ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅದೃಶ್ಯ ನೀರು, ಸಾದೃಶ ಬಿಕ್ಕಟ್ಟು

ಈ ವೇಳೆಗಾಗಲೇ, ನಾವು ಗಂಭೀರವಾದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ವಿಚಾರ ಭಾರತದಲ್ಲಿ ಎಲ್ಲರಿಗೂ ಅರ್ಥವಾಗಿದೆ. ನಮ್ಮ ಸಾಕಷ್ಟು ನದಿಗಳು ಕಲುಷಿತಗೊಂಡಿವೆ, ಅವುಗಳಿಗೆ ಅಣೆಕಟ್ಟು ಕಟ್ಟಲಾಗಿದೆ ಅಥವಾ ತಮ್ಮ ಕೊನೆಯುಸಿರೆಳೆಯುತ್ತಿವೆ. ಮಳೆಯು ಹೆಚ್ಚುಹೆಚ್ಚು ಅನಿಶ್ಚಿತವಾಗಿ ಬೀಳುತ್ತಿದ್ದು, ಇದೇ ಪರಿಸ್ಥಿತಿ ಮತ್ತಷ್ಟು ಉಲ್ಭಣಗೊಳ್ಳುವ ಎಲ್ಲ ಸೂಚನೆಗಳೂ ಇವೆ. ನಮ್ಮ ಅಂತರ್ಜಲ ಮಟ್ಟವು ವೇಗವಾಗಿ ಕುಗ್ಗುತ್ತಿದೆ. ನಮ್ಮ ಕೆರೆಗಳು, ಅದರಲ್ಲೂ ನಗರ ಪ್ರದೇಶಗಳಲ್ಲಿ ಇರುವ ಕೆರೆಗಳು ಒಣಗುತ್ತಿವೆ ಅಥವಾ ಚರಂಡಿ ನೀರಿನಿಂದ ತುಂಬುತ್ತಿವೆ. ನಮ್ಮ ನೀರು ಮತ್ತು ನೈರ್ಮಲ್ಯದ ಮೂಲಭೂತ ವ್ಯವಸ್ಥೆಯು ಹಳೆಯದಾಗಿದ್ದು, ಅನೇಕ ಕಡೆ ಪ್ರಸ್ತುತ ಭಾರವನ್ನು ಹೊರಲಾಗದ ಪರಿಸ್ಥಿತಿ ಇದ್ದರೆ, ಕೆಲ ಕಡೆ ಅದರ ಅಸ್ತಿತ್ವವೇ ಇಲ್ಲದಾಗಿದೆ. ಅದೇ ದುರ್ಲಭ ಸಂಪನ್ಮೂಲಕ್ಕಾಗಿ, ಕೃಷಿ, ಉದ್ಯಮ ಹಾಗೂ ನಗರ ವಸಾಹತುಗಳು ಒಂದರೊಡನೆ ಒಂದು ಸ್ಪರ್ಧಿಸುತ್ತಿವೆ. ಯಾವುದೇ ಪರಿಹಾರವಿಲ್ಲದೆ ಚರ್ಚೆಗೊಳಗಾಗುವ ಸಮಸ್ಯೆಯಾಗಿ ಇದು ಉಳಿದಿಲ್ಲ. ಸಿರಿವಂತರಾಗಲಿ ಅಥವಾ ಬಡವರಾಗಲಿ, ನಮ್ಮೆಲ್ಲರ ಮೇಲೂ ಈ ಪರಿಸ್ಥಿತಿಯು ಪ್ರಭಾವ/ಪರಿಣಾಮ ಬೀರುತ್ತದೆ.

