ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಾವರಿ ಕಾಲುವೆಯ ಬಸಿನೀರಿನ ಬಳಕೆ: ರಾಯಬಾಗ ರೈತರ ಉಪಾಯ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕು ನೀರಾವರಿ ತಾರತಮ್ಯಕ್ಕೊಳಗಾದ ಭೂಭಾಗ. ತಾಲ್ಲೂಕಿನ ಅರ್ಧ ಭಾಗ ಸಂಪೂರ್ಣ ನದಿ ನೀರಾವರಿಗೆ ಒಳಪಟ್ಟಿದ್ದರೆ, ಉಳಿದರ್ಧ ಒಣಭೂಮಿ. ಘಟಪ್ರಭ ಅಣೆಕಟ್ಟಿನಿಂದ ತಾಲ್ಲೂಕಿನ ಅರ್ಧಭಾಗ ಸಮೃದ್ಧ ನೀರಾವರಿಯಾಗಿದೆ, ಬೃಹತ್ ಪ್ರಮಾಣದ ಘಟಪ್ರಭ ನೀರಾವರಿ ಕಾಲುವೆ ಹರಿಯುತ್ತಿದ್ದು, ಇದರ ನೆರವಿನಿಂದ ಈ ಭಾಗದ ಬಹುತೇಕ ರೈತರು ವಾಣಿಜ್ಯ ಬೆಳೆಯಾದ ಕಬ್ಬು, ಅರಿಶಿನ, ಮೆಕ್ಕೆ ಜೋಳ ಇತ್ಯಾದಿ ಬೆಳೆಯುತ್ತಾರೆ, ವರ್ಷಕ್ಕೆ ಕನಿಷ್ಟ ಎರಡು ಬೆಳೆ ನಿಶ್ಚಿತ.

ಆದರೆ, ಉಳಿದರ್ಧ ಭಾಗದ ರೈತರಿಗೆ ಮಳೆ ನೀರೇ ಗತಿ.ಕೆಲವರು ಕೊಳವೆಬಾವಿ ಅಥವಾ ತೆರೆದ ಬಾವಿಯಿಂದ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಬಹುತೇಕ ರೈತರಿಗೆ ಆ ಚೈತನ್ಯವಿಲ್ಲ. ಅವರು ಮಳೆಯನ್ನಾಧರಿಸಿಯೇ ಕೃಷಿ ಮಾಡುತ್ತಾರೆ, ಅವರದು ಅನಿಶ್ಚಿತ ಕೃಷಿ ಬದುಕು.

???????????????????????????????ಇತ್ತೀಚಿನ ವರ್ಷದವರೆಗೂ ಇದೇ ಪರಿಸ್ಥಿತಿ ಇತ್ತು. ಈ ಮಧ್ಯೆ ಘಟಪ್ರಭ ಕಾಲುವೆಗೆ ನದಿಯಿಂದ ನೀರು ಬಿಟ್ಟಾಗ, ಅದರ ಬಸಿ ನೀರಿನಿಂದ ಕಾಲುವೆ ಅಕ್ಕ-ಪಕ್ಕದ ಬಾವಿಗಳಲ್ಲಿ ನೀರಿನ ಮಟ್ಟ ಏರುತ್ತಿತ್ತು. ಇದನ್ನು ಗಮನಿಸಿದ ಕಾಲುವೆ ನೀರಿನಿಂದ ವಂಚಿತರಾದ ರೈತರು, ಈ ಬಸಿನೀರಿನ ಸದ್ಬಳಕೆ ಮಾಡಿಕೊಳ್ಳಲು ಆರಂಭಿಸಿದರು. ಕಾಲುವೆ ನೀರಿಗೇ ಮೋಟಾರ್ ಪಂಪ್ ಇಟ್ಟು ನೀರು ಬಳಸಲು ನಿರ್ಬಂಧವಿದೆ. ಹಾಗಾಗಿ, ಅದರ ಬಸಿನೀರಿನ ಬಳಕೆಗೆ ರೈತರು ಮುಂದಾಗಿದ್ದಾರೆ.

ಮೊದಲು ಈ ಪ್ರಯತ್ನವನ್ನು ಯಾರು ಶುರು ಮಾಡಿದರೆಂಬ ಬಗ್ಗೆ ಮಾಹಿತಿಯಿಲ್ಲ, ಆದರೆ, ಪ್ರಸ್ತುತ ನೂರಾರು ಕುಟುಂಬಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕಾಲುವೆಯಿಂದ ಏಳೆಂಟು ಕಿಲೋಮೀಟರ್ ದೂರದವರೆಗೆ ಪೈಪ್‌ಲೈನ್ ಮೂಲಕ ನೀರು ಕೊಂಡೊಯ್ಯುತ್ತಿರುವ ಉದಾಹರಣೆಗಳೂ ಇವೆ.

