ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮರಳೋ ಮರಳು…!

ಮರಳು ಎತ್ತುವುದು, ಸಾಗಾಣಿಕೆ, ಬಳಕೆ ಜಾಗತಿಕ ಸಮಸ್ಯೆಯಾಗುತ್ತಿದೆ.  ನಗರಗಳಲ್ಲಿ ಏಳುತ್ತಿರುವ ಕಾಂಕ್ರೀಟ್ ಕಾಡಿಗೆ ಮರಳು ಅತ್ಯವಶ್ಯಕ ವಸ್ತು.  ಮರಳಿಗೆ ಹಕ್ಕೊತ್ತಾಯ ಹೆಚ್ಚಿದಂತೆ ಬೆಲೆಯೂ ಹೆಚ್ಚುತ್ತಿದೆ.

ಸಮುದ್ರದ ಮರಳಿನಲ್ಲಿ ಲವಣಾಂಶ, ಸಿಲಿಕಾಗಳು ಅಧಿಕ.  ನುಣುಪಾಗಿದ್ದರೂ ಶುದ್ಧೀಕರಣದ ಕೆಲಸ ಹೆಚ್ಚು.  ಸಂಸ್ಕರಣೆ ದುಬಾರಿ.  ಕಟ್ಟಡಗಳಿಗೆ ಯೋಗ್ಯವಲ್ಲದ ಕಾರಣ ಸಮುದ್ರದ ದಡದಲ್ಲಿ ಯಥೇಚ್ಛ ಮರಳು ಸಿಕ್ಕಿದರೂ ಪ್ರಯೋಜನವಿಲ್ಲ.

ಹೀಗಾಗಿ ನದಿಗಳ ಶೋಷಣೆ ನಿರಂತರ.  ಕರಾವಳಿ ತೀರದ ನದಿ ಮುಖಜ ಭೂಮಿಗಳಲ್ಲಿ, ನದಿಗಳ ಮಧ್ಯದಿಂದ ಮರಳೆತ್ತಿ ತರುವ ಕೆಲಸ ಉದ್ಯಮಾಗಿದೆ.  ಇದ doni antu tumbituಸುಲಭದ್ದಲ್ಲ.  ದೋಣಿಗಳಲ್ಲಿ ನದಿ ಮಧ್ಯಕ್ಕೆ ಹೋಗಿ ನೀರಿನಾಳದೊಳಗೆ ಮುಳುಗಬೇಕು.  ನೂರಾರು ಬಾರಿ ಮರಳನ್ನು ಎತ್ತಿ ಎತ್ತಿ ತರಬೇಕು.  ಇಡೀ ದಿನ ನೀರೊಳಗಿದ್ದು ಒಂದೋ ಎರಡೋ ಟನ್ ಮರಳು ಎತ್ತುತ್ತಾರೆ.  ಮರಳು ಶುದ್ಧ.  ಆದರೆ ಅಧಿಕ ಶ್ರಮ.  ಆದಾಯ ಮಧ್ಯವರ್ತಿಗಳ ಪಾಲು.

ತುಂಗಭದ್ರಾ, ಪಾಲಾರ್, ಕಾವೇರಿ, ಕಬಿನಿ, ಕೃಷ್ಣ, ಶರಾವತಿ, ಘಟಪ್ರಭ, ಮಲಪ್ರಭ, ಹೇಮಾವತಿ – ಹೀಗೆ ಜೀವನದಿಗಳ ದಂಡೆಯ ಮರಳನ್ನು ಬೆಳೆಯುತ್ತಿರುವ ನಗರಗಳಿಗೆ ಪೂರೈಸಲು ಆಗುತ್ತಿಲ್ಲ.  ಹಕ್ಕೊತ್ತಾಯ ಮಿತಿ ಮೀರಿ ನದಿಗಳ ಒಡಲಿಗೆ ಕೈಹಾಕುತ್ತಿದ್ದಾರೆ.  ದರೋಡೆಯ ಪರಮಾವಧಿ.

