ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸ್ವಾವಲಂಬನೆಯ ಹಾದಿಯಲ್ಲಿ ಫ್ಲೋರೈಡ್‌ಪೀಡಿತ ಹಳ್ಳಿಗಳು

ಗದಗ ಜಿಲ್ಲೆಯ ಮುಂಡರಗಿ ರಾಜ್ಯದ ಹಿಂದುಳಿದ ತಾಲ್ಲೂಕು. ಇಲ್ಲಿನ ಮೊದಲ ಸಮಸ್ಯೆ ನೀರು, ಎರಡನೇ ಸಮಸ್ಯೆ ನೀರನೊಳಗಿನ ಫ್ಲೋರೈಡ್. ಇದರಿಂದ ಸಮಸ್ಯೆಗಳ ಸರಮಾಲೆಯೇ ತುಂಬಿದೆ.  ಈ ಸಮಸ್ಯೆಗಳೆಲ್ಲಾ ಸರ್ಕಾರಕ್ಕೆ ತಿಳಿಯಲಾರದ್ದಲ್ಲ. ಇದೇ ಸಮಸ್ಯೆ ಕರ್ನಾಟಕದ ಎರಡು ಸಾವಿರ ಹಳ್ಳಿಗಳಲ್ಲಿ ಇದೆ. ಈ ಸಮಸ್ಯೆಯನ್01ನು ಸಮಗ್ರವಾಗಿ ಹಾಗೂ ಕಳಕಳಿಯಿಂದ ನೋಡದ ಕಾರಣ ೨೫ ವರ್ಷಗಳಿಂದಲೂ ಹಾಗೇ ಇದೆ.

  ಬೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಂಡರಗಿ ತಾಲ್ಲೂಕಿನ ಒಂಭತ್ತು ಹಳ್ಳಿಗಳಲ್ಲಿ ತನ್ನ ಯೋಜನೆಯನ್ನು ಕಾರ್ಯರೂಪಗೊಳಿಸುತ್ತಿದೆ. ಇದಕ್ಕೆ ಜರ್ಮನ್ ಸಂಸ್ಥೆಯೊಂದರ ಸಹಕಾರವಿದೆ.

ವಿರೂಪಾಪುರ, ಕಲ್ಕೇರಿ, ಮುಷ್ಠಿಕೊಪ್ಪ, ತಿಪ್ಪಾಪುರ, ಬೂದಿಹಾಳ, ಹಾರೋಗೇರಿ, ಬಸಾಪುರ, ಬೆನ್ನಿಹಳ್ಳಿ ಹಾಗೂ ಮುಕ್ತಾಂಪುರಗಳು ಬೈಫ್‌ನ ಕಾರ್ಯಯೋಜನೆಯ ವ್ಯಾಪ್ತಿಯಲ್ಲಿ ಇವೆ. ತೆರೆದ ಬಾವಿಯ ನೀರಾಗಿರಲಿ, ಕೊಳವೆ ಬಾವಿಯ ನೀರಾಗಲಿ ಊರಿನ ಎಲ್ಲಾ ನೀರಿನಲ್ಲೂ ೩.೫ ಮಿಲಿಗ್ರಾಂ/ಲೀಟರ್‌ನಿಂದ ೬.೫ ಮಿಲಿಗ್ರಾಂ/ಲೀಟರ್ ಫ್ಲೋರೈಡ್ ಇತ್ತು. ಇದರ ಪರಿಣಾಮ ಜಡತ್ವ, ಹಿಮ್ಮಡಿ ನೋವು, ಸೊಂಟ, ಕಾಲುಗಂಟು ನೋವು ಕೊನೆಯಲ್ಲ್ಲಿ ನಡು ಬಾಗಿ, ನಡೆಯಲಾಗದೇ ಸಾವಿನ ಹಾದಿ ಕಾಯುತ್ತಾ ಉಳಿವ ಕೆಲಸ. ದುರ್ಬಲರ ಮೂಳೆಗಳೇ ಈ ಫ್ಲೋರೈಡ್‌ನ ಆಹಾರ.

        ಇದರ ನಿವಾರಣೆಗೆ ನೀರನ್ನು ಬದಲಿಸಬೇಕೆಂಬ ಸಲಹೆ ಸರ್ಕಾರದ್ದು. ತುಂಗಭದ್ರಾ ಊರಿಗೆ ಹರಿದು ಬಂದಿದ್ದು ಆಯಿತು. ಆದರೂ ಸಮಸ್ಯೆ ಪರಿಹಾರವಾಗಲಿಲ್ಲ. ಅಂದರೆ ನೀರನ್ನೊಂದೇ ಸರಿಪಡಿಸುವುದರಿಂದ ಖಂಡಿತಾ ಊರು ಫ್ಲೋರೈಡ್‌ಮುಕ್ತವಾಗುತ್ತದೆ ಎನ್ನುವುದು ಪೂರ್ತಿ ಸತ್ಯವಲ್ಲ ಎಂದು ಸಾಬೀತಾಯಿತು. ಊರಿನ ಸರ್ವಾಂಗ ಅಭಿವೃದ್ಧಿ ಅಥವಾ ಸುಸ್ಥಿರತೆಯೇ ಮುಖ್ಯವಾಗಿತ್ತು.

  • ಫ್ಲೋರೋಸಿಸ್ ಬರುವುದು ಬಡವರಿಗೆ, ಕಾರಣ ಅಪೌಷ್ಠಿಕತೆ.
  • ಮುಂಗಾರಿನಲ್ಲಿ ಬೋರ್‌ವೆಲ್ ಹಾಗೂ ತೆರೆದ ಬಾವಿಗಳ ಫ್ಲೋರೈಡ್ ಪ್ರಮಾಣ ಕುಗ್ಗುತ್ತದೆ.

ಅಂದರೆ ಬೋರ್‌ವೆಲ್/ತೆರೆದ ಬಾವಿಗಳ ನೀರು ಹೆಚ್ಚಿದಾಗ ಫ್ಲೋರೈಡ್ ಪ್ರಮಾಣವೂ ಅದರೊಂದಿಗೆ ಬೆರೆಯುತ್ತದೆ. ಹೊಸ ನೀರಿನಲ್ಲಿ ಫ್ಲೋರೈಡ್ ಇಲ್ಲದ ಕಾರಣ ಒಟ್ಟು ನೀರಿನಲ್ಲಿಯ ಫ್ಲೋರೈಡ್ ಅಂಶ ಕಡಿಮೆಯಾಗುತ್ತದೆ. ಅದೇ ರೀತಿ ಬಡವರು ಪೌಷ್ಠಿಕ ಆಹಾರ ಸೇವನೆ ಮಾಡುವುದರಿಂದ ಫ್ಲೊರೈಡ್‌ನ ಪರಿಣಾಮವನ್ನು ಎದುರಿಸುವ ಶಕ್ತಿ ದೇಹಕ್ಕೆ ಬರುತ್ತದೆ. ಪೌಷ್ಠಿಕ ಆಹಾರ ಇಲ್ಲಿ ಪಡಿತರದಲ್ಲಿ ಸಿಗಲು ಸಾಧ್ಯವಿಲ್ಲ. ಕೊಳ್ಳಬೇಕು ಅಥವಾ ಬೆಳೆಯಬೇಕು. ಕೊಳ್ಳಲು ದಿನಗೂಲಿ ೨೫ ರೂಪಾಯಿಗಳಾದರೆ ಹೇಗೆ ಸಾಧ್ಯ? ಬೆಳೆಯಲು ಭೂಮಿ ಬರಡು. ಅಭಿವೃದ್ಧಿಪಡಿಸಲು ಹಣವಿಲ್ಲ, ಬೇರೆ ಮಾರ್ಗ ಗೊತ್ತಿಲ್ಲ.06

ಬಡತನ ನಿರ್ಮೂಲನೆ, ನೀರು ನಿರ್ವಹಣೆ ಈ ಎರಡೂ ಒಟ್ಟಾಗಿ ಆದರೆ ಫ್ಲೋರೋಸಿಸ್ ತಾನಾಗಿ ಹೋಗುತ್ತದೆ. ಬಡತನ ನಿರ್ಮೂಲನೆ ಎಂದರೆ ಮಣ್ಣಿನ ಫಲವತ್ತತೆಯ ಹೆಚ್ಚಳ, ಕೃಷಿ ಉತ್ಪಾದಕತೆಯ ಹೆಚ್ಚಳ, ಬೆಳೆ ವಿನ್ಯಾಸ, ನೀರು ಬಳಕೆಯ ರೀತಿ, ನೀರು ಸಂಗ್ರಹ ಪದ್ಧತಿ ಇವೆಲ್ಲಾ ಚಟುವಟಿಕೆಗಳು ಸಮರ್ಥವಾಗಿ ಆಗಬೇಕು.

