`ಹೆಸ್ಕಾಂ' ಕಣ್ಣು ಮುಚ್ಚಾಲೆಗೆ ಭದ್ರಾಪುರ ಬಾಯಾರಿ ಅಭದ್ರ!
ಬೃಹತ್ ಪ್ರಮಾಣದ ಶಾಶ್ವತ ಜಲಾಶಯಗಳಿಂದ ಇನ್ನು ನಗರಗಳಿಗೆ ಮಾತ್ರ ಕುಡಿಯುವ ಸಿಹಿ ನೀರು ಪೂರೈಕೆ ಸಾದ್ಯ. ಕಾರಣ ನಗರ ಹಾಗು ಪಟ್ಟಣ ಪ್ರದೇಶದ ಜನಸಂಖ್ಯೆ ಹಾಗೆ ಬೆಳೆಯುತ್ತಿದೆ. ಹಳ್ಳಿಗಳ ಪಾಲಿನ ಎಲ್ಲವನ್ನೂ.. ನೀರನ್ನೂ ಸಹ ಬಿಡದೇ ಈ ಬೃಹನ್ನಗರಗಳು ಕುಡಿಯುತ್ತಿವೆ!
ಇನ್ನು ಹಳ್ಳಿಗಳಿಗೆ ಅಲ್ಲಲ್ಲಿ ನಿರ್ಮಿಸಲಾಗುವ ನೀರೆತ್ತಿ ತುಂಬಿಸಿದ ಸಣ್ಣ ಕೆರೆ ಅಥವಾ ಸಮೀಪದ ಕ್ಯಾನೆಲ್ ನಿಂದ ಭರಿಸಲಾದ ತಾತ್ಪೂರ್ತಿಕ ಜಲಾಶಯಗಳಿಂದ ಮಾತ್ರ ಸಿಹಿ ನೀರು ಕುಡಿಯುವ ಭಾಗ್ಯ. ಅದೂ ವಿದ್ಯುತ್ ಪೂರೈಕೆ ಸಕಾಲದಲ್ಲಿ ಇದ್ದರೆ. ಕರ್ನಾಟಕದಲ್ಲಿ ಉತ್ಪತ್ತಿಸಲಾಗುವ ೬೦% ವಿದ್ಯುತ್ ಶಕ್ತಿಯಲ್ಲಿ ಸದ್ಯ ೫೪% ಬಳಕೆಯಾಗುವುದು ನಮ್ಮ ಸಿಲಿಕಾನ್ ಕಣಿವೆ ಬೆಂಗಳೂರಿಗೆ! ಉಳಿದ ೬% ವಿದ್ಯುತ್ ನಲ್ಲಿ ನಮ್ಮ ಗ್ರಾಮಗಳು ಬೆಳಗಬೇಕು. ಬೇರೆ ರಾಜ್ಯಗಳಿಂದ ಕೊಂಡು ತರುವ ಬಾಕಿ ೪೦% ವಿದ್ಯುತ್ ರಾಜ್ಯದ ೨೯ ಜಿಲ್ಲಾ ಕೇಂದ್ರಗಳಿಗೆ ಪೂರೈಕೆಯಾಗಬೇಕು!
ಭದ್ರಾಪುರ ಗ್ರಾಮ ಈ ಪರಿಸ್ಥಿತಿಗೊಂದು ಕನ್ನಡಿ. ಹುಬ್ಬಳಿಯಿಂದ ಗದುಗಿಗೆ ಹೋಗುವ ರಸ್ತೆ. ಅಕ್ಕ-ಪಕ್ಕದಲ್ಲಿ ಕಪ್ಪು ಮಣ್ಣಿನ ಹೊಲಗಳ ಭೂಮಿ. ಹುಬ್ಬಳ್ಳಿಯಿಂದ ೨೨ ಕಿ.ಮೀ. ದೂರ. ನವಲಗುಂದ ತಾಲ್ಲೂಕಿನ ಕಟ್ಟ ಕಡೆಯ ಹಳ್ಳಿ. ಸೈದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಟ್ಟು ೪ ಹಳ್ಳಿಗಳು. ಮಜ್ಜಿಗುಡ್ಡ, ಬಸಾಪುರ, ಭದ್ರಾಪುರ ಹಾಗು ಸೈದಾಪುರ. ಈ ಎಲ್ಲ ಹಳ್ಳಿಗಳ ಕಥೆ ಭಿನ್ನವಾಗಿವೆ. ಸದ್ಯ ಇಲ್ಲಿ ಭದ್ರಾಪುರದ್ದು.
