ಮಳೆ ಇಳೆಯ ಜೀವಸೆಲೆ
ಮಳೆ, ಇಳೆಯ ಜೀವಸೆಲೆ
ಮಳೆಗಾಗಿ ಕಾಯುತ್ತಿದ್ದೆ, ನಾನೊಬ್ಬಳೇ ಏನು ಇಡೀ ಇಳೆಯೇ ಮಳೆಯ ಬರುವು ಕಾದ ಹಾಗಿತ್ತು. ಎಲ್ಲೆಲ್ಲೂ ಒಣಒಣ. ಗಿಡಗಳಿಗೆ ನೀರು ಹಾಕಿದಷ್ಟೂ ತೀರದ ದಾಹ. ’ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ’ ಹಾಡೋಣವೇ? ಹಣೆಗೆ ಕೈ ಅಡ್ಡವಿಟ್ಟು ಆಕಾಶದತ್ತ ನೋಡಿದೆ. ಅಚ್ಚ ಬಿಳಿಯ ಅರಳೆಯಂತಹ ಮೋಡಗಳು ಕರಿ ಮೋಡಗಳೆಡೆಯಿಂದ ಇಣುಕುತ್ತಿವೆ. ಈ ಬೆಳ್ಳಿ ಮೋಡಗಳೇ ನಿಜವಾದ ಮಳೆಸೂಚಕಗಳಂತೆ, ಅನುಭವಿಗಳ ಅಂಬೋಣ.
ಅಗೋ! ಬಂದಿತು ಮಳೆ. ಹನಿಯಾಗಿ ಬಿದ್ದು, ಹೊಳೆಯಾಗಿ ಹರಿದು ಹೋಗುವ ಮಳೆ. ಮಿಂಚು, ಗುಡುಗುಗಳನ್ನು ಕೇಳುತ್ತ ನನ್ನ ತಲೆಯಲ್ಲೂ ಫಕ್ಕನೆ ಮಿಂಚೊಂದು ಹೊಳೆಯಿತು. ಯಾವ ಭೇದಭಾವವಿಲ್ಲದೆ ಎಲ್ಲರನ್ನೂ ತೋಯಿಸುತ್ತಿದೆಯಲ್ಲ ಮಳೆ! ನಮಗೋ ನೆಟ್ಟ ಗಿಡಗಳಿಗೆ ಚೆನ್ನಾಗಿ ನೀರು ಸಿಗಬೇಕು, ಅಕ್ಕಪಕ್ಕದ ಖಾಲಿ ಜಾಗಗಳಿಗೆ ನೀರು ತಾಕಬಾರದು. ನೀರು ದಂಡವಾಗುತ್ತದೆಂಬುದೊಂದು ಕಾರಣವಾದರೆ ಅಲ್ಲಿ ಕಳೆ ಹುಟ್ಟಿಬಿಡುವುದೇನೋ ಎಂಬ ಚಿಂತೆ ಇನ್ನೊಂದೆಡೆ. ಆದರೆ ಮಳೆರಾಯನಿಗೆ ಯಾವ ಚಿಂತೆಯೂ ಇಲ್ಲ. ಒಬ್ಬರಿಗೆ ಹೆಚ್ಚು, ಒಬ್ಬರಿಗೆ ಕಡಿಮೆ ಎಂಬುದಿಲ್ಲ. ಎಲ್ಲೆಡೆ ಎಲ್ಲರೆಡೆ ಒಂದೇ ಗಾತ್ರದ ಹನಿಗಳು, ಒಂದೇ ಸವನೆ ಬೀಳುವಾಗ ನೋಡಲದೆಷ್ಟು ಚೆಂದ!