ಆದರೆ, ತಕ್ಷಣ ಗಮನ ಕೊಡಬೇಕಾದ ಒಂದು ಕ್ಷೇತ್ರವನ್ನು ನಾವು ಆಯ್ಕೆ ಮಾಡಬೇಕಾದಲ್ಲಿ, ಅದು ಅಂತರ್ಜಲ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕಾಣುತ್ತಿರುವ ಭಾರತದ ಬಹುತೇಕ ಬೆಳವಣಿಗೆಯನ್ನು ಪ್ರೇರೇಪಿಸುತ್ತಿರುವುದೇ/ಪೋಷಿಸುತ್ತಿರುವುದೇ ಅಂತರ್ಜಲ. ಇದರ ಫಲವಾಗಿ, ವಿಶೇಷವಾಗಿ ಈ ಅಧಿಕ ಬೆಳವಣಿಗೆಯ ಕ್ಷೇತ್ರಗಳಲ್ಲಿ ತೀವ್ರತರವಾದ ಅಭಾವ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದ ವಿಷಯಗಳು ತಲೆದೋರಿವೆ (ನಕ್ಷೆಯನ್ನು ನೋಡಿ).

ಮೊದಲಿನಿಂದಲೂ ಭಾರತವು ಅಂತರ್ಜಲ ನಾಗರಿಕತೆಯಾಗಿದೆ. ಸಾವಿರಾರು ವರ್ಷಗಳವರೆಗೂ, ಆಳವಿಲ್ಲದ ಜಲಧರಗಳಿಂದ ಕೊರೆದ ಮನಸ್ಸಿಗೆ ಮುದ ನೀಡುವ ವಿನ್ಯಾಸದ, ಬಳಕೆಗೆ ಯೋಗ್ಯವಾದ ಬಾವಿಗಳನ್ನು ವಿವಿಧ ಪ್ರದೇಶಗಳು ಹೊಂದಿದ್ದವು. ಉತ್ತಮ ಮಳೆ ಹಾಗೂ ಬರದ ಚಕ್ರಗಳ ಆದ್ಯಂತ ನೀರನ್ನು ಸುಸ್ಥಿರವಾಗಿ ಬಳಸುವ ಕೆಲ ಮಾನದಂಡಗಳನ್ನು ಜನರು ರೂಪಿಸಿಕೊಂಡಿದ್ದರು. ೧೯೭೦ರ ದಶಕದಲ್ಲಿ ಬಂದ ಆಳವಾಗಿ ಕೊರೆಯುವ ರಿಗ್‌ಗಳು ಹಾಗೂ ಕೊಳವೆಬಾವಿಗಳು, ಭಾರತದಲ್ಲಿ ಅಂತರ್ಜಲ ಶೇಖರಣೆಗಳನ್ನು ಬಳಸುವ ವಿಧಾನವು ಸಂಪೂರ್ಣವಾಗಿ ಬದಲಾವಣೆ ಮಾಡಿತು. ಇದಕ್ಕೆ ಅತ್ಯಂತ ಗಮನಾರ್ಹವಾದ ಸೂಚ್ಯಂಕವೆಂದರೆ, ೧೯೬೦-೬೧ರಲ್ಲಿ, ನೀರವಾರಿಗಾಗಿ ಬಳಸಲಾಗುತ್ತಿದ್ದ ಅಂತರ್ಜಲದ ಶೇಕಡಾವಾರು ೧, ೨೦೦೬-೦೭ರ ವೇಳೆಗೆ ೬೦ ಪ್ರತಿಶತಕ್ಕೆ ಏರಿತ್ತು.

ಇದೀಗ, ಭಾರತವು ವಿಶ್ವದಲ್ಲೇ ಅತ್ಯಂತ ಹೆಚ್ಚು ಅಂತರ್ಜಲವನ್ನು ಬಳಕೆ ಮಾಡುವ ದೇಶವಾಗಿದೆ. ಎರಡು ಬೃಹತ್ ಆರ್ಥಿಕ ಶಕ್ತಿಗಳಾದ ಅಮೇರಿಕಾ ಹಾಗೂ ಚೀನಾ ದೇಶಕ್ಕಿಂತ ಹೆಚ್ಚಿನ ಅಂತರ್ಜಲವನ್ನು ನಾವು ಹೊರತೆಗೆಯುತ್ತಿದ್ದೇವೆ. ನಮ್ಮ ದೇಶದಲ್ಲಿ ಹೊಸ ಕೊಳವೆಬಾವಿಗಳು ಹಾಗೂ ಹಳೆಯ ತೆರೆದ ಬಾವಿಗಳೂ ಸೇರಿದಂತೆ, ಸುಮಾರು ೩೦ ದಶಲಕ್ಷ ಬಾವಿಗಳಿದ್ದು, ಅವುಗಳಿಂದ ೨೫೦ ಕ್ಯೂಬಿಕ್ ಕಿಲೋಮೀಟರ್‌ನಷ್ಟು ನೀರನ್ನು ತೆಗೆಯಲಾಗುತ್ತಿದೆ. ಭಾರತದ ೮೫ ಪ್ರತಿಶತದಷ್ಟು ಕುಡಿಯುವ ನೀರಿನ ಸುರಕ್ಷತೆ, ಕೃಷಿಯ ೬೦ ಪ್ರತಿಶತದಷ್ಟು ಅಗತ್ಯಗಳು ಹಾಗೂ ನಗರದ ೫೦ ಪ್ರತಿಶತದಷ್ಟು ನೀರಿನ ಅಗತ್ಯಗಳನ್ನು ಅಂತರ್ಜಲವು ಪೂರೈಸುತ್ತಿದೆ.