ಸುಜಲಾ ಜಲಾನಯನ ಯೋಜನೆ ಅಡಿಯಲ್ಲಿ ೧ ಕೋಟಿ ೫೯ ಲಕ್ಷ ರುಪಾಯಿಗಳ ವೆಚ್ಚದಲ್ಲಿ ಸಿಹಿ ಕುಡಿಯುವ ನೀರಿನ ಬೃಹತ್ ಕೆರೆಯೊಂದನ್ನು ಭದ್ರಾಪುರದಲ್ಲಿ ನಿರ್ಮಿಸಲಾಗಿದೆ. ೧ ವರ್ಷ ಪೂರ್ತಿ ನಡೆದ ಈ ಕೆರೆಯ ಕಾಮಗಾರಿಯ ಫಲವಾಗಿ ೯ ಎಕರೆ ಕೆರೆ ಇಂದು ತಲೆ ಎತ್ತಿನಿಂತಿದೆ. ಇತ್ತೀಚೆಗೆ ಅಕಾಲಿಕವಾಗಿ ಮಳೆಯಾದಾಗ ನೀರು ನಿಂತಿದ್ದು ಬಿಟ್ಟರೆ..ಕೆರೆ ಪೂರ್ತಿ ಒಣ..ಒಣ. ಕೆರೆ ತುಂಬ ಜಾಲಿ ಮುಳ್ಳಿನ ಪೊದೆಗಳು. ಕೆರೆಯ ಒಡ್ಡಿನ ಪಕ್ಕದಲ್ಲಿ ಮಿಕ್ಕ ೧ ಎಕರೆ ಪ್ರದೇಶದಲ್ಲಿ 'ಫಿಲ್ಟರ್' ಹಾಗು 'ಪಂಪ್ ಹೌಸ್' ನಿರ್ಮಿಸಲಾಗಿದೆ. ಅಲ್ಲಿಂದ ಸುಮಾರು ೨ ಕಿ.ಮೀ. ದೂರದ ವರೆಗೆ ಪೈಪ್ ಲೈನ್ ಕಾಮಗಾರಿ ಸಹ ಪೂರ್ಣಗೊಂಡಿದ್ದು, ಊರ ಮುಂದೆ ಸುಮಾರು ೫೦ ಸಾವಿರ ರುಪಾಯಿ ವೆಚ್ಚದಲ್ಲಿ ಸಿಹಿ ನೀರಿನ ಟ್ಯಾಂಕ್ ೬ ತಿಂಗಳ ಹಿಂದೆ ನಿರ್ಮಾಣಗೊಂಡಿದೆ. ಆದರೆ ಇಂದಿಗೂ ಕುಡಿಯಲು ನೀರು ಲಭ್ಯವಾಗಿಲ್ಲ.
ಸೌಜನ್ಯ.. 'ಹೆಸ್ಕಾಂ' !- ಹುಬ್ಬಳ್ಳಿ ಇಲೆಕ್ಟ್ರಿಸಿಟಿ ಸಪ್ಲಾಯ್ ಕಂಪನಿ.
