ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹೊಳೆ ದಂಡೆಯ ಹಾದಿಯಲ್ಲಿ……..

ಕೆಂಪಗಿನ ರಾಡಿ ನೀರು, ಕಸಕಡ್ಡಿ ಸಹಿತವಾಗಿ ಹೊಳೆ ತುಂಬಿ ಹರಿಯುತ್ತಿತ್ತು. ಅಕ್ಕಪಕ್ಕದ ಭತ್ತದ ಗದ್ದೆಗಳು ಮುಳುಗಿಹೋಗಿದ್ದವು. ನಮಗೆಲ್ಲಾ ಸುರಿವ ಮಳೆ, ಹರಿವ ಹೊಳೆ ಅದೇನೋ ಪುಳಕ ತರುತ್ತಿತ್ತು. ಊರಿನ ದನಕರುಗಳನ್ನು ಅಟ್ಟಿಸಿಕೊಂಡು ಬಂದ ದನ ಕಾಯುವ ಶಣ್ಯ ನಮ್ಮನ್ನು ಹೊಳೆಯಿಂದ ದೂರ ಇರಲು ಹೇಳಿದನು. ನಾಲ್ಕು ದಿನಗಳ ಹಿಂದೆ ಹೊಳೆ ಅಂಚಿನಲ್ಲಿ ಹುಲ್ಲು ಮೇಯುತ್ತಿದ್ದ ಎಮ್ಮೆ ಮಣಕವೊಂದು ಮಣ್ಣು ಹಿಸಿದು ಹೊಳೆಗೆ ಬಿದ್ದಿತ್ತು. ತೇಲುತ್ತಾ, ಈಜುತ್ತಾ ಬಿದಿರು ಮಟ್ಟಿಯಲ್ಲಿ ಸಿಕ್ಕಿಕೊಂಡ ಅದನ್ನು ಬದುಕಿಸಲು ಊರಿನವರೆಲ್ಲಾ ಸೇರಿ ಹರಸಾಹಸ ಮಾಡಬೇಕಾಯಿತು.

ಶಣ್ಯನ ತಲೆಯ ಮೇಲೆ ಬಿದಿರಿನ ಕಳಲೆಯ ನಾಲ್ಕು ತುಂಡುಗಳಿದ್ದವು. ಅಲ್ಲೇ ಇದ್ದ ಕೊಡಸಿನ ಮರದ ದಬ್ಬಣದಂತಹ ಕಾಯನ್ನು ಕೀಳತೊಡಗಿದ. ಕೊಡಸು ಎಷ್ಟೆಲ್ಲಾ ಔಷಧಿಗಳ ಆಗರ. ಇದರ ತೊಗಟೆಯ ಕಷಾಯ ಹೊಟ್ಟೆಯುರಿತ, ಭೇದಿ, ಜ್ವರ, ನಂಜು ಏನೆಲ್ಲಾ ಕಾಯಿಲೆಗಳಿಗೆ ರಾಮಬಾಣ. ಮಳೆಗಾಲದಲ್ಲಿ ಇದು ಹೂ, ಕಾಯಿಗಳನ್ನು ಬಿಡುತ್ತದೆ. ಇದರ ಹೂವಿನ ತಂಬುಳಿ, ಕಾಯಿರಸಗಳು ತುಂಬಾ ರುಚಿ. ಕೊಡಸಿನ ಕಾಯಿ ತುಂಬಾ ಕಹಿ. ಆದರೆ ಅದನ್ನು ಹುರಿದು ಮಾಡುವ ಪಲ್ಯ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ವರ್ಷದಲ್ಲಿemme tammanna ಒಮ್ಮೆ ಇದರ ಪದಾರ್ಥಗಳನ್ನ ಮಲೆನಾಡಿಗರು ತಿಂದೇ ತಿನ್ನುತ್ತಾರೆ.

