ಮರುಪೂರಣದಿಂದ ಹತ್ತಡಿ ಏರಿದ ನೀರು

ಮರುಪೂರಣದಿಂದ ಹತ್ತಡಿ ಏರಿದ ನೀರು (ಚಿತ್ರ: ನಾ. ಕಾರಂತ ಪೆರಾಜೆ)

ಬರಹ: ನಾ. ಕಾರಂತ ಪೆರಾಜೆ
ಡು ಬೇಸಿಗೆ. ಸುತ್ತೆಲ್ಲಾ ಭಣಭಣ. ನಲ್ಲಿಯಲ್ಲಿ ಅರ್ಧ ಗಂಟೆ ನೀರು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲೂ ಪುತ್ತೂರಿನ ಆದರ್ಶ ಆಸ್ಪತ್ರೆ ಬಳಿಯ ರಾಜರತ್ನಂ ಅವರ ಬಾವಿಯಲ್ಲಿ ಹತ್ತಡಿ ನೀರಿಗೆ ತೊಂದರೆಯಿಲ್ಲ. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ್ದರ ಫಲ.

ಇವರದು ಹಳೆ ಬಾವಿ. ಮೃದು ಮಣ್ಣು. ಒರತೆ ಕಡಿಮೆ. ಕೆಲವೊದು ಸಲ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮಳೆ ಬಂದಾಗ ಮೇ ಕೊನೆ ವರೆಗೂ ಕುಡಿಯುವ ನೀರಿಗೆ ತೊಂದರೆಯಾಗುತ್ತಿರಲಿಲ್ಲ. ಸುಮಾರು ಎಂಭತ್ತರ ಹೊತ್ತಿಗೆ ಬಾವಿ ಒಮ್ಮೆ ಬತ್ತಿತ್ತು. ಆಗ ದೂರದಿಂದ ನೀರನ್ನು ತಂದ ಸಾಹಸ ರಾಜರತ್ನಂ ಅವರಿಗೆ ನೆನಪಿದೆ. ಆಮೇಲಿನ ದಿವಸಗಳಲ್ಲಿ ಮನೆಬಳಕೆಗೆ ಬಳಸಲು ತೊಂದರೆಯಾಗುತ್ತಿರಲಿಲ್ಲ.

೨೦೦೦ ಸುಮಾರಿಗೆ ಮೇ-ಜೂನ್‌ನಲ್ಲಿ ಬಾವಿ ಪೂರ್ತಿ ಬತ್ತಿತ್ತು. ಕುಡಿನೀರಿಗೂ ತತ್ವಾರ. ನೀರಿನಾಪತ್ತಿನಲ್ಲಿ ನೀರೊದಗಿಸುತ್ತಿದ್ದ ವೆಲಾರಿಯನ್ ಡಿಸೋಜ ಅವರ ಬಾವಿಯಲ್ಲೂ ನೀರು ತಳಕಾಣುತ್ತಿತ್ತು. ಆಗ ನೆರವಿಗೆ ಬಂದವರು ಆದರ್ಶ ಆಸ್ಪತ್ರೆಯ ಡಾ.ಪ್ರಸಾದ ಭಂಡಾರಿ. ತಮ್ಮ ಆಸ್ಪತ್ರೆಯ ಕೊಳವೆ ಬಾವಿಯಿಂದ ನೀರು ಬಳಸಲು ಅವಕಾಶ. ಆಸ್ಪತ್ರೆಗೂ ಮನೆಗೂ ಸುಮಾರು ಒಂದು ಫಲಾಂಗ್ ದೂರ. ಇಷ್ಟು ದೂರ ಪೈಪ್ ತರುವುದೆಂದರೆ ದುಬಾರಿ. ಸುಮಾರು ಅರ್ಧ ದೂರದ ತನಕ ಪೈಪಲ್ಲಿ ನೀರು ತಂದು, ಅಲ್ಲಿಂದ ಮನೆಮಂದಿ ಎಲ್ಲರಿಂದಲೂ ಕರಸೇವೆ! ಪಾತ್ರೆಪಗಡಿಗಳಲ್ಲಿ ಸಂಗ್ರಹ.

ಇಷ್ಟಕ್ಕೆಲ್ಲಾ ಕಾರಣ ಸುತ್ತೆಲ್ಲಾ ಹೆಚ್ಚಾದ ಕೊಳವೆಬಾವಿಗಳು. ಹತ್ತು ವರುಷದಲ್ಲಿ ಸುಮಾರು ಆರೇಳು ಕೊಳವೆಬಾವಿಗಳಾದುವು. ಇದರಿಂದ ಅಂತರ್ಜಲ ಕುಸಿದು ಬಾವಿನೀರು ಆರಿದೆ ಎಂಬ ಸತ್ಯವನ್ನು ಹೇಳುವ ರಾಜರತ್ನಂ, ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದುದರಿಂದ ನೀರಿನ ಕೆಲಸವೂ ಹಗುರವಾಗುತ್ತಿತ್ತು ಎನ್ನುತ್ತಾರೆ. ಆಗ ಮಾಧ್ಯಮಗಳಲ್ಲಿ ಬರುತ್ತಿದ್ದ ನೀರಿನ ಕತೆ ಇವರನ್ನು ಸೆಳೆದಿತ್ತು.