ಭದ್ರಾಪುರ ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ್ ಹಾವಿನ ಹಾಗು ಗ್ರಾ.ಪಂ. ಲೆಕ್ಕಿಗ ಬಸವರಾಜ್ ಕೊಳೇರಿ ಅವರ ಪ್ರಕಾರ- "ಭದ್ರಾಪುರ ಗ್ರಾಮ ಪಂಚಾಯ್ತಿ ಈಗಾಗಲೇ ೨ ಲಕ್ಷ ರುಪಾಯಿ ಹಣವನ್ನು ೬ ತಿಂಗಳ ಹಿಂದೆಯೇ 'ಹೆಸ್ಕಾಂ'ಗೆ ಪಾವತಿಸಿದೆ. ಇನ್ನೂವರೆಗೂ ಅವರು ಈ ಕೆರೆಗೆ, ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗೋಜಿಗೆ ಹೋಗಿಲ್ಲ. ನೂರೆಂಟು ತಾಂತ್ರಿಕ ಹಾಗು ಆಡಳಿತಾತ್ಮಕ ಕಾರಣಗಳ ಮಳೆಯನ್ನೇ ಅಧಿಕಾರಿಗಳು ಹಲವಾರು ತಿಂಗಳಿಂದ ಸುರಿಸುತ್ತಿದ್ದಾರೆ! ಬಹುಶ: ಆ ಎಲ್ಲ ಕಾರಣಗಳನ್ನು ಕ್ರೊಢೀಕರಿಸಿದರೆ ಕೆರೆ ತುಂಬಬಹುದೇನೋ? ತುಳುಕ ಬಹುದೇನೋ!" ಎಂದು ಹತಾಷರಾಗಿ ಹೇಳುತ್ತಾರೆ.
ಭದ್ರಾಪುರದ ವಿದ್ಯುತ್ ಬಿಲ್ ಕಲೆಕ್ಟರ್ ಫಕ್ಕೀರಸಾಬ್ ನದಾಫ್ ಹೇಳುವಂತೆ- "ಹುಬ್ಬಳ್ಳಿ ಇಲೆಕ್ಟ್ರಿಸಿಟಿ ಸಪ್ಲಾಯ್ ಕಂಪನಿ ಭದ್ರಾಪುರದ ಈ ಕೆರೆಯ ಬಳಿ ನೀರು ಸೋಸಲು ಒಂದು ೫ ಎಚ್.ಪಿ. ಮೋಟಾರ್, 'ಫಿಲ್ಟರ್'ಗಾಗಿ ಹಾಗು ಕೆರೆಯಿಂದ ನೀರೆತ್ತಲು ೫ ಎಚ್.ಪಿ. ಮೋಟಾರ್ ಅಂತೆಯೇ ಇಲ್ಲಿಂದ ಸುಮಾರು ೫ ಕಿ.ಮೀ. ದೂರದ ಶಿಶುವಿನಹಳ್ಳಿ ಬಳಿಯ ಕ್ಯಾನೆಲ್ ನಿಂದ ಈ ಜಲ ನಿರ್ಮಲ ಯೋಜನೆ ಕೆರೆಗೆ ನೀರು ಹರಿಸಲು ೫ ಎಚ್.ಪಿ. ಮೋಟಾರ್ ಜೋಡಿಸಬೇಕಿದೆ. ಇದಕ್ಕೆಲ್ಲ ಸೂಕ್ತ ಪ್ರಮಾಣದ ಟ್ರಾನ್ಸ್ ಫಾರ್ಮರ್ ಹಾಗು ವಿದ್ಯುತ್ 'ಹೆಸ್ಕಾಂ' ಹರಿಸಬೇಕಿದೆ. ಸದ್ಯ ಅದು 'ಕಾರಣಗಳ' ತ್ಸುನಾಮಿ ಹರಿಸಿ ಶಾಕ್ ನೀಡುತ್ತಿದೆ. ಇದ್ದೊಂದು ಸಿಹಿ ನೀರಿನ ಬೋರ್ ಸಹ ರಿಪೇರಿ ಹಂತದಲ್ಲಿದೆ. ಆಗೊಮ್ಮೆ..ಈಗೊಮ್ಮೆ ಜನರ ಒತ್ತಡಕ್ಕೆ ಮಣಿದು ನೀರು ಬಿಡುತ್ತೇನೆ. ಹಾಗಾಗಿ ಹೆಚ್ಚಾಗಿ ನಮ್ಮ ಜನ ಉಪ್ಪು ನೀರನ್ನು ಕುಡಿಯಲು ಅನಿವಾರ್ಯವಾಗಿ ಬಳಸುತ್ತ ಕಾಲ ತಳ್ಳಬೇಕಿದೆ" ಎಂದು ಅಲವತ್ತುಕೊಂಡರು.