ವಿಪರ್ಯಾಸವೆಂದರೆ, ಈ ವಾಸ್ತವತೆ ಇದ್ದರೂ, ಭಾರತದ ಬಹುತೇಕ ಸಾರ್ವಜನಿಕ ಹೂಡಿಕೆಗಳು, ನೀರಾವರಿಗಾಗಿ ಮೇಲ್ಮೈನೀರಿನ ಅಣೆಕಟ್ಟುಗಳು ಹಾಗೂ ನಾಲೆಗಳು, ಕುಡಿಯುವ ನೀರಿಗಾಗಿ ಬೃಹತ್ ಪೈಪ್‌ಲೈನುಗಳು, ಹಾಗೂ ವಿಶೇಷವಾಗಿ ಶಕ್ತಿ ವಲಯದ ಉದ್ಯಮಗಳತ್ತ ತಿರುಗಿಸಲಾಗುತ್ತಿರುವ ನೀರ ಸರಬರಾಜಿನತ್ತ ಹೊರಳಿವೆ. ಮೂಲಭೂತವಾಗಿ, ಭಾರತದಲ್ಲಿ ಖಾಸಗಿ ಸಂಸ್ಥೆಗಳು ಅಂತರ್ಜಲವನ್ನು ಹೊರತೆಗೆಯುತ್ತಿವೆ. ಭಾರತದಲ್ಲಿ ಬಹುತೇಕ ಬಾವಿಗಳು ಹಾಗೂ ಕೊಳವೆಬಾವಿಗಳು ಖಾಸಗಿ ಸ್ವತ್ತಾಗಿವೆ. ವೇಗವಾಗಿ ನವೀಕರಣಕ್ಕೆ ಆಸ್ಪದ ನೀಡುವ ವಿನೂತನ ತಂತ್ರಜ್ಞಾನದ ಪ್ರಭಾವವನ್ನು ನಿಭಾಯಿಸಲಾಗದೆ, ಸರ್ಕಾರದ ಪ್ರತಿಕ್ರಿಯೆಯು ಇದಕ್ಕೆ ನಿಧಾನಗತಿಯಲ್ಲಿ ಸಾಗಿದೆ. ಅಂತರ್ಜಲದ ನಿಯಂತ್ರಣವು ಅಷ್ಟಾಗಿ ಆಗದೆ, ಅವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ವಿಶ್ವದಲ್ಲೇ ಇದು ಅಪರೂಪದ ಸಂಗತಿ. ಅನೇಕ ದೇಶಗಳಲ್ಲಿ ಭೂಮಾಲೀಕತ್ವವನ್ನು ಅಂತರ್ಜಲದಿಂದ ಬೇರ್ಪಡಿಸಿ, ಅದನ್ನು ಕುರಿತಾದ ನೀರಿನ ಹಕ್ಕುಗಳು, ಬೆಲೆ ಹಾಗೂ ಕಟ್ಟುನಿಟ್ಟಾದ ನಿಯಂತ್ರಣದ ಸಂಕೀರ್ಣ ವ್ಯವಸ್ಥೆಗಳನ್ನು ಸ್ಥಾಪನೆ ಮಾಡಿವೆ.

