ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಡಲ ತಡಿಯ ಕವಚ ಕಾಂಡ್ಲಾ

kandal (7)ಪರಿಸರ ಪ್ರಿಯ “ಮ್ಯಾಂಗ್ರೋವ” ಸಸ್ಯ (ಕಾಂಡ್ಲಾ) ಸಕಲ ರೀತಿಯಲ್ಲೂ ಹೊಸ ನಿರೀಕ್ಷೆ ಮೂಡಿಸಿದೆ. ಮ್ಯಾಂಗ್ರೋವ ಸಸ್ಯ ವಿಶೇಷ ವರ್ಗಕ್ಕೆ ಸೇರಿದ ಸಸ್ಯ ಸಂಕುಲ. ಆದ್ರೆ, ಈ ಕಾಂಡ್ಲಾ ಮೊದಲಿನಿಂದಲೂ ಮಾನವನ ದುರ್ಬಳಕೆ, ತಿರಸ್ಕಾರಕ್ಕೆ ಒಳಗಾದ ಸಸ್ಯ.

ಕಾಂಡ್ಲಾ ಬೇರೆಲ್ಲಾ ಸಸ್ಯಗಳಿಗಿಂತ ಗಟ್ಟಿಮುಟ್ಟಾದ ಬೇರು, ಸದಾ ಕಾಲ ಚಿಗುರುತ್ತಾ ಪ್ರಾಕೃತಿಕ ಪಕ್ಷಿಧಾಮವಾಗಿ, ವಿಭಿನ್ನವಾಗಿ ಗಮನ ಸೆಳೆಯುತ್ತದೆ. ಹಚ್ಚಹಸಿರಿನ ಬಿಂಬವಾಗಿ ನೋಡುಗರನ್ನು ಅತ್ಯಾಪ್ತವಾಗಿ ಆಕರ್ಷಿಸುತ್ತದೆ. ತಟ್ಟನೆ ಕಣ್ಸೆಳೆದು ಬಿಡುವಷ್ಟು ದಟ್ಟನೆಯ ಮೋಹಕ ಸಸ್ಯರಾಶಿ ಇದು. ಇದರ ಹುಟ್ಟು, ಬೆಳವಣಿಗೆ, ಉಪಯೋಗ, ಜೊತೆಗೆ ಅದರ ಸೌಂದರ್ಯ, ಎಲ್ಲವೂ ಆಕರ್ಷಕ.

ರಾಜ್ಯದಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಿನ್ನೀರಿನ ಪ್ರದೇಶದಲ್ಲಿ ಕಾಂಡ್ಲಾ ಕಾಡುಗಳು ಕಂಡು ಬರುತ್ತವೆ. ಕರಾವಳಿ ಜಿಲ್ಲೆಗಳ ಉದ್ದಗಲಕ್ಕೂ ಅಲ್ಲಲ್ಲಿ ವಿವಿಧ ಪ್ರಭೇದಗಳ ಕಾಂಡ್ಲಾ ಇಂದು ಅಭಿವೃದ್ಧಿ ಕಾಣುತ್ತಿದೆ.

