ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸೂರು ನೀರಿನ ಸಲ್ಲಾಪ

ಅಂದು ಸಂಜೆ ಘಂಟೆ ನಾಲ್ಕಾಗಿತ್ತು. ಮುಂಜಾನೆಯೇ ಕೆಂಪಾಪುರದ ವಿಕಾಸ್ ಅಪಾರ್ಟ್‌ಮೆಂಟಿಂದ ಬಂದಿದ್ದ ಫೋನ್ ಕರೆಗೆ ಉತ್ತರವಾಗಿ ಮಳೆ ನೀರು ಫಿಲ್ಟರ್ ಒಟ್ಟಿಗೆ ಹೊರಟಿದ್ದೆ. ಆಗಲೇ ಮೋಡ ಕವಿದಿತ್ತು, ಹೆಬ್ಬಾಳ ಮೇಲ್‌ಸೇತುವೆ ದಾಟುವುದರೊಳಗೆ ಮಳೆಯ ಅಬ್ಬರ. ಬೆಂಗಳೂರಿನ ಮಳೆಯೇ ಹೀಗೆ – ಸಂಜೆ ಇಲ್ಲ ಮುಂಜಾನೆ ನಿರೀಕ್ಷಿಸದೇ ಸುರಿದು ಬಿಡುತ್ತದೆ. ಅಂದೂ ಹಾಗೇ ಆದದ್ದು. ಮಳೆ ಬರುವ ಮೊದಲೇ ಫಿಲ್ಟರ್ ಅಳವಡಿಸಲಾಗಲಿಲ್ಲ. ಆದರೂ ಪುಕ್ಕಟ್ಟೆ ಸುರಿಯುವ ನೀರನ್ನು ಹಿಡಿದಿಕ್ಕುವ ಕರ್ತವ್ಯ ನನ್ನದಾಗಿತ್ತು. ಅವಸರದಲ್ಲಿ ಆ ಕಾಯಕ ಮಾಡಿ ಮುಗಿಸಿದ್ದೆ. ಕೆಲವು ಘಂಟೆಗಳ ಕಾಲ ಬಿಡುವು ಕೊಡದೇ ಸುರಿದ ಮಳೆಯಿಂದಾಗಿ ಅಪಾರ್ಟಮೆಂಟ್‌ನ ನಲವತ್ತು ಸಾವಿರ ಲೀಟರ್ ಸಾಮರ್ಥ್ಯದ ಟಾಂಕಿ ತುಂಬಿಹೋಗಿತ್ತು, ವಿಸ್ಮಯವೆಂಬಂತೆ ವೀಕ್ಷಿಸಿದ ಆ ಕಟ್ಟಡದ ವಾಸಿಗಳು ನೀರು ಮತ್ತು ಹಣದ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದರು. ಈ ಕೆಲಸಕ್ಕೆ ವ್ಯಯಿಸಿದ್ದು ಅಲ್ಪ ಮೊತ್ತ. ಮಳೆಬಂದಂತೆಲ್ಲಾ ಶೇಖರಣೆಯಾಗುತ್ತಿದೆ ಸಾವಿರಾರು ಲೀಟರ್ ನೀರು ಎನ್ನುತ್ತಾರೆ ಡ್ರಾಪ್ ಬೈ ಡ್ರಾಪ್ ಸಂಸ್ಥೆಯ ಸುಚೇತನ.

ನೀರಿನ ಮೌಲ್ಯ ಅರಿಯಲು ಶಿಕ್ಷಣವೇ ಬೇಕೇ.! ನಗರವಾಸಿಗರ ಒಂದು ವರ್ಗ ಮಳೆ ಕೊಯ್ಲು ವ್ಯವಸ್ಥೆಯನ್ನೇ ಅಸಡ್ಡೆಯಾಗಿ ಪರಿಗಣಿಸಿದ್ದಾರೆ. ಮನೆ ಮುಂದೆ ಟಾಂಕೀಗಳನ್ನಿಟ್ಟರೆ ಅವಲಕ್ಷಣ, ಆಸುಪಾಸಿನಲ್ಲಿ ಇಂಗು ಗುಂಡಿ ತೆಗೆಯಲು ವಾಸ್ತುದೋಶ, ಆ ನೀರು ಬಳಸೋದೇ..! ಇದರಿಂದ ಮಹಾನ್ ಉಪಯೋಗ ಉಂಟೇ..? ಹೀಗೆಲ್ಲಾ ಜವಾಬು ಬುದ್ಧಿವಂತರೆನಿಸಿ ಕೊಂಡವರಿಂದಲೇ.

