ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ
ಇದೇನು ಬಹಳ ಹಿಂದಿನ ಸಂಗತಿಯಲ್ಲ. ಕೇವಲ ನಾಲ್ಕು ವರ್ಷಗಳ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ದಿನಗಳ ಮಾತು. 2004ರ ಜುಲೈ 24ರಂದು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಧರ್ಮಸಿಂಗ್ 'ಕೃಷ್ಣಾ ನದಿಯ ನೀರಿನಲ್ಲಿ ತನ್ನ ಪಾಲಿನಿಂದ ಒಂದು ತೊಟ್ಟು ನೀರನ್ನೂ ಕರ್ನಾಟಕ ಆಂಧ್ರಪ್ರದೇಶಕ್ಕೆ ನೀಡದು. ಈ ಮುಖ್ಯಮಂತ್ರಿ ಆಂಧ್ರಪ್ರದೇಶಕ್ಕೆ ನೀರನ್ನು ಬಿಡುವ ತಪ್ಪು ಮಾಡಿಲ್ಲ. ಈ ಬಗೆಯ ಯಾವ ಉದ್ದೇಶವನ್ನೂ ಇಟ್ಟುಕೊಂಡಿಲ್ಲ' ಎಂದು ಆವೇಶ ಭರಿತರಾಗಿ ಹೇಳಿದರು.
ಕರ್ನಾಟಕ ವಿಧಾನಸಭೆಯಲ್ಲಿ ಪ್ರತೀ ವರ್ಷವೂ ಇಂಥ ಆವೇಶ ಭರಿತ ಮಾತುಗಳನ್ನು ಕೃಷ್ಣಾ, ಕಾವೇರಿ ನೀರಿನ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಕೇಳುತ್ತಲೇ ಇರುತ್ತೇವೆ. ಆದರೆ ಈ ತನಕವೂ ಯಾವ ಮುಖ್ಯಮಂತ್ರಿಯೂ ಕೃಷ್ಣಾ ಮೇಲ್ದಂಡೆ ಯೋಜನೆಯ ಪೂರ್ಣ ಕಾಮಗಾರಿ ಮುಗಿದಿಲ್ಲದೇ ಇರುವುದರ ಕುರಿತು ಇಷ್ಟು ಅವೇಶದಿಂದ ಮಾತನಾಡಿದ್ದಿಲ್ಲ. ಬಚಾವತ್ ತೀರ್ಪಿನ ಅನ್ವಯ ತನಗೆ ದೊರೆತಿರುವ ನೀರಿನ ಎಷ್ಟು ಭಾಗವನ್ನು ಕರ್ನಾಟಕ ಬಳಸಿಕೊಳ್ಳುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡುವುದಕ್ಕಾಗಲೀ ಕೇಳುವುದಕ್ಕಾಗಲೀ ಯಾವ ರಾಜಕಾರಣಿಯೂ ಮನಸ್ಸು ಮಾಡಿಲ್ಲ. ಈಗ ಹೊರಬಿದ್ದಿರುವ ಮಾಹಿತಿಯೇನಿದ್ದರೂ ಆನುಷಂಗಿಕವಾಗಿ ಚರ್ಚೆಗಳ ಮಧ್ಯೆ ಇಲ್ಲವೇ ಸಂಶೋಧಕರ ಆಸಕ್ತಿಯಿಂದ ಹೊರಬಿದ್ದಿರುವ ವಿಷಯ ಮಾತ್ರ.
