ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಂಬರಗುಡ್ಡ ತೆಗೆದರೆ ಏನ್ ಗತಿ ಸ್ವಾಮಿ – ನೀರಿಗೆಲ್ಲಿ ಹೋಗೋದು ನಾವು?

ಅಂಬರಗುಡ್ಡಕ್ಕೂ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಿಗೂ ಎಲ್ಲಿಲ್ಲದ ನಂಟು. ಅದೊಂದು ರೀತಿಯಲ್ಲಿ ತಾಯಿ-ಮುಗುವಿನ ಸಂಬಂಧ. ಅಂದ ಹಾಗೆ, ಈ ಅಂಬರಗುಡ್ಡದ ಇಕ್ಕೆಲೆಗಳಲ್ಲಿ ಮರಾಠಿ, ಆವಿಗೆ, ಹೊನಗೋಡು ಮತ್ತು ಹೊಸೂರುಗಳೆಂಬ ನಾಲ್ಕು ಹಳ್ಳಿಗಳಿವೆ. ಈ ಎಲ್ಲಾ ಹಳ್ಳಿಗಳೂ ಕೂಡ ಆಶ್ರಯಿಸಿರುವುದು ಈ ಗುಡ್ಡದ ಬುಡದಿಂದ ಹರಿದು ಬರುವ ನೀರನ್ನೇ. ಈ ನೀರೇ ಎಲ್ಲ ಊರುಗಳ ಜೀವನಾಡಿ ಎಂಬುದು ಸರ್ವಕಾಲಿಕ ಸತ್ಯ. ಏಕೆಂದರೆ, ಇಲ್ಲಿಯ ಎಲ್ಲ ಜನರ ಜೀವಮಿಡಿಯುತ್ತಿರುವುದೇ ಈ ಅಂಬರಗುಡ್ಡದ ಮಗ್ಗಲಲ್ಲಿ. ಅಲ್ಲಿಯ ಜನ ಗದ್ದೆ, ತೋಟ ಮಾಡಿಕೊಂಡು, ಸ್ವಲ್ಪಮಟ್ಟಿಗಾದರೂ ನೆಮ್ಮದಿಯ ಬದುಕು ನೆಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಗುಡ್ಡದ ಬುಡದಿಂದ ವರ್ಷಪೂರ್ತಿ ಹರಿದು ಬರುತ್ತಿರುವ ಜೀವಗಂಗೆ. ವರ್ಷವಿಡೀ ಹರಿಯುವ ಈhhhtg ನೀರಿಗೆ ಯಾವುದೇ ರೀತಿಯಲ್ಲಿ ಕೃತಕ ವಿದ್ಯುತ್ ಬಳಸದೆ, ಅಲ್ಲಲ್ಲಿ ಬದುಗಳನ್ನ ನಿರ್ಮಿಸಿಕೊಂಡು ತಮ್ಮ ತೋಟ-ಗದ್ದೆಗಳಿಗೆ ನೀರಿನ ವ್ಯವಸ್ಥೆಯನ್ನ ಅಲ್ಲಿಯ ಜನ ಮಾಡಿಕೊಂಡಿದ್ದಾರೆ. ಇನ್ನೂ, ಈ ಊರಿನ ಜನರಿಗೆ ಕೃಷಿ ಹೊರತುಪಡಿಸಿ ಬೇರೆ ಕಸುಬು ಗೊತ್ತಿಲ್ಲ. ಅಂದಹಾಗೆ ಈ ಆಶ್ರಯದಾತೆ ಇರುವುದು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ, ಕರೂರು ಹೋಬಳಿಯಲ್ಲಿ.

ಈ ಹಿಂದೆಯೇ ಅಂಬರಗುಡ್ಡದಲ್ಲಿ ಗಣಿಗಾರಿಕೆ ನಡೆದಿತ್ತು. ಪ್ರಗತಿಪರ ಹೋರಾಟಗಾರರು, ಪರಿಸರವಾದಿಗಳು ಹಾಗೂ ಸ್ಥಳೀಯ ರೈತರ ಹೋರಾಟದಿಂದ ಯೋಜನೆ ಸದ್ಯಕ್ಕೆ ನಿಂತಿದ್ದು, ಈಗ ಹಳೆ ವಿಚಾರ. ಆದರೆ ಜನರಲ್ಲಿ ಮತ್ತೆಂದು ಗಣಿಗಾರಿಕೆ ಪ್ರಾರಂಭವಾಗುತ್ತದೋ, ಇನ್ನೆಂದು ನಮ್ಮ ಕೊರಳುಗೆ ಉರುಳು ಬೀಳುತ್ತದೋ ಎಂಬ ಭಯ ಮಾತ್ರ ಎಲ್ಲಿಲ್ಲದಂತೆ ಬೆಂಬಿಡದೆ ಕಾಡುತ್ತಿದೆ. ಮತ್ತೆಂದು ಈ ಯೋಜನೆ ಕೈಗೆತ್ತಿಕೊಳ್ಳುತ್ತಾರೋ, ತಮ್ಮನ್ನ ಇನ್ನೆಂದು ಇಲ್ಲಿಂದ ಒಕ್ಕಲೆಬ್ಬಿಸುತ್ತಾರೋ ಎಂಬ ಭಯದಲ್ಲಿ ಪ್ರತಿಕ್ಷಣ ಕಳೆಯುತ್ತಿರುವುದು ಇಂದು ನಮ್ಮ ಮುಂದಿರುವ ಕಟು ಸತ್ಯ.

