ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಈ ಪೌರ ಕಾರ್ಮಿಕರು ಹಸಿರ ಪರಿಚಾರಕರು! ಲೀಕ್ ಆಗುವ ನೀರಿನಿಂದ ಕೈ ತೋಟ ಮಾಡಿದವರು..

ಇಲ್ಲಿರುವ ಚಿತ್ರಗಳನ್ನು ಒಮ್ಮೆ ದಿಟ್ಟಿಸಿ ನೋಡಿ. ನೀವು ಕಾಣುತ್ತಿರುವ ಮರಗಿಡಗಳಿರುವ ಈ ತಾಣದ ಚಿತ್ರಣ ಕೇವಲ ಮೂರು ವರ್ಷಗಳ ಕೆಳಗೆ ಇದಕ್ಕಿಂತ ಭಿನ್ನವಾಗಿತ್ತು.  ಇಲ್ಲೆಲ್ಲಾ ಬಳ್ಳಾರಿ ಜಾಲಿಯದ್ದೇ ಕಾರುಬಾರು.  ಈ ಜಾಗ, ನೀರಿನ ಟ್ಯಾಂಕ್‌ನಿಂದ ಲೀಕ್ ಆಗುತ್ತಿದ್ದ ನೀರು, ಅನೇಕರ ಪಾಲಿಗೆ ಬೆಳಗಿನ SANYO DIGITAL CAMERAಸಂಕಟಗಳನ್ನು ತೀರಿಸಿಕೊಳ್ಳುವುದಕ್ಕೆ ಮೀಸಲಾಗಿತ್ತು. ಬಿಟ್ಟರೆ ಊರ ತ್ಯಾಜ್ಯವಸ್ತುಗಳಿಂದ ತುಂಬಿ ತುಳುಕುತ್ತಿತ್ತು. ಹೀಗಾಗಿ ಇಲ್ಲಿ ದಾರಿಹೋಕರು ಅಕ್ಷರಶಃ ತಲೆತಗ್ಗಿಸಿ, ಮೂಗು ಮುಚ್ಚಿಕೊಂಡು ಓಡಾಡುವ ಕರ್ಮ. ಆದರೆ, ಇಂದು ಅದೇ ಜಾಗ ಮಿನಿ ಫಾರೆಸ್ಟ್! ಇಲ್ಲೆಲ್ಲಾ ಆಳೆತ್ತರದ ಮರಗಿಡಗಳದ್ದೇ ಸುಂದರ ಲೋಕ! ವನದ ಅಷ್ಟದಿಕ್ಕುಗಳಲ್ಲೂ ಹಸಿರೇ-ಹಸಿರು! ಬಣ್ಣ ಬಣ್ಣದ ಚಿಟ್ಟೆ, ಪಕ್ಷಿಗಳ ನೆಲೆಬೀಡು. ಹೀಗಾಗಿ ಈ ತಾಣ ನಂದನವನ! ಹತ್ತಾರು ವಿದ್ಯಾರ್ಥಿಗಳ ಪಾಲಿಗೆ ಬಿಡುವಿನ ವೇಳೆಯಲ್ಲಿ ಓದುವ, ವಿಶ್ರಾಂತಿಯ ತಾಣ!. ಅಂದಹಾಗೆ ಈ ಹಸಿರು ವನ ತಲೆಎತ್ತಿರುವುದು ಕಾಡು ಬಂಡೆಗಳ ಮೇಲೆ! ಅದು ಶೂನ್ಯ ಬಂಡವಾಳದಲ್ಲಿ!

SANYO DIGITAL CAMERAಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜ್ ರಸ್ತೆಗೆ ಹೊಂದಿಕೊಂಡಿರುವ ನೀರಿನ ಟ್ಯಾಂಕ್‌ನ ಆವರಣದಲ್ಲಿಯೇ ಇಂತಹ ಹಸಿರು ಚಮತ್ಕಾರ ನಡೆದಿದೆ! ಕೊಟ್ಟೂರು ಪಟ್ಟಣ ಪಂಚಾಯಿತಿಯ ನೀರು ಸರಬರಾಜು ಘಟಕದಲ್ಲಿ ಕೆಲಸ ಮಾಡುತ್ತಿರುವ ಮೂವರು ಪೌರ ಕಾರ್ಮಿಕರೇ ಈ ಹಸಿರು ಸಿರಿಯ ಹರಿಕಾರರು! ಬಳ್ಳಾರಿ ಕೊಟ್ರೇಶ್, ಮೋರಗೇರಿ ಬಸವರಾಜ್ ಮತ್ತು ಗುಬ್ಬಿ ಲಕ್ಷ್ಮಪ್ಪ ಆ ಪೌರ ಕಾರ್ಮಿಕರು. ಇವರೆಲ್ಲ ಬಿಡುವು ಸಿಕ್ಕಾಗ ಈ ವನದಲ್ಲಿ ಬೀಡು ಬಿಟ್ಟು, ಸ್ವಯಂ ಪ್ರೇರಿತವಾಗಿ ಕೈ ತೋಟದ ಆರೈಕೆ ಮಾಡುತ್ತಾರೆ. ಹೀಗಾಗಿ, ಇಂದು ಈ ಮೂವರು ಕೇವಲ ಪೌರ ಕಾರ್ಮಿಕರಾಗಿ ಉಳಿಯದೆ, ಹಸಿರ ಪರಿಚಾರಕರಾಗಿ, ಊರಿನವರ ಗಮನಸೆಳೆದಿದ್ದಾರೆ.