kandal 5ಇತ್ತೀಚಿನ ದಿನಗಳಲ್ಲಿ, ಅಬ್ಬರದ ಕಡಲ ತೆರೆಗಳು ಕಡಲ ತೀರವನ್ನೆಲ್ಲ ಕಬಳಿಸುತ್ತಿವೆ. ನದಿ ಮುಖಜ ಭೂಮಿ ಸವೆತಕ್ಕೂ ಪ್ರಾಕೃತಿಕವಾಗಿ ಸಿಗಬೇಕಾದ ರಕ್ಷಣೆ ಪ್ರಸ್ತುತ ಅನಿವಾರ್ಯವೆನಿಸಿದೆ. ಕಡಲ ತೀರಕ್ಕೆ ತಂದು ರಾಶಿ ಹಾಕಿರುವ ಬೃಹತ್ ಕಲ್ಲು ಬಂಡೆಗಳೆಲ್ಲ ವರ್ಷಂಪ್ರತಿ ಕಡಲಿನ ಪಾಲಾಗುತ್ತಿವೆ. ಕೋಟ್ಯಾಂತರ ರೂಪಾಯಿ ಹಣ ಕಡಲಲೆಗಳಿಗೆ ಸಿಕ್ಕಿ ವ್ಯರ್ಥವಾಗುತ್ತಿವೆ. ಕಡಲ ತಡಿಯ ಜನಕ್ಕೆ ತಲೆನೋವು ತಂದಿರುವ ಸಮಸ್ಯೆಗೆ ಸರ್ಕಾರವಂತೂ ಈವರೆಗೆ ಯಾವುದೇ ಶಾಶ್ವತ ಪರಿಹಾರವನ್ನು ಒದಗಿಸಿಲ್ಲ. ಆದರೆ, ಸಂಶೋಧಕರ ಪ್ರಕಾರ, ಕಡಲ್ಕೊರೆತದಂತಹ ಸಮಸ್ಯೆಗೆ ಪರಿಹಾರೋಪಾಯವಾಗಿ ಭೌಗೋಳಿಕವಾಗಿ ಕರಾವಳಿ ತಡಿಯಲ್ಲಿ ಕಾಂಡ್ಲಾದ ಹಸಿರು ಕವಚ ಅಭಿವೃದ್ಧಿ ಪಡಿಸುವುದು ಏಕೈಕ ಮಾರ್ಗವೆಂಬುದು ಇದೀಗ ಸಾಬೀತಾಗುತ್ತಿದೆ. ನದಿ ಮುಖಜ ಭೂಮಿಗಳ, ನದಿ ದಡಗಳ, ಕುದ್ರುಗಳ ರಕ್ಷಣೆಯಲ್ಲಿ ಪ್ರಕೃತಿಯ ವಿಶಿಷ್ಟ ಸಸ್ಯವರ್ಗ ತನ್ನ ಅಗತ್ಯತೆಯ ಅರಿವನ್ನು ಗೊತ್ತು ಪಡಿಸುತ್ತಿದೆ.

ಕಾಂಡ್ಲಾಗಳು ತನ್ನ ಹುಟ್ಟು ಬೆಳವಣಿಗೆಯಲ್ಲಿ ಎಲ್ಲಾ ಸಸ್ಯವರ್ಗಕ್ಕಿಂತ ವಿಶಿಷ್ಟ ಸ್ವರೂಪವನ್ನು ಹೊಂದಿದ ಸ್ವಾವಲಂಬಿ ಸಸ್ಯ. ಈ ಸಸ್ಯ ರೈಸೊಪೊರಸಿಯ ಕುಟುಂಬಕ್ಕೆ ಸೇರಿದ್ದು, ರೈಸೊಪೊರ ಸಸ್ಯ ಪ್ರಭೇದವಾಗಿದೆ. ಮಾನ್ಯತೆ ಪಡೆದ ನೂರಾಹತ್ತು ಜಾತಿಗಳಲ್ಲಿ, ಹದಿನಾರು ಕುಟುಂಬ ಹೊಂದಿವೆ. ಇವುಗಳಲ್ಲಿ ಐವತ್ತನಾಲ್ಕು ಜಾತಿಗಳನ್ನು ನಿಜವಾದ ಮ್ಯಾಂಗ್ರೋವ ಎಂದು ದೃಢೀಕರಿಸಲಾಗಿದೆ. ವಿವಿಧ ವರ್ಗಪ್ರಬೇಧವನ್ನು ಹೊಂದಿರುವ ಈ ಕಾಂಡ್ಲಾಗಳು ಮೇಲ್ನೋಟಕ್ಕೆ ಎಲ್ಲವೂ ಸಮರೂಪಿಯಾಗಿಯೇ ಕಾಣುತ್ತವೆ. ಎಂತಹ ಕಠಿಣ ವಾತಾವರಣದಲ್ಲಿಯೂ ತನ್ನ ಅಗತ್ಯವನ್ನು ಉಳಿಸಿಕೊಳ್ಳುವ ಶಕ್ತಿ ಕಾಂಡ್ಲಾಕ್ಕಿದೆ. ಇದರ ಸಂತತಿ ವಿಕಸನವಾಗುವ ಪರಿಯೇ ವಿಶಿಷ್ಟ. ನಮ್ಮಲ್ಲಿನ ಕಾಂಡ್ಲಾ ಮರದಲ್ಲಿ ಹೂವಿನಿಂದ ಬಿಡುವ ಕಾಯಿ, ಕೋಡುಗಳೇ ಈ ಸಸ್ಯದ ಪರಂಪರೆಯ ಕೊಂಡಿ. ಮರದಿಂದ ಬೇರ್ಪಟ್ಟು, ನೀರಿನ ತಳದ ಕೆಸರಿಗೆ ಅಡಿಮುಖವಾಗಿ ಬೀಳುವ ಕೋಡುಗಳು, ಗಿಡಗಳಾಗಿ ರೂಪ ಪಡೆಯುತ್ತವೆ. ಕೋಡಿನ ತುದಿಯ ಬೇರುಗಳು ಹುಟ್ಟಿಕೊಳ್ಳುತ್ತಿದ್ದಂತೆ, ಇನ್ನೊಂದು ತುದಿಯಲ್ಲಿ ಹಸಿರು ಮೊಳಕೆಯೊಡೆಯುತ್ತದೆ. ಇಂತಹ ಕೋಡುಗಳನ್ನು ಸಂಗ್ರಹಿಸಿ, ಅರಣ್ಯ ಇಲಾಖೆ ಅಲ್ಲಲ್ಲಿ ಕಾಂಡ್ಲ ನರ್ಸರಿ ಆರಂಭಿಸಿದೆ.

