ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ತರಾವರಿ-ನೀರಾವರಿ

ಈಗ ಟೆರೇDSC04777ಸ್ ಗಾರ್ಡನ್ ಕೈತೋಟಗಳು ದಿನೇ ದಿನೇ ಜನಪ್ರಿಯವಾಗುತ್ತಿವೆ. ಆದರೆ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ನೀರೂಡದಿದ್ದರೆ ಗಿಡಗಳು ಬದುಕಲಾರವು. ನಗರಗಳಲ್ಲಿ ಹಸುರನ್ನು ಹೆಚ್ಚಿಸದಿದ್ದರೆ ಮಳೆಗಾಲದಲ್ಲೂ ಫ್ಯಾನ್ ಬೇಕೇ ಬೇಕಾಗುತ್ತದೆ. ಲಭ್ಯವಿರುವ, ಅತ್ಯಂತ ಕಡಿಮೆ ನೀರು ಬಳಸಿ ಗಿಡಗಳನ್ನು ಬೆಳೆಸಲು ಸಾಧ್ಯ. ಈಗ್ಗೆ ೩೦ ವರ್ಷಗಳ ಹಿಂದೆಯೇ ಡಾ. ಗುರುಪಾದ ದಂಡಗಿಯವರು ತೋರಿಸಿಕೊಟ್ಟಿದ್ದರು. ಧಾರವಾಡದ ಈ ವಿಜ್ಞಾನಿ ಸುತ್ತಲಿನ ಹಳ್ಳಿಯ ರೈತರಿಗೆ ಹಿತ್ತಿಲೊಂದೇ ಅಲ್ಲ, ಹೊಲಗದ್ದೆಗಳಲ್ಲೂ ನೀರುಳಿತಾಯದ ಮಾದರಿಗಳನ್ನು ಪ್ರಾತ್ಯಕ್ಷಿಕೆಯ ಸಹಿತ ವಿವರಿಸಿದ್ದರು. ಪರಿಸರಸ್ನೇಹಿ, ಕುಟುಂಬಸ್ನೇಹಿ, ನೆರೆಹೊರೆಸ್ನೇಹಿ ವಿಧಾನಗಳನ್ನು ಆವಿಷ್ಕರಿಸಿದ್ದರು. ಕುಟುಂಬಸ್ನೇಹಿಯೆಂದರೆ; ಮನೆಯಲ್ಲಿ ನಾವಿಲ್ಲದಿದ್ದಾಗ ನಮ್ಮ ಗಿಡಗಳಿಗೆ ಕುಟುಂಬದ ಸದಸ್ಯರು ಇಷ್ಟವಿಲ್ಲದೇ ನೀರುಣಿಸಬೇಕಾಗುತ್ತದೆ. ಅದನ್ನು ತಪ್ಪಿಸುವ ಉಪಾಯ. ನೆರೆಹೊರೆಸ್ನೇಹಿ; ನಮ್ಮ ಮನೆಯ ತ್ಯಾಜ್ಯನೀರು, ಕಸಗಳು ಪಕ್ಕದವರಿಗೆ ಹಿಂಸೆಯಾಗದಂತೆ ಮರುಬಳಸುವ ವಿಧಾನ.

 ಹೊಲಗಳಲ್ಲಿ ಚಿಕ್ಕು, ಮಾವು, ಹಲಸು ಮುಂತಾದ ಹಣ್ಣಿನ ಗಿಡಗಳನ್ನು ನೆಟ್ಟಾಗ ಮೂರು ವರ್ಷಗಳ ಕಾಲ ಬೇಸಿಗೆಯಲ್ಲಿ ನೀರು ನೀಡಬೇಕಾಗುತ್ತದೆ. ಅದಕ್ಕಾಗಿ ದಿನಾಲೂ ನೀರು ಹೊತ್ತು ತರಲಾಗದು. ಸಸಿಗಳ ಬುಡದಲ್ಲಿ ತಳದಲ್ಲೊಂದು ರಂಧ್ರವಿರುವ ಮಣ್ಣಿನ ಗಡಿಗೆಯೊಂದನ್ನು ಒಂದು ಇಂಚಿನಷ್ಟು ಹುಗಿದಿಡುವುದು, ಅದಕ್ಕೆ ನೀರು ತುಂಬುವುದು. ಆಗ ಮಣ್ಣು ನೀರನ್ನು ಹೀರಿಕೊಳ್ಳತೊಡಗುತ್ತದೆ. ನೀರು ಖಾಲಿಯಾದಂತೆ ತುಂಬುತ್ತಿದ್ದರಾಯಿತು. ಹೀಗೆ ನಾಲ್ಕು ದಿನಗಳಿಗೋ, ಎಂಟು ದಿನಗಳಿಗೋ ನೀರು ನೀಡುವ ಪದ್ಧತಿ ಸಸಿ ಬೆಳೆಸಲು ಸುಲಭ ವಿಧಾನ.

