ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರು; ಸಾಮುದಾಯಿಕ ಸಂಪನ್ಮೂಲ

ನಮ್ಮ ಪರಿಸರ, ಅರ್ಥಾತ್ ಪ್ರಕೃತಿ ಜೀವಸಂಕುಲಕ್ಕೆ ಉಚಿತವಾಗಿ ಒದಗಿಸುತ್ತಿದ್ದರೂ, ವಿಚಾರವಂತ ಪ್ರಾಣಿ ಮನುಷ್ಯ ಮಾರಾಟದ ಸರಕಾಗಿಸುತ್ತಿದ್ದಾನೆ. ಮತ್ತೊಂದೆಡೆ, ಶುದ್ಧ ನೀರು ವೃಥಾ ಪೋಲಾಗುತ್ತಿದೆ.. ಆತಂಕದ ವಿಷಯವೆಂದರೆ, ನೀರಿನ ಪೂರೈಕೆಯ ಖಾಸಗೀಕರಣ ಭರದಿಂದ ನಡೆದಿರುವುದು.. ಹಾಗಾಗಿ, ಆರ್ಥಿಕ ಭ್ರಷ್ಟಾಚಾರವೊಂದೇ ಅಲ್ಲ – ನೀರು ಎಲ್ಲರಿಗೂ ತಲುಪದಂತೆ ನೋಡಿಕೊಳ್ಳುತ್ತಿರುವ ಒಂದು ಭ್ರಷ್ಟ ವ್ಯವಸ್ಥೆ ಶೋಚನೀಯ.

೧೯೯೦ ರಲ್ಲಿ ೧.೬ ಶತಕೋಟಿ ಜನರಿಗೆ ಮಾತ್ರ ಸುರಕ್ಷಿತ ಜಲಸಂಪನ್ಮೂಲ ಲಭ್ಯ ಎಂಬ ದಾಖಲೆ ವಿಶ್ವಸಂಸ್ಥೆ ಬಿಡುಗಡೆ ಮಾಡಿತ್ತು. ೨೦೦೪ರಲ್ಲಿ ಈ ಪರಿಸ್ಥಿತಿ ಕೊಂಚ ಸುಧಾರಿಸಿತು. ಈಗ ೨೦೧೫ರ ವೇಳೆಗೆ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಸುಸ್ಥಿರತೆ ತರುವುದು ಹಾಗೂ ನೀರಿನ ಸಕಾಲಿಕ ಪೂರೈಕೆಯಲ್ಲಿ ದುಪ್ಪಟ್ಟು ಸುಧಾರಣೆ ತರುವುದು ಈ ಸಹಸ್ರಮಾನದ ಮುಖ್ಯ ವಿಶ್ವ ಗುರಿ.

೨೦೦೬ರಲ್ಲಿ ವಿBATH IN HOLY RIVER GANGAಶ್ವ ಸಂಸ್ಥೆ – ‘ವಾಟರ್; ಎ ಶೇರಡ್ ರೆಸ್ಪಾನ್ಸಿಬಿಲಿಟಿ’ ಎಂಬ ವರದಿಯನ್ನು ಸಿದ್ಧಪಡಿಸಿದೆ. ವರದಿಯ ಸಾರಾಂಶವೆಂದರೆ, ‘ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ನೀರು ಲಭ್ಯವಿದೆ. ಆದರೆ, ಇದನ್ನು ಹೊಂದುವಲ್ಲಿ ಕೆಲವರಿಗೆ ಅಡೆ-ತಡೆಗಳೇ ಜಾಸ್ತಿ. ನೀರಿನ ರಾಜಕೀಯ, ನೀರು ಪೂರೈಕೆಯಲ್ಲಿ ವ್ಯವಸ್ಥಿತವಾಗಿ ವ್ಯತ್ಯಯವಾಗುವಂತೆ ನೋಡಿಕೊಳ್ಳುತ್ತದೆ. ಅರ್ಥಾತ್, ನೀರು ಎಲ್ಲರಿಗೂ ದಕ್ಕದಂತೆ ನೋಡಿಕೊಳ್ಳುವ ಪಿತೂರಿ ವ್ಯವಸ್ಥಿತವಾಗಿಯೇ ನಡೆದುಕೊಂಡು ಬರುತ್ತಿದೆ. ನೀರಿನ ಹಂಚಿಕೆಯಲ್ಲಿ ಇರುವಷ್ಟು ಭ್ರಷ್ಟಾಚಾರ ಬೇರೆಲ್ಲೂ ಇಲ್ಲ’.