ಇನ್ನೂ ಅಂಬರಗುಡ್ಡದಲ್ಲಿ ರಾಜ್ಯಕ್ಕೆ ಲೆಕ್ಕವಿಲ್ಲದಷ್ಟು ಖನಿಜ ಸಂಪತ್ತು ಸಿಗುತ್ತದೆ ಎಂಬುದನ್ನ ಸರ್ಕಾರ ಎಂದೋ ಮನಗಂಡಿದೆ. ಆ ಗುಡ್ಡದಲ್ಲಿ ಗಣಿಗಾರಿಕೆ ನಡೆಸಿದರೆ ಯಾರಿಗೂ ಹಾನಿಯಿಲ್ಲ ಎಂಬ ಮಾತನ್ನ ಸರಕಾರ ಆಡಬಹುದು. ಆದರೆ, ಅವರಿಗೆ ಇಲ್ಲಿನ ಹಳ್ಳಿ ಜನರ ಬವಣೆ ಅರ್ಥವಾಗಬೇಕಲ್ಲಾ ಹೇಳಿ! ಹಾಗೇನಾದರೂ ಸರಕಾರಕ್ಕೆ ಇಲ್ಲಿನ ಜನರ ಬಗ್ಗೆ ಕನಿಕರವಿದಿದ್ದರೆ, ಈ ಸುಂದರ ತಾಣದಲ್ಲಿ ಗಣಿಗಾರಿಕೆ ನಡೆಸಿ, ಪ್ರಕೃತಿ ಮತ್ತು ಜನರನ್ನು ಕಷ್ಟ ಕೂಪಕ್ಕೆ ತಳ್ಳುವ ದುಷ್ಕೃತ್ಯಕ್ಕೆ ಕೈ ಹಾಕುತ್ತಿರಲಿಲ್ಲ. ಗುಡ್ಡದಲ್ಲಿ ಗಣಿಗಾರಿಕೆ ನಡೆಸಿದರೆ ಜನರಿಗೆ ಏನಂತೆ – ಅದೇನು ಅವರಪ್ಪನ ಮನೆಯ ಆಸ್ತಿನಾ? ನೀರಿನ ಮೂಲ ಹೋದರೆ, ಕೆರೆನೋ ಬಾವಿನೋ ಸಿಗುತ್ತೆ ಇಲ್ಲವೆದರೆ ಬೋರ್ ತೆಗೆಸಿಕೊಳ್ಳಬಹುದು. ಶರಾವತಿ ಹೇಗೋ ಹತ್ತಿರದಲ್ಲಿದೆ ಎಂಬ ಉಡಾಫೆ ಮಾತು ರಾಜಕಾರಣಿಗಳದ್ದು. ಆದರೆ, ಗಣಿಗಾರಿಕೆ ನಡೆಸಿದರೆ, ನಿಜಕ್ಕೂ ಯಾವ ನೀರಿನ ಮೂಲವೂ ಉಳಿಯಲ್ಲ. ಇನ್ನೂ ಬೋರ್ ಕೊರೆಸಿದರೆ, ಹನಿ ನೀರು ಕೂಡಾ ಸಿಗಲ್ಲ ಎನ್ನುವ ವಿಚಾರ ಮೊದಲು ಅರಿತುಕೊಳ್ಳಬೇಕು. ಜನ ಅಂಬರಗುಡ್ಡವನ್ನು ತಮ್ಮ ಆಸ್ತಿಯೆಂದೆ ಕಾಪಾಡಿಕೊಳ್ಳುತ್ತ ಬಂದಿದ್ದಾರೆ. ಇನ್ನು, ಬೋರ್ ಕೊರೆಸಿದರೆ ಏಕೆ ಸಿಗಲ್ಲ? ಎಂಬ ಪ್ರಶ್ನಗೆ ಬೋರ್ ಕೊರೆಸಿದ ರೈತರು ಮತ್ತು ಕೊರೆಯುವ ತಜ್ಞರು ನೀಡುವ ಉತ್ತರ ಹೀಗಿದೆ, “ಬೋರ್ ಕೊರೆಯುವಾಗ ತಳ ಭಾಗ ಕೊರೆದಂತೆಲ್ಲ, ಗಟ್ಟಿಮಣ್ಣು ಕಲ್ಲಿನ ಸೆಲೆ ಸಿಗಬೇಕಾಗುತ್ತದೆ. ಆದರೆ ಇಲ್ಲಿರುವ ಯಾವುದೇ ಪ್ರದೇಶದ ತಳಭಾಗದಲ್ಲಿ ಕಲ್ಲುಗಳೇ ಸಿಗಲ್ಲ,” ಎನ್ನುತ್ತಾರೆ. ಇನ್ನೊಂದು ವಿಚಾರವ ನಾವು ಗಮನಿಸಬೇಕು. ಈ ಕರೂರು ಹೋಬಳಿಯಲ್ಲಿ ಎಲ್ಲೂ ಕೂಡ ಒಂದು ಬೋರ್ ಸಿಗಲ್ಲ. ಹಾಗೆ ಬೋರ್ ತೆಗೆಯವ ಸಾಹಸಕ್ಕೆ ಕೈಹಾಕಿದ ಅದೆಷ್ಟೋ ಮಂದಿ ನೀರು ಸಿಗದೆ ಕೈಸುಟ್ಟುಕೊಂಡಿದ್ದಾರೆ.

