ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಈ ಶಾಲೆಗೀಗ ನೀರ ಚಿಂತೆ ಇಲ್ಲ – ಏಕೆಂದರೆ ಮಳೆ ನೀರು ಇದೆಯಲ್ಲ!!

“ಈ ಮಳೆ ನೀರು ಸಂಗ್ರಹಣೆ ಮಾಡೊಕ್ಕಿಂತ ಮುಂಚೆ ವಿಪರೀತ ನೀರಿನ ಸಮಸ್ಯೆ ಇತ್ತು. ದೂರದ ತೋಟಗಳಿಂದ ನೀರು ತರಬೇಕಿತ್ತು. ಅದೂ ಕರೆಂಟಿದ್ದಾಗ, ಆ ತೋಟದ ಮಾಲೀಕರು ಪಂಪ್ ಸೆಟ್ ಚಾಲೂ ಮಾಡಿದ್ರೆ ಮಾತ್ರ ನಮಗೆ ನೀರು ಸಿಗ್ತಾ ಇತ್ತು, ಇಲ್ಲಾ ಅಂದ್ರೆ ಇಲ್ಲ. ಆದ್ರೆ ಈಗ ಆ ಸಮಸ್ಯೆಯಿಂದ ಪಾರಾಗಿದ್ದೀವಿ,” ಎಂದು ಕಬ್ಬಿಗೆರೆ ಶಾಲೆಯ ಮುಖ್ಯ ಶಿಕ್ಷಕರು ಅಭಿಮಾನದಿಂದ ಹೇಳುತ್ತಾರೆ.

IMG_2216‘ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ’ ಕಬ್ಬಿಗೆರೆ ಗ್ರಾಮದಲ್ಲಿದ್ದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿಗೆ ಒಳಪಡುತ್ತದೆ. ಶಾಲೆ ಊರಿನಿಂದ ಹೊರಗಿರುವುದರಿಂದ, ಗದ್ದಲ ಗೌಜುಗಳಿಂದ ಮುಕ್ತ. ಅಡಿಕೆ ತೆಂಗಿನ ತೋಟಗಳ ಮಧ್ಯೆ ಇರುವ ಶಾಲೆಯ ವಾತಾವರಣ ಕಲಿಕೆಗೆ ಅತ್ಯಂತ ಸೂಕ್ತವಾಗಿದೆ. ಅನುದಾನಿತ ಶಾಲೆಯಾದರೂ ಸಾರಿಗೆ ಸಂಪರ್ಕದ ಕೊರತೆಯಿಂದಾಗಿ ಸೌಲಭ್ಯಗಳಿಂದ ವಂಚಿತ. ೧೯೮೫ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಪ್ರಸ್ತುತ ನೂರಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಉತ್ತಮ ವಾತಾವರಣ, ಉತ್ಸಾಹಿ ಮಕ್ಕಳು ಹಾಗೂ ಬದ್ಧತೆಯುಳ್ಳ ಶಿಕ್ಷಕ ಬಳಗವಿದ್ದಾಗ್ಯೂ, ನೀರಿನ ಕೊರತೆ ಈ ಶಾಲೆಗೆ ಕಾಡುತ್ತಿತ್ತು. ಈ ಸಮಸ್ಯೆಯಿಂದ ಪಾರಾಗಲು ಹೊಳೆದ ಉಪಾಯವೇ ಮಳೆ ನೀರು ಸಂಗ್ರಹ.

ಸದರಿ ಶಾಲೆಯಲ್ಲಿ ೧೫ ಸಾವಿರ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹಣಾ ತೊಟ್ಟಿ ನಿರ್ಮಿಸಲಾಗಿದೆ. ಶಾಲೆಯು ಹೆಂಚಿನ ಮಾಡನ್ನು ಹೊಂದಿದ್ದು, ಮಳೆನೀರು ಸಂಗ್ರಹಣೆಗೆ ಸುಲಭವಾಗಿದೆ. ಶಾಲೆಯ ಹಿಂಭಾಗದ ಮಾಡಿನ ನೀರನ್ನು ಸಂಗ್ರಹಿಸಲು ೧೧ ಸಾವಿರ ಲೀಟರ್ ಸಾಮರ್ಥ್ಯದ ತೊಟ್ಟಿಯಿದ್ದು, ಇದನ್ನು ಭೂಮಿಯ ಮೇಲ್ಭಾಗದಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ನಲ್ಲಿ ಅಳವಡಿಸಿದ್ದು ನೀರು ಬಳಕೆಗೆ ಅನುಕೂಲವಾಗಿದೆ. ಶಾಲೆ ಮುಂಭಾಗದ ಮಾಡಿನ ನೀರು ಸಂಗ್ರಹಣೆಗೆ ಭೂಮಿಯ ಒಳಗೆ ತೊಟ್ಟಿ ನಿರ್ಮಿಸಿದ್ದು, ೧೫ ಸಾವಿರ ಲೀಟರ್ ನೀರು ಸಂಗ್ರಹವಾಗುತ್ತದೆ. ಇದರಲ್ಲಿನ ನೀರನ್ನು ಮೇಲೆತ್ತಲು ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಕೈಪಂಪು ಅಳವಡಿಸಲಾಗಿದೆ. ಮುಖ್ಯ ಶಿಕ್ಷಕರ ಕೊಠಡಿಯಲ್ಲೇ ಪಂಪು ಇರುವುದರಿಂದ ಸುರಕ್ಷಿತವಾಗಿದೆ.