ಮರಳನ್ನು ಒಮ್ಮೆ ಮೇಲೆತ್ತಿದರೆ ಹಿಂದೆ ಹಾಕುವ ಪ್ರಶ್ನೆಯಿಲ್ಲ.  ಉಪಯೋಗಿಸಿದ ಮೇಲೆ ಮುಂದೆಂದೂ ಮೂಲರೂಪದಲ್ಲಿ ಸಿಗಲಾರದು.  ಮರಳು ಉಳಿಸುವ ಏಕೈಕ ಉಪಾಯ ನದಿಯಿಂದ ಮೇಲೆತ್ತದಿರುವುದು.  ಕಟ್ಟಡಗಳನ್ನು ಕಟ್ಟುವುದು ನಿಂತರೆ ಮಾತ್ರ ಅದೂ ನಿಲ್ಲುತ್ತದೆ.

ಇತ್ತೀಚಿನ ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರಕ್ಕೆ ದಿನಾಲೂ ಸರಾಸರಿ ೨,೮೦೦ ಲಾರಿಗಳಷ್ಟು ಮರಳು ಬರುತ್ತಿದೆ.  ಅಂದರೆ ೪೭,೫೦೦ ಟನ್ ಮರಳು!  ಬೆಂಗಳೂರನ್ನು ಬೆಳೆಸಲು ತರುತ್ತಿದ್ದಾರೆ. ಇದು ಅಧಿಕೃತವಾಗಿ ಸಿಕ್ಕ ಲೆಕ್ಕ.  ಅನಧಿಕೃತವಾಗಿ ಎಷ್ಟೋ… ಬಲ್ಲವಾರಾರು!  ಇಡೀ ಕರ್ನಾಟಕವೂ ಇದೇ ರೀತಿ ಬೆಳೆಯುತ್ತಿದೆ.  ಹಾಗಿದ್ದರೆ ಮರಳೆತ್ತುವ ಪ್ರಮಾಣ ಎಷ್ಟಾಯಿತು?

maralige daariಇದು ನಗರಗಳ ಸುದ್ದಿಯಾದರೆ ತಾಲ್ಲೂಕುಗಳ ಸಣ್ಣಪುಟ್ಟ ನದಿಗಳು, ಹಳ್ಳಗಳು ಮರಳಿಗೆ ಬಲಿಯಾಗುತ್ತಿವೆ.  ಈ ಮರಳಿನಲ್ಲಿ ಮಣ್ಣು ಕಸಕಡ್ಡಿಗಳಿದ್ದರೂ ಮತ್ತೊಮ್ಮೆ ತೊಳೆದು ನೀಡುತ್ತಾರೆ.  ಇದು ಸಂಪೂರ್ಣ ಅನಧಿಕೃತ ದಂಧೆ.  ಇದರಿಂದ ಹಳ್ಳಿಗಳ ರಸ್ತೆಗಳು ಹಾಳಾಗಿವೆ.  ಹಳ್ಳಗಳು ಸಾಯುತ್ತಿವೆ.  ಪ್ರವಾಹ ಉಕ್ಕಿಬರುತ್ತಿದೆ.  ಬೇಸಿಗೆಯಲ್ಲೇ ಈ ಹಳ್ಳಗಳು ಬತ್ತಿ ಹಳ್ಳಿಯ ಬಾವಿಗಳು ಬರಡಾಗುತ್ತಿವೆ.  ಹಳ್ಳದ ಬದಿಯ ಮರಗಳೆಲ್ಲಾ ಬೇರು ಕಳಚಿ ಬೀಳುತ್ತಿವೆ.