ನದಿಯ ಇಕ್ಕೆಲಗಳಲ್ಲಿ ಬೆಳೆದು ನಿಲ್ಲುವ ಈ ಕಾಂಡ್ಲಾಗಳ ಬೇರುಗಳು ತುಂಬಾ ಆಳಕ್ಕಿಳಿದಿರುತ್ತವೆ. ನೀರಿನಿಂದ ಮೇಲೆ ಹಾಗೂ ನೀರಿನ ಆಳದಲ್ಲಿರುವ ಈ ಬೇರುಗಳ ನಡುವೆ ಜಲಚರಗಳು ಭಾರಿ ಪ್ರಮಾಣದಲ್ಲಿ ಬೀಡುಬಿಟ್ಟಿರುತ್ತವೆ. ಹಕ್ಕಿಗಳ ಹಿಕ್ಕೆಗಳು ಜಲಚರಗಳಿಗೆ ಆಹಾರವಾಗುತ್ತಿದೆ. ಏಡಿ, ಸಿಗಡಿ, ಚಿಪ್ಪು, ಮೀನುಗಳು ಯಥೇಚ್ಛವಾಗಿ ಇಲ್ಲಿ ವಾಸಯೋಗ್ಯವಾಗಿಸಿಕೊಳ್ಳುತ್ತವೆ. ಹಕ್ಕಿ ಪಕ್ಷಿಗಳ ಸಂಸಾರ ಬೆಳೆಸಲು, ವಂಶಾಭಿವೃದ್ಧಿ ನಡೆಸಲು ಇಲ್ಲಿಹೆಚ್ಚಾಗಿ ವಲಸೆ ಬಂದಿರುತ್ತವೆ.