ಜಲಸಂರಕ್ಷಣೆ, ಜಲಸಾಕ್ಷರತೆಯಂಥ ವಿಷಯಗಳ ಚರ್ಚೆಯಲ್ಲಿ ಬೃಹತ್ ನೀರಾವರಿ ಯೋಜನೆಗಳ ಒಟ್ಟು ಪರಿಣಾಮವನ್ನು ಚರ್ಚೆಯಿಂದ ಹೊರಗೇ ಉಳಿಯುತ್ತಿದೆ. ಜಲಸಂರಕ್ಷಣೆ ಮತ್ತು ಜಲಸಾಕ್ಷರತೆಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ತಜ್ಞರೂ ಪ್ರಾಯೋಗಿಕ ಪರಿಹಾರಗಳನ್ನು ದೃಷ್ಟಿಯಲ್ಲಿಟ್ಟುಕೊಂಡಿರುವುದರಿಂದ ಆಡಳಿತ ನೀತಿಯ ಚರ್ಚೆಯತ್ತ ಹೆಚ್ಚು ಗಮನಹರಿಸಲು ಅವರಿಗೆ ಸಾಧ್ಯವಾಗಿಲ್ಲ ಎನಿಸುತ್ತದೆ. ಬೃಹತ್ ನೀರಾವರಿ ಯೋಜನೆಗಳ ಸಾಧ್ಯಾಸಾಧ್ಯತೆಗಳ ಚರ್ಚೆಗಳು ನಡೆದದ್ದು ಈ ಯೋಜನೆಗಳ ನಿರ್ವಸತಿ, ಪರಿಸರ ಸಂಬಂಧೀ ಸಮಸ್ಯೆಗಳ ಜತೆಗೆ. ಒಮ್ಮೆ ಅನುಷ್ಠಾನಗೊಂಡ, ಅನುಷ್ಠಾನದ ಹಾದಿಯಲ್ಲಿರುವ ಯೋಜನೆಗಳ ವಿಷಯದಲ್ಲಿ ಇಂಥ ಚರ್ಚೆಗಳು ಕಡಿಮೆ. ವಿಧಾನಸಭೆ, ವಿಧಾನಪರಿಷತ್ತುಗಳಂಥ ಜನಪ್ರತಿನಿಧಿ ಸಭೆಗಳಲ್ಲಿ, ಅವುಗಳ ಸ್ಥಾಯಿ ಸಮಿತಿಯ ಸಭೆಗಳಲ್ಲಿ ಈ ವಿಷಯದ ಚರ್ಚೆ ನಡೆದಿವೆ. ಈ ಚರ್ಚೆಗಳಲ್ಲಿ 'ಸೆನ್ಸೇಷನಲ್' ಬಗೆಯದ್ದೇನೂ ಇಲ್ಲದೇ ಇರುವುದರಿಂದ ಮಾಧ್ಯಮಗಳಲ್ಲಿ ಇವಕ್ಕೆ ಪ್ರಮುಖ ಸ್ಥಾನ ದೊರೆಯಲಿಲ್ಲ.
ಕೃಷ್ಣಾ, ಕಾವೇರಿ ನದಿ ನೀರಿಗೆ ಕಟ್ಟಿರುವ ಬೃಹತ್ ಅಣೆಕಟ್ಟುಗಳು ಮತ್ತು ಅವುಗಳಿಂದ ಪಡೆಯಲಾಗುತ್ತಿರುವ ನೀರಾವರಿಯ ಬಗೆಗೆ ನಮಗೆ ಗೊತ್ತಿರುವುದೆಲ್ಲಾ 'ತಮಿಳುನಾಡಿಗೆ ನೀರು ಕೊಡಲು ಸಾಧ್ಯವಿಲ್ಲ', 'ಆಂಧ್ರಪ್ರದೇಶಕ್ಕೆ ನೀರು ಕೊಡುವ ಸ್ಥಿತಿಯಲ್ಲಿ ನಾವಿಲ್ಲ' ಎಂಬ ರಾಜಕಾರಣಿಗಳ ಮಾತುಗಳು ಮಾತ್ರ. ಇದರಾಚೆಗಿನ ವಿಷಯಗಳೆಲ್ಲಾ ಸಂಶೋಧನಾ ಪ್ರಬಂಧಗಳ, ಸಂಸತ್ತು, ವಿಧಾನಸಭೆಯ ಸ್ಥಾಯಿ ಸಮಿತಿಯ ಚರ್ಚೆಗಳಲ್ಲಷ್ಟೇ ಇದೆ. ಈ ಚರ್ಚೆಗಳು ಮತ್ತು ಸಂಪ್ರಬಂಧಗಳ ಮೇಲೆ ಕಣ್ಣು ಹಾಯಿಸುತ್ತಾ ಹೋದಂತೆ ಬೃಹತ್ ನೀರಾವರಿ ಯೋಜನೆಗಳಿಗಾಗಿ ನಾವು ಮಾಡುತ್ತಿರುವ ವೆಚ್ಚ, ಅದಕ್ಕಾಗಿ ಮಾಡಿದ ಸಾಲಗಳ ಪ್ರಮಾಣ ಹಾಗೆಯೇ ಈ ವೆಚ್ಚವನ್ನು ಮರುಗಳಿಸುವ ಯಾವ ಉಪಾಯವೂ ನಮ್ಮ ಸರಕಾರಗಳ ಬಳಿ ಇಲ್ಲದೇ ಇರುವುದು ಅನಾವರಣಗೊಳ್ಳುತ್ತದೆ.