ಬೈಫ್ ಸಂಸ್ಥೆಯ ಸಚೇತನ ಎನ್ನುವ ಯೋಜನೆಯ ಮೂಲಕ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯನ್ನು ಗುರಿಯಾಗಿಟ್ಟುಕೊಂಡು ಸ್ಥಳೀಯ ಬಡತನ ಪರಿಸ್ಥಿತಿಯನ್ನು ಎದುರಿಸುವ ಕೆಲಸ ಮಾಡಿದೆ.

ಫ್ಲೋರೋಸಿಸ್ ಹಾಗೂ ಬಡತನ ಹೇಗೆ ಅಂಟಿಕೊಂಡಿದೆಯೆಂದರೆ ಇದನ್ನು ಬೇರ್ಪಡಿಸುವ ಉಪಾಯವೇ ಇಲ್ಲವೆನ್ನುವಂತೆ ಜನ ನಿರಾಶರಾಗಿದ್ದರು. ಫ್ಲೋರೋಸಿಸ್‌ನಿಂದಾದ ಅಂಗವೈಕಲ್ಯ, ಜಡತೆ ಇವರನ್ನು ಕೃಷಿಗಾಗಲೀ, ಕೂಲಿಗಾಗಲೀ ಅಥವಾ ಇನ್ಯಾವುದೇ ಕೆಲಸಕ್ಕೆ ತೊಡಗಲು ಬಿಡುತ್ತಿರಲಿಲ್ಲ. ಕೊಳ್ಳುವ ಶಕ್ತಿ ಕ್ಷೀಣವಾದರೆ ಅಪೌಷ್ಠಿಕತೆ, ಬಡತನ ಏನೆಲ್ಲಾ ನೆಂಟರು ತಾವೇ ತಾವಾಗಿ ಬರುತ್ತಾರೆ. ಇದರಿಂದಾಗಿ ಫ್ಲೋರೋಸಿಸ್‌ನ ಆರ್ಭಟ ಹೆಚ್ಚುತ್ತದೆ.

ತತ್‌ಕ್ಷಣದಲ್ಲಿ ಆಗಬೇಕಾದ ಕೆಲಸವೆಂದರೆ ಜಡತೆಯ ನಿವಾರಣೆ. ಅದಕ್ಕಾಗಿ ಬದಲೀ ನೀರಿನ ವ್ಯವಸ್ಥೆ. ಸಿಹಿನೀರಿನ ಏಕೈಕ ಮೂಲವೆಂದರೆ ಮಳೆ. ಮಳೆನೀರನ್ನು ಹಿಡಿದಿಟ್ಟುಕೊಳ್ಳಬೇಕಾದ ವ್ಯವಸ್ಥೆ. ಇದರೊಂದಿಗೆ ಆದಾಯ ಹೆಚ್ಚಿಸುವ ಚಟುವಟಿಕೆಗಳು.

ನಿಧಾನವಾಗಿಯಾದರೂ ಆಗಲೇಬೇಕಾದ್ದು ಫ್ಲೋರೈಡ್ ನಿಯಂತ್ರಣ. ಕೃಷಿ ಉತ್ಪಾದನೆಯ ಹೆಚ್ಚಳ. ಅಪೌಷ್ಠಿಕತೆಯ ನಿವಾರಣೆ ಹಾಗೂ ಸಾಕ್ಷರತೆ.

ಮೈಲಾರಪ್ಪ ಬೂದಿಹಾಳ್

        ಊರಿನ ರೈತರಂತೆ ಮೈಲಾರಪ್ಪ ಲಿಂಗಶೆಟ್ಟರೂ ಸಹ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಕಲ್ಲು, ಮಣ್ಣಿನಿಂದ ಕೂಡಿದ ಅವರ ಮೂರು ಎಕರೆ ಒಣಭೂಮಿ ಮೈಲಾರಪ್ಪನವರ ಕುಟುಂಬಕ್ಕೆ ಹೊರೆಯಾಗಿತ್ತು. “ಮಳೆಗಾಲದಲ್ಲಿ ಮಾತ್ರ ಹೊಲಕ್ಕೆ ಹೋಗ್ತಿದ್ದೆವು. ಮಳೆ ಇಲ್ಲಾಂದ್ರೆ ಬೆಳೀನೂ ಇರ‍್ಲಿಲ್ಲ್ಲ”. ಮೈಲಾರಪ್ಪ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಇವರು ಮೊದಲು ಮಾಡಿದ ಕೆಲಸ ಮಣ್ಣು ಸವಕಳಿ ತಡೆದು ಹೊಲದಲ್ಲಿ ನೀರಿಂಗಿಸಿದರು. ಉದಿ ಬದುಗಳು, ತಿರುಗಾಲುವೆ, ಕೃಷಿಹೊಂಡಗಳು ಇವರ ಹೊಲದಲ್ಲಿ ನಿರ್ಮಾಣಗೊಂಡವು. ಜೋಳ, ಶೇಂಗಾದೊಂದಿಗೆ ಹೆಸರು ಹಾಗೂ ಕೆಂಪುಬೇಳೆಗಳು ಅಂತರಬೆಳೆಯಾಗಿ ಸೇರಿದವು. “ಮುಂಗಾರು ಕೈಕೊಟ್ಟರೂ ಇಳುವರಿ ಸಾಕಷ್ಟು ಸಿಕ್ಕಿತು. ನಾಲ್ಕಾರು ರೀತಿಯ ಬೆಳೆಗಳನ್ನು ಒಟ್ಟಿಗೆ ಬೆಳೆದಿದ್ದು ಇದೇ ಮೊದಲು” ಮೈಲಾರಪ್ಪನವರ ಈ ಯಶಸ್ಸು ಮುಂದಿನ ಹೆಜ್ಜೆಗೆ ಪ್ರೇರೇಪಣೆಯಾಯಿತು.12

        ಒಂದು ಎಕರೆಯಲ್ಲಿ ಮಾವು, ಚಿಕ್ಕು, ಹುಣಸೆ, ಪೇರಲೆ, ನಿಂಬೆ, ತೆಂಗು, ಗೇರು, ನೇರಳೆ, ದಾಳಿಂಬೆ ಮರಗಳು, ಮೇವು, ಉರುವಲು ಹಾಗೂ ಹಸುರೆಲೆ ನೀಡುವ ಮರಗಳನ್ನು ಬೆಳೆದರು. ಇವರ ಹೊಲವೀಗ ಮುಚ್ಚಿಗೆ ಬೆಳೆ ಹಾಗೂ ಸಮಗ್ರ ಕೃಷಿ ಪದ್ಧತಿಗೆ ಉತ್ತಮ ಮಾದರಿಯಾಗಿದೆ.