ಇದೊಂದು ಸಮುದಾಯ ನೀರಾವರಿ ವ್ಯವಸ್ಥೆಯಾಗಿ ರೂಪುಗೊಂಡಿರುವುದು ವಿಶೇಷ. ಏಕೆಂದರೆ ಕಿಲೋಮೀಟರುಗಟ್ಟಲೆ ದೂರದಿಂದ ನೀರು ತರುವುದು ಹೆಚ್ಚು ಖರ್ಚಿನ ಬಾಬ್ತು- ಕಾಲುವೆ ಪಕ್ಕದ ಜಮೀನಿನ ಮಾಲೀಕರಿಂದ ಒಂದೆರಡು ಗುಂಟೆ ಜಮೀನು ಕೊಳ್ಳಬೇಕು, ಅಲ್ಲಿ ೧೫-೨೦ ಅಡಿ ಆಳದ ಬಾವಿ ತೆಗೆಯಬೇಕು, ಮೋಟಾರ್ ಪಂಪ್ ಜೋಡಿಸಬೇಕು, ಅದಕ್ಕೊಂದು ಕೊಠಡಿ ನಿರ್ಮಿಸಬೇಕು, ವಿದ್ಯುತ್ ಸಂಪರ್ಕ ಪಡೆಯಬೇಕು. ಬಾವಿಯಿಂದ ತಮ್ಮ ಜಮೀನಿನವರೆಗೆ ನೆಲದಾಳದಲ್ಲಿ ಪೈಪ್ ಲೈನ್ ಜೋಡಿಸಬೇಕು. ಹೆಚ್ಚು ದೂರ ಇದ್ದಷ್ಟೂ ಹೆಚ್ಚು ವೆಚ್ಚ. ಇದಕ್ಕೆಲ್ಲಾ ಕನಿಷ್ಟ ಐದು ಲಕ್ಷದಿಂದ ಐವತ್ತು ಲಕ್ಷದವರೆಗೂ ವೆಚ್ಚವಾಗಿರುವ ಉದಾಹರಣೆಗಳಿವೆ. ಹಾಗಾಗಿ, ಒಂದೇ ಕಡೆ ಜಮೀನುಳ್ಳ ನಾಲ್ಕೈದು ಅಥವಾ ಏಳೆಂಟು ಕುಟುಂಬಗಳು ಸೇರಿ ಈ ವ್ಯವಸ್ಥೆ ಮಾಡಿಕೊಂಡಿವೆ.

ಅಂತಹ ಒಂದು ಸಮುದಾಯದ ಜಲಗಾಥೆ ಇಲ್ಲಿದೆ.

ಈಗ್ಗೆ, ಐದಾರು ವರ್ಷಗಳ ಹಿಂದಿನ ಮಾತು. ರಾಯಬಾಗ ತಾಲ್ಲೂಕಿನ ಕಟಕಭಾವಿ ಗ್ರಾಮದಲ್ಲಿ ಕುಡಿಯಲು, ಮನೆ ಬಳಕೆಗಾಗಿ ಹನಿ ನೀರಿಗೂ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಸತತ ನಾಲ್ಕು ವರ್ಷಗಳ ಬರಗಾಲದಿಂದ ಕಂಗೆಟ್ಟಿದ್ದ ರೈತ ಸಮುದಾಯ, ನೀರಿಗಾಗಿ ಪರ್ಯಾಯ ಮಾರ್ಗಗಳನ್ನು ಹುಡುಕತೊಡಗಿತ್ತು. ಅದರಲ್ಲಿ, ಮುದುಕಪ್ಪ ಪೀಡಾಯಿ ಮತ್ತವರ ಅಣ್ಣ-ತಮ್ಮಂದಿರ ಕುಟುಂಬವೂ ಒಂದು.

ಇವರದು ಆರು ಜನ ಅಣ್ಣ-ತಮ್ಮಂದಿರು (ಮುದುಕಪ್ಪ, ಸತ್ಯಪ್ಪ, ನಿಂಗಪ್ಪ, ಲಕ್ಷ್ಮಣ, ರೇವಪ್ಪ, ಚೂಣಪ್ಪ) ಇರುವ ಅವಿಭಕ್ತ ಕುಟುಂಬ. ಇವರಿಗೆ ೯.೫ ಎಕರೆ ಜಮೀನು ಇದೆ. ಕಳೆದ ಕೆಲ ವರ್ಷಗಳಿಂದ ಸೂಕ್ತ ಮಳೆ ಇಲ್ಲದೆ, ಏನನ್ನೂ ಬೆಳೆಯಲು ಸಾಧ್ಯವಾಗಿರಲಿಲ್ಲ. ತಾತನ ಕಾಲದ ಒಂದು ಬಾವಿ ಇದ್ದಿತಾದರೂ, ನೀರಿಲ್ಲದೇ ಕಸ-ಕಡ್ಡಿಗಳಿಂದ ತುಂಬಿಕೊಂಡಿತ್ತು.