ನೀರಾವರಿ ಯೋಜನೆಗಳಿಗೆ ಸರಕಾರ ಮಾಡುವ ಹೂಡಿಕೆ ಮತ್ತು ಅದರಿಂದ ದೊರೆಯುವ ಪ್ರತಿಫಲದ ಕುರಿತಂತೆ ಒಂದು ವಸ್ತುನಿಷ್ಠ ಚರ್ಚೆಯ ಅಗತ್ಯವಂತೂ ಇದ್ದೇ ಇದೆ. ಸರಕಾರ ನೀರಾವರಿಗೆ ಮಾಡುವ ವೆಚ್ಚ ಒಂದು ರೀತಿಯಲ್ಲಿ ಕೃಷಿಗೆ ನೀಡುವ ಸಬ್ಸಿಡಿ. ಈ ಅರ್ಥದಲ್ಲಿ ಇದನ್ನು ಗ್ರಹಿಸಿದರೆ ಕೃಷಿಗೆ ತಗುಲುವ ಒಟ್ಟು ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ನೀರಾವರಿ ಯೋಜನೆಗಳು ಸಹಕರಿಸುತ್ತಿವೆ ಎನ್ನಬಹುದು. ಆದರೆ ಯೋಜನೆಗಳನ್ನು ರೂಪಿಸುವ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ನಡುವಣ ಸಮಯದ ಅಂತರ ಯೋಜನಾ ವೆಚ್ಚವನ್ನೂ ಜ್ಯಾಮಿತೀಯ ಪ್ರಮಾಣದಲ್ಲಿ ಹೆಚ್ಚಿಸುತ್ತದೆಯಷ್ಟೇ ಅಲ್ಲದೆ ಯೋಜನಾ ಮಾದರಿಯನ್ನೇ ಅಪ್ರಸ್ತುತಗೊಳಿಸಿಬಿಡುತ್ತದೆ.
ಕೃಷ್ಣಾ ಮೇಲ್ದಂಡೆ ಯೋಜನೆ ಇದಕ್ಕೆ ಅತ್ಯುತ್ತಮ ಉದಾಹರಣೆ. ಬೃಹತ್ ಅಣೆಕಟ್ಟುಗಳ ಮೂಲಕವಷ್ಟೇ ಅಭಿವೃದ್ಧಿ ಸಾಧ್ಯ ಎಂಬ ನಂಬಿಕೆಯಿದ್ದ ದಿನಗಳಲ್ಲಿ ಈ ಯೋಜನೆ ಆರಂಭಗೊಂಡಿತು. ಬಿಜಾಪುರ, ಬಾಗಲಕೋಟೆ, ಗುಲ್ಬರ್ಗ, ರಾಯಚೂರುಗಳಂಥ ಬರ ಪೀಡಿತ ಜಿಲ್ಲೆಗಳಿಗೆ ನೀರಾವರಿಯನ್ನು ಒದಗಿಸುವ ಉದ್ದೇಶವಿತ್ತು. 