ಭಾರತದಲ್ಲಿ ನೀರು ರಾಜ್ಯ ವಿಷಯವಾಗಿದೆ. ಅಂತರ್ಜಲದ ನಿಜವಾದ ಮಾಲೀಕರು, ಅದನ್ನು ನಕ್ಷೀಕರಿಸಿ, ಹೊರತೆಗೆಯುವ ಹಾಗೂ ಮರುಪೂರಣಗೊಳಿಸುವ ಬಗೆಗಿನ ಜಿಜ್ಞಾಸೆಗಳನ್ನು ಕೇಂದ್ರ ಹಾಗೂ ರಾಜ್ಯಗಳಲ್ಲಿನ ಆಡಳಿತ ವ್ಯವಸ್ಥೆಯು ಬಗೆಹರಿಸಲು ಸಾಧ್ಯವಾಗಿಲ್ಲ.

ಹಾಗಾಗಿ, ತಿಳುವಳಿಕೆ ಇಲ್ಲದೆ ಹಾಗೂ ನಿರ್ಭೀತಿಯಿಂದ, ರೈತರು, ಸರ್ಕಾರಗಳು, ಉದ್ಯಮ ಹಾಗೂ ಸಾಮಾನ್ಯ ನಾಗರಿಕರೂ ಸಹ, ಎಲ್ಲೆಂದರಲ್ಲಿ ಆಳವಾಗಿ ಕೊರೆದು, ಭಯಂಕರ ದುಷ್ಪರಿಣಾಮಗಳಿಗೆ ಎಡೆ ಮಾಡಿ ಕೊಟ್ಟಿದ್ದಾರೆ. ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿನ ಅರವತ್ತು ಪ್ರತಿಶತದಷ್ಟು ಜಿಲ್ಲೆಗಳಲ್ಲಿ ನೀರು ಬರಿದಾಗುವಿಕೆಯ ಅಥವಾ ಮಾಲಿನ್ಯದಂತಹ ಗಂಭೀರ ಪರಿಸ್ಥಿತಿಗಳನ್ನು ಎದುರಿಸುತ್ತಿವೆ.

ಭೂಮಿಯನ್ನು ಅಗೆಯುವುದರಿಂದ, ನಮ್ಮ ಕುಡಿಯುವ ನೀರಿನಲ್ಲಿ ಫ಼್ಲೋರೈಡ್ ಹಾಗೂ ಆರ್ಸೆನಿಕ್‌ನಂತಹ ಭೂಜನ್ಯ ರಸಾಯನಿಕಗಳು ಬಿಡುಗಡೆಯಾಗಿವೆ. ಬಹುತೇಕ ಸ್ಥಳಗಳಲ್ಲಿ ವಿಶ್ವಾಸಾರ್ಹ ಗುಣಮಟ್ಟದ ಪರೀಕ್ಷಣಗಳನ್ನು ಮಾಡುವುದು ಕಷ್ಟವಾಗಿರುವುದರಿಂದ, ನಾವು ಏನು ಮಾಡುತ್ತಿದ್ದೇವೆ ಮತ್ತು ನಮಗೇನು ಕಾದಿದೆ ಎಂದು ನಮಗಿನ್ನೂ ತಿಳಿದಿಲ್ಲ.

ಕೊಲ್ಕತ್ತಾದ ಜಾದವಪುರ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನದ ಪ್ರಕಾರ, ಗಂಗಾ-ಮೇಘನ-ಬ್ರಹ್ಮಪುತ್ರಾ ಬಯಲು ಪ್ರದೇಶದಲ್ಲಿ, ಸುಮಾರು ೬೬ ದಶಲಕ್ಷ ಜನರು ಫ಼ೂರೋಸಿಸ್‌ಗೆ ಹಾಗೂ ಆರ್ಸೆನಿಕ್-ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಒಳಪಡುವ ಅಪಾಯವಿದೆಯೆಂದು ತಿಳಿಸಲಾಗಿದೆ. ಇದರ ಜೊತೆಗೆ, ಗೌಣ ನೈರ್ಮಲ್ಯ ಆಚರಣೆಗಳು ಮೂತ್ರ ಕಲುಷಣೆಗೆ ಎಡೆ ಮಾಡಿಕೊಟ್ಟಿವೆ.   ಲಕ್ಷಾಂತರ ಜನರು ಬಯಲು ಶೌಚದಲ್ಲಿ ತೊಡಗುತ್ತಾರೆ, ಹಾಗೂ ಲಕ್ಷಾಂತರ ಜನರು ಶೌಚಾಲಯದ ಗುಂಡಿಗಳಿಂದಾಗುವ ಸೋರುವಿಕೆಯು ಅಂತರ್ಜಲವನ್ನು ತಿಳಿಯದೆ ಕಲುಷಿತಗೊಳಿಸುತ್ತಾರೆ.