ನೀರು ಪೂರೈಕೆಗೆ ವಿಶ್ವಸಂಸ್ಥೆಯ ಸಹಾಯಧನ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಇಂದು ಹರಿದುಬರುತ್ತಿದೆ. ‘ಪ್ಯಾರಿಸ್ ನಿರ್ಣಯ’ ಈ ಹಿನ್ನೆಲೆಯಲ್ಲಿ ಗಂಭೀರ ಪ್ರಯತ್ನ. ಆದರೆ, ಜಲಹಂಚಿಕೆ ತಲಾವಾರು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸಲುವಲ್ಲಿ ಇರುವ ಆಡಳಿತಗಳ ಕಾಳಜಿ, ಜಲದಾನ ರಂಗದಲ್ಲಿ ಇಲ್ಲ.

ವರ್ಲ್ಡ್ ವಾಟರ್ ಅಸೆಸ್‌ಮೆಂಟ್ ಪ್ರೋಗ್ರಾಂ ಅಡಿ, ಯುನೈಟೆಡ್ ನೇಷನ್ಸ್ ವರ್ಲ್ಡ್ ವಾಟರ್ ಡೆವಲಪ್‌ಮೆಂಟ್ ರಿಪೋರ್ಟ್ (ಡಬ್ಲುಡಿಆರ್ -೨೦೦೩) ಪ್ರಕಾರ, ಮುಂದಿನ ೨೦ ವರ್ಷಗಳ ಅವಧಿಯಲ್ಲಿ (೨೦೩೫ ವರೆಗೆ) ಪ್ರತಿಯೊಬ್ಬರಿಗೂ ಈಗ ಲಭ್ಯವಾಗುತ್ತಿರುವ ಕುಡಿಯುವ ನೀರಿನಲ್ಲಿ ಶೇ.೪೦ರಷ್ಟು ಪ್ರಮಾಣ ಇಳಿಕೆಯಾಗಲಿದೆ. ಈಗ (೨೦೧೫ ರಲ್ಲಿ) ದಕ್ಕುತ್ತಿರುವುದೇ ಕಡಿಮೆ ನೀರು! ಅದರಲ್ಲೂ ಶುದ್ಧ ಕುಡಿಯುವ ನೀರಿನ ಲಭ್ಯತೆಯ ಪ್ರಮಾಣ ಶೇ.೨೦ರಷ್ಟು! ಕಲುಷಿತ ನೀರಿನ ಸೇವನೆಯಿಂದ, ನೀರಿನ ಮೂಲಕ ಹರಡುವ ಸಾಂಕ್ರಾಮಿಕ ರೋಗಗಳಿಂದ ಮತ್ತು ಬರಗಾಲದ ಬವಣೆಗೆ ಕಳೆದ ೨೦೦೦ದಲ್ಲಿ ದಶಲಕ್ಷ ಜನ ಸತ್ತಿದ್ದು ದಾಖಲಾಗಿದೆ.

ಜಲಜನಕದ ೨ ಅಣು + ಆಮ್ಲಜನಕದ ೧ ಅಣು

ರಸಾಯನಶಾಸ್ತ್ರಜ್ಞ ವಿಲಿಯಂ ನಿಕೋಲ್ಸ್‌ನ್ ೧೮೦೦ರಲ್ಲಿ ಮೊದಲ ಬಾರಿಗೆ ಎಲೆಕ್ಟ್ರೋಲೈಸೆಸ್(ನೀರಿನಲ್ಲಿ ವಿದ್ಯುತ್ ಹರಿಸಿ ಅದರ ಮೂಲ ಅವಯವಗಳಾದ ಆಮ್ಲಜನಕ ಮತ್ತು ಜಲಜನಕವನ್ನು ವಿಂಗಡಿಸುವ ಪ್ರಕ್ರಿಯೆ) ವಿಭಜಿಸಿದ. ೧೮೦೫ರಲ್ಲಿ ಜೋಸೆಫ್ ಲೂಯಿಸ್ ಗೇಯ್ -ಲುಸ್ಸಾಕ್ ಮತ್ತು ಅಲೆಕ್ಸಾಂಡರ್ ವಾನ್ ಹಂಬೋಲ್ಡಟ್ ನೀರಿನಲ್ಲಿ ಎರಡು ಅಣು ಜಲಜನಕದ್ದು (ಎಚ್ ೨) ಮತ್ತು ಒಂದು ಭಾಗ ಆಮ್ಲಜನಕವಿದೆ (ಓ ೧) ಎಂದು ನಿರೂಪಿಸಿದ.

