ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

’ಮದಕ’ ಮಾಹಿತಿ

ಕೊಳವೆಬಾವಿಗಳು ಮದಕಗಳು ಇರುವ ಸ್ಥಾನದಲ್ಲಿ ತಲೆ ಎತ್ತುತ್ತಿವೆ. ಈ ರಚನೆಗಳನ್ನು ಪುನರುಜ್ಜೀವನಗೊಳಿಸಿ, ಅರಿವನ್ನು ಮೂಡಿಸಿ, ಸ್ಥಳೀಯ ಜ್ಞಾನವನ್ನು ಸಂರಕ್ಷಿಸುವ ಯತ್ನಗಳನ್ನು ಕೈಗೊಳ್ಳಬೇಕಾಗಿದೆ.madaka_2

ಮದಕಗಳು, ಕರ್ನಾಟಕ ಹಾಗೂ ಕೇರಳದ ಜಂಬುಮಣ್ಣಿನ ಭೂಪಟ್ಟಿಗಳಲ್ಲಿರುವ, ವೇಗವಾಗಿ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಮಳೆನೀರು ಕೊಯ್ಲಿನ ರಚನೆಗಳಾಗಿವೆ. ನೈಸರ್ಗಿಕವಾದ ತಗ್ಗಿರುವ ಮೂರು ಬದಿಗಳಲ್ಲಿ ಎತ್ತರದ ಪ್ರದೇಶವಿದ್ದು, ಸುತ್ತಲಿನ ಜಂಬುಮಣ್ಣಿನ ಇಳಿಜಾರುಗಳಿಂದ ಇಳಿಯುವ ಮಳೆನೀರು ಇಲ್ಲಿ ಸಂಗ್ರಹವಾಗುತ್ತದೆ. ಈ ಮಳೆನೀರು ಇಳಿಜಾರುಗಳಿಂದ ಹರಿದು ಹೋಗದಂತೆ ಮಾಡಲು, ನಾಲ್ಕನೆಯ ತೆರೆದ ಬದಿಗೆ ಬದುಗಳನ್ನು ನಿರ್ಮಿಸಿ, ಮಳೆನೀರು ಕೊಯ್ಲು ಮಾಡಲಾಗುತ್ತದೆ.

ಆದರೆ, ಶ್ರೀಪಡ್ರೆಯವರು ಹೇಳುವ ಪ್ರಕಾರ, ಮದಕಗಳ ಬಗೆಗೆ ಯಾವುದೇ ದಾಖಲೀಕರಣ ಹಾಗೂ ಮಾಹಿತಿ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ರೈತರು ಎದುರಿಸುತ್ತಿರುವ ನೀರಿನ ಅಭಾವದ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಒದಗಿಸುವ ಈ ಸಾಂಪ್ರದಾಯಿಕ ಸಂರಚನೆಗಳನ್ನು ಮರುಸ್ಥಾಪನೆ ಮಾಡಿ, ಪುನರುಜ್ಜೀವನಗೊಳಿಸುವ ಯತ್ನಗಳನ್ನು ತುರ್ತಾಗಿ ಮಾಡಬೇಕೆಂದು ಅವರು ತಿಳಿಸುತ್ತಾರೆ.