ವಾಟರ್ ಐಡ್ ವರದಿಯ ಪ್ರಕಾರ, ನೀರಿನಿಂದ ಉಂಟಾಗುವ ರೋಗಗಳಿಂದ ವಾರ್ಷಿಕವಾಗಿ ಸುಮಾರು ೩೭ ದಶಲಕ್ಷ ಭಾರತೀಯರು ನೇರವಾಗಿ ಪ್ರಭಾವಿತರಾಗುತ್ತಾರೆ. ಈ ರೀತಿಯ ಚಿತ್ರಣವನ್ನು ನೀವು ಗಮನಿಸಿದಾಗ, ನಾವು ತೀವ್ರವಾಗಿ ಎಡವಿರುವುದು ಸ್ಪಷ್ಟವಾಗುತ್ತದೆ. ಮಾಡಬೇಕಾದುದ್ದನ್ನು ಕುರಿತಾಗಿ, ಅತ್ಯಂತ ಶೀಘ್ರವಾಗಿ ಮಾಡಬೇಕಾದುದು ಪ್ರಸ್ತುತದಲ್ಲಿ ಅತ್ಯಗತ್ಯವಾಗಿದೆ. ನಮ್ಮ ಅಂತರ್ಜಲ ನಾಗರಿಕತೆಯನ್ನು ಹೆಚ್ಚು ಸುಸ್ಥಿರಗೊಳಿಸಲು, ಸರ್ಕಾರ, ಪೌರ ಸಮಾಜದ ಸಂಸ್ಥೆಗಳು ಹಾಗೂ ನಾಗರಿಕರು ಮಾಡಬೇಕಾದ ಐದು ಮುಖ್ಯ ಕಾರ್ಯಗಳು ಯಾವುವು?

ಅಂತರ್ಜಲ ನಕ್ಷೀಕರಣವನ್ನು ಸಾದೃಶಗೊಳಿಸಿ

ಪ್ರಸ್ತುತದಲ್ಲಿ, ಮಾಹಿತಿಯ ಅಸಂಗತತೆಗಳಿವೆ. ಸಾರ್ವಜನಿಕವಾಗಿ ಜಲಧರಗಳನ್ನು ಕುರಿತಾದ ಮಾಹಿತಿಯನ್ನು ಬಹಿರಂಗಗೊಳಿಸುವ ಮೂಲಕ ನಾವು ಇದನ್ನು ಬದಲಿಸಬೇಕಿದೆ. ಅಗೋಚರ ಅಂತರ್ಜಲವು ಎಲ್ಲರಿಗೂ ಗೋಚರಿಸುವಂತೆ ಮಾಡುವ ಮೂಲಕ, ಅದರ ಶೋಷಣೆಯನ್ನು ಜನರು ತಡೆಗಟ್ಟಬಹುದು. ಸರ್ಕಾರದಲ್ಲಿ ಜಲಧರ-ನಕ್ಷೀಕರಣ ಕಾರ್ಯಕ್ರಮವಿದೆ. ಆದರೆ, ಅದನ್ನು ಬಲಪಡಿಸಿ, ಮರುವಿನ್ಯಾಸ/ವ್ಯವಸ್ಥಿತಗೊಳಿಸಬೇಕಾಗಿದೆ. ಇದು ಮೇಲಿನಿಂದ ಕೆಳಸ್ಥರಗಳಿಗೆ ಬರುವ ವ್ಯವಸ್ಥೆಯಾಗಿದೆ – ಹಾಗಿರುವ ಅಗತ್ಯವಿಲ್ಲ. ಜಲ ವಿವೇಕವನ್ನು ಹೊಂದಲು ಜನರಿಗೆ ಹೆಚ್ಚಿನ ಮಾಹಿತಿಯ ಅಗತ್ಯವಿದೆ. ಉಪಗ್ರಹ ಮಾಹಿತಿಯಂತಹ ತಂತ್ರಜ್ಞಾನದೊಂದಿಗೆ, ಚಾಣಕ್ಷವಾದ, ಜನರಿಂದ ಪಡೆದ, ಮೂಲಮಟ್ಟದ ಮಾಹಿತಿಯನ್ನೂ ಬಳಸಿ, ಜಲಧರಗಳ ನಕ್ಷೆಯನ್ನು ಐದು ವರ್ಷಗಳ ಒಳಗೆ ರೂಪಿಸಬಹುದು.