ಅಂಬರಗುಡ್ಡೆಯ ಅಕ್ಕಪಕ್ಕದ ಹಳ್ಳಿಗಳ ಸಾಮಾಜಿಕ ಸ್ಥಿತಿಗತಿ
ಪಶ್ಚಿಮಘಟ್ಟದ ಬುಡದಲ್ಲಿರುವ ಈ ಹಳ್ಳಿಗಳ ಜನ ಪ್ರಮುಖ ಅವಲಂಬಿಸಿರುವುದೇ ಕೃಷಿ. ಭತ್ತ ಮತ್ತು ಅಡಿಕೆ ಇಲ್ಲಿನ ಮುಖ್ಯ ಬೆಳೆ. ಇನ್ನು ಅಲ್ಪ ಪ್ರಮಾಣದಲ್ಲಿ ಶುಂಠಿ, ಕಬ್ಬು, ಗೇರುಬೀಜ, ಇತ್ಯಾದಿ ಬೆಳೆದರೂ ಸಹ, ಅವ್ಯಾವವೂ ಅವರಿಗೆ ನಂಬಿಕಸ್ಥ ಮತ್ತು ಶಾಶ್ವತ ಬೆಳೆಗಳಲ್ಲ. ಒಂದು ರೀತಿಯಲ್ಲಿ, ಇವುಗಳನ್ನು ತುಟಿ ಹೊರಗಿನ ಹಲ್ಲು ಎಂದೇ ಭಾವಿಸಿದ್ದಾರೆ. ಇಲ್ಲಿ ಅಡಿಕೆ ಮತ್ತು ಭತ್ತ ಪ್ರಮುಖ ಬೆಳೆಯಾದ್ದರಿಂದ, ಇವರಿಗೆ ನೀರೇ ಜೀವನಾಡಿ. ಈ ಎರೆಡು ಬೆಳೆಗಳಿಗೂ ಸಹ ಸ್ವಾಭಾವಿಕವಾಗಿ ಅತೀ ಹೆಚ್ಚು ನೀರು ಬೇಕಾಗುತ್ತದೆ. ಇನ್ನು ಅಡಿಕೆ ಭತ್ತವ ಹೊರತುಪಡಿಸಿ, ಕಡಿಮೆ ನೀರಿನಲ್ಲಿ ಬೆಳೆಯುವ ಅಥವಾ ಒಣ ಬೇಸಾಯ ಪದ್ಧತಿ ಅನುಸರಿಸಬಹುದಲ್ಲ ಎಂದು ಹಲವರು ಬಿಟ್ಟಿ ಸಲಹೆ ನೀಡಬಹುದು. ಆದರೆ, ಅಲ್ಲಿಯ ಜನ ಅವರಿಗೆ ನೀಡುವು ಉತ್ತರ ‘ಸ್ವಾಮಿ, ಅವೆಲ್ಲಾ ಪ್ರಯೋಗ ಮಾಡಿಬಿಟ್ಟೇ ಕೊನೆಗೆ ಈ ದಾರಿ ಹಿಡಡಿದಿದ್ದೇವೆ’ ಎನ್ನುತ್ತಾರೆ. ಅದು ಸತ್ಯ ಕೂಡ ಇರಬಹುದು. ಏಕೆಂದರೆ, ಈ ಭಾಗದಲೆಲ್ಲ ಕೆಂಪು ಮಣ್ಣು ಹೆಚ್ಚಾಗಿರುವುದುರಿಂದ, ಅಲ್ಲಿ ಅಡಿಕೆ ಮತ್ತು ಭತ್ತ ಹೊರತುಪಡಿಸಿ ಬೇರೆ ಬೆಳೆಗೆ ಅಷ್ಟು ಸೂಕ್ತವಲ್ಲೆಂಬದು ಕೆಲ ತಜ್ಞರ ಅಭಿಪ್ರಾಯ.

