನಿರ್ಧಾರ.  ಮುಂಡುಗದ ಕಾಯಿಗಳನ್ನು ಕೊಯ್ದು ಭತ್ತದೊಂದಿಗೆ ಇಡುತ್ತಾರೆ.  ಇದು ಕೀಟನಿಯಂತ್ರಕ.

ದೀಪಾವಳಿಯ ದಿನ ಹೊಸ ಫಸಲುಗಳನ್ನು ತಂದು ಪೂಜಿಸುತ್ತಾರೆ.  ಭತ್ತ, ಗುಡ್ಡೆಗೇರು ಹಾಗೂ ಮಾವಿನ ಎಲೆಗಳ ರೆಂಬೆಗಳನ್ನು ದೇವರ ಮುಂದಿಟ್ಟು ಪೂಜಿಸುತ್ತಾರೆ.  ಹಾಲುಗಟ್ಟಿದ ಭತ್ತದ ಕಾಳುಗಳನ್ನು ಬಿಡಿಸಿದ ಅಕ್ಕಿಯಿಂದ ಪಾಯಸ ಮಾಡುತ್ತಾರೆ.  ಅಕ್ಕಿ ಗಟ್ಟಿಯಾಗಿರುವುದನ್ನು ನೋಡಿ ಕೊಯ್ಲಿನ ದಿನ ನಿರ್ಧರಿಸುತ್ತಾರೆ.

ಕುಡುಗೋಲು ಪೂಜೆಯಿಂದ ಸುಗ್ಗಿ ಆರಂಭ.  ಮೂಡಣಗಾಳಿ ಹೆಚ್ಚಾಗಿ ತೆನೆಗಳೆಲ್ಲಾ ಪಶ್ಚಿಮಕ್ಕೆ ತಿರುಗಿರುತ್ತವೆ.  ಎಲೆಗಳು ಹಸಿರಾಗಿದ್ದರೂ, ತೆನೆಗಳು ತಲೆಬಾಗಿ, ಕಾಂಡ ಒಣಗಿದ್ದರೆ ಸಾಕು.  ಕೊಯ್ಲಿಗೆ ಹದ ಬಂದಿದೆ ಎನ್ನುವ ತೀರ್ಮಾನ.  ಭರಣಿ, ಕೃತ್ತಿಕ ನಕ್ಷತ್ರ ತಪ್ಪಿಸಿ ಕೊಯ್ಲಿನ ದಿನದ ನಿರ್ಧಾರ.  ಪೂರ್ವದಿಂದ ಕೊಯ್ಯುತ್ತಾರೆ.  ಪಶ್ಚಿಮದಿಂದ ಕೊಯ್ದರೆ ಕುಡುಗೋಲು ಮೊಂಡಾಗುತ್ತದೆ ಎನ್ನುತ್ತಾರೆ ತಡಗಳಲೆ ಶಾಂತಪ್ಪಗೌಡರು.

