ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಗೊತ್ತುಗುರಿ ಇಲ್ಲದ ನೀರಾವರಿ

ಕಳೆದ ಎರಡು ತಿಂಗಳಿನಿಂದ ಎಲ್ಲಾ ಮಾಧ್ಯಮಗಳಲ್ಲಿ ಬರೀ ಹೋರಾಟ, ಬಂದ್‌ಗಳದ್ದೇ ಸುದ್ದಿ. ಉತ್ತರ ಕರ್ನಾಟಕದಲ್ಲಿ ಮಹದಾಯಿಗಾಗಿ ಹೋರಾಟ ನಡೆದರೆ ದಕ್ಷಿಣ ಕನ್ನಡದಲ್ಲಿ ಎತ್ತಿನಹೊಳೆ ಯೋಜನೆ ಜಾರಿ ವಿರೋಧಿಸಿ ಹೋರಾಟ ನಡೆದಿದೆ. ಎರಡೂ ನೀರಿಗೆ ಸಂಬಂಧಪಟ್ಟದ್ದೇ. ಈ ಮಧ್ಯೆ, ನಾಡಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಬಿದ್ದ ಪರಿಣಾಮ, ಬರದ ಭೀಕರತೆ ತಾಂಡವವಾಡುತ್ತಿದೆ. ಅನ್ನದಾತ ಕಂಗೆಟ್ದಿದ್ದಾನೆ. ಬರ ಮೆಟ್ಟಿ ನಿಲ್ಲುವ ಛಲ ಅವನಲ್ಲಿ ಇಲ್ಲದಾಗಿದೆ. ಇದಕ್ಕೆ ಅವನ ಅರಿವಿನ ಕೊರತೆ, ಸೋಮಾರಿತನ, ಜತೆಗೆ ದುರಾಸೆಯೂ ಇದೆ. ಇನ್ನು ನಮ್ಮನ್ನಾಳುವ ಸರಕಾರಗಳು ಜಲಸಂಕಟ ಪರಿಹರಿಸುವ ಯಾವುದೇ ಗಂಭೀರ ಚಿಂತನೆ ನಡೆಸಿಲ್ಲ ಎನ್ನುವುದೂ ಅಷ್ಟೇ ಸ್ಪಷ್ಟ.

ಜನರು ಮತ್ತು ಅಭಿವೃದ್ಧಿ ಹೆಸರಿನಲ್ಲಿ ಜಾರಿಗೆ ಬರುವ ನೀರಾವರಿ ಯೋಜನೆಗಳು ಗೊತ್ತುಗುರಿಯಿಲ್ಲದೇ ಯಾರದೋ ಹಿತಾಸಕ್ತಿ ಕಾಪಾಡುವುದರ ಜತೆಗೆ ಅವ್ಶೆಜ್ಞಾನಿಕವಾಗಿರುತ್ತವೆ ಎನ್ನಲು ಎತ್ತಿನಹೊಳೆ ಮತ್ತು ಮಹದಾಯಿ ಯೋಜನೆಗಳೆ ಸ್ಪಷ್ಟ ನಿದರ್ಶನ. ಅದ್ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ…..

ದಿನ ಬೆಳಗಾದರೆ ಮಾಧ್ಯಮಗಳಲ್ಲಿ ಈ ಎರಡೂ ಹೋರಾಟದ ಬೆಳವಣಿಗೆಗಳ ಬಗ್ಗೆ ವರದಿ ಪ್ರಸಾರವಾಗುತ್ತದೆ. ಅಲ್ಲಿ ಹೀಗಾಯ್ತು ಇಲ್ಲಿ ಹಾಗಾಯ್ತು. ಇವರು ಧರಣಿ ನಡೆಸಿದ್ರು, ರಾಜ್ಯ ಕೇಂದ್ರದತ್ತ ಕೇಂದ್ರ ರಾಜ್ಯದತ್ತ ಬೊಟ್ಟು ಮಾಡುವುದರಲ್ಲೇ ಕಾಲಹರಣವಾಗುತ್ತಿದೆ ಹೊರತು, ಈ ಎರಡೂ ಯೋಜನೆಗಳ ವಾಸ್ತವತೆ ಬಗ್ಗೆ ಎಲ್ಲೂ ಪ್ರಸ್ತಾಪ ಇಲ್ಲದಿರುವುದು ವಿಪರ್ಯಾಸದ ಸಂಗತಿ.

