ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆಗಳಿಲ್ಲದ ಊರು ಅದಾವುದಯ್ಯ?

ಧಾರವಾಡ: ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿರುವ ಧಾರವಾಡ ಆಕಾಶವಾಣಿ ವಿವಿಧ ಭಾರತಿ ಮೂಲಕ ಸಾವಿರದ ಹಾಡುಗಳ ಸರದಾರ ಹುಕ್ಕೇರಿ ಬಾಳಪ್ಪನವರು ಹಾಡಿದ ಆನಂದಕಂದ (ಪತ್ರಕರ್ತ ದಿ.ಬೆಟಗೇರಿ ಕೃಷ್ಣ ಶರ್ಮ) ಬರೆದ ಈ ಹಾಡು ಅಲೆಅಲೆಯಾಗಿ ತೇಲಿ ಬರುತ್ತಿತ್ತು.. ನಮ್ಮಮ್ಮ ತನ್ನ ಅಂದಿನ ದಿನಗಳನ್ನು ನೆನೆದು ಸಂಕಟ ಪಡುತ್ತಿದ್ದಳು..

ಯಾತಕವ್ವ ಶಾರದೂರ ಬ್ಯಾಡ..

ನಮ್ಮ ಹಳ್ಳಿಯೂರ ನಮಗ ಪಾಡ..

ಊರ ಮುಂದ ತಿಳಿ ನೀರಿನ ಹಳ್ಳ..

ಬೇವು, ಮಾವು, ಹುಲಗಲ ಮರ ಚೆಳ್ಳ;

ದಂಡಿಗುಂಟ ನೋಡ ನೆಳ..ನೆಳ್ಳ..

ನೀರ ತರುವಾಗ.. ಗೆಣತ್ಯಾರ ಜೋಡ..!

 ಯಾತಕವ್ವ ಶಾರದೂರ ಬ್ಯಾಡ..

ನಮ್ಮ ಹಳ್ಳಿಯೂರ ನಮಗ ಪಾಡ..

೧೯೭೦ರ ದಶಕದ ಆ ಛೋಟಾ ಮಹಾಬಳೇಶ್ವರ ಖ್ಯಾತಿಯ ೭ ಗುಡ್ಡ, ೭ ಕರೆಗೆಳ ನಾಡು ಧಾರವಾಡದ ಆ ಜಾನಪದೀಯ ವರ್ಣನೆ ಎಂಥದ್ದು? ೨೦೧೫ರ ಶಿವ ಶಿವ ಎನ್ನಿಸುವ ಕಾಯ್ದು ಕೆಂಡವಾಗಿರುವ ಇಂದಿನ ಬಿಸಿಲೂರು ಧಾರವಾಡವೆಲ್ಲಿ? ಎಲ್ಲವೂ ಕಾಂಕ್ರೀಟ್ ಜಂಗಲ್!

ನೀರ ತರುವಾಗ.. ಗೆಣತ್ಯಾರ ಜೋಡ..!