ಮಳೆಯ ಮೇಲೆ ಅವಲಂಬನೆಯಾದ ದಿನಗಳಲ್ಲಿ ಗೋವಿನ ಜೋಳ, ಶೇಂಗಾ, ಸಜ್ಜೆ, ಮಡಿಕೆ ಮುಂತಾದುವನ್ನು ಬೆಳೆಯುತ್ತಿದ್ದರು.  ಆದರೆ, ಕಳೆದ ಹತ್ತು ವರ್ಷಗಳಲ್ಲಿ ಸಾಮಾನ್ಯ ಮಳೆ ಇಲ್ಲದೇ ಹೋದದ್ದರಿಂದ, ಯಾವ ಬೆಳೆಯನ್ನೂ ಉತ್ತಮವಾಗಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಇವರ ಕುಟುಂಬಗಳಿಗೆ ಕುಡಿಯುವ ನೀರನ್ನೂ ಸಹ ಗ್ರಾಮ ಪಂಚಾಯಿತಿಯ ಕಡೆಯಿಂದ ಸರಬರಾಜು ಮಾಡಲಾಗುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ, ಆರು ಜನ ಅಣ್ಣ-ತಮ್ಮಂದಿರು ಚರ್ಚಿಸಿ ನೀರಿನ ಬವಣೆ ನೀಗಿಸಲು ಮಹತ್ವದ ನಿರ್ಧಾರ ತೆಗೆದುಕೊಂಡರು. ಅದುವೇ, ಕಾಲುವೆಯಿಂದ ಪೈಪಲೈನ್ ಮೂಲಕ ನೀರು ತರುವುದು. ೨೦೧೨ರಲ್ಲಿ ಇದನ್ನು ಕಾರ್ಯಗತಗೊಳಿಸಲು ಮುಂದಾದರು.

ಆರು ಕಿ.ಮೀ. ದೂರದ ಕಂಕಣವಾಡಿ ಗ್ರಾಮದಲ್ಲಿ ಹಾದುಹೋದ ಘಟಪ್ರಭ ಕಾಲುವೆಯಿಂದ, ಪೈಪ್‌ಲೈನ್ ಮೂಲಕ ನೀರನ್ನು ತರಲು ಯೋಜನೆ ರೂಪಿಸಿದರು. ಕಾಲುವೆಯ ಪಕ್ಕ ೨೦೦ ಅಡಿ ಅಂತರದಲ್ಲಿ, ೨ ಗುಂಟೆ ಜಮೀನು ಖರೀದಿಸಿ ಸಣ್ಣ ಪ್ರಮಾಣದ ಬಾವಿ ತೋಡಿಸಿದರುravalogi photo 240x161. ಕಾಲುವೆಯಿಂದ ಬಸಿದು ಬಂದ ನೀರು ಈ ಬಾವಿಯಲ್ಲಿ ಸಂಗ್ರಹವಾಯಿತು. ನೀರೆತ್ತಲು ೧೦ ಹೆಚ್.ಪಿ ಮೋಟರನ್ನು ಅಳವಡಿಸಿದರು. ೬ ಇಂಚು  ವ್ಯಾಸದ ಪೈಪ್‌ನ್ನು ನೆಲದಿಂದ ೩ ಅಡಿ ಆಳದಲ್ಲಿ  ಅವರ ಜಮೀನಿನವರೆಗೂ ಸುಮಾರು ೬ ಕಿ.ಮೀ. ದೂರ ಜೋಡಿಸಿದರು.

ಕಾಲುವೆಯಿಂದ ಇವರ ಜಮೀನಿರುವ ಆರು ಕಿ.ಮೀ, ದೂರದವರೆಗೂ, ಹಲವಾರು ರೈತರ ಜಮೀನುಗಳಿವೆ. ಪೈಪ್‌ಲೈನ್ ಅವರ ಜಮೀನುಗಳನ್ನೇ ಹಾದು ಬರಬೇಕು. ಮೂರು ಅಡಿ ಆಳದಲ್ಲಿ ಪೈಪ್ ಹೂಳಿದರೆ, ಉಳುಮೆ ಇತ್ಯಾದಿಗಳಿಗೆ ತೊಂದರೆಯಾಗುವುದಿಲ್ಲ.