ನದಿಗಳ ಅರೋಗ್ಯ ಸುಸ್ಥಿರವಾಗಿರಲು ಮರಳು ಅಗತ್ಯ.  ನಿರ್ದಿಷ್ಟ ಪ್ರಮಾಣದಲ್ಲಿ ಮರಳು ಇಲ್ಲದಿದ್ದರೆ ನದಿ ನೀರು ಸದಾ ಬಗ್ಗಡವಾಗಿರುತ್ತದೆ.  ನೀರನ್ನು ಸೋಸುವ ಶಕ್ತಿಯಿರುವುದು ಕೇವಲ ಮರಳಿಗೆ ಮಾತ್ರ.  ಸೋಸಿದ ಒಂದಿಷ್ಟು ನೀರು ಅಂತರ್ಜಲವಾಗುತ್ತದೆ.  ಮರಳಿಲ್ಲದಿದ್ದರೆ ಸೋಸುವಿಕೆ ನಡೆಯುವುದಿಲ್ಲ.  ನೀರು ತಿಳಿಯಾಗುವುದಿಲ್ಲ.  ಮಣ್ಣು ಇನ್ನಷ್ಟು ಕೊಳೆಯಾಗುತ್ತದೆ.   ದಡವೂ ಸವಕಳಿಯಾಗಿ ಮಣ್ಣೆಲ್ಲಾ ಕೊಚ್ಚಿಹೋಗುತ್ತದೆ.

ತುಂಗಭದ್ರಾ ನದಿಯಲ್ಲಿರುವ ಹೂಳಿನ ಪ್ರಮಾಣ ವಿಧಾನಸೌಧವನ್ನು ಮುಚ್ಚುವಷ್ಟಿದೆ!  ನೀರೊಳಗಿನ ಈ ಮಣ್ಣು ಹುಳಿತು ನಾರುತ್ತಿದೆ.  ಅನಂತರ ಕೊಳೆತು ರೋಗಗಳ ಆವಾಸಸ್ಥಾನವಾಗುತ್ತದೆ.  ನದಿಯಿಂದ ಹರಿದು ಬರುವ ನೀರಿನೊಳಗೆ ಮರಳಿದ್ದಿದ್ದರೆ ನೀರು ಹಾಳಾಗುವ ಪ್ರಮಾಣ, ಹೂಳು ಸೇರುವ ಪ್ರಮಾಣ ಕಡಿಮೆ ಆಗಿರುತ್ತಿತ್ತು.

ಹರಿಹರದಲ್ಲಿ ಮರಳೆತ್ತುವ ಪ್ರಮಾಣ ನೋಡಿದರೆ ತುಂಗಭದ್ರೆಯ ನೀರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಳಚೆ ನೀರೆಂಬ ಪ್ರಮಾಣಪತ್ರ ಪಡೆಯುವ ಕಾಲ ದೂರವಿಲ್ಲ.

ಬೆಂಗಳೂರಿನ ಮರಳು ಎಲ್ಲಾ ಕಡೆಯಿಂದಲೂ ಬರುತ್ತಿದೆ.  ಒಂದು ಲೋಡ್ ಲಾರಿಗೆ ಬೆಲೆ ೬,೫೦೦ ರೂಪಾಯಿಗಳಿಂದ ೧೩,೦೦೦ ರೂಪಾಯಿಗಳವರೆಗಿದೆ.  ಮೋಸ ಮಾಡುವ ಗುಂಪು ಒಂದೆಡೆ.  ಮರಳು ಮಾಫಿಯಾ ಮತ್ತೊಂದೆಡೆ.  ಸರ್ಕಾರದ ಮಾನ್ಯತೆಯ ಹೊರತಾಗಿಯೂ ಇದರಲ್ಲಿ ಅಕ್ರಮ ನಡೆಯುತ್ತಿದೆ.  ಇದರ ನೆಲೆ ಕೋಲಾರ.