ದಿ ಇಂಟರ್ ನ್ಯಾಶನಲ್ ವಾಟರ್ ಅಸೋಸಿಏಷನ್, ದಿ ಇಂಟರ್ ನ್ಯಾಶನಲ್ ವಾಟರ್ ಮ್ಯಾನೇಜ್‌ಮೆಂಟ್ ಇನ್ಸ್ಟಿಟ್ಯೂಟ್, ವಾಟರ್ ಏಡ್, ವಾಟರ್ ಫಸ್ಟ್, ಅಮೆರಿಕನ್ ವಾಟರ್ ರಿಸೋರ್ಸ್‌ಸ್ ಅಸೋಸಿಏಷನ್, ಇವು ಜಲ ಸಂರಕ್ಷಣೆಯ ಕಾಳಜಿಯನ್ನು ಹೊಂದಿರುವ ಅಂತಾರಾಷ್ಟ್ರೀಯ ಸಂಸ್ಥೆಗಳು. ಸಮರ್ಪಕ ಜಲ ನಿರ್ವಹಣೆಯಿಂದ ಆರೋಗ್ಯ, ತನ್ಮೂಲಕ ಬಡತನ ನಿರ್ಮೂಲನೆ ಸಾಧ್ಯ ಎಂದು ಈ ಸಂಸ್ಥೆಗಳು ನಂಬಿವೆ. ೨೦೧೫ರ ವರದಿಯಲ್ಲಿ ಈ ಸಂಸ್ಥೆಗಳು, ಕಳೆ ನೀರಿನ ಬಗ್ಗೆ ವಿಶೇಷ ಆದ್ಯತೆ ನೀಡಿ, ಕಳೆ ನೀರಿನ ಸಕಾಲಿಕ ಶುದ್ಧೀಕರಣಕ್ಕೆ ತಂತ್ರಜ್ಞಾನ ಬಳಸಿಕೊಳ್ಳುವುದನ್ನು ಒತ್ತಿ ಹೇಳಿದೆ.

ನೀರೆಯರ ನೀರಿನ ವ್ಯಾಪಾರ!

ಅಂತರ್ಜಲದಿಂದ ಬಗೆದು ಮೇಲೆತ್ತಲಾದ ಜಲಸಂಪನ್ಮೂಲ ಇಂದು ಪ್ಲಾಸ್ಟಿಕ್ ಬಾಟಲಿಗಿಳಿದು ಮಾರಾಟದ ಸರಕಾಗಿದೆ. ಶುದ್ಧೀಕರಿಸಿದ ನೀರು ಕೆಲವೇ ಇದ್ದುಳ್ಳ ಜನರ ಸ್ವತ್ತಾಗಿದೆ. ಇನ್ನು ಕೆಲವೇ ದಿನಗಳಲ್ಲಿ, ಪ್ಯಾಕೇಜ್ಡ್ ಬಾಟಲ್ ನೀರು ಕುಡಿಯುವವರ ಮತ್ತು ನಿಸರ್ಗ ಸಹಜ ನೀರು ಸೇವಿಸುCATCHMENT AREA OF A RIVERವವರ ಮಧ್ಯೆ ಹಾಗೂ ದುಡ್ಡು ಕೊಟ್ಟು ಬೇಕಷ್ಟು ಸೇವಿಸುವವರ ಮಧ್ಯೆ ವರ್ಗ ಸಂಘರ್ಷ ಕಾಣಬಹುದು ಎನ್ನುತ್ತಾರೆ, ಜಲತಜ್ಞರು.