ಕೆಲವು ಕಡೆ ರೈತರು ಅವರ ಜಮೀನಿನಲ್ಲಿ ಪೈಪ್ ಹಾಕುವುದನ್ನು ತಡೆದಾಗ, ಎರಡು ಜಮೀನಿನ ಬದುಗಳ ಗುಂಟ ಪೈಪ್ ಜೋಡಿಸಿದರು. “ಅಲ್ಲಲ್ಲಿ ಕೆಲವು ಕಡೆ ಗರಸಿನ ಮಣ್ಣಿನ ಪದರದಲ್ಲಿ ಪೈಪ್ ಜೋಡಿಸುವುದು ತುಂಬಾ ಕಷ್ಟವಾಯಿತು”, ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಕಿರಿಯ ಸಹೋದರ ಚೂಣಪ್ಪ. ಪೈಪ್ ಮಧ್ಯೆ ೬೦೦-೭೦೦ ಮೀಟರ್‌ಗೆ ಒಂದೊಂದು ಏರ್‌ವಾಲ್ ಕೂರಿಸಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿದೆ. ಈ ವ್ಯವಸ್ಥೆಯಿಂದ, ವರ್ಷದಲ್ಲಿ ೪ರಿಂದ ೬ ತಿಂಗಳುಗಳ (ಜೂನ್-ನವೆಂಬರ್)ವರೆಗೆ ನೀರನ್ನು ಪಡೆಯಬಹುದಾಗಿದೆ. ಈ ಎಲ್ಲಾ ಕೆಲಸಗಳು ಮುಕ್ತಾಯವಾಗಲು, ಸತತ ಒಂದು ವರ್ಷ ತೆಗೆದುಕೊಂಡಿದೆ.

ಕಾಲುವೆಯಿಂದ ನೀರು ತರಲು ಆದ ಖರ್ಚುವೆಚ್ಚಗಳು ಈ ರೀತಿ ಇವೆ:

  • ಕಾಲುವೆಯ ಪಕ್ಕ ೨ ಗುಂಟೆ ಜಮೀನು ಖರೀದಿಗೆ : ರೂ.೩ ಲಕ್ಷ
  • ಪೈಪ್ ಖರೀದಿಗೆ : ರೂ.೧೨ ಲಕ್ಷ
  • ಕಾಲುವೆ ತೋಡಲು ಜೆ.ಸಿ.ಬಿ. : ರೂ.೪.೫ ಲಕ್ಷ
  • ಕೂಲಿ : ರೂ.೫೦ ಸಾವಿರ
  • ವಿದ್ಯುತ್ ಸಂಪರ್ಕ ಪಡೆಯಲು : ರೂ.೫೦ ಸಾವಿರ
  • ಇತರೆ ವೆಚ್ಚ : ರೂ.೫೦ ಸಾವಿರ
  • ಒಟ್ಟು ಖರ್ಚು : ರೂ.೨೧ ಲಕ್ಷ.

ಎಲ್ಲ ಖರ್ಚುಗಳಿಗೆ ಹಣ ಹೊಂದಿಸಿದ್ದು ಹಿರಿಯ ಸಹೋದರ ಮುದುಕಪ್ಪ. ಆರು ಜನ ಅಣ್ಣತಮ್ಮಂದಿರ ಮೇಲೆ ತಲಾ ರೂ.೩.೫ ಲಕ್ಷ ಸಾಲ ಇದೆ. ೪ ಎಕರೆ ಜಮೀನನ್ನು ಅಡ ಇಟ್ಟು ರೂ.೪ ಲಕ್ಷ ಸಾಲ ಪಡೆದಿದ್ದಾರೆ, ಇನ್ನುಳಿದಂತೆ ಗ್ರಾಮದ ಸ್ನೇಹಿತರು ಹಾಗೂ ಸಂಬಂಧಿಕರು ನೀಡಿದ ಸಾಲದ ಹಣ ಈ ಕಾರ್ಯಕ್ಕೆ ಉಪಯೋಗವಾಗಿದೆ. ಯಾವುದೇ ಬ್ಯಾಂಕಿನ ಸಾಲ ಇವರಿಗೆ ದೊರೆತಿಲ್ಲ. ಅಲ್ಲದೆ, ಈ ಕೆಲಸಕ್ಕೆ ಯಾವ ಬ್ಯಾಂಕುಗಳೂ ಸಹ ಸಾಲ ನೀಡುವುದಿಲ್ಲ.

ಇದಕ್ಕೆ ಮುಂಚೆ, ಜೀವನ ನಿರ್ವಹಣೆಗಾಗಿ ಇನ್ನಿತರ ಕೆಲಸಗಳಲ್ಲಿ ತೊಡಗಿದ್ದ ಪೀಡಾಯಿ ಕುಟುಂಬ ಈಗ ಮರಳಿ ಕೃಷಿಯನ್ನೇ ನೆಚ್ಚಿಕೊಂಡಿದೆ. “ಕೈ ತಪ್ಪಿ ಹೋದ ಕೃಷಿ ಕಾಲುವೆ ನೀರಿನ ಮೂಲಕ ಮರಳಿ ಬಂದಿದೆ” ಎಂದು ನಿಂಗಪ್ಪ ತಮ್ಮ ಇಂಗಿತ ವ್ಯಕ್ತಪಡಿಸುತ್ತಾರೆ. ನೀರಿನ ವ್ಯವಸ್ಥೆಯಿಂದ ಬೆಳೆಯಲ್ಲೂ ಬದಲಾವಣೆಯಾಗಿದೆ. ವಾಣಿಜ್ಯ ಬೆಳೆ ಕಬ್ಬು ಪ್ರಧಾನ ಬೆಳೆಯಾಗಿದೆ, ಉಳಿದಂತೆ ತರಕಾರಿ, ಗೋವಿನ ಜೋಳ ನಂತರದ ಸ್ಥಾನದಲ್ಲಿವೆ.

ನೀರಿನ ಲಭ್ಯತೆಯಿಂದ ದನಕರುಗಳ ಸಂಖ್ಯೆ ಏರಿಕೆಯಾಗಿದೆ. ಇದರಿಂದ ಆದಾಯವು ಕೂಡಾ ಅಧಿಕವಾಗಿದೆ. ತಾವು ಬಳಸಿ ಹೆಚ್ಚಾದ ನೀರನ್ನು ತಮ್ಮ ಜಮೀನಿನ ಅಕ್ಕಪಕ್ಕದ ೫ ಜನ ರೈತರಿಗೆ ಸರದಿ ಪಾಲಿನಂತೆ ನೀಡಿದ್ದಾರೆ. ಇದರಿಂದ ಬರುವ ಹಣ ಮತ್ತು ತಾವು ಬೆಳೆದ ಬೆಳೆಯಿಂದ ಬಂದ ಲಾಭವನ್ನು ತಮ್ಮ ಜೀವನ ನಿರ್ವಹಣೆ, ಮಕ್ಕಳ ಓದು, ಬೇಸಾಯದ ಖರ್ಚು ಹಾಗೂ ಮುಖ್ಯವಾಗಿ ಸಾಲ ಮರುಪಾವತಿಗಾಗಿ ಬಳಸುತ್ತಿದ್ದಾರೆ. ಈಗಾಗಲೇ ರೂ.೩ ಲಕ್ಷ ಸಾಲವನ್ನು ತೀರಿಸಿದ್ದಾರೆ.

ಪೀಡಾಯಿ ಸಹೋದರರ ಮುಂದಿನ ಯೋಜನೆಗಳು ಇಂತಿವೆ. ಕಬ್ಬಿನ ಬೆಳೆಗೆ ಹನಿ ನೀರಾವರಿ ಪದ್ಧತಿ ಅಳವಡಿಸುವುದು, ಸರಾಗವಾಗಿ ಮತ್ತು ವೇಗವಾಗಿ ನೀರೆತ್ತಲು ಹೆಚ್ಚುವರಿ ಮೋಟರ್ ಅಳವಡಿಸುವುದು, ಅವಶ್ಯಕ ಕೃಷಿ ಉಪಕರಣಗಳನ್ನು ಖರೀದಿಸುವುದು.

ಪೀಡಾಯಿ ಸಹೋದರರಿಂದ ಪ್ರೇರಿತರಾಗಿ ಗ್ರಾಮದ ಸುಮಾರು ೧೫ ಕುಂಟುಬಗಳು ಕಾಲುವೆಯಿಂದ ನೀರು ತರುವ ವ್ಯವಸ್ಥೆ ಮಾಡಿಕೊಂಡು, ತಮ್ಮ ಆರ್ಥಿಕ ಸುಧಾರಣೆ ಮಾಡಿಕೊಂಡಿವೆ.

ಲೇಖನ: ಶ್ರೀಕಾಂತ್ ರಾವಲೋಜಿ

ಚಿತ್ರ ಮತ್ತು ರೇಖಾ ಚಿತ್ರ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*