ಬೆಂಗಳೂರ ಕೆರೆಗಳು: ಮೈಲಿಗೆಯ ಆರ್ಭಟದಲ್ಲಿ ಮಡಿವಾಳ ಕೆರೆ
ಶುಭ ಕಾರ್ಯಗಳಿಗೆ ಕೆರೆಗಳಿಂದ ನೀರು ತರುವುದು ಸಂಪ್ರದಾಯ. ನೂರಾರು ವರ್ಷಗಳ ಸಂಪ್ರದಾಯ, ಸಂಸ್ಕೃತಿಯನ್ನು ಒಡಲಲ್ಲಿ ಕಟ್ಟಿಕೊಂಡೇ ಹೈಟೆಕ್ ಆಗುತ್ತಿರುವ ಬೆಂಗಳೂರು, ಹಲವು ಆಚರಣೆಗಳನ್ನು ಇಂದಿಗೂ ಪಾಲಿಸುತ್ತಿದೆ. ಆದರೆ ಕೆರೆಯಿಂದ ನೀರು ತಂದು ಮಡಿ ಆಗಲು ಮಾತ್ರ ಸಾಧ್ಯವಿಲ್ಲ. ಇದಕ್ಕೊಂದು ಜೀವಂತ ಉದಾಹರಣೆ. ಹೆಸರು ಮಡಿವಾಳ ಆಗಿದ್ದರೂ, ಮೈಲಿಗಯ ಆಗರವಾಗಿದೆ ಈ ಕೆರೆ. ಇಲ್ಲಿ ಒಂದೆಡೆ ಸೌಂದರ್ಯ, ಮತ್ತೊಂದೆಡೆ ನಾಗರಿಕ ಸೇರಿದಂತೆ ನಮ್ಮ ಆಡಳಿತ ಚುಕ್ಕಾಣಿ ಹಿಡಿದಿರುವ ನಾಯಕರು, ಸ್ಥಳೀಯ ಪ್ರತಿನಿಧಿಗಳ ತಾತ್ಸಾರ ಹಾಗೂ ಅರಣ್ಯ, ಜಲಮಂಡಳಿ ಹಾಗೂ ಇತರೆ ಇಲಾಖೆಗಳ ಬೇಜವಾಬ್ದಾರಿಗೆ ಕಲ್ಮಶ ಕನ್ನಡಿಯಂತೆ ಮಿನುಗುತ್ತಿರುವುದನ್ನು ಕಾಣಬಹುದು.

ಮಡಿವಾಳ ಜನಪ್ರಿಯ ಪ್ರದೇಶ. ಇಲ್ಲಿ ಸುತ್ತಮುತ್ತ ಬಿಡಿಎ ಬಡಾವಣೆಗಳಿವೆ. ಪ್ರತಿಷ್ಠಿತ ಬಿಟಿಎಂ ಬಡಾವಣೆಗೆ ಹೊಂದಿಕೊಂಡಂತಿರುವ ಮಡಿವಾಳ ಕೆರೆಯೂ ವಿಶಾಲವಾಗಿದೆ. ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದು ಬಿಟಿಎಂ ೨೯ನೇ ಮುಖ್ಯರಸ್ತೆ, ೧೩ನೇ ಅಡ್ಡರಸ್ತೆಯಲ್ಲಿರುವ ಪ್ರವೇಶದ್ವಾರದಲ್ಲಿ ಶುಲ್ಕ ಪಾವತಿಸಿ ಒಳಪ್ರವೇಶಿಸಿದರೆ, ಸುಂದರ ನೋಟವನ್ನೇ ನೀಡುತ್ತದೆ. ಆದರೆ ಇದರ ಇನ್ನೊಂದು ಮುಖ ಕರಾಳ. ಕೋಡಿ ಬಳಿ ಹೋದರೆ ಮಡಿವಾಳ ಕೆರೆಯ ನೈಜ ಬಣ್ಣ ಬಯಲಾಗುತ್ತದೆ. ಮುಂಭಾಗದಲ್ಲಿ ಸುಂದರವಾಗಿರುವ ಕೆರೆಯಲ್ಲಿರುವುದು ಎಂತಹ ಕಲ್ಮಶ ಎಂಬುದು ಅರಿವಿಗೆ ಬರುತ್ತದೆ. ಈ ಕೆರೆಯ ಅಭಿವೃದ್ಧಿಗಾಗಿ ಅರಣ್ಯ ಇಲಾಖೆ ೪೫೨೬.೮೬ ಲಕ್ಷ ರೂ. ವೆಚ್ಚ ಮಾಡಿದೆ. ಆದರೆ ಇದರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವುದರಿಂದ, ಅಷ್ಟೊಂದು ಹಣ ಇಲ್ಲಿ ವ್ಯಯವಾಗಿರುವ ಲಕ್ಷಣವೇ ಕಾಣುತ್ತಿಲ್ಲ. ೧೯೭೮ರಲ್ಲಿ ಉದ್ಘಾಟನೆಯಾಗಿರುವ ನರ್ಸರಿ ಹಾಗೂ ಮಕ್ಕಳ ಉದ್ಯಾನದ ಪ್ರವೇಶ ದ್ವಾರದ ಎರಡೂ ಭಾಗಗಳಲ್ಲಿ ಮಕ್ಕಳ ಆಟಕ್ಕೆ ವ್ಯವಸ್ಥೆ ಇದೆ. ಈ ಜಾರುಬಂಡಿ, ಏಣಿಯಾಟದತ್ತ ಮಕ್ಕಳನ್ನು ಬಿಡದಿರುವುದೇ ವಾಸಿ. ಇವೆಲ್ಲ ಅಳಿವಿನ ಅಂಚಿನಲ್ಲಿವೆ. ಇನ್ನು ಸಮೃದ್ಧವಾಗಿ ಬೆಳೆದಿರುವ, ಬೆಳೆಸಿರುವ ಗಿಡಗಳ ಮಧ್ಯೆ ಕಲ್ಲಿನ ಆಸನಗಳ ವ್ಯವಸ್ಥೆ ಇದೆ. ಅಡ್ಡಾಡುವ ದಾರಿ ಮಾತ್ರ ಸೂಕ್ತವಿಲ್ಲದಿರುವುದರಿಂದ ಕೆರಯನ್ನು ಈ ಭಾಗದಲ್ಲಿ ಮಾತ್ರ ನೋಡಲು ಸಾಧ್ಯ. ಉಳಿದಂತೆ ಕೆರೆಯಲ್ಲಿ ಜೊಂಡು ತುಂಬಿದೆ. ಅಂಗಳದಲ್ಲಿ ಕಳೆ ಬೆಳೆದಿದೆ. ದೂರದಲ್ಲಿ ದ್ವೀಪದ ಸೊಬಗನ್ನೂ ಹೊಂದಿರುವ ಮಡಿವಾಳ ಕೆರೆಯಲ್ಲಿ ಹಿಂದೆ ಬೋಟ್‌ಗಳಲ್ಲಿ ಅಲ್ಲಿಗೆ ಹೋಗಬಹುದು. ಕೆರೆಯ ಕಲ್ಮಶ-ಜೊಂಡಿನ ನಡುವೆ ಬೋಟಿಂಗ್ ಮನೋಲ್ಲಾಸಕರವಲ್ಲ. ಆದರೂ ಮಡಿವಾಳ ಕೆರೆಯ ಈ ಮುಖ ಅದ್ಭುತ. ಇದರ ಇನ್ನೊಂದು ಮುಖ ದುರದ್ಭುತ.