        “ನಾನೀಗ ದಿನಾಲೂ ಹೊಲಕ್ಕೆ ಬರುತ್ತೇನೆ. ಸೂಕ್ತ ನಿರ್ವಹಣೆಯಿಂದ ನನ್ನ ನೆಲವಿಂದು ನಗುತ್ತಿದೆ. ನನ್ನ ಕುಟುಂಬ ನೆಮ್ಮದಿಯಾಗಿದೆ” ಮೈಲಾರಪ್ಪನವರಂತೆ ಇನ್ನೂ ಅನೇಕ ರೈತರು ಇಂದು ಹೀಗೆ ನೆಮ್ಮದಿ ಕಂಡಿದ್ದಾರೆ.

ಈ ರೀತಿಯ ತತ್‌ಕ್ಷಣದ ಕೆಲಸಗಳಿಂದ ಜನರಿಗೆ ಜಡತೆಯ ನಿವಾರಣೆಯೊಂದಿಗೆ ಸಂಸ್ಥೆಯ ಮೇಲೆ ವಿಶ್ವಾಸ ಬಂದಿತ್ತು. ಆತ್ಮವಿಶ್ವಾಸವೂ ಬಂದಿತ್ತು. ಹೀಗಾಗಿ ಮುಂದಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ಸಾಹಿತರಾದರು. ಜನರ ಸಹಭಾಗಿತ್ವವಿದ್ದರೆ ಯಾವುದೇ ಕೆಲಸವೂ ಯಶಸ್ವಿಯಾಗಬಲ್ಲದು.

*       ಭೂಮಿಯ ಅಭಿವೃದ್ಧಿ

*       ಜಲಸಂಪನ್ಮೂಲಗಳ ಅಭಿವೃದ್ಧಿ

*       ಸುಸ್ಥಿರ ಕೃಷಿ ವಿಧಾನಗಳ ಅಳವಡಿಕೆ

*       ಭೂರಹಿತರಿಗೆ ಆದಾಯವರ್ಧನೆ ಚಟುವಟಿಕೆ

*       ಸಾಮರ್ಥ್ಯ ತುಂಬುವಿಕೆ ಹಾಗೂ ಜಾಗೃತಿ.

        ಇವು ಎರಡನೇ ಹಂತದಲ್ಲಿ ಇಸವಿ ೨೦೦೩ರ ನಂತರ ಹಮ್ಮಿಕೊಂಡ ಕಾರ್ಯಕ್ರಮಗಳು.

ಭೂಮಿಯ ಅಭಿವೃದ್ಧಿ

            ಭೂಮಿಯ ಅಭಿವೃದ್ಧಿಯಲ್ಲಿ ಮೊದಲ ಪ್ರಾಧಾನ್ಯತೆ ಬದುಗಳ ನಿರ್ಮಾಣ. ಕೊರಕಲುಗಳಿಗೆ ತಡೆ, ನೀರಿಂಗಿಸುವ ಕಾಲುವೆಗಳಿಗಾಗಿತ್ತು. ಕಾಲುವೆ ಪಕ್ಕ ಬದುಗಳ ನಿರ್ಮಾಣಕ್ಕೆ ಒತ್ತು ನೀಡಲಾಯಿತು. ಇದರಿಂದ ಮಣ್ಣಿನ ಸವಕಳಿ ಕಡಿಮೆ ಮಾಡುವುದು ಹಾಗೂ ನೀರು ಇಂಗಿಸುವ ಮೂಲಕ ಜಮೀನಿನಲ್ಲಿ ತೇವಾಂಶ ಸಂರಕ್ಷಣೆ.

        ಒಂದು ಮಳೆ ಋತುವಿನಲ್ಲಿ, ಒಂದು ಎಕರೆಯಲ್ಲಿ ಈ ರೀತಿಯ ಕಾಲುವೆ ಹಾಗೂ ಬದುಗಳ ನಿರ್ಮಾಣದಿಂದ ಒಂದೂವರೆ ಲಕ್ಷ ಲೀಟರ್ ನೀರು ಇಂಗುತ್ತದೆ. ಇದರಿಂದ ಫ್ಲೋರೈಡ್ ಅಂಶ ತಿಳಿಯಾಗುವಿಕೆ ಹಾಗೂ ಮತ್ತೊಂದು ಮಳೆ ಋತುವಿನವರೆಗೆ ಭೂಮಿಯಲ್ಲಿ ತೇವಾಂಶ ಉಳಿಯುವಂತೆ ಪ್ರಯತ್ನ.

        ಬದುಗಳ ಮೇಲೆ ಸ್ಟೈಲೋಹೆಮಾಟ ಹಾಗೂ ಗ್ಲಿರಿಸೀಡಿಯಾ ಮೇವಿನ ಬೆಳೆಗಳ ಬಿತ್ತನೆ. ಮೇವಿನ ಪೂರೈಕೆಗೆ ಸುಬಾಬುಲ್, ಬೇವು, ಅಕೇಸಿಯಾ, ಕಕ್ಕೆ ಗಿಡಗಳು ಉರುವಲಿಗೆ, ಗೊಬ್ಬರಕ್ಕೆ. ಹೀಗೆ ೧,೬೦೦ ಕುಟುಂಬಗಳು ೨,೬೧೦ ಹೆಕ್ಟೇರ್ ಪ್ರದೇಶದಲ್ಲಿ ಕಾಲುವೆ ಹಾಗೂ ಬದುಗಳನ್ನು ನಿರ್ಮಿಸಿವೆ.

        ಕೊರಕಲು ತಡೆ ನಿರ್ಮಾಣ ೧೬೮ ಕಡೆಗಳಲ್ಲಾಗಿದೆ. ಹೊಲದ ಸುತ್ತಮುತ್ತ ಸಿಗುವ ಕಲ್ಲುಗಳನ್ನೇ ಬಳಸಿ ಬಾಂದಾರಗಳ ನಿರ್ಮಾಣ, ನೀರಿಂಗಿಸುವ ಕಾಲುವೆಗಳನ್ನು ಪ್ರತಿ ಹೊಲದ ಅಂಚಿನಲ್ಲೂ ನಿರ್ಮಿಸಲಾಗಿದೆ. ಇದರಿಂದ ನೀರು ಹಾಗೂ ಮಣ್ಣು ಕೊಚ್ಚಿಹೋಗುವಿಕೆ ನಿಂತಿದೆ. ಕೃಷಿ ಭೂಮಿಯಲ್ಲದ ಜಾಗಗಳಲ್ಲೂ ಇದನ್ನು ನಿರ್ಮಿಸಲಾಗಿದೆ. ಕಾರಣ ಮಳೆನೀರು ಸಂಗ್ರಹಣೆ ಹಾಗೂ ಫ್ಲೋರೈಡ್ ಅಂಶ ತಗ್ಗಿಸುವಿಕೆ.

ಜಲಸಂಪನ್ಮೂಲಗಳ ಅಭಿವೃದ್ಧಿ

        ಅಂತರ್ಜಲ ಹೆಚ್ಚಳದೊಂದಿಗೆ ಫ್ಲೋರೈಡ್ ಅಂಶ ಕಡಿಮೆ ಮಾಡುವಿಕೆ ಗುರಿ. ಅದಕ್ಕಾಗಿ ಕೃಷಿ ಹೊಂಡಗಳ ನಿರ್ಮಾಣ. ಬೋರ್‌ವೆಲ್‌ಗಳಿಗೆ ಜಲಮರುಪೂರಣ ಹಾಗೂ ತಿರುವುಗಾಲುವೆಗಳ ನಿರ್ಮಾಣ ಇವು ಮುಖ್ಯ ಕಾಮಗಾರಿಗಳು.