ಈ ಸಸ್ಯ ಹೂವು, ಹಣ್ಣು ನೀಡುವುದರಿಂದ, ಕಾಂಡ್ಲಾ ಬೆಳೆಯುವ ಪ್ರದೇಶದಲ್ಲಿ ಜೇನು ಉತ್ಪತ್ತಿ ಹೆಚ್ಚಳವಾಗಿರುವುದುkandal 4 ಈಗಾಗಲೆ ಸಾಬೀತಾಗಿದೆ. ಉರುವಲಾಗಿ, ಇದ್ದಿಲಿಗಾಗಿ, ಹಸಿರು ಸೊಪ್ಪಿಗಾಗಿ ಕೂಡ ಈ ಸಸ್ಯ ಬಳಯಾಗುತ್ತಿದೆ. ಕಾಂಡ್ಲಾಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನ ಸುಮಾರು ೧೧೮ ದೇಶಗಳಲ್ಲಿ ಕಂಡುಬರುತ್ತದೆ. ನೈಸರ್ಗಿಕವಾಗಿಯೇ ಬಹಳಷ್ಟು ಉಪಕಾರಿಯಾಗಿರುವ ಈ ಮರಗಳ ಬಗ್ಗೆ ವಿಶೇಷವಾದ ಸಂಶೋಧನೆಗಳು ನಡೆಯುತ್ತಿವೆ. ವಿಶ್ವದಾದ್ಯಂತ ಕಂಡುಬರುವ ಕಾಂಡ್ಲಾಗಳು ಪರಿಸರ ಸಮತೋಲನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿವೆ.

ಕಾಂಡ್ಲಾಗಳು ಜೌಗು ಸವೆತವನ್ನು ತಡೆಯುವುದಲ್ಲದೆ ಚಂಡಮಾರುತ ಎದ್ದಾಗ, ಸುಂಟರಗಾಳಿ ಬಂದಾಗ, ಸುನಾಮಿ ಏಳುವ ಸಂದರ್ಭದಲ್ಲಿಯೂ ಪ್ರತಿರೋಧ ಒಡ್ದಿ ಭೀಕರ ಅಲೆಗಳನ್ನು ಸೀಮಿತಗೊಳಿಸಿ ನಿಧಾನ ಪಡಿಸುವ ತಾಕತ್ತು ಹೊಂದಿದೆ. ಸಮುದ್ರದ ಭರತ-ಇಳಿತವನ್ನು, ಜೊತೆಗೆ ತಾಪಮಾನ, ತೇವಾಂಶ ಸಮತೋಲನ ಕಾಪಾಡಿಕೊಳ್ಳಬಲ್ಲದು. ಲವಣಾಂಶ, ಫಲವತ್ತತೆ, ತೇವಾಂಶ ಹಿಡಿದಿಟ್ಟು ಆಮ್ಲಜನಕ ಉತ್ಪತ್ತಿ, ಇಂಗಾಲವನ್ನು ಹೀರುವುದನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುತ್ತವೆ. ಅಳವಾಗಿ, ಭದ್ರವಾಗಿ ಬೇರೂರುವ ಕಾಂಡ್ಲಾ ಸಸ್ಯಗಳಿಂದಾಗಿ ರಭಸವಾಗಿ ಹರಿಯುವ ನದಿಗಳಿಂದ ಬರುವ ನೀರಿನ ಜೊತೆಗಿನ ಸಾರಗಳನ್ನು ಕಾಂಡ್ಲಾಗಳು ಹಿಡಿದಿಡುತ್ತವೆ. ನದಿ ನೀರಿನಿಂದ ಕೊಚ್ಚಿಹೋಗುವ ಭೂಭಾಗಗಳ ರಕ್ಷಣೆಯಲ್ಲಿ ಕಾಂಡ್ಲಾಗಳು ಪಾತ್ರ ಹಿರಿದಾದುದು. ಇದಕ್ಕೆ ಉದಾಹರಣೆ ಇತ್ತೀಚೆಗೆ ತಮಿಳುನಾಡಿನ ಪಿಚ್ಚವರಂ ಪ್ರದೇಶದಲ್ಲಿ ಹಳ್ಳಿ ಹಳ್ಳಿಗಳನ್ನೇ ಸುನಾಮಿಯಿಂದ ವನದೇವತೆ ‘ಕಾಂಡ್ಲಾ’ಇಡೀ ನಾಡನ್ನೇ ರಕ್ಷಿಸಿದೆ.

