ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹವಾಮಾನ ವೈಪರೀತ್ಯ : ನೀರಿನ ಕೊರತೆಗೆ ಮೂಲ

ಹವಾಮಾನ ಬದಲಾವಣೆ ಇತ್ತೀಚಿನ ವರ್ಷಗಳಲ್ಲಿ ಬಹು ಚರ್ಚಿತ ವಿಷಯ. ಯಾವ ದೇಶಗಳೂ ಇದರಿಂದ ಹೊರತಲ್ಲ. ಏಕೆಂದರೆ ಹವಾಮಾನ ವೈಪರೀತ್ಯ ಎಂಬುದಕ್ಕೆ ಗಡಿಗಳಿಲ್ಲ, ಹವಾಮಾನ ವೈಪರೀತ್ಯಕ್ಕೆ ಕಾರಣರಾದವರೇ ಅದರ ಅನಾಹುತವನ್ನು ಅನುಭವಿಸುವುದಿಲ್ಲ; ಬದಲಿಗೆ ಎಲ್ಲರೂ ಅದರ ಫಲ ಉಣ್ಣಬೇಕಾಗುತ್ತದೆ. ಹಾಗೆ ನೋಡಿದರೆ, ವೈಪರೀತಕ್ಕೆ ಕಾರಣರಾದವರಿಗಿಂತಲೂ ಇತರರೇ ಅದರ ವ್ಯತಿರಿಕ್ತ ಪರಿಣಾಮಗಳಿಗೆ ಬಲಿಯಾಗಬೇಕಾಗುತ್ತದೆ.

ಒಂದು ಉದಾಹರಣೆ ನೋಡಿ: ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಪ್ರಯಾಣಿಸಿದರೆ, ಸುಮಾರು ೪೦ ಕಿಲೋಗ್ರಾಮಿನಷ್ಟು ಇಂಗಾಲದ ಡೈಆಕ್ಸೈಡನ್ನು (ಸಿಓ೨) ವಿಸರ್ಜಿಸಿದಂತಾಗುತ್ತದೆ, ಅದೇ ಒಬ್ಬ ಶ್ರೀಮಂತ ವ್ಯಕ್ತಿ ಇಷ್ಟೇ ದೂರವನ್ನು ವಿಮಾನದಲ್ಲಿ ಪ್ರಯಾಣಿಸಿ ೨೫೦ ಕಿಲೋಗ್ರಾಮಿಗಿಂತಲೂ ಹೆಚ್ಚು ಇಂಗಾಲವನ್ನು ವಾತಾವರಣಕ್ಕೆ ವಿಸರ್ಜಿಸುತ್ತಾನೆ. ಇದರ ಪರಿಣಾಮವನ್ನು ರೈಲಿನಲ್ಲಿ ಪ್ರಯಾಣಿಸಿದ ವ್ಯಕ್ತಿಯೂ ಅನುಭವಿಸಬೇಕಾಗುತ್ತದೆ; ಇನ್ನೂ ದುರಂತವೆಂದರೆ ಪ್ರಯಾಣವನ್ನೇ ಮಾಡದ ಕಡು ಬಡವ, ಇಲ್ಲವೇ ಆದಿವಾಸಿಯೂ ಈ ಇಂಗಾಲದ ದುಷ್ಪರಿಣಾಮದಿಂದ ತಪ್ಪಿಸಿಕೊಳ್ಳಲು ಅಸಾಧ್ಯ.