        ಮಳೆನೀರಿನ ಸಂಗ್ರಹ, ಮಳೆನೀರಿನ ಪ್ರಯೋಜನ ತಿಳಿದ ಮೇಲೆ ಛಾವಣಿ ನೀರಿನ ಸಂಗ್ರಹ ಮಾಡುವುದರ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿದೆ. ಈ ಹಳ್ಳಿಗಳ ೩೫ ಮನೆಗಳಲ್ಲಿ ಛಾವಣಿ ನೀರಿನ ಸಂಗ್ರಹ ಮತ್ತು ನೆಲಮಟ್ಟದ ನೀರಿನ ಸಂಗ್ರಹ ಮಾಡಲಾಗಿದೆ. ಕೆಲವು ಮನೆಯ ಮಾಳಿಗೆಗಳು ಮಣ್ಣಿನವು. ಅವನ್ನು ಸಗಣಿಯಿಂದ ಸಾರಿಸಿ, ಸುಣ್ಣ ಬಳಿದು ಚೊಕ್ಕ ಮಾಡುತ್ತಾರೆ. ಆಮೇಲೆ ಮೊದಲ ಮಳೆಯ ಮೊದಲ ನೀರನ್ನು ಬಿಟ್ಟು ಎರಡನೇ ಮಳೆಯಿಂದ ನೀರು ಸಂಗ್ರಹಣೆ ಪ್ರಾರಂಭಿಸುತ್ತಾರೆ. ಪ್ರತಿವರ್ಷ ಮಳೆನೀರು ಸಂಗ್ರಹಿಸುವ ಮೊದಲು ಟ್ಯಾಂಕನ್ನು ಸ್ವಚ್ಛಮಾಡಿ ಸುಣ್ಣ ಬಳಿಯುತ್ತಾರೆ. ನೀರು ಬೀಳುವ ಸೋಸು ಗುಂಡಿಯನ್ನು ಸರಿಪಡಿಸುತ್ತಾರೆ. ವಾಸನೆರಹಿತ, ಶುದ್ಧನೀರನ್ನು ಸಂಗ್ರಹಿಸುವ ವಿಧಾನ ಈಗ ಎಲ್ಲರಿಗೂ ತಿಳಿದಿದೆ. ಇಸವಿ ೨೦೦೩ರಲ್ಲಿ ಬೈಫ್ ಸಂಸ್ಥೆ ಈ ತೊಟ್ಟಿಗಳನ್ನು ಕಟ್ಟಿಕೊಳ್ಳಲು ಶೇಕಡಾ ೮೦ ಸಹಾಯಧನ, ಸಹಕಾರ, ಮಾದರಿ ಹಾಗೂ ತಜ್ಞರನ್ನು ನೀಡಿ ಮಾಡಿದ ಕೆಲಸ ಇಂದು ಜನಪ್ರಿಯವಾಗಿದೆ.12

        ಕೆಲವರು ಮನೆಯ ಪಕ್ಕದ ಜಾಗದಲ್ಲಿ ಮತ್ತು ಹೊಲದಲ್ಲಿ ಈ ರೀತಿ ನೆಲಮಟ್ಟ ಸರಿಪಡಿಸಿಕೊಂಡು ಅದರ ಮೇಲೆ ಬಿದ್ದ ನೀರನ್ನು ಸಂಗ್ರಹಿಸುವ ಮಾದರಿ ಮಾಡಿ ತೊಟ್ಟಿ ಕಟ್ಟಿಸಿದ್ದಾರೆ. ಈ ಮಾದರಿಯಲ್ಲಿ ಆಗಾಗ ನೆಲವನ್ನು ಶುಚಿಗೊಳಿಸುವುದು, ಸುಣ್ಣ ಹಚ್ಚುವುದು ಮುಖ್ಯ. ನೀರು ಸೋಸುಗುಂಡಿಯ ಮಾರ್ಗದಲ್ಲಿ ನೆಲದೊಳಗಿರುವ ತೊಟ್ಟಿಗೆ ಬೀಳುತ್ತದೆ.

        ಆಯಾ ಕುಟುಂಬಗಳಿಗೆ ಸಾಕಾಗುಷ್ಟು ದೊಡ್ಡದಾಗಿರುವ, ವರ್ಷವಿಡೀ ಕುಡಿಯಲು ಹಾಗೂ ಅಡುಗೆಗೆ ಸಾಕಾಗುವಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯದ ತೊಟ್ಟಿಗಳಿವು. ಇವರು ಇದಕ್ಕೆ ಬೀಗ ಹಾಕಿಟ್ಟುಕೊಳ್ಳುವಷ್ಟು ನೀರಿನ ಮೌಲ್ಯ ಹೆಚ್ಚಿದೆ.

        ಮಳೆನೀರು ಕುಡಿಯುವುದರಿಂದ ಜನರ ಆರೋಗ್ಯ ಸುಧಾರಿಸುವುದು ಮೇಲ್ನೋಟಕ್ಕೆ ಕಾಣುತ್ತದೆ. ಹಿಮ್ಮಡಿನೋವು, ಮೊಣಕಾಲು ಗಂಟುನೋವು, ಸೊಂಟನೋವು, ಬೆಳಗ್ಗೆ ಏಳಲಾಗದ ಜಡತ್ವ, ಕೆಲಸ ಮಾಡಲಾಗದ ಸುಸ್ತು ಇವೆಲ್ಲಾ ಇಲ್ಲವೆಂದು ಮಳೆನೀರು ಕುಡಿವ ಜನರ ಅಭಿಪ್ರಾಯ. ಆದರೆ ಮುಷ್ಠಿಕೊಪ್ಪದ ಕಲ್ಕೇರಿಯ ಬಸವರಾಜ ಗಾಳಿಯವರ ಪ್ರಕಾರ ಕಲ್ಕೇರಿಯ ಶಾಲೆಯ ಮಕ್ಕಳ ಮತ್ತು ಮುಂಡರಗಿಯ ಕಾಲೇಜಿನ ಅನೇಕ ಯುವಕರ ಹಲ್ಲುಗಳು ಕಪ್ಪಾಗಿರುವುದನ್ನು ಖಂಡಿತವಾಗಿ ಹೇಳುತ್ತಾರೆ. ಮುಷ್ಠಿಕೊಪ್ಪದ ಅನ್ನಕ್ಕ, ಚೇತನ, ದ್ಯಾಮವ್ವ, ಮುದುಕೇಶ ಹೀಗೆ ಅನೇಕ ಮಕ್ಕಳ ಹಲ್ಲುಗಳು ಈಗಲೂ ಕಪ್ಪಾಗಿವೆ. ಈ ಮಕ್ಕಳಲ್ಲಿ ಕೆಲವರಿಗೆ ಪೌಷ್ಠಿಕ ಆಹಾರದ ಕೊರತೆಯೇ ದುರ್ಬಲತೆಗೆ ಕಾರಣವೆನ್ನುವುದು ಸಮೀಕ್ಷೆಯಿಂದ ತಿಳಿಯುತ್ತದೆ. ಮತ್ತೊಂದು ಮುಖ್ಯ ಕಾರಣ ಸೋದರಸಂಬಂಧದಲ್ಲಿ ಮದುವೆ ಮಾಡಿಕೊಳ್ಳುವುದು. ಇದು ಅನುವಂಶಿಕ ದುರ್ಬಲತೆಗೆ ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ಮಳೆನೀರು ಕುಡಿಯುತ್ತಿರುವ ಕಾರಣ ಹತ್ತಾರು ವರ್ಷಗಳಿಂದ ಬೇರುಬಿಟ್ಟ ಫ್ಲೋರೋಸಿಸ್ಸನ್ನು ತಕ್ಷಣದಲ್ಲಿ ಕಡಿಮೆಯಾಗಿಸುವುದು ಸಾಧ್ಯವಿಲ್ಲ.

        ಆದರೆ ಈಗಿರುವ ೪೦ರ ಹರೆಯದವರಲ್ಲಿ ನಡುಬಾಗಿದವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಉಲ್ಲೇಖನೀಯ.