ಬೇಡಿಕೆಯ ನಿರ್ವಹಣೆ

ಅದು ಮೊದಲ ಅಂಶದೊಂದಿಗೆ ಸಂಬಂಧ ಹೊಂದಿದ್ದು, ಸರಬರಾಜು-ಆಧಾರಿತ ವಿಧಾನವುಫಲಪ್ರದವಾಗುವುದಿಲ್ಲವೆಂದು ನಮ್ಮ ಗಮನಕ್ಕೆ ತರುತ್ತದೆ. ನಾವು ನೀರನ್ನು ಹೆಚ್ಚು ಸಮರ್ಥವಾಗಿ ಬಳಸಬೇಕಿದ್ದು, ಅದಕ್ಕೆ ಮಾರುಕಟ್ಟೆಯ ಸೂಚನೆಗಳ ಅಗತ್ಯವಿದೆ. ಭಾರತದಲ್ಲಿ ಅಂತರ್ಜಲವು ಖಾಸಗಿ ಒಡೆತನದಲ್ಲಿದ್ದು, ಅನಿಯಂತ್ರಿತ ಮಾರುಕಟ್ಟೆ ಆಗಿರುವುದರಿಂದ, ಪಾರದರ್ಶಕವಾಗಿ, ಸುಸ್ಥಾಪಿತ ಮಾರುಕಟ್ಟೆಗಳ ಪ್ರಯೋಜನಗಳನ್ನು ಅದು ಪಡೆದಿಲ್ಲ.

ಅಂತರ್ಜಲ ಹಾಗೂ ಶಕ್ತಿಯ ನಡುವೆಯೂ ಆಳವಾದ ಸಂಬಂಧವಿದೆ. ನಾವು ನೀರಿಗೆ ಬೆಲೆ ನಿಗದಿಪಡಿಸದಿದ್ದರೆ, ಶಕ್ತಿಗೆ ಬೆಲೆ ನಿರ್ಧಾರ ಮಾಡಬೇಕು. ತಡಮಾಡದೆ, ಆದಷ್ಟೂ ಬೇಗನೆ ಸೂಕ್ತ ಆರ್ಥಿಕ ಪ್ರೋತ್ಸಾಹಕಗಳನ್ನು ಜಾರಿಗ ತರಬೇಕು. ಗುಜರಾತದ ಜ್ಯೋತಿಗ್ರಾಮದಲ್ಲಿ ಇರುವಂತೆ, ನಮ್ಮ ದೇಶದಲ್ಲಿ ಈಗಾಗಲೇ ಕೆಲವು ಉತ್ತಮ ಉದಾಹರಣೆಗಳಿದ್ದು, ರಾಜಕೀಯ ವರ್ಗದವರು ಶಂಕೆಪಡುವುದಕ್ಕಿಂತ ಇದಕ್ಕೆ ಕಡಿಮೆ ಪ್ರತಿರೋಧ ವ್ಯಕ್ತವಾಗಬಹುದು.

