ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನ ಮಿತಬಳಕೆಯಲ್ಲಿ ಯಶ ಕಂಡ ರೈತ

ಆಧುನಿಕ ದೃಷ್ಟಿ, ಪ್ರಾಚೀನ ಸೃಷ್ಟಿ, ಬದಲಾಗುತ್ತಿರುವ ಹವಾಮಾನ, ಇಳುವರಿ ಇಲ್ಲದ ಬೇಸಾಯದಿಂದ ಬೇಸತ್ತ ದೇಸಾಯಿವರು ತಮ್ಮ ಮಗ ಮೆಕ್ಯಾನಿಕ್ ಇಂಜನಿಯರಿಂಗ್ ಓದಿ ನೌಕರಿ ಹಿಡಿಯಬೇಕೆಂಬ ಹಂಬಲ. ಆದರೆ ಮಗನಿಗಾದರೋ, ಕೃಷಿ ಮೇಲೆ ವಿಶ್ವಾಸ ಹಾಗೂ ಅದರಿಂದ ಖುಷಿ ಕಾಣುತ್ತೇನೆಂಬ ಅಪಾರ ನಂಬಿಕೆ. ಆದ್ದರಿಂದ, ತಂದೆಯ ವಿರೋಧದ ನಡುವೆಯೇ, ಬೇಸಾಯಕ್ಕಿಳಿದರು ಬೆಳಗಾವಿಯ ಮುತಾಲಿಕ್‌ ದೇಸಾಯಿ. ಅವರ ನಂಬಿಕೆ ಸುಳ್ಳಾಗಲಿಲ್ಲ. ಅವರ ಶ್ರಮದ ಫಲವಾಗಿ ಇಂದು ಇವರ ಹೊಲದಲ್ಲಿ ಬೆಳೆಯಲ್ಪಡುವ ಕೃಷಿ ಉತ್ಪನ್ನಗಳು ದೇಶ ವಿದೇಶಕ್ಕೆ ಲಗ್ಗೆ ಇಟ್ಟಿವೆ. ಬೆಳಗಾವಿ ತಾಲೂಕಿನ ಸುತಗಟ್ಟಿ ಬಳಿ ಸಮಾರು ೪೫ ಎಕರೆ ಪ್ರದೇಶದಲ್ಲಿ ಇಂದು ಕಬ್ಬು, ಭತ್ತ, ಶೇಂಗಾ, ಅರಿಶಿನ ಮುಂತಾದ ವಿವಿಧ ಬೆಳೆಗಳು ನಳನಳಿಸುತ್ತಿವೆ.

ನೀರಿನ ಹದವಾದ ಬಳಕೆ

ಇವರ ಜಮೀನಿನ ಪಕ್ಕದಲ್ಲಿಯೇ ನದಿ ಹರಿಯುತ್ತದೆ. ಹೇರಳವಾಗಿ ನೀರನ್ನು ಉಪಯೋಗಿಸುವ ಅವಕಾಶವಿದ್ದರೂ, ಆ ಕೆಲಸಕ್ಕೆ ಕೈಹಾಕಿಲ್ಲ. ಆದಷ್ಟೂ ನೀರಿನ ಮಿತ ಬಳಕೆಗೆ ಆದ್ಯತೆ ನೀಡಿದ್ದಾರೆ. ಕೇವಲ ತೇವಾಂಶ ಉಳಿಸಿಕೊಳ್ಳುವ ಉದ್ದೇಶದಿಂದ, ವಾರಕ್ಕೊಮ್ಮೆ ಮಾತ್ರ ಕಬ್ಬು ಮತ್ತು ಶೇಂಗಾ ಬೆಳೆಗಳಿಗೆ ನೀರನ್ನು ಸಿಂಪಡಿಸುತ್ತಾರೆ (ಸಿಂಪಡಣೆಗೂ, ಉಣಿಸುವದಕ್ಕೂ ವ್ಯತ್ಯಾಸವಿದೆ; ಇದರಿಂದ ನೀರನ್ನು ಭೂಮಿಯ ಫಲವತ್ತತೆಯನ್ನು ಊಳಿಸಿಕೊಳ್ಳಬಹುದು). ಇನ್ನು ಕಸ, ತಾಜ್ಯಗಳನ್ನು ಮಣ್ಣಿನಲ್ಲಿ ಸೇರಿಸಿ ಜೀವಾಮೃತ ಬಳಕೆ ಮಾಡುವುದರಿಂದ, ಮಣ್ಣಿನ ಫಲವತ್ತತೆ ಹೆಚ್ಚಾಗಿದೆ, ಮಣ್ಣಿನಲ್ಲಿ ಜೈವಿಕ ಕ್ರಿಯೆ ನಡೆದು, ಹೊಲದ ಮಣ್ಣು ಲಕ್ಷಾಂತರ ಜೀವಾಣುಗಳ ಆಗರವಾಗಿದೆ. ೪೫ ಎಕರೆ ಭೂಮಿಯಲ್ಲಿ ಕಬ್ಬು, ಭತ್ತ, ಅರಿಶಿನ, ಶೇಂಗಾ ಹಾಗೂ ತರಕಾರಿ ಬೆಳೆಯುತ್ತಾರೆ. ನೀರಿನ ಕೊರತೆಯ ಬಗ್ಗೆ ಸಾಕಷ್ಟು ತಿಳಿದಿರುವ ಇವರು, ಸುತ್ತಲಿನ ರೈತರಿಗೂ ಸಿಂಪಡನೆಯ ಮಾದರಿಯ ಬಗ್ಗೆ ತಿಳಿಸುತ್ತಿದ್ದಾರೆ.