fvdಆರ್ಥಿಕ ಸ್ಥಿತಿಗತಿ
ಇಲ್ಲಿರುವ ಎಲ್ಲರೂ ಬಡವರೆಂದ ಹೇಳಲಾಗದಿದ್ದರೂ, ಸ್ಥಿತಿವಂತರು ಬೆರಳೆಣಕೆಯಷ್ಟು ಮಂದಿ ಮಾತ್ರ. ಉಳಿದಂತೆ ಬಡವರ ಸಂಖ್ಯೆಯೇ ಅಧಿಕ. ಬಡತನಕ್ಕೆ ಕಾರಣ ಹಲವು. ಇವರೆಲ್ಲರೂ ಮೊದಲು ಒಡೆಯರ ಜಮೀನಿನಲ್ಲಿ ದುಡಿದು ಜೀವನ ಸಾಗಿಸುತ್ತಿದ್ದವರು. ‘ಉಳುವನೆ ಹೊಲದೊಡೆಯ’ ಕಾನೂನು ಜಾರಿಗೆ ಬಂದ ನಂತರ, ಒಡೆಯನಿಂದ ಸಿಕ್ಕ ತುಂಡು ಭೂಮಿಯಲ್ಲಿ ಇಷ್ಟು ದಿನ ಜೀವನ ಸಾಗಿಸುತ್ತಿದ್ದವರು. ಹೀಗೆಲ್ಲಾ ಸಾಮಾಜಿಕವಾಗಿ ತರೆದುಕೊಳ್ಳುತ್ತಿರುವ ಹೊತ್ತಿಗೆ, ತಾವು ನೆಟ್ಟ ಅಡಿಕೆ ಮರ ಫಸಲು ಕೊಡಬಹುದೆಂದು ಕಾಯುತ್ತ ಕುಳಿತ ಮಂದಿ ಜಮೀನು ಒಡೆಯನದ್ದೇ ಆಗಲಿ ಅದಕ್ಕೆ ನೀರು ಮಾತ್ರ ಅಂಬರಗುಡ್ಡದ ಒಡತಿಯದ್ದೆ ಬೇಕೆನ್ನುವುದು ಕಟು ಸತ್ಯ.

ಕಡಿಮೆ ನೀರಲ್ಲಿ ಬೆಳೆಯುವ ಬೆಳಗಳಿಗೆ ಇವರು ಬದಲಾಗಬಹುದೆ?
ಕಡಿಮೆ ಅವಧಿ ಮತ್ತು ಕಡಿಮೆ ನೀರಲ್ಲಿ ಬೆಳೆಯುವ ಶುಂಠಿ, ಕಲ್ಲಂಡಿಗಿ, ಕುಂಬಳ ಮುಂತಾದ ಬೆಳಗಳನ್ನ ಇಲ್ಲಿಯ ಜನ ಈಗಾಗಲೇ ಬೆಳೆದಿದ್ದಾರೆ. ಆದರೆ, ಅವುಗಳೆಲ್ಲವೂ ತಮಗೆ ಆದಾಯ ತಂದು ಕೊಡುತ್ತಿಲ್ಲ. ಅವುಗಳಲ್ಲಿ, ಲಾಭಕ್ಕಿಂತ ಕೈಸುಟ್ಟುಕೊಂಡಿದ್ದೇ ಹೆಚ್ಚು ಎನ್ನುತ್ತಾರೆ. ಇವರೆಲ್ಲರೂ ಜಮೀನು ಸಿಕ್ಕ ನಂತರ, ಇತ್ತೀಚೆಗೆ ಅಡಿಕೆ ಗಿಡ ನೆಟ್ಟು ಅಡಿಕೆಯನ್ನೇ ತಮ್ಮ ಭವಿಷ್ಯ ಎಂದು ಕನಸು ಕಾಣುತ್ತಿದ್ದಾರೆ. ಅಡಿಕೆ ಮರಗಳು ಕೂಡ ಹಸನ್ಮುಖವಾಗಿ ಬೆಳೆದು ತನ್ನ ಒಡೆಯನಿಗೆ ಆಸರೆಯಾಗುತ್ತೇನೆ ಎಂದು ಹುಮ್ಮಸ್ಸಿನಿಂದ ಹೇಳುತ್ತಿರುವಾಗ, ಗಣಿಗಾರಿಕೆಯಿಂದ ನೀರಿನ ನಾಶದೊಂದಿಗೆ ಬಡಜನರ ಜೀವವನ್ನು ಕೂಡ ನಾಶ ಮಾಡಿ, ಜನತೆಯ ಮೇಲೆ ಸಮಾಧಿ ಕಟ್ಟಿದರೆ ಹೇಗೆ?