ಬೆಂಗಳೂರಿಗೆ ಬರುವ ಮರಳು ಲಾರಿಗಳೆಲ್ಲಾ ಕೋಲಾರದ ಮೂಲಕವೇ ಏಕೆ ಬರುತ್ತಿದೆ?  ಕೋಲಾರದಲ್ಲಿ ಮಾತ್ರ ಮರಳು ಉತ್ಪಾದನೆಯಾಗುತ್ತಿದೆಯೆ? abba estu shramaಇಷ್ಟೆಲ್ಲಾ ಮರಳನ್ನು ಕೋಲಾರದಿಂದಲೇ ತೆಗೆಯುತ್ತಿದ್ದರೆ ಅಲ್ಲಿನ ಪರಿಸ್ಥಿತಿ, ಪರಿಸರ ಸ್ಥಿತಿ ಏನಾಗಿರಬಹುದು?  ಅದಕ್ಕಾಗಿಯೇ ಅಲ್ಲಿನ ಪರಿಸರಾಸಕ್ತರು ಕೂಗೆಬ್ಬಿಸಿದ್ದಾರೆ.  ಅದೇ ಸಮಯಕ್ಕೆ ಸರ್ಕಾರಕ್ಕೂ ಮರಳಿನ ಬಗ್ಗೆ ಅಂಕಿ-ಅಂಶಗಳು ಸಿಕ್ಕಿವೆ.  ಇಷ್ಟೆಲ್ಲಾ ಪ್ರಮಾಣದಲ್ಲಿ ಮರಳು ಹರಿದುಬರುತ್ತಿದೆ ಎಂದಾದರೆ ಸರ್ಕಾರದ ಬೊಕ್ಕಸಕ್ಕೊಂದು ಸಂಪನ್ಮೂಲವಾಗುತ್ತದೆ ಎನ್ನುವ ವಿಚಾರ ಸರ್ಕಾರದ್ದು.  ಇದಕ್ಕೂ ಹೆಚ್ಚಿನ ಆಲೋಚನೆ ಇದ್ದರೂ ಇರಬಹುದು.  ಅಂತೂ ಸರ್ಕಾರದ ಕಣ್ಣಿಗೆ ಮರಳು ಬಿದ್ದಿದೆ.

ಈ ಕ್ಷಣದಲ್ಲಿ ಮರಳು ಲಾರಿಗಳ ಮುಷ್ಕರದಿಂದ ಹಮಾಲಿಗಳ, ಡ್ರೈವರುಗಳ, ಮರಳೆತ್ತುವವರ – ಹೀಗೆ ಅತಿ ಬಡವರ ಬದುಕು ಹಾಳಾಗುತ್ತಿದೆ ಎನಿಸಬಹುದು.  ಹಾಗೇನಿಲ್ಲ.  ಇವರೆಲ್ಲಾ ಮರಳು ಮಾಫಿಯಾವೆಂಬ ಉಸುಕಿನೊಳಗೆ ಸಿಲುಕಿ ಉಸಿರು ಕಟ್ಟಿದವರು.  ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದವರು.  ಇದು ಇವರಿಗೆಲ್ಲಾ ಬೇರೆ ಕೆಲಸ ಹುಡುಕಲು ಸಕಾಲ.  ಸರ್ಕಾರ ಖಂಡಿತಾ ಮರಳು ಸಾಗಾಣಿಕೆಗೆ ಒಪ್ಪಿಗೆ ಕೊಡಬಾರದು.  ಜನರನ್ನೊಂದೇ ಅಲ್ಲ, ಜೀವನದಿಗಳನ್ನು, ಅದನ್ನೇ ನಂಬಿರುವ ಅಸಂಖ್ಯಾತ ಜೀವಿಗಳನ್ನು ಉಳಿಸುವ ಹೊಣೆ ನಮ್ಮೆಲ್ಲರದು.  ನಮ್ಮ ಪ್ರತಿನಿಧಿಯಾದ ಸರ್ಕಾರದ್ದು.  ಜನರು ಮತ್ತೆ ಮಣ್ಣಿನ ಮನೆಗಳನ್ನು ಕಟ್ಟುವತ್ತ ಯೋಚಿಸಬೇಕು.  ಹಿಂದೆ ಕರಾವಳಿಗಳ ಅರಮನೆಗಳು, ಬಯಲುಸೀಮೆಯ ವಾಡೆಗಳು ಅತ್ಯಂತ ಕಡಿಮೆ ಮರಳು ಬಳಸಿ ತಯಾರಾಗಿದ್ದವು.  ಕೆಲವಂತೂ ಕೇವಲ ಮಣ್ಣಿನಿಂದಲೇ ಕಟ್ಟಿದವು.  ನೂರಾರು ವರ್ಷಗಳ ಬಾಳು ಇವುಗಳದು.  ಹೀಗಿರುವಾಗ ಕಟ್ಟಡಗಳಿಗೆ ಮರಳು ಬೇಕೇ ಬೇಕೆನ್ನುವ ಹಟ ಯಾಕೆ?  ಅನ್ಯಮಾರ್ಗಗಳನ್ನು ನಾವೇ ಅನ್ವೇಷಿಸಬೇಕಿದೆ.