ಅಂದಹಾಗೆ, ಇಲ್ಲಿ ಈ ಕೈ ತೋಟ ಎದ್ದು ನಿಂತಿದ್ದು ತೀರಾ ಆಕಸ್ಮಿಕವಾಗಿಯೇ. ಕಳೆದ ೧೨ ವರ್ಷಗಳ ಕೆಳಗೆ, ಈ ಜಾಗದಲ್ಲಿ ಸುಮಾರು ೧೦ ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ನ್ನು ಪಟ್ಟಣ ಪಂಚಾಯತಿ ನಿರ್ಮಿಸಿದ್ದು, ಇದಕ್ಕೆ ಕಳೆದ ನಾಲ್ಕು ವರ್ಷದ ಈಚೆಗೆ ಸುತ್ತಲೂ ಸುಮಾರು ಅರ್ಧ ಎಕರೆ ವಿಸ್ತೀರ್ಣದಲ್ಲಿ ಆಳೆತ್ತರದ ಕಾಪೌಂಡ್‌ನ್ನು ಭಾಗಶಃ ನಿರ್ಮಿಸಿತು. ಇದು ಸದುಪಯೋಗವಾಗಿದ್ದಕ್ಕಿಂತ ದುರ್ಬಳಕೆಯಾಗಿದ್ದೇ ಹೆಚ್ಚು. ಇಲ್ಲಿ ಮಲಮೂತ್ರ, ತ್ಯಾಜ್ಯ ವಿಸರ್ಜನೆ ಮಿತಿ ಮೀರಿತು. ಇದರಿಂದ ಸಾರ್ವಜನಿಕರಂತೆ ಕಿರಿಕಿರಿ ಅನುಭವಿಸಿದ್ದು ಈ ಪೌರ ಕಾರ್ಮಿಕರು. ನೀರಿನ ವಾಲ್ ತಿರುವಲು ಪದೇ ಪದೇ ಇಲ್ಲಿಗೆ ಧಾವಿಸಬೇಕಾಗಿದ್ದರಿಂದ, ಇವರು ಮುಜುಗರಕ್ಕೆ ಈಡಾಗುತ್ತಿದ್ದರು. ಇದಕ್ಕೆ ಒಂದು ದಾರಿ ಹುಡುಕಬೇಕೆಂದು ನಿರ್ಧರಿಸಿದರು. ಆಗ ಇವರಿಗೆ ಕಂಡಿದ್ದು ಅರಣ್ಯ ಇಲಾಖೆ ಪಟ್ಟಣ ವಿವಿಧೆಡೆ ಸಸಿಗಳನ್ನು ನೆಡುತ್ತಿರುವ ದೃಶ್ಯ.

ತಡಮಾಡಲಿಲ್ಲ. ಚಲಿಕೆ, ಗುದ್ದಲಿ, ಪಿಕಾಸಿ ಹಿಡಿದು ಬಳ್ಳಾರಿ ಜಾಲಿ, ಹುಲ್ಲು, ಕಸ-ಕಡ್ಡಿಯನ್ನು ತೆಗೆದು ಜಾಗ ಸ್ವಚ್ಚಗೊಳಿಸಿದರು. ಜಾಗದ ಒಂದು ಬದಿಯಲ್ಲಿ SANYO DIGITAL CAMERAಸುಮಾರು ೬೦ ಅಡಿಯಷ್ಟು ಉದ್ದ ಕಾಪೌಂಡ್ ಕಟ್ಟದೇ ಬಿಟ್ಟ ಜಾಗಕ್ಕೆ ಬಳ್ಳಾರಿ ಜಾಲಿ ಮುಳ್ಳು ಬಡಿದು ಭದ್ರಪಡಿಸಿದರು. ಆದರೆ ಇವರ ದುರಾದೃಷ್ಟಕ್ಕೆ, ಬಂಡೆಯಿಂದ ಆವೃತ್ತವಾಗಿದ್ದ ನೆಲದಲ್ಲಿ ಸಸಿ ನೆಡಲು ಗುಣಿ ತೋಡಲು ಹರಸಾಹಸ ಪಟ್ಟರು. ಇವರಲ್ಲಿ ಸಂಕಲ್ಪ, ಇಚ್ಛಾಶಕ್ತಿ ಇದ್ದರಿಂದ, ಆಯಕಟ್ಟಿನ ಸ್ಥಳ ನೋಡಿ ಸಸಿಗಳನ್ನು ನೆಡಲು ಸಿದ್ಧತೆ ಮಾಡಿದರು. ಅರಣ್ಯ ಇಲಾಖೆಯಿಂದ ಸುಮಾರು  ೬೦ಕ್ಕೂ ಹೆಚ್ಚು ಸಸಿಗಳನ್ನು ತಂದು ನೆಟ್ಟರು. ಇಷ್ಟು ದಿನ ರೈಸಿಂಗ್ ಪೈಪ್‌ನಿಂದ ಲೀಕ್ ಆಗಿ, ಚರಂಡಿಗೆ ಸೇರುತ್ತಿದ್ದ ನೀರನ್ನು ಗಿಡಗಳ ಬುಡಕ್ಕೆ ಹರಿಬಿಟ್ಟರು. ಕಾಲ-ಕಾಲಕ್ಕೆ ಗಿಡಗಳನ್ನು ಆರೈಕೆ ಮಾಡುತ್ತಾ ಬಂದರು. ಗಿಡಗಳು ನಿರೀಕ್ಷೆಗೂ ಮೀರಿ ಬೆಳೆಯ ತೊಡಗಿದವು. ಇದರೊಂದಿಗೆ, ಇವರು ನೀರು ಬಿಡಲು ಹೋದ ಓಣಿಯಲೆಲ್ಲಾ ಕಣ್ಣಿಗೆ ಕಂಡ, ಮನಸ್ಸಿಗೆ ಹಿಡಿಸಿದ ಹೂವಿನ, ಹಣ್ಣಿನ, ಶೋ ಪ್ಲಾಂಟ್ಸ್ ಗಿಡಗಳನ್ನು ಮಾಲೀಕರಿಂದ ಪಡೆದು ತಂದು ನೆಟ್ಟರು. ಫಲವಾಗಿ, ಅರ್ಧ ಎಕರೆ ಜಾಗದಲ್ಲಿ ಕಾಡು ಬಾದಾಮಿ, ಸಿಹಿ ಹುಣಸೆ, ಹಲಸು, ಮಾವು, ಅತ್ತಿ ಹಣ್ಣು, ಅರಳೀಮರ, ಸೇರಿದಂತೆ ಹತ್ತಾರು ಜಾತಿಯ ಮರಗಿಡಗಳು ಬೆಳೆದು ನಿಂತಿವೆ. ಸರ್ಕಾರ, ಅನ್ಯರ ಸಹಕಾರವಿಲ್ಲದೇ ಇವರು ಸತತ ಮೂರು ವರ್ಷ ಪಟ್ಟ ಪರಿಶ್ರಮ, ಮಾಡಿದ ತ್ಯಾಗದ ಫಲವಾಗಿ, ಇಂದು ಈ ತಾಣ  ನಂದನವನವಾಗಿದೆ.

ಆದರೆ ಇಷ್ಟೊಂದು ಪರಿಶ್ರಮಪಟ್ಟು ಬೆಳೆಸಿದ ಈ ವನಕ್ಕೆ ರಕ್ಷಣೆಯ ಕೊರತೆ ಕಾಡುತ್ತಿದೆ. ಒಂದು ಬದಿಯಲ್ಲಿ ಕಾಂಪೌಂಡ್ ಇಲ್ಲದ್ದರಿಂದ, ಕೆಲವರು ಈ ಮಾರ್ಗ ಬಳಸಿ ಈ ತಾಣಕ್ಕೆ ಬಂದು ಗಲೀಜು ಮಾಡುವುದಲ್ಲದೆ, ಮರಗಿಡಗಳ ಬೆಳವಣಿಗೆಗೆ ಅಡ್ಡಿ ಮಾಡುತ್ತಿದ್ದಾರೆ. ಇದರಿಂದ, ಇವರ ಕನಸಿನ ಕೂಸಾದ ಈ ವನವನ್ನು ಅಭಿವೃದ್ಧಿಪಡಿಸುವುದಿರಲಿ, ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅದೇನೇ ಇರಲಿ, ವ್ಯರ್ಥ ನೀರು, ಜಾಗವನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಕಾಡು ಬಂಡೆಗಳ ನಡುವೆ ಹಸಿರು ಚಿಮ್ಮುವಂತೆ ಮಾಡಿದ ಈ ಪೌರ ಕಾರ್ಮಿಕರ ಹಸಿರು ಕ್ರಾಂತಿಗೆ ಸೈ ಎನ್ನಲೇ ಬೇಕು. ಇವರಿಗೆ ನೀವು ಅಭಿನಂದಿಸಿ, ಬೆನ್ನು ತಟ್ಟಿ ಹುರಿದುಂಬಿಸಬೇಕೆಂಬ ಹಂಬಲವೇ? ಹಾಗಿದ್ದರೆ ಬಳ್ಳಾರಿ ಕೊಟ್ರೇಶ್‌ರವರ ಮೊಬೈಲ್ ನಂಬರ್ ೯೮೮೬೯೪೭೭೨೭ ಸಂಪರ್ಕಿಸಿ.

 ಚಿತ್ರ-ಲೇಖನ: ಸ್ವರೂಪಾನಂದ.ಎಂ.ಕೊಟ್ಟೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*