ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಇಲ್ಲಗಳ ನಡುವೆ ಬೆಳೆದು ನಿಂತ ಕೃಷಿಕರು

ಕೃಷಿ ಸುಲಭವಲ್ಲ. ನೀರಿಲ್ಲ, ಮಳೆ ಬರಲ್ಲ, ಕೂಲಿ ಕಾರ್ಮಿಕರಿಲ್ಲ, ಬಂಡವಾಳವಿಲ್ಲ ಹೀಗೆ ಇಲ್ಲಗಳ ಪಟ್ಟಿ ಹೇಳುವವರು ತುಂಬ ಜನ ಸಿಗುತ್ತಾರೆ. ಕೆಲವರಂತೂ ಈ ಪಟ್ಟಿಯ ಜತೆಗೆ ಕೃಷಿ ಮಾಡೋದಕ್ಕೆ ಜಮೀನೂ ಇಲ್ಲ ಎಂದು ನಗೆಯಾಡುತ್ತಾರೆ.  ಹಾಗಾದರೆ, ಇದೆಲ್ಲ ಇಲ್ಲಗಳ ನಡುವೆ ಕೃಷಿ ಮಾಡುವವರು ಯಾರೂ ಇಲ್ಲವೇ? ಏಕಿಲ್ಲ, ಅಂಥ ಸಾವಿರಾರು ರೈತರು ನಮ್ಮ ರಾಜ್ಯದಲ್ಲಿ ಸಿಗುತ್ತಾರೆ. ಅವರಿಗೆ ಇಲ್ಲ ಎನ್ನುವುದು ಆಕ್ಷೇಪವಾಗಿರುವುದಿಲ್ಲ, ಸವಾಲಾಗುತ್ತದೆ.  ಆ ಸವಾಲು ಸ್ವೀಕರಿಸಿ ಅದನ್ನೇ ಗೆಲುವಿನ ಮೆಟ್ಟಿಲಾಗಿ ಪರಿವರ್ತಿಸಿದ ಅನೇಕ ಮಹನೀಯ ಕೃಷಿಕರು ನಮಗೆ ಅಲ್ಲಲ್ಲಿ ಸಿಗುತ್ತಾರೆ. ಇಂತಹ ಎರಡು ಉದಾಹರಣೆಗಳು ನಿಮ್ಮ ಮುಂದೆ ಇಟ್ಟಿದ್ದೇವೆ.

bhagirata-krishnegoudaಕೃಷ್ಣೇಗೌಡರು ಭಗೀರಥರಾದ ಕತೆ: ತುಂಬು ಫಲವತ್ತಾದ ಭೂಮಿಯನ್ನು ಆಲಮಟ್ಟಿ ಜಲಾಶಯ ಆಪೋಷಣೆ ತೆಗೆದುಕೊಂಡಿತು. ಪರಿಹಾರ ರೂಪದಲ್ಲಿ ಸಿಕ್ಕಿದ ಬಂಜರು ಭೂಮಿಯಲ್ಲಿ ಒಂದರ ಪಕ್ಕ ಇನ್ನೊಂದು ಕೊಳವೆ ಬಾವಿ ಕೊರೆಸಿದರೂ ನೀರಿನ ಸಣ್ಣ ಸೆಲೆ ಕೂಡ ಸದ್ದು ಮಾಡಲಿಲ್ಲ.

ಅವರು ಹಾಕಿಸಿದ್ದು, ಒಂದಲ್ಲ, ಎರಡಲ್ಲ, ಬರೋಬ್ಬರಿ ೨೭ ಕೊಳವೆ ಬಾವಿಗಳು! ನೀರು ಸಿಗದಿದ್ದರೇನಂತೆ, ಸಹಕಾರಿ ಬ್ಯಾಂಕ್ ಸಾಲದ ಹರಾಜಿನ ನೋಟಿಸ್ ಮಾತ್ರ ಸಿಕ್ಕೇಸಿಕ್ಕಿತು. ಭೂಮಿ ತಾಯಿಗಾಗಿ ಮಾಡಿದ ಸಾಲಕ್ಕಾಗಿ ಖಾಲಿಯಾದ ಜೇಬಲ್ಲಿ, ಭೂಮಿ ಕಳೆದುಕೊಳ್ಳಬೇಕಾದ ನೋಟಿಸ್ ಇಟ್ಟುಕೊಂಡು, ಮರ‍್ಯಾದೆಗಾಗಿ ಊರೇ ಬಿಡಬೇಕಾದ ದುರಂತಮಯ ಸ್ಥಿತಿಯಲ್ಲಿ ಬೇರೆಯವರಿದ್ದರೆ ಏನಾಗುತ್ತಿತ್ತೋ.

ವಿಜಾಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ತಡಲಗಿ ಗ್ರಾಮದ ಕೃಷ್ಣೇಗೌಡ ಗೋವಿಂದೇಗೌಡ ಪಾಟೀಲ ಎಂಬ ರೈತ ಮತ್ತೆ ಟವೆಲ್ ಕೊಡವಿಕೊಂಡು ಮೇಲೆದ್ದು ನಿಂತರು. ಅವರ ಪರಿಶ್ರಮ ಕಂಡು ಅದೃಷ್ಟವೂ ಕೈಹಿಡಿಯಿತು. ೨೦೦೫ರಲ್ಲಿ ಮುಳವಾಡ ಏತನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದು, ಕೃಷ್ಣೇಗೌಡರ ಕೃಷಿ ಕಾಯಕಕ್ಕೆ ದೊಡ್ಡ ಟರ್ನಿಂಗ್ ಪಾಯಿಂಟ್. ಕಾಲುವೆ ನೀರು ಬಸಿಯಾಗಿ ವ್ಯರ್ಥವಾಗುತ್ತಿರುವುದನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾದ ಅವರು, ಬಸಿ ನೀರಿದ್ದ ಕಾಲುವೆ ಪಕ್ಕದ ಒಂದಿಷ್ಟು ಜಮೀನು ಖರೀದಿಸಿ, ಅಲ್ಲಿಂದ ಪೈಪ್ ಲೈನ್ ಮೂಲಕ ನೀರನ್ನು ತಮ್ಮ ಬಂಜರು ಭೂಮಿಗೆ ಹರಿಸಿದರು. ಒಂದು ಎಕರೆಯಲ್ಲಿ ಕೃಷಿ ಹೊಂಡ ತೋಡಿಸಿ, ಎರಡು ಕಿ.ಮೀ. ದೂರದಿಂದ ಕಾಲುವೆ ಬಸಿ ನೀರನ್ನು ಅದಕ್ಕೆ ತುಂಬಿಸಿಕೊಂಡು ಅಲ್ಲಿಂದ ಹನಿ ನೀರಾವರಿ ಮೂಲಕ ತೋಟಗಾರಿಕೆಗೆ ಬಳಸಿದರು. ಇದೆಲ್ಲದರ ಫಲವಾಗಿ ಈಗ ಅವರ ೪೦ ಎಕರೆ ಭೂಮಿ ಸಮಗ್ರ ಕೃಷಿ ಪದ್ಧತಿಯಡಿ ಹಚ್ಚಹಸಿರಾಗಿ ಅರಳಿ ನಿಂತಿದೆ. ಬಾಳೆ, ಸೀಬೆ, ದ್ರಾಕ್ಷಿ, ತೆಂಗು, ಮಾವು, ಸಪೋಟ, ಸೀತಾಫಲ, ಕಬ್ಬು ಬೆಳೆದು ವರ್ಷಪೂರ್ತಿ ಆದಾಯ ಸಿಗುತ್ತಿದೆ.

sourashakti-gangadharappaಸೌರಶಕ್ತಿಯಿಂದ ಬೆಳಗಿತು ಬಾಳು: ತಮಗಿರುವ ಹತ್ತೆಕರೆ ಅಡಕೆ ಬೆಳೆ ಉಳಿಸಲು ಭರ್ತಿ ಆರು ಕೊಳವೆ ಬಾವಿ ಕೊರೆದ ರೈತ, ವಿದ್ಯುತ್ ಕೊರತೆಯ ಕೊರೆತದಿಂದ ಕಂಗಾಲಾಗಿ ಕುಳಿತಿದ್ದರು. ಬೆಸ್ಕಾಂ ನೀಡುವ ತ್ರಿಫೇಸ್ ವಿದ್ಯುತ್ ಯಾವಾಗ ಬರುತ್ತದೋ ಎಂದು ಹಗಲು ರಾತ್ರಿಯೆನ್ನದೆ ಜಾಗರಣೆ ಮಾಡುವುದು ನಿತ್ಯದ ಕಾಯಕವಾಗಿತ್ತು. ಕರೆಂಟ್ ಬಂದರೂ ವೋಲ್ಟೇಜ್ ಇಲ್ಲದೆ ಪರದಾಟ ಒಂದೆಡೆ, ವೋಲ್ಟೇಜ್ ಏರುಪೇರಾಗಿ ಆಗಾಗ ಪಂಪ್‌ಸೆಟ್ ಸುಟ್ಟು ಅದರ ಖರ್ಚಿಗೆಂದು ಒಂದಿಷ್ಟು ಕೈಸುಟ್ಟುಕೊಳ್ಳುವುದು ಇನ್ನೊಂದೆಡೆ. ಇಂಥ ಗೋಳಿನಿಂದ ಹೇಗಪ್ಪಾ ಪಾರಾಗುವುದು ಎಂದು ಅವರು ತಲೆಕೆಡಿಸಿಕೊಂಡಿದ್ದಾಗ ಹೊಳೆದ ಪರಿಹಾರ-ಸೋಲಾರ್ ಪವರ್!  ಕೊನೆಗೂ ಚಿತ್ರದುರ್ಗ ಜಿಲ್ಲೆ ಭರಮಸಾಗರ ಸಮೀಪದ ಲಕ್ಕಮುತ್ತೇನಹಳ್ಳಿ ಗ್ರಾಮದ ಗಂಗಾಧರಪ್ಪ ಎಂಬ ಪ್ರಗತಿಪರ ರೈತ ಬೆಸ್ಕಾಂ ಸಹವಾಸಕ್ಕೆ ವಿದಾಯ ಹೇಳಿದರು. ಮತ್ತು ಸೋಲಾರ್ ವಿದ್ಯುತ್ ಮೋಟಾರ್ ಅಳವಡಿಸಿ ಬೆಳಗ್ಗೆ ಎಂಟರಿಂದ ಸಂಜೆ ಐದರವರೆಗೆ ನಿರಂತರವಾಗಿ ಮೋಟಾರ್ ಮೂಲಕ ನೀರು ಮೇಲೆತ್ತಿ ತೋಟಕ್ಕೆ ಹಾಯಿಸುತ್ತ, ತಮ್ಮ ಹತ್ತು ಎಕರೆ ಅಡಕೆ ತೋಟವನ್ನು ಇನ್ನಷ್ಟು ಫಲವತ್ತಾಗಿಸಿಕೊಂಡರು.

ಚಿತ್ರ-ಲೇಖನ: ಸುನೀಲ್ ಪುತ್ತೂರ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*