ಈ ಕುರಿತಂತೆ ಭದ್ರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸೈದಾಪುರ ನಿವಾಸಿ ಕರಿಯಪ್ಪ ಭರ್ಮಪ್ಪ ಅಜ್ಜಣ್ಣವರ್ ಹಾಗು ಉಪಾಧ್ಯಕ್ಷ ಫಕ್ರುಸಾಬ್ ಬುಡ್ನೇಸಾಬ್ ನದಾಫ್ ಅವರನ್ನು ನಾನು ಮಾತನಾಡಿಸಿದೆ. "ಧಾರವಾಡ ಜಿಲ್ಲಾ ಪಂಚಾಯ್ತಿ ಕೆ.ಡಿಪಿ. ಸಭೆಯೊಳಗ ಸುಖಾ ಸುಮ್ಮನ ದೇವರಂಥಾ ಮನುಷ್ಯ, ಈ ಕೆರಿ ರುವಾರಿ, ನಮ್ಮ ಪಂಚಾಯಿತಿ ಸೆಕ್ರೆಟರಿ ಗೋನಾಳ ಮ್ಯಾಲೆ ಕೆಲವರು ಆರೋಪ ಮಾಡಿದ್ರು. ಅಧಿಕಾರಿಗಳು ಸ್ಥಳ ಪರಿಶೀಲನಾ ಮಾಡದ ಏಕಾಏಕಿ ಅವರನ್ನ 'ಸಸ್ಪೆಂಡ್' ಮಾಡಿದ್ರು. ಅವರ ಪುಣ್ಯದಿಂದ ನಾವು ತೊಟ್ಟು ನೀರು ಕುಡಿಯುವಂಗ ಆಗಿತ್ತು. ಈ ಜನ ಪ್ರತಿನಿಧಿಗಳು ಅನಿಸಿಕೊಂಡವರು ಸಭೆಗೆ 'ಹೆಸ್ಕಾಂ' ದವರ ಹೊಣೆಗೇಡಿತನಾ ತಿಳಿಸೋದು ಬಿಟ್ಟು, ಕೆಲಸಾ ಮಾಡಿದವನ ಮ್ಯಾಲೆ ಗೂಬಿ ಕುಂದಿರಿಸಿದ್ರು. ಈಗ ಆ ಕೆರಿ ತುಂಬೆಲ್ಲ ಮುಳ್ಳಿನ ಕಂಟಿ ಬೆಳೆದು ನಿಂತೈತಿ..ನೀವ ಹೇಳ್ರಿ ಏನು ಮಾಡೋಣು?" ನಿಟ್ಟುಸಿರು ಬಿಟ್ರು.
ಭದ್ರಾಪುರ ನಾಟಿ ವೈದ್ಯಕೀಯಕ್ಕೆ ಹೆಸರಾದ ಪ್ರಸಿದ್ಧ ಹಳ್ಳಿ. ಕೈ-ಕಾಲು ಮುರಿದರೆ ಇಲ್ಲಿನ ನಾಟಿ ವೈದ್ಯರು ಅತ್ಯಂತ ವೃತ್ತಿಪರವಾಗಿ ಕಟ್ಟಿ ಬೆಸೆಯಬಲ್ಲವರು! ಇಲ್ಲಿನ ಒಟ್ಟು ಜನಸಂಖ್ಯೆ ೪೩೭೫. ಮತದಾರರು ೨,೧೦೦. ೧ ರಿಂದ ೮ನೇಯ ಈಯತ್ತೆಯ ವರೆಗಿನ ೧ ಸರಕಾರಿ ಪ್ರಾಥಮಿಕ ಶಾಲೆ ಇದೆ. ಊರಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ೪ ಬೋರ್ ವೆಲ್ ಕೊರೆಸಲಾಗಿದೆ. ೨ ಕೈ ಕೊಟ್ಟಿವೆ. ಉಳಿದ ೨ ಕಹಿ ನೀರು..ಬಳಕೆಗೂ ಅಯೋಗ್ಯ. ರೈತರ ಹೊಲಗಳಲ್ಲಿ ೮ ಬೋರ್ ವೆಲ್ ಗಳಿವೆ. ಅವುಗಳಲ್ಲಿ ೩ ಸಿಹಿ ನೀರು. ೨ ಈಗಾಗಲೇ ಬತ್ತಿವೆ! ಉಳಿದವೆಲ್ಲ ಸರಿ ಸುಮಾರು ಕಹಿ ನೀರು ಕೃಷಿಗೂ ಸಹ ಅಯೋಗ್ಯ.