IMG_2218ಎರಡೂ ಮಳೆನೀರು ಸಂಗ್ರಹಣಾ ತೊಟ್ಟಿಗಳ ನಿರ್ವಹಣಾ ಜವಾಬ್ದಾರಿಯನ್ನು ಮಕ್ಕಳಿಗೇ ವಹಿಸಲಾಗಿದೆ. ಪ್ರತಿದಿನ ಒಂದೊಂದು ಗುಂಪು ಪೈಪುಗಳು ಮತ್ತು ತೊಟ್ಟಿಯ ವೀಕ್ಷಣೆ ಮಾಡಿ ಸ್ವಚ್ಚಗೊಳಿಸಬೇಕು. ವರ್ಷಕ್ಕೊಮ್ಮೆ ನೀರು ಸಂಪೂರ್ಣ ಖಾಲಿಯಾದಾಗ, ಫ಼ೆಬ್ರವರಿ ಅಥವಾ ಮಾರ್ಚ್‌ನಲ್ಲಿ ಕೆಲಸಗಾರರಿಂದ ತೊಟ್ಟಿಯನ್ನು ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚಗೊಳಿಸಲಾಗುತ್ತದೆ. ಉತ್ತಮ ಮಳೆ ಬಂದರೆ ವರ್ಷ ಪೂರ್ತಿ ಶಾಲೆಗೆ ನೀರಿನ ಚಿಂತೆಯಿಲ್ಲ. ‘ಬರಗಾಲದಿಂದಾಗಿ ಕೆಲವು ಸಲ ನೀರಿನ ಕೊರತೆಯಾದಾಗ, ಕೆಲವು ಹಳ್ಳಿಯವರೂ ಸಹ ಇಲ್ಲಿಗೆ ಬಂದು ಕುಡಿಯುವ ನೀರು ಒಯ್ದಿದ್ದಾರೆ’ ಎನ್ನುತ್ತಾರೆ ಶಾಲೆಯ ಶಿಕ್ಷಕ ನಾಗರಾಜರಾವ್.

ಶಾಲೆಯಲ್ಲಿ ಅರ್ಧಕ್ಕೂ ಅಧಿಕ ಹೆಣ್ಣು ಮಕ್ಕಳಿದ್ದಾಗ್ಯೂ, ಅವರಿಗೆ ಸುಸಜ್ಜಿತ ಶೌಚಾಲಯವಿದ್ದರೂ ನೀರಿನ ಅನುಕೂಲ ಸುಗಮವಾಗಿರಲಿಲ್ಲ. ಮಳೆ ನೀರಿನ ಸಂಗ್ರಹಣೆಯಿಂದಾಗಿ ಈಗ ಯಾವಾಗಲೂ ನೀರಿನ ಅನುಕೂಲವುಳ್ಳ ಶೌಚಾಲಯ ಲಭ್ಯವಿದ್ದು ಎಲ್ಲಾ ಮಕ್ಕಳಿಗೂ ಅನುಕೂಲವಾಗಿದೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ.