ವಿಶ್ವದಲ್ಲಿ ಭಾರತದ ಜನಸಂಖ್ಯೆಯ ಪಾಲು ಶೇ.೧೭. ನಮ್ಮ ದೇಶದಲ್ಲಿ ಪುನರ್‌ನವೀಕರಿಸಬಹುದಾದ ಜಲಸಂಪನ್ಮೂಲದ ಪಾಲು ಶೇ.೪! ಅಂಕಿ-ಸಂಖ್ಯೆಗಳ ಪ್ರಕಾರ, ಅತ್ಯಂತ ಹೆಚ್ಚು ಅಂತರ್ಜಲವನ್ನು ಬಳಸುವ ದೇಶ, ಭಾರತ! ಕಾರಣ, ಅವೈಜ್ಞಾನಿಕ ನೀರಾವರಿ. ನಮ್ಮ ದೇಶದ ಮುಕ್ಕಾಲುಭಾಗ ಜನರಿಗೆ ನೀರು ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಲಭ್ಯವಾಗುತ್ತಿದೆ. ಅರ್ಥಾತ್, ನೀರಡಿಸಿದ ಕಾಗೆಯ ಪರಿ!

 ನದಿ ಪಾತ್ರದ ಹತ್ತಿರವಿರುವ ಜನರಿಗೂ ಇವತ್ತು ಶುದ್ಧ ಕುಡಿಯುವ ನೀರು ದುರ್ಲಭವಾಗಿದೆ. ದೇಶದ ಶೇ.೨೫ ರಷ್ಟು ಜನ ೨೦೧೫ರಲ್ಲೂ ಕನಿಷ್ಟ ಪ್ರಮಾಣದ ಕುಡಿಯುವ ನೀರು ದೊರಕದ ಸ್ಥಳಗಳಲ್ಲಿ ಜೀವನ ಸವೆಸುತ್ತಿದ್ದಾರೆ.

ಯುನೈಟೆಡ್ ಪ್ರೆಸ್ ಇಂಟರನ್ಯಾಷನಲ್ ವರದಿ ಪ್ರಕಾರ, ದೇಶದ ಮೂರನೇ ಎರಡು ಭಾಗದಷ್ಟು ಜನ ಅಂತರ್ಜಲದ ಮೇಲೆ ಅವಲಂಬಿತರಾಗಿದ್ದು, ಕೆರೆ ಹಳ್ಳ-ಕೊಳ್ಳಗಳನ್ನು ಅತಿಕ್ರಮಿಸಿಬಿಟ್ಟಿದ್ದಾರೆ. ನೀರಾವರಿ ಯೋಜನೆಗಳಲ್ಲಂತೂ ಮೇಲ್ವರ್ಗದ ಮತ್ತು ಭೂಮಾಲೀಕರ ಮಸಲತ್ತುಗಳು ಕಣ್ಣಿಗೆ ರಾಚುವಂತೆ ಢಾಳಾಗಿ ಉತ್ತರ ಕರ್ನಾಟಕದಲ್ಲಿ ಗೋಚರಿಸುತ್ತವೆ. ತಮ್ಮ ವರ್ಗದ ಜನರ ಭೂಮಿಗಳಿಗೇ ಹೆಚ್ಚು ನೀರು ತಲುಪುವಂತೆ ಯೋಜನೆಗಳನ್ನು ರೂಪಿಸವಲ್ಲಿ ಇಂಥಹವರ ಪ್ರಭಾವ ಹೆಚ್ಚಿದೆ. ಅಧಿಕಾರ ಶಾಹಿಯಲ್ಲೂ ಭೂಮಾಲೀಕರ ಪರವಾಗಿರುವವರೇ ಹೆಚ್ಚಿರುವುದರಿಂದ, ಈ ಬೆಳವಣಿಗೆ ಸ್ವಾಭಾವಿಕ ಎನ್ನಿಸುವಂತಿದೆ ಮೇಲ್ನೋಟಕ್ಕೆ.