ಮರಾಠಿ ಆವಿಗೆ ಊರುಗಳ ಚಿತ್ರಣ
ಈ ಎರಡು ಊರುಗಳು ಅಂಬರಗುಡ್ಡಗೆ ಅಂಟಿಕೊಂಡೇ ಇರುವ ಊರುಗಳು. ಈ ಊರುಗಳಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕ ದುಸ್ತರ. ಇಲ್ಲಿ ಜೈನ ಮತ್ತು ಗುಡಬಿ ಸಮುದಾಯದವರು ವಾಸ ಮಾಡುತ್ತಿದ್ದಾರೆ. ಆವಿಗೆ ಊರಿನ ಸ್ಥಿತಿಗತಿಯಂತೂ ತುಂಬಾ ಹೀನಾಯ. ಇಲ್ಲಿ ಬ್ಯಾಟರಿ ಹಾಕಿಕೊಂಡು ಹುಡುಕಿದರೂ ಕೂಡ, ಹತ್ತನೇ ತರಗತಿ ಪಾಸ್ ಆದ ಒಬ್ಬನೇ ಒಬ್ಬ ಯುವಕ ಸಿಗುವುದು ಕಷ್ಟ. ಈ ನಾಲ್ಕು ವರ್ಷದ ಮೊದಲು, ಗುಡಿಸಿಲಲ್ಲೇ ಬದುಕುತ್ತಿದ್ದ ಇವರೆಲ್ಲರೂ, ಸರ್ಕಾರದ ಆಶ್ರಯ ಯೋಜನೆ ಫಲವಾಗಿ ಸೂರು ನಿರ್ಮಿಸಿಕೊಂಡಿದ್ದಾರೆ.

ಇನ್ನು ಅಂಬರಗುಡ್ಡದ ಇಕ್ಕೆಲೆಗಳಲ್ಲಿ ಗಣಿಗಾರಿಕೆ ನಡೆದಾಗ, ಗಣಿಗಾರಿಕೆಯ ಮ್ಯಾಂಗನಿಸ್ ಕಣಗಳೆಲ್ಲಾ ಮರಾಠಿ ಊರಿನ ಹಳ್ಳಕೊಳ್ಳದಲ್ಲಿ ಕುಂತು, ಅವುಗಳಲ್ಲಿ ಮಳೆಗಾಲದ ನೀರು ಹರಿಯಲು ಜಾಗವಿಲ್ಲದೆ, ರೈತರ ಬೆಳೆಗಳ ಮೇಲೆಯೇ ನೀರು ಹರಿದು ಅವರೆಲ್ಲಾ ಒಂದು ವರ್ಷದ ಬೆಳೆಯನ್ನು ತ್ಯಜಿಸಿದ್ದು ಈಗ ಇತಿಹಾಸ. ಹಳ್ಳಿಗಳಿಗೆ ಒಂದು ಸರಿಯಾದ ರಸ್ತೆ ಮಾಡಲು ಮೀನಾಮೇಶ ಎಣಿಸುವ ಸರ್ಕಾರ, ಗಣಿಗಾರಿಕೆ ಎಂದಾಕ್ಷಣ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಗುಡ್ಡದ ತುದಿವರೆಗೆ ರಸ್ತೆ ನಿರ್ಮಿಸಿದೆ; ಇದರಲ್ಲೇ ಗೊತ್ತಾಗುತ್ತದೆ ರೈತರೆಂದರೆ ಇವರಿಗೆ ಎಷ್ಟು ನಿರ್ಲಕ್ಷ್ಯ ಎಂಬುದು.