ಆದರೆ ಒಂದೆಡೆ ಹೆಚ್ಚು, ಒಂದೆಡೆ ಕಡಿಮೆ ಆಗುತ್ತಿಲ್ಲವೆ? ಒಂದೇ ಊರಿನಲ್ಲಿ ಕೆಲವೆಡೆ ಮಳೆ ಮತ್ತೆ ಕೆಲವೆಡೆ ಬಿಸಿಲು ಬಿದ್ದ ವರದಿಗಳಾಗುತ್ತಿವೆ. ಮಳೆ ಕಡಿಮೆಯಾಗುವ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ, ಹೆಚ್ಚು ಮಳೆಬೀಳಬೇಕಾದ ಮಲೆನಾಡಿನಲ್ಲಿ ಅನಾವೃಷ್ಟಿ ಆದದ್ದೂ ಇದೆ. ಹವಾಮಾನ ಬದಲಾವಣೆಯಿಂದಾಗಿ ಮಳೆ, ಬಿಸಿಲು ಕಾಲಗಳಲ್ಲಿ ಏರುಪೇರು. ಪರಿಣಾಮವಾಗಿ ಬೆಳೆಯುವ ಪೈರು, ನೆಲದಾಳದ ಜಲ, ರೋಗರುಜಿನಗಳು ಎಲ್ಲವೂ ಅಸಹಜ, ಅನಿಯಂತ್ರಿತ.
ಮನೆಯ ಅಕ್ಕಪಕ್ಕದಲ್ಲಿ ಮನೆಗಳೆದ್ದು ಸಿಮೆಂಟಿನ ಹಾಸು ಹಾಸಿದ ಹಾಗೆ ನಮ್ಮ ಬಾವಿಗೆ ನೀರು ಕಡಿಮೆಯಾಯಿತು ಎಂದು ಯೋಚಿಸುವವಳು ನಾನು. ಆದರೆ ನಗರಸಭೆ ಅದ್ಯಾವುದೂ ಚಿಂತೆ ನಿಮಗೆ ಬೇಡವೆಂದು ಇಡೀ ಊರಿಗೆ ನಲ್ಲಿ ಸಂಪರ್ಕ ಜೋಡಿಸಿದೆಯಲ್ಲ? ನಲ್ಲಿ ನೀರಿಗೆ ಕನಿಷ್ಟ ಹಣವನ್ನು ತುಂಬಲೇಬೇಕಲ್ಲ ಎಂದು ಆ ನೀರನ್ನು ಬಳಸುವವರು ಹಲವರಾದರೆ ಇರುವ ಬಾವಿಯನ್ನು ಬಳಸದೆ ಹಾಗೇಪಾಳು ಬಿಟ್ಟವರು ಹಲವರು. ಬಾವಿಯಿದ್ದವರಿಗೆ ನಲ್ಲಿ ಸಂಪರ್ಕ ಬೇಕೆಂದರೆ ಒಂದಿಷ್ಟು ಶರತ್ತುಗಳನ್ನು ವಿಧಿಸಬಹುದಿತ್ತು, ಅವರು ಬಾವಿಯಲ್ಲಿ ನೀರಿಂಗಿಸಿ ಅದನ್ನೇ ಬಳಸುವ ಹಾಗೆ ಮನವೊಲಿಸಬಹುದಿತ್ತು. ಆದರೆ ಇಲ್ಲಿ ಹೇಳಿ ಕೇಳುವವರಿಲ್ಲ. ನೀನೆಷ್ಟೇ ನೀರು ಬಳಸು, ಯಾವುದಕ್ಕೇ ಬಳಸು ನೀರಿನ ಬಿಲ್ಲನ್ನೊಂದು ಕಟ್ಟಿಬಿಡು ಎಂಬುದು ನಗರಸಭೆಯ ವರಸೆ.
ಸಸ್ಯಪ್ರಿಯರ ಹಾಗೂ ಸಿಮೆಂಟು ಪ್ರಿಯರ ವೈವಿಧ್ಯಮಯ ನಾಡು ನಮ್ಮ ಭಾರತ. ಮನೆಯ ಒಂದು ಪಕ್ಕದವರು ಗಿಡ ಬೆಳೆಸಿದರೆ ಹುಳಗಳ ಕಾಟ ಜಾಸ್ತಿ ಎಂದು ಕೆಂಗಣ್ಣು ಬಿಡುವವರಾಗಿದ್ದು, ಇನ್ನೊಂದು ಪಕ್ಕದವರು ಬೀಳುವ ಮಳೆನೀರನ್ನೆಲ್ಲವನ್ನೂ ಉದ್ದದ ಪೈಪು ಮೂಲಕ ನೂರು ಮೀಟರ್ ಆಚೆ ಕಳಿಸುವವರಾದರೆ ಮಧ್ಯೆ ನೆಲ- ಜಲ ಎಂದೆಲ್ಲ ಚಿಂತಿಸುವ ಆದರ್ಶವಾದಿ ಇದ್ದಲ್ಲಿ ಆತನ ಪಾಡೇನು?
ಮಳೆಕೊಯ್ಲು, ಜಲಮರುಪೂರಣ ಎಂಬ ವಿಷಯಗಳು ಸಭೆ ಸಮಾರಂಭಗಳಲ್ಲಿ ಚರ್ಚಿತವಾಗುವುದು ತುಂಬಾ ಕಡಿಮೆ. ಚೆನ್ನೈನಲ್ಲಿ ಚಾವಣಿ ನೀರು ಸಂಗ್ರಹ ವ್ಯವಸ್ಥೆ ಕಡ್ಡಾಯವಂತೆ ಎಂದು ಆ ಬಗ್ಗೆ ನೀವೇನಾದರೂ ಪ್ರಸ್ತಾಪವೆತ್ತಿದಿರೋ ವಿಚಿತ್ರ ಪ್ರಾಣಿಯೆಂಬಂತೆ ನಿಮ್ಮೆಡೆ ನೋಡುವ ಜನ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡತೊಡಗುತ್ತಾರೆ. ಈ ವಿಷಯಗಳ ಬಗ್ಗೆ ಓದುವ, ಬರೆಯುವ, ಜಲಚಿಂತನೆಯನ್ನು ತಮ್ಮದಾಗಿಸಿಕೊಳ್ಳುವ ಜನರ ಸಂಖ್ಯೆ ಅತೀ ಕಡಿಮೆ. ವಾಸ್ತವವಾಗಿ ವರ್ಷದಿಂದ ವರ್ಷಕ್ಕೆ ಏರಬೇಕಾಗಿತ್ತು ಈ ವರ್ಗದ ಸಂಖ್ಯೆ. ನಗರ, ಪಟ್ಟಣಗಳಲ್ಲಿ ’ನೀರುಹೆಜ್ಜೆ’ಯ ಅರಿವಿದ್ದು ಮಳೆನೀರು ಸಂಗ್ರಹಿಸುವ ಜನ ಬೆರಳೆಣಿಕೆಯಷ್ಟಾಗಿದ್ದು ಈ ವರ್ಗದವರ ಪ್ರಯತ್ನ ಏನೇನೂ ಸಾಲದು ಎಂಬರ್ಥವನ್ನು ಸೂಚಿಸುತ್ತಿದೆ.
ನಲ್ಲಿನೀರನ್ನು ಪೋಲು ಮಾಡಬಾರದು ಎಂಬ ಮಾತನ್ನು ಎಲ್ಲರೂ ಒಪ್ಪುತ್ತಾರೆ. ’ಪೋಲು’ ಎಂಬ ಶಬ್ದದ ಅರ್ಥ ಮಾತ್ರ ಅವರವರ ವಿಚಾರಕ್ಕನುಗುಣವಾಗಿರುತ್ತದೆ. ನಲ್ಲಿಯಿಂದ ನೀರು ಸುಮ್ಮನೆ ಬಿದ್ದು ಹರಿಯುತ್ತಿದ್ದರೆ ಮಾತ್ರ ಪೋಲಲ್ಲ. ಬಕೆಟ್ಟುಗಟ್ಟಲೆ ನೀರಲ್ಲಿ ಅಂಗಳ, ಕಾರನ್ನು ತೊಳೆಯುವುದು, ಸ್ನಾನ, ಬಟ್ಟೆ ಮತ್ತು ಪಾತ್ರೆಗೆ ಅತಿಯಾಗಿ ನೀರನ್ನು ಬಳಸುವುದು ಕೂಡ ನೀರಿನ ಪೋಲೇ. ಈಗಿನ ಅತಿದಾಹಿ ಪೇಟೆಗಳಿಗೆ ಸುತ್ತಮುತ್ತಲ ನೀರಿನ ಮೂಲಗಳು ಸಾಕಾಗದೆ ದೂರದೂರದ ನದಿಗಳಿಂದ ಪೈಪುಗಳಲ್ಲಿ ಸಾಗಿಸಿ ತಂದು ಶುದ್ಧೀಕರಿಸಿ ಜನರಿಗೆ ಪೂರೈಸಲಾಗುತ್ತದೆ. ಇದಕ್ಕೆ ಖರ್ಚಾಗುವ ಹಣದ ಒಂದು ಭಾಗ ಮಾತ್ರ ನಾವು ನೀರಿನ ಬಿಲ್ ಮೂಲಕ ಸರಕಾರಕ್ಕೆ ನೀಡುತ್ತೇವೆ. ಉಳಿದಿದ್ದನ್ನು ಸರಕಾರ ಸಬ್ಸಿಡಿಯಾಗಿ ನಮಗೆ ಈ ಸೇವೆಯನ್ನು ಒದಗಿಸುತ್ತದೆ. ಈ ಬಗ್ಗೆ ಅರಿವಿದ್ದವರು ಎಷ್ಟು ಮಂದಿ?
ಮಂಗಳೂರಿನಂತಹ ಬಂದರು ನಗರಗಳಲ್ಲಿ ಊರಾಚೆಯ ವಿಶೇಷ ಆರ್ಥಿಕ ವಲಯದ ಉದ್ಧಾರಕ್ಕೆಂದು ಇಡೀ ಆಡಳಿತ ವ್ಯವಸ್ಥೆಯೇ ಕಂಕಣ ಕಟ್ಟಿರುತ್ತದೆ. ಸಾವಿರಾರು ರೈತರಿಂದ ಫಲಭರಿತ ಭೂಮಿಯನ್ನು ಒತ್ತಾಯವಾಗಿ ಕಿತ್ತುಕೊಳ್ಳುವ ಕೈಗಾರಿಕೆಗಳಿಗೆ ಪುಕ್ಕಟೆ ನೀರು, ಪುಕ್ಕಟೆ ವಿದ್ಯುತ್. ಅವರಿಗಾಗಿಯೇ ಇಡೀ ಊರಿನ ಒಳಹೊರಗಿನ ರಸ್ತೆಸಂಚಾರದ ಸುಧಾರಣೆ ಬಿರುಸಾಗಿ ಸಾಗುತ್ತದೆ. ರಸ್ತೆ ಅಗಲೀಕರಣದಲ್ಲಿ ಉರುಳುವ ನೂರಾರು ಮರಗಳಿಗೆ ಕಣ್ಣೀರಿಡುವವರಾರಿಲ್ಲ. ನೂರಾರು ವರ್ಷಗಳಿಂದ ಈ ನೆಲದಲ್ಲಿ ಬೇರೂರಿ ಶುದ್ಧ ಗಾಳಿ, ನೀರನ್ನು ನೀಡುತ್ತಿದ್ದ ಮರಗಳನ್ನು ಕಡಿಯಲು ನಮಗೆ ಹಕ್ಕಿದೆಯೇ? ಯೋಚಿಸುವವರಾರು?
ಈಗೀಗ ಪ್ರತಿ ಕಾಲನಿಯಲ್ಲೂ ಸಂಘವೊಂದು ಇದ್ದೇ ಇರುತ್ತದೆ. ವರ್ಷವರ್ಷವೂ ಹಬ್ಬಗಳು, ಸತ್ಯನಾರಾಯಣ ಪೂಜೆ, ವಾರ್ಷಿಕೋತ್ಸವ ಹಾಗೂ ಪಿಕ್ನಿಕ್ಕುಗಳನ್ನು ತಪ್ಪದೆ ಆಚರಿಸಲಾಗುತ್ತದೆ. ಜೂನ್ ಐದರ ಪರಿಸರ ದಿನಕ್ಕಾಗಲೀ, ನಗರಸಭೆಯವರು ಪುಕ್ಕಟೆಯಾಗಿ ನೀಡುವ ಸಸಿಗಳನ್ನು ತಂದು ನೆಡಬಹುದಾದ ವನಮಹೋತ್ಸವಕ್ಕಾಗಲೀ ಪ್ರೋತ್ಸಾಹ ಸಿಗುವುದು ತೀರಾ ಅಪರೂಪ. ಸಸಿ ನೆಡುವ ಸಲಹೆ ಬಂತೆಂದರೆ ಮೌನವ್ರತ ತಾಳುವ ಸಂಘದ ಸದಸ್ಯರು. ಜೊತೆಗೆ ರಸ್ತೆ ಮೊದಲೇ ಕಿರಿಯದು, ಮರ ಮತ್ತೊಂದಿಷ್ಟು ಜಾಗ ತಿನ್ನುತ್ತದೆ ಎಂಬುದು ದೊಡ್ಡ ಕಾರಿನವರ ದೂರು.
ಇಷ್ಟು ಯೋಚನೆ ನನ್ನ ಮನದಲ್ಲಿ ಮೂಡುವಷ್ಟರಲ್ಲಿ ಬಾಯಾರಿದ ಇಳೆಯನ್ನು ಅಪ್ಪಿ ಸಂತೈಸುತ್ತಿದೆ ಮಳೆ. ಹನಿಯಾಗಿ ಬೀಳುತ್ತಿದ್ದೇನೆ, ಬೊಗಸೆಯಲ್ಲಾದರೂ ಹಿಡಿದುಕೊಳ್ಳಿ, ಬಾವಿಯಲ್ಲಾದರೂ ಹಿಡಿದುಕೊಳ್ಳಿ ಎನ್ನುತ್ತಿದೆ ಮಳೆ. ನಿಮ್ಮದೇನಿದೆ ಇರಾದೆ?
- 735 reads
Email this page
Printer-friendly version
ಲೇಖಕರು
ಹೆಸರು
ಸರೋಜಾ ಪ್ರಕಾಶ
ಪರಿಚಯ
ಹೌಸ್ವೈಫ್. ಸಾಮಾಜಿಕಸಮಸ್ಯೆಗಳು ಹಾಗೂ ವೈಜ್ಞಾನಿಕ ವಿಷಯಗಳ ಬಗ್ಗೆ ಆಗೀಗ ಬರೆಯುತ್ತಿರುತ್ತೇನೆ. ಹಿತ್ತಲಿನಲ್ಲಿ ಕೈತೋಟವನ್ನು ಬೆಳೆಸುತ್ತಿದ್ದೇನೆ. ನೀರು, ವಿದ್ಯುತ್ ಮತ್ತಿತರ ಶಕ್ತಿಮೂಲಗಳ ಮಿತವ್ಯಯಗಳ ಬಗ್ಗೆ ಹಾಗೂ ಸಸ್ಯಸಂಪತ್ತನ್ನು ಉಳಿಸುವ, ಬೆಳೆಸುವ ಬಗ್ಗೆ ಅಪಾರ ಕಳಕಳಿ ಹೊಂದಿದ್ದೇನೆ.
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
3 weeks 8 hours ago - Re: ಬ್ಯಾಂಕ್ ಅಧಿಕಾರಿ ...
6 weeks 5 days ago - Re: ವೃಷಭಾವತಿ ಎಂಬ ನದಿ ...
6 weeks 5 days ago - Re: ಟಾಯ್ಲೆಟ್ಗೆ ಫ್ಲಶ್ ...
23 weeks 2 days ago - Re: ಅಕ್ಷಯನಗರ ಕೆರೆಗೆ ...
23 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 3 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
39 weeks 12 hours ago
| Subscribe to IWP Kannada list |
| Visit this group |









Post new comment