ನೀರು ಮತ್ತು ಭೂಮಿ

ನಮ್ಮ ಭೂಮಿ ಶೇ.೭೦.೯ರಷ್ಟು ನೀರಿನಿಂದ ಆವೃತ. ಶೇ.೯೬.೫ರಷ್ಟು ಪ್ರಮಾಣದ ಭೂಮಿಯ ನೀರು ಸಾಗರದ ಉಪ್ಪು ನೀರಿನ ರೂಪದಲ್ಲಿದೆ. ಶೇ. ೧.೭ ರಷ್ಟು ಅಂತರ್ಜಲ ಮತ್ತು ಶೇ. ೧.೭ರಷ್ಟು ಹಿಮ ಪರ್ವತಗಳಿಂದ ದೊರಕುತ್ತಿದೆ. ಭೂಮಿಯ ಶೇ. ೨.೫ರಷ್ಟು ಮಾತ್ರ ಶುದ್ಧ ನೀರು! ಆ ಶುದ್ಧ ನೀರಿನ ಪೈಕಿ ಶೇ. ೯೮.೮ ರಷ್ಟು ಅಂತರ್ಜಲ ಮತ್ತು ಶೇ ೦.೩ ಗಿಂತಲೂ ಕಡಿಮೆ ಪ್ರಮಾಣದಲ್ಲಿ ನದಿ, ಕೆರೆ, ಕೊಳ್ಳ ಮತ್ತು ಮಳೆಯಿಂದ ಲಭ್ಯವಾಗುತ್ತದೆ.

ಹಳ್ಳ, ಕೆರೆ, ನದಿಗಳ ಒತ್ತುವರಿಯಂತೂ ಕರ್ನಾಟಕದಾದ್ಯಂತ ತುಂಬ ಮುಂಗೈ ಜೋರಿನಿಂದ ನಡೆದಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಈ ಒತ್ತುವರಿಗಳು ಸಕ್ರಮವೇ! ಕೆರೆ, ನದಿಗಳ ರಕ್ಷಣೆ ಮತ್ತು ಸದ್ಬಳಕೆಯ ವಿಷಯದಲ್ಲಿ ಯುರೋಪಿನ ರಾಷ್ಟ್ರಗಳನ್ನು ಮಾದರಿಯನ್ನಾಗಿ ಪರಿಗಣಿಸಬಹುದು. ಅಲ್ಲಿ ಕೆರೆ, ನದಿಗಳು ಕುಡಿಯುವ ನೀರು ಒದಗಿಸುವ ಬಹುಮುಖ್ಯ ಜಲಸಂಪನ್ಮೂಲಗಳು. ಅವುಗಳನ್ನು ತುಂಬ ಜತನದಿಂದ ಹಾಗೂ ಕಾಳಜಿ ಪೂರ್ವಕವಾಗಿ ಕಾಯ್ದುಕೊಂಡು ಬರಲಾಗುತ್ತಿದೆ.

ಜಲ ಸಂಪನ್ಮೂಲಗಳ ಯೋಜನೆ, ಅಭಿವೃದ್ಧಿ ಮತ್ತು ನಿರ್ವಹಣೆಯಲ್ಲಿ ವಾಸ್ತವಾಂಶಗಳನ್ನು ಆಧರಿಸಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕಿದೆ. ಈಗಿರುವ, ಈ ನೆಲದ ಕಾನೂನಿನಂತೆ ಪ್ರತಿಯೊಬ್ಬ ಭೂಮಾಲೀಕ ಯಾವ ಮಿತಿಯೂ ಇಲ್ಲದೇ ತನ್ನ ಭೂಮಿಯಿಂದ ಅಂತರ್ಜಲವನ್ನು ಕೊಳವೆ ಬಾವಿಯ ಮೂಲಕ ಯಥೇಚ್ಛವಾಗಿ ಬಳಸಬಹುದು! ಇದಕ್ಕೆ ಕಟ್ಟುನಿಟ್ಟಾದ ನೀತಿ-ನಿಯಮಗಳಿಲ್ಲ. ಹೀಗೆ, ಅಂತರ್ಜಲವನ್ನು ಬೇಕಾಬಿಟ್ಟಿಯಾಗಿ ಮೊಗೆಯುವುದನ್ನು ಅಪರಾಧವೆಂದು ಪರಿಗಣಿಸಬೇಕಿದೆ.