DSC_0273ಹಾಲಿನಂಥ ರುಚಿಯ ನೀರಿದ್ದ ಗಾಂಧಿ ಚೌಕದ ಹಾಲಗೆರೆ ಹನುಮಂತ ದೇವರ ಕೆರೆ ಊರಿಗೆ ನೀರುಣಿಸುತ್ತಿತ್ತು. ಈಗದು ಸೂಪರ್ ಮಾರ್ಕೆಟ್! ಹೊಸಯಲ್ಲಾಪುರದ ರೈತಾಪಿ ಮಂದಿಗೆ ಉಸಿರಾಗಿದ್ದ ಕೋಳಿ ಕೆರೆ.. ಅಗಸರಿಗೆ ಆಸರೆಯಾಗಿ, ಪಕ್ಕದ ಧೋಬಿ ಘಾಟ್‌ನಲ್ಲಿ ಮೂರ್ನಾಲ್ಕು ಸಿಹಿ ನೀರಿನ ಕುಡಿಯುವ ನೀರಿನ ಬಾವಿಗಳಿಗೆ ಒರತೆಯಾಗಿದ್ದ ಆ ಕೆರೆ, ಇಂದು ಇಡೀ ಊರಿನ ಬಳಸಿ ಬಿಸುಟ ಎಲ್ಲ ಬಗೆಯ ನೀರಿನ ಹೊಲಸು ಕೆರೆ. ಲೈನ್ ಬಜಾರ್ ಹನುಮಂತ ದೇವರ ಪೂಜೆಗೆ ಬಳಕೆಯಾಗುತ್ತಿದ್ದ ಕೆಂಪಗೇರಿ ಬೃಹತ್ ಮನೆಗಳ ಕಾಂಕ್ರೀಟ್ ಕಾಡು! ಲಕ್ಷ್ಮೀಸಿಂಗನ ಕೆರೆ ಸದ್ಯ ೮೫೦ಕ್ಕೂ ಹೆಚ್ಚು ಮನೆಗಳಿರುವ ಕೊಳಚೆ ಪ್ರದೇಶ. ಕೆರೆಯ ಮಧ್ಯ ಭಾಗ ಕೊಚ್ಚೆ ಗುಂಡಿ. ಇನ್ನು ಎಮ್ಮಿಕೇರಿ.. ಯಾವತ್ತೂ ಗೌಳಿಗರ ಎಮ್ಮೆಗಳು  ಈಜುತ್ತಿದ್ದ, ಮಲಗಿ ಹೊರಳಾಡುತ್ತಿದ್ದ ಕೆರೆ.. ನೆಲ ಸಮವಾಗಿ, ಉದರದಲ್ಲಿ ಮಣ್ಣು ತುಂಬಿಕೊಂಡಿದೆ. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸು, ಅವರ ಕೈಯಿಂದ ನೀಲನಕ್ಷೆ ಹಾಕಿಸಿಕೊಂಡ ಕೆಲಗೇರಿ ಕೆರೆ.. ನಾಲ್ಕೂ ಮೂಲೆಯಿಂದ ಅವ್ಯಾಹತ ಅತಿಕ್ರಮಿತ. ಇಷ್ಟು ಸಾಲದು ಎಂಬಂತೆ, ಜಲದರ್ಶಿನಿಪುರ, ರಾಧಾಕೃಷ್ಣ ನಗರ, ಚೆನ್ನಬಸವೇಶ್ವರ ನಗರ, ಸಿಲ್ವರ್ ಆರ್ಚ್‌ರ್ಡ್, ಭಾವಿಕಟ್ಟಿ ಪ್ಲಾಟ್ಸ್ ಮೊದಲಾದ ಕಡೆಯಿಂದ ನೇರ ಗಟಾರು ನೀರು ಸೇರಿ ಗಬ್ಬೆದ್ದು ಹೋಗುತ್ತಿದೆ.

ಬೇಂದ್ರೆ ಮಾಸ್ತರ್ ಸಾಧನೆಗೆ ಸ್ಫೂರ್ತಿಯ ಸೆಲೆಯಾಗಿದ್ದ ಸಾಧನಕೆರೆ ಒಡಲು ಕೊಚ್ಚೆಯಾಗಿದೆ. ಜಿಲ್ಲಾಡಳಿತ ನಾಗರಿಕರಿಗೆ ಈ ನೀರಿನಲ್ಲಿ ಬೋಟ್ ಯಾನ ಮಾಡಿಸುತ್ತದೆ! ಟ್ಯಾಂಕರ್ ಮೂಲಕ ಈ ಕೆರೆಗೆ ನೀರು ಬಿಡಬೇಕಾದ ಸ್ಥಿತಿ ಇದೆ. ನೀರು ಹರಿದು ಹೋಗಬೇಕಾದ ಔಟ್‌ಲೆಟ್ ಮುಚ್ಚಿದೆ. ಒಳ ಹರಿವು ಗಟಾರಿನ ಮೂತಿ, ಹೊರ ಹರಿವು ಕಟ್ಟಿದ್ದು ಬಡಾವಣೆಯಾಗಿದೆ. ಬಾಕಿ ವಸತಿ ವಿನ್ಯಾಸವಾಗಿದೆ. ನಿಂತ ನೀರು.. ಕೊಳೆಯದೇ ಇರುತ್ತದೆಯೇ? ಮೇಲಾಗಿ, ಸಾಧನಕೇರಿ ಬಡಾವಣೆ, ಜಮಖಂಡಿಮಠ ಲೇಔಟ್ ಗಟಾರು ನೀರು ನೇರವಾಗಿ ಕೆರೆಗೆ ಜೋಡಿಸಲ್ಪಟ್ಟಿದೆ.