ಕೊಯ್ಲಿಗೆ ಮೊದಲು ಬೀಜಕ್ಕಾಗಿ ತೆನೆಗಳನ್ನು ಆಯ್ಕೆ ಮಾಡುತ್ತಾರೆ.  ಆಯ್ಕೆಯ ವಿಧಾನ ವಿಭಿನ್ನ.  ಬೇರೆ ಬೇರೆ ತಳಿಗಳಿಗೆ ಬೇರೆ ಬೇರೆ ಪದ್ಧತಿ.  ಬುಡ ದಪ್ಪವಾಗಿರಬೇಕು.  ಹೆಚ್ಚು ತೆಂಡೆಯೊಡೆದಿರಬೇಕು.  ಕೈಯಲ್ಲಿ ಮುಷ್ಟಿ ಹಿಡಿದರೆ ಕೈ ತುಂಬಬೇಕು.  ಕಾಳಿನ ಮೈಮೇಲೆ ಚುಂಗುಗಳಿರಬೇಕು.  ಗೋಣು ಮುರಿದಿರಬಾರದು, ಕಾಂಡ ಕೊರೆದಿರಬಾರದು. ಹೀಗೆ ಏನೆಲ್ಲಾ ಗಮನಿಸುತ್ತಾರೆ. ಬದುಗಳು ಚೆನ್ನಾಗಿರಬೇಕು.  ಗಡಿ ಅಂಚಿನ ಸಸಿಗಳಾಗಿರಬಾರದು.  ಗೊಬ್ಬರ ಹೆಚ್ಚು ಸಿಕ್ಕ ಜಾಗವಾಗಿರಬಾರದು.  ಬರ ಬಿದ್ದ, ನೆರೆ ಬಂದ, ರೋಗಪೀಡಿತ ಗದ್ದೆಗಳಿಂದ ಬೀಜದ ಆಯ್ಕೆ ಮಾಡಬಾರದು.    ಪ್ರತಿಬಾರಿಯೂ ಬೇರೆ ಬೇರೆ ತಳಿಯ ಭತ್ತ ಬಿತ್ತಿದರೆ ಬೆರಕೆ ಕಾಳುಗಳು ಕಡಿಮೆ ಎನ್ನುತ್ತಾರೆ ಕೆರೆಕೊಪ್ಪದ ದೇವೇಂದ್ರ.

ಕೊಯ್ಲು ಮಾಡಿದ ಸಸಿಗಳನ್ನು ಪುಟ್ಟ ಪುಟ್ಟ ಹೊರೆ ಮಾಡಿ ಗದ್ದೆಯಲ್ಲೇ ಮೂರು ದಿನ ಒಣಗಲು ಬಿಡುತ್ತಾರೆ.  ಮೋಡ, ಮಳೆಯಾದರೆ ಮುಗ್ಗಲು ಬಂದು ಕಾಳೆಲ್ಲಾ ಹಾಳು.  ಬೆಲೆ ಇಳಿದುಹೋಗುತ್ತದೆ.  ತಕ್ಷಣ ಉಪಯೋಗಿಸಿದರೆ ಹಾನಿ ಇಲ್ಲ.  ಮುಗ್ಗಲು ಭತ್ತ ನೀರು ಸೇರಿ ಆರಿದ್ದಕ್ಕಾಗಿ ಅಕ್ಕಿಯೂ ಕೆಂಪಾಗುತ್ತದೆ.  ಬೆರಕೆ ಭತ್ತದಂತೆ ಕಾಣಿಸುತ್ತದೆ.  ಒಂದು ಪ್ರಮಾಣದ ಅನ್ನ ಮಾಡಲು ವಾಡಿಕೆಗಿಂತ ಕಡಿಮೆ ಅಕ್ಕಿ ಸಾಕು.  ಸ್ವಲ್ಪ ಉಂಡರೂ ಬೇಗ ಹೊಟ್ಟೆ ತುಂಬುತ್ತದೆ.  ಅವಲಕ್ಕಿ ಮಾಡಿಸಿದರೆ ವಿಶೇಷ ರುಚಿ.  ಬಣ್ಣ ಕೆಂಪು, ಹಳದಿ ಬೆರಕೆಯಾಗಿರುತ್ತದೆ.  ಮುಗ್ಗಲು ಭತ್ತವನ್ನು ಹೆಚ್ಚು ದಿನ ಇಡಲು ಬರುವುದಿಲ್ಲ.

ಪುಟ್ಟ ಹೊರೆ (ಮೆದೆ)ಯ ಕಾಳೆಲ್ಲಾ ಒಣಗಿದ ಮೇಲೆ ಗೊಣವೆ ಹಾಕುತ್ತಾರೆ.  ಗೊಣಬೆ ಹಾಕಲು ಚತುರತೆ ಬೇಕು.  ನೋಡಲು ವೃತ್ತಾಕಾರವಾಗಿ ತೋರುವ ಗೊಣಬೆ ತುದಿಯಲ್ಲಿ ಚೂಪಾಗಿ ಪಿರಮಿಡ್ ಆಕಾರವಿರುತ್ತದೆ.   ಮೆದೆಯ ಬುಡ ಹೊರಗೆ ಬಂದು ತುದಿಯ ಕಾಳೆಲ್ಲಾ ಒಳಸೇರುವಂತೆ ಎಷ್ಟು ದಿನ ಬಿಟ್ಟರೂ ಅಲುಗಾಡದೆ, ಜರಿಯದೆ, ಬೀಳದೆ ಸ್ಥಿರವಾಗಿರುವಂತೆ ಗೊಣಬೆ ಕಟ್ಟುತ್ತಾರೆ.  ತುದಿಯಲ್ಲಿ ಜುಟ್ಟು ಕಟ್ಟಿ ಬೆನಕಪ್ಪನನ್ನು ಇರಿಸುತ್ತಾರೆ.

