ಮಳೆ ಬರುತ್ತಿದೆ, ಇಂಗಿಸಲು ಪ್ರಾರಂಭಿಸಿ

ಮಳೆ ನೀರನ್ನು ಸಂಗ್ರಹಿಸುವ ಸುಲಭ ವಿಧಾನ

ಮುಂಗಾರು ಮುಂಚಿನ ಮಳೆ ಬರತೊಡಗಿದೆ. ಬೆಂಗಳೂರಷ್ಟೇ ಅಲ್ಲ, ರಾಜ್ಯದ ಬಹುತೇಕ ಕಡೆ ಮಳೆಯಾಗುತ್ತಿದೆ. ಮಳೆ ನೀರಿಂಗಿಸುವ ಕೆಲಸ ಈಗಲಾದರೂ ಪ್ರಾರಂಭವಾಗಬೇಕು.

ಮನೆಯಲ್ಲಿ ಕೊಳವೆಬಾರಿ ಕೊರೆಸಿದ್ದರೆ, ತಾರಸಿ ಮೇಲೆ ಹಾಗೂ ಕಂಪೌಂಡ್‌ ಒಳಗೆ ಬೀಳುವ ಮಳೆ ನೀರನ್ನು ನಾಲ್ಕೈದು ಸಾವಿರ ರೂಪಾಯಿಗಳಲ್ಲಿ ಕೊಳವೆಬಾವಿಗೆ ಸೇರಿಸಲು ಸಾಧ್ಯ. ಒಂದಿಷ್ಟು ಪೈಪ್‌ಗಳು ಹಾಗೂ ಅತ್ಯಂತ ಸರಳ ಮಾದರಿಯಲ್ಲಿ ಶೋಧಕ (ಫಿಲ್ಟರ್‌) ಹಾಕಿಸುವ ಮೂಲಕ ಲಕ್ಷಾಂತರ ಲೀಟರ್‌ ನೀರನ್ನು ಭೂಮಿಯ ಒಡಲು ಸೇರಿಸಬಹುದು. ಈ ನೀರು ಬಹುತೇಕ ಶುದ್ಧವಾಗಿದ್ದು, ಕೊಳವೆ ಬಾವಿಗೆ ಸೇರಿದರೆ ಅಂತರ್ಜಲ ಮಟ್ಟ ಏರುತ್ತದೆ ಹಾಗೂ ನಿಮ್ಮ ಮನೆಯ ಕೆಳಗೇ ನೀರಿನ ತಿಜೋರಿ ಸಮೃದ್ಧಗೊಳಿಸಿದಂತಾಗುತ್ತದೆ.

ತಾರಸಿ ನೀರು ಸಂಗ್ರಹಿಸುವ ವಿಧಾನ ಹೀಗಿದೆ:

೧. ಮನೆಯ ತಾರಸಿಯಿಂದ ಮಳೆ ನೀರು ಹೊರ ಹೋಗಲು ಪೈಪ್‌ ಜೋಡಿಸಿ ಹಾಗೂ ಅದನ್ನು ನೇರವಾಗಿ ಪ್ಲಾಸ್ಟಿಕ್ ಡ್ರಮ್ ಒಂದಕ್ಕೆ ಜೋಡಿಸಿ.
೨. ಹೆಂಚಿನ ಮನೆಯಾದರೆ ಅಡ್ಡಡ್ಡ ಕತ್ತರಿಸಿದ ದೊಡ್ಡ ಪಿವಿಸಿ ಪೈಪುಗಳನ್ನು ಹೆಂಚುಗಳ ಕೊನೆಗೆ ಬಟ್ಟಲಿನಂತೆ ಜೋಡಿಸಿ, ನೀರನ್ನು ಡ್ರಮ್‌ನೊಳಗೆ ಸೇರುವಂತೆ ಮಾಡಿ. ಈ ಡ್ರಮ್‌ ಅನ್ನು ಶೋಧಕದಂತೆ ಬಳಸಿ. ೪ ಇಂಚು ಎತ್ತರ ಇದ್ದಿಲು ಹಾಕಿ ಅದರ ಮೇಲೆ ನಾಲ್ಕಿಂಚು ಮರಳನ್ನು ಸುರಿದರೆ ಫಿಲ್ಟರ್‌ ಸಿದ್ಧ. ಇದು ನೀರನ್ನು ಸೋಸಿ ಬಿಡುತ್ತದೆ. ಈ ನೀರು ಡ್ರಮ್‌ ಮೂಲಕ ಹೊರಬಂದು ನಿಮ್ಮ ಕೊಳವೆ ಬಾವಿ ಅಥವಾ ಭೂಗತ ನೀರಿನ ತೊಟ್ಟಿಯನ್ನು ಸೇರುವಂತಿರಲಿ.
೩. ಜಾಳಿಗೆಯೊಂದನ್ನು ಅಳವಡಿಸುವ ಮೂಲಕ ಪೈಪಿನಿಂದ ಬರುವ ನೀರಿನಲ್ಲಿರುವ ಕಸ ಕಡ್ಡಿ ಡ್ರಮ್-ಗೆ ಅಥವಾ ಸಂಪಿನೊಳಗೆ ಸೇರುವುದನ್ನು ತಡೆಯಿರಿ.