ಪುತ್ತೂರಿನಲ್ಲಿ ಮರುಪೂರಣ

ರಾಜರತ್ನಂ ಚರ್ಮವಾದ್ಯ ತಯಾರಕ. ಇದರ ಕೆಲಸಕ್ಕಾಗಿ ಮನೆಯ ಮಾಡಿಗೆ ಸೇರಿದಂತೆ ಇಳಿಮಾಡು ನಿರ್ಮಿಸಿದ್ದರು. ಇದಕ್ಕೆ ಪ್ಲಾಸ್ಟಿಕ್ ದಂಬೆ ಕೂರಿಸಿದ್ದಾರೆ. ಬಾವಿಗೆ ತಾಗಿಕೊಂಡೇ ೪ x ೪ x ೪ ಅಳತೆಯ ಸೋಸುಗುಂಡಿ. ಹಂಚಿನಚೂರು, ದೊಡ್ಡಜಲ್ಲಿ, ಸಣ್ಣಜಲ್ಲಿ ಮತ್ತ ಚಿಕ್ಕಚಿಕ್ಕ ಚರಳುಕಲ್ಲುಗಳನ್ನು ಅದರಲ್ಲಿ ಹಾಕಿದ್ದಾರೆ. ಸೋಸುಗುಂಡಿಯಿಂದ ಬಾವಿಗೆ ಸಂಪರ್ಕ. ದಂಬೆಯಲ್ಲಿ ಬಂದ ಮಾಡಿನ ನೀರು ಜಾಳಿಗೆಗೆ ಬಿದ್ದು, ಸೋಸಿ ಬಾವಿ ಸೇರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಪ್ಲಾಸ್ಟಿಕ್ ಬುಟ್ಟಿಗೆ, ನೆರಳುಬಲೆಯನ್ನು ಗಟ್ಟಿಯಗಿ ಬಿಗಿದು ಜಾಳಿಗೆಯನ್ನು ಸುಲಭವಾಗಿ ತಯಾರಿಸಿದ್ದಾರೆ. ಸೋಸುಗುಂಡಿಗೆ ನೀರಿನಧಾರೆ ಬೀಳುವಲ್ಲಿ ಈ ಸೋಸುಬುಟ್ಟಿ ಇಟ್ಟರಾಯಿತು.

ಬಾವಿ ಪೂರ್ತಿ ಆರುವ ಮೊದಲು ಮೇ-ಜೂನ್ ತಿಂಗಳಲ್ಲಿ ಏನಿಲ್ಲವೆಂದರೂ ೨-೩ ಅಡಿ ನೀರಿರುತ್ತಿತ್ತು. ಚಾವಣಿ ನೀರನ್ನು ಬಾವಿಗೆ ಮರುಪೂರಣ ಮಾಡಿದ ಮರು ಬೇಸಿಗೆಯಲ್ಲಿ ಬಾವಿಯಲ್ಲಿ ಹತ್ತಡಿ ನೀರು! ಆರಡಿ ಬೋನಸ್ ನೀರು! ಇಲ್ಲರಿಗೂ ಆಶ್ಚರ್ಯ. ಮೊಗೆದಷ್ಟೂ ಏರುವ ಒರತೆ! ಛೇ...ನಾನಿದನ್ನು ನೀರಿನ ಸಂಕಟದ ಕಾಲದಲ್ಲೇ ಮಾಡಿಕೊಂಡಿದ್ದರೆ....? ರಾಜರತ್ನಂ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುತ್ತಾರೆ.

ಮೂರು ವರುಷವಾಯಿತು. ಈಗ ಅವರಿಗೆ ನೀರ ನೆಮ್ಮದಿ. ಪಂಪ್ ಮೂಲಕ ನೀರು ಬಳಸಿದರೂ ಒಂದೆರಡು ಅಡಿ ಕಡಿಮೆಯಾಗುತ್ತದಷ್ಟೇ. ತಮ್ಮ ಮನೆಯಿಂದ ಕೇವಲ ಅರುವತ್ತಡಿ ದೂರದ ಪಕ್ಕದ ಹಿತ್ತಿಲಲ್ಲಿರುವ ಬಾವಿ ಈ ಹೊತ್ತಲ್ಲಿ ಪೂರ್ತಿ ಡ್ರೈ. ಹಿತ್ತಿಲಿಗೆ ತಾಗಿಕೊಂಡಿರುವ ಆಸ್ಪತ್ರೆಯ ಮಾಡಿನ ನೀರನ್ನು ಇವರ ಬಾವಿಗೆ ಬಿಟ್ಟರೂ ಸಾಕು. ಎಂಬ ಸಲಹೆ ಕೊಟ್ಟಿದ್ದರಂತೆ.

ಸೋಸುಗುಂಡಿಯನ್ನು ಇದುವರೆಗೆ ಶುಚಿಗೊಳಿಸಿಲ್ಲ. ಸೋಸುವಿಕೆ ನಿಧಾನವಾಗುತ್ತಿದೆ. ಹಾಗಾಗಿ ಗುಂಡಿಯಲ್ಲಿ ನೀರು ಇಂಗದೆ ಫ್ಲೋ ಆಗ್ತಿದೆ. ಎನ್ನುತ್ತಾರೆ.

ನೀರಿನ ಸಂಕಟವನ್ನು ಹೇಳಿಕೊಳ್ಳುತ್ತಾ ಬರುವ ಆತ್ಮೀಯರು ಬಾವಿ ನೀರನ್ನು ನೋಡಿ ಇದೆಂಥಾ ರಾಜಣ್ಣ ಎಂದು ಆಶ್ಚರ್ಯ ಪಡುತ್ತಾರಂತೆ. ಅವರಿಗೆ ನೀರಿನ ಮಹತ್ವವನ್ನು ಹೇಳುತ್ತಾ, ನೀವು ಮಾಡಿ, ಬೇಕಾದರೆ ನಿಮ್ಮ ಸಹಾಯಕ್ಕೆ ನಾನೂ ಬರುತ್ತೇನೆ ಎನ್ನುತ್ತಾರೆ. ನೀರು ನೋಡಿದಾಗ ಎಲ್ಲರಿಗೂ ತಾವೂ ಮಾಡಬೇಕು ಎಂದು ತೋಚುತ್ತದೆ. ಆದರೆ ಮಾಡುವುದಿಲ್ಲ. ನೀರಿನ ತೊಂದರೆ ಇದ್ದವರಿಗೂ ಅರ್ಥವಾಗುವುದಲ್ಲವಲ್ಲಾ!

ನಿಮಗೆ ನೀರು ಸಾಕಷ್ಟಿರಬಹುದು. ಆದರೆ ಜಲಮರುಪೂರಣ ಮಾಡುವುದರಿಂದ ಪಕ್ಕದ ಮನೆಯವರಿಗೆ ಪ್ರಯೋಜನವಾಗುತ್ತದೆ ಎಂದು ನೀರಿನ ಶಿಕ್ಷಣ ನೀಡುತ್ತಾರೆ. ನಮ್ಮ ಜನ ಬೇಕಾದರೆ ಕಿಲೋಮೀಟರ್ ಗಟ್ಟರೆ ದೂರದಿಂದ ನೀರು ತಂದಾರು. ಆದರೆ ಮರುಪೂರಣ ಮಾಡಲಾರರು ಎಂದು ಖಾರವಾಗಿ ಪ್ರತಿಕ್ರಿಯಿಸುತ್ತಾರೆ.

ಬಾಲ್ಯದ ನೆನಪೊಂದನ್ನು ರಾಜಣ್ಣ ಬಿಚ್ಚುತ್ತಾರೆ - ಪುತ್ತೂರಿನ ರಾಘವೇಂದ್ರ ಮಠದ ಹತ್ತಿರ ಎರಡು ನೀರಿನ ಝರಿಗಳಿದ್ದುವಂತೆ. ಅದರಿಂದ ನಿರ್ಮಾಣವಾದ ಪಳ್ಳದಲ್ಲಿ (ಸಣ್ಣಕೆರೆ) ನಾವು ಈಜು ಕಲಿದುದು. ಈಗ ಪಳ್ಳವೂ ಇಲ್ಲ, ಝರಿಯೂ ಇಲ್ಲ. ಕಾರಣ, ಅಲ್ಲೆಲ್ಲಾ ಮನೆಗಳು ಬಂದುವು. ರಸ್ತೆಯಾಯಿತು. ನೀರಿನ ಸೆಲೆ ಮುಚ್ಚಿಹೋಯಿತು.

ರಾಜರತ್ನಂ ದೇವಾಡಿಗ, ಆದರ್ಶ ಆಸ್ಪತ್ರೆಯ ಹಿಂಭಾಗ, ಎ.ಪಿ.ಎಂ.ಸಿ.ರಸ್ತೆ, ಪುತ್ತೂರು - ೫೭೪ ೨೦೧ (ದ.ಕ.) ದೂರವಾಣಿ: ೦೮೨೫೧-೨೩೪೬೪೫

ಚಿತ್ರಗಳು:

೦೧ ಚಾವಣಿ ನೀರನ್ನು ಸೋಸಿದ ಬಳಿಕವೇ ಬಾವಿಗೆ.
೦೨ ರಾಜರತ್ನಂ ಅವರ ಜಲಮರುಪೂರಣ ವ್ಯವಸ್ಥೆ

------------------------------------------

ನಾ. ಕಾರಂತ ಪೆರಾಜೆ, ಅಂಚೆ ಪೆಟ್ಟಿಗೆ ೮, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು ೫೭೪ ೨೦೧ (ದ.ಕ.), ಮೊ: ೯೪೪೮೬೨೫೭೯೪

""" Manasiddalli Maargavide """"

God bless you

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.