ಗೊಣಬೆ ಜೋಡಿಸುವ ವಿಶಿಷ್ಟ ತಂತ್ರದಿಂದಾಗಿ ಎಷ್ಟೆಲ್ಲಾ ಮಳೆ ಬಂದರೂ ಒಳಗಿನ ಕಾಳು ನೆನೆಯುವುದಿಲ್ಲ.   ಗೊಣಬೆಯ ಮೇಲೆ ಬಿದ್ದ ನೀರೆಲ್ಲಾ ಜಾರಿ ಬಿದ್ದುಹೋಗುತ್ತದೆ.  ಸ್ವಲ್ಪವೂ ಒಳಸೇರುವುದಿಲ್ಲ.  ಹಂದಿಗಳು ಗೊಣಬೆಯೊಳಗೆ ನುಗ್ಗಲು ಸಾಧ್ಯವಾಗದು.  ಕದಿಯುವುದೂ ಸುಲಭವಲ್ಲ.

ಚಳಿಗಾಲ ಕಳೆದು ಬಿಸಿಲು, ಗಾಳಿ ಹೆಚ್ಚುವವರೆಗೂ ಗೊಣಬೆಗಳನ್ನು ಹಾಗೇ ಬಿಡುತ್ತಾರೆ.   ಕಬ್ಬಿನ ಆಲೇಮನೆ ಮಾಗಿ ಉಳುಮೆ, ಮದುವೆ ಕಾರ್ಯಗಳೆಲ್ಲ ಮುಗಿದ ಮೇಲೆ ಭತ್ತದ ಸಂಸ್ಕರಣೆಯ ಕೆಲಸ.

ಗೊಣಬೆಯ ಪಕ್ಕ ಕಣ ಮಾಡುತ್ತಾರೆ.  ಸುಮಾರು ಐದು ಮೀಟರ್ ಜಾಗವನ್ನು ಸ್ವಚ್ಛ ಮಾಡಿ ಸಗಣಿಯಿಂದ ಸಾರಿಸುತ್ತಾರೆ.  ಉಬ್ಬುತಗ್ಗುಗಳನ್ನು ಸರಿಪಡಿಸುತ್ತಾರೆ.  ಹಿಂದೆ ಮರದ ಮಂಚ ತಯಾರಿಸಿ ಅದಕ್ಕೆ ಬಡಿದು ಬಡಿದು ಹುಲ್ಲಿನಿಂದ ಕಾಳು ಬೇರೆ ಮಾಡುತ್ತಿದ್ದರು.  ಕಣದ ಮಧ್ಯೆ ಕಂಬ ನಿಲ್ಲಿಸಿ ಅದಕ್ಕೆ ನಾಲ್ಕೈದು ಎತ್ತುಗಳನ್ನು ಕಟ್ಟಿ ಸುತ್ತು ಹೊಡೆಸುತ್ತಾರೆ.  ಕಾಲಡಿಯಲ್ಲಿ ಸಿಕ್ಕ ಕಾಳು-ಹುಲ್ಲು ಬೇರೆ ಬೇರೆ ಆಗುತ್ತದೆ.