DSC08185ಕೋರಮಂಗಲ ಮೂರನೇ ಹಂತದ ವಿಮಲ ಸ್ವ-ಇಚ್ಚೆಯಿಂದ ತಮ್ಮ ಮನೆಯಲ್ಲಿ ಮಳೆ ಕೊಯ್ಲು ಮಾಡಿಸುವ ನಿರ್ಧಾರ ಕೈಗೊಂಡಿದ್ದರು. ಅವರ ಬೇಡಿಕೆಯಂತೆ ನಕಾಶೆ ಸಿದ್ಧಪಡಿಸಿ ಕೊಟ್ಟಿದ್ದರು ಡ್ರಾಪ್ ಬೈ ಡ್ರಾಪ್ ಸಂಸ್ಥೆಯವರು. ಅದನ್ನು ಒಪ್ಪಿ ಕಾಮಗಾರಿ ಕೈಗೊಳ್ಳಲು ಅನುಮತಿಯೂ ದೊರೆಯಿತು. ಅಂದು ತಿಳಿಸಿದಂತೇ ಎರಡು ಸಾವಿರ ಲೀಟರ್ ಟ್ಯಾಂಕ್ ತಂದು ಮನೆ ಎದುರು ಇಳಿಸುವಾಗ, ಆ ಟ್ಯಾಂಕ್ ಗಾತ್ರ ಕಂಡು ಗಲಿಬಿಲಿ ಗೊಂಡಿದ್ದರು. ಇಷ್ಟು ದೊಡ್ಡ ಗಾತ್ರದ ಟ್ಯಾಂಕ್ ತುಂಬಿಸಲು ಸಾಧ್ಯವುಂಟೆ? ಚಿಕ್ಕ ಗಾತ್ರದ ಟ್ಯಾಂಕ್ ಸಾಕೆಂಬುವ ವಾದ ಎದುರಾಯಿತು. ಆಗ ನೀರಿನ ಅರಿವು ಮೂಡಿಸುವುದು ಅನಿವಾರ್ಯವಾಗಿತ್ತು. “ಆರು ಜನರಿರುವ ನಿಮ್ಮ ಮನೆಯಲ್ಲಿ ಪ್ರತಿ ದಿನ ಬಳಕೆಯಾಗುತ್ತಿರುವ ನೀರು ಪ್ರತಿಯೊಬ್ಬರಿಗೆ ಗರಿಷ್ಠ ೮೦ರಿಂದ ೧೦೦ ಲೀಟರ್. ಹಾಗಿದ್ದಲ್ಲಿ, ಆರು ಮಂದಿಗೆ ೬೦೦ ಲೀಟರ್. ಅಲ್ಲದೆ, ಕಾರು ಶುದ್ಧಿಗೆ, ಹೂ ತೋಟಕ್ಕೆ, ಬಾಗಿಲು ಮುಂದೆ ಹಾಕಲು ಎಂದೆಲ್ಲಾ ಅಂದಾಜಿಸಿದರೂ, ಹೊರ ಬಳಕೆಗೆ ಕನಿಷ್ಟ ೩೦೦ ಲೀಟರ್ ಬೇಕಾಗುತ್ತಿದೆ. ಅಲ್ಲಿಗೆ ನಿಮ್ಮ ಮನೆಯ ದಿನದ ನೀರಿನ ಬಳಕೆ ೯೦೦ ಲೀಟರ್ ಎಂದಾದರೆ, ವಾರ್ಷಿಕ ಬಳಕೆ ೩,೨೮,೫೦೦ ಲೀಟರ್. ಅದೇ ಈ ಮನೆಯ ಚಾವಣಿಯ ವಿಸ್ತೀರ್ಣ ೨,೪೦೦ ಚದರ ಅಡಿ. ಬೆಂಗಳೂರಿನ ವಾರ್ಷಿಕ ವಾಡಿಕೆಯ ಮಳೆ ಪ್ರಮಾಣ ೧,೦೦೦ ಮಿ.