ನಮ್ಮಿಂದ ತಪ್ಪಿಸಿಕೊಂಡಿದ್ದ ಮಂಜನನ್ನು ಕೂಗುತ್ತಾ ಸುತ್ತಲಿನ ಕಾಡಿನಲ್ಲಿ ಹುಡುಕತೊಡಗಿದೆವು. ಮಂಜ ನಮ್ಮನ್ನೆಲ್ಲಾ ಬಿಟ್ಟು ಏನೋ ವಾಸನೆ ಹಿಡಿದು ಕಾಡಿನಲ್ಲಿ ಕಣ್ಮರೆಯಾಗಿದ್ದ. ನಾವು ಕೂಕೂ ಎಂದು ಕೂಗು ಹಾಕುತ್ತಾ ಅವನ ಪ್ರತಿ ಸಿಳ್ಳೆಯನ್ನು ಅನುಸರಿಸಿ ಅವನಿದ್ದಲ್ಲಿಗೇ ಹೋದೆವು.   ಮುರಿದುಬಿದ್ದ ಕೊಳೆತ ಮರದ ಬಳಿ ಅದೇನೋ ಗೆಬರುತ್ತಿದ್ದ… ಇಶ್ಶೀ…. ಆ ಕೊಳೆತ ಮರದೊಳಗೆ ಏನೈತಿ ಅಂತ ಹುಡುಕಾಡುತ್ತೀಯೋ, ಹಾವಿನ ಮರಿ, ಚೇಳು ಎಂತಾರು ಕಚ್ಚುತ್ತೈತಿ ನೋಡು ಎಂದು ಹೇಳುತ್ತಾ ಅವನ ಸುತ್ತಲೂ ನಿಂತೆವು.

ಆದರೂ ಆತ ಗೆಬರುತ್ತಲೇ ಇದ್ದ. ಅದೊಂದು ಕೊಳತು ಬಿದ್ದ ಕೌಲುಮರ. ಅದರೊಳಗೆಲ್ಲಾ ಗೆದ್ದಲು ತಿಂದು ಬಿದ್ದಿರಬೇಕು. ಟೊಳ್ಳಾದ ಅದರ ಹೊಟ್ಟೆಯ ಒಳಗೆ ಬಿಳಿಬಿಳಿ ಪುಟ್ಟ ಪುಟ್ಟ ಅಣಬೆಗಳು ಅರೆಬಿರಿದು ನಗುತ್ತಿದ್ದವು. ಮಂಜ ಒಂದೇ ಸಮನೆ ಅವನ್ನೆಲ್ಲಾ ಕೊಯ್ಯುತ್ತಾ ಕಂಬಳಿಯ ಮಡಿಲೊಳಗೆ ಸೇರಿಸುತ್ತಿದ್ದ.

ಇದು ತಿನ್ನಾ ಅಣಬಿ. ಇದರ ಸಾರು, ಪಲ್ಲೆ ಬಾಳ ರುಚಿ ಆಕೈತಿ. ಇದನ್ನು ಇವತ್ತೇ ಕಿತ್ಕಣಾದಿದ್ರೆ ನಾಳಿ ಮುಂಜಾವಕ್ಕೆ ಇರಕಲ್ಲ ಮಂಜ ನಮ್ಮನ್ನು ನೋಡದೆ ಕೆಲಸ ಮುಂದುವರಿಸಿದ.

ಏಯ್ ಮಂಜ, ಇದು ಶಿಯ್ಯಿ (ಸಿಹಿ) ಇರ‍್ತೈತನ ಎನ್ನುತ್ತಾ ಅರುಣ ಒಂದು ಪುಟ್ಟ ಅಣಬೆಯನ್ನು ಕಿತ್ತು ಬಾಯಿಗೆ ಹಾಕಿಕೊಂಡ.

ಏಯ್ ಮಳ್ಳು, ತುಪ್ಪು ತುಪ್ಪು… ಹಸಿ ಅಣುಬಿ ತಿನ್ನಬಾರ‍್ದು, ತುಪ್ಪು ತುಪ್ಪು ಹಸಿ ಅಣಬಿ ವಿಷ ಇರ‍್ತೈತಿ ತುಪ್ಪೊ… ಪೂರ್ತಿ ತುಪ್ಪು ಎನ್ನುತ್ತಾ ಅದನ್ನು ಪೂರ್ತಿ ತುಪ್ಪಿಸಿದ ಮಂಜ ಮಳೆನೀರನ್ನು ಅರುಣನ ಬಾಯಿಗೆ ಹಾಕಿಸಿ ತುಪ್ಪಿಸಿದ.

