ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೇತ್ರಾವತಿಯ ತಟದ ಭಾಗೀರಥಿಯರು

ನೇತ್ರಾವತಿ ಎಂದಾಗ ಪಕ್ಕನೆ ನೆನಪಾಗುವುದು ಪುಣ್ಯಕ್ಷೇತ್ರ ಧರ್ಮಸ್ಥಳ. ಇಲ್ಲಿ ಭಾಗೀರಥಿಯರು ನೆಲೆ ಕಂಡುಕೊಂಡಿದ್ದಾರೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಇವಳು ಮಾತ್ರ ನಿಸರ್ಗ ಸ್ವರೂಪಿಣಿ. ಪ್ರಯೋಗಶೀಲ, ಕೃಷಿನಿರತ, ಧರ್ಮಸ್ಥಳದ ಕೃಷಿಪೂರಕ ಯಶೋಗಾಥೆಗಳು ರೋಚಕತೆಗೆ ಸಾಕ್ಷಿ ಹೇಳುತ್ತಿದ್ದಾಳೆ. ಇಲ್ಲಿ ನೀರಾವರಿ ಸದ್ಬಳಕೆ ಸೇರಿದಂತೆ, ಕೃಷಿ ವಿಷಯ-ವಿಚಾರ, ಚಟುವಟಿಕೆಯಲ್ಲಿ ಹೊಸತನಕ್ಕೆ ತೆರೆದುಕೊಳ್ಳುವ ತವಕ. ಪ್ರತಿಯೊಂದೂ ಕೂಡ ಯಶಸ್ವೀ. ಕಾರಣ, ದೂರದೃಷ್ಟಿ!

2015-01-30_11.39.30[1]ಇಡೀ ರಾಷ್ಟ್ರಕ್ಕೆ ಮಾದರಿಯಾಗಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿ ಡಾ.ವಿರೇಂದ್ರ ಹೆಗ್ಗಡೆಯವರ ಪ್ರಕಾರ, ಸಾಧನೆ ಮತ್ತು ಯಶಸ್ವೀ ನೆಮ್ಮದಿ ಬದುಕಿಗೆ ನೀರಾವರಿ-ಪ್ರಧಾನ ಪದ್ಧತಿಯ ಕೃಷಿ ಕ್ಷೇತ್ರವೇ ಹೆಚ್ಚು ಸೂಕ್ತ. ಧರ್ಮಸ್ಥಳ ಹಿಂದಿನಿಂದಲೂ ನಡೆದು ಬಂದಿದ್ದು ಬೇಸಾಯದ ಹಿನ್ನೆಯಲ್ಲಿ. ಪರಿಸರದ ಬರಡು ಬಂಜೆಯಾಗಿದ್ದ ಗುಡ್ಡ, ತೋಡು ಕಣಿವೆಗಳಲ್ಲಿ, ಯಶಸ್ವೀ ನೀರಾವರಿಯ ಹಿನ್ನೆಲೆಯ ಹಸಿರು ಪ್ರಯೋಗಗಳು ಕೈಹಿಡಿದಿವೆ. ಮಂಜುನಾಥನ ಸನ್ನಿಧಿಯ ಸರಹದ್ದಿನಲ್ಲಿ, ಎಲೆಮರೆಯ ಕಾಯಿಯಂತೆ ಬೆಳದು ನಿಂತ ಬೃಹತ್ಕೃಷಿ ಕಾಶಿಯೊಂದು ನೆಲೆ ನಿಂತಿದೆ.