ಮೀ. ಆಗಿದ್ದಲ್ಲಿ, ಈ ಮನೆಯ ಚಾವಣಿಯಿಂದ ಸುಮಾರು ೨,೨೩,೦೦೦ ಲೀಟರ್ ನೀರು ಸಂಗ್ರಹಿಸಬಹುದು ಎಂದಾದರೆ, ಹಣ ತೆತ್ತು ಬಳಸುವ ನೀರು ಕೇವಲ ೧,೦೫,೫೦೦ ಲೀಟರ್ ಎಂದಾಯ್ತಲ್ಲ,” ಎಂದು ವಿವರಿಸಿದೆ. ಇದು ಧಾರಾಳತನದ ಬಳಕೆಯ ಲೆಕ್ಕಾಚಾರ. ವಾರ್ಷಿಕ ನೀರಿನ ಲೆಕ್ಕಾಚಾರ ಮುಂದಿಟ್ಟಾಗ, ನೀರು ಕೊಳ್ಳುವಾಗ ಲೆಕ್ಕವಿಟ್ಟಂತೆ ಬಳಸುವಾಗೇಕೆ ಹಿಡಿತವಿಲ್ಲವಾಗಿದೆ? ವಿಮಲ ಮನಸ್ಸಲ್ಲಿ ಹೊಸ ಚಿಂತನೆಯೊಂದು ಗರಿ ಕೆದರಿತ್ತು. ಮಳೆ ಬೀಳುವವರೆಗೂ ಟ್ಯಾಂಕಿನ ಗಾತ್ರದ ಗಲಿಬಿಲಿಯಲ್ಲಿದ್ದರಾದರೂ, ಒಂದೇ ಮಳೆಗೆ ಹತ್ತೇ ನಿಮಿಷದಲ್ಲಿ ಟ್ಯಾಂಕ್ ತುಂಬಿದ್ದ ಕಂಡು ಇನ್ನಷ್ಟು ದೊಡ್ಡದಿದ್ದಿದ್ದರೆ! ಪಶ್ಚಾತಾಪ ಪಟ್ಟು ಕರೆಮಾಡಿದ್ದರು. ಟ್ಯಾಂಕ್ ತುಂಬಿ ಈಗಾಗಲೇ ಸಾವಿರಾರು ಲೀಟರ್ ನೀರು ಹೊರ ಹರಿದಿದ್ದಾಯ್ತು ಇದಕ್ಕೊಂದು ದಾರಿಕಾಣಿಸುವಿರಾ.. ಅಂತೂ ಅವರ ಮನಸ್ಸಲ್ಲಿ ನೀರಿನ ಲೆಕ್ಕ ಗಟ್ಟಿಯಾಗಿತ್ತು. ಅದಾಗಲೇ, ನೀರಿನ ಮಹತ್ವ ಅರಿತಿದ್ದ ವಿಮಲ. ಟ್ಯಾಂಕ್ ತುಂಬಿ ಹೊರ ಹರಿಯುತ್ತಿದ್ದ ನೀರನ್ನು ಅಲ್ಲೇ ಪಕ್ಕದಲ್ಲಿದ್ದ ತೆರೆದ ಬಾವಿಗೆ ಹರಿಸುವಂತೆ ಬೇಡಿಕೆ ಇಟ್ಟಿದ್ದರು.

