ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಗಿರೀಶರ ಛಲಕ್ಕೆ ಇಂಗಿದ ನೀರು

ಉತ್ತರ ಕರ್ನಾಟಕದಲ್ಲಿ ಅಂತರ್ಜಲ ಕುಸಿತದ ಪರಿಣಾಮ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಅಕಾಲಿಕ ಮಳೆ, ಹೂಳು ತುಂಬಿದ ಕೆರೆಗಳು ಇಲ್ಲಿ ಸಾಮಾನ್ಯ. ಇವೆಲ್ಲದರ ಮಧ್ಯೆಯೂ ಒಬ್ಬ ಯುವಕ ಆಸಕ್ತಿಯಿಂದ ಜಲ ಇಂಗಿಸುವ ಹಾಗೂ ಮಣ್ಣಿನ ಸವಕಳಿ ತಪ್ಪಿಸುವ ನಿಟ್ಟಿನಲ್ಲಿ ಅಂತರ್ಜಲ ಗುಂಡಿ ನಿರ್ಮಿಸಿ ಯಶ ಕಂಡಿದ್ದಾರೆ.

IMG-20150909-WA0017ಇಂಜಿನಿಯರ್ ಕಲಿತು ತರಗತಿಗಳಲ್ಲಿ, ಕಾರ್ಖಾನೆಗಳಲ್ಲಿ ಕೆಲಸ ಮಾಡಬೇಕಾಗಿದ್ದ ಬೈಲಹೊಂಗಲ ಪಟ್ಟಣದ ಯುವಕ ಗಿರೀಶ ಹಲಸಗಿಯವರು ಕೃಷಿ ಕಾಯಕದ ಜೊತೆಗೆ ಅಂತರ್ಜಲ ಇಂಗಿಸುವ ಮೂಲಕ ಹಳ್ಳಿಯ ಜನರಿಗೆ ಮಾದರಿಯಾಗಿದ್ದಾರೆ. ತರಗತಿಯಲ್ಲಿ ಕಲಿತ ತಾಂತ್ರಿಕತೆಗಳ ಜೊತೆಗೆ ಇವರು ಚಿಕ್ಕವರಿದ್ದಾಗ ತಂದೆ ಮಹಾದೇವಪ್ಪ ಮಾಡುತ್ತಿದ್ದ ಹತ್ತು ಹಲವು ಬಗೆಯ ಕೃಷಿ ಕೌಶಲಗಳನ್ನು ಈಗ ಅಳವಡಿಸಿಕೊಂಡು ಪರಂಪರೆಯ ಜ್ಞಾನದ ನೆರವನ್ನೂ ಪಡೆಯುತ್ತಿದ್ದಾರೆ. ಅದರಲ್ಲಿ ಒಂದು ಕೌಶಲ ಈ ಅಂತರ್ಜಲ ಗುಂಡಿ.

ಗಿರೀಶರವರಿಗೆ ೬ ಎಕರೆ ಎರೆ ಭೂಮಿ ಇದ್ದು, ಇಲ್ಲಿ ಶೇಂಗಾ, ಹತ್ತಿ, ಕಡಲೆ, ಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಇತ್ತೀಚಿಗೆ ಬೇಕಾಗುವಷ್ಟು ಮಳೆIMG_20150623_145634 ಬರುತ್ತಿಲ್ಲ, ಅಲ್ಲದೆ ಸಾವಿರ ಅಡಿ ಆಳದ ಬೋರ್‌ವೆಲ್ ಕೊರೆದರೂ ನೀರು ಸಿಗುವುದು ದುರ್ಲಭ. ಇನ್ನು ಮಳೆ ಬಂದಾಗಲೂ ಸಹ ಅದರ ರಭಸಕ್ಕೆ ಫಲವತ್ತಾದ ಮಣ್ಣು ಕೊಚ್ಚಿ ಹೋಗುವುದು ಇಲ್ಲಿ ಸಾಮಾನ್ಯ.

ಹೀಗಿರುವಾಗ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಗಿರೀಶ್ ಅವರ ತಂದೆ ಹೇಳುತ್ತಿದ್ದ ಹಲವು ನೀರು ಇಂಗಿಸುವ ಹಾಗೂ ಭೂಮಿಯ ಸವಕಳಿ ತಪ್ಪಿಸುವ ಕೌಶಲಗಳನ್ನು ಗಿರೀಶರು ಹತ್ತಿರದಿಂದ ಕೇಳಿದ್ದರು. ಆ ತಂತ್ರಗಳನ್ನು ಮರು ಶೋಧಿಸಿದರು. ತನ್ನ ಜಮೀನು ಹಾಗೂ ಆಸುಪಾಸು ನೀರಿನ ಇಂಗುವಿಕೆ ಆಗಬೇಕು ಎಂದು ನಿರ್ಧರಿಸಿದರು.