ಧರ್ಮಸ್ಥಳದ ಕೃಷಿ ಹಾಗೂ ನೀರಾವರಿ ಪದ್ಧತಿಗಳಲ್ಲಿ, ಹಲವಾರು ಪ್ರಯೋಗಗಳ ಮೂಲಕ, ಪ್ರಗತಿಪರ ಬದಲಾವಣೆಯೊಂದಿಗೆ ಹೊಸ ಚೈತನ್ಯ ಪಡೆದುಕೊಂಡಿದೆ. ಇಲ್ಲಿ ವರ್ಷದ ಏಳು ತಿಂಗಳ ಕಾಲದ ಮಳೆಯ ನೀರು ಪೋಲಾಗದು. ಉಳಿದ ಸಮಯ ಭೂಮಿ ಬರಡಾಗಿರದು; ಬೇಸಿಗೆಯಲ್ಲಿನ ಹಸಿರಿನ ಯಾತನಾಮಯ ಬದುಕಿನ ಪುನರ್‌ಚೈತನ್ಯದ ಚಿಂತನೆಯ ಫಲವಾಗಿ ರೂಪತಾಳಿದ್ದು ಜಲಮರಪೂರಣ ವ್ಯವಸ್ಥೆ. ಹೊಸ ಪ್ರಯೋಗಗಳ ಮೂಲಕ ಬಾವಿ, ಕೆರೆ, ತೊರೆ, ಬೋರ್‌ವೆಲ್‌ಗಳು, ಮಳೆಗಾಲವಿಡೀ ನೀರಿಂಗಸುವ ಇಂಗು ಗುಂಡಿಗಳಾದವು. ತೆಂಗಿನಕಾಯಿ ಸಿಪ್ಪೆ, ಭತ್ತದ ಹೊಟ್ಟು, ಕೃಷಿ ತ್ಯಾಜ್ಯಗಳು, ಇಲ್ಲಿ ಗ್ಯಾಲನ್‌ಗಟ್ಟಳೆ ನೀರನ್ನ ದೀರ್ಘಾವಧಿ ಹಿಡಿದಟ್ಟುಕೊಂಡು, ತೇವಾಂಶ ಕಾಪಾಡಿಕೊಳ್ಳವಲ್ಲಿ ಸದ್ಬಳಕೆಯಾಗುತ್ತಿವೆ. ನೀರಿನ ಸದ್ಬಳಕೆ, ಸಂಗ್ರಹಕ್ಕಾಗಿ ಮಾಡಿದ ಯೋಜನೆಗಳಿಂದಾಗಿ, ಒಂದೇ ಒಂದು ಹನಿ ನೀರೂ ಹೊರಹೋಗದೆ, ಕೃಷಿ ಭೂಮಿಯಲ್ಲಿ ಸತತ ಇಂಗುತ್ತಾ ಇರುವುದು ಇಲ್ಲಿನ  ಅಚ್ಚರಿ.

ಕೃಷಿಯ ಪ್ರಮುಖ ಸೆಲೆ ನೀರಾವರಿ. ದುರ್ಬಲ ನೀರಾವರಿ ಪದ್ಧತಿಯಿಂದಾಗಿ, ಇಂದು ಅದೆಷ್ಟೋ ಯೋಗ್ಯ ಭೂಮಿಗಳು ಬರಡಾಗಿ ಬಿದ್ದಿವೆ. ನೀರಿನ ಅವ್ಯಾಹತ ದುರ್ಬಳಕೆ ತಡೆದು, ಅಚ್ಚುಕಟ್ಟಾಗಿ ನಿರ್ವಹಣೆ ನಡೆಸಿ, ಸಂಗ್ರಹ, ಮರುಪೂರಣದತ್ತ ಮನಸ್ಸು ಮಾಡಿದರೆ, ಬರ ಎನ್ನುವ ಶಬ್ದ ಅಳಿಸಬಹುದು. ಇದಕ್ಕೆಲ್ಲ ಉತ್ತರ, ಮಾದರಿ ಪಾಠ ಧರ್ಮಸ್ಥಳದಲ್ಲಿದೆ.

2015-01-30_11.40.58[1]ನೀರು ನೀರು ಎಂದು ಹಾಹಾಕಾರ ಎಬ್ಬಿಸುವ ಮಂದಿಗೆ ಎಚ್ಚರಿಸುವ ಮಾದರಿಗಳು ಇಲ್ಲಿವೆ. ಆಧುನಿಕ ಮಾದರಿಯ, ಅತೀ ಕಡಿಮೆ ಬೆಲೆಯ ಪ್ಲ್ಯಾಸ್ಟಿಕ್ ಹಾಳೆಯ ಟ್ಯಾಂಕಿ, ವರ್ಷದ ಏಳು ತಿಂಗಳು ನೀರು ಕುಡಿಯುವ, ಅಷ್ಟೇ ಪ್ರಮಾಣದ ನೀರು ಉಗುಳುವ ಕೊಳವೆಬಾವಿಗಳು, ಜಲ ಮರುಪೂರಣ ವ್ಯವಸ್ಥೆ, ನೀರಿನ ವರತೆ – ಅದರ ಸಂಗ್ರಹ, ಸದ್ಬಳಕೆ ಸೇರಿದಂತೆ, ನೀರು ಕ್ರಾಂತಿ ಅನುಕರಣೀಯ, ಈ ಮಾದರಿಗಳು ರೈತರಗೆ ಹಲವಾರು ಗುಟ್ಟುಗಳನ್ನು ಹೇಳಿಕೊಡುತ್ತವೆ.