ಕೃತಕ ಮರಳು

  • ಕೃತಕ ಮರಳು ಉತ್ಪಾದಿಸುವ ಫ್ಯಾಕ್ಟರಿ ಬಿಡದಿಯ ಬಳಿ ಪ್ರಾರಂಭ.
  • ಕೃತಕ ಮರಳಿನಲ್ಲಿ ನದಿ ಮರಳಿನಲ್ಲಿರುವಂತೆ ದೊಡ್ಡ ಕಲ್ಲುಗಳು, ಮಣ್ಣು, ಹೂಳು, ನದಿ ಕಸಗಳು ಹಾಗೂ ತೇವಾಂಶಗಳು ಇಲ್ಲದೆ ಸ್ವಚ್ಛವಾಗಿರುತ್ತದೆ.
  • ಪ್ರತಿದಿನ ೩೦೦೦ ಟನ್‌ ಉತ್ಪಾದನೆ.
  • ಮನೆ ಬಾಗಿಲವರೆಗೆ ತಂದುಕೊಡುವ ಜವಾಬ್ದಾರಿ ಕಂಪೆನಿಯವರದು.
  • ಸದ್ಯಕ್ಕೆ ೫೦ ಕಿಲೋಮೀಟರ್‌ ಆಸುಪಾಸಿನವರೆಗೆ ಪೂರೈಸುವ ನಿರ್ಧಾರ.
  • ಹೈದರಾಬಾದ್ ನ ರಾಷ್ಟ್ರೀಯ ಸಿಮೆಂಟ್  ಮತ್ತು ಬಿಲ್ಡಿಂಗ್ ಮೆಟೀರಿಯಲ್ಸ್ ಮಿತಿಯಿಂದ ಪ್ರಮಾಣೀಕೃತ

ಹೆಚ್ಚಿನ ಮಾಹಿತಿಗೆ: http://www.robosand.com     

ಕಟ್ಟಡಗಳನ್ನು ಕಟ್ಟಲು ಮರಳು ಬೇಕೇಬೇಕು ಎನ್ನುವವರಿಗೆ ಇದು ಅವಶ್ಯಕ ಸುದ್ದಿ.  ನದಿ ಮರಳಿಗಾಗಿ ಪರಿತಪಿಸಬೇಕಿಲ್ಲ.  ಯಂತ್ರಗಳ ಮೂಲಕ ಮರಳನ್ನು ತಯಾರಿಸಲಾಗುತ್ತಿದೆ.  ಅದೂ ಬೆಂಗಳೂರಿನ ಬಳಿ!  ಬಿಡದಿಯ ಪಕ್ಕದ ಉರಗ ಹಳ್ಳಿಯಲ್ಲಿ!!