೨೦೧೩ರ ಕೊನೆಯಲ್ಲಿ ಪ್ರಯೋಗ ಮಾಡಬೇಕು ಎಂದು ಮುಂದಾಗಿ ತಮ್ಮ ಜಮೀನಿನಲ್ಲಿ ಮಳೆ ಬಂದಾಗ ಪೋಲಾಗಿ ಹೋಗುತ್ತಿದ್ದ ನೀರನ್ನು ತಡೆದುantarjala ಇಂಗಿಸುವ ಕಾರ್ಯಕ್ಕೆ ಕೈ ಹಾಕಿದರು. ಅದರಂತೆ, ೪ ಅಡಿ ಅಗಲ, ೮ ಅಡಿ ಉದ್ದ ಇರುವ ಗುಂಡಿಯನ್ನು ತೆಗೆದು ಕಲ್ಲು, ಕಡಿ, ಮರಳು ಸೇರಿಸಿದರು. ಹೊಲದಲ್ಲಿ ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸಿ, ೩೦ ಅಡಿ ಉದ್ದದ ಕೊಳವೆಯನ್ನು ಹಿಂದಿನ ಗುಂಡಿಗೆ ಜೋಡಿಸಿದರು. ಇದಕ್ಕೆ ಇವರು ಮಾಡಿದ ಖರ್ಚು ೩೫ ರಿಂದ ೪೦ ಸಾವಿರ. ಇದು ಭವಿಷ್ಯದ ನೀರಿಗೆ ಡಿಪಾಸಿಟ್ ಎನ್ನುವುದು ಅವರ ಗಮನಕ್ಕಿದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಅಂತರ್ಜಲದ ಪ್ರಮಾಣದಲ್ಲಿ ತುಸು ಏರಿಕೆಯಾಗಿದೆ. ಇವರ ಹೊಲದ ಸುತ್ತ-ಮುತ್ತಲಿನ ಕೆಲವು ಬೋರವೆಲ್‌ಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಜೊತೆಗೆ ರಭಸದ ಮಳೆಗೆ ಕೊಚ್ಚಿಕೊಂಡು ಹೋಗುತ್ತಿದ್ದ ಫಲವತ್ತಾದ ಜಮೀನಿನ ಮಣ್ಣು ಈಗ ಹೊಲದಲ್ಲೇ ಉಳಿಯುತ್ತಿದೆ. ಜಮೀನು ಸಮತಟ್ಟಾಗಿದೆ. ಪ್ರತಿ ವರ್ಷ ಜಮೀನು ಸಮ ಮಾಡುವ ಕೆಲಸ ಕೂಡಾ ಈಗ ನಿಂತಿದೆ.

ಹಳ್ಳಕ್ಕೆ ಸೇರುವ ನೀರನ್ನು ತಡೆದರು

ಬೈಲಹೋಂಗಲದಲ್ಲಿ ಬೆಳೆಗೆ ತಕ್ಕಷ್ಟು ಮಾತ್ರ ಮಳೆಯಾಗುವುದು. ಇನ್ನು ಹವಾಮಾನ ವೈಪರಿತ್ಯದಿಂದ, ಅಕಾಲಿಕ ಮಳೆ ಹಾಗೂ ೨-೩ ವರ್ಷಕ್ಕೊಮ್ಮೆ ಇಲ್ಲಿ ಬರ ಸಾಮಾನ್ಯ. ಆದ್ದರಿಂದ, ಬಿದ್ದ ಮಳೆಯ ನೀರು ಪೋಲಾಗಿ ಹಳ್ಳ ಸೇರುವುದು ತಪ್ಪುವುದಿಲ್ಲ. ಹೀಗಾಗಿ, ರೈತರು ಈ ಪೋಲಾಗುವ ಎಲ್ಲ ನೀರನ್ನೂ ತಡೆದರೆ, ಇಲ್ಲಿ ಅವರು ಕೊರೆಸಿದ ಬೋರ್‌ವೆಲ್‌ಗಳ ಮರುಪೂರಣವಾಗಬಹುದು. ಈ ನಿಟ್ಟಿನಲ್ಲಿ ಗಿರೀಶ್ ಪ್ರಯತ್ನ ಮಾಡಿ ತೋರಿಸಿ ನೀಡಿ ಯಶಕಂಡಿದ್ದಾರೆ.

ಚಿತ್ರ-ಲೇಖನ: ವಿನೋದ ರಾ ಪಾಟೀಲ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*