ಗ್ರಾಮದ ವಯೋವೃದ್ಧೆ ಕಾಳಮ್ಮ ಬಡಿಗೇರ್ ಹೇಳುತ್ತಾರೆ.."ತಮ್ಮ..ಈಗ ನಮ್ಮ ಪಾಡು ಛೋಲೋ ಅನ್ನು. ಒಂದೊತ್ತು ಸವುಳ ನೀರು ನಮಗ ನಳದಾಗರೆ ಬರ್ತೈತಿ. ೧ ವರ್ಷದ ಹಿಂದ ನಮ್ಮ ಗಂಡಸರು ಟ್ರಾಕ್ಟರ್, ಸೈಕಲ್ ಮೋಟಾರು ಹಂಗ ಮಕ್ಕಳು ಹೆಣ್ಣ ಮಕ್ಕಳು ತಲಿ ಮತ್ತ ಸೊಂಟದ ಮ್ಯಾಲೆ ನೀರು ಹೊತ್ತಿದ್ದ ಐತಿ. ನಮ್ಮ ಚಿಕ್ಕ-ದೊಡ್ಡಪ್ಪಗೋಳ ಹೊಲದಿಂದ ೨ ರುಪಾಯಿಕ ಒಂದ ಕೊಡಧಾಂಗ ನೀರು ತಂದು ಕುಡಿದೀವಿ. ನೀರ ಪೂರೈಸಾಕ ಬ್ಯಾರೆ ಲೈನ್ ಕರೆಂಟ್ ಏಳೆದಾರಂತ ಹಂಗಾಗಿ ಸವುಳ ನೀರರೆ ನಮಗ ಸಿಗುವಂಗಾಗೇತಿ. ಇಲ್ಲಂದ್ರ ರಾತ್ರಿ ೧೦ ರಿಂದ ಬೆಳಿಗ್ಗೆ ೬ ಗಂಟೆ ತನಕ ಕರೆಂಟ್ ಕೇಳ ಬ್ಯಾಡಾ. ಹಂಗ ಮೂರು ಫೇಜು ೪ ತಾಸು, ೧ ಫೇಜ ೬ ತಾಸು..ಲೆಕ್ಕ ಹಾಕ್ಯೋ, ಇನ್ನ ಉಳಿದಿದ್ದು ತಾಸಿನೊಳಗ ಕರೆಂಟ್ ಹೋಗಿ..ಬಂದು..ಹೋಗಿ ಬಂದು ಮಾಡಿ ನಮ್ಮ ಜೀವ ತಿಂತೈತಿ."
ಭದ್ರಾಪುರದಲ್ಲಿ ಕಳೆದ ೫ ವರ್ಷಗಳಲ್ಲಿ ಜಾನುವಾರುಗಳ ಸಂಖ್ಯೆ ತೀವ್ರ ಇಳಿದಿದೆ. ಕಾರಣ ಮಳೆ ಜೂಜಿನಂತೆ ಅತಂತ್ರ. ಸಾಕಷ್ಟು ನೀರಿಲ್ಲ. ಹಾಗಾಗಿ ಬೆಳೆ ಇಲ್ಲ, ಹುಲ್ಲು-ಮೇವು ಇಲ್ಲ. ಇರುವ ಜಲ ಮೂಲಗಳೆಲ್ಲ ಕಹಿ ನೀರಿನ ಪಾತ್ರೆಗಳು. ಬಳಸಲು ಸವುಳ ನೀರು ಕೂಡ ಇಲ್ಲ! ಕೆರೆಗೆ ಶಿಶುವಿನಹಾಳದ ಕೆನಾಲ್ ನೀರು ಹರಿಯುವ ವರೆಗೆ..ಭದ್ರಾಪೂರವೂ ಸಹ ಬಾಯಾರಿದ ಹಳ್ಳಿಗಳ ಸಾಲಿಗೆ ಸೇರ್ಪಡೆ. ಭದ್ರಾಪುರದವರು ನೀರಿನ ಹಕ್ಕಿಗಾಗಿ ಹೋರಾಡಿ..ಗೆದ್ದು ಕೊನೆಗೆ ಸೋತು ಈಗ ಬಸವಳಿದು ಕೈ ಎತ್ತಿದ್ದಾರೆ. 'ಹೆಸ್ಕಾಂ' ಯಥಾ ಪ್ರಕಾರ ಕಣ್ಣು ಮಿಟುಕಿಸಿ.