ಹೈದರಾಬಾದ್ ಮೂಲದ ರೋಬೋ ಸಿಲಿಕಾನ್ ಲಿಮಿಟೆಡ್ ಸ್ ಡ್ಸಂಸ್ಥೆ ಬಿಡದಿನ ಸಮೀಪದ ಉರಗಹಳ್ಳಿಯಲ್ಲಿ ಹದಿನೈದು ಎಕರೆ ಜಾಗದಲ್ಲಿ ಕೃತಕ ಮರಳು ಉತ್ಪಾದನಾ ಘಟಕ ಸ್ಥಾಪಿಸಿದೆ.  ಇದು ಕರ್ನಾಟಕದ ಮೊದಲ ಕೃತಕ ಮರಳು ಉತ್ಪಾದನಾ ಘಟಕ.  ರಾಷ್ಟ್ರದಲ್ಲಿ ಮೂರನೆಯದು.  ಕಲ್ಲನ್ನು ಕುಟ್ಟಿ ಪುಡಿ ಮಾಡುವ-ಮರಳಾಗಿಸುವ ಈ ಯಂತ್ರದ ಸಾಮರ್ಥ್ಯ ಗಂಟೆಗೆ ಇನ್ನೂರು ಟನ್.  ಪ್ರತಿದಿನ ಸುಮಾರು ೩,೦೦೦ ಟನ್‌ಉತ್ಪಾದನೆ.  ದಿನಕ್ಕೆ ಹದಿನೈದು ಗಂಟೆಗಳ ಕಾಲ ಕೆಲಸ ಮಾಡುತ್ತದೆ ಎನ್ನುತ್ತಾರೆ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ್ ಕೆ. ಕೋಸರಾಜು.

ನದಿಗಳಲ್ಲಿ ಸಿಗುವ ಮರಳು ವಿಭಿನ್ನ ಆಕಾರ ಹಾಗೂ ಗಾತ್ರ ಹೊಂದಿರುತ್ತದೆ.  ಹೀಗಿರುವುದರಿಂದಲೇ ಕಟ್ಟಡಗಳಿಗೆ ಅತ್ಯಂತ ಉಪಯುಕ್ತ.  ಆದರೆ ಯಂತ್ರದಲ್ಲಿ ಉತ್ಪಾದಿಸಿದಾಗ ಬರುವ ಮರಳು ಒಂದೇ ಗಾತ್ರ ಮತ್ತು ಆಕಾರ ಹೊಂದಿರುವುದು ಸಹಜ.  ಅದಕ್ಕಾಗಿ ಘಟಕದಲ್ಲಿ ಆರು ವಿಭಿನ್ನ ಗಾತ್ರಗಳಲ್ಲಿ ಮರಳನ್ನು ತಯಾರಿಸಲಾಗುತ್ತಿದೆ.  ಆದರೆ ಈ ಆರು ರೀತಿಯ ಗಾತ್ರದ ಮರಳನ್ನು ಕೇವಲ ಘನ ಆಕಾರದಲ್ಲಿ ಹೊಂದಿಸಲಾಗಿದೆ.  ಆರೂ ಗಾತ್ರದ ಮರಳನ್ನು ಸೇರಿಸಿ ಮರಳ ರಾಶಿ ಮಾಡುತ್ತಾರೆ.  ಇದರಿಂದಾಗಿ ಕಾಂಕ್ರೀಟ್ ವಿನ್ಯಾಸದಲ್ಲಿ ಯಾವುದೇ ಸಂದಿಗಳಲ್ಲಿಯೂ ಸರಿಯಾಗಿ ಸೇರಿಕೊಂಡು ಸಣ್ಣ ತೂತು (ಕಿಂಡಿ) ಬೀಳದಂತೆ ನೋಡಿಕೊಳ್ಳುತ್ತದೆ.  ಹೆಚ್ಚಿನ ಒತ್ತಡ ಸಹಿಸಿಕೊಳ್ಳುವ ಸಾಮರ್ಥ್ಯ ಉಂಟಾಗುತ್ತದೆ ಎನ್ನುವ ಹೇಳಿಕೆ ನಿರ್ದೇಶಕರದು.