ಒಂದು ವೇಳೆ, ನೀರಿನ ತೊಟ್ಟಿ ಅಥವಾ ಸಂಪು ನಿಮ್ಮ ಮನೆಯಲ್ಲಿ ನೆಲ ಮಟ್ಟಕ್ಕಿಂತ ಕೆಳಗಿದ್ದರೆ, ದೊಡ್ಡ ಪ್ರಮಾಣದಲ್ಲಿ ಮಳೆನೀರು ಸಂಗ್ರಹ ಮಾಡಬಹುದು.

೧. ತಾರಸಿಯಲ್ಲಿ ಬೀಳುವ ಮಳೆನೀರನ್ನು ಪೈಪೊಂದರಲ್ಲಿ ಬರುವಂತೆ ಮಾಡಬೇಕು.
೨. ನೆಲಮಟ್ಟದಲ್ಲಿ ೪ರಿಂದ ೬ ಅಡಿ ಎತ್ತರ - ೩ ಅಡಿ ಅಗಲದ ಫಿಲ್ಟರ್ ನಿರ್ಮಿಸಬೇಕು.
೩. ನೀರನ್ನು ಶುದ್ಧಗೊಳಿಸಲು ೪ ಇಂಚು ಇದ್ದಿಲು ಮತ್ತು ೪ ಇಂಚು ಮರಳನ್ನು ಫಿಲ್ಟರ್ ಗೆ ಸೇರಿಸಬೇಕು.
೫. ಇದರ ಮೂಲಕ ಹಾಯ್ದು ಬರುವ ಮಳೆ ನೀರು ಶುದ್ಧಗೊಂಡು ಪೈಪ್ ಮುಖಾಂತರ ಸಂಪನ್ನು ಸೇರುತ್ತದೆ.
೬. ಸಂಪಿನಲ್ಲಿ ಸಂಗ್ರಹಗೊಂಡ ನೀರನ್ನು ನೇರವಾಗಿಯೂ ಬಳಸಬಹುದು.
೭. ಹೆಚ್ಚುವರಿ ನೀರನ್ನು ಮನೆಯ ಕೊಳವೆ ಬಾವಿಗೆ ನೇರವಾಗಿ ಸೇರಿಸಬಹುದು.

ಹೊಸದಾಗಿ ಮನೆ ಕಟ್ಟುತ್ತಿರುವವರು ಸುಮಾರು ೧೦,೦೦೦ ಲೀಟರ್‌ ಸಾಮರ್ಥ್ಯವಿರುವ ಸಂಪನ್ನು ಕಟ್ಟಿಸುವುದು ಉತ್ತಮ. ಒಮ್ಮೆ ಬೀಳುವ ಸಾಧಾರಣ ಮಳೆಗೆ ಮೂರರಿಂದ ಮೂರೂವರೆ ಸಾವಿರ ಲೀಟರ್ ನೀರು ಸಂಪ್‌ನಲ್ಲಿ ಸಂಗ್ರಹವಾಗುತ್ತದೆ. ಒಂದು ವೇಳೆ ಸಂಪ್‌ ಇಲ್ಲದಿದ್ದರೆ ಎಂಟ್ಹತ್ತು ಅಡಿ ಎತ್ತರದಲ್ಲಿ ಪ್ಲಾಸ್ಟಿಕ್‌ ಟ್ಯಾಂಕೊಂದನ್ನು ನಿರ್ಮಿಸಿ, ತಾರಸಿ ನೀರನ್ನು ಅಲ್ಲಿ ಸಂಗ್ರಹಿಸಿ ನಂತರ ಅದನ್ನು ಬಳಸಿಕೊಳ್ಳಬಹುದು. ಈ ಟ್ಯಾಂಕ್‌ನಿಂದಲೇ ಮನೆಯ ನಲ್ಲಿಗಳಿಗೆ ನೇರ ಸಂಪರ್ಕ ಕೊಟ್ಟು, ನೀರನ್ನು ನಿತ್ಯ ಬಳಕೆಗೆ ಉಪಯೋಗಿಸಿಕೊಳ್ಳಬಹುದು.