ಅಂತರ್ಜಲ ಬಳಕೆಯ ಸುಧಾರಣೆ

ಇದು ಮೇಲ್ಕಂಡ ಅಂಶಗಳೊಂದಿಗೆ ತಾಳೆಯಾಗುತ್ತದೆ. ಭತ್ತವನ್ನು ಬಳೆಯಲು ಪಂಜಾಬಿನ ಜಲಧರಗಳನ್ನು ಬರಿದುಗೊಳಿಸುವುದು ಉತ್ತಮ ಆರ್ಥಿಕ ಕ್ರಮವಾಗಲಿ, ಪಾರಿಸಾರಿಕ ಮುಂದಾಳತ್ವವಾಗಲಿ ಅಲ್ಲ; ಅದೇ ರೀತಿ ಕಚ್ ಪ್ರದೇಶದಲ್ಲಿ ಕಬ್ಬು ಬೆಳೆಯಲೂ ಸಾಧ್ಯವಿಲ್ಲ. ಇದನ್ನು ಕುರಿತಾಗಿ ಆರ್ಥಿಕ ತಜ್ಞರು ಸಾವಕಾಶವಾಗಿ ಚಿಂತಿಸುವ ಕಾಲ ಮಿಂಚಿ ಹೋಗಿದೆ. ನೀರ-ಕೊರತೆಯಿಂದ ಹೆಚ್ಚು ನೀರಿರುವ ಜಲಧರಗಳತ್ತ ಉತ್ಪಾದನೆಯನ್ನು ತೆಗೆದುಕೊಂಡು ಹೋಗುವುದನ್ನು ನಾವು ಉತ್ತೇಜಿಸಬೇಕು. ಉತ್ತಮ ನೀರ ಸಮತೋಲನವನ್ನು ಸಾಧಿಸಲು, ಅಗತ್ಯವಾದಲ್ಲಿ ಮೇಲ್ಮೈ ನೀರಿನ ಹೂಡಿಕೆಯ ಬಜೆಟ್‌ನಿಂದ ಸಾರ್ವಜನಿಕ ಸಂಪನ್ಮೂಲಗಳನ್ನು ಬದಲಿಸೋಣ. .

ಪೌರ ಸಮಾಜದ ಭಾಗವಹಿಸುವಿಕೆಯನ್ನು ಸಾಧ್ಯವಾಗಿಸುವುದು

ಜಲಧರದ ಖಾಸಗಿ, ಹಂಚಿಕೆಯ ಹಾಗೂ ಪ್ರಜಾಸತ್ತಾತ್ಮಕ ಪ್ರಸ್ತುತ ಮಾದರಿಯ ಆಧಾರದ ಮೇಲೆ, ವಿವೇಚನಾಶೀಲ ಆಡಳಿತ ವ್ಯವಸ್ಥೆಯನ್ನು ಜೋಡಿಸುವುದು ಸರ್ಕಾರಕ್ಕೆ ಅತ್ಯಂತ ಶ್ರಮದಾಯಕ ಹಾಗೂ ಕಷ್ಟಕರವಾಗುತ್ತದೆ. ಶೋಷಣೆಗೆ ಒಳಪಡಿಸುವ ಬದಲು, ನಾಯಕತ್ವವನ್ನು ಉತ್ತೇಜಿಸುವ ಮೂಲಕ, ಜನರನ್ನು ಸಹಭಾಗಿತ್ವದ ಮಾರ್ಗದಲ್ಲಿ ತೊಡಗಿಸಿಕೊಳ್ಳುವಲ್ಲಿ ಸರ್ಕಾರೇತರ ಸಂಸ್ಥೆಗಳು ಉತ್ತಮ ಕಾರ್ಯವನ್ನು ಮಾಡುತ್ತವೆ. ಉತ್ತಮ ಸಾರ್ವಜನಿಕ ಕಾರ್ಯನೀತಿ ಹಾಗೂ ಕಾನೂನುಗಳು ನೆರವಾದರೂ, ನೀರನ್ನು ಗೌರವಿಸಲು ನಮಗೆ ಅವಕಾಶ ನೀಡಲು, ವಾಸ್ತವದಲ್ಲಿ ನಮಗೆ ವಿನೂತನವಾದ ನಡುವಳಿಕೆಯ ಪ್ರತಿಕ್ರಿಯೆಗಳ ಅಗತ್ಯವಿದೆ.