ಬೇವು, ಮಾವು, ಹುಲಗಲ ಮರ ಚೆಳ್ಳ;

DSC_0275ಹೀಗೆ, ವಸತಿ ವಿನ್ಯಾಸ ರೂಪಿಸುವ ಅಕ್ರಮ-ಸಕ್ರಮಿಗರು, ಅತಿಕ್ರಮಿಸಿ ಮನೆ ಕಟ್ಟುವವರು, ಹೂಳೆಂದು ಮಣ್ಣೆತ್ತುವವರು, ಕೆರೆಯ ಒಡಲಲ್ಲೇ ಇಟ್ಟಂಗಿ ಭಟ್ಟಿ ನಡೆಸುವವರು, ಊರಿನ ಕೊಚ್ಚೆಯನ್ನು ಪೈಪ್ ಜೋಡಿಸಿ ಕೆರೆಯ ಒಡಲು ವಿಷವಾಗಿಸುವವರು, ಆಸ್ಪತ್ರೆಯ ಔಷಧ ತ್ಯಾಜ್ಯವನ್ನು ಬಿಸುಟು ನಂಜೇರಿಸುವವರು, ರಾತ್ರಿಯಾಗುತ್ತಲೇ ಕಂಠ ಪೂರ್ತಿ ಕುಡಿದು ತಮ್ಮ ಮತ್ತೇರಿಸಿಕೊಳ್ಳುವ ಬದಲು ಕೆರೆಯ ನೀರನ್ನು ಮತ್ತೇರಿಸುವವರು, ನಾಲ್ಕು ಮೂಲೆಯಲ್ಲಿ ಬಯಲು ಶೌಚ, ದನ-ಜನಗಳ ಮೈ ತೊಳೆಯುವ, ಬಟ್ಟೆ ಒಗೆಯುವ ಕಾಯಕ.. ಒಟ್ಟಾರೆ, ಕೆರೆ ಆದಷ್ಟು ಬೇಗ ಮುಚ್ಚಿ ರಿಯಲ್ ಎಸ್ಟೇಟ್ ಕುಳಗಳಿಗೆ ಆಹಾರವಾಗಿಸುವ ಪ್ರಯತ್ನದಲ್ಲಿ ಎಲ್ಲರೂ ಕೈ ಜೋಡಿಸಿದವರೇ!

ಹಾಗಾದರೆ, ಕೆರೆಗಳನ್ನು ಉಳಿಸಿಕೊಳ್ಳುವ ಬಗೆ? ಕ್ಯಾಚ್‌ಮೆಂಟ್ ಪ್ರದೇಶ ಮೊದಲು ತೆರವಾಗಬೇಕು. ಇದು ಅಸಾಧ್ಯ. ಅತಿಕ್ರಮಣ ಕೆರೆ ಪರಿಸರದಲ್ಲಿ ತೆರವಾಗಬೇಕು. ಅದೂ ಅಸಾಧ್ಯ. ಮರಣ ಶಯ್ಯೆಯಲ್ಲಿರುವ ಕೆರೆಗಳು ಪುನರುಜ್ಜೀವಿತ ಗೊಳ್ಳಬೇಕು.. ಗಟಾರು ಕೆರೆಗೆ ಜೋಡಿಸಿದ್ದನ್ನು ತೆರವುಗೊಳಿಸಬೇಕು.. ಹಾಗಾದರೆ ಮಲಿನವನ್ನು ಯಾರು ಹೊತ್ತೊಯ್ಯಬೇಕು? ಅದೂ ಅಸಾಧ್ಯ.. ನವಿಲೂರು ಕೆರೆ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಸ್ಥಳೀಯ ವಲಸೆ ಹಕ್ಕಿಗಳಿಗೆ ಮಾತ್ರವಲ್ಲ; ದೇಶ-ವಿದೇಶದ ಬಾನಾಡಿಗಳಿಗೆ ತಮ್ಮ ಫಲವತ್ತಾದ ತರಿಭೂಮಿಗಳ ಮೂಲಕ ಅಡುಗೆ ಮನೆ, ಅಕ್ಷಯ ಪಾತ್ರೆ ಎನಿಸಿದ್ದ ಪಾತ್ರೆಗೆ ಹೇಲು-ಉಚ್ಚೆ-ಕೊಚ್ಚೆಯ ಈ ಪರಿ ತುಂಬುವಿಕೆ ಮರಣ ಮೃದಂಗ ಬಾರಿಸುತ್ತಿದೆ.

ಪರಿಸರ ಪ್ರಜ್ಞೆ, ಪೌರನೀತಿ, ಪೌರ ಪ್ರಜ್ಞೆ.. ಪರಿಸರ ಸ್ನೇಹಿ ನಡವಳಿಕೆ ಮತ್ತು ಬದುಕು.. ಇವೆಲ್ಲ ಪಠ್ಯದ ಪಾಠಗಳಾದವು. ನಮ್ಮ ನಡವಳಿಕೆ ಅದೆಷ್ಟು ಪರಿಸರ ಅಸ್ನೇಹಿ ಎಂದರೆ, ಅನ್ನದ ಬಟ್ಟಲನ್ನೇ ವಿಷವಾಗಿಸುವ ಮಟ್ಟಕ್ಕೆ.