ಮಂಜ ಅಣಬಿಯ ಸಾರು, ಪಲ್ಯ ಮಾಡುವುದು ಹೇಗೆಂದು ಹೇಳತೊಡಗಿದ. ಈ ಅಣಬಿಗಳು ವಿಚಿತ್ರ ಜೀವಿಗಳು. ಒಂದರಿಂದ ನಾಲ್ಕು ದಿನಗಳಲ್ಲಿ ತಮ್ಮೆಲ್ಲಾ ಜೀವನವನ್ನೇ ಮುಗಿಸುತ್ತವೆ. ಇವುಗಳಲ್ಲಿ ಎಷ್ಟೊಂದು ಬಣ್ಣ, ಎಷ್ಟೊಂದು ವಿಧಗಳಿವೆ. ಬಹಳಷ್ಟು ವಿಷಮಯ. ಬಿಳಿ ಹೆಗ್ಗೆಲ್ಲು, ಕರೆ ಹೆಗ್ಗೆಲ್ಲು, ಎಣ್ಣ್‌ಣುಬೆಗಳನ್ನು ಮಾತ್ರ ಮಲೆನಾಡಿನಲ್ಲಿ ತಿನ್ನುತ್ತಾರೆ. ಎಣ್ಣ್‌ಣುಬೆ, ಚೂರು ಮಾಡಿದ ಬ್ರೆಡ್ಡಿನ ತುಂಡಿನಂತಿರುತ್ತದೆ. ಇದನ್ನು ಕಿತ್ತು ತೊಳೆದು ಉಪ್ಪು, ಹುಳಿ, ಈರುಳ್ಳಿಯೊಂದಿಗೆ ಚೆನ್ನಾಗಿ ಹುರಿಯುತ್ತಾರೆ. ಅದಕ್ಕೆ ಸೂಜಿಮೆಣಸಿನ ಖಾರ, ಸಾಂಬಾರುಪುಡಿ ಹಾಕಿ ಅರೆದು ಬೇಯಿಸಿ ಸಾರು ಮಾಡುತ್ತಾರೆ. ಮೃದುವಾಗಿ ಬೇಯುವ ಈ ಅಣಬೆ ಸಾರು ಥೇಟ್ ಹೂಕೋಸಿನ ಸಾರಿನಂತಿರುತ್ತದೆ. ಬಿಳಿ ಹೆಗ್ಗೆಲ್ಲು, ಕರೆ ಹೆಗ್ಗೆಲ್ಲು ಅಣಬೆಗಳು ವರ‍್ಲೆ ಹುತ್ತದ ಮೇಲೆ ಹೂವಿನಂತೆ ಬೆಳೆಯುತ್ತವೆ. ಅದಕ್ಕಾಗಿಯೇ ಇದನ್ನು ಹುತ್ತದ ಹೂವು ಎಂದೂ ಕರೆಯುತ್ತಾರೆ. ಹಿಂದಿನ ದಿನ ಮೊಗ್ಗು ನೋಡಿದವರು ಮರುದಿನ ಮುಂಜಾನೆ ನಿಂಬೆಗಾತ್ರದಲ್ಲಿ ಅರೆಬಿರಿದ ಹೂವಿನಂತೆ ನಳನಳಿಸುವ ಪುಟ್ಟ ಪುಟ್ಟ ನಕ್ಷತ್ರದಂತಿರುವ ಈ ಅಣಬೆಗಳನ್ನು ಕಿತ್ತು ಪಲ್ಯಕ್ಕೋಸ್ಕರ ತರುತ್ತಾರೆ.DSC_0059