 DSC00835ಈ ನಗರ ವಾಸಿಗಳ ತಿಳುವಳಿಕೆಯೇ ವಿಚಿತ್ರ! ಮನೆಯ ಕೆಲಸ ಕಾರ್ಯಗಳಿಗೆ, ಆಯಾ ಕೆಲಸಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರನ್ನು ನೇಮಿಸಿ ಕೊಂಡಿರುತ್ತಾರೆ. ಅಂತೆಯೇ, ಕೈತೋಟ ಹಾಗೂ ಹೂತೋಟ ನಿರ್ವಹಣೆಗೂ – ಪ್ರತಿದಿನದ ಇವನ ಕೆಲಸ ತೋಟದೊಳಗಿನ ದರಗು ಆಯುವುದು, ಗಿಡಗಳಿಗೆ ನೀರು ಉಣಿಸುವುದು. ಮಳೆ ಬಂದು ನಿಂತಿದ್ದರೂ, ಗಿಡಗಳಿಗೆ ನೀರು ಉಣಿಸುವುದನ್ನು ಬಹಳಷ್ಟು ಮನೆಗಳಲ್ಲಿ ಕಂಡಿದ್ದೇನೆ. ಕಾರಣ ಕೇಳಿದರೆ, ಮಾಲೀಕರ ಉತ್ತರ ಸಂಬಳ ನೀಡುವುದಿಲ್ಲವೇ – ಆ ಕೆಲಸ ನಿರ್ವಹಿಸಲಿ ಬಿಡಿ. ಕೆಲಸದವರನ್ನು ಪ್ರಶ್ನಿಸಿದರೆ ತಿಳಿದವರಿಗೆ ತಿಳಿಹೇಳೋದು ಕಷ್ಟ ಸ್ವಾಮಿ, ನೀರು ಹಾಕದಿದ್ದರೆ ಸಂಬಳ ಇಲ್ಲ, ಏನ್‌ಮಾಡೋದು. ಒಟ್ಟಾರೆ ಪೋಲಾಗುತ್ತಿರುವುದು ನೀರು.

ಇನ್ನೂ ವಿಚಿತ್ರವೆಂದರೆ, ಇಂಗು ಗುಂಡಿ ಮಾಡಿ ಭೂಮಿಗೆ ನೀರುಣಿಸಿದರೆ, ಅಕ್ಕಪಕ್ಕದವರ ಮನೆ ಬೋರ್‌ವೆಲ್‌ಗಳಿಗೆ ಸಹಾಯವಾಗುತ್ತದೆ, ಈ ಕೆಲಸವೇ ಬೇಡ. ಅಲ್ಲದೆ ನಮ್ಮನೆಯೊಂದರ ಬೋರ್‌ವೆಲ್‌ಗೆ ಅನುಕೂಲ ಆಗುವಂತಿದ್ದರಷ್ಟೇ ಸಾಕು. ಇದಕ್ಕೆ ಉತ್ತರ ನೀಡೋದುಂಟೇ.. ಮಹಾನಗರದಲ್ಲಿರುವ ಬಹುತೇಕ ಕೊಳವೆ ಬಾವಿಗಳ ನೀರಿನ ಮಟ್ಟ ಕುಸಿದಿದೆ. ಅಲ್ಲದೆ, ಕಾವೇರಿ ತಕರಾರಿಂದಾಗಿ ಕುಡಿಯುವ ನೀರಿಗೂ ಪರದಾಟ. ಯಲಹಂಕ ನಿವಾಸಿ ರಮೇಶ್ ಎರಡು ವರ್ಷದ ಹಿಂದೆಯೇ ಮನೆಗೆ ಮಳೆಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರು. ಇತ್ತೀಚೆಗೆ, ಅವರ ಮನೆಯಲ್ಲೇ ಅವರನ್ನು ಭೇಟಿಮಾಡಿದ್ದೆ. ಆಗ ಅವರ ಅನುಭವದ ಮಾತು, “ಕೊಳವೆಬಾವಿ ನೀರು ಬತ್ತಿದೆ, ಕಾವೇರಿ ನೀರು ಬರಲೇ ಇಲ್ಲ. ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿ ಸಮಯಕ್ಕೆ ಸಿಗಲೇ ಇಲ್ಲ; ಆಗ ವಾರಗಟ್ಟಲೇ ಕಾಪಾಡಿದ್ದು ಮಳೆ ನೀರು. ಅಡುಗೆಗೆ ಮತ್ತು ಕುಡಿಯಲು ಹೊರತುಪಡಿಸಿ, ಉಳಿದೆಲ್ಲಾ ಕಾರ್ಯಕ್ಕೆ ಉಪಯೋಗವಾಯಿತು. ನೀರಿನ ಮಿತಬಳಕೆಯ ಪಾಠವನ್ನು ನೀವು ಅಳವಡಿಸಿರುವ ಟ್ಯಾಂಕ್ ಕಲಿಸಿ ಕೊಟ್ಟಿದೆ. ಟ್ಯಾಂಕ್ ಖಾಲಿಯಾಗುವ ಹಂತದಲ್ಲಿದ್ದಾಗ, ಮಳೆ ಬಂದು ತುಂಬಿಕೊಳ್ಳುತ್ತಿತ್ತು. ಫಿಲ್ಟರ್ ನಿರ್ವಹಣೆ ಮುಖ್ಯ. ನೀರು ಬೇಕೆಂದರೆ ಅದೂ ಸುಲಭವೆಂದಿದ್ದರು. ಆಗ ನನ್ನಲ್ಲಿ ಇನ್ನಷ್ಟು ಕನಸುಗಳು ಹುಟ್ಟಿಕೊಂಡಿದ್ದವು”.

ಇಂಗು ಗುಂಡಿಯ ಮಹತ್ವ ಗೊತ್ತಿಲ್ಲದ್ದೇನಲ್ಲ. ಮನೆ ಎದುರ ಸಂಪಿನೊಳಕ್ಕೆ ನೀರು ತುಂಬಿಸಿ ಆಗಾಗ ಬಳಸುವಂತೆಯೇ, ನೆಲದೊಡಲಾಳದಲ್ಲಿಯೂ ನೀರಿನ ಟ್ಯಾಂಕಿಗಳಿದ್ದು ಅವುಗಳನ್ನೂ ತುಂಬಿಸಿದಲ್ಲಿ ಮಾತ್ರ, ಆಗಾಗ ನೀರೆತ್ತಿ ಬಳಸಲು ಸಾಧ್ಯವಾಗೋದಲ್ಲವೇ? ಭೂಗರ್ಭದೊಳಗೆಲ್ಲಾ ಸಿಹಿ ನೀರ ಸೆಲೆಗಳಿದ್ದು, ಅ ಸೆಲೆಗಳು ಕೇವಲ ಕೊಳವೆ ಬಾವಿ ಗಾತ್ರದ್ದಾಗಿರದೆ, ನದಿ ಕೆರೆಗಳ ಗಾತ್ರದ್ದೂ ಆಗಿರಲು ಸಾದ್ಯವಿದೆ. ಹಾಗಿದ್ದಲ್ಲಿ ನಾವು ತೋಡಿದ ಇಂಗು ಬಾವಿಯ ನೀರು ಕೇವಲ ನಮ್ಮ ಕೊಳವೆ ಬಾವಿಗಷ್ಟೇ ಸೀಮಿತವಾಗಿರಲು ಸಾಧ್ಯವಿಲ್ಲ. ಭೂಮಿಯ ನಾಲ್ಕಾರು ಹೊದಿಕೆ ಅಡಿಯಲ್ಲಿ ನಾವು ಬಿಟ್ಟ ಮಳೆ ನೀರು ಎತ್ತೆತ್ತಲೂ ಹರಿಯಬಹುದು. ಹಾಗೆಂದ ಮಾತ್ರಕ್ಕೆ, ಇಂಗು ಗುಂಡಿ ತಂತ್ರಜ್ಞಾನವನ್ನೇ ದೂರಲಾದೀತೆ? ಹತ್ತಾರು ಕೊಳವೆ ಬಾವಿಗಳಿದ್ದಲ್ಲಿ, ಒಂದು ಇಂಗು ಗುಂಡಿ ಇದ್ದರೆ, ಅದು ಶೇಖಡ ಒಂದು ಲಾಭವಾದೀತಷ್ಟೆ. ಹತ್ತಾರು ಮನೆಯವರೂ ಮಳೆ ನೀರು ಇಂಗಿಸುವಲ್ಲಿ ಅಥವ ಬಳಸಿದಲ್ಲಿ, ಶೇಖಡಾವಾರು ಹೆಚ್ಚಾಗಿ, ಭೂಒಡಲ ಜಲ ಟ್ಯಾಂಕ್ ತುಂಬಿದಲ್ಲಿ, ಮತ್ತೆ ಮತ್ತೆ ಮೇಲೆತ್ತಿ ಬಳಸಲು ನಮಗೇ ಅನುಕೂಲ.