ಭಾರತವೂ ಸೇರಿದಂತೆ, ಜಗತ್ತು ಇಂದು ಪಠಿಸುತ್ತಿರುವ ‘ಅಭಿವೃದ್ಧಿ’ ಎಂಬುದು ಹವಾಮಾನ ವೈಪರೀತ್ಯಕ್ಕೆ ದೊಡ್ಡ ಸವಾಲು. ಜಿ.ಡಿ.ಪಿ. ಆಧಾರಿತ ಅಭಿವೃದ್ಧಿ ಎಷ್ಟು ದುರ್ಬಲ ಎಳೆಯನ್ನಾಧರಿಸಿದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನೋಡಿ; ೨೦೧೩ರಲ್ಲಿ ಸಂಭವಿಸಿದ ಫೈಲಿನ್ ಚಂಡಮಾರುತದಿಂದಾದ ಒಟ್ಟು ನಷ್ಟ ೨೦ ಸಾವಿರ ಕೋಟಿ. ೨೦೧೪ರಲ್ಲಿ ಸಂಭವಿಸಿದ ಹುಡ್ ಹುಡ್ ಚಂಡಮಾರುತ ಆಂಧ್ರದ ವಿಶಾಖಪಟ್ಟಣವನ್ನು ತಲ್ಲಣಿಸಿತ್ತು; ಅದರಿಂದಾದ ಒಟ್ಟು ನಷ್ಟ ಒಂದು ಲಕ್ಷ ಕೋಟಿ. ತಮಿಳುನಾಡಿನಲ್ಲಿ ಸಂಭವಿಸಿದ ಸುನಾಮಿಯಿಂದ ಒಮ್ಮೆಗೇ ೫,೬೦೦ ಜನ ಕಣ್ಮರೆಯಾದರು. ಇದರಿಂದ ಜಿ.ಡಿ.ಪಿ.ಯ ಶೇ ೧ರಷ್ಟು ನಷ್ಟ ಉಂಟಾಯಿತೆಂದು ಆರ್ಥಿಕ ತಜ್ಞರು ಲೆಕ್ಕಹಾಕಿದ್ದಾರೆ. ನಾವು ಒಂದು ದಶಕದಲ್ಲಿ ಸಾಧಿಸಿದ ಪ್ರಗತಿಯನ್ನು ಒಂದೇ ಕ್ಷಣದಲ್ಲಿ ಈ ಪ್ರಾಕೃತಿಕ ವಿಕೋಪಗಳು ನಾಶ ಮಾಡಬಲ್ಲವು. ಜಿ.ಡಿ.ಪಿ. ಆಧಾರಿತ ಅಭಿವೃದ್ಧಿಯ ನಶ್ವರತೆ ಇಲ್ಲಿದೆ.

ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತದೆ – ಈ ಹಿಂದೆಯೂ ಹವಾಮಾನ ವೈಪರೀತ್ಯಗಳಿದ್ದವಲ್ಲ, ಈಗೇಕೆ ಇಷ್ಟು ಚರ್ಚೆ? ಹೌದು ಈ ಹಿಂದೆಯೂ ಇದ್ದವು, ಆದರೆ ವಿಕೋಪಗಳ ದರ ಅಥವಾ ತೀವ್ರತೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಉದಾಹರಣೆಗೆ ಒಂದು ತುಲನಾತ್ಮಕ ಅಧ್ಯಯನದ ಪ್ರಕಾರ, ೧೯೮೦ರ ದಶಕದಲ್ಲಿ ಜಗತ್ತಿನಾದ್ಯಂತ ೮೦೦ ನೈಸರ್ಗಿಕ ವಿಕೋಪಗಳು ಸಂಭವಿಸಿ, ೪೦೦ ಮಿಲಿಯನ್ ಜನರಿಗೆ ಹಾನಿ ಸಂಭವಿಸಿದ್ದರೆ, ೨೦೦೦ನೇ ದಶಕದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳ ಸಂಖ್ಯೆ ೨೩೦೦, ಹಾಗೂ ಅವುಗಳಿಂದ ಹಾನಿಗೊಳಪಟ್ಟವರು ೧.೪ ಬಿಲಿಯನ್ ಜನಸಂಖ್ಯೆ.

ಇನ್ನು ನೀರಿನ ವಿಚಾರಕ್ಕೆ ಬಂದರೆ, ಹವಾಮಾನ ವೈಪರೀತ್ಯದಿಂದ ಆಗುವ ಹಲವು ಅಪಾಯಗಳಲ್ಲಿ ನೀರಿನ ಮೂಲಗಳ ಮೇಲಾಗುವ ಅಪಾಯ ಹೆಚ್ಚು ಅಪಾಯಕಾರಿ.

ಹವಾಮಾನ ವೈಪರೀತ್ಯದಿಂದ ಆಗುವ ಪ್ರಮುಖ ಪರಿಣಾಮ ಜಾಗತಿಕ ತಾಪಮಾನ ಏರಿಕೆ, ಅಂದರೆ ಎಲ್ಲ ಖಂಡಗಳಲ್ಲಿ ವಾತಾವರಣ ಬಿಸಿಯಾಗುತ್ತದೆ. ಇದರಿಂದ ಹಿಮಖಂಡಗಳು ಕರಗುವ ಪ್ರಮಾಣ ಹೆಚ್ಚಾಗುತ್ತದೆ, ನದಿಗಳ ಆಯಸ್ಸು ಕಡಿಮೆಯಾಗುತ್ತದೆ. ಪ್ರಸ್ತುತ ಭೂಮಿ ಮೇಲಿನ ನೀರು ಆವಿಯಾಗುವ ಪ್ರಮಾಣ ಶೇ. ೪೭ರಷ್ಟಿದ್ದು ಬಿಸಿಯೇರುವಿಕೆಯಿಂದ ಇದರ ಪ್ರಮಾಣ ಹಲವು ಪಟ್ಟು ಹೆಚ್ಚಲಿದೆ. ಬಿಸಿ ಗಾಳಿಯಿಂದಾಗಿ ಸಮುದ್ರಮಟ್ಟ ಏರಿಕೆಯಾಗುತ್ತದೆ. ಹೀಗಾಗಿ ಕರಾವಳಿ ಭಾಗದಲ್ಲಿ ಸಿಹಿನೀರಿನ ಭಾಗಗಳಿಗೆ ಉಪ್ಪು ನೀರಿನ ಮಿಶ್ರಣವಾಗುತ್ತದೆ. ಒಟ್ಟಾರೆ, ಈಗಾಗಲೇ ಕೊರತೆ ಮಟ್ಟ ತಲುಪಿರುವ ಶುದ್ಧ ನೀರಿನ ಪ್ರಮಾಣ ಮತ್ತಷ್ಟು ದುರ್ಲಭವಾಗಲಿದೆ.