ಗ್ರಾಮೀಣರ ಕುಡಿಯುವ ನೀರಿನ ಸ್ಥಿತಿ

ಹೈದ್ರಾಬಾದ್-ಕರ್ನಾಟಕದ ೬ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ (೧೪) ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಡಿ ಹಳ್ಳಿಗಳಿಗೆ ಪೂರೈಕೆಯಾಗುತ್ತಿರುವ ನೀರು ಬಳಕೆಗೂ ಕೂಡ ಯೋಗ್ಯವಾಗಿಲ್ಲ! ಕುಡಿಯುವ ನೀರಿನಲ್ಲಿ ರಾಸಾಯನಿಕಗಳು ವಿಪರೀತವಾಗಿರುವುದು, ನೈಟ್ರೇಟ್, ಫ್ಲೋರೈಡ್ ಮತ್ತು ಕ್ಲೋರಿನ್ ಪ್ರಮಾಣದಲ್ಲಿ ಭಾರೀ ಏರು-ಪೇರಾಗಿರುವುದು ಅಂಕಿ-ಸಂಖ್ಯೆಗಳ ಮೂಲಕ ಸಾಬೀತಾಗಿದೆ. ಕರ್ನಾಟಕ ಗ್ರಾಮೀಣ ಜಲ ಪೂರೈಕೆ ಮತ್ತು ಸ್ವಚ್ಛತಾ ಮಂಡಳಿಯ ಎಂಜಿನಿಯರಿಂಗ್ ವಿಭಾಗ ಇತ್ತೀಚೆಗೆ ಕೈಗೊಂಡ ಸಮೀಕ್ಷೆ ಪ್ರಕಾರ, ನಮ್ಮಲ್ಲಿ ಅಂತರ್ಜಲ ಬಹುತೇಕ ಕಲುಷಿತವಾಗುತ್ತಿದೆ. ನೀರಿನಲ್ಲಿ ಅತ್ಯಧಿಕ ಪ್ರಮಾಣದ ರಾಸಾಯನಿಕ ವಸ್ತುಗಳು ಇರುವುದು ಹಲವು ಪರೀಕ್ಷೆಗಳಿಂದ ಖಾತ್ರಿಯಾಗಿದೆ. ಗ್ರಾಮೀಣ ಪ್ರದೇಶಗಳ ಕೊಳವೆ ಬಾವಿಗಳ ನೀರಿನಲ್ಲಿ ಅತ್ಯಧಿಕ ಪ್ರಮಾಣದ ನೈಟ್ರೇಟ್, ಫ್ಲೋರೈಡ್ ಮತ್ತು ಕಬ್ಬಿಣಾಂಶ ಇರುವುದನ್ನು ಸರ್ಕಾರೀ ಸಮೀಕ್ಷೆಗಳೇ ದೃಢಪಡಿಸಿವೆ. 

ನಮ್ಮ ದೇಶದ ವಾಟರ್ ಮಿಷನ್, ಈಗಾಗಲೇ ನೀರಿನ ಬಗ್ಗೆ ಸ್ಪಷ್ಟ ನಿಲುವನ್ನು ಅಂಗೀಕರಿಸಿದೆ. ನೀರು ಒಂದು ಸಾಮುದಾಯಿಕ ಸಂಪನ್ಮೂಲ. ಹಾಗಾಗಿ, ಆಹಾರ ಮತ್ತು ಒಟ್ಟಾರೆ ಬದುಕಿನ ಸುಪುಷ್ಟಿಗಾಗಿ, ಬದುಕಿನ ರಕ್ಷಣೆಗಾಗಿ ಬಳಸಿಕೊಳ್ಳಬೇಕಿದೆ. ಕಾರಣ, ನೀರಿಗೂ ಬಡತನಕ್ಕೂ ನೇರವಾದ ಸಂಬಂಧವಿದೆ. ಭಾರತದಲ್ಲಿ ೪೫ ಕೋಟಿಗೂ ಹೆಚ್ಚು ಜನ ಬಡವರಿದ್ದಾರೆ. ಆ ಪೈಕಿ ೩೦ ಕೋಟಿಯಷ್ಟು ಕಡುಬಡವರು. ನೀರಿನ ಸಮರ್ಪಕ ನಿರ್ವಹಣೆ ಇಲ್ಲದಿದ್ದರೆ ಈ ಸಂಖ್ಯೆ ಇನ್ನೂ ಹೆಚ್ಚಬಹುದು ಎಂಬುದು ಸದ್ಯ ಜಲತಜ್ಞರನ್ನು ಕಾಡುತ್ತಿರುವ ಬಹುದೊಡ್ಡ ಆತಂಕ.

ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*