ಇದು ಹಸಿಯಿರುವಾಗ ವಿಷವೆನ್ನುವ ಕಾರಣಕ್ಕೆ ಎಮ್ಮೆ, ದನಗಳು ತಿನ್ನುವುದಿಲ್ಲವಂತೆ. ಕಾಡುಮೇಡುಗಳಲ್ಲಿ ಬಿದ್ದು ಕೊಳೆತ ಮರಗಳನ್ನು, ಹುತ್ತಗಳನ್ನು ಹುಡುಕುತ್ತಾ ಕೆಲವರು ದಿನವೆಲ್ಲಾ ಅಲೆಯುತ್ತಾರೆ. ಚಿಕ್ಕ ಕುರುಹುಗಳನ್ನು ಗುರುತಿಸಿ ಮರುದಿನವೇ ಬೆಳೆದು ನಿಲ್ಲುವ ಅಣಬೆ ಹೂಗಳನ್ನು ಕಿತ್ತು ತರುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ಅಪರೂಪವಾಗಿ ಸಿಗುವ ಇದು ಅಷ್ಟೊಂದು ಇಷ್ಟದ ಪದಾರ್ಥ. ಇತ್ತೀಚೆಗೆ ಅದಕ್ಕೆ ಬೆಲೆಯೂ ಜಾಸ್ತಿಯಾದ ಕಾರಣ ಮಾರಾಟಗಾರರೂ ಹೆಚ್ಚಿದ್ದಾರೆ.

ಅಷ್ಟರಲ್ಲಿ ನಮ್ಮೊಂದಿಗೆ ಇದ್ದ ಚಂದ್ರಂಗೆ ಹೊಳೆಗೇರು ಮರದಾಗೆ ಚಿಗಳಿಗಳ ಗೂಡು ಕಾಣಿಸಿತು. ಸರಸರನೆ ಮರ ಹತ್ತಿದ ಅವನು ಜಾರಿ ಕಂಬಳಕೊಪ್ಪೆಯೊಂದಿಗೆ ದಡ್ ಎಂದು ನೆಲಕ್ಕೆ ಬಿದ್ದ. ನಾವೆಲ್ಲಾ ಅವನನ್ನು ಎತ್ತಿ ನಿಲ್ಲಿಸಿದೆವು. ಅಂಡು ಜಜ್ಜಿದಂತೆ ಆಗಿತ್ತು. ಪೆಟ್ಟೇನು ಆಗಿರಲಿಲ್ಲ. ಮಂಜ ಅಣಬಿ ಕಿತ್ತಿದ್ದಕ್ಕಾಗಿ ತಾನೂ ಚಿಗಳಿ ಕೊಟ್ಟೆ ಕಿತ್ತು ಶೂರ ಅನ್ನಿಸ್ಕೋಬೇಕಂತಿದ್ದ. ಪಾಪ, ನಾವೆಲ್ಲಾ ಮತ್ತೆ ಮರ ಹತ್ತದಂತೆ ತಡೆದೆವು.

ಹಾಂ… ಚಿಗಳಿ ಚಟ್ನಿ, ಕಾರೇಡಿ ಚಟ್ನಿ, ಕ್ವಾರೆ ಮೀನಿನ ಸಾರು, ಆದ್ರೆ ಮಳೆ ಹಬ್ಬ, ಸೀತಾಳಿ ದಂಡೆ, ವೆಲ್ವೆಟ್ ಹುಳ ಸಾಕಿದ್ದು, ನೀರಹಾವು ಹಿಡಿದಿದ್ದು, ಕಾಳಿಂಗನ ಮೊಟ್ಟೆ ನೋಡಿದ್ದು, ದಾರಿ ತಪ್ಪಿಸೋ ಬಳ್ಳಿ ಮುಟ್ಟಿ ಇಡೀ ದಿನ ಕಾಡುಮೆಳೆಯೊಳಗೆ ಅಲೆದಾಡಿದ್ದು… ಇವೆಲ್ಲಾ. ಇನ್ನೂ ಏನೆಲ್ಲಾ ಮಳೆ ಬಂದ ಕಾರಣ ನೆನಪಾಗ್ತಾ ಇರ‍್ತದೆ. ಮುಂದಿನ ಮಳೆಗಾಲದಾಗೆ ಅದ್ರ ಕತೆ ಹೇಳ್ತೀನಿ.

ಈ ವರ್ಷ ಮಳೆಗಾಲ್ದಾಗೆ ನಮ್ಮೂರಿಗೆ ಬಂದ್ರೆ ಬ್ಯಾರೆ ಕತೆ ಸಿಕ್ಕಬೋದು, ನೀವೆಲ್ಲಾ ಬರ್ರಿ…

 ಚಿತ್ರ-ಲೇಖನ: -ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*