ಕಾಸರಗೋಡು ಜಿಲ್ಲೆಯ ಪಡ್ರೆಯ ಸುಂದರ ಗ್ರಾಮವನ್ನು ನೋಡಿದಾಗ, ಇಲ್ಲಿನ ಜನರ ಮೇಲೆ ಎಂಡೋಸಲ್ಫಾನ್‌ನ ದುರಂತವು ತನ್ನ ಪ್ರಭಾವವನ್ನು ಇನ್ನೂ ಬೀರುತ್ತಲೇ ಇದೆ ಎಂದು ನಂಬಲು ಬಹಳ ಕಷ್ಟವಾಗುತ್ತದೆ. ಕೃಷಿ ಪತ್ರಿಕೋದ್ಯಮದ ಹಾಗೂ ಜಲಸಂರಕ್ಷಣೆಗಾಗಿ ಸಾಂಪ್ರದಾಯಿಕ ನೀರ ಕೊಯ್ಲಿನ ವಿಧಾನಗಳ ದಾಖಲೀಕರಣದ ಹರಿಕಾರರಾದ, ಮಳೆ ನೀರ ಪುರುಷರೆಂದು ಹೆಸರುವಾಸಿಯಾದ ಶ್ರೀಪಡ್ರೆಯವರನ್ನು ಭೇಟಿ ಮಾಡಲು ನಾವು ಬಂದಿದ್ದೇವೆ; ಅವರು ಸ್ವಗ್ರಾಮದಲ್ಲೇ ನೆಲೆಸಿ, ರೈತರಿಗೆ ಅಪ್ಯಾಯಮಾನವಾದ ವಿಷಯಗಳು, ಅಂದರೆ, ಸಾಂಪ್ರದಾಯಿಕ ನೀರ ಕೊಯ್ಲಿನ ವಿಧಾನಗಳ ಪುನರುಜ್ಜೀವನದ ಮೂಲಕ ಜಲ ಸಂರಕ್ಷಣೆ ಮಾಡುವುದು, ನೀರ ಕೊಯ್ಲನ್ನು ಕುರಿತಾದ ಹಳೆಯ ಹಾಗೂ ಹೊಸ ವಿಧಾನಗಳು, ಮತ್ತು ಯಶೋಗಾಥೆಗಳನ್ನು ದಾಖಲೀಕರಿಸಿ, ಹಂಚಿಕೊಳ್ಳುವುದು; ಹಾಗೂ, ಹಲಸಿನ ಹಣ್ಣಿನಂತಹ ಕೃಷಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ, ಪ್ರಸರಣ ಮಾಡುವ ಮೂಲಕ, ಅವುಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಮೂಲಕ, ಸಮುದಾಯಗಳನ್ನು ಈ ವಿಷಯಗಳನ್ನು ಕುರಿತಾಗಿ ಸಂವೇದನಾಶೀಲರಾಗುತ್ತ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಕೇರಳ ಹಾಗೂ ಕರ್ನಾಟಕ ರಾಜ್ಯದ ಜನತೆಯನ್ನು ಎಂಡೋಸಲ್ಫಾನ್‌ನಂತಹ ವಿಷಯಗಳತ್ತ ಗಮನ ಹರಿಸಿ, ಅವರನ್ನು ಇದನ್ನು ಕುರಿತಾಗಿ ಸಂವೇದನಾಶೀಲರಾಗುವಂತೆ ಮಾಡುತ್ತಿದ್ದಾರೆ.

ಕರ್ನಾಟಕ ಹಾಗೂ ಕೇರಳದ ಮದಕಗಳು

madaka_3ಮದಕಗಳೆಂಬ ಸಾಂಪ್ರದಾಯಿಕ ಮಳೆನೀರು ಕೊಯ್ಲಿನ ರಚನೆಗಳನ್ನು ನೋಡಲು ನಾವು ಬೇಡ್ರಂಬಳ್ಳ ಗ್ರಾಮಕ್ಕೆ ಭೇಟಿ ನೀಡಿದೆವು; ಭತ್ತದ ಹೊಲಗಳ ನೀರಾವರಿಗೆ ಪೂರಕವಾಗಿ, ಸಾಂಪ್ರದಾಯಿಕವಾಗಿ ಮದಕಗಳನ್ನು ಬಳಸಲಾಗುತ್ತಿತ್ತು. ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡಿನ ಜಂಬುಮಣ್ಣಿನ ಜಿಲ್ಲೆಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಕೆಯಾಗುವ ಸಾಂಪ್ರದಾಯಿಕ ಮಳೆನೀರು ಕೊಯ್ಲಿನ ರಚನೆಗಳೆಂದರೆ ಮದಕಗಳು; ಮೂರು ಬದಿಗಳಲ್ಲಿ ಎತ್ತರವಾಗಿ, ಒಂದೆಡೆ ತಗ್ಗಿರುವ ಈ ಹಳ್ಳಗಳಿಗೆ, ಸುತ್ತಲಿರುವ ಜಂಬುಮಣ್ಣಿನ ಇಳಿಜಾರುಗಳಿಂದ ಮುಖ್ಯವಾಗಿ ಮಳೆನೀರು ಹರಿದು, ಶೇಖರಣಗೊಳ್ಳುತ್ತದೆ. ಸಾಂಪ್ರದಾಯಿಕವಾಗಿ, ಹಳ್ಳದ ತೆರೆದ ನಾಲ್ಕನೆಯ ಬದಿಯಲ್ಲಿ ಬದುಗಳನ್ನು ಕಟ್ಟುವ ಮೂಲಕ, ಹರಿವ ನೀರನ್ನು ತಡೆದು, ಮಳೆನೀರು ಕೊಯ್ಲನ್ನು ಮಾಡಲಾಗುತ್ತದೆ.