 ಹೂಜಿಹನಿ ಪದ್ಧತಿ: ಗಡಿಗೆ ಮಾಡಿಸುವಾಗಲೇ ಅರ್ಧ ಇಂಚಿನ ಬಿಳಿ ಪೈಪ್ ಕೂರುವಂತೆ ರಂಧ್ರ ಮಾಡಿಸಿ ಪೈಪನ್ನು ಕೂರಿಸಿ. ಅದರ ಒಳಗೊಂದು ಕಪ್ಪು ಪೈಪ್ ಬಿಗಿಯಾಗಿ ಕೂರುವಂತೆ ಜೋಡಿಸಿ. ಕಪ್ಪು ಪೈಪಿನ ತುDSC04778ದಿಯಲ್ಲಿ ನೀರುಹನಿ ನಿಯಂತ್ರಕಗಳನ್ನು ಅಳವಡಿಸಿ ಅಥವಾ ಅದಕ್ಕೊಂದು ಎಂಡ್ ಕ್ಯಾಪ್ ಹಾಕಿ. ಎಂಡ್‌ಕ್ಯಾಪಿಗೆ ದಪ್ಪ ಸೂಜಿ ಅಥವಾ ದಬ್ಬಣ ಕಾಯಿಸಿ ರಂಧ್ರಮಾಡಿ. ಚಿಕ್ಕ ಸಸಿಗಳಿಗೆ ದಿನಕ್ಕೆ ಮೂರು ಲೀಟರ್ ನೀರು ಸಾಕು. ೨೧ ಲೀಟರ್ ನೀರು ಹಿಡಿಸುವ ಹೂಜಿಯನ್ನು ಇಟ್ಟರೆ ಏಳು ದಿನಗಳವರೆಗೆ ಸಸಿಗಳಿಗೆ ಅದು ನೀರೂಡಿಸುತ್ತಲೇ ಇರುತ್ತದೆ. ತೇವಾಂಶ ಹೆಚ್ಚು ಕಾಲ ಇರಲು ಸಸಿಗಳ ಬುಡದಲ್ಲಿ ದಪ್ಪನಾಗಿ ಕಾಂಪೋಸ್ಟ್ ಹಾಸಿರಬೇಕು.

 ಒಸರು ನೀರಾವರಿ: ಒಂದು ಲೀಟರ್ ನೀರಿನ ಬಾಟಲಿ ತೆಗೆದುಕೊಳ್ಳಿ. ಅದರ ಮುಚ್ಚಳಕ್ಕೆ ಸ್ವಲ್ಪ ದೊಡ್ಡ ರಂಧ್ರಗಳನ್ನು ಮಾಡಿರಿ. ಬಾಟಲಿಗೆ ನೀರು ತುಂಬಿ ಮುಚ್ಚಳ ಮುಚ್ಚಿರಿ. ಕುಂಡಗಳ ತುದಿಯಲ್ಲಿ ಮುಚ್ಚಳ ಕೆಳಗೆ ಮಾಡಿ ಒಂದೂವರೆ ಇಂಚು ಆಳಕ್ಕೆ ಮಣ್ಣಿನಲ್ಲಿ ಹುಗಿಯಿರಿ. ಇದನ್ನು ನೆಲದಲ್ಲಿ ನೆಟ್ಟ ಗಿಡಗಳಿಗೂ ಮಾಡಬಹುದು. ಮುಚ್ಚಳದಲ್ಲಿರುವ ರಂಧ್ರಗಳ ಮೂಲಕ ಮಣ್ಣು ನಿಧಾನವಾಗಿ ನೀರನ್ನು ಎಳೆದುಕೊಳ್ಳುತ್ತಿರುತ್ತದೆ. ನೀರು ಎಷ್ಟು ಗಂಟೆಗೆ ಖಾಲಿಯಾಯಿತು ಎಂದು ಗಮನಿಸಿ. ಅವಶ್ಯಕತೆಗೆ ಅನುಗುಣವಾಗಿ ರಂಧ್ರಗಳನ್ನು ಹೆಚ್ಚಿಸಿ.