ರೌಂಡ್‌ಗಲ್ಲು ಬಂದಮೇಲೆ ಕಾಳು ಬಿಡಿಸುವಿಕೆ ಸುಲಭವಾಯಿತು.   ಕಣದ ಮಧ್ಯೆ ಹುಲ್ಲು ಹರಡಿ ಕಲ್ಲಿಗೆ ಎತ್ತುಗಳನ್ನು ಕಟ್ಟಿ ಹುಲ್ಲಿನ ಮೇಲೆ ಅರ್ಧಗಂಟೆ ಸುತ್ತಿಸಿದರೆ ಹುಲ್ಲು-ಕಾಳು ಬೇರೆ ಬೇರೆ ಆಗುತ್ತದೆ.  ಹುಲ್ಲಿನಲ್ಲಿ ಉಳಿವ ಕಾಳಿನ ಪ್ರಮಾಣವೂ ಕಡಿಮೆ.

ಇತ್ತೀಚೆಗೆ ಟ್ರಾಕ್ಟರ್‌ಗಳನ್ನೂ ಈ ಕೆಲಸಕ್ಕೆ ಬಳಸುತ್ತಾರೆ.  ಸಂಜೆ ಹಾಗೂ ಬೆಳಗಿನ ಜಾವದ ಗಾಳಿಗೆ ಭತ್ತ ತೂರಿ ಕಾಳು, ಜೊಳ್ಳು ಬೇರೆ ಮಾಡುತ್ತಾರೆ.  ಬಿದಿರಿನ ಮೊರದಿಂದ ಜೋರಾಗಿ ತೂರಿದಾಗ ಜೊಳ್ಳು ಬುಡಕ್ಕೆ ಬಿದ್ದರೆ ಕಾಳೆಲ್ಲಾ ತುದಿಯಲ್ಲಿ ಹರಡುತ್ತದೆ.  ತುಟ್ಟತುದಿಯಲ್ಲಿ ಬಿದ್ದ ಕಾಳುಗಳನ್ನ ಬೀಜಕ್ಕೆ ಎತ್ತಿಡುವ ಪದ್ಧತಿಯಿದೆ.  ಎತ್ತರದಿಂದ ತೂರಿದಾಗ ಜೊಳ್ಳು ಹಾರಿಹೋದರೆ ಗಟ್ಟಿಕಾಳು ಬುಡದಲ್ಲೇ ರಾಶಿಯಾಗುತ್ತದೆ.

ಕಣದ ಹಬ್ಬದ ದಿನ ಹೊಸ ಭತ್ತ ಹುರಿದು ಅರಳು ಮಾಡಿ ಅಕ್ಕಿ ರೊಟ್ಟಿ ಮಾಡಿ ರಾಶಿ ಪೂಜೆ, ಹುಲ್ಲು ಪೂಜೆ, ಕೃಷಿ ಉಪಕರಣ, ಎತ್ತುಗಳ ಪೂಜೆ ಮಾಡುತ್ತಾರೆ.  ರಾಶಿ ಭತ್ತ ಅಳೆದು ಚೀಲ ತುಂಬುತ್ತಾರೆ.

ಬಿದಿರಿನ ಕಣಜದ ನಿರ್ಮಾಣ ಒಳಗೆ ಹೊರಗೆ ಸಗಣಿ-ಮಣ್ಣು ಸಾರಣೆ, ಅಡಿಯಲ್ಲಿ ಲಕ್ಕಿಸೊಪ್ಪು, ನೀಲಗಿರಿ ಸೊಪ್ಪು ಹರಡುತ್ತಾರೆ.  ಮೇಲಿನಿಂದ ಭತ್ತ ಸುರುಗಿ ತುಂಬಿದ ಮೇಲೆ ಮಾವಿನಸೊಪ್ಪು ಹರಡಿ ಗಾಳಿಯಾಡದಂತೆ ಮುಚ್ಚುತ್ತಾರೆ.  ಕಣಜದಲ್ಲಿ ರಕ್ಷಿಸಿಟ್ಟ ಭತ್ತ ಎರಡು ಮೂರು ವರ್ಷಗಳವರೆಗೆ ಹಾಳಾಗದು ಎನ್ನುತ್ತಾರೆ ತಡಗಳಲೆ ಶಾಂತಪ್ಪನವರು.

…..ಮುಂದುವರೆಯುವುದು

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*