ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿಯ ಕನಸಿಗೆ ಬಲ ತುಂಬಿದ ಉಚಿತ ಜಲ

ಕೃಷಿಕ ರಿತೇಶ್ ಶೆಟ್ಟರು ಉಚಿತ ನೀರು ಕೊಡುತ್ತಾರೆ. ಸರಕಾರ ಉಚಿತ ವಿದ್ಯುತ್ ಕೊಡುತ್ತದೆ. ಸುತ್ತಲಿನ ಕೃಷಿಕರು ನೆಮ್ಮದಿಯಿಂದ ಬೇಸಿಗೆ ಬೆಳೆ ಬೆಳೆಯುತ್ತಾರೆ.   ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಸೂಡ ಗ್ರಾಮದಲ್ಲಿ ಸೃಷ್ಟಿಯಾಗಿರುವ ಹಸಿರು ಸ್ವರ್ಗದ ಹಿಂದೆ ಇಂಥದ್ದೊಂದು ಸೊಗಡಿನ ಸನ್ನಿವೇಶಗಳ ಜೋಡಣೆಯಿದೆ. ವಿಶೇಷವೆಂದರೆ, ಅದಕ್ಕಿಂತಲೂ ಸೊಗಸಾದ ಕೊಡು ಕೊಳ್ಳುವಿಕೆಯ ಹಿನ್ನೆಲೆಯೂ ಇದಕ್ಕಿದೆ. ಅದನ್ನು ರೈತ ಕುಂಬ್ಳೆ ಹೊಸಮನೆಯ ರಿತೇಶ್ ಶೆಟ್ಟರ ಬಾಯಲ್ಲೇ ಕೇಳುವುದು ಚೆಂದ.

DSC00340 - 1‘ಸುತ್ತಲಿನ ಊರುಗಳ ಹಾಗೆಯೇ ನಮ್ಮೂರ ಯುವಕರೂ ಮುಂಬಯಿ, ಬೆಂಗಳೂರು, ಚೆನ್ನೈನ ದಾರಿ ಹಿಡಿದುದರಿಂದ ಒಂದೊಮ್ಮೆ ಹಸಿರ ಸಿರಿ ಹೊದ್ದು, ತೆನೆಗಳಿಂದ ತೂಗುತ್ತಿದ್ದ ಭತ್ತದ ಗದ್ದೆಗಳು ಪಾಳು ಬೀಳಲಾರಂಭಿಸಿದವು. ಹೀಗೆ ಪಾಳು ಬಿದ್ದ ಭೂಮಿಯ ಮೇಲೆ ಸರಕಾರದ ಕಣ್ಣೂ ಬಿತ್ತು. ೨೦೧೦ರಲ್ಲಿ ನಮ್ಮೂರು ಸೇರಿದಂತೆ ಇಲ್ಲಿನ ಒಟ್ಟು ೧೧೫೦ ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಅಧಿಸೂಚಿಸಿತು. ಇದನ್ನು ಬರಡುಭೂಮಿ ಎಂದು ಸೂಚಿಸಿ ಭೂಸ್ವಾಧೀನಕ್ಕೆ ನಿಂತಿತ್ತು ಸರಕಾರ. ಆಗ ನಂದಳಿಕೆ ಚಾವಡಿ ಅರಮನೆಯ ಸುಹಾಸ್ ಹೆಗ್ಡೆಯವರ ನೇತೃತ್ವದಲ್ಲಿ ಜನಾಂದೋಲನ ನಡೆಯಿತು. ಸರಕಾರ ಹೆಜ್ಜೆ ಸರಿಸಿತು. ಅಧಿಸೂಚನೆ ರದ್ದಾಯಿತು. ಆ ಹೋರಾಟ ನಡೆಯದಿರುತ್ತಿದ್ದರೆ ಈ ಜಾಗದಲ್ಲೀಗ ಹಸಿರ ಸಿರಿಯ ಬದಲು ಕಪ್ಪು ಹೊಗೆ ಉಗುಳುವ ಕಾರ್ಖಾನೆಗಳು ಸಮೀಪದಲ್ಲಿರುವ ಸೂಡ ಹೊಳೆಗೆ ವಿಷಯುಕ್ತ ನೀರು ಚೆಲ್ಲುತ್ತಿರುತ್ತೇನೋ…”, ಎನ್ನುತ್ತಾರೆ ರಿತೇಶ್ ಶೆಟ್ಟರು.