1975-76ರಲ್ಲಿ ಈ ಯೋಜನೆ ರೂಪುಗೊಂಡಾಗ ಅಂದಾಜು ವೆಚ್ಚವಿದ್ದದ್ದು 283.65 ಕೋಟಿ ರೂಪಾಯಿಗಳು. ಈ ಮೊತ್ತವನ್ನು ಯೋಜನೆಯ ಮೊದಲ ಹಂತದ ಕಾಮಗಾರಿಗಳಿಗೆಂದು ಅಂದಾಜಿಸಲಾಗಿತ್ತು. ಆದರೆ ಈಗ ಯೋಜನಾ ವೆಚ್ಚ 3465.77 ಕೋಟಿ ರೂಪಾಯಿಗಳಿಗೆ ಏರಿದೆ. ಇದು ಕೇವಲ ಮೊದಲ ಹಂತದ ಕಾಮಗಾರಿಯದ್ದು. ಇನ್ನೂ ಎರಡು ಹಂತಗಳ ಕಾಮಗಾರಿಗೆ ಖರ್ಚಾದ ಹಣವನ್ನು ಲೆಕ್ಕ ಮಾಡಿದರೆ ಆರಂಭದ ಅಂದಾಜಿಗೂ ಈಗಿನ ವೆಚ್ಚಕ್ಕೂ ಅರ್ಥಾರ್ಥ ಸಂಬಂಧವೇ ಇರುವುದಿಲ್ಲ. ಇದರ ಜತೆಗೆ ಲಕ್ಷಾಂತರ ಮಂದಿ ಮುಳುಗಡೆಯಿಂದ ಭೂಮಿ ಕಳೆದುಕೊಂಡರು. ಅವರಿಗೆ ಪುನರ್ ವಸತಿ ಕಲ್ಪಿಸುವ ವೆಚ್ಚ ಬೇರೆಯೇ ಇದೆ. ಈ ಎಲ್ಲವನ್ನೂ ಒಟ್ಟಿಗೆ ಸೇರಿಸಿದರೆ ಯೋಜನೆಯ ಅಗತ್ಯ ನಿಜಕ್ಕೂ ಇತ್ತೇ ಎಂಬ ಪ್ರಶ್ನೆ ಉದಯಿಸುತ್ತದೆ.
ಕರ್ನಾಟಕ ಸರಕಾರ ದೊಡ್ಡ, ಮಧ್ಯಮ ಪ್ರಮಾಣದ ಮತ್ತು ಸಣ್ಣ ನೀರಾವರಿ ಯೋಜನೆಗಳಿಗೆ 2002ರ ಮಾರ್ಚ್ ಕೊನೆಯವರೆಗೆ ಸರಕಾರ ವೆಚ್ಚ ಮಾಡಿರುವ ಹಣ 13, 781 ಕೋಟಿ ರೂಪಾಯಿಗಳು. ಇದರಿಂದ 27.76 ಲಕ್ಷ ಹೆಕ್ಟೇರುಗಳಿಗೆ ನೀರಾವರಿಯನ್ನು ಒದಗಿಸಬೇಕಾಗಿತ್ತು. ಆದರೆ ಯೋಜನೆಗಳು ಪೂರ್ಣಗೊಳ್ಳದೇ ಇರುವುದು, ಯೋಜನೆಗಳನ್ನು ಪೂರ್ಣಗೊಳಿಸಲು ಹಣಕಾಸು ಒದಗಿಸಲು ಸಾಧ್ಯವಾಗದೇ ಇರುವುದರಿಂದ ವೆಚ್ಚದವಾದ ಹಣ ದುಡಿಯದ ಬಂಡವಾಳವಾಗಿ ಪರಿವರ್ತಿತಗೊಂಡಿದೆ ಎಂದು ಕಂದಾಯ ಸುಧಾರಣಾ ಆಯೋಗದ ವರದಿ ಹೇಳಿತ್ತು.