ಕಾಂಡ್ಲಾ ಸಸ್ಯಗಳು ನೀರಿನಲ್ಲಿನ ನೈಟ್ರೇಟ್ ಅಂಶವನ್ನು ಹೀರಿಕೊಂಡು ಬೆಳೆಯುತ್ತವೆ. ನೀರಿನ ಹರಿವಿನಲ್ಲಿ ಸಾಲು ಸಾಲಾಗಿ, ಪೊಗದಸ್ತಾಗಿ ಕಾಂಡ್ಲಾಗಳು ಬೆಳೆದಿರುತ್ತವೆ. ವಿಶೇಷವೆಂದರೆ, ಉಪ್ಪು ನೀರು, ಸಿಹಿ ನೀರು ಎಲ್ಲವನ್ನೂ ಅರಗಿಸಿಕೊಂಡು ಬದುಕಬಲ್ಲವು.

ಒಂದೊಂದು ದೇಶದಲ್ಲಿ ಒಂದೊಂದು ಬಗೆಯ ಕಾಂಡ್ಲಾಗಳು ಕಂಡುಬರುತ್ತವೆ. ಹವಾಮಾನ, ವಾಯುಗುಣಕ್ಕೆ ಪೂರಕವಾಗಿ ಬೆಳೆಯುತ್ತವೆ. ಗಾಳಿ, ಮಳೆ ಎಲ್ಲಕ್ಕೂ ಸಾವರಿಸಿಕೊಂಡು ಬೆಳೆಯಬಲ್ಲ ಇಂತಹ ಭೂಮಿ ಕಾಯುವ, ನಾಗರೀಕತೆಯನ್ನು ಉಳಿಸುವ ಸಸ್ಯಗಳು ಇದೀಗ ಲೋಕಮಾನ್ಯತೆಯನ್ನು ಪಡೆಯುತ್ತಿರುವುದು ಗಮನಾರ್ಹವಾದ ಸಂಗತಿ.

kandal 6ಕರ್ನಾಟಕ ಅರಣ್ಯ ಇಲಾಖೆಯು ತನ್ನ ಪರಿವ್ಯಾಪ್ತಿಯಲ್ಲಿ ಕಾಂಡ್ಲಾಗಳ ಬಗೆಗೆ ಅರಿವು ಹಾಗೂ ಗಿಡ ಬೆಳೆಸುವಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳುತ್ತಿದೆ. ಕರಾವಳಿಯುದ್ದಕ್ಕೂ ವ್ಯಾಪಿಸಿರುವ ಕಾಂಡ್ಲಾ ಸಸ್ಯವರ್ಗವನ್ನು ರಕ್ಷಿಸುವಲ್ಲಿ ಹಾಗೂ ಬೆಳೆಸುವಲ್ಲಿ ಹಲವಾರು ಪರಿಣಾಮಕಾರಿ ಯೋಜನೆಯನ್ನು ಜಾರಿಗೆ ತಂದಿದೆ. ಕರಾವಳಿ ಹಸಿರು ಕವಚ ಯೋಜನೆಯು ಕರ್ನಾಟಕ ಅರಣ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ. ಕಾಂಡ್ಲಾ ನರ್ಸರಿ ವಿಧಾನದ ಮೂಲಕ ಅವಶ್ಯವಿದ್ದ ಕಡೆಗಳಲ್ಲಿ ವ್ಯವಸ್ಥಿತವಾಗಿ ಬೆಳೆಸುವ ಯೋಜನೆಗೆ ಚಾಲನೆ ನೀಡಿದೆ.