ಚಿತ್ರಗಳು: ಜೆ.ಜಿ.ರಾಜ್, ಧಾರವಾಡ.
ಲೇಖನ- ಹರ್ಷವರ್ಧನ ಶೀಲವಂತ.
- 819 reads
Email this page
Printer-friendly version
ಲೇಖಕರು
ಹೆಸರು
ಹರ್ಷವರ್ಧನ ವಿ. ಶೀಲವಂತ
ಪರಿಚಯ
ಸಹಾಯಕ ಪ್ರಾಧ್ಯಾಪಕ, ವಿದ್ಯಾಭಾರತಿ ಪ್ರತಿಷ್ಠಾನದ IBMR ಪತ್ರಿಕೋದ್ಯಮ ಮಹಾವಿದ್ಯಾಲಯ, ಹುಬ್ಬಳ್ಳಿ. ಕೃಷಿ ಮಾಧ್ಯಮ ಕೇಂದ್ರ (ಕಾಮ್) ಫೆಲೋ. ಸಿಡಿಎಸ್ ಸ್ವಯಂಸೇವಕ. ನಾಗರಿಕ ಪತ್ರಿಕೋದ್ಯಮದ ಪ್ರತಿಪಾದಕ. ಹವ್ಯಾಸಿ ಪತ್ರಕರ್ತ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 3 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 12 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 9 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |











ಹಳ್ಳಿಗಳಿಂದಲೇ ನಗರಗಳ ಅಭಿವೃದ್ಧಿ ಸಾಧ್ಯ. ಆದರೆ ಈಗ ಅಭಿವೃದ್ಧಿಯ ಬೆನ್ನೆಲುಬು ಅನ್ನಿಸಿಕೊಂಡ ಆ ಹಳ್ಳಿಗಳಿಗೇ ಮೂಲಭೂತ ಸೌಕರ್ಯಗಳ ಸೌಲಭ್ಯಗಳಿಲ್ಲ ಎನ್ನುವುದು ದುರದುಷ್ಟಕರ. ನಾನು ಕೂಡ ನವಲಗುಂದದವನೇ. ನೀರಿನ ಬವಣೆ ಚೆನ್ನಾಗಿ ಬಲ್ಲೆ. ಈ ಲೇಖನ ಮಾತ್ರ -ಹೇಗೆ ನಮ್ಮ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಸರಕಾರದ ಇಲಾಖೆಗಳು ನೋಡಿಕೊಳ್ಳುತ್ತವೆ ಎಂಬುದನ್ನು ವಿವರಿಸುತ್ತದೆ.
ಸಮುದಾಯದ ಸಹಭಾಗಿತ್ವದಲ್ಲಿ ಕಾರ್ಯಗಳು ನಡೆದರೂ ಇಲಾಖೆಗಳ ಉದಾಸೀನತೆ, ಸ್ವಜನಪಕ್ಷಪಾತ ನಮ್ಮ ಹಳ್ಳಿಗಳನ್ನು ಹಾಳುಗೆಡುವುತ್ತಿವೆ. ಹೀಗೆಯೇ ಮುಂದುವರೆದರೆ ಹಳ್ಳಿಗಳೆಲ್ಲ ನಗರಗಳಿಗೆ ಸೌಕರ್ಯ ಹುಡುಕಿಕೊಂಡು ವಲಸೆ ಬರಲಿವೆ.
ವಾಟರ್ ಪೋರ್ಟಲ್ ಉಪಯುಕ್ತ ಕೆಲಸ ಮಾಡುತ್ತಿದೆ. ಹೀಗೆಯೇ ಮುಂದುವರೆಯಲಿ.ಕಣ್ಣಿದ್ದವರು ಎಚ್ಚೆತ್ತುಕೊಳ್ಳುತ್ತಾರೆ.
ಸಿದ್ದು ಪೂಜಾರ
ನವಲಗುಂದ.
Post new comment