ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿಗೆ ಸಂಬಂಧಿಸಿದ ಹಬ್ಬಗಳು

ಸಾವಿರಾರು ವರ್ಷಗಳಷ್ಟು ಪುರಾತನವಾದ ಹಿಂದೂ ಸಂಪ್ರದಾಯಗಳ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಆಚರಣೆಗಳ ಕೇಂದ್ರಬಿಂದುವು ಒಂದು ಮೂಲ ವಸ್ತುವಾಗಿದೆ – ಅದುವೇ ನೀರು. ಯಾವುದೇ ಮುಖ್ಯ ಧಾರ್ಮಿಕ ಆಚರಣೆಯಲ್ಲಿ ತೊಡಗುವ/ಭಾಗವಹಿಸುವ ಮುನ್ನ, ಸ್ನಾನಕ್ಕೆ ಅತ್ಯಂತ ಮಹತ್ವವನ್ನು ಭಾರತೀಯ ಪುರಾಣಗಳಲ್ಲಿ ನೀಡಲಾಗಿದೆ. ಸೂರ್ಯ ಹಾಗೂ ಚಂದ್ರಗ್ರಹಣಗಳಂತಹ ವಿಶೇಷ ಸಂದರ್ಭಗಳಲ್ಲಿ, ಅಥವಾ, ಮಾನವ ದೇಹ-ಮನಸ್ಸುಗಳ ಮೇಲೆ ನಿರ್ದಿಷ್ಟ ಗ್ರಹಗತಿಗಳಿಂದ ಉಂಟಾಗುವ ಪ್ರಭಾವಗಳನ್ನು ನಿರ್ವಹಿಸಲು, ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ಹಿಂದೂ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ಹನ್ನೆರಡು ವರ್ಷಗಳ ಚಕ್ರದಲ್ಲಿ, ‘ಕುಂಭ’ವೆಂಬ ಮಹಾನ್ ಭಾರತೀಯ ಹಬ್ಬವು ನಡೆಯುತ್ತದೆ; ಇದಲ್ಲದೆ, ಪ್ರತಿ ೩ನೆಯ ವರ್ಷದಲ್ಲಿ, ಪವಿತ್ರ ನದಿಗಳ ದಡಗಳ ನಿರ್ದಿಷ್ಟ ಸ್ಥಾನಗಳಲ್ಲಿ ಜನರು ಸೇರಿ, ಅಲ್ಲಿ ಕುಂಭದ ನೀರಿನ ಸಣ್ಣ ಪ್ರಮಾಣದ ಹಬ್ಬವೂ ನಡೆಯುತ್ತದೆ. ಆದರೆ, ೧೨ ವರ್ಷಗಳ ಅಂತರದಲ್ಲಿ ‘ಮಹಾಕುಂಭ’ವನ್ನೂ ಬೃಹತ್ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಮಾನವರು ಹಾಗೂ ಜೀವಗೋಳದ (ಬಯೋಸ್ಫಿಯರ್) ಮೇಲೆ ನೇರ ಪ್ರಭಾವ ಬೀರುವ ಸೂರ್ಯ ಚಲನಾ ಚಕ್ರದ ವಿವಿಧ ಹಂತಗಳನ್ನು ಪ್ರತಿನಿಧಿಸುವ ಹಲವಾರು ಖಗೋಳೀಯ ಸಂಯೋಜನೆಯು ಕುಂಭಮೇಳದ ಸಮಯದಲ್ಲಿ ಏರ್ಪಡುತ್ತದೆ. ೧೨ ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳವು, ೧೨ ಇಂದ್ರಿಯಗಳು, ಅಂದರೆ, ಕ್ರಿಯೆಯನ್ನು ಮಾಡುವ ೫ ಅಂಗಗಳು, ಗ್ರಹಣೆಯ ೫ ಅಂಗಗಳು, ಬುದ್ಧಿ ಹಾಗೂ ಮನಸ್ಸುಗಳಲ್ಲಿ ಅಡಕವಾದ ಅವಗುಣಗಳನ್ನು ಶುದ್ಧೀಕರಿಸಿ/ಹೋಗಲಾಡಿಸಿ, ಅದರ ಮೂಲಕ, ಪರಸ್ಪರ ೧೨ ಅಂಗುಲಗಳ ದೂರದಲ್ಲಿರುವ ಆರು ಅತೀಂದ್ರೀಯ ಕೇಂದ್ರಗಳು ಅಥವಾ ಚಕ್ರಗಳನ್ನು ಪ್ರಚೋದಿಸಿ, ಅದರ ಫಲವಾಗಿ ‘ಅಮೃತ ಕುಂಭ’ವನ್ನು ಪಡೆಯುವ ಉದ್ದೇಶವನ್ನು ಹೊಂದಿದೆ.