ಉತ್ತಮ ಉರುವಲು ಕೂಡಾ ಆಗಿರುವ ಕಾಂಡ್ಲಾಗಳನ್ನು, ಈಗಿನ ಹೊಸ ಕಾನೂನು ಪ್ರಕಾರ ಕಡಿದು ನಾಶ ಮಾಡುವಂತಿಲ್ಲ. ಕಾಂಡ್ಲಾಗಳು ನಶಿಸಿದರೆ ಸಹಜವಾಗಿ ಮಣ್ಣಿನ ಸವಕಳಿ, ಸಮುದ್ರ ಕೊರೆತದಂತಹ ಸಮಸ್ಯೆಗಳು ತಾನೇ ತಾನಾಗಿ ವೃದ್ಧಿಸುತ್ತವೆ. ಕಾಂಡ್ಲಾಗಳು ರಕ್ಷಣೆಗೆ ಒತ್ತುಕೊಟ್ಟು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ಇಲಾಖೆ ಶ್ರಮಿಸುತ್ತಿದೆ. ೧೩೦೦ ಹೆಕ್ಟೆರ್ ಪ್ರದೇಶದ ಸುಮಾರು ೩೨೦ ಕಿ.ಮೀ. ಉದ್ದದ ಕರಾವಳಿ ತೀರವು ಕಾಂಡ್ಲಾ ವನೋಭಿವೃದ್ಧಿಗಾಗಿ ಒಳಪಟ್ಟಿದೆ. ಮಾನವ ಸಹಿತ, ಸಕಲ ಜೀವರಾಶಿಗಳ ಉಳಿವಿಗೂ ಕಾಂಡ್ಲಾಗಳ ಕೊಡುಗೆ ಅಪಾರವಾದುದು ಎಂಬುದು ಕೊನೆಗೂ ಅರಿವಾಗಿದೆ. ಇದರಿಂದಾಗಿ, ಒಳನಾಡು ಮೀನುಗಾರಿಕೆಗೆ, ಸಾಗರೋತ್ಪನ್ನ ಆಹಾರಗಳ ನೈಸರ್ಗಿಕವಾದ ಉತ್ಪತ್ತಿಗೆ ಅವಕಾಶ ಹೆಚ್ಚುತ್ತದೆ. ಅಲ್ಲದೆ, ಸದಾ ನೀರಿನ ಹತೋಟಿ ನಡೆಸುತ್ತಾ, ಹಸಿರನ್ನು ಹೊದ್ದುಕೊಂಡಂತೆ ಪ್ರಶಾಂತವಾದ ವಾತಾವರಣದಲ್ಲಿ ಶುದ್ಧಗಾಳಿ ಬೀಸಲು ಸಹಕಾರಿಯಾಗಿದೆ.

ಪ್ರವಾಸಿಗಳಿಗೆ, ವಿಹಾರ ನಡೆಸುವರಿಗೆ, ಬೋಟಿಂಗ್ ನಡೆಸುವವರಿಗೆ ಹೇಳಿ ಮಾಡಿಸಿದ ತಾಣ. ಪ್ರಾಣಿಪಕ್ಷಿಗಳಿಗೆ ನೀರು, ಆಹಾರ ದೊರಕುವ ಪರಿಣಾಮವಾಗಿ, ಅವುಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತದೆ. ಕಾಂಡ್ಲಾಗಳು ನದಿಯ ಇಕ್ಕೆಲಗಳಲ್ಲಿ ವ್ಯಾಪಿಸಿಕೊಂಡಿರುವುದರಿಂದ, ನೀರಿನ ಸಮತೋಲನ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ, ಕಾಂಡ್ಲಾಗಳು ಎಲ್ಲಾ ರೀತಿಯಲ್ಲೂ ಹೊಸ ನಿರೀಕ್ಷೆಯನ್ನು ಜನಮಾನಸದಲ್ಲಿ ಮೂಡಿಸುತ್ತಿದೆ.

ಕರಾವಳಿಯ ನಾಡು ಹಸಿರಾಗಿರಬೇಕಾದರೆ, ಕಾಂಡ್ಲಾ ಕಾಡು ಏಕೈಕ ಮಾರ್ಗವಾಗಿದೆ. ಮ್ಯಾಂಜಿಯಮ್, ಅಕೇಶಿಯಾ ಅಂತ ಏಕಾಏಕಿ ಬಳಸಲಾದ ಪರದೇಶಿ ಸಸ್ಯ ಸಂಕುಲಗಳ ಅಡ್ಡ ಪರಿಣಾಮವೇನು ಎಂಬುದು ಜನರಿಗೆ ಮನವರಿಕೆ ಮಾಡಿ, ಕಾಂಡ್ಲಾ ಕಾಡುಗಳ ಮಹತ್ವವನ್ನು ತಿಳಿಹೇಳಬೇಕಾದ ಕಾಲ ನಮ್ಮ ಮುಂದಿದೆ.