ನೀರು ಸಿಂಪಡನೆ ಯಂತ್ರ

DSC_0497ಇವರು ಕಬ್ಬಿನಲ್ಲಿ ಸಾಲಿನ ನಡುವೆ ಹೆಚ್ಚು ಅಂತರವನ್ನು ಬಿಟ್ಟು ಲಾವಣಿ (ನಾಟಿ) ಮಾಡಿದ್ದಾರೆ. ಇದರಿಂದ ಬೆಳೆಗೆ ಸಾಕಾಗುವಷ್ಟು ಗಾಳಿ ಬೆಳಕು ದೊರೆಯುತ್ತದೆ. ಇನ್ನು ಸ್ಪ್ರೇ ಮಷಿನ್‌ಗೆ ನೀರಿನ ಟ್ಯಾಂಕ್ ಅಳವಡಿಸಿ, ಅದಕ್ಕೆ ಉದ್ದನೆಯ ಕೊಳವೆ ಜೋಡಿಸಿ, ನೀರು ಸಿಂಪಡಿಸುವ ವಿಧಾನ ಕಂಡುಕೊಂಡಿದ್ದಾರೆ. ಎರಡರಿಂದ ನಾಲ್ಕು ಸಾಲುಗಳಿಗೆ ಸಿಂಪಡನೆಯಾಗುವ ರೀತಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರಿಂದ ಸಮಯ, ಖರ್ಚು, ಕೂಲಿಕಾರರ ಕೊರತೆಯನ್ನು ನೀಗಿಸಿಕೊಂಡಿದ್ದಾರೆ. ಈ ರೀತಿ ಸಿಂಪಡಿಸುವ ನೀರಿನ ಜೊತೆ, ಆಗಾಗ ಗಂಜಲ ಮತ್ತು ಬೇವಿನ ಕಷಾಯ ಮಿಶ್ರ ಮಾಡುತ್ತಾರೆ. ಈ ರೀತಿ ಮಾಡುವದರಿಂದ, ಪೋಷಕಾಂಶಗಳೂ ಸಹ ಬೆಳೆಗೆ ಸುಲಭವಾಗಿ ತಲುಪುತ್ತವೆ. ಇದರಿಂದ ವೆಚ್ಚ ಕಡಿಮೆಯಾಗಿದೆ, ಇಳುವರಿ ಹೆಚ್ಚಾಗಿದೆ, ನೀರಿನ ಉಳಿತಾಯವಾಗಿದೆ, ವಿದ್ಯುತ್ ಉಳಿತಾಯವಾಗಿದೆ. ಒಟ್ಟಾರೆ, ಉತ್ತಮ ಫಲಿತಾಂಶ ಕಂಡು ಬಂದಿದೆ.