ಊರ ಮುಂದ ತಿಳಿ ನೀರಿನ ಹಳ್ಳ..

ಕಂದಾಯ ದಾಖಲೆಗಳಂತೆ ಧಾರವಾಡ ಜಿಲ್ಲೆಯಲ್ಲಿ ೧೮೫೮ರಲ್ಲಿ ೩,೧೫೦ಕ್ಕೂ ಅಧಿಕ ನೀರಾವರಿ ಕೆರೆಗಳಿದ್ದವು. ಆ ಪೈಕಿ ೫೩೫ ನೀರಾವರಿ ಕೆರೆಗಳು, ಪ್ರತಿಯೊಂದು ಕೆರೆಯೂ ೫೦ ಎಕೆರೆಗೂ ಮಿಗಿಲಾದ ತಮ್ಮ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶದ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದವು! ಅವಿಭಜಿತ ಧಾರವಾಡ ಜಿಲ್ಲೆಯ (ಗದಗ, ಹಾವೇರಿ ಸೇರಿ) ೫೦೦ ಎಕರೆಗೂ ಅಧಿಕ ನೀರಾವರಿ ಸೌಲಭ್ಯವನ್ನು ಒದಗಿಸಿದ್ದ ಕೆರೆಗಳೆಂದರೆ, ಬಂಕಾಪುರ ತಾಲೂಕಿನ ದೊಡ್ಡಕೆರೆ, ಬಿ.ಕೋಣನ ಕೆರೆ ೬೫೪ ಎಕರೆ, ಹಾವೇರಿ ಬಳಿಯ ಹೆಗ್ಗೆರೆ ೫೧೫ ಎಕರೆ, ಹಿರೇಕೆರೂರ ಬಳಿಯ ದೊಡ್ಡಕೆರೆ ೭೬೫ ಎಕರೆ, ಕಲಘಟಗಿ ತಾಲೂಕು ದೇವಿಕೊಪ್ಪದ ಬಳಿಯ ದೊಡ್ಡಕೆರೆ ೪೪೩ ಎಕರೆ, ಧಾರವಾಡ ತಾಲೂಕು ಮುಗವಾಡದ ಬಳಿಯ ಹೊನ್ನವ್ವನ ಕೆರೆ ೬೦೩ ಎಕರೆ, ಹಾನಗಲ್ ತಾಲೂಕಿನ ಹೊಳೆಕೋಟೆ ಬಳಿ ಆನೆಕೆರೆ ೫೩೭ ಎಕರೆ, ನರೇಗಲ್ ಬಳಿಯ ಹಿರೇಕೆರೆ ೬೦೨ ಎಕರೆ, ತಿಳುವಳ್ಳಿ ಬಳಿಯ ಹಿರೇಕೆರೆ ೮೬೨ ಎಕರೆ ಮುಖ್ಯವಾದವು. ಮಾತ್ರವಲ್ಲ, ಗದಗ ತಾಲೂಕಿನ ಡಂಬಳ ಬಳಿ ಮತ್ತು ಹಿರೇಕೆರೂರು ತಾಲೂಕು ಮಾಸೂರು (ಮುಗದ ಮಾಸೂರು) ಬಳಿ ಎರಡು ಪುರಾತನ ದೊಡ್ಡ ಕೆರೆಗಳಿದ್ದವು.

ಧಾರವಾಡ ಜಿಲ್ಲೆಯಾದ್ಯಂತ ೧೮೮೪ರಲ್ಲಿ ೨,೯೭೯ ಕೆರೆ ಕುಂಟೆಗಳಿದ್ದವು! ೯೩,೭೩೦ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು. ೧೯೦೩ರಲ್ಲಿ ಜಿಲ್ಲೆಯಾದ್ಯಂತ ೨,೭೮೪ ನೀರಾವರಿ ಕೆರೆಗಳಿದ್ದವು. (೧೯೦೪ರ ಗ್ಯಾಸೆಟಿಯರ್‌ನಲ್ಲಿ ಉಲ್ಲೇಖ ಲಭ್ಯ), ಜೊತೆಗೆ ೪,೩೮೭ ಕೆರೆಗಳಿದ್ದು! ಇನ್ನೊಂದು ಮೂಲದ ಪ್ರಕಾರ, ೧೯೦೧ರಲ್ಲಿ ೨,೪೦೪ ಕೆರೆಗಳಿಂದ ಸುಮಾರು ೮೧,೮೪೩ ಎಕರೆ ಪ್ರದೇಶ ನೀರುಣ್ಣುತ್ತಿತ್ತು. ಇವುಗಳೊಂದಿಗೆ, ಸುಮಾರು ೨೪೦೦ ಕೆರೆಗಳನ್ನು ಕೇವಲ ಕುಡಿಯಲು ಮಾತ್ರ ಆಶ್ರಯಿಸಲಾಗಿತ್ತು. ದನಕರುಗಳಿಗೆ, ಜನರಿಗೆ ಕುಡಿಯಲು ನೀರು ಒದಗುತ್ತಿತ್ತು.