ಕೆರೆಯ ಕೋಡಿಯ ಭಾಗಕ್ಕೆ ಹೋದರೆ ಅದರ ಒಡಲ್ಲಿ ಅಡಗಿರುವ ವಿಶ್ವರೂಪ ಕಾಣುತ್ತದೆ. ನಗರದ ಬಹುತೇಕ ಕೆರೆಗಳ ದುಸ್ಥಿತಿಗೆ ಕಾರಣವಾಗಿರುವ ಜಲಮಂಡಳಿಯ ಕೃಪೆಯಿಂದ, ಒಳಚರಂಡಿ ನೀರು ಕೆರೆಗೆ ಹರಿದು ಈ ಭಾಗದಲ್ಲಿ ನಿಲ್ಲಲೂ ಸಾಧ್ಯವಿಲ್ಲದಂತ ದುರ್ನಾತ ಸೃಷ್ಟಿಸಿದೆ. ಕೆಎಎಎಸ್ ಆಫೀಸರ್ಸ್ ಕಾಲೊನಿ ಈ ಕೆರೆಯ ಪಕ್ಕದಲ್ಲೇ ಇದ್ದು, ರಾಜಕಾಲುವೆಯ ಒತ್ತುವರಿಯಿಂದ ಕೆರೆಯ ಕೊಳಕೆಲ್ಲ ಈ ಕಾಲೊನಿಗೆ ೨೪ ಗಂಟೆಯೂ ಹರಿಯುತ್ತಿರುತ್ತದೆ.
ಸರ್ವೆ ನಂ. ೬೪, ೧೧, ೭೬, ೨೩ರಲ್ಲಿ ೧೧೪.೧೬ ಹೆಕ್ಟೇರ್ ವಿಸ್ತೀರ್ಣದಲ್ಲಿರುವ ಮಡಿವಾಳ ಕೆರೆಯಲ್ಲಿ ಅರಣ್ಯ ಇಲಾಖೆಯ ದಾಖಲೆ ಪ್ರಕಾರವೇ ೨೧.೪೧ ಎಕರೆ ಒತ್ತುವರಿಯಾಗಿದೆ. ಆದರೆ, ಇನ್ನೂ ಹೆಚ್ಚಿನ ಹತ್ತಾರು ಎಕರೆ ಒತ್ತುವರಿ ಆಗಿರುವುದಂತೂ ದಿಟ. ಸೂಕ್ತ ವ್ಯವಸ್ಥೆ ಹಾಗೂ ಅಭಿವೃದ್ಧಿಯ ಕಾಮಗಾರಿಗಳು ಈ ಕೆರೆಯಲ್ಲಿ ನಡೆದಿದ್ದೇಯಾದರೆ, ಮಡಿವಾಳ ಮನೋಲ್ಲಾಸದ ವಿಹಾರ ಕೇಂದ್ರವಾಗುತ್ತದೆ.

ಮಡಿವಾಳ ಕೆರೆ ವಿಹಾರ ತಾಣವಲ್ಲವೇ ಎಂದು ಕೇಳಬಹುದು. ಹೌದು ಖಂಡಿತವಾಗಿಯೂ ಇದನ್ನು ವಿಹಾರ ತಾಣವನ್ನಾಗಿಯೇ ಜನರು ಪ್ರೀತಿಸುತ್ತಾರೆ. ಆದರೆ, ಈ ಕೆರೆಯಲ್ಲಿರುವ ನೀರು ಮುಟ್ಟಲೂ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಬೆಂಗಳೂರು ಒಳಚರಂಡಿ ಮಂಡಳಿ ತನ್ನೆಲ್ಲ ಕಲ್ಮಶವನ್ನು ಸುರಿಯುತ್ತಿರುವುದು ಈ ಕೆರೆಗೇ. ಇಂತಹ ಮಡಿವಾಳ ಕೆರೆಯ ಬಳಿ ನಿಲ್ಲಲೂ ಸಾಧ್ಯವಿಲ್ಲಂತೆ ವಾಸನೆ. ಆದರೆ ಈ ಕೆಲವು ತಿಂಗಳಿಂದ ಕೆರೆಯಲ್ಲಿ ಜೊಂಡು ಎತ್ತುವ ಕಾರ್ಯ ನಡೆಯುತ್ತಿದೆ. ಆದರೆ, ಇದು ಯಾವ ಮಟ್ಟದಲ್ಲಿದೆ ಎಂಬುದೇ ಸಂಶಯ. ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಯಾವುದೇ ಯೋಜನೆ ಇದ್ದಂತಿಲ್ಲ. ಅರಣ್ಯ ಇಲಾಖೆ ಜನರನ್ನು ಒಳಗೆ ಬಿಟ್ಟುಕೊಡಲು ಹಣ ಸ್ವೀಕರಿಸುವಲ್ಲಿ ತೋರುವ ಕಾಳಜಿಯನ್ನು ಕೆರೆಯ ರಕ್ಷಣೆ, ಆರೈಕೆಯಲ್ಲಿ ಕಿಂಚಿತ್ತೂ ತೋರಿಲ್ಲ. ಇಚ್ಛಾಶಕ್ತಿಯಿಂದ ಕೆರೆಯನ್ನು ಉಳಿಸುವ, ಸಂರಕ್ಷಿಸುವ ಕಾರ್ಯವಾದರೆ, ಈ ಕೆರೆ ಮತ್ತಷ್ಟು ಸುಂದರವಾಗುತ್ತದೆ. ಅಷ್ಟೇ ಅಲ್ಲ, ಕೆರೆಯಲ್ಲಿ ವಿಹಾರ ನಡೆಸುವುದು ಆರೋಗ್ಯಕರವಾಗುತ್ತದೆ. ಇಲ್ಲದಿದ್ದರೆ, ಹಣ ಕೊಟ್ಟು ಇಲ್ಲಿಗೆ ಹೋಗಿ ಕಾಯಿಲೆ ತಂದುಕೊಂಡಂತಾಗುತ್ತದೆ.