ಉತ್ತರ ಕರ್ನಾಟಕದಲ್ಲಿ ಮಹದಾಯಿ ಯೋಜನೆ ಬಗ್ಗೆ ಪ್ರಸ್ತುತ ಹೋರಾಟ ಮಾಡುತ್ತಿರುವವರಿಗೆ ಮಾಹಿತಿ ಕೊರತೆ ಇರುವುದಂತೂ ಸ್ಪಷ್ಟ. ಏನಿದು ಯೋಜನೆ – ಕುಡಿವ ನೀರಿನದ್ದೋ ನೀರಾವರಿಯದ್ದೋ ಎನ್ನುವ ಪರಿಕಲ್ಪನೆಯೇ ಇಲ್ಲ. ಇಲ್ಲ ಎನ್ನುವದಕ್ಕಿಂತ, ತಿಳಿಸುವ ಯತ್ನಗಳು ಆಗಿಲ್ಲ! ನರಗುಂದ, ನವಲಗುಂದ ಹಾಗೂ ರೋಣ ರೈತರಿಗೆ ಬೇಕಾಗಿರೋದು ಹೊಲಗಳಿಗೆ ನೀರು.

ಹುಬ್ಬಳ್ಳಿ-ಧಾರವಾಡದವರಿಗೆ ಬೇಕಾಗಿರೋದು ಕುಡಿವ ನೀರು. ಇನ್ನೊಂದು ೫-೧೦ ವರ್ಷ ಕಳೆದರೆ, ಅವಳಿನಗರಕ್ಕೆ ಕುಡಿವ ನೀರಿನ ಬೇಡಿಕೆhoolu-2 ಏರಲಿದೆ.ಸರಕಾರವು ಕೂಡ ಕಳಸಾ-ಬಂಡೂರಿ ನಾಲಾಗಳನ್ನು ಮತ್ತು ಮಹದಾಯಿಯ ನೀರನ್ನು ಮಲಪ್ರಭೆಗೆ ಜೋಡಿಸಿ, ಕುಡಿವ ನೀರು ಕೇಳಿದೆ ಹೊರತು, ಎಲ್ಲಿಯೂ ನೀರಾವರಿ ಯೋಜನೆಗೆ ಅಂತ ಹೇಳಿಲ್ಲ. ನಮ್ಮ ನೀರು ನಮಗೆ ಕೊಡಿ ಎಂದರೆ ಕುಡಿಯಲು ೨ ಟಿಎಂಸಿ ಸಿಕ್ಕೀತು ಎಂದುಕೊಂಡರೂ, ಇದನ್ನು ಮಲಪ್ರಭೆಗೆ ತರಲು ಅಲ್ಲಿ ಯಾವುದೇ ಚೆಕ್ ಡ್ಯಾಂ ನಿರ್ಮಾಣವಾಗಿಲ್ಲ. ಮಹದಾಯಿ ಅಚ್ಚುಕಟ್ಟು ಪ್ರದೇಶದಲ್ಲಿ ಸರಾಸರಿ ೩,೧೩೪ ಮಿ.ಮೀ ಮಳೆ ಆಗುತ್ತದೆ.

ಕಳಸಾ ಹಳ್ಳ ನಮ್ಮಲ್ಲಿ ಹುಟ್ಟಿ ಮಹದಾಯಿ ಸೇರುತ್ತದೆ. ಕಳಸಾಕ್ಕೆ ಒಂದು ಕಡೆ ಅಣೆಕಟ್ಟು ಕಟ್ಟುವುದು. ಇನ್ನೊಂದು ಹಳತಾರ ಹಳ್ಳಕ್ಕೆ ಅಣೆಕಟ್ಟು ಕಟ್ಟಿ, ಅಲ್ಲಿಂದ ೫.೫ ಕಿ.ಮೀ ಕಾಲುವೆ ಮೂಲಕ ಕಳಸಾಕ್ಕೆ ನೀರು ತರುವುದು. ಕಳಸಾದಿಂದ ಒಟ್ಟು ೩.೫೬ ಟಿಎಂಸಿ ನೀರು ಪಡೆಯುವುದು.