ಕೃಷಿ ಪ್ರದೇಶಗಳಲ್ಲಿನ ಜಂಬುಮಣ್ಣು ಮದಕಗಳಿಗೆ ಹೇಳಿ ಮಾಡಿಸಿದಂತೆ, ಏಕೆಂದರೆ, ಜಂಬುಮಣ್ಣಿನ ಪ್ರದೇಶಗಳಲ್ಲಿ ನೀರಿನ ವೇಗವಾದ ಹೀರುವಿಕೆ ಹಾಗೂmadaka_4 ಸೋರುವಿಕೆ ಆಗುತ್ತದೆ ಹಾಗೂ ಮದಕಗಳು ಬಿರುಕುಗಳ ಮೂಲಕ ನೀರು ನಿಧಾನವಾಗಿ ಜಿನುಗುತ್ತದೆ; ಹಾಗಾಗಿ, ಅನೇಕ ಬಾರಿ ಮದಕಗಳನ್ನು ಜಿನುಗು ಕೊಳಗಳಿಗೆ ಹೋಲಿಸಲಾಗುತ್ತದೆ. ಇದರಿಂದ ಅಂತರ್ಜಲದ ಮರುಪೂರಣವಾಗಿ, ಮದಕಗಳ ನೀರು ಸಂಗ್ರಹಣಾ ತಾಣಗಳ ಬಳಿ ಇರುವ ನೀರಿನ ಬುಗ್ಗೆಗಳು ಅಥವಾ ಇತರ ಹೊರಗಿಂಡಿಗಳ ಮೂಲಕ, ಮಾನವ-ನಿರ್ಮಿತ ಕೆರೆಗಳು ಅಥವಾ ಬಾವಿಗಳನ್ನು ಸೇರುತ್ತದೆ.