ಮತ್ತೊಂದು ವೈಪರೀತ್ಯ ಮಳೆಯ ಏರು-ಪೇರು. ಭಾರತದ ಕೃಷಿ ಬಹುತೇಕ ಮಳೆ ಆಶ್ರಿತ, ಅದರಲ್ಲಿಯೂ ಮಳೆ ನಕ್ಷತ್ರಗಳ ಮೇಲೆ ನಿಂತಿದೆ. ಅಂದರೆ ಕರ್ನಾಟಕದಲ್ಲಿಯೇ ನೋಡಿ, ಇಲ್ಲಿ ಭರಣಿ, ಕೃತ್ತಿಕೆ, ಪುನರ್ವಸು ಮಳೆಗಳಲ್ಲಿ ಬಿತ್ತನೆಯಾದರೆ, ಅನುರಾಧ ಮಳೆ ಹೊತ್ತಿಗೆ ಕಟಾವು ಮುಕ್ತಾಯವಾಗುತ್ತದೆ. ಆದರೆ ಹವಾಮಾನ ವೈಪರೀತ್ಯ ಮುಂಗಾರು ಮಳೆ ಮಾರುತಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ, ಮಳೆಗಳೂ ಏರುಪೇರಾಗುತ್ತವೆ. ಕೃಷಿ ಸರಪಳಿಯ ಕೊಂಡಿಗಳು ಕಳಚಿ ಹೋಗುತ್ತವೆ, ಬಿಸಿ ವಾತಾವರಣದಿಂದ ಕೀಟ-ರೋಗಗಳ ಸಂಖ್ಯೆ ಹೆಚ್ಚಾಗಲಿದೆ. ಉತ್ಪಾದಕತೆ ಶೇ ೨.೫ರಷ್ಟು ಇಳಿಕೆಯಾಗುತ್ತದೆ ಎಂಬುದು ಕೃಷಿ ತಜ್ಞರ ಅಭಿಮತ. ಮೇಲ್ಮೈ ನೀರು ಕೊರತೆಯಾಗುವುದರಿಂದ ಅಂತರ್ಜಲದ ಮೇಲೆ ಒತ್ತಡ ಬೀಳುತ್ತದೆ.

ಅಲ್ಲೊಂದು-ಇಲ್ಲೊಂದು ಓಯಸಿಸ್‌ನಂತಹ ಪರಿಹಾರ ಕಾರ್ಯಗಳು ನಡೆದರೆ, ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಲು ಅಸಾಧ್ಯ. ಕೆಲವೇ ದೇಶಗಳು ಕೈಜೋಡಿಸಿದರೂ ಗುಣಾತ್ಮಕ ಪರಿಣಾಮ ಕಡಿಮೆ. ಎಲ್ಲರೂ, ಎಲ್ಲ ದೇಶಗಳೂ ಏಕೋದ್ದೇಶದಿಂದ ಒಂದಾಗಬೇಕು. ಹಸಿರು ಮನೆ ಪರಿಣಾಮಗಳನ್ನು ತಗ್ಗಿಸಲು ಕ್ರಮವಹಿಸಬೇಕು. ಸುಸ್ಥಿರ ಅಭಿವೃದ್ಧಿಯತ್ತ ಕ್ರಮವಹಿಸಬೇಕು, ಅದರಲ್ಲಿಯೂ ಅಭಿವೃದ್ಧಿ ಹೊಂದಿದ ಅಥವಾ ಹವಾಮಾನ ವೈಪರೀತ್ಯಕೆ ಹೆಚ್ಚು ಕಾಣಿಕೆ ಸಲ್ಲಿಸಿರುವ ದೇಶಗಳು ಮುಂದಾಳತ್ವ ವಹಿಸಬೇಕು. ಆಗಲೇ ಒಂದು ಮಟ್ಟಿಗಿನ ಪರಿಹಾರ ದೊರೆಯಬಲ್ಲದು.

ಚಿತ್ರ-ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*