ಹೊನಗೋಡು, ಹೊಸೂರು
ಗುಡ್ಡದ ಇನ್ನೊಂದು ಬದಿಯಲ್ಲಿ ಇರುವ ಈ ಊರುಗಳು ಸ್ವಾಭಾವಿಕವಾಗಿ ಒಂದೇ ರೀತಿಯ ಹವಾಗುಣವನ್ನ ಹೊಂದಿದೆ. ಇಲ್ಲಿ ಮುಖ್ಯವಾಗಿ ಈಡಿಗ, ಜೈನ ಸಮುದಾಯವರಿದ್ದಾರೆ. ಸುಮಾರು ಎಪ್ಪತ್ತು ಮನೆಗಳಿದ್ದು, ಇವರೆಲ್ಲರೂ ಕೂಡಿಯವ ನೀರಿಗೂ ಸಹ ಅಂಬರಗುಡ್ಡದ ಬಳಿಯಿರುವ ಹಳ್ಳದ ಝರಿ ನೀರನ್ನೆ ಅವಲಂಬಿಸಿರುತ್ತಾರೆ.

ಆಹಾರ ಕ್ರಮ
ಇಲ್ಲಿ ಸಸ್ಯಹಾರಿ ಮತ್ತು ಮಿಶ್ರಹಾರಿ ಎರಡು ಬಗೆಯ ಜನರು ವಾಸವಾಗಿದ್ದು, ಜೈನರು ಸಾಧಾರಣ ಸಸ್ಯಹಾರಿಯಾಗಿದ್ದಾರೆ. ಇನ್ನುಳಿದಂತೆ, ಈಡಿಗ ಮತ್ತು ಗುಡಬಿ ಜನಾಂಗದವರು ಮಾಂಸಹಾರಿಗಳಾಗಿದ್ದಾರೆ. ಇನ್ನು ಇಲ್ಲಿಯ ಹಳ್ಳಗಳಲ್ಲಿ ವರ್ಷಪೂರ್ತಿ ನೀರು ಹರಿಯುವುದರಿಂದ, ಸಾಕಷ್ಟು ಪ್ರಮಾಣದಲ್ಲಿ ಮೀನು, ಏಡಿ, ಆಮೆ ಇತ್ಯಾದಿಗಳಿವೆ. ಇವುಗಳು ಇರುವುದರಿಂದ ಮಾಂಸಹಾರಿಗಳು ಅವನ್ನೇ ಹಿಡಿದು ತಿನ್ನುತ್ತಾರೆ. ಉಳಿದಂತೆ, ಸಮುದ್ರ ಮೀನುಗಳಿಗೆ ಅವರು ಅವಲಂಬಿಸಿಲ್ಲ. ಗುಡ್ಡ ತೆಗೆಯುವುದರಿಂದ ನೀರಿನ ನಾಶ ಮತ್ತು ಅದೆಷ್ಟೋ ಜಲವಾಸಿಗಳ ನಾಶವಾಗಿ, ಅವರ ಆಹಾರಕ್ರಮವೂ ಬದಲಾಗಬಹುದು.

ಅಕೇಶಿಯಾ ನೆಟ್ಟು ಸೌಂದರ್ಯ ಹಾಳುಗೆಡವಿದ ಅರಣ್ಯ ಇಲಾಖೆ
ಗುಡ್ಡದ ಸುತ್ತಮುತ್ತ ವಾತಾವರಣ ಸಾಕಷ್ಟು ತಂಪಾಗಿದ್ದಲ್ಲದೇ, ಸಾಕಷ್ಟು ದಟ್ಟವಾದ ಕಾಡಿದ್ದು, ವರ್ಷಪೂರ್ತಿ ಮರಗಳು ಹಚ್ಚ ಹಸಿರಿಂದ ಕೂಡಿರುತ್ತವೆ. ಹೀಗಿರುವಾಗ, ಗುಡ್ಡದಲ್ಲಿ ಅರಣ್ಯ ಇಲಾಖೆ ಅಕೇಶಿಯಾ ನೆಟ್ಟು ಗುಡ್ಡದ ಸೌಂದರ್ಯಕ್ಕೆ ಧಕ್ಕೆ ತಂದಿದ್ದು, ಅದು ‘ಮುದುಕಿಗೆ ಶೃಂಗಾರ ಮಾಡಿದಂತಾಗಿದೆ’ ಎನ್ನುವುದು ಸ್ಥಳೀಯರ ಅಭಿಪ್ರಾಯ. ವೈಜ್ಞಾನಿಕವಾಗಿ ನೋಡುವುದಾದರೆ, ಅಕೇಶಿಯಾಕ್ಕೆ ಸಾಕಷ್ಟು ತಳಭಾಗದಲ್ಲಿರುವ ನೀರನ್ನು ಹೀರಿಕೊಳ್ಳುವ ಶಕ್ತಿ ಇರುವುದರಿಂದ, ಈ ಹಳ್ಳಗಳ ನೀರಿಗೆ ಪರಿಣಾಮ ಬೀರಿತ್ತದೆ. ನೈಸರ್ಗಿಕವಾಗಿ ಅಗಾಧ ಪರಿಸರ ಇರುವಾಗ, ಅರಣ್ಯ ಇಲಾಖೆ ಅದನ್ನು ಉಳಿಸುವ ಪ್ರಯತ್ನ ಮಾಡಿದರೆ ಒಳಿತು.dfvdvgfh