ಮಳೆ ನೀರು ಸಂಗ್ರಹ ಮಾಡಲು ಆಸಕ್ತರಾದವರು:

೧. ಮನೆಯ ಹೆಂಚು, ತಾರಸಿಯನ್ನು ಸ್ವಚ್ಛವಾಗಿಡಿ.
೨. ತಾರಸಿಯಲ್ಲಿ ಅನಗತ್ಯವಾದ ಯಾವೊಂದು ವಸ್ತುವನ್ನೂ ಇಡಬೇಡಿ. ಅದು ಖಾಲಿಯಾಗೇ ಇರಲಿ.
೩. ಮಳೆಗಾಲದ ಆರಂಭಕ್ಕೆ ಮುನ್ನ ಹೆಂಚು, ತಾರಸಿಯನ್ನು ಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳಿ.
೫. ಮೊದಲ ಮಳೆಯ ನೀರನ್ನು ಹರಿದುಹೋಗಲು ಬಿಡಿ. ಅದನ್ನು ಸಂಗ್ರಹಿಸುವುದು ಬೇಡ.
೬. ಎರಡು ವರ್ಷಗಳಿಗೊಮ್ಮೆ ಫಿಲ್ಟರ್‌ನ ಇದ್ದಿಲು ಮತ್ತು ಮರಳು ಬದಲಾಯಿಸಿ.
‍೭. ಕುಡಿಯಲು ಮಳೆ ನೀರನ್ನು ಬಳಸಬೇಕೆಂದರೆ, ತಾರಸಿ ಸ್ವಚ್ಛವಿದ್ದಷ್ಟೂ ಉತ್ತಮ.

ಮಳೆ ನೀರು ಸಂಗ್ರಹಿಸುವ ತೊಟ್ಟಿಯಲ್ಲಿ ಎಷ್ಟು ದಿನ ಬೇಕಾದರೂ ಮಳೆ ನೀರನ್ನು ಸಂಗ್ರಹಿಸಬಹುದು. ಆದರೆ, ಅಲ್ಲಿ ಗಾಳಿ, ಬೆಳಕು ಬೀಳಬಾರದು. ಹೀಗಾಗಿ, ತೊಟ್ಟಿಯನ್ನು ಬಿಗಿಯಾಗಿ ಮುಚ್ಚಿ. ಮಳೆ ಬರುತ್ತಿರುವಾಗ ನಿರ್ಲಕ್ಷ್ಯ ಮಾಡದೇ ನೀರು ಸಂಗ್ರಹಿಸಿದರೆ, ನಿಮ್ಮ ನಿತ್ಯದ ನೀರಿನ ಅವಶ್ಯಕತೆಗೆ ಕಾರ್ಪೊರೇಶನ್‌ ಅಥವಾ ಸರ್ಕಾರಿ ನೀರನ್ನು ಅವಲಂಬಿಸಬೇಕಿಲ್ಲ. ಅಲ್ಲದೇ, ಮಳೆ ನೀರು ಸಹಜವಾಗಿ ಶುದ್ಧವಾಗಿರುತ್ತದೆ. ಹೀಗಾಗಿ, ಅದರ ಬಳಕೆ ಆರೋಗ್ಯಕ್ಕೂ ಒಳ್ಳೆಯದು.

ಈ ರೀತಿ ಸಂಗ್ರಹಿಸಿದ ನೀರನ್ನು ಕುಡಿದು, ಅದರ ರುಚಿ ಹೇಗಿರುತ್ತದೆ ಎಂಬುದನ್ನು ಖಂಡಿತ ತಿಳಿಸಿ.

- ಚಾಮರಾಜ ಸವಡಿ

Namaskaara. This is good article. Can you point to me to someone who can do this work in Bangalore. I want to get this done for my house. - Anjan

ಖಂಡಿತ. ನಿರೀಕ್ಷಿಸಿ.

ನನ್ನ ಮನೆಯಲ್ಲಿ ಅಳವಡಿಸಿರುವ Rainwater filter, ಅಂತರ್ಜಲ ವೃದ್ಧಿಗಾಗಿ (directed to borewell so that underground water gets recharged):
http://www.rainyfilters.com/Default.aspx

ಚೆನ್ನಾಗಿ ಕೆಲಸ ಮಾಡುತ್ತಿದೆ.

Post new comment

The content of this field is kept private and will not be shown publicly.