ಅದೇ ರೀತಿ, ಬಂಡೂರಾ ಮಹದಾಯಿಯ ಇನ್ನೊಂದು ಉಪನದಿ. ಸಿಂಗಾರನಾಲಾ ಮತ್ತು ವಾಟಿನಾಲಾಗಳಿಗೆ ಅಣೆಕಟ್ಟು ಕಟ್ಟಿ  ಸಂಗ್ರಹವಾದ ನೀರಿನಿಂದ  ಬಂಡೂರಾಗೆ  ನೀರು  ಹರಿಸುವುದು. ಈ ೪ಟಿಎಂಸಿ ನೀರನ್ನು ಕಾಲುವೆ ಮೂಲಕ ಮಲಪ್ರಭೆಗೆ ಹರಿಸುವುದು . ಇನ್ನು ಮಹದಾಯಿ ನದಿಗೆ ನೇರವಾಗಿ ಅಣೆಕಟ್ಟು ಕಟ್ಟಿ ನೀರು ತಿರುಗಿಸುವ ಯೋಜನೆಯೇ ಬೇರೆ.

ಮಾಹಿತಿ ಮುಚ್ಚಿಟ್ಟ ಸರಕಾರ

ಮಹದಾಯಿ ನದಿ ನೀರಿನ ವಿವಾದ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾ. ಜೆ.ಎಂ. ಪಾಂಚಾಲ ನೇತೃತ್ವದ  ನ್ಯಾಯಾಧೀಕರಣ ಎದುರು, ಮಧ್ಯಾಂತರ ಅರ್ಜಿ ಸಲ್ಲಿಸಲು ಹೊರಟಿರುವ ಕರ್ನಾಟಕ ಸರಕಾರ,  ಕಣಕುಂಬಿಯ ನಿಯೋಜಿತ ಕಳಸಾ ನಾಲಾ ಜೋಡಣೆ ಜಾಗೆಯಲ್ಲಿ, ಯಾವುದೇ ತಿರುವು ಕಾಮಗಾರಿ ಕೈಗೊಳ್ಳುವುದಿಲ್ಲ ಎಂದು ಬರೆದುಕೊಟ್ಟು ನ್ಯಾಯಾಧಿಕರಣದಿಂದ ಕೈ ಕಟ್ಟಿಸಿಹಾಕಿಕೊಂಡಿರುವ ವಿಷಯವನ್ನು ಮುಚ್ಚಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

೧೭-೦೪-೨೦೧೪ ರಂದು ನಡೆದ ನ್ಯಾಯಾಧಿಕರಣ ಕಲಾಪದೆದುರು ಗೋವಾ ಹಾಗೂ ಕರ್ನಾಟಕ ಎರಡೂ ರಾಜ್ಯಗಳ ಅಧಿಕಾರಿಗಳ ಸಹಿಯೊಂದಿಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದನ್ವಯ, ಕರ್ನಾಟಕ ತನ್ನ ಭಾಗದಲ್ಲಿ ನಿರ್ಮಿಸಿರುವ ಕಾಲುವೆಯನ್ನು  ೩೧-೦೫-೨೦೧೪ ರೊಳಗೆ ಮುಚ್ಚಲು ನ್ಯಾಯಾಧಿಕರಣ ಕರ್ನಾಟಕಕ್ಕೆ  ನಿರ್ದೇಶನ ನೀಡಿದೆ. ಇದಾದ ನಂತರ, ೦೪-೦೬-೨೦೧೪ ರಂದು ಉಸ್ತುವಾರಿ ತಂಡ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿ, ಪೂರ್ಣಗೊಂಡ ಕಾಮಗಾರಿಯ ಅಂತಿಮ ವರದಿಯನ್ನು ನ್ಯಾಯಾಧಿಕರಣದ ಎದುರು ೬-೬-೨೦೧೪ ರಂದು ಸಲ್ಲಿಸಿದೆ.  ನ್ಯಾಯಾಧಿಕರಣದ ನಿರ್ದೇಶನದನ್ವಯ, ಈ ಕಾಲುವೆ ಪ್ರವೇಶದ್ವಾರವನ್ನು ಕಾಂಕ್ರೀಟ್ ಬಾಗಿಲಿನಿಂದ ಬಂದ್ ಮಾಡಲಾಗಿದ್ದು, ಉಳಿದೆಡೆ  ಹೂಳು ತುಂಬಿದೆ. ೧೯೮ ಕೋಟಿ ರೂಪಾಯಿ ವೆಚ್ಚದಲ್ಲಿ, ಅಷ್ಟೊಂದು ತರಾತುರಿಯಲ್ಲಿ ಈ ಕಾಲುವೆ ಕಾಮಗಾರಿಯ ಅವಶ್ಯಕತೆ ಇರಲಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕಾಲುವೆ ಇದೀಗ ವ್ಯರ್ಥವಾದಂತಾಗಿದೆ. ಗೋವಾ ಸರಕಾರ ನ್ಯಾಯಾಧಿಕರಣ ಎದುರು ಹೋಗುವ ಮುನ್ನವೇ ೩೦-೦೪-೨೦೦೨ರಂದು  ಕೇಂದ್ರ ಜಲ ಸಚಿವಾಲಯ ತಾತ್ವಿಕ ಒಪ್ಪಿಗೆ  ನೀಡಿದಾಗ,  ಸದ್ದಿಲ್ಲದೇ  ತಿರುವು ಯೋಜನೆಗೆ ಒತ್ತು ನೀಡಿದ್ದರೆ ನೀರು ಬಳಸಬಹುದಿತ್ತು. ಅದರ ಬದಲು,  ಬಂಡೂರಿ ನಾಲಾದಿಂದ ಮಲಪ್ರಭೆಗೆ ನೀರು ತಿರುಗಿಸುವ ಯೋಜನೆ ಕೈಗೊಳ್ಳಬಹುದಿತ್ತು.