 ಡ್ರಿಪ್ ನೀರಾವರಿ: ಪ್ಲಾಸ್ಟಿಕ್ ಬಾಟಲಿ ಅಥವಾ ಡ್ರಿಪ್ ಬಾಟಲಿಯ ಮುಚ್ಚಳದ ಮಧ್ಯೆ ಒಂದು ರಂಧ್ರ ಮಾಡಿ. ಸೆಣಬಿನ (ಸುತಳಿ) ದಾರವನ್ನು ಗಂಟು ಹಾಕಿ ಬಾಟಲಿಯ ಒಳಕ್ಕೆ ಸೇರಿಸಿ ಹೊರಗೆ ಇಳಿಬಿಡಿ. ಬಾಟಲಿಗೆ ನೀರು ತುಂಬಿ ಗಿಡದ ಪಕ್ಕ ನೇತುಹಾಕಿ. ಸೆಣಬಿನ ದಾರದ ಹೊರಗಿನ ಉದ್ದವನ್ನು ಸರಿಪಡಿಸುವುದರ ಮೂಲಕ ನೀರು ಗಿಡಕ್ಕೆ ಅಗತ್ಯವಿರುವಷ್ಟು ಬೀಳುವಂತೆ ಮಾಡಬಹುದು.

ಟ್ಯೂಬ್‌ಲೈಟ್ ಡ್ರಿಪ್: ಹಾಳಾದ ಟ್ಯೂಬ್‌ಲೈಟ್ ತೆಗೆದುಕೊಳ್ಳಿ. ಒಂದು ದಿಕ್ಕಿನಲ್ಲಿ ಬಾಯಿ ಬಿಡಿಸಿ. ಬಿಡಿಸಿದ ಬಾಯಿ ಮೇಲಿರುವಂತೆ ನೆಲಕ್ಕೆ ಹುಗಿಯಿರಿ. ಅದರ ಪಕ್ಕ ಬಳ್ಳಿಗಳನ್ನು ಬೆಳೆಸಿರಿ. ಟ್ಯೂಬ್‌ಲೈಟ್‌ಗೆ ನೀರು ತುಂಬಿ. ಡ್ರಿಪ್ ನೀರಾವರಿಗೆ ಬಳಸುವ ಪೈಪ್‌ನ ಒಂದು ತುದಿಯನ್ನು ಟ್ಯೂಬ್‌ಲೈಟ್‌ನ ತಳದವರೆಗೂ ಹಾಕಿ. ಮತ್ತೊಂದು ತುದಿಯನ್ನು ಗಿಡದ ಬುಡಕ್ಕೆ ಇಡಿ. ನೀರು ನಿಯಂತ್ರಕವನ್ನು ಡ್ರಿಪ್ ಪೈಪ್‌ಗೆ ಅಳವಡಿಸಿ. ಬಳ್ಳಿಗಳು ಟ್ಯೂಬ್‌ಲೈಟ್ ಬಳಸಿಯೇ ಮೇಲೇರುತ್ತವೆ. ನೀರು ಬೇಕಾದಷ್ಟೇ ಬುಡಕ್ಕೆ ಸಿಗುತ್ತಿರುತ್ತದೆ.