ಹಾಗಾಗಿ, ಮದಕಗಳ ಮುಖ್ಯ ಕಾರ್ಯವೆಂದರೆ, ಎತ್ತರದ ಪ್ರದೇಶದಲ್ಲಿನ ಅವುಗಳ ಜಲಾನಯನ ಪ್ರದೇಶಗಳಿಂದ ಹರಿವ ನೀರನ್ನು ಹಿಡಿದಿಡುವುದಾಗಿದೆ. ಆರರಿಂದ ಏಳು ತಿಂಗಳವರೆಗೂ ನೀರಿನ ಶೇಖರಣೆ ಮಾಡುವುದರೊಂದಿಗೆ, ಮದಕಗಳು ಬೇಸಿಗೆ ತಿಂಗಳುಗಳಲ್ಲಿ ಒಣಗಿದರೂ, ಕೆಳಗಿರುವ ಜಲಧರಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅಪಾರವಾಗಿ ನೆರವಾಗುತ್ತದೆ. ಮದಕಗಳನ್ನು ಎತ್ತರದಲ್ಲಿ ಕಟ್ಟುವುದರಿಂದ, ಬೇಸಿಗೆಯ ಕೊನೆಯವರೆಗೂ ತಗ್ಗಿನ ಪ್ರದೇಶಗಳಲ್ಲಿ ನೀರು ಇರುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಬದುಗಳ ಮೇಲಿನಿಂದ ಹರಿದು ಬರುವ ಹೆಚ್ಚುವರಿ ನೀರನ್ನು ಹೊಲಗಳಿಗೆ ನೀರಾವರಿ ಒದಗಿಸಲು ಬಳಸಬಹುದು. ಬಹುತೇಕವಾಗಿ ಮದಕಗಳನ್ನು ನೀರಾವರಿಗಾಗಿ ಬಳಸಲಾಗುತ್ತದೆ, ಆದರೆ, ಅದರ ಇತರ ಕಾರ್ಯವಾದ, ಮರುಪೂರಣಕ್ಕಾಗಿ ನೀರನ್ನು ಹೀರಿಕೊಳ್ಳುವ ಕ್ರಿಯೆಯನ್ನು ಕುರಿತಾಗಿ ಇತ್ತೀಚಿನವರೆಗೂ ಬಹಳ ಜನಗಳಿಗೆ ತಿಳಿದಿರಲಿಲ್ಲ.

ಮೊದಲ ಮಳೆಯ ನೀರು ಮದಕಗಳಿಗೆ ಹರಿದು ಬಾರದಂತೆ ಎಚ್ಚರ ವಹಿಸಬೇಕೆ, ಏಕೆಂದರೆ ಅದು ತನ್ನೊಂದಿಗೆ ಇಳಿಜಾರುಗಳಿಂದ ಎಲೆಗಳು ಹಾಗೂ ಹೂಳನ್ನು ತಂದು, ಮದಕದ ಪಾತ್ರದ ಬಿರುಕುಗಳಿಗೆ ತಡೆಯೊಡ್ಡಿ, ಮದಕದ ಜಿನುಗುವಿಕೆ ಹಾಗೂ ಶೇಖರಣಾ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮದಕಗಳಲ್ಲಿ ಹೂಳಿನ ಶೇಖರಣೆ ಆಗದಂತೆ ತಡೆಗಟ್ಟಲು ಅರಣ್ಯೀಕರಣ ಆಗುವುದೂ ಮುಖ್ಯ. ಅಂತರ್ಜಲ ಮರುಪೂರಣಕ್ಕಾಗಿ ನೀರಾವರಿ ಹಾಗೂ ಜಿನುಗುವಿಕೆಗೆಂದು ಜಲ ಶೇಖರಣಾ ರಚನೆಗಳಾಗಿ ಬಳಕೆ ಆಗುವುದಲ್ಲದೆ, ಪ್ರಾಣಿಗಳು ಹಾಗೂ ಪಕ್ಷಿಗಳಲ್ಲದೆ, ಜಲಚರ ಜೀವಗಳ ಪುನರುಜ್ಜೀವನಕ್ಕೆ ನೆರವಾಗಿ, ನೂತನ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ.