ನ್ಯಾಯಾಧಿಕರಣದಿಂದ ತಡೆಯಾಜ್ಞೆ

hoolu-1ಕರ್ನಾಟಕ ಸರಕಾರ ಕಳಸಾ ಮತ್ತು ಬಂಡೂರಿಗಳ ನೀರನ್ನು ಮಲಪ್ರಭಾ ಕೊಳ್ಳಕ್ಕೆ ತಿರುಗಿಸುವ ಪ್ರತ್ಯೇಕ ಯೋಜನೆಗಳನ್ನು ತಯಾರಿಸಿ, ಆಡಳಿತಾತ್ಮಕ ಮಂಜೂರಿ ಕೂಡ ಕೊಟ್ಟಿತು. ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಅನುಮತಿ ಕೋರಲು ಕಳಿಸಿದಾಗ ಹೇಳಿದ್ದು, ಹುಬ್ಬಳ್ಳಿ-ಧಾರವಾಡಕ್ಕೆ ಕುಡಿವ ನೀರಿಗಾಗಿ ಎಂದು ಆದರೆ ಗೋವಾ ಈ ಯೋಜನೆ ಹಿಂದೆ ನೀರಾವರಿ ಉದ್ದೇಶವಿದೆ ಎಂದು ಆಕ್ಷೇಪಿಸಿತು. ನ್ಯಾಯಾಧಿಕರಣದಿಂದ ತಡೆಯಾಜ್ಞೆ ಕೊಡಿಸುವಲ್ಲಿ ಗೋವಾ ಯಶಸ್ವಿಯಾಯಿತು. ಹೀಗಾಗಿ ಬಂಡೂರಿ ನಾಲಾ ಯೋಜನೆ ಕೂಡ ನನೆಗುದಿಗೆ ಬಿದ್ದಿದೆ.