        ಕೃಷಿಹೊಂಡಗಳ ನಿರ್ಮಾಣದ ಉದ್ದೇಶ ಕೃಷಿಗೆ ಸಕಾಲದಲ್ಲಿ ನೀರು ಸಿಗುವಂತೆ ಮಾಡುವ ವ್ಯವಸ್ಥೆ ಹಾಗೂ ಹೆಚ್ಚಾದ ನೀರು ಕೃಷಿಹೊಂಡ ಸೇರಿ ಅಂತರ್ಜಲ ಮಟ್ಟ ಏರಿಸಬೇಕೆಂಬ ಉದ್ದೇಶ. ಹೀಗೆ ೧,೧೩೫ ಕೃಷಿಹೊಂಡಗಳ ನಿರ್ಮಾಣ. ಅಳತೆ ೩೦ ಘಿ ೩೦ ಘಿ ೧೦ ಕ್ಯುಬಿಕ್ ಅಡಿಗಳು. ಒಮ್ಮೆ ಒಂದು ಹೊಂಡ ತುಂಬಿದರೆ ನೀರಿಂಗುವ ಪ್ರಮಾಣ ಎರಡು ಲಕ್ಷ ಲೀಟರ್.

ಪಾಟೀಲರ ಹೊಂಡ

        ದಿವ್ಯಜ್ಯೋತಿ ಗ್ರಾಮದ ವಿಕಾಸ ಸಮಿತಿ ಅಂದು ಶ್ರಮದಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಲ್ಕೇರಿಯ ಎಲ್ಲ ಸ್ವಸಹಾಯ ಗುಂಪುಗಳ ಸದಸ್ಯರು ಹಾಜರಿದ್ದರು. ಅಂದಿನ ಕೆಲಸ ಪಾಟೀಲರ ಕೃಷಿಹೊಂಡದ ಸ್ವಚ್ಛತೆ. ಮಳೆಯಿಂದಾಗಿ ಹೂಳು ತುಂಬಿದ ಹೊಂಡವನ್ನು ಸರಿಪಡಿಸುವಿಕೆ. ಚಿಕ್ಕ ಹೊಂಡ ಸರಿಪಡಿಸಲು ಊರಿನ ಎಲ್ಲರೂ ಬಂದಿದ್ದೇಕೆ? ೧೦೦ಕ್ಕೂ ಹೆಚ್ಚು ಜನ ಸೇರಿದ್ದರ ಹಿಂದಿನ ರಹಸ್ಯವೇನು? ಅದೂ ಭಾನುವಾರ ಎಂಟುಗಂಟೆಗೆ ಎಲ್ಲರೂ ಬಂದಿರುವುದರ ಗುಟ್ಟೇನು?

        ಕಲ್ಕೇರಿಯ ಶಂಕರಗೌಡ ಪಾಟೀಲರು ತಮ್ಮ ಹೊಲದಲ್ಲಿ ಮೊದಲು ಕೃಷಿಹೊಂಡ ತೆಗೆಸಿದರು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದ ಕಲ್ಕೇರಿಯ ಜನಕ್ಕೆ ಅದು ಮರುಭೂಮಿಯ ಜೀವಜಲ ಓಯಸಿಸ್‌ನಂತಾಗಿತ್ತು. ಊರಿನ ಬೋರ್‌ವೆಲ್, ಬಾವಿಗಳು ನೀಡುವ ವಿಷಮಯ, ರುಚಿರಹಿತ ನೀರಿಗಿಂತ ಮಳೆಯಿಂದಾಗಿ ತುಂಬಿದ ಕೃಷಿಹೊಂಡದ ನೀರು ಸಿಹಿಯಾಗಿತ್ತು. ಒಂದಿಬ್ಬರು ಇದರ ನೀರನ್ನು ಕುಡಿದು ಊರಿಗೆಲ್ಲಾ ಸುದ್ದಿ ಹಬ್ಬಿಸಿದರು. ಊರಿನ ಮುಕ್ಕಾಲುಪಾಲು ಜನ ಗುಳೆ ಎದ್ದವರಂತೆ ಪಾಟೀಲರ ಕೃಷಿಹೊಂಡಕ್ಕೆ ನಾಲ್ಕಾರು ಬಿಂದಿಗೆಗಳ ಸಹಿತ ಸಾಲು ಹಚ್ಚಿದರು. ಇದು ಮುಂದೆ ನಿತ್ಯಕಾಯಕವಾಯಿತು. ಶುದ್ಧ, ಸಿಹಿನೀರಿನ ಹೊಂಡ ಊರಿನವರ ಸ್ವತ್ತಾಗಿತ್ತು. ಅದಕ್ಕಾಗಿ ಅದನ್ನು ಚೆನ್ನಾಗಿ ಇಟ್ಟುಕೊಳ್ಳುವುದೂ ಸಹ ಅವರಿಗೆ ಅನಿವಾರ್ಯವಾಗಿತ್ತು.

        ಕೃಷಿ ಜಮೀನಿನೊಳಗೆ ಹೊಂಡದ ನಿರ್ಮಾಣಕ್ಕೆ ಮೊದಲಿಗೆ ಎಲ್ಲರ ವಿರೋಧ. ಆದರೆ ಪಾಟೀಲರ ಹೊಲದ ಹೊಂಡದ ಸಿಹಿನೀರು ಕುಡಿದ ಮೇಲೆ ಎಲ್ಲರಿಗೂ ಅಸೆ. ಇಸವಿ ೨೦೦೪ರಲ್ಲಿ ಮಳೆ ಇನ್ನಷ್ಟು ಕಡಿಮೆಯಾದಾಗ ಇನ್ನೂ ತಡಮಾಡುವುದರಲ್ಲಿ ಅರ್ಥವಿಲ್ಲವೆಂದು ಪ್ರತಿಯೊಬ್ಬರೂ ಮುಂದಾಗಿದ್ದು ಈಗ ಇತಿಹಾಸ.

        ತಿರುವುಗಾಲುವೆಗಳು ನೋಡಲು ತೀರಾ ಸಾಮಾನ್ಯವೆನಿಸುತ್ತವೆ. ಆದರೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಕೃಷಿಹೊಂಡಕ್ಕೆ, ಬತ್ತಿಹೋದ ಬಾವಿಗಳಿಗೆ, ಬೋರ್‌ವೆಲ್ ಜಲಮರುಪೂರಣಕ್ಕೆ ಬಳಸಿದರೆ ಅದರ ವಿಶೇಷತೆ ತಿಳಿಯುತ್ತದೆ. ಇಂತಹ ತಿರುವುಗಾಲುವೆಗಳಿಂದ ನುಗ್ಗಿ ಬರುವ ಕಸಕಡ್ಡಿ, ಹೂಳುಮಣ್ಣು ನಿಯಂತ್ರಿಸಲು ಒಂದು ಇಂಗುಗುಂಡಿಯನ್ನು ಮಾಡಬೇಕಾಗುತ್ತದೆ.