ಬೇಡ್ರಂಬಳ್ಳ ಗ್ರಾಮದ ನಮ್ಮ ಭೇಟಿ

madaka_5ಮೂರು ಬದಿಗಳಲ್ಲಿ ನೈಸರ್ಗಿಕ ಇಳಿಜಾರು ಇರುವ ಹಾಗೂ ಒಂದು ಕಡೆ ಕಲ್ಲುಬಂಡೆಗಳಿಂದ ನಿರ್ಮಾಣ ಮಾಡಲಾದ ಬದುವನ್ನು ಹೊಂದಿದ, ಕೊಳ ಅಥವಾ ಕೆರೆಯಂತೆ ಕಾಣುವ ಮದಕವನ್ನು ನಾವು ನೋಡಿದೆವು. ಅದರ ಸುತ್ತಲೂ ಇರುವ ಹಸಿರ ವನರಾಶಿ ಹಾಗೂ ಆಗೊಮ್ಮೆ-ಈಗೊಮ್ಮೆ ಈ ನೀರಿನಿಂದ ತಮ್ಮ ದಾಹ ಇಂಗಿಸಿಕೊಳ್ಳುತ್ತಿರುವ ಜಾನುವಾರುಗಳು ಪ್ರಶಾಂತವಾದ ವಾತಾವರಣವನ್ನು ಸೃಷ್ಟಿಸುತ್ತವೆ. ಮದಕಗಳ ಸುತ್ತಲಿರುವ ಮರಗಳ ನೆರಳಿನ ಅಡಿಯಲ್ಲಿರುವ ಬಂಡೆಗಳ ಮೇಲೆ ಕುಳಿತ ಕೆಲವು ಗ್ರಾಮಸ್ಥರನ್ನೂ ನಾವು ಭೇಟಿ ಮಾಡಿದೆವು. ಇದು ಬಹಳ ಹಳೆಯದಾದ ಮದಕವೆಂದೂ, ಭತ್ತ ಬೆಳೆಯುವಾಗ ನೀರಾವರಿಗೆ ಮದಕಗಳು ಉಪಯುಕ್ತವಾಗಿದ್ದು, ಈಗ ಅಷ್ಟಾಗಿ ಭತ್ತ ಬೆಳೆಯದಿದ್ದರೂ, ನೀರು ಸಾರ್ವಜನಿಕ ಬಳಕೆಗಾಗಿ ಉಪಯುಕ್ತವಾಗಿದ್ದು, ಪ್ರಾಣಿಗಳು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಾಗಿಯೂ ಬಳಕೆ ಆಗುತ್ತಿದೆ ಎಂದು ತಿಳಿಸಿದರು.

ಮದಕಗಳ ಬಗ್ಗೆ ಯಾವುದೇ ದಾಖಲೀಕರಣವಾಗಲಿ, ಮಾಹಿತಿ ಆಗಲಿ ಇಲ್ಲವೆಂದು ಶ್ರೀಪಡ್ರೆಯವರು ತಿಳಿಸುತ್ತಾರೆ. ಮದಕಗಳು ಅಲಕ್ಷ್ಯಕ್ಕೆ ಒಳಗಾಗಿ, ಅದರmadaka_6 ಬದಲಾಗಿ, ತಾತ್ಕಾಲಿಕ, ನೀರನ್ನು ಪಡೆಯುವ ಅತ್ಯಂತ ಶೋಷಣಾಪೂರ್ಣ ಹಾಗೂ ಅಸುಸ್ಥಿರ ವಿಧಾನವಾದ ಕೊಳವೆಬಾವಿಗಳು ಬಳಕೆಗೆ ಬಂದಿವೆ. ಜನರಿಗೆ ಇರುವ ಈ ಸಾಂಪ್ರದಾಯಿಕ ಜ್ಞಾನ ಹಾಗೂ ತಿಳುವಳಿಕೆಯನ್ನು ಪುನಃಸ್ಥಾಪಿಸಿ, ಪುನರುಜ್ಜೀವನಗೊಳಿಸುವ ಯತ್ನಗಳನ್ನು ತುರ್ತಾಗಿ ಕೈಗೊಳ್ಳುವ ಅಗತ್ಯವಿದೆ; ಇಲ್ಲವಾದಲ್ಲಿ, ಅದು ಕಣ್ಮರೆಯಾಗಿ, ನಿಸರ್ಗದೊಂದಿಗೆ ನಮ್ಮ ಪೂರ್ವಿಕರು ರೂಢಿಸಿಕೊಂಡಿದ್ದ ಸಾಮರಸ್ಯ-ಸಹಬಾಳ್ವೆಯ ಜೀವನದ ಬದಲು, ಅದನ್ನು ಕೊಳ್ಳೆ ಹೊಡೆಯುವ ಆಚರಣೆಗಳು ಜಾರಿಗೆ ಬರುವ ಸಾಧ್ಯತೆ ಇದೆಯೆಂದು ಶ್ರೀಪಡ್ರೆಯವರು ಅಭಿಪ್ರಾಯ ಪಡುತ್ತಾರೆ. ಮದಕಗಳು ವೇಗವಾಗಿ ಕಣ್ಮರೆಯಾಗುತ್ತಿದ್ದು, ಅದನ್ನು ಕುರಿತಾಗಿ ಗ್ರಾಮದಲ್ಲಿರುವ ಹಿರಿಯರಿಗೆ ಮಾತ್ರ ತಿಳಿದಿದೆ ಎಂದು ಗ್ರಾಮಸ್ಥರು ನಮಗೆ ತಿಳಿಸಿದರು!