ಕಂದಾಯ ಸುಧಾರಣಾ ಆಯೋಗ ಮತ್ತೊಂದು ರೀತಿಯ ತೊಂದರೆಯನ್ನೂ ಗುರುತಿಸಿತ್ತು. ಎಲ್ಲಾ ಬೃಹತ್ ನೀರಾವರಿ ಯೋಜನೆಗಳ ನಾಲೆಗಳ ಆರಂಭಗೊಳ್ಳುವ ಭಾಗದಲ್ಲಿ ನೀರಿನ ಅತಿಬಳಕೆ ನಡೆಯುತ್ತಿದ್ದರೆ ನಾಲೆಯ ಕೊನೆಯಲ್ಲಿ ನೀರಿನ ಕೊರತೆ ಕಂಡುಬರುತ್ತದೆ. ಇದಕ್ಕೆ ಮುಖ್ಯ ಕಾರಣ ನಾಲೆಗಳು ನೀರು ಪೂರೈಕೆಯ ಆರಂಭಿಸುವ ಪ್ರದೇಶಗಳಲ್ಲಿ ಇರುವ ರೈತರು ಹೆಚ್ಚು ನೀರು ಬೇಡುವ ಭತ್ತ, ಕಬ್ಬುಗಳನ್ನು ಬೆಳೆಯುತ್ತಾರೆ. ಹೆಚ್ಚಿನವರು ಇವುಗಳ ಎರಡು ಬೆಳೆಗಳನ್ನು ತೆಗೆಯುತ್ತಾರೆ. ಪರಿಣಾಮವಾಗಿ ನೀರಿನ ಬಹುಪಾಲು ನಾಲೆಯ ಆರಂಭದ ಹಂತದಲ್ಲಿಯೇ ಮುಗಿದು ಹೋಗುತ್ತದೆ. ಕೊನೆಯ ಹಂತ ತಲುಪುವ ಹೊತ್ತಿಗೆ ಕಡಿಮೆ ನೀರು ಬೇಡುವ ಬೆಳಗಳಿಗೂ ನೀರಿನ ಕೊರತೆ ಕಾಣಿಸಿಕೊಳ್ಳುತ್ತದೆ.
ಕಂದಾಯ ಸುಧಾರಣಾ ಆಯೋಗದ ವರದಿ ಹೇಳಿರುವಂತೆ ಕರ್ನಾಟಕದಲ್ಲಿರುವ ನಾಲೆಗಳಲ್ಲಿ ನೀರಿನ ಸೋರಿಕೆ ಭಾರೀ ಪ್ರಮಾಣದಲ್ಲಿದೆ. ಕಾಮಗಾರಿಯ ಗುಣಮಟ್ಟದಲ್ಲಿರುವ ಕೊರತೆ ಇದಕ್ಕೊಂದು ಕಾರಣವಾಗಿರುವಂತೆಯೇ ನಾಲೆಗಳಲ್ಲಿ ತುಂಬಿರುವ ಹೂಳು ಕೂಡಾ ನೀರಿನ ಸೋರಿಕೆಗೆ ಕಾರಣವಾಗುತ್ತಿದೆ. ಜತೆಗೆ ನಾಲೆಗಳ ನಿರ್ವಣೆಯ ಕೊರತೆ ಮತ್ತೊಂದು ಸಮಸ್ಯೆ. ಈ ಎಲ್ಲಾ ಸಮಸ್ಯೆಗಳಿಗೂ ಇರುವ ಕಾರಣ ನಾಲೆಗಳ ನಿರ್ವಹಣೆಗೆ ಅಗತ್ಯವಿರುವ ಸಂಪನ್ಮೂಲದ ಕೊರತೆ.
ರೈತರು ಬಳಸುವ ನೀರಾವರಿಗಾಗಿ ಅವರಿಂದ ಪಡೆಯುವ ಮೊತ್ತ ಬಹಳ ಸಣ್ಣದು. ಹೆಕ್ಟೇರ್ ಒಂದಕ್ಕೆ ವರ್ಷಕ್ಕೆ 600 ರೂಪಾಯಿಗಳಷ್ಟೇ ಇರುವ ಈ ಮೊತ್ತವನ್ನು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಭೂಕಂದಾಯದ ಜತೆಗೆ ಇದನ್ನು ವಸೂಲು ಮಾಡಲಾಗುತ್ತದೆ. ಅಣೆಕಟ್ಟುಗಳನ್ನು ಮತ್ತು ನಾಲೆಗಳನ್ನು ನಿರ್ಮಿಸಿ ನಿರ್ವಹಿಸುವುದು ