ಷಷ್ಠಿ ಪೂರ್ತಿ ಮಾಡಿಸಿಕೊಂಡ ಗಂಗೆ
ಷಷ್ಠಿ ಪೂರ್ತಿ ಮಾಡಿಸಿಕೊಂಡ ಗಂಗೆ
- ಅನಸೂಯ ಶರ್ಮ, CAM ಫೆಲೊ
ಅರವತ್ತೈದು ವಸಂತಗಳನ್ನು ಕಂಡ ನಮ್ಮ ಗಂಗೆಯ ಕಥೆ ಬರೆಯ ಹೊರಟರೆ ಅದು ಗಂಗಾಯಣವೇ ಆದೀತು. ಗಂಗೆ ಬೇರೆ ಯಾರೂ ಅಲ್ಲ. ನಮ್ಮ ಮನೆಯ ಸಿಹಿನೀರಿನ ಅಕ್ಷಯ ಪಾತ್ರೆ. ಅರ್ಥಾತ್, ಬಾಯಾರಿದವರಿಗೆ ಸದಾಕಾಲ ಸಿಹಿನೀರು ಹಂಚುತ್ತಿರುವ ಸಂತೃಪ್ತೆ. ಇವಳಿಗೆ ಗಂಗೆ ಎಂಬ ಹೆಸರು ಬಂದಿದ್ದೂ ಒಂದು ಆಕಸ್ಮಿಕವೇ. ೮೫ ವರ್ಷದ ನಮ್ಮ ಅಜ್ಜಿಗೆ ಸಾಯುವುದರೊಳಗೆ ಒಮ್ಮೆ ಕಾಶಿಯಾತ್ರೆ ಮಾಡಬೇಕೆಂಬ ಮಹದಾಸೆ. ಅದು ಈಡೇರದಿದ್ದಾಗ, ಬಾವಿಯ ನೀರು ಸೇದಿ ಸ್ನಾನ ಮಾಡುತ್ತಾ, ‘ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಹೇಳುತ್ತಿದ್ದರು. ಅರ್ಥಾತ್ ಇಷ್ಟೆಲ್ಲಾ ನದಿಗಳ ನೀರಿನಲ್ಲಿ ಸ್ನಾನ ಮಾಡಿದ ಪುಣ್ಯ ಈ ಬಾವಿಯ ನೀರಿನಿಂದ ಸಿಗುತ್ತದೆ ಎಂದು. ಹಾಗಾಗಿ ನಮ್ಮ ಮನೆಯ ನೀರಿನ ಅಕ್ಷಯ ಪಾತ್ರೆ ಗಂಗೆಯಾದಳು.
ಮನೆಯಲ್ಲಿ ಜನಿಸಿದ ಮಗುವಿಗೆ ಮೂರು ತಿಂಗಳಾದಾಗ ಬಾಣಂತಿಯ ಕೈಯಿಂದ ಗಂಗೆ ಪೂಜೆಯಾಗುತ್ತಿದ್ದುದೂ ಈ ಬಾವಿಗೆ. ಹಿಂದಿನಿಂದ ಬಂದ ಸಂಪ್ರದಾಯ. ಮೂರು ತಿಂಗಳವರೆಗೆ ಬಾಣಂತಿ ತಣ್ಣೀರು ಮುಟ್ಟುವಂತಿಲ್ಲ. ನಂತರ ಓಡಾಡ ತೊಡಗಿದಾಗ, ಶೀತ ಬಾಧೆಗಳಿಂದ ತನ್ನನ್ನೂ, ಮಗುವನ್ನೂ ರಕ್ಷಿಸು ತಾಯಿ ಎಂದು ಬೇಡುವ ಪರಿ. ಬಾವಿ ಕಟ್ಟೆಗೆ ಅರಿಶಿನ ಕುಂಕುಮ ಹಚ್ಚಿ, ಹತ್ತಿಯಿಂದ ಮಾಡಿದ ಗೆಜ್ಜೆ-ವಸ್ತ್ರ ತೊಡಿಸಿ, ತೆಂಗಿನಕಾಯಿ, ಬಾಳೆಹಣ್ಣು, ಕಲ್ಲು ಸಕ್ಕರೆ ನೇವೇದ್ಯ ಮಾಡಿ, ಕರ್ಪೂರದಾರತಿ ಎತ್ತಿ ಬಾಗಿನ ನೀಡುವುದು ಸಂಪ್ರದಾಯ. ಕೊನೆಯಲ್ಲಿ ಬಾವಿಯಿಂದ ನೀರು ಸೇದಿ ತೀರ್ಥ ತೆಗೆದುಕೊಂಡರೆ, ಬಾಣಂತಿ ಮಗುವಿಗೆ ಯಾವದೇ ಶೀತ ಸಂಬಂಧಿ ಖಾಯಿಲೆಗಳು ಕಾಡುವದಿಲ್ಲವೆಂಬ ಅಚಲ ನಂಬಿಕೆ. ಸ್ವರ್ಣಗೌರಿ ಹಬ್ಬದ ಮರುದಿನ ಗಂಗೆ ಪೂಜೆ ಮಾಡುವ ಪದ್ಧತಿ ಇಂದಿಗೂ ಪ್ರಚಲಿತ. ನಮ್ಮ ಬಾವಿ ಗಂಗೆಯಾಗಲು ಇದೂ ಒಂದು ಕಾರಣ.
ಕೆಲವು ದಶಕಗಳ ಹಿಂದೆ ಸರಿದರೆ, ಗಂಗೆಯ ಉಗಮಕ್ಕೆ ತಲುಪಬಹುದು. ಮಂಡ್ಯದ ಇಂದಿನ ಸುಭಾಷ್ ನಗರ ಅಂದಿನ ಬನ್ನೂರು ಬಡಾವಣೆ. ಅಲ್ಲೊಂದು ಇಲ್ಲೊಂದು ಮನೆ. ಕಾವೇರಿ ನೀರಿನ ಒಳ ಹರಿವಿಗಾಗಿ ಕಟ್ಟುತ್ತಿದ್ದ ಹುಲಿಕೆರೆ ಟನಲ್’ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನಮ್ಮ ತಂದೆಗೆ ಮಂಡ್ಯದಲ್ಲೇ ಇರಬೇಕಾದ ಅನಿವಾರ್ಯ. ಮನೆ ಕಟ್ಟಿಸಲು, ನೀರಿಗಾಗಿ ಬಾವಿ ತೋಡಿಸಿದ್ದು. ನಾಲ್ಕಾಳು ಉದ್ದ ತೋಡಿದಾಗಲೇ ಜಿನುಗ ತೊಡಗಿದ ನೀರು, (ಒಂದಾಳಿಗೆ ಐದು ಅಡಿಯ ಲೆಕ್ಕ.) ಇನ್ನೂ ಒಂದಾಳು ತೋಡಿ ಕಟ್ಟೆ ಕಟ್ಟಿದ್ದು. ಮಳೆಗಾಲದಲ್ಲಿ ನೀರು ಸೇದಲು ಮಾರುದ್ದ ಹಗ್ಗ ಸಾಕಾಗುತಿತ್ತು.
ಕಲ್ಲಹಳ್ಳಿ, ಕೋಣೇನಹಳ್ಳಿ, ಹಾಗೂ ಮಂಡ್ಯದ ಕೆರೆಗಳು ಅಸ್ತಿತ್ವದಲ್ಲಿದ್ದ ಕಾಲ. ಮಳೆಗಾಲದಲ್ಲಿ ಬಾವಿಯ ನೀರು ಭೂಮಿಯ ಮಟ್ಟಕ್ಕೆ ಏರುತ್ತಿತ್ತು. ಆಗ ಶುರುವಾಗುತ್ತಿತ್ತು ಪರದಾಟ. ಊಟದ ಮನೆಯ ಗೋಡೆಗಳಿಗೆ ಶೀತ ಏರುತ್ತಿತ್ತು. ಬಾವಿಯಲ್ಲಿ ನೀರು ಬತ್ತಿದ್ದೇ ಇಲ್ಲ. ಕ್ರಮೇಣ ಕಾರಣಾಂತರಗಳಿಂದ ಕೆರೆಗಳೆಲ್ಲಾ ಇಲ್ಲವಾದವು. ಅಂದಿನಿಂದ ಭೂಮಿಯ ಮಟ್ಟಕ್ಕೆ ಏರುತ್ತಿದ್ದ ನೀರು ಎರಡು ಮೂರು ಅಡಿ ಕಮ್ಮಿಯಾಗಿದೆ. ಗೋಡೆಗೆ ಶೀತ ಏರುವುದೂ ನಿಂತಿತು. ನೂರಾರು ಬಿಂದಿಗೆ ನೀರು ಸೇದಿದರೂ ಬೆಳಗಿನ ವೇಳೆಗೆ ಅಷ್ಟೇ ನೀರಿರುತ್ತಿತ್ತು.
ಎಪ್ಪತ್ತರ ದಶಕದಲ್ಲೊಮ್ಮೆ, ಬಾವಿಯಲ್ಲಿ ಬಿಟ್ಟಿದ್ದ ಪುಟ್ಟ ಆಮೆ ಮರಿ ಬೆಳಗಾಗುವ ಹೊತ್ತಿಗೆ ಕೊನೆಯುಸಿರೆಳೆದಿತ್ತು. ಕಾರಣ ಬಾವಿಯ ನೀರಿಗೆ ಎಲ್ಲಿಂದಲೋ ಬಂದು ಸೇರಿದ ಕಲುಷಿತ ನೀರು. ತಕ್ಷಣ ನೀರೆಲ್ಲಾ ಖಾಲಿ ಮಾಡಿಸಿದಾಗ ಬಾವಿಯಲ್ಲಿ ಸಿಕ್ಕಿದ್ದು ನಾಲ್ಕಾರು ಚೊಂಬು, ಚಮಚ, ಸಣ್ಣ ತಟ್ಟೆಗಳು. ಬಾವಿಯ ನೀರಿನೊಳಕ್ಕೆ ಎಸೆದಾಗ ಆಗುವ “ಟುಳಕ್” ಶಬ್ದ
ಕೇಳಲು ಮಕ್ಕಳು ಎಸೆದಿದ್ದ ಪಾತ್ರೆಗಳು. ಆಗಲೇ ತಿಳಿದಿದ್ದು ತಳ ದಲ್ಲಿದ್ದ ದೊಡ್ಡ ಬಂಡೆಯ ಸಂದಿನಿಂದ ನೀರು ಒಸರುವ ವಿಸ್ಮಯ.
ಮನೆಯ ಮಕ್ಕಳೊಂದಿಗೆ, ಬೀದಿಯ ಹೆಣ್ಣು ಮಕ್ಕಳೆಲ್ಲರಿಂದ ಗಂಗೆಪೂಜೆ ಮಾಡಿಸಿಕೊಂಡು, ಇಂದಿಗೂ ಶುಭ್ರವಾದ ನೀರಿನ ಸೆಲೆ ಉಳಿಸಿಕೊಂಡಿರುವ ಗಂಗೆಗೀಗ ೬೬ ವರ್ಷ. ಅವಳ ಸಹಾಯಕ ಮರದ ರಾಟೆಗೆ ೪೫ ವರ್ಷ. ರಜೆಗೆಂದು ಅಜ್ಜಿಯ ಮನೆಗೆ ಬರುವ ಮೊಮ್ಮಕ್ಕಳಿಗೆ ಹಗ್ಗ ಸುತ್ತಿ ನೀರು ಸೇದುವದೇ ಒಂದು ಆಟ. ಹೆಣ್ಣು ಮಕ್ಕಳಿಗೆ ಹರಟೆ ಹೊಡೆಯಲು ಪ್ರಿಯವಾದ ಕಟ್ಟೆ.
ಈಗ ಸುತ್ತಲೂ ಮನೆಗಳಿವೆ. ನಮ್ಮ ಅಂಗಳಕ್ಕೂ ಸಿಮೆಂಟಿನ ಲೇಪವಾಗಿದೆ. ೨೨ಅಡಿ ದೂರದಲ್ಲಿ ಒಂದು ಕೊಳವೆ ಬಾವಿ ಕೊರೆದಿದ್ದಾರೆ. ಎದುರು-ಬದರಿನ ಬಾವಿಗಳಲ್ಲಿ ಕೆಲವನ್ನು ಮುಚ್ಚಿದ್ದಾರೆ, ಕೆಲವು ಬತ್ತಿ ಹೋಗಿವೆ. ಆದರೆ ನಮ್ಮ ಗಂಗೆಯ ನೀರು ಬತ್ತಿಲ್ಲ. ಇದು ಪೂರ್ವಜರ ಪುಣ್ಯವೋ, ಹೆಣ್ಣು ಮಕ್ಕಳ ಗಂಗೆ ಪೂಜೆಯ ಮಹಿಮೆಯೋ, ಅಂತು ಗಂಗೆ ನಮ್ಮಲ್ಲಿ ಸ್ಥಿರವಾಗಿ ನಿಂತಿದ್ದಾಳೆ. ಅಜ್ಜಿಯ ವಯಸ್ಸಿನ ಗಂಗೆಯ ಕಥೆ ಹೇಳಿದವರಿಗೂ ಕೇಳಿದವರಿಗೂ ಪುಣ್ಯ ಕಟ್ಟಿಟ್ಟ ಬುತ್ತಿ ಎಂದು ಚಿಕ್ಕಪ್ಪ ಹೇಳುತ್ತಿದ್ದುದು ಸತ್ಯವೇನೋ ಅನ್ನಿಸುತ್ತೆ.