 ಟ್ಯೂಬ್‌ಲೈಟ್ ಒಸರು: ಒಂದೊಮ್ಮೆ ಟ್ಯೂಬ್‌ಲೈಟ್ ಕೊಳವೆಯ ಎರಡೂ ಕಡೆ ಬಾಯಿ ತೆರೆದಿದ್ದರೆ ಒಂದು ಬಾಯಿಗೆ ತೆಂಗಿನ ನಾರನ್ನು ಬಿಗಿಯಾಗಿ ತುರುಕಿ ಮುಚ್ಚಿರಿ. ಗಿಡಗಳ ಪಕ್ಕ ನೆಲಕ್ಕೆ ತಾಗುವಂತೆ ಇಟ್ಟು ಪಕ್ಕದಲ್ಲಿ ಗೂಟ ನಿಲ್ಲಿಸಿ ಟ್ಯೂಬ್‌ಲೈಟನ್ನು ಕಟ್ಟಬೇಕು. ತೆರೆದಿರುವ ಬಾಯಿಗೆ ನೀರು ತುಂಬಿದರಾಯಿತು. ನೀರು ಹನಿ ಹನಿಯಾಗಿ ಇಳಿಯುತ್ತಿರುತ್ತದೆ. ಈ ವಿಧಾನವನ್ನು ಎರಡು ಲೀಟರ್ ನೀರಿನ ಬಾಟಲಿ ಬಳಸಿಯೂ ಮಾಡಬಹುದು. ಬಾಟಲಿಯ ಬಿರಡೆ ಭಾಗಕ್ಕೆ ತೆಂಗಿನನಾರನ್ನು ಬಿಗಿಯಾಗಿ ಮುಚ್ಚಿರಿ. ತಳಭಾಗವನ್ನು ಕತ್ತರಿಸಿ ಬಿರಡೆಯ ಭಾಗ ಮಣ್ಣಿಗೆ ತಾಗುವಂತೆ ಮಾಡಿ. ಗಿಡಕ್ಕೆ ಅಥವಾ ಗಿಡದ ಪಕ್ಕದ ಗೂಟಕ್ಕೆ ಕಟ್ಟಿರಿ. ಮೇಲಿನಿಂದ ನೀರು ತುಂಬಿರಿ.

 ತುಂತುರು ಸಿಂಪಡಣೆ: ಎರಡು ಲೀಟರ್ ನೀರಿನ ಬಾಟಲಿಯ ತಳಭಾಗದಲ್ಲಿ ನಾಲ್ಕು ಉಬ್ಬುಗಳಿರುತ್ತವೆ. ಅವುಗಳಿಗೆ ದಬ್ಬಣ ಹಾಕಿ ಎರಡೆರಡು ರಂಧ್ರಗಳನ್ನು ಮಾಡಿರಿ. ಬಕೆಟ್‌ನಲ್ಲಿ ಮುಳುಗಿಸಿ ನೀರು ತುಂಬಿಸಿ ಮುಚ್ಚಳ ಹಾಕಿರಿ. ರಂಧ್ರಗಳಿಂದ ನೀರು ಹೊರಬರುವುದಿಲ್ಲ. ಗಿಡಗಳ ಬುಡಕ್ಕೆ ಒಯ್ದು ಬಾಟಲಿಯನ್ನು ಒತ್ತಿರಿ. ಕಾರಂಜಿಯಂತೆ ನೀರು ಚಿಮ್ಮುತ್ತದೆ. ಇದರಿಂದ ಎಷ್ಟು ಅಗತ್ಯವೋ ಅಷ್ಟೇ ನೀರನ್ನು ಗಿಡಗಳಿಗೆ ನೀಡಲು ಸಾಧ್ಯ.

 ಹೀಗೆ ಒಂದೆರಡು ವಿಧಾನಗಳನ್ನು ಮಾಡುತ್ತಾ ನೀವೇ ಸಾಕಷ್ಟು ಹೊಸತನ್ನು ಹುಡುಕಲು ಸಾಧ್ಯ. ತ್ಯಾಜ್ಯ ವಿಲೇವಾರಿ ಹಾಗೂ ನೀರುಳಿತಾಯ ಎರಡೂ ಒಮ್ಮೆಲೇ ಆಗುತ್ತದೆ. ಇದೆಲ್ಲಾ ಮಾಡಿ ವ್ಯರ್ಥವಾದ ಬಾಟಲಿಯಲ್ಲಿ ಚಿಕ್ಕ ಸಸಿಗಳನ್ನು ಬೆಳೆಸಲು ಸಾಧ್ಯ.