ಶಾಲೆಯ ಮುಂಭಾಗ ಸಾಕಷ್ಟು ಸ್ಥಳಾವಕಾಶವಿದ್ದುದನ್ನು ಗಮನಿಸಿ, ವಿವಿಧ ರೀತಿಯ ಗಿಡ-ಮರಗಳನ್ನು ಹಾಕಲಾಗಿದೆ. ಒಂದು ಪ್ರತ್ಯೇಕ ಸ್ಥಳದಲ್ಲಿ ಔಷಧಿವನವನ್ನೂ ಸಹ ನಿರ್ಮಿಸಲಾಗಿದೆ. ಒಂದು ಎರೆಹುಳು ಗೊಬ್ಬರದ ಘಟಕವನ್ನು ನಿರ್ಮಿಸಿದ್ದು, ಶಾಲೆಯಲ್ಲಿ ಲಭ್ಯವಾಗುವ ಸಾವಯವ ತ್ಯಾಜ್ಯಗಳನ್ನು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದೆ. ಆದರೆ ನಿರ್ವಹಣೆಯ ಕೊರತೆಯಿದೆ. ರೈತ ಕುಟುಂಬದ ಮಕ್ಕಳಿಗೆ ಇವೆಲ್ಲಾ ಉತ್ತಮ ಕೃಷಿ ಪಾಠಗಳು. ಶಾಲಾವಲಯಕ್ಕೆ ಬೇಲಿ ನಿರ್ಮಿಸಿದ್ದು ಜಾನುವಾರುಗಳ ಕಾಟ ಇಲ್ಲವಾಗಿದೆ. ಇವೆಲ್ಲವುಗಳಿಂದ ಮೊದಲೇ ಹಸಿರಿನ ಮಧ್ಯೆ ಇದ್ದ ಶಾಲೆಗೆ ಮತ್ತಷ್ಟು ಸೌಂದರ್ಯ ಪ್ರಾಪ್ತವಾಗಿದೆ.IMG_2209

ಮಳೆ ನೀರು ಸಂಗ್ರಹಣೆ ಘಟಕಗಳನ್ನು ಅಳವಡಿಸಿಕೊಂಡ ನಂತರ, ಪ್ರತಿ ತಿಂಗಳು ಬೀಳುವ ಮಳೆಯ ಪ್ರಮಾಣವನ್ನು ಅಳೆಯಲು ಮತ್ತು ಅರ್ಥ ಮಾಡಿಕೊಳ್ಳಲು ಮಳೆ ಮಾಪನವನ್ನು ಶಾಲಾ ಕಾಂಪೌಂಡ್‌ನಲ್ಲಿ ಅಳವಡಿಸಲಾಗಿದೆ. ದಿನಾಂಕ ೦೨.೦೫.೨೦೦೯ರಲ್ಲಿ ಹಾಕಿದ ಈ ಮಾಪನ ಕೇಂದ್ರ ಈಗಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ಮಳೆ ಬಂದ ತಕ್ಷಣ ಅಥವಾ ಮರುದಿನ ಮಕ್ಕಳೇ ಹೋಗಿ ಬಿದ್ದ ಮಳೆ ಪ್ರಮಾಣವನ್ನು ದಾಖಲಿಸುತ್ತಾರೆ. ಇವರ ದಾಖಲೆ ಪ್ರಕಾರ ದಿನಾಂಕ ೩೧/೧೦/೨೦೧೨ರಂದು ಒಂದೇ ದಿನ ದಾಖಲೆಯ ೯೭.೨ ಮಿಲಿ ಮೀಟರ್ ಮಳೆ ಬಿದ್ದಿದೆ. ಈ ಮಾಹಿತಿಯನ್ನು ಸ್ಥಳೀಯ ಪತ್ರಿಕೆಗಳಿಗೂ ಸಹ ತಿಳಿಸಲಾಗಿದೆ.

ಈ ಸೌಲಭ್ಯಗಳಿಂದ ಖಾಸಗಿ ಅನುದಾನಿತ ಶಾಲೆಯಾದ ಇದಕ್ಕೆ ಶಿಕ್ಷಣ ಇಲಾಖೆಯ ಪರವಾನಿಗಿ ನವೀಕರಣದ ಸಂದರ್ಭದಲ್ಲಿ ತುಂಬಾ ಅನುಕೂಲವಾಗಿದೆ ಎಂಬುದು ಎಲ್ಲ ಶಿಕ್ಷಕರ ಅನಿಸಿಕೆ. ಅಲ್ಲದೆ, ಈ ಎಲ್ಲ ಸಾಧನೆಗಳನ್ನು ಗಮನಿಸಿ, ರಾಜ್ಯ ಮಾಲಿನ್ಯ ನಿರ್ಮೂಲನಾ ಮಂಡಳಿಯು ಶಾಲೆಗೆ ‘ಹಸಿರು ಶಾಲೆ’ ಎಂಬ ಮನ್ನಣೆಯನ್ನು ನೀಡಿ ಗೌರವಿಸಿದೆ. ಬೈಫ಼್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕೆ.ಕೆ.ಮಲ್ಲೋತ್ರಾ ಟ್ರಸ್ಟ್, ಮುಂಬೈ ಈ ಕಾರ್ಯಕ್ಕೆ ಹಣಕಾಸು ನೆರವು ಮತ್ತು ಮಾರ್ಗದರ್ಶನ ನೀಡಿದ್ದಾರೆ.

 

ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*