ಕೋಣನಿಗೂ ಈ ನೀರು ಬೇಡ...
ಬೆಂಗಳೂರಿನ ಕೆರೆಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಕೋಣನಕುಂಟೆ ಕೆರೆ ನೋಡಿದರೆ ಅರಿವಿಗೆ ಬರುತ್ತದೆ. ಕೆರೆ ಎಂಬ ಸಂಸ್ಕೃತಿಯನ್ನು ಕಲ್ಮಶದ ಹೊಂಡವಾಗಿ ಹೇಗೆ ಪರಿವರ್ತಿಸಿಕೊಳ್ಳಬಹುದು ಎಂಬುದಕ್ಕೆ ಇದು ಉದಾಹರಣೆ. ನಮ್ಮಂಥ ಸಂಪ್ರದಾಯ ಪ್ರದೇಶದಲ್ಲಿ ಕೆರೆ ಇಂತಹ ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸ. ಕೊಚ್ಚೆಯಲ್ಲಿ ಕೋಣನ ಥರ ಬಿದ್ದಿದ್ದಾನೆ ನೋಡು ಎಂಬ ನಾಣ್ಣುಡಿಯನ್ನು ಈ ಕೆರೆ ನೋಡಿದ ಮೇಲೆ ಬದಲಾಯಿಸಬೇಕು ಎಂದೆನಿಸುತ್ತದೆ. ಏಕೆಂದರೆ, ಇಲ್ಲಿ ಕೋಣವೂ ಸುಳಿಯುವುದಿಲ್ಲ...

ಕೋಣನಕುಂಟೆ ಕೆರೆಯ ಸಮೀಪ ಕೋಣವೂ ಸುಳಿದಾಡುವಿಲ್ಲ. ಅಂತಹ ಶೋಚನೀಯ ಸ್ಥಿತಿಯಲ್ಲಿದೆ ಈ ಕೆರೆ. ಬೆಂಗಳೂರು ದಕ್ಷಿಣ ತಾಲೂಕು ಹಿಂದಿನ ಬೊಮ್ಮನಹಳ್ಳಿ ನಗರಸಭೆ ವ್ಯಾಪ್ತಿಯಲ್ಲಿನ ಸರ್ವೆ ನಂ.೨ ರಲ್ಲಿ ೩.೭೧ ಹೆಕ್ಟೇರ್ ವಿಸ್ತೀರ್ಣದಲ್ಲಿರುವ ಈ ಕೆರೆ, ಸಂಪೂರ್ಣ ಕಲ್ಮಶಯುಕ್ತ. ಒಳಚರಂಡಿ ನೀರಿಗೆ ವ್ಯವಸ್ಥಿತ ಮಾರ್ಗ ಇಲ್ಲಿದೆ ಎಂಬುದನ್ನು ಹೊರತುಪಡಿಸಿದರೆ, ಇನ್ಯಾವ ವ್ಯವಸ್ಥೆಯೂ ಇಲ್ಲಿಲ್ಲ. ಆದರೆ, ಈ ಕೆರೆಯಲ್ಲಿ ದಟ್ಟವಾದ ಜೊಂಡಿಗೆ ಪೈಪೋಟಿ ನೀಡುತ್ತಿರುವುದು ಪಾರ್ಥೇನಿಯಂ ಕಳೆ. ಕೆರೆಯ ಪಕ್ಕದಲ್ಲೇ ಶಾಲೆ ಇದ್ದು, ಮಕ್ಕಳು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಸ್ವಾಧೀನದಲ್ಲಿರುವ ಈ ಕೆರೆಯನ್ನು ಶುಚಿಗೊಳಿಸಿಲ್ಲ. ಕೆರೆಗೆ ಹೊಂದಿಕೊಂಡಂತೆಯೇ ನೀರಿನ ಬೃಹತ್ ಟ್ಯಾಂಕ್ ಇದೆ. ಈ ನೀರು ಇಲ್ಲೇ ಹಾದುಹೋಗುತ್ತಿರುವುದರಿಂದ, ಕೊಳಕು ಇದರೊಂದಿಗೆ ಸೇರಿಕೊಂಡಿದೆ. ಬೋರ್‌ವೆಲ್‌ಗಳಲ್ಲಂತೂ ಕಪ್ಪನೆಯ ನೀರೇ ನೀರು.
ಕನಕಪುರ ರಸ್ತೆಯಲ್ಲಿರುವ ತಾತುಗುಣಿ ಎಸ್ಟೇಟ್ ನಂತರ ಮುಖ್ಯರಸ್ತೆಯಲ್ಲೇ ವಿಶಾಲವಾಗಿರುವ ಕುಪ್ಪರೆಡ್ಡಿ ಕೆರೆ ದಾಖಲೆಯಲ್ಲೇ ಇಲ್ಲ. ಜಾನುವಾರುಗಳ ದಾಹ ನೀಗಿಸುತ್ತಿರುವ ಈ ಕೆರೆಯನ್ನು ಅಭಿವೃದ್ಧಿಪಡಿಸುವ ಯೋಜನೆಯೂ ಇಲ್ಲ. ವಾರಾಂತ್ಯದಲ್ಲಿ ಐಟಿ-ಬಿಟಿ ಸಿಬ್ಬಂದಿಯ ಮೋಜಿನ ತಾಣವಾಗಿತ್ತು ಈ ಕೆರೆ. ಇದೀಗ ಅದಕ್ಕೆ ಕಡಿವಾಣ ಬಿದ್ದಿದೆಯಾದರೂ, ಕೆರೆಯ ಅಭಿವೃದ್ಧಿಯತ್ತ ಯಾರ ಚಿತ್ತವೂ ಹರಿದಿಲ್ಲ.
ಬೆಂಗಳೂರಿನ ಕೆರೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಾಗರಿಕರ ಮೇಲೂ ಇದೆ. ಈ ಮಾತನ್ನು ಪ್ರತಿ ಲೇಖನದಲ್ಲೂ ಹೇಳಬಯಸುತ್ತೇನೆ. ನಾಗರಿಕರು ಕೆರೆ ಉಳಿಸಲು ಮುಂದಾಗದಿದ್ದರೆ, ಜನಪ್ರತಿನಿಧಿಗಳ ದಾಹಕ್ಕೆ ಎಲ್ಲವೂ ತುತ್ತಾಗುತ್ತವೆ. ನಂತರ, ನಮ್ಮ ಧಣಿವು, ದಾಹಕ್ಕೆ ವಿಷ ಮಾತ್ರ ಉಳಿಯುತ್ತದೆ.
-ಆರ್. ಮಂಜುನಾಥ್
- 338 reads
Email this page
Printer-friendly version
ಲೇಖಕರು
ಹೆಸರು
Manjunath R
ಪರಿಚಯ
ಪತ್ರಕರ್ತ
ವಿಜಯ ಕರ್ನಾಟಕದಲ್ಲಿ ಕಳೆದ 8 ವರ್ಷಗಳಿಂದ ಹಿರಿಯ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.
Home page:
http://keremanju.blogspot.com
http://arkavathi.com
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: ಬ್ಯಾಂಕ್ ಅಧಿಕಾರಿ ...
3 weeks 8 hours ago - Re: ಬ್ಯಾಂಕ್ ಅಧಿಕಾರಿ ...
6 weeks 5 days ago - Re: ವೃಷಭಾವತಿ ಎಂಬ ನದಿ ...
6 weeks 5 days ago - Re: ಟಾಯ್ಲೆಟ್ಗೆ ಫ್ಲಶ್ ...
23 weeks 2 days ago - Re: ಅಕ್ಷಯನಗರ ಕೆರೆಗೆ ...
23 weeks 2 days ago - Re: ವೃಷಭಾವತಿ ಎಂಬ ನದಿ ...
38 weeks 3 days ago - Re: ವೃಷಭಾವತಿ ಎಂಬ ನದಿ ...
38 weeks 5 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
38 weeks 6 days ago - Re: ವೃಷಭಾವತಿ ಎಂಬ ನದಿ ...
39 weeks 12 hours ago
| Subscribe to IWP Kannada list |
| Visit this group |


"ಆದರೆ ಈ ಕೆಲವು ತಿಂಗಳಿಂದ ಕೆರೆಯಲ್ಲಿ ಜೊಂಡು ಎತ್ತುವ ಕಾರ್ಯ ನಡೆಯುತ್ತಿದೆ. ಆದರೆ, ಇದು ಯಾವ ಮಟ್ಟದಲ್ಲಿದೆ ಎಂಬುದೇ ಸಂಶಯ. ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವ ಯಾವುದೇ ಯೋಜನೆ ಇದ್ದಂತಿಲ್ಲ. ಅರಣ್ಯ ಇಲಾಖೆ ಜನರನ್ನು ಒಳಗೆ ಬಿಟ್ಟುಕೊಡಲು ಹಣ ಸ್ವೀಕರಿಸುವಲ್ಲಿ ತೋರುವ ಕಾಳಜಿಯನ್ನು ಕೆರೆಯ ರಕ್ಷಣೆ, ಆರೈಕೆಯಲ್ಲಿ ಕಿಂಚಿತ್ತೂ ತೋರಿಲ್ಲ."
ಹಾಗೆ ಹೇಳಬೇಡಿ. ಅವರು ಜೊಂಡು ತೆಗೆದು ಕೆರೆಯನ್ನು ಒಳ್ಳೆ ಸ್ಥಿತಿಗೆ ತಂದಿದ್ದಾರೆ. ಸಮಸ್ಯೆ ಇರೋದು ಅರಣ್ಯ ಇಲ್ಲಾಖೆಯವರದು ಅಲ್ಲವೇ ಅಲ್ಲಾ.
BWSSB ಯವರು ಸರಿಯಾದ ರೀತಿಯಲ್ಲಿ ಕೊಳಚೆ ನಿರ್ವಹಣೆ ಮಾಡದಿರುವುದೆ ಕಾರಣ. ಅದು ಅಲ್ಲದೇ ಪಕ್ಕದಲ್ಲಿರುವ ಸ್ಲಮ್ ನಿಂದಲೂ
ಬರುವ ಕೊಳಚೆಯನ್ನು ಕೆರೆಗೆ ಬಿಡದೆ ಪಕ್ಕದ ಚರಂಡಿಯಲ್ಲಿ ಬಿಡುವಂತೆ ವ್ಯವಸ್ಥೆ ಮಾಡಿದ್ದಾರೆ ಅರಣ್ಯ ಇಲ್ಲಾಖೆಯವರು..
ಯಾವುದೇ ಕೊಳಚೆ ಕೆರೆಗೆ ನೇರವಾಗಿ ಸೇರದಿದ್ದರೂ, ಅಂತರ್ಜಲದಿಂದ ಸೇರುತ್ತಿದೆ. ಇದರ ಬಗ್ಗೆ ಸ್ವತ: ಹೋಗಿ BWSSB ಯವರೊಡನೆ
ಮಾತುಕತೆ ನಡೆಸಬೇಕು
Post new comment