ಉಲ್ಲೇಖಗಳು:

ಹಳೇಮನೆ, ಹರೀಶ್ (೨೦೧೦) ಮಾರ್ಜಿನಲೈಸ್ಡ್ ಮದಕಾಸ್. ೧೫ ಅಕ್ಟೋಬರ್ ೨೦೧೨ರಂದು ಈ ಅಂತರ್ಜಾಲ ತಾಣದಿಂದ ಡೌನ್‌ಲೋಡ್ ಮಾಡಲಾಗಿದೆ: http://www.indiawaterportal.org/sites/indiawaterportal.org/files/Marginalised%20Madakas_Harish%20Halemane_2010.pdf

ಶ್ರೀಪಡ್ರೆ (೨೦೦೭) ಅಪ್ಪರ್ ಕ್ಯಾಚ್‌ಮೆಂಟ್, ಗೇನ್ಸ್ ಇನ್ ದ ಪ್ಲೇನ್ಸ್. ಅಕ್ಟೋಬರ್ ೨೦೧೨ರಂದು ಈ ಅಂತರ್ಜಾಲ ತಾಣದಿಂದ ಡೌನ್‌ಲೋಡ್ ಮಾಡಲಾಗಿದೆ: http://www.indiatogether.org/2007/sep/env-madaka.htm

 ಕೃತಜ್ಞತೆಗಳು:

ಕಾಸರಗೋಡು ಜಿಲ್ಲೆಯ ನೀರು ಹಾಗೂ ಕೃಷಿ-ಸಂಬಂಧಿತ ಅವಲೋಕನವನ್ನು ಒದಗಿಸಿ, ಸಾಂಪ್ರದಾಯಿಕ ಮಳೆಕೊಯ್ಲು ರಚನೆಗಳ ಮಹತ್ವವನ್ನು ಕುರಿತಾಗಿ ಮಾಹಿತಿ ನೀಡಿ-ತಿಳುವಳಿಕೆ ಮೂಡಿಸಿ, ಮದಕಗಳನ್ನು ನೋಡಲು ಗ್ರಾಮಗಳಿಗೆ ಕರೆದೊಯ್ದು, ಆ ಪ್ರದೇಶದ ಗ್ರಾಮಸ್ಥರನ್ನು ಭೇಟಿ ಮಾಡಿಸಿದ ಶ್ರೀಪಡ್ರೆಯವರಿಗೆ ಲೇಖಕರು ಅಭಾರಿಯಾಗಿದ್ದಾರೆ.

ಮೂಲ ಇಂಗ್ಲೀಷ್ ಲೇಖನ: ಶ್ರೀಮತಿ ಆರತಿ ಕೇಲ್ಕರ್-ಖಂಬೇಟೆ

(ಮೂಲ ಇಂಗ್ಲೀಷ್ ಲೇಖನವನ್ನು ಇಲ್ಲಿ ನೋಡಿ: http://www.indiawaterportal.org/articles/kerala-and-karnatakas-lesser-known-rainwater-harvesting-structures)

ಅನುವಾದ: ಸಿಡಿಎಲ್ ಸಂಸ್ಥೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*