ಪ್ರತಿ ನೀರಾವರಿಪದ್ಧತಿ ಅಳವಡಿಸಿದ ಮೇಲೆ ನೀರು ಹರಿಯುವ ವೇಗ, ಸಮಯವನ್ನು ದಾಖಲಿಸಿರಿ. ಗಿಡಗಳ ಬೆಳವಣಿಗೆ ಗಮನಿಸಿರಿ. ಇದರಿಂದ ಗಿಡಗಳಿಗೆ ನೀರು ಎಷ್ಟು ಬೇಕು, ಯಾವ ರೀತಿ ಸೂಕ್ತ, ದ್ರವಗೊಬ್ಬರದ ಬಳಕೆ-ಹೀಗೆ ಏನೆಲ್ಲಾ ರೀತಿಗಳನ್ನು ಅಳವಡಿಸಲು ಉಪಯುಕ್ತ. ನಿಮ್ಮ ಕೈತೋಟಕ್ಕೆ ನಿಮ್ಮದೇ ಪದ್ಧತಿ ರೂಢಿಸಬಹುದು.

 ಇಷ್ಟೆಲ್ಲಾ ಮಾಡಿದ್ದೀರಾ. . . ನಲ್ಲಿ ನೀರು ಬಿಟ್ಟು ಕೈತೊಳೆದುಕೊಳ್ಳಲು ಹೊರಟಿರಾ? ನಿಲ್ಲಿ.. ನಿಲ್ಲಿ….. ನಿಮ್ಮಲ್ಲಿ ಹಳೆಯ ಸ್ಪ್ರೇಯರ್ ಉಂಟಲ್ಲಾ, ಇಲ್ಲದಿದ್ದರೆ ಒಂದು ಲೀಟರ್ ಬಾಟಲಿಯ ಬಿರಡೆಗೆ ಕೊಕ್ಕರೆ ಕತ್ತಿನ ಕೊಳವೆ ಜೋಡಿಸಿ. ನೀರು ತುಂಬಿಸಿ. ಬಾಟಲಿಯನ್ನು ಒತ್ತಿದರೆ ಒಮ್ಮೆಗೇ ಐದು ಮಿಲಿಲೀಟರ್ ನೀರು ಬರುತ್ತದೆ. ಮಣ್ಣು ಹೋಗಲಿಲ್ಲವೇ? ಎರಡೇಕೆ ಹತ್ತು ಸಾರಿ ಒತ್ತಿ. ಮಣ್ಣೆಲ್ಲಾ ಹೋಯಿತಾ? ಎಷ್ಟು ನೀರು ಖರ್ಚಾಯಿತು? ನೋಡಿ. ೫೦ ಮಿಲಿಲೀಟರ್! ೧೦೦ ಮಿಲಿಲೀಟರ್! ನಲ್ಲಿ ಬಿಟ್ಟಿದ್ದರೆ ಒಮ್ಮೆಗೇ ಒಂದು ಲೀಟರ್ ನೀರು ಗೋವಿಂದ. . .. ಅದೇ ಬಾಟಲಿಯಲ್ಲಿ ೧೦ ಜನ ಕೈ ತೊಳೆಯಲು ಸಾಧ್ಯ.

 ನೀರು ದುಬಾರಿಯಾದಂತೆ ತಾನೇ ತಾನಾಗಿ ಇವೆಲ್ಲಾ ಜನಪ್ರಿಯವಾಗುತ್ತವೆ. ದುಬಾರಿಯಾಗುವ ಮೊದಲೇ ಎಚ್ಚೆತ್ತುಕೊಂಡರೆ ಪಶ್ಚಾತ್ತಾಪಪಡುವುದು ತಪ್ಪುತ್ತದೆ.

ಚಿತ್ರ-ಲೇಖನ: -ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*