ನ್ಯಾಯಾಧಿಕರಣದ ಸದಸ್ಯರಾದ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್, ವಿನಯ್ ಮಿತ್ತಲ್ ಮತ್ತು ಪಿ.ಎಸ್. ನಾರಾಯಣ್‌ರು ೧೯-೧೨-೨೦೧೩ ರಂದು ಬಂಡೂರಿ ನಾಲಾಗೆ ಭೇಟಿ ನೀಡಿದ್ದರು. ಈ ವೇಳೆ, ಬಂಡೂರಿ ನಾಲಾದಲ್ಲಿ  ಒಂದು ಸ್ಥಳ ಗುರುತಿಸಿ, ಅಲ್ಲಿ ಕಲ್ಲು ನೆಡಲಾಗಿದೆ. ಇಲ್ಲಿಂದ ನೀರು ತಡೆದು ಗೋಡೆ ನಿರ್ಮಿಸಿದಲ್ಲಿ, ಸುತ್ತ       ೩.ಕಿ.ಮೀ.ವರೆಗೆ ಹಿನ್ನೀರು ಸಂಗ್ರಹವಾಗುತ್ತದೆ. ಇದರಿಂದ ಸ್ವಲ್ಪ ಅರಣ್ಯ ಮುಳುಗುಬಹುದು. ಆದರೆ, ಇದರಿಂದ ಯಾವುದೇ ಅಪಾಯವಾಗಲೀ ಅಥವಾ ಹಾನಿಯಾಗಲಿ ಇಲ್ಲ. ಬರೀ ಮಳೆಗಾಲದಲ್ಲಿ ಈ ನೀರು ತಡೆದರೆ ಸಾಕು – ಹುಬ್ಬಳ್ಳಿ-ಧಾರವಾಡ ಜನತೆಗೆ ಸಾಕಷ್ಟು ಕುಡಿವ ನೀರು ಪೂರೈಸಬಹುದಾಗಿದೆ. ಆದರೆ ಗೋವಾದ ಆಕ್ಷೇಪದಿಂದ, ನ್ಯಾಯಾಧಿಕರಣ ವಿಧಿಸಿದ ನಿರ್ಬಂಧ ಇದಕ್ಕೂ ಕೈ ಕಟ್ಟಿ ಹಾಕಿದೆ.

ಸಮರ್ಥವಾದದ ಕೊರತೆ

ನ್ಯಾಯಧಿಕರಣದ ಎದುರು ರಾಜ್ಯ ಸರಕಾರ ಪರ ವಾದ ಮಂಡಿಸಲು ಕರ್ನಾಟಕ ಅಡ್ವೋಕೇಟ್ ಜನರಲ್ ಎಫ್.ಎಸ್. ನಾರಿಮನ್ ಹಾಗೂ ಇತರೆ ೭ ಜನರನ್ನೊಳಗೊಂಡ ಕಾನೂನು ತಂಡವನ್ನೇನೋ ರಚಿಸಿತು. ಈ ತಂಡಕ್ಕೆ ವಾಸ್ತವ ಹಾಗೂ ಸಮರ್ಥನೀಯ ಅಂಶಗಳನ್ನು ನೀಡುವಲ್ಲಿ ಎಂಜನೀಯರ್ ಎಡವಿದ್ದಾರೆ. ತಾಂತ್ರಿಕ ಸೇರಿದಂತೆ, ಎಲ್ಲಾ ಅಗತ್ಯ ಮಾಹಿತಿಯನ್ನು ಅಚ್ಚುಕಟ್ಟಾಗಿ ವಕೀಲರಿಗೆ ನೀಡಿದ್ದಲ್ಲಿ, ಸಮರ್ಥವಾದ ಮಂಡನೆಗೆ ಅನುಕೂಲವಾಗುತ್ತಿತ್ತು. ಇದರ ಕೊರತೆಯೂ ನಮ್ಮ ಹಿನ್ನಡೆಗೆ ಒಂದು ಕಾರಣವೆನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು.