ಗಣಿಗಾರಿಕೆ ಭೀತಿಯಲ್ಲಿ ಜಮೀನು ಮಾರಲು ಹೊರಟ ಜನ
ಮುಂದೆಂದಾರೂ ಮತ್ತೆ ಗಣಿಗಾರಿಕೆ ನಡೆಯಬಹುದೆಂಬ ಭೀತಿಯಲ್ಲಿ ಕೆಲವು ಜನ ತಮ್ಮ ಸಮೃದ್ಧ ಜಮೀನನ್ನು ಮಾರಲು ಹೊರಟಿದ್ದಾರೆ. ಈ ಹಿಂದೆಯೇ, ಮರಾಠಿ ಊರಿನಲ್ಲಿ ಬೆಳೆ ಕಳೆದುಕೊಂಡ ಜನರ ಪರಿಸ್ಥಿಯನ್ನು ನೋಡಿ, ಏಷ್ಟೋ ಜನ ಈ ಪ್ರಯತ್ನ ಮಾಡಿದ್ದುಂಟು. ಇದನ್ನು ಬಿಟ್ಟು ಎಲ್ಲಾದರೂ ತುಂಡು ಭೂಮಿ ತೆಗೆದುಕೊಳ್ಳೋಣವೆಂಬ ಇಂಗಿತ ಅವರದು. ಆದರೆ ಆ ಜಮೀನನ್ನ ಖರೀದಿಸಲು ಯಾರೂ ಕೂಡ ಮನಸ್ಸು ಮಾಡಿಲ್ಲವೆಂಬುದು ಸತ್ಯ.

ಸಂಪ್ರದಾಯಿಕ ನಂಬಿಕೆಗೆ ಧಕ್ಕೆ
ಮರಾಠಿ ಜನ ವರ್ಷಕೊಮ್ಮೆ ಗುಡ್ಡದಲ್ಲಿರುವ ಜಟಗರಾಯ ದೇವರಿಗೆ ತಮ್ಮ ಬೆಳೆಯನ್ನ ರಕ್ಷಿಸು ಮತ್ತು ತಮ್ಮನ್ನ ಕಾಪಾಡು, ಬರಗಾಲವಾಗದಂತೆ ಸರಿಯಾದ ರೀತಿಯಲ್ಲಿ ನೀರನ್ನು ದಯಪಾಲಿಸು ಎಂದು ಪ್ರತಿವರ್ಷ ದೀಪರಾಧನೆ ಮಾಡುವುದುಂಟು. ನೀರು, ಗುಡ್ಡವನ್ನೇ ದೇವರೆಂದು ಪೂಜಿಸುವ ಜನ ತಮ್ಮ ಆಸ್ತಿ ಗುಡ್ಡ, ನೀರನ್ನೆ ಕಳೆದುಕೊಂಡ ಅವರ ಬದುಕು ಊಹಿಸಿಕೊಳ್ಳಲು ಅಸಾಧ್ಯ.

ಜೀವವೈವಿಧ್ಯ ತಾಣಕ್ಕೆ ಸಮ್ಮತಿ
ಪಶ್ಚಿಮಘಟ್ಟವನ್ನ ಜೀವವೈವಿಧ್ಯ ತಾಣವೆಂದು ಗುರುತಿಸಬೇಕು ಎಂದು ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ, ಹಾಗಾದರೂ ಮಾಡಿದರೆ ಇಲ್ಲಿ ಗಣಿಗಾರಿಕೆ ನಡೆಯದೆ ತಮ್ಮ ನೀರಿಗೆ ಧಕ್ಕೆಯಾಗುವುದಿಲ್ಲ ಎಂಬ ಆಶಯ ಜನರದು. ಕಸ್ತೂರಿರಂಗನ್ ವರದಿ ಪ್ರಕಾರ, ಇಂಥ ತಾಣಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಇಲ್ಲವೆಂದು ಶಿಫಾರಸ್ಸು ಮಾಡಿರುವುದರಿಂದ, ಅದನ್ನು ಜೀವವೈವಿಧ್ಯ ತಾಣ ಎಂದಾದರೂ ಗುರುತಿಸಿದಿರೆ, ಜೀವಜಲ ಅವರಿಗೆ ಉಳಿದು, ನೆಮ್ಮದಿಯ ಜೀವನ ನಡೆಸಬಹುದು.