“ಈ ಹೋರಾಟದ ಬಳಿಕ ಇಲ್ಲಿನ ಮಂದಿ ಪಾಠ ಕಲಿತರು. ಲಾಭ ಗಿಟ್ಟದಿದ್ದರೂ ಪರವಾಗಿಲ್ಲ. ಇರುವ ಭೂಮಿ ಉಳಿಸಲು ಕೃಷಿ ಮಾಡುವುದೇ ಲೇಸು ಎಂದು ಒಂದಿಷ್ಟು ಮಂದಿ ಗಂಭೀರವಾಗಿ ಕೊಂಚ ಸಮಯವನ್ನು ಮಣ್ಣಿನ ಕೆಲಸಕ್ಕೆ ಮೀಸಲಿಟ್ಟರು. ಆಗ ನನಸಾಯಿತು ಉಚಿತ ನೀರು ಪೂರೈಸುವ ನನ್ನ ಕನಸು. ಅಜ್ಜನ ಕಾಲದಲ್ಲೂ ಕೃಷಿಗಾಗಿ ಬೇರೆಯವರಿಗೆ ಉಚಿತವಾಗಿ ನೀರು ಹಂಚಿದ್ದು ಉಂಟಂತೆ. ಆದರೆ ನನ್ನ ಈ ಸೇವೆಗೀಗ ಕೇವಲ ಐದು ವರ್ಷಗಳಾಗಿದೆಯಷ್ಟೇ. ೧೦ ಅಶ್ವಶಕ್ತಿಯ ಪಂಪ್‌ವರೆಗೆ ಸರಕಾರ ಉಚಿತ ವಿದ್ಯುತ್ ನೀಡುತ್ತದೆ. ನಾನು ನೀರು ಕೊಡುತ್ತೇನೆ. ನನ್ನ ಹತ್ತು ಎಕರೆ ಜತೆಗೆ ಸುತ್ತಲಿನ ರೈತರ ಸುಮಾರು ೧೦ ಎಕರೆ ಜಮೀನಿನ ಕೃಷಿಕರೂ ನೆರವಾಗಲು ಸಾಧ್ಯವಾಗುವ ಸಂತೃಪ್ತಿ ಒದಗಿಸುತ್ತಿದೆ.

DSC00331ಹಾಗಂತ, ನಾನು ಹಂಚುತ್ತಿರುವ ನೀರಿನಿಂದ ಆ ಕೃಷಿಕರಿಗೆ ಮಾತ್ರ ಲಾಭವಾಗಿಲ್ಲ. ಸ್ವತಃ ನನಗೂ ಅನುಕೂಲವಾಗಿದೆ. ನಾನೊಬ್ಬನೇ ಕಳೆದ ೧೭ ವರ್ಷಗಳಿಂದ ೮-೯ ಎಕರೆ ಪಿತ್ರಾರ್ಜಿತ ಜಮೀನಿನಲ್ಲಿ ಕೃಷಿ ಮಾಡುತ್ತ ಬಂದಿದ್ದೆ. ಆದರೆ ಕಾಡುಕೋಣ, ಹಂದಿ, ನವಿಲು, ಕೋತಿಗಳಂಥ ವನ್ಯಪ್ರಾಣಿಗಳ ಕಾಟದಿಂದ ಹೈರಾಣಾಗಿದ್ದೆ. ಬೆಳೆದಿದ್ದು ಕೈಗೆಟಕುವ ಖಾತ್ರಿ ಇರಲಿಲ್ಲ. ರಾತ್ರಿ ಹಗಲು ಕಾವಲಿರಬೇಕಿತ್ತು. ಆದರೆ ಈಗ ನನ್ನ ಜತೆಗೆ ಅನೇಕ ಕೃಷಿಕರು ಕಾವಲಿರುವುದರಿಂದ ಬೆಳೆಗಳ ರಕ್ಷಣೆ ಮಾಡಿಕೊಳ್ಳುವುದು ಸುಲಭವಾಗಿದೆ. ನಾವೆಲ್ಲ ಬೇಸಾಯ ಮಾಡುವುದರಿಂದ ಸುತ್ತಲಿನ ಅಂತರ್ಜಲ ಹೆಚ್ಚಾಗಿದೆ. ಎಲ್ಲರ ಬಾವಿ, ಕೆರೆಗಳಲ್ಲೂ ಈಗ ಬೇಸಿಗೆಯಲ್ಲೂ ನೀರು ಬತ್ತುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ವರ್ಷವಿಡೀ ಹಸಿರು ಸಿರಿ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ನಮ್ಮೂರ ಮಂದಿಗೆ, ಈ ಊರಿಗೆ ಬಂದವರಿಗೆ ಲಭ್ಯವಾಗುತ್ತಿದೆ.