ಈಗ ಪ್ರಾಯೋಗಿಕವಾಗಿ ಉತ್ಪಾದನೆಯಾಗುತ್ತಿರುವ ಮರಳು ಬಣ್ಣದಲ್ಲಿ ನದಿ ಮರಳಿನಂತೆಯೇ ಇದೆ.  ಈಗಾಗಲೇ ಈ ಮರಳನ್ನು ಉಪಯೋಗಿಸುತ್ತಿರುವ ಬಿಲ್ಡರ್ಸ್‌ ಅಸೋಸಿಯೇಶನ್‌ ಆಫ್‌ ಇಂಡಿಯಾದ ಅಧ್ಯಕ್ಷ ಕೆ. ಸುಬ್ರಮಣಿಯವರು “ಕೃತಕ ಮರಳು ಪರಿಣಾಮಕಾರಿಯಾಗಿಯೇ ಇದೆ.  ಇದನ್ನು ಪೂನಾ ಮತ್ತು ಮುಂಬೈಗಳಲ್ಲೂ ಬಳಸುತ್ತಿದ್ದಾರೆ” ಎನ್ನುತ್ತಾರೆ.

ಹೈದರಾಬಾದಿನ ರಾಷ್ಟ್ರೀಯ ಸಿಮೆಂಟ್ ಹಾಗೂ ಬಿಲ್ಟಿಂಗ್ ಮೆಟೀರಿಯಲ್ಸ್ ಮಿತಿಯು ಜರಡಿ ಹಿಡಿದು ಪರೀಕ್ಷಿಸಿದೆ.  ಸೂಕ್ಷ್ಮವಾಗಿ ಪರೀಕ್ಷಿಸಿ ಆಕಾರ, ಪರಿಣಾಮ ಹಾಗೂ ವಿಭಿನ್ನ ವಿನ್ಯಾಸಗಳಿಗೆ ಹೊಂದಿಕೆ ಆಗುವುದೋ, ಆಗುವುದಿಲ್ಲವೋ ನೋಡಿದ್ದಾರೆ.  ಘನ ಆಕಾರದಲ್ಲಿರುವ ಮರಳಕಣಗಳು ಎಷ್ಟರಮಟ್ಟಿಗೆ ಒತ್ತಡ ತಡೆದುಕೊಳ್ಳಬಲ್ಲವು ಎನ್ನುವ ಪರೀಕ್ಷೆಯನ್ನೂ ಮಾಡಿದೆ ಎನ್ನುತ್ತಾರೆ ಕೋಸರಾಜು.

ರಾಜ್ಯ ಸರ್ಕಾರದ ಭೂವಿಜ್ಞಾನ ಮತ್ತು ಗಣಿ ಇಲಾಖೆಯಿಂದ ಸಂಸ್ಥೆಯು ೨೫ ಎಕರೆಗಳಷ್ಟು ಕಲ್ಲುಗಳಿರುವ ಜಾಗವನ್ನು ಪಡೆದಿದೆ.  ಅಲ್ಲಿರುವ ಕಲ್ಲುಗಳೇ ಕಚ್ಚಾವಸ್ತುಗಳು. ರೋಬೋ ಕಂಪೆನಿಗೆ ಮಧ್ಯವರ್ತಿಗಳಿಲ್ಲ.  ೫೦ ಕಿಲೋಮೀಟರ್‌ ಆಸುಪಾಸಿನವರಿಗೆ ತನ್ನದೇ ಲಾರಿಯಲ್ಲಿ ಮರಳನ್ನು ಕಟ್ಟಡ ಕಟ್ಟುವಲ್ಲಿಗೇ ತಂದು ನೀಡುತ್ತದೆ.  ಒಂದು ಟನ್ ಮರಳಿಗೆ ಅಂದಾಜು ೫೦೦ ರೂಪಾಯಿಗಳು.  ಅಂದರೆ ಒಂದು ಲಾರಿ ಲೋಡ್ ಮರಳಿನ ಬೆಲೆ ಸುಮಾರು ೯,೦೦೦ ರೂಪಾಯಿಗಳು.

ಬೆಂಗಳೂರಿನಲ್ಲಿ ನದಿ ಮರಳಿನ ಬೆಲೆ ೬,೫೦೦ ರೂಪಾಯಿಗಳಿಂದ ೧೩,೦೦೦ ರೂಪಾಯಿಗಳವರೆಗೂ ಇದೆ.  ಅದರಲ್ಲೂ ಮರಳಿನ ಗುಣಮಟ್ಟ ಮತ್ತು ತೂಕದಲ್ಲಿ ವಿಪರೀತ ಮೋಸ ನಡೆಯುತ್ತದೆ.  ಆದರೆ ರೋಬೋ ಕಂಪೆನಿಯು ಒಂದೇ ಗುಣಮಟ್ಟ, ನಿಶ್ಚಿತ ತೂಕ ನೀಡುವಲ್ಲಿ ವಿಶ್ವಸನೀಯ ಮತ್ತು ಅರ್ಹ.