ಹೊಲದಲ್ಲೇ ಕಾಡು

ಪರಿಸರದಲ್ಲಿ ಜೈವಿಕ ಕ್ರಿಯೆ ನಡೆದರೆ, ಸಹಜವಾಗಿ ನಮ್ಮ ಜಮೀನುಗಳಲ್ಲಿ ಜೀವಾಣುಗಳು ಉತ್ಪತ್ತಿಯಾಗುತ್ತವೆ. ಆದರೆ ಬದಲಾದ ಕಾಲದಲ್ಲಿ, ಕಾಡು ನಾಶವಾಗಿ ಜೈವಿಕ ಕ್ರಿಯೆಗೆ ತಡೆ ಬಿದ್ದಿದೆ. ಇದನ್ನು ಗಮನಿಸಿರುವ ದೇಸಾಯಿಯವರು ತಮ್ಮ ಒಟ್ಟು ಜಮೀನಿನ ಒಂದು ಭಾಗವನ್ನು ಕಾಡು ಬೆಳಸಲು ಮೀಸಲಿರಿಸಿದ್ದಾರೆ. ಆ ಪ್ರದೇಶದಲ್ಲಿ, ತೇಗ, ಬೇವು, ಮಾವು, ಅತ್ತಿ, ಮುತ್ತಲ, ಅರಳಿ – ಹೀಗೆ ವಿವಿಧ ಮರಗಳನ್ನು ನೆಟ್ಟು ಪೋಷಿಸಿದ್ದಾರೆ. ಇದರ ಫಲವಾಗಿ, ಸುತ್ತಲಿನ ಕೃಷಿ ಪ್ರದೇಶದಲ್ಲಿ ತಂಪು ವಾತಾವರಣ ಸೃಷ್ಟಿಯಾಗಿ, ಜೈವಿಕ ಕ್ರಿಯೆ ನಡೆದು, ಬೆಳೆಗಳಿಗೆ ಅನೂಕೂಲವಾಗಿದೆ. ಇದುವೇ ಜಮೀನಿನ ಹೃದಯಭಾಗ ಎನ್ನುತ್ತಾರೆ ಮುತಾಲಿಕ ದೇಸಾಯಿ. ಇದರ ಜೊತೆ, ಮರಗಿಡಗಳಿಂದಾಗಿ ಹಸಿರಲೆ ಗೊಬ್ಬರ ಹಾಗೂ ಕಾಂಪೊಸ್ಟ್ ತಯಾರಿಸಲು ಹೇರಳ ತ್ಯಾಜ್ಯ ವಸ್ತುಗಳು ಲಭ್ಯವಾಗಿವೆ.

ಇಳುವರಿ ಮತ್ತು ಮಾರುಕಟ್ಟೆಯ, ಖರ್ಚುನಿರ್ವಹಣೆ

DSC_0507ದೇಸಾಯಿಯವರು ಮೌಲ್ಯವರ್ಧನೆಗೂ ಕೈಹಾಕಿ ಯಶಸ್ಸು ಸಾಧಿಸಿದ್ದಾರೆ. ೧೫ ಎಕರೆಯಲ್ಲಿ ಬೆಳೆದ ಕಬ್ಬನ್ನು ಸ್ವತಃ ಆಲೆಮನೆ ಹಾಕಿ ಬೆಲ್ಲ ತಯಾರಿಸುತ್ತಾರೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಕೊಳ್ಳಲಿಲ್ಲ, ಸರ್ಕಾರ ಸರಿಯಾದ ಬೆಲೆ ಕೊಡಲಿಲ್ಲ ಇತ್ಯಾದಿ ಸಮಸ್ಯೆಗಳೇ ಇವರಿಗಿಲ್ಲ, ಅಥವಾ ಅವೆಲ್ಲ ಸಮಸ್ಯೆಗಳಿಗೂ ಸಮರ್ಥ ಉತ್ತರ ಕಂಡುಕೊಂಡಿದ್ದಾರೆ. ಇದು ಇತರ ರೈತರಿಗೂ ಮಾದರಿಯಾಗಬೇಕು. ಕೇವಲ ಬೆಲ್ಲ ತಯಾರಿಸಿ ಸುಮ್ಮನಾಗಿಲ್ಲ, ನೇರ ಮಾರುಕಟ್ಟೆಯನ್ನೂ ಮಾಡುತ್ತಿದ್ದಾರೆ. ಇವರು ತಯಾರಿಸುವ ಬೆಲ್ಲ ವಿದೇಶಗಳಿಗೆ ಲಗ್ಗೆ ಇಡುತ್ತಿದೆ. ಇದರಿಂದ, ಇಲ್ಲಿಯ ದೇಸೀ ಮಾರುಕಟ್ಟೆಗಳಿಗಿಂತ ದುಪ್ಪಟ್ಟು ಲಾಭವಾಗುತ್ತಿದೆ. ಇವರದು ಸಂಪೂರ್ಣವಾಗಿ ಸಾವಯವ ಬೆಲ್ಲವಾದ್ದರಿಂದ ಒಳ್ಳೆಯ ಬೆಲೆ ದೊರೆಯುತ್ತಿದೆ. ಇತರೆ ಆಹಾರ ಬೆಳೆ ಹಾಗೂ ತರಕಾರಿಗಳನ್ನೂ ಸಹ ಇದೇ ರೀತಿ ನೇರ ಮಾಡುವುದು ಇವರ ಅಭ್ಯಾಸ.

ಚಿತ್ರ ಲೇಖನ: ವಿನೋದ. ರಾ ಪಾಟೀಲ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*