ಎತ್ತಿನಹೊಳೆ ಹೆಸರಲ್ಲಿ ಹಣದ ಹೊಳೆ

ಇನ್ನು ಬಹುಚರ್ಚಿತ ಎತ್ತಿನಹೊಳೆ ಯೋಜನೆ ಹಣೆಬರಹವೂ ಅಷ್ಟೇ. ಈ ಯೋಜನೆ ಅವೈಜ್ಞಾನಿಕತೆಯ ಪರಮಾವಧಿ ಎಂದರೂ ತಪ್ಪಾಗದು. ಹಣಲೂಟಿಗೆ ಇದೊಂದು ವ್ಯವಸ್ಥಿತ ಲೆಕ್ಕಾಚಾರ. ನೀರಾವರಿ ತಜ್ಞ ಖ್ಯಾತಿಯ ಜಿ.ಎಸ್. ಪರಮಶಿವರಯ್ಯನವರ ಕೊಡುಗೆ ಈ ಯೋಜನೆ. ಪಶ್ಚಿಮಘಟ್ಟಗಳ ಮೇಲ್ಭಾಗದಲ್ಲಿ ಬೀಳುವ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಇಲ್ಲಿ ೨೧ ಟಿಎಂಸಿ ನೀರು ಲಭ್ಯವಿದೆ. ಇದನ್ನು ತಿರುವಿಸಿದರೆ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ನೀರು ಕುಡಿಸಬಹುದು ಎನ್ನುವ ಲೆಕ್ಕಾಚಾರ. ಇದು ದುಸ್ಸಾಹಸದ ಮಾತೇ ಸರಿ. ಇವರಿಗೇನು ಗೊತ್ತು ಸ್ವಾಮಿ ಪರಿಸರದ ಸೂಕ್ಷ್ಮತೆ! ತಂತ್ರಜ್ಞಾನದ ನಾಗಾಲೋಟದಲ್ಲಿರುವ ಇವರಿಗೆ ವಾಸ್ತವದ ಅರಿವಿಲ್ಲ. ರಾಜ್ಯ ಸರಕಾರ ನದಿ ತಿರುವು ಯೋಜನೆ ಹೆಸರಲ್ಲಿ, ಪರಿಸರ ಇಲಾಖೆ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ, ಅದ್ಯಾರನ್ನೋ ಆರಿಸಿ ಕಳುಹಿಸಿದವರ ಬಾಯಾರಿಕೆ ತಣಿಸಲು ಮುಂದಾಗಿದೆ. ಅದು ಸಾಧ್ಯವಲ್ಲದ ಮಾತು ಬೇರೆ. ನೀರಿನ ಲಭ್ಯತೆ ವಿಚಾರದಲ್ಲಿ ಸುಳ್ಳು ಪ್ರಮಾಣಪತ್ರ ನೀಡಿದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಸರಕಾರಿ ಎಜೆನ್ಸಿಯೊಂದರಿಂದ ನೀರು ಲಭ್ಯತೆ ಪಡೆಯಲಾಗಿಲ್ಲ ಎಚಿದರೆ, ಇದರ ಹಿಂದಿನ ಉದ್ದೇಶ ಸ್ಪಷ್ಟ. ಯೋಜನೆಯ ಸಾಧ್ಯತೆ ಬಗ್ಗೆ ಖಾಸಗಿ ಸಂಸ್ಥೆಯಿಂದ ವರದಿ ಪಡೆದಿರುವ ನಮ್ಮ ಎಂಜನೀಯರ್‌ಗಳು, ೨೪ ಟಿಎಂಸಿ ನೀರಿದೆ ಎಂದು ಸಾಬೀತುಪಡಿಸಲು ಹೊರಟಿರುವುದು ವಿಪರ್ಯಾಸದ ಸಂಗತಿ.

ಖಾಸಗಿ ಕಾಫಿ ಪ್ಲಾಂಟರ್‌ಗಳಿಂದ ಮಳೆ ಪ್ರಮಾಣ ಪಡೆದು, ೬೩೦೦ ಮಿ.ಮೀ ನೀರಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ವಾಸ್ತವದಲ್ಲಿ ನೀರಿನ ಲಭ್ಯತೆ ಇರೋದು ಬರೀ ೩೨೦೦ ಟಿಎಂಸಿ. ಮಳೆ ಲಭ್ಯತೆ ಪ್ರಮಾಣದಲ್ಲೇ ಗೊಂದಲಗಳಿರುವುದು ಇನ್ನೊಂದು ಪ್ರಮುಖ ವಿಚಾರ. ಮಳೆಮಾಪನ ಮಾಹಿತಿ ಕೊಟ್ಟವರ ಪೈಕಿ, ಇನ್ನೊಬ್ಬರ ಪ್ರಮುಖರ ಮಾಹಿತಿ ಕೈಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. ಈಗ ದಕ್ಷಿಣ ಕನ್ನಡದಲ್ಲಿ ವಿರೋಧ ತೀವ್ರಗೊಂಡಿದೆ. ಜನಾಂದೋಲನ ಸ್ವರೂಪ ಪಡೆದಿರುವ ಹೋರಾಟ ಎತ್ತ ಸಾಗುವುದು ಇದರಲ್ಲೂ ಮತ್ತ್ಯಾವ ರಾಜಕೀಯ ನುಸುಳುವುದೋ ಕಾದು ನೋಡಬೇಕಿದೆ.

ಚಿತ್ರ-ಲೇಖನ: ನಿತ್ಯಸಿರಿ

ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರದ್ದು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*