ಸೂರ್ಯ ಹಾಗೂ ಗುರು ಗ್ರಹದ ಖಗೋಳೀಯ ಸ್ಥಾನಗಳ ಆಧಾರದ ಮೇಲೆ, ಕೆಳೆಕಂಡ ನಾಲ್ಕು ಸ್ಥಳಗಳಲ್ಲಿ ೧೨ ವರ್ಷಗಳಿಗೊಮ್ಮೆ ಬರುವ ಕುಂಭಮೇಳವನ್ನು ನಡೆಸಲಾಗುತ್ತದೆ:

  • ಗಂಗೆಯ ದಡದಲ್ಲಿ ಇರುವ ಹರಿದ್ವಾರ (ಉತ್ತರಾಂಚಲ ರಾಜ್ಯ): ಕುಂಭರಾಶಿಯಲ್ಲಿ ಗುರು ಹಾಗೂ ಮೇಷರಾಶಿಯಲ್ಲಿ ಸೂರ್ಯ ಬಂದಾಗ
  • ಸಂಗಮದಲ್ಲಿ ಇರುವ ಪ್ರಯಾಗ್ (ಉತ್ತರ ಪ್ರದೇಶ ರಾಜ್ಯ): ಗಂಗಾ, ಯಮುನಾ ಹಾಗೂ ಸರಸ್ವತೀ ನದಿಗಳ ಸಂಗಮದಲ್ಲಿ ವೃಷಭರಾಶಿಯಲ್ಲಿ ಗುರು ಹಾಗೂ ಮಕರರಾಶಿಯಲ್ಲಿ ಸೂರ್ಯ ಇದ್ದಾಗ
  • ಶಿಪ್ರಾ ನದಿಯ ದಡದಲ್ಲಿರುವ ಉಜ್ಜೈನಿ (ಮಧ್ಯಪ್ರದೇಶ ರಾಜ್ಯ): ವೃಶ್ಚಿಕ ರಾಶಿಯಲ್ಲಿ ಗುರು ಹಾಗೂ ಮೇಷರಾಶಿಯಲ್ಲಿ ಸೂರ್ಯನಿದ್ದಾಗ
  • ಗೋದಾವರಿ ನದಿಯ ದಡದಲ್ಲಿ ಇರುವ ನಾಶಿಕ್ (ಮಹಾರಾಷ್ಟ್ರ ರಾಜ್ಯ): ಸಿಂಹ ರಾಶಿಯಲ್ಲಿ ಗುರು ಗ್ರಹ ಹಾಗೂ ಸೂರ್ಯನಿದ್ದಾಗ

ಉತ್ತರ ಭಾರತದ ಮೂರು ಅತ್ಯಂತ ಪವಿತ್ರ ನದಿಗಳು, ಅಂದರೆ, ಗಂಗಾ, ಯಮುನಾ ಹಾಗೂ ಪುರಾಣಪ್ರಸಿದ್ಧವಾದ, ವೇದಗಳಲ್ಲಿ ಉಲ್ಲೇಖಿತವಾದ (ಈಗ ಲುಪ್ತವಾದ) ಸರಸ್ವತಿ ನದಿಗಳ ಸಂಗಮದಲ್ಲಿ ಇರುವ ಪ್ರಯಾಗ್‌ದಲ್ಲಿ (ಅಲಹಾಬಾದ್), ಜನವರಿ ೪ರಿಂದ ಫೆಬ್ರವರಿ ೨೦, ೨೦೦೧ರವರೆಗೆ ಕುಂಭಮೇಳವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ, ೩೦ ದಶಲಕ್ಷ ಜನರು ಸ್ನಾನ ಮಾಡಿದರು; ಅಲ್ಲದೆ, ಕೇವಲ ಜನವರಿ ೨೪, ೨೦೦೧ರಂದು, ೧೦ ದಶಲಕ್ಷ ಜನರು ಸ್ನಾನ ಮಾಡಿದರೆಂದು ಅಂದಾಜು ಮಾಡಲಾಗಿದೆ. ಶ್ರದ್ಧೆ-ಭಕ್ತಿಗಳ ದೀರ್ಘಕಾಲೀನ ಸಂಪ್ರದಾಯವನ್ನು ರೂಢಿಸಿಕೊಂಡ ಇಂತಹ ಅದ್ಭುತ ಆಚರಣೆಯನ್ನು ಜಗತ್ತಿನಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ದೇಶದಾದ್ಯಂತ, ಇನ್ನೂ ಹಲವಾರು ರೀತಿಗಳಲ್ಲಿ ನೀರಿನ ಹಬ್ಬಗಳನ್ನು ಆಚರಣೆ ಮಾಡಲಾಗುತ್ತದೆ. ಜನವರಿ ೨೦೦೩ರಂದು ನಾಶಿಕ್‌ನಲ್ಲಿ ನಡೆದ ಕುಂಭಮೇಳದಲ್ಲಿ, ಅಷ್ಟೇ ಸಂಖ್ಯೆಯ ಜನರು ಪಶ್ಚಿಮ ಭಾರತದ ನಾಶಿಕ್‌ನಲ್ಲಿ ಹರಿಯುವ ಗೋದಾವರಿಯಲ್ಲಿ ಹಾಗೂ ದಕ್ಷಿಣ ಭಾರತದಲ್ಲಿ ಈ ನದಿಯು ಹರಿವ ಇತರ ಸ್ಥಳಗಳಲ್ಲಿಯೂ, ಈ ಉತ್ಸವವನ್ನು ಆಚರಿಸಲಾಯಿತು.

ಇಂಗ್ಲೀಷ್ ಮೂಲ: ಶ್ರೀ ಕೆ.ಎನ್.ಶರ್ಮಾರವರ “ಯುನೀಕ್ ಐಡಿಯಾಸ್ ಆನ್ ವಾಟರ್ ಇನ್ ಏನ್ಷ್ಯಂಟ್ ಇಂಡಿಯನ್ ಸ್ಕ್ರಿಪ್ಚರ್ಸ್ ಆಂಡ್ ಕಲ್ಚರ್”

ಅನುವಾದ: ಸಿಡಿಎಲ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*