ನಮ್ಮ ಹಳ್ಳಿಯೂರ ನಮಗ ಪಾಡ..

ಧಾರವಾಡ ಜಿಲ್ಲೆಯ ಬಹುತೇಕ ಕೆರೆಗಳು ಹರಿಹರ – ಬೆಳಗಾವಿ ರಸ್ತೆಯ ಪಶ್ಚಿಮ ಭಾಗzಲ್ಲಿವೆ. ಇವುಗಳನ್ನು ವಿಜಯನಗರ ಅರಸರ ಕಾಲದಲ್ಲಿ ಕಟ್ಟಿಸಲಾಯಿತು ಎಂಬ ಶಾಸನಗಳು ಲಭ್ಯ. ೧೯೩೬ರ ವೇಳೆಗೆ ಧಾರವಾಡದಲ್ಲಿ ೨,೩೪೮ ನೀರಾವರಿ ಕೆರೆಗಳು ಅಸ್ತಿತ್ವದಲ್ಲಿದ್ದು, ಅವುಗಳ ಅಚ್ಚುಕಟ್ಟು ಪ್ರದೇಶ ೯೦,೩೯೩ ಎಕರೆಗಳಾಗಿತ್ತು. ೧೯೫೫-೫೬ನೇ ಸಾಲಿನಲ್ಲಿ ಕೆರೆಗಳಿಂದ ನೀರಾವರಿಗೆ ಒಳಪಟ್ಟ ಪ್ರದೇಶ ೧,೦೮,೨೦೪ ಎಕರೆಗೆ ಏರಿತು! ೧೯೮೮-೮೯ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೧,೮೨೦ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ೧,೧೨೮ (೪ ಹೆಕ್ಟೇರ್ ವರೆಗೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ) ಕೆರೆಗಳು, ೬೩,೨೨೯ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿರುವ ೨,೦೨೪ (೪ ಹೆಕ್ಟೇರ್‌ಗೂ ಅಧಿಕ ಅಚ್ಚುಕಟ್ಟು ಪ್ರದೇಶ ಹೊಂದಿರುವ) ಕೆರೆಗಳಿದ್ದವು. ೧೯೯೨-೯೩ನೇ ಸಾಲಿನಲ್ಲಿ ೪೦ ಹೆಕ್ಟೇರ್‌ಗೂ ಕಡಿಮೆ ಅಚ್ಚುಕಟ್ಟು ಪ್ರದೇಶ ಹೊಂದಿರುವ ೨೭೬ ಕೆರೆಗಳೂ, ೪೦ ಹೆಕ್ಟೇರ್‌ಗೂ ಮಿಗಿಲಾದ ಅಚ್ಚುಕಟ್ಟು ಪ್ರದೇಶ ಹೊಂದಿರುವ ೨,೮೦೦ ಕೆರೆಗಳಿದ್ದವು.. ೨೦೧೧-೧೨ರಲ್ಲಿ ಇವುಗಳ ಸಂಖ್ಯೆ ನೂರಕ್ಕಿಳಿದಿದೆ!

ಮನೆಗೆ ಹೆಂಗ ಹಂಡೆ ಆಸರೋ.. ಊರಿಗೆ ಊರ ಮುಂದಿನ ಕೆರಿ.. ಅಂತ ಜಾನಪದರು ಹೇಳ್ತಾರ.. ನೀರು ಕುಡಿಸೋ ಸಂಪ್ರದಾಯ ಇತ್ತೀಚಿಂದು.. ‘ನಾಡಪದ’ರದ್ದು ಅಲ್ಲವೇ? ಯಾತಕವ್ವ ಶಾರದೂರ ಬ್ಯಾಡ..

ಲೇಖನ: ಹರ್ಷವರ್ಧನ ವಿ. ಶೀಲವಂತ

ಚಿತ್ರಗಳು: ಮಿಲಿಂದ ಪಿಸೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*