        ೩೦ ಬೋರ್‌ವೆಲ್‌ಗಳಿಗೆ ಜಲ ಮರುಪೂರಣ ವ್ಯವಸ್ಥೆ ಹಾಗೂ ೩೦ ಛಾವಣಿ ನೀರು ಸಂಗ್ರಹ ವ್ಯವಸ್ಥೆಯೂ ಯೋಜನೆಯಲ್ಲಿ ಆಗಿದೆ. ಗುರುತಿಸಲಾದ ೬೨ ಮೂಲಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಪರೀಕ್ಷೆ ನಡೆಸಲಾಗುತ್ತಿತ್ತು. ಇದನ್ನು ಸಂಸ್ಥೆಯು ಗುಟ್ಟಾಗಿ ಇಟ್ಟಿತ್ತು ಎಂದು ಈಗ ದಾಖಲಾತಿ ವಿಭಾಗದ ಮುಖ್ಯಸ್ಥ ಬಸವರಾಜ ಪಾಟೀಲರು ಹೇಳುತ್ತಾರೆ. ಇಲ್ಲಿ ಫ್ಲೋರೋಸಿಸ್ ಒಂದು ಸೂಕ್ಷ್ಮ ರಾಜಕೀಯ ವಿಷಯ. ಪರೀಕ್ಷೆಯ ಫಲಿತಾಂಶ ಪೂರ್ತಿ ಅಧ್ಯಯನವಾಗದೇ ಬಹಿರಂಗವಾಗುವುದು ಸರಿಯಲ್ಲ ಹಾಗೂ ಯಾವುದೋ ರಾಜಕೀಯ ವ್ಯಕ್ತಿಗಳು ಇದರ ಲಾಭ ಗಳಿಸಿ ಜನರಿಗೆ ವಂಚಿಸುವುದೂ ಸೂಕ್ತವಲ್ಲ.

ಸುಸ್ಥಿರ ಕೃಷಿ ವಿಧಾನಗಳ ಅಳವಡಿಕೆ

        ಏಕಬೆಳೆ ಪದ್ಧತಿ ಇಲ್ಲಿ ಸಾಮಾನ್ಯವಾಗಿತ್ತು. ಜೋಳ, ಸಜ್ಜೆ, ಗೋಧಿ ಮತ್ತು ಮೆಕ್ಕೆಜೋಳ ಮುಖ್ಯಬೆಳೆ. ಶೇಂಗಾ, ಸೂರ್ಯಕಾಂತಿ ಮತ್ತು ಹತ್ತಿ ವಾಣಿಜ್ಯ ಬೆಳೆ. ಕೆಲವು ಕಡೆಗಳಲ್ಲಿ ಜೋಳ ಅಥವಾ ಶೇಂಗಾದೊಂದಿಗೆ ತೊಗರಿಬೇಳೆ ಮತ್ತು ಕೇಸರಿಬೇಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದರು.

        ಇಳುವರಿ ಕಡಿಮೆಯಾದಂತೆ ಇವರಲ್ಲಿ ಕೃಷಿ ಆಸಕ್ತಿಯೇ ಕುಗ್ಗಿಹೋಗಿತ್ತು. ಮಿಶ್ರಬೆಳೆ ಪದ್ಧತಿ, ಮರ ಆಧಾರಿತ ಕೃಷಿ ಪದ್ಧತಿ, ಬೆಳೆ ಆವರ್ತನೆ ಪದ್ಧತಿಗಳನ್ನು ರೈತರಿಗೆ ಪರಿಚಯಿಸಲಾಯಿತು. ಅದರಲ್ಲಿ ಜೋಳದೊಂದಿಗೆ ಹಾಗೂ ಶೇಂಗಾದೊಂದಿಗೆ ಹೆಸರು, ತೂರ್, ಅಲಸಂದೆ, ಹಸುರು ಗೊಬ್ಬರವಾಗಿ ಸೆಣಬುಗಳನ್ನು ಬೆಳೆಯಲಾಯಿತು. ಖುಷ್ಕಿಯಲ್ಲಿ ಜೋಳ, ತೊಗರಿ ಹಾಗೂ ತರಕಾರಿಗಳಿಗೆ ಆದ್ಯತೆ. ಅದೇ ರೀತಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ೧೦೦ ಕಾಡುಜಾತಿಯ ಮರಗಳು ಹಾಗೂ ೧೦೦ ತೋಟಗಾರಿಕೆ ಮರಗಳನ್ನು ಹಚ್ಚಲಾಯಿತು. ಒಂದೊಮ್ಮೆ ಹೊಲದ ಬೆಳೆ ಕೈಗೆ ಬರದಿದ್ದರೂ ಮರಗಳು ಹಾಗೂ ಹಣ್ಣಿನ ಗಿಡಗಳು ಕೃಷಿಕರನ್ನು ಬದುಕಿಸುತ್ತವೆ ಎಂಬುದು ಯೋಜನೆಯ ಸಂಚಾಲಕರಾದ ಜಿ.ವೀರಣ್ಣನವರ ಅಭಿಪ್ರಾಯ.

        ಇದರೊಂದಿಗೆ ಹಸು, ಎಮ್ಮೆ ಸಾಕಿದವರು ಎರೆಗೊಬ್ಬರ ತಯಾರಿಸತೊಡಗಿದರು. ಇದರಿಂದ ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆ ತಪ್ಪಿತು. ಹಾಗೇ ಬೀಜ ಬ್ಯಾಂಕ್‌ನಿಂದಾಗಿ ಹೊರಗಿನಿಂದ ಬೀಜಗಳನ್ನು ತರುವುದು ಕಡಿಮೆಯಾಯಿತು.

        ಕೃಷಿಹೊಂಡದ ಸುತ್ತ, ಮನೆಯ ಹಿಂದಿನ ಹಿತ್ತಿಲುಗಳಲ್ಲಿ ತರಕಾರಿಗಳು ಹೆಚ್ಚಿದವು. ಮನೆಬಳಕೆಗೆ ಹೆಚ್ಚಾದದ್ದು ಮಾರಾಟಕ್ಕೆ. ಮುಷ್ಠಿಕೊಪ್ಪದ ಗಂಗಮ್ಮ ಹೇಳುತ್ತಾರೆ “ಕಳೆದ ಎಂಟು ತಿಂಗಳಿಂದ ಈ ಟೊಮ್ಯಾಟೋ ಗಿಡಗಳು ಹಣ್ಣು ಕೊಡುತ್ತಾ ಇದಾವ್ರಿ. ಜೊತೆಗೆ ಸೊಪ್ಪು, ಇನ್ನಿತರ ಆರು ತರಕಾರಿಗಳನ್ನೂ ಬೆಳೀತೀನ್ರಿ”. ಈಕೆಗೆ ಹಿತ್ತಿಲು ಬಿಟ್ಟರೆ ಬೇರೆ ಜಾಗವಿಲ್ಲ. ಇರುವಷ್ಟರಲ್ಲೇ ಏನೆಲ್ಲಾ ಬೆಳೆವ ಆಸಕ್ತಿ.

ಭೂರಹಿತರಿಗೆ ಆದಾಯವರ್ಧನೆ ಚಟುವಟಿಕೆ

        ಯೋಜನೆಯ ಅಡಿಯಲ್ಲಿ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸಂಘಗಳ ರಚನೆ, ಉಪರಚನೆಯಾಗಿ ಸ್ವಸಹಾಯ ಸಂಘಗಳ ನಿರ್ಮಾಣ. ಜಾನುವಾರು ಸಾಕಣೆ, ಎಣ್ಣೆ, ಬಳೆ, ಪಾತ್ರೆ ವ್ಯಾಪಾರ, ಕಾರ್ಪೆಂಟರಿ, ಚಾಪೆ ನೇಯ್ಗೆ, ಎರೆಹುಳ ಸಾಕಾಣಿಕೆ, ಸೈಕಲ್ ಶಾಪ್, ಟೀಶಾಪ್, ಲಾಂಡ್ರಿ, ದಿನಸಿ, ಸಸ್ಯಾಭಿವೃದ್ಧಿ ಇತ್ಯಾದಿಗಳಿಗೆ ಬಡ್ಡಿರಹಿತ ಸಾಲ ನೀಡಿಕೆ.