ಇವಳು ಭಾಗೀರಥಿ ಅಲ್ಲ ಗಂಗೆ – ೧೯೯೯ರಲ್ಲಿ ಬೋರ್‌ವೆಲ್ ರೂಪದಲ್ಲಿ, ಜನ್ಮ ತಾಳಿದ ಗಂಗೆ ಆರಂಭದಲ್ಲಿ ೪.೫ ಇಂಚು ನೀರು ನೀಡುತ್ತಿದ್ದಳು. ಬರಬರುತ್ತ, ಬರಡಾಗುತ್ತ, ಕೊನೆಗೆ ಬತ್ತಿಯೇ ಹೋದಳು. ಜಲ ಮರುಪೂರಣ ಚಿಕಿತ್ಸೆಗೆ ಒಳಗಾದ ಗಂಗೆ  ಸತತ ಝರಿಯ ನೀರು ಕುಡಿಯುವ ಮೂಲಕ, ಮತ್ತೆ ಮರುಜೀವ ತಾಳಿದ್ದಾಳೆ. ಇಂದು ಒಂದು ಇಂಚಿನ, ಎರಡು ಪೈಪ್‌ಗಳ ಮೂಲಕ, ವಾರ್ಷಿಕ ಎರಡು ಕೋಟಿ ಲೀಟರ್ ನೀರನ್ನು ಕುಡಿಯುತ್ತಾ, ಧಾರಾಳವಾಗಿ ಸತತ ಐದು ಇಂಚಿನ ನೀರನ್ನು ನೀಡುವಷ್ಟು ಶಕ್ತಳಾಗಿದ್ದಾಳೆ.

ಭಾಗೀರಥಿ ಇವಳಿಗಿಂತಲೂ ಭಿನ್ನ. ಕ್ಷೇತ್ರದಲ್ಲಿ ಒಂದು ಹನಿ ನೀರನ್ನೂ ಸಹ ತನ್ನ ವ್ಯಾಪ್ತಿಯಿಂದ ಹರಿದು ಹೊರಹೋಗಲು ಬಿಡವವಳಲ್ಲ.  ಆಧುನಿಕ ರೀತಿಯಲ್ಲಿ ಜಲ ಮರುಪೂರಣ ನಡೆಸಿಕೊಂಡು, ಬೇಸಿಗೆಯಲ್ಲಿ ತನ್ನ ಒಡಲಿನಿಂದ ನೀರನ್ನು ನೀಡುತ್ತಿದ್ದಾಳೆ. ಇನ್ನೊಬ್ಬಳು, ಹಲವಾರು ರೀತಿಯ ಪ್ರಯೋಗ-ಸಂಶೋಧನೆಗೆ ಒಳಗಾಗಿ, ಇಡೀ ನೀರಾವರಿ ವ್ಯವಸ್ಥೆಗೆ ಮಾದರಿಯಾಗಿ ನಿಂತಿದ್ದಾಳೆ.