- 911 reads
Email this page
Printer-friendly version
ಲೇಖಕರು
ಹೆಸರು
ಮಲ್ಲಿಕಾರ್ಜುನ ಹೊಸಪಾಳ್ಯ
ಪರಿಚಯ
ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ. ನಾಟಿಬೀಜ ಸಂರಕ್ಷಣೆ ಮತ್ತು ದೇಸೀ ರೈತಜ್ಞಾನ ದಾಖಲಾತಿಯಲ್ಲಿ ವಿಶೇಷ ಆಸಕ್ತಿ. ಆ ಹಾದಿಯಲ್ಲಿ ವ್ಯಾಪಕ ಓಡಾಟ, ರೈತರ ಒಡನಾಟ, ಅಧ್ಯಯನ. ನಾಲ್ಕು ವರ್ಷ ‘ಗ್ರಾಮಮಿತ್ರ’ ಕೃಷಿ ಕ್ಯಾಲೆಂಡರ್ ಮತ್ತು ನಾಟಿತಳಿ ಕುರಿತ ‘ಪೈರು ಪಚ್ಚೆ’ ತ್ರೈಮಾಸಿಕದ ಸಂಪಾದಕತ್ವ. ಹವ್ಯಾಸಿ ಬರಹಗಾರ ಮತ್ತು ಛಾಯಾಗ್ರಾಹಕ. ತುಮಕೂರಿನಲ್ಲಿ ‘ಧಾನ್ಯ’ ಸಂಸ್ಥೆ ಸ್ಥಾಪನೆ. ನಿರಂತರ ಜಲ ಜಾಗೃತಿ ಕಾರ್ಯಕ್ರಮಗಳ ಸಂಘಟನೆ. ನೀರಿನ ಸುದ್ದಿಗಳಿಗೇ ಮೀಸಲಾದ ‘ಜಲಸಿರಿ’ ಮಾಹಿತಿ ಪತ್ರದ ಪ್ರಕಟಣೆ. ಕೃಷಿ ಮಾಧ್ಯಮ ಕೇಂದ್ರ, ಧಾರವಾಡ - ಸಂಸ್ಥೆಯಿಂದ ೨೦೦೪ ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಕೃಷಿ ಬರಹಗಾರ ಪ್ರಶಸ್ತಿ. ಕಳೆದೆರಡು ವರ್ಷಗಳಿಂದ ತುಮಕೂರು ಜಿಲ್ಲೆಯ ಪಾರಂಪರಿಕ ಜಲಮೂಲಗಳಾದ ತಲಪರಿಗೆಗಳ ಕುರಿತು ಅಧ್ಯಯನ. ಭೂಷಣ್ ಮಿಡಿಗೇಶಿಯವರ ಜೊತೆಗೂಡಿ ’ತಲಪರಿಗೆ ಜೀವಪೊರೆಯುವ ಜಲನಿಧಿ” ಪುಸ್ತಕ ಸಂಪಾದನೆ. ಪ್ರಕಟಿತ ಇತರ ಪುಸ್ತಕಗಳೆಂದರೆ, •ನಶಿಸುತ್ತಿರುವ ನೀರಿನ ಜ್ಞಾನ - ಕರ್ನಾಟಕದ ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳು (ಸಂಪಾದಕ) •ಕೃಷಿ ಆಚರಣೆ •ಬೀಜದ ಬುಟ್ಟಿ - ನಾಟಿ ತಳಿಗಳ ಲೋಕದಲ್ಲೊಂದು ಸುತ್ತು (ಇತರ ಲೇಖಕರೊಡಗೂಡಿ) •ಬೀಜದ ಹಕ್ಕು (ಸಂಗ್ರಹಾನುವಾದ) •ನೆಟ್ಟಿರಾಗಿ - ರಾಗಿ ಕೃಷಿಕರ ಹೊಸ ಬೆಳಕು •ಭತ್ತ-ಬರಿದಾಗುತ್ತಿರುವ ಅನ್ನದ ಬಟ್ಟಲು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 3 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 12 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 8 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |









Post new comment