ಹಿರಿಯ ಲೇಖಕಿ ಅನಸೂಯ ಶರ್ಮರವರು ಬೆಂಗಳೂರಿನ ತಮ್ಮ ಮನೆಗೆ ಈ ವಿಧಾನ ಅಳವಡಿಸಿಕೊಂಡ ಮುಖ್ಯ ಉದ್ದೇಶ, ತಾರಸಿ ತೋಟದ ನೀರಿನ ನಿರ್ವಹಣೆಗಾಗಿ. ಇವರ ತಾರಸೀ ತೋಟದಲ್ಲಿ, ನೂರಾರು ನಮೂನೆಯ ವಿಶೇಷ ಎನಿಸುವ ಸಸ್ಯ ಸಂಗ್ರಹವಿದೆ. ಇವುಗಳ ಉಳಿವಿಗೆ ದಿನಕ್ಕೆ ಹತ್ತಾರು ಲೀಟರ್ ನೀರು ಬೇಕಾಗುತ್ತದೆ. ನೀರನ್ನು ಮಿತವಾಗಿ ಬಳಸುವ ಇವರು, ಹನಿ ನೀರನ್ನೂ ಪೋಲಾಗಲು ಬಿಡುವವರಲ್ಲ. ತಾರಸಿ ತೋಟದ ಗಿಡಗಳಿಗೆ ಬಳಸಿದ ನೀರು ಚೆಲ್ಲಿದಲಿ, ಆ ನೀರೂ ಕೆಳಗಿನ ಟ್ಯಾಂಕಿಗೆ ಮರು ಶೇಖರವಾಗುತ್ತದೆ. ಅಂತೆಯೇ ಮಳೆ ನೀರೂ.. ನೀರಿನ ಪಾಠ ಓದ ಬೇಕಿಲ್ಲ. ಇಂತಲ್ಲಿ ನೋಡಿ ಕಲಿಯಲು ಸಾಕಷ್ಟಿದೆ.

DSC00787ಕೋರಮಂಗಲ ಆರನೇ ಹಂತದ ನಿವಾಸಿ ಸುಮಿತ್ರಮ್ಮರವರಲ್ಲಿ ಸಿಟ್ಟು ಸಾಕಷ್ಟಿತ್ತು. ನನ್ನನ್ನು ಕಂಡೊಡನೆ, “ಈ ಸರ್ಕಾರದವರಿಗೆ ತಲೆ ಕೆಟ್ಟಿದೆ. ಮಳೆ ಕೊಯ್ಲು ಅಗತ್ಯ ಇತ್ತೇ.. ಈಗ ಎಲ್ಲಿ ಮಾಡೋದು. ಟ್ಯಾಂಕ್ ಎಲ್ಲಿ ಇಡೋದು, ಬಾವಿ ಎಲ್ಲಿ ತೆಗೆಯೋದು.. ಮನೆಸುತ್ತಾ ನೋಡಿ ಹೇಳಿ. ಹಾಳಾದೋರು ದಿನಕ್ಕೊಂದು ನಿಯಮ ತರ್ತಾರೆ,” ಎಂದರು. ವಿರೋಧ ಪಕ್ಷದವರು ಸರ್ಕಾರದ ಮೇಲೆ ಎಗರಿದಂತಿತ್ತು ಅವರ ಮಾತಿನ ವರಸೆ. ಅಷ್ಟಕ್ಕೇ ಸುಮ್ಮನಾಗದೆ, ಬಾವಿ ತೆಗೆಯೋದಾರ್ರೆ ವರ್ಷದ ಹಿಂದೆ ಕಡಿದು ಹಾಕಿದ್ದ ತೆಂಗಿನ ಮರದ ಬೊಡ್ಡೆ ತೋರಿಸಿ ಇಲ್ಲೇ ಮಾಡಬೇಕೆಂಬ ಆಜ್ಞೆ ಇಟ್ಟಾಗ, ಕರೆದೊಡನೆ ಬಂದಿದ್ದಕ್ಕೆ ಶಿಕ್ಷೆ ಚನ್ನಾಗೇ ಇದೆ ಅನ್ನಿಸಿತ್ತು. ಅದುವರೆಗು ನನ್ನ ಮಾತಿಗೆ ಅವಕಾಶ ದೊರೆತಿರಲಿಲ್ಲ ಅದರೊಳಗೇ.. “ಬಾವಿ ತೆಗೆದು ಭೂಮಿಗೆ ನೀರ್ ಬಿಟ್ಟರೆ ಮನೆ ಅಡಿಪಾಯಕ್ಕೆ ತೊಂದರೆ ಆಗೋದಿಲ್ವ, ಕಾಂಪೌಂಡ್ ಬೀಳೋದಿಲ್ವ,” ಎಂಬ ಪ್ರಶ್ನೆ ಅವರ ಪತಿರಾಯರಿಂದ. ನಿಮ್ಮ ಮನೆ ಕಟ್ಟಿದ ಇಂಜಿನಿಯರ್‌ನ ಕೇಳ್‌ಬೇಕು ಎಂದು ಉತ್ತರಿಸಿದ್ದೆ. ಸುಮಿತ್ರಮ್ಮ ಗಂಡನೆಡೆಗೆ ಕೈ ತೋರಿಸಿ ನೆನಪಿಸಿದ್ದರು – ಇವರೇ ಇಂಜಿನಿಯರ್. ಅವರಿಗೂ ಆಗಲೇ ನೆನಪಾದಿದ್ದು ಅನ್ನಿಸಿತು ಅವರು ತಲೆ ಕೆರೆದುಕೊಂಡ ಪರಿ ಕಂಡು. ನೀರು ಇಂಗಿಸಿದಲ್ಲಿ, ಭೂಮಿಯ ಮೇಲ್ಮೈಯಿಂದ ಹತ್ತಾರು ಮೀಟರ್ ಕೆಳಮಟ್ಟಕ್ಕೆ ಹನಿ ಹನಿಯಾಗಿ ನೀರು ಇಂಗುತ್ತದೆಯೇ ಹೊರೆತು, ಅಡಿಪಾಯ ಅಲುಗಾಡಿಸದು. ಯಾವುದಕ್ಕು ಅಡಿಪಾಯವೂ ಗಟ್ಟಿ ಇದ್ದರೆ ಎಲ್ಲದು ಸುಸೂತ್ರ.

ಮನೆ ಮೇಲೆ ಪುಕ್ಕಟ್ಟೆ ಸುರಿಯುವ ನೀರನ್ನು ಒಂದಿಷ್ಟು ವಿಧಿವಿಧಾನ ಅನುಸರಿಸಿ ಶೇಖರಿಸಿದಲ್ಲಿ, ವರ್ಷಪೂರಾ ಬಳಸಬಲ್ಲ ನೀರನ್ನು ಪಡೆಯುವ ತಾಕತ್ತು ನಮ್ಮಲ್ಲಿದೆ. ಆದರೆ ಮನಸ್ಸು ನಮ್ಮಲ್ಲಿರಬೇಕು ಅಲ್ಲವೆ?                                              

 ಚಿತ್ರ ಲೇಖನ:- ಅಚ್ಚನಹಳ್ಳಿ ಸುಚೇತನ

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*