ಮಧ್ಯವರ್ತಿಗಳು ಕಲಬೆರಕೆ ಮರಳು ನೀಡುವ ಕಾರಣ, ಕಟ್ಟಡ ನಿರ್ಮಾಣದ ವಿಭಿನ್ನ ಹಂತಗಳಲ್ಲಿ ವಿಭಿನ್ನ ರೀತಿಯ ಮರಳನ್ನು ಬಳಸಲಾಗುತ್ತದೆ.  ಕಳಪೆ ಮರಳು ಕಟ್ಟಡದ ಭವಿಷ್ಯವನ್ನು ಮೊಟಕುಗೊಳಿಸುತ್ತದೆ.  ಸೋರುವಿಕೆ, ಬಿರುಕುಗಳಿಗೆ ಮರಳೇ ಕಾರಣವಾಗುತ್ತದೆ.

ಒಂದು ಟನ್ ಮರಳಿನಲ್ಲಿ ಶೇಕಡಾ ೬.೮ರಷ್ಟು ದೊಡ್ಡ ಮರಳು, ಶೇಕಡಾ ೪.೫ರಷ್ಟು ತೇವಾಂಶ, ಶೇಕಡಾ ೫.೮ರಷ್ಟು ಮಣ್ಣು, ಹೂಳು ತುಂಬಿರುತ್ತದೆ.  ಅಂದರೆ ಸುಮಾರು ಶೇಕಡಾ ೧೭ರಷ್ಟು ವ್ಯರ್ಥವಸ್ತುಗಳು ಇರುತ್ತದೆ.   ರೋಬೋ ಕಂಪೆನಿ, ಮರಳು ತಯಾರಿಸುವ ಮೊದಲೇ ಕಲ್ಲಿನಲ್ಲಿರುವ ಮಣ್ಣಿನಂಶ ತೊಳೆದಿರುತ್ತದೆ.  ಸ್ವೀಡನ್ನಿನ ತಂತ್ರಜ್ಞಾನ ಬಳಸಿ ತಯಾರಿಸಲಾಗುವ ಮರಳಿನಲ್ಲಿ ವ್ಯರ್ಥವಾಗುವ ಅಂಶಗಳೇ ಇಲ್ಲ.  ಕಟ್ಟಡದ ಪ್ರಾರಂಭದಿಂದ ಅಂತ್ಯದವರೆಗೂ ಒಂದೇ ಗುಣಮಟ್ಟದ ಮರಳು ಲಭ್ಯವಾಗುತ್ತದೆ.

ಈಗಾಗಲೇ ರೋಬೋ ಕಂಪೆನಿಯು, ಬಿರ್ಲಾ ರೆಡಿ ಮಿಕ್ಸ್  ಕಾಂಕ್ರೀಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.  ಮರಳಿಗೆ ನಿತ್ಯದ ಗಿರಾಕಿಯನ್ನೂ ಹುಡುಕಿಕೊಂಡಿದೆ.  ಆದರೂ ಇತರರಿಗೆ ಒಂದು ಲಾರಿ ಲೋಡ್ನಿಂದ ಎಂಟು ಲಾರಿ ಲೋಡ್ ವರೆಗೆ ನಿತ್ಯವೂ ಮರಳನ್ನು ನೀಡಲು ಸಿದ್ಧವಿದೆ ಎನ್ನುತ್ತಾರೆ ರೋಬೋ ಕಂಪೆನಿಯ ನಿರ್ದೇಶಕ ಸಿ. ಚಂದ್ರಶೇಖರರಾವ್.

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*