ಮರುಪೂರಣ ಹಾಗೂ ಮರುಬಳಕೆ

ನಮ್ಮ ಜಲಧರಗಳನ್ನು ಮರುಪೂರಣ ಮಾಡಲು ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಯತ್ನಗಳು ನಡೆಯಬೇಕಿದೆ. ಇದಕ್ಕಾಗಿ, ಅಂತರ್ಜಲದೊಂದಿಗೆ ನೂತನ ಸಂಬಂಧವನ್ನು ರೂಪಿಸಲು, ಒಂದು ಸಮಾಜವಾಗಿ ಸೂಕ್ತ ಸಂಸ್ಥೆಗಳ ಸ್ಥಾಪನೆಯನ್ನು ಮಾಡಬೇಕಿದೆ. ಕೇಂದ್ರೀಯ ಅಂತರ್ಜಲ ಮಂಡಳಿಯಂತಹ ಕೆಲವು ಸಾಂಸ್ಥಿಕ ವ್ಯವಸ್ಥೆಗಳನ್ನು ಯತ್ನ ಮಾಡಿದ್ದು, ಇದನ್ನು ಪ್ರತಿಬಿಂಬಿಸುವ ಸಂಸ್ಥೆಗಳು ರಾಜ್ಯಗಳಲ್ಲೂ ಸ್ಥಾಪನೆ ಮಾಡಲಾಗಿದೆ. ಆದರೆ, ಈ ಸಂಸ್ಥೆಗಳನ್ನು ನಾವು ಸರಿಪಡಿಸಿ, ನವೀಕರಿಸಬೇಕಿದೆ. ನಗರ ಅಂತರ್ಜಲವನ್ನು ಅರಿತುಕೊಂಡು, ನಿರ್ವಹಣೆ ಮಾಡಲು ನೆರವಾಗುವಂತಹ ಹೊಸ ಸಂಸ್ಥೆಗಳನ್ನು ಸ್ಥಾಪನೆ ಮಾಡುವುದು ಅತ್ಯಗತ್ಯವಾಗಿದೆ.

ಒಂದು ಸಮಾಜವಾಗಿ, ನಮ್ಮ ಮುಂದೆ ಕಠಿಣ ಆಯ್ಕೆಗಳಿವೆ. ನೀರಿನ ಸುರಕ್ಷತೆಗೆ ದಾರಿ ಮಾಡಿಕೊಡುವ ಸಂಭಾವ್ಯತೆ ಹೊಂದಿದೆ ಅಂತರ್ಜಲದ ಮೇಲೆ ನಾವು ಆಶಯವನ್ನು ಇರಿಸುವುದು ಒಳಿತು. ಈ ಮೂಲಕ, ನಾವು ಅಂತರ್ಜಲ ಪ್ರೌಢ ನಾಗರಿಕತೆ ಆಗಬಹುದು. ಪುನಃ.

ಲೇಖನ: ರೋಹಿಣಿ ನೀಲೇಕಾಣಿ, ಆಗಸ್ಟ್ ೧೭, ೨೦೧೫ (ಅರ್ಘ್ಯಂನ ಅಯಾನ್ ಬಿಸ್ವಾಸ್‌ರೊಂದಿಗೆ)

ರೋಹಿಣಿ ನೀಲೇಕಾಣಿ, ಸುಸ್ಥಿರ ನೀರ ನಿರ್ವಹಣೆಯನ್ನು ಬೆಂಬಲಿಸುವ ಅರ್ಘ್ಯಂ ಸಂಸ್ಥೆಯ ಚೇರ್‌ಪರ್ಸನ್ ಆಗಿದ್ದಾರೆ, ಹಾಗೂ, ಸ್ಟಿಲ್‌ಬಾರ್ನ್ ಹಾಗೂ ಅನ್‌ಕಾಮನ್ ಗ್ರೌಂಡ್‌ನ ಲೇಖಕರಾಗಿದ್ದಾರೆ.
ಮೊದಲ ಪ್ರಕಟನೆ: ಇಂಡಿಯಾ ಟುಡೇ
ಮೂಲ ಆಂಗ್ಲ ಲೇಖನವನ್ನು ಓದಲು ನೀವು ಕ್ಲಿಕ್ ಮಾಡಬೇಕಾದುದು ಇಲ್ಲಿ: http://www.vikalpsangam.org/article/invisible-water-visible-crisis/#.VfaO831dl2h
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*