ಇದೆಲ್ಲ ಬೆಳವಣಿಗೆಗೆ ಕಾರಣವಾಗಿದ್ದು ಸೂಡ ಹೊಳೆಗೆ ಕಟ್ಟಿದ ಕಿಂಡಿ ಅಣೆಕಟ್ಟು. ಅದನ್ನು ಕಟ್ಟಿದ ಮೇಲೆ ನಮ್ಮೂರಿನ ಕೃಷಿಕರ ಸಮಸ್ಯೆಗೆ ಪರಿಹಾರ ಸಿಕ್ಕಿತು. ಹಿಂದೆಲ್ಲ ಹೊಳೆ ಪಕ್ಕದಲ್ಲೇ ಇದ್ದರೂ ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತಿತ್ತು. ಕಾರ್ತಿ ಮತ್ತು ಎಡಕೊಳಕೆಯ ನಂತರ ಗದ್ದೆಗಳು ಹಡಿಲು ಬೀಳುತ್ತಿದ್ದವು. ಈಗ ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕವಾಗಿದ್ದರೂ ಮನೆಯಿಂದ ಫರ್ಲಾಂಗು ದೂರದಲ್ಲಿರುವ ಹೊಳೆಯ ಬದಿಯಿಂದ ೧೦ ಅಶ್ವಶಕ್ತಿಯ ಪಂಪ್‌ಸೆಟ್ ಮೂಲಕ ನೀರು ಧಾರಾಳವಾಗಿ ಸಿಗುತ್ತಿದೆ. ಏಪ್ರಿಲ್ ತಿಂಗಳ ಬಿರುಬೇಸುಗೆಯಲ್ಲೂ ಇಲ್ಲಿನ ಗದ್ದೆಗಳು ಹಚ್ಚಹಸಿರಾಗಿ ಕಾಣಿಸಲು ಇದೇ ಕಾರಣ,” ಹೀಗೆಂದು ಮುಗುಳ್ನಗುವ ಪರಿಸರ ಪ್ರೇಮಿಯೂ ಆಗಿರುವ ಶೆಟ್ಟರ ಮುಖದಲ್ಲೊಂದು ಆತ್ಮತೃಪ್ತಿ ಕಾಣಿಸುತ್ತದೆ.

DSC00336ತಮ್ಮದಷ್ಟೇ ಅಲ್ಲ, ಸುತ್ತಮುತ್ತಲಿನ ರೈತರ ಗದ್ದೆಗಳೂ ಹಸಿರಾಗಿರಬೇಕೆಂಬ ತುಡಿತ ಅವರದ್ದು. ಒಂದೊಮ್ಮೆ ನೀರಾಶ್ರಯವಿಲ್ಲದೆ ಮಳೆಗಾಲದ ನಂತರ ಒಣಗಿರುತ್ತಿದ್ದ ಗದ್ದೆಗಳಿಗೆ ಉಚಿತವಾಗಿ ನೀರು ಪೂರೈಸುವ ಅವರ ಚಿಂತನೆಯಿಂದ ಅವರಿಗೂ, ಇತರೆ ರೈತರಿಗೂ ಅನುಕೂಲವಾಗಿದೆ. ಕೂಡಿ ಬಾಳುವ ಯೋಚನೆ ನನಸಾಗಿಸಲು ನೆರೆಯ ರೈತರ ಗದ್ದೆಗಳಿಗೆ ತಾವೇ ಖರ್ಚು ಮಾಡಿ ಪೈಪು ಹಾಕಿಸಿದರು. ಅಲ್ಲಿನ ಗದ್ದೆಗಳಲ್ಲಿ ನೀರು ಹರಿದು ಹಸಿರಾಗುವಾಗ ಸಿಗುವ ಸಂತೃಪ್ತಿ ದೊಡ್ಡದು. ಆಚೆ ಆರಗದ ಮನೆಯ ವಸಂತಣ್ಣ ಉದ್ದು, ಹುರುಳಿ ಥರಾವರಿ ತರಕಾರಿ ಸೊಪ್ಪು ಬೆಳೆದರು. ಈಚೆ ಮನೆಯವರು ಎಳ್ಳು ಬೆಳೆದರು. ಹಲವರ ಬದುಕಿಗೆ ನೆಮ್ಮದಿ, ಆಧಾರ ಸಿಕ್ಕಿತು. ವಾತಾವರಣ ತಂಪಾಯಿತು. ನೀರಿನ ತೇವಾಂಶದಿಂದ ಬಾವಿಗಳ ಜಲಮಟ್ಟ ಏರಿತು. ಕುಡಿಯುವ ನೀರಿನ ಸಮಸ್ಯೆ ನೀಗಿತು. ನೀರು ಕೊಟ್ಟು ಹಸಿರು ಹಂಚುವ ಕೆಲಸದಲ್ಲಿ ಸಿಗುವ ಸಂತೋಷಕ್ಕಿಂತ ದೊಡ್ಡದೇನಿದೆ ಎಂಬ ಶೆಟ್ಟರ ಪ್ರಶ್ನೆಗೆ, ಪ್ರಶ್ನೆಯಲ್ಲೇ ಉತ್ತರ ಅಡಗಿದೆ.