ವೀರೇಶಿಯ ಸೈಕಲ್ ಶಾಪ್

        ವೀರೇಶ್ ಈಶ್ವರಯ್ಯ ಹೆಸರೂರು ಕಲ್ಕೇರಿಯ ಭೂರಹಿತ ನಿರುದ್ಯೋಗಿ. ಕಪ್ಪತೇಶ್ವರ ಸ್ವಸಹಾಯ ಸಂಘದ ಸದಸ್ಯ. ಅಪ್ಪನ ಕುಡಿತದಿಂದಾಗಿ ಅವರ ಏಕೈಕ ಆದಾಯಮೂಲವಾಗಿದ್ದ ಸೈಕಲ್ ಶಾಪ್ ವ್ಯವಹಾರ ದಿವಾಳಿಯಾಯಿತು. ಕುಟುಂಬದ ಆರು ಜನ ಸದಸ್ಯರಿಗೂ ಅರೆಹೊಟ್ಟೆಯೇ ಗತಿಯಾಯಿತು. ಆಗಲೇ ಭೈಪ್ ಉದ್ಯಮಶೀಲತಾ ಶಿಬಿರದಲ್ಲಿ ಹೊಸ ಹುರುಪು ಪಡೆದ ವೀರೇಶಿ ಸೈಕಲ್ ರಿಪೇರಿ ತರಬೇತಿಗೆ ಸೇರಿದರು. ದಾಸನಕೊಪ್ಪ ಹಾಗೂ ಸುರಶೆಟ್ಟಿಕೊಪ್ಪಗಳ ಪ್ರವಾಸದಲ್ಲಿ ಭೂರಹಿತ ನಿರುದ್ಯೋಗಿಗಳು ಉದ್ಯಮಶೀಲರಾಗಿರುವುದನ್ನು ನೋಡಿ ಪ್ರೇರೇಪಿತರಾದರು. ತನ್ನ ಸ್ವಸಹಾಯ ಸಂಘದಲ್ಲಿ ೫,೦೦೦ ರೂಪಾಯಿಗಳನ್ನು ಸಾಲ ಪಡೆದು ತನ್ನಲ್ಲಿದ್ದ ೧,೦೦೦ ರೂಪಾಯಿಗಳನ್ನು ಸೇರಿಸಿ ಸೈಕಲ್‌ಶಾಪ್‌ಗೆ ಮರುಜೀವ ನೀಡಿದರು. ಕೆಲವು ಸೈಕಲ್‌ಗಳ ಖರೀದಿ. ಸೈಕಲ್ ರಿಪೇರಿ, ಪಂಪ್ ರಿಪೇರಿ, ಸ್ಪ್ರೇಯರ್, ಗ್ಯಾಸ್‌ಲೈಟ್ ರಿಪೇರಿ ಹೀಗೆ ಯಾವುದೇ ರಿಪೇರಿ ಇದ್ದರೂ ವೀರೇಶಿ ಬೇಕೆನ್ನುವಷ್ಟು ಹಕ್ಕೊತ್ತಾಯ. ಕುಟುಂಬದ ಹಿರಿಯಮಗನಾದ ವೀರೇಶಿಗೆ ಮನೆಯ ನಿರ್ವಹಣೆಯ ಜವಾಬ್ದಾರಿ. ದಿನಕ್ಕೆ ಸರಾಸರಿ ೨೦೦ ರೂಪಾಯಿಗಳ ಗಳಿಕೆ. ತಿಂಗಳಿಗೊಮ್ಮೆ ಸೈಕಲ್‌ಶಾಪ್‌ಗೆ ಬೇಕಾದ ವಸ್ತುಗಳ ಖರೀದಿ. ಉಳಿದದ್ದು ಮನೆ ಖರ್ಚಿಗೆ.

        ಕ್ರಮೇಣ ವೀರೇಶಿ ಆರು ಎಕರೆ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಕೃಷಿಗೆ ಪಡೆದುಕೊಂಡರು. ಮನೆಯಲ್ಲಿದ್ದವರಿಗೂ ಈಗ ಕೈತುಂಬಾ ಕೆಲಸ. ಜೋಳ, ಸೂರ್ಯಕಾಂತಿ, ಹುರುಳಿ ಹೀಗೆ ಅನೇಕ ಬೆಳೆಗಳನ್ನು ಬೆಳೆಯತೊಡಗಿದರು. ಇದಕ್ಕೂ ಬೈಫ್ ಸಂಸ್ಥೆಯ ಮಾರ್ಗದರ್ಶನ. ಮನೆಯಲ್ಲಿ ಎರಡು ಎಮ್ಮೆ ಹಾಗೂ ಎರಡು ಕುರಿಗಳನ್ನು ಸಾಕತೊಡಗಿದರು. ಹೊಲದಲ್ಲಿ ಸಿಗುವ ಮೇವು ಇವುಗಳ ಪಾಲು. ಬೇರೆ ಖರ್ಚಿಲ್ಲ.

        ವೀರೇಶಿಯ ತಾಯಿ ನೀಲಮ್ಮ ಬನಶಂಕರಿ ಸಂಘದ ಸದಸ್ಯೆ. ಸಂಘದಲ್ಲಿ ಸಾಲ ಮಾಡಿ ರೂಪಾಯಿ ೮೦೦ಕ್ಕೆ ಒಂದು ಕುರಿಮರಿಯನ್ನು ಕೊಂಡರು. ವರ್ಷ ಕಳೆಯುವುದರಲ್ಲಿ ಅದು ಬೆಳೆದು ೩,೦೦೦ ರೂಪಾಯಿಗಳಿಗೆ ಮಾರಾಟವಾಯಿತು.

        ವೀರೇಶಿ ಎಲ್‌ಐಸಿ ಪಾಲಿಸಿ ಮಾಡಿಸಿದ್ದಾರೆ. ಇದೀಗ ೨೫,೦೦೦ ರೂಪಾಯಿಗಳು ಸಿಗುತ್ತಿದೆ. ತಮ್ಮ ತಂಗಿಯರನ್ನು ಓದಿಸಿದ್ದಾರೆ. ಹೀಗೆ ಸಂಸಾರದ ಗಾಡಿಯನ್ನು ಎಳೆಯುವಾಗಲೇ ಹರೆಯದ ತಂಗಿ ತೀರಿಕೊಂಡಳು. ಕಲ್ಕೇರಿಯಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗದ ಅಸಹಾಯಕತೆ. ಮನಸ್ಸಿಗೆ ನೋವು, ಆದರೆ ಕುಟುಂಬದ ಉಳಿದವರು ಕುಸಿದುಬಿಡುತ್ತಾರೆ ಎಂಬ ಯೋಚನೆಯಿಂದಾಗಿ ಎಲ್ಲವನ್ನೂ ಧೈರ್ಯದಿಂದ ಎದುರಿಸಿದರು. ಇದಕ್ಕೆಲ್ಲಾ ಸಿದ್ಧಿಸಮಾಧಿ ಯೋಗದ ತರಬೇತಿ ಕಾರಣ ಎನ್ನುವ ವಿಶ್ವಾಸ ಅವರದು.

        ಇವರಿಗೆ ಫ್ಲೋರೈಡ್‌ನ ವಿಷ ತಟ್ಟಿಲ್ಲ. ಬಡತನದ ಭೂತ ದೂರಾಗಿದೆ. ದಿನಾ ವ್ಯಾಯಾಮ, ಆರೋಗ್ಯಯುತ ಆಹಾರ ಸೇವನೆ ಇವೆಲ್ಲಾ ಇವರನ್ನು ಸದೃಢವಾಗಿಸಿದೆ. ಇಂದು ಯಾವುದೇ ಮಾನಸಿಕ, ದೈಹಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬಲ್ಲೆ ಎಂಬ ಆತ್ಮವಿಶ್ವಾಸ ೨೫ರ ಹರೆಯದ ವೀರೇಶಿಯದು.

        ವರ್ಷಾವಧಿ ನಡೆವ ಜಲಾನಯನ ಕೆಲಸಗಳಿಗಾಗಿ ದಿನಗೂಲಿಗಳಿಗೆ ಉದ್ಯೋಗ. ಯೋಜನೆಯಲ್ಲಿ ಹೀಗೆ ಒಂದು ಲಕ್ಷದ ಒಂಭತ್ತು ಸಾವಿರ ಮಾನವ ದಿನಗಳ ಕೆಲಸ. ಇದರಿಂದ ಮಣ್ಣಿನ ಫಲವತ್ತತೆ, ನೀರಿನ ಲಭ್ಯತೆಯಿಂದಾಗಿ ಸುಸ್ಥಿರ ಕೃಷಿಯ ಸಾಧ್ಯತೆ. ಇವೆಲ್ಲಾ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿಗೆ ಕಾರಣವಾಗಿದೆ. ಕೂಲಿಗಳು ಕೆಲಸಕ್ಕಾಗಿ ಊರು ಬಿಟ್ಟು ಗುಳೆ ಹೋಗುವಿಕೆ ನಿಂತಿದೆ.

ಸಾಮರ್ಥ್ಯವರ್ಧನೆ ಹಾಗೂ ಜಾಗೃತಿ

        ಒಮ್ಮೆ ಸಮುದಾಯದ ಸಾಮರ್ಥ್ಯ ಹೆಚ್ಚಿಸಿದರೆ ಅವರು ನಿರಂತರ ಅಭಿವೃದ್ಧಿಯ ದಾರಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಅದಕ್ಕಾಗಿ ವೈವಿಧ್ಯಮಯ ತಂತ್ರಜ್ಞಾನ ಹಾಗೂ ತಾಂತ್ರಿಕತೆಗಳ ತರಬೇತಿ ಬಲು ಮುಖ್ಯ. ಅದರಲ್ಲೂ ಏಕಪ್ರಕಾರದ ಕೃಷಿಯ ಬದಲಾಗಿ ಸಮಗ್ರ ವಿಧಾನಗಳು, ಮರ ಆಧಾರಿತ ಕೃಷಿ, ನೀರಿನ ಅಭಿವೃದ್ಧಿ ಅಗತ್ಯ.

        ಕೃಷಿಹೊಂಡ ಮಾಡಿದರೆ ಹೊಲದಲ್ಲಿ ಜಾಗ ಕಡಿಮೆಯಾಗುತ್ತದೆ. ಹೊಲದ ನೀರೆಲ್ಲಾ ಹೊಂಡಕ್ಕೆ ಬಸಿದು ಹೋಗುತ್ತದೆ. ಹೊಲದೊಳಗೆ ಗಿಡ ನೆಟ್ಟರೆ ನೆರಳಿನಿಂದಾಗಿ ಬೆಳೆ ಚೆನ್ನಾಗಿ ಬರುವುದಿಲ್ಲ. ಈ ಯೋಚನೆಗಳು ರೈತರಲ್ಲಿ ತುಂಬಿತ್ತು. ಧಾರವಾಡದ ಕಂಪ್ಲಿಕೊಪ್ಪ, ಬಗಡಗೇರಿಯ ರೈತರ ಹೊಲಗಳನ್ನು ನೋಡಿ ಬಂದ ಮೇಲೆ ಮನಸ್ಸು ಬದಲಾಯಿತು. ಕೃಷಿ ಹೊಂಡ, ಮರಗಳಿಂದ ಲಾಭ ಜಾಸ್ತಿ. ಇಳುವರಿಗೆ ಕೊರತೆಯಾಗದು ಎನ್ನುವ ಒಪ್ಪಿಗೆ ಪರಸಪ್ಪ ಮರೇಗೌಡರು, ಯುವ ರೈತರಾದ ರಾಮಚಂದ್ರ ಕಮ್ಮಾರ, ಮಂಜುನಾಥ ಬಡಿಗೇರ, ಪ್ರಕಾಶ ತಿಪ್ಪಾಪುರ ಮುಂತಾದವರದು. ಇದು ಪ್ರಯೋಗವನ್ನು ನೋಡಿ ತಿಳಿದ ಪರಿಣಾಮ.

        ಮುಂದೆ ಈ ಹಳ್ಳಿಗಳಲ್ಲಿಯೇ ಹಸುರು ಹಬ್ಬ, ಸೈಕಲ್ ಜಾಥಾ ಹಾಗೂ ಪಾದಯಾತ್ರೆಗಳು ನಡೆದವು. ಒಂಭತ್ತೂ ಹಳ್ಳಿಗಳ ಜನ ನಿಗದಿತ ದಿನ, ನಿಗದಿತ ಸಮಯಕ್ಕೆ, ನಿಗದಿತ ಪ್ರದೇಶದಲ್ಲಿ ಲಕ್ಷಾಂತರ ಅರಣ್ಯ ಸಸ್ಯಗಳನ್ನು ನೆಟ್ಟರು. ಇದೊಂದು ರೀತಿಯಲ್ಲಿ ಸಮುದಾಯವೆಲ್ಲಾ ಸೇರಿ ಆಚರಿಸುವ ಹಬ್ಬಗಳ ಸಾಲಿಗೆ ಸೇರಿದ ಹೊಸ ಹಬ್ಬವಾಗಿತ್ತು. ಹಸಿರು ಕಂಕಣ, ಹಸಿರಿನ ಮಹತ್ವ, ಗಿಡಗಳು ನೀಡುವ ಆರೋಗ್ಯ ಇವೆಲ್ಲಾ ಪಾಠಗಳು ಹಸುರು ನೆಡುವ ಮೂಲಕ ಅರಿವಿಗೆ ಬಂದಿತ್ತು. ಸಮುದಾಯದ ಜೀವನ ವಿಧಾನವನ್ನೇ ಬದಲಿಸುವ ಚಟುವಟಿಕೆ ಇದು.

        ಇದಕ್ಕೆಲ್ಲಾ ಕಾರಣವಾದದ್ದು ಒಂಭತ್ತು ಹಳ್ಳಿಯಗಳಲ್ಲಿಯ ಒಗ್ಗಟ್ಟಾದ ಜನ. ಸಹಭಾಗಿತ್ವದ ಸಂಘಟನೆ, ಗ್ರಾಮ ವಿಕಾಸ ಸಮಿತಿಯ ನಿರ್ಧಾರಗಳು. ಸಚೇತನ ನೈಸರ್ಗಿಕ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಲಕ ಕಾರ್ಯ ಚಟುವಟಿಕೆ. ಹೀಗೆ ಆದ ಕೆಲಸಗಳು ಹಳ್ಳಿಯ ಬದುಕನ್ನು, ಜನರ ಜೀವನಮಟ್ಟವನ್ನೇ ಬದಲಿಸಿತು. ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಕಲ್ಕೇರಿಯ ಮೊಹಮ್ಮದ್ ಅಲಿ ಮುಲ್ಲಾ ಹೇಳುತ್ತಾರೆ “ಫ್ಲೋರೋಸಿಸ್ ನಿವಾರಣೆ, ಅಂತರ್ಜಲ ಹೆಚ್ಚಳ, ಮಣ್ಣಿನ ಫಲವತ್ತತೆ, ಹಸಿರು ಹೊದಿಕೆ, ಬಡತನ ನಿವಾರಣೆ ಏನೆಲ್ಲಾ ಆಗಿವೆ. ಅದಕ್ಕಿಂತಲೂ ಸಮುದಾಯದೊಳಗೊಂದು ಸಾಮಾಜಿಕ ಬಂಧ, ಹೃದಯ ಮಿಲನ ಉಂಟಾಗಿದೆ. ಅದಕ್ಕೆ ಸಾಕ್ಷಿ ರಾಷ್ಟ್ರೀಯ ಹಬ್ಬಗಳನ್ನು ಇಡೀ ಊರಿಗೆ ಊರೇ ಸೇರಿ ಆಚರಿಸುತ್ತಿದೆ.

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*