ಇಲ್ಲಿಗುಡ್ಡ ತೆಗೆಯುವುದರಿಂದ, ಅಲ್ಲಿ ಗುಡ್ಡಮಾತ್ರ ನಾಶವಾಗುವುದಿಲ್ಲ. ಗುಡ್ಡದ ಸುತ್ತಮುತ್ತಲಿನ ನೂರಾರು ಎಕರೆ ಬೆಲೆಬಾಳುವ ಕಾಡು ಕೂಡ ಗಣಿಗಾರಿಕೆಯ ಭೂತದ ಕೆನ್ನಾಲಿಗೆಗೆ ಸಿಲುಕಿ ನಾಶವಾಗುವುದರಲ್ಲಿ ಎರೆಡು ಮಾತಿಲ್ಲ. ಕಾಡು ನಾಶವಾದ ಮೇಲೆ ಇನ್ನೆಲ್ಲಿಂದ ಸಿಗಲಿದೆ ಹೇಳಿ ನೀರಿನ ಸೆಲೆ! ಹೀಗೆ ಅಲ್ಲಿ ಬೋರ್ ಅಂತೂ ಆಗದ ಮಾತು. ಗುಡ್ಡದ ಅಬ್ಬಿ ನೀರನ್ನು ಕಳೆದುಕೊಂಡರೆ ಜನ ಹೇಗೆ ಬದುಕ್ಯಾರೋ, ಹೇಗೆ ಬೆಳೆಗಾರರು ಬೆಳೆ ಬೆಳೆದಾರೋ, ನೀವೆ ಹೇಳಿ! ಸರಕಾರ ಅಲ್ಲಿನ ಗುಡ್ಡವನ್ನು ಮಾತ್ರ ನಾಶಗೊಳಿಸುತ್ತಿಲ್ಲ. ಪರಿಸರ, ಅಂತರ್ಜಲಜಲಚರ ವಾಸಿಗಳು, ಇದೆಲ್ಲದರ ಜೊತೆಗೆ, ಜನರ ಜೀವನವನ್ನು ಬಲಿಪಡೆಯುವ ಹುನ್ನಾರವೆನಾದರೂ ಅಡಗಿದೆಯಾ? ಹಿಂದಯೇ ಈ ಯೋಜನೆ ಕೈಗೆತ್ತಿಕೊಂಡಿದ್ದ ಸರಕಾರ, ಮುಂದೆ ಇದನ್ನ ಸಾಕಾರಗೊಳಿಸಿಕೊಳ್ಳಲ್ವಾ? ಇದು ಎಲ್ಲರ ಮುಂದಿರುವ ಪ್ರಶ್ನೆ.

ಇದು ಬರೀ ಮನುಷ್ಯರ ಕಥೆಯಾಯಿತು. ಪ್ರಾಣಿಗಳ ಬವಣೆ ಕೇಳುವವರು ಯಾರು ಸ್ವಾಮಿ? ಅಂಬರಗುಡ್ಡ ಕಾಡು ನೂರಾರು ಜಾತಿಯ ಪ್ರಾಣಿಗಳ ಆವಾಸ ಸ್ಥಾನ. ಸಾಕಷ್ಟು ಪ್ರಾಣಿಗಳು ಇಲ್ಲಿ ಬೀಡು ಬಿಟ್ಟಿರಲು ಇಲ್ಲಿನ ನೀರು ಮುಖ್ಯ ಕಾರಣವಲ್ಲವೇ?

ಇಂತಹದಕ್ಕೆಲ್ಲಾ ಅವಕಾಶ ಕೊಡುವ ಮುನ್ನ, ಸರ್ಕಾರ ಸ್ವಲ್ಪವಾದರೂ ಇತ್ತ ನೋಡಬೇಕಲ್ಲವೇ ? ಜಲಮೂಲ ನಾಶಗೊಳಿಸಿ, ಜನತೆ ಮೇಲೆ ಜೀವಂತ ಸಮಾಧಿ ಕಟ್ಟುವುದು ಎಷ್ಟು ಸರಿಯೆಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು.

ಚಿತ್ರ-ಲೇಖನ: ಜಗದೀಶ್ ಹೊನಗೋಡು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*