ಧರ್ಮಸ್ಥಳದ ಕೃಷಿ ಕ್ಷೇತ್ರದಲ್ಲಿ ಇಳಿನೀರಿನ ಸಂಗ್ರಹಣೆ, ಕಿರು ಅಣೆಕಟ್ಟು, ಬತ್ತಿದ ಕೆರೆಯ ಪುನರ್ನಿರ್ಮಾಣ, ಹೂಳೆತ್ತಿದ ಕೆರಗಳು, ಇಂಗುಗುಂಡಿ, ಇಂಗುಗುಂಡಿಯಲ್ಲಿನ ತೆಂಗಿನಕಾಯಿ ಸಿಪ್ಪೆ ಹಾಗೂ ಭತ್ತದ ಹೊಟ್ಟಿನ ಮೂಲಕ ನೀರಿನ ಸಂಗ್ರಹಣೆ ಮುಂತಾದ ವಿಧಾನಗಳಿಂದಾಗಿ ವರ್ಷವಿಡೀ ನೀರಿನಿಂದ ಜಳಝಳಿಸುತ್ತಾ ಇರುತ್ತದೆ ಧರ್ಮಸ್ಥಳದ ಪರಿಸರ. ಸಂಶೋಧಕರಿಗೂ ಸವಾಲಾಗಿರುವ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ.

ಪ್ಲಾಸ್ಟಿಕ್ ಕೆರೆ

2015-01-30_11.40.17[1]ಹಲವಾರು ರೈತರು ಪ್ಯಾಸ್ಟಿಕ್ ಟ್ಯಾಂಕ್  ನೀರಿನ ಸಂಗ್ರಹಣೆ ಪ್ರಯೋಗ ನಡೆಸಿದರೂ ಇಷ್ಟೊಂದು ದೊಡ್ದ ಪ್ರಮಾಣದ ಯೋಜನೆ ರಾಜ್ಯದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಗೊಮ್ಮಟಗುಡ್ಡವನ್ನೇ ಹೋಲುವ ಪಕ್ಕದ ಗುಡ್ಡದ ತುತ್ತತದಿಯಲ್ಲಿ ೮೦x೪೬x೧೦ ಗಾತ್ರದ ಮಣ್ಣಿನ ಹೊಂಡ ತೆಗೆದು, ಅದೇ ಗಾತ್ರದ ಬ್ರಹತ್ ಪ್ಲಾಸ್ಟಿಕ್ ಟಾರ್ಪಲ್ ಬಳಸಿ ೧೦ ಲಕ್ಷದ ೩೫ ಸಾವಿರ ಲೀಟರ್ ನೀರನ್ನು ಸಂಗ್ರಹಿಸಿ, ಕೃಷಿಗೆ ಉಪಯೋಗಿಸಲಾಗುತ್ತಿದೆ. ಒಂದು ಕ್ಯೂಬಿಕ್ ಅಡಿ ನೀರಿಗೆ ಕೇವಲ ಎರಡು ವೆಚ್ಚದ್ದಲ್ಲಿ ಒಂದೇ ಒಂದು ಮುಷ್ಟಿ ಸಿಮೆಂಟ್ ಬಳಸದೆ ನಿರ್ಮಾಣಗೊಂಡ ಈ ಕೆರೆ, ವರ್ಷಾವಧಿ ನೀರು ನೀಡುತ್ತಿದೆ. ಸಮಾರು ಎಪ್ಪತ್ತು ಸಾವಿರ ವೆಚ್ಚದ ಈ ಕೆರೆ ಗುಡ್ಡದ ತುತ್ತತುದಿಯಲ್ಲಿರುವ ಕಾರಣ, ಯಾವ ಪ್ರದೇಶಕ್ಕೂ ಸಹ ಪಂಪಿನ ಅಗತ್ಯ ಇಲ್ಲದೆ ಹರಿದುಹೋಗತ್ತಿದೆ.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಮಂಜುನಾಥನ ದರ್ಶನ ಪಡೆಯುವವರು ಆಸಕ್ತಿ, ಅವಕಾಶ ಇದ್ದಲ್ಲಿ, ಪ್ರಕೃತಿ ಮಾತೆಯರಾದ ನೇತ್ರಾವತಿ, ಭಾಗೀರಥಿ, ಗಂಗೆಯ ಜೊತೆ, ಇಲ್ಲಿನ ಕೃಷಿಕ್ಷೇತ್ರದ ದರ್ಶನ ದೊರೆತರೆ, ಇದಕ್ಕಿಂತ ಭಾಗ್ಯ ಇನ್ನೊಂದಿಲ್ಲ.

 

ಚಿತ್ರ-ಲೇಖನ: ಕೆ. ಶಶಿಧರ ಹೆಮ್ಮಣ್ಣ, ಉಡುಪಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*