ಸೂಡ ಸರಕಾರಿ ಪ್ರೌಢಶಾಲೆಯ ಹೆಡ್ಮೇಷ್ಟ್ರು

???????????????????????????????ಅಪ್ಪಟ ಕೃಷಿ ಕುಟುಂಬದವರಾದರೂ ವೃತ್ತಿಯಲ್ಲಿ ದೈಹಿಕ ಶಿಕ್ಷಕರಾದ ರಿತೇಶ್ ಶೆಟ್ಟರು ಕಳೆದ ಕೆಲ ವರ್ಷಗಳಿಂದ ಸೂಡ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಡ್ವೆ ಪಟ್ಟಿಂಜೆಗುತ್ತು ಮತ್ತು ಎರ್ಮಾಳು ಕಲ್ಸಂಕಗುತ್ತು ಮೂಲದ ರಿತೇಶರ ಹಿರಿಯರು ೪೭ ವರ್ಷಗಳ ಹಿಂದೆ ಸೂಡಾದಲ್ಲಿ ನೆಲೆಯಾಗಿದ್ದರಂತೆ. ಪಿತ್ರಾರ್ಜಿತವಾಗಿ ಬಂದ ೧೦ ಎಕರೆ ಜಮೀನನ್ನು ರಿತೇಶರು ಉದ್ಯೋಗದ ಒತ್ತಡದ ನಡುವೆಯೂ ಅರಳಿಸಿದರು. ೮ ಎಕರೆಯಲ್ಲಿ ಭತ್ತ, ಅರ್ಧ ಎಕರೆಯಲ್ಲಿ ಬಾಳೆ, ೧,೫೦೦ ಅಡಕೆ ಗಿಡ, ಗದ್ದೆಯ ಬದುವಿನುದ್ದಕ್ಕೂ ಹಾಕಿದ ೫೦೦ಕ್ಕೂ ಅಕ ತೆಂಗು ಮತ್ತಿತರ ಬೆಳೆಗಳು, ಅದಕ್ಕೆ ಪೂರಕವಾಗಿ ರೂಪಿಸಿ ಹೈನೋದ್ಯಮ ಇವರಿಗೆ ಆದಾಯ ತಂದುಕೊಡುತ್ತಿದೆ. ಸೂಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆಯಾಗಿರುವ ರಿತೇಶ್ ಶೆಟ್ರ ಪತ್ನಿ ಸ್ಮಿತಾ ಕೂಡ ಪತಿ ಯಶಸ್ಸಿಗೆ ಪೂರಕವಾಗಿ ದುಡಿಯುತ್ತಿದ್ದಾರೆ.

ಕೃಷಿಯಲ್ಲಿ ಖುಷಿ ಕಾಣುವ ಶಿಕ್ಷಕ

ದೈಹಿಕ ಶಿಕ್ಷಕರಾಗಿ, ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ರಿತೇಶ್ ಶೆಟ್ರು ಕರ್ನಾಟಕ ರಾಜ್ಯದ ಪದವೀಧರ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರೂ ಹೌದು. ಎಲ್ಲ ಕೆಲಸಗಳಿಗೂ ಸೂಕ್ತ ಕಾಲಾವಕಾಶ ಹೊಂದಿಸಿಕೊಳ್ಳುವುದು ಇವರ ಯಶಸ್ಸಿನ ಗುಟ್ಟು. ದಶಕಗಳ ಹಿಂದಿನ ಭವ್ಯ ಗ್ರಾಮೀಣ ಬದುಕಿಗೆ ಸಾಕ್ಷಿಯಾಗಿರುವ ಇವರು ವಾಸವಿರು ತೊಟ್ಟಿಮನೆಯು ಸೂಡ ಗ್ರಾಮದ ಕುಂಬ್ಳೆ ಹೊಸಮನೆಯ ವಿಶೇಷಗಳಲ್ಲೊಂದು. ವರ್ಷಕ್ಕೊಮ್ಮೆ ದೂರದೂರಗಳಿಂದ ಕುಟುಂಬಿಕರು ಬಂದು ಇಲ್ಲಿ ಸೇರುತ್ತಾರೆ. ಆಗೆಲ್ಲ ಯಕ್ಷಗಾನವೋ, ಜಾನಪದ ನೃತ್ಯವೋ, ಪುಸ್ತಕ ಬಿಡುಗಡೆಯೋ, ಹೀಗೆ ಏನಾದರೊಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು ವಿಶೇಷ. ಊರವರೆಲ್ಲ ಆ ದಿನ ಕುಂಬ್ಳೆ ಹೊಸಮನೆಯ ವಿಶಾಲ ಅಂಗಳದ ಗದ್ದೆಯ ಅಂಚಿನಲ್ಲಿ ಸೇರುತ್ತಾರೆ.

ಚಿತ್ರ-ಲೇಖನ: ಸುನಿಲ್ ಪುತ್ತೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*