ಉತ್ತಮ ಆಳ ಉಳುಮೆ ಮಾಡಿ ಮಣ್ಣನ್ನು ಸಡಿಲಗೊಳಿಸಿ ಬೇಕಾದ ಪೋಷಕಾಂಶ ನೀಡಿದರೆ ಕರಾವಳಿ ಜಿಲ್ಲೆಗಳನ್ನು ಬಿಟ್ಟು ಮಲೆನಾಡು, ಅರೆಮಲೆನಾಡು, ಬಯಲು ಸೀಮೆಯಲ್ಲಿ ಕಾಂಡ್ಲಾ ಬೆಳೆಸಲು ಸಾಧ್ಯವೇ ಎಂಬ ಪಯತ್ನ ಸಾಗಿದೆ. ಈ ಪ್ರದೇಶದ ನದಿ ತೀರ, ಕೆರೆ-ಕಟ್ಟೆ, ಮದಗಳಂತಹ ನೀರು ಒಸರುವಂತ ಪ್ರದೇಶದಲ್ಲಿ, ಜಲಾಶಯಗಳ ಹಿನ್ನೀರಿನ ಪ್ರದೇಶದಲ್ಲಿ, ಈ ಕಾಡನ್ನು ಸೃಷ್ಟಿಸುವ ಸಾಧ್ಯತೆ ಬಗೆಗೆ ಗಂಭೀರ ಚಿಂತನೆ ಇಲಾಖಾ ಮಟ್ಟದಲ್ಲಿ ನಡೆದಿದೆ.

ಕಾಂಡ್ಲಾ ಸಸ್ಯ ಸಂಕುಲಗಳು ಉಪ್ಪು ನೀರಿನ ಹಿನ್ನೀರಿನಲ್ಲಿ ಬರುವ ವಿಶೇಷ ಮರಗಳು. ಹಿಂದಿನಿಂದ, ಈ ವೃಕ್ಷಗಳು ನದಿ ಬದಿಗಳಲ್ಲಿ ಭೂ ಕುಸಿತವನ್ನು ನೈಸರ್ಗಿಕವಾಗಿ ತಡೆಯುವ ತಡೆಗೋಡೆಗಳಾಗಿರುವ ಜೊತೆಗೆ, ಸ್ಥಳೀಯ ಜನರ ಕಟ್ಟಿಗೆ, ಸೊಪ್ಪು, ಎಳಗಳಂತಹ ಕನಿಷ್ಟ ಅವಶ್ಯಕತೆಯನ್ನು ಪೂರೈಸುತ್ತಿತ್ತು. ಆದರೆ, ಸಿಗಡಿ ಕೃಷಿ, ಕೃಷಿ ಭೂಮಿ ವಿಸ್ತರಣೆ, ನದಿ, ಸಮುದ್ರ ತೀರಗಳಲ್ಲಿ ತಲೆ ಎತ್ತುತ್ತಿರುವ ರೆಸಾರ್ಟ್‌ಗಳ ನಿರ್ಮಾಣಕ್ಕಾಗಿ ಖಾಸಗಿ ಸ್ಥಳಗಳಲ್ಲಿರುವ ಕಾಂಡ್ಲಾ ಕಾಡುಗಳು ನಾಶವಾಗುತ್ತಿವೆ. ಅರಣ್ಯ ಇಲಾಖಾ ವತಿಯಿಂದ ಕಾಂಡ್ಲಾ ನೆಡುತೋಪು ಮಾಡುವುದಲ್ಲದೆ, ಖಾಸಗಿಯವರಲ್ಲಿ ಕಾಂಡ್ಲಾದ ಪ್ರಾಮುಖ್ಯತೆ, ಅವುಗಳ ರಕ್ಷಣೆ ಬಗ್ಗೆ ಮಾಹಿತಿ ನೀಡಿ, ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಯಬೇಕಾಗಿದೆ.

ಚಿತ್ರ-ಲೇಖನ: ಕೆ.ಶಶಿಧರ ಹೆಮ್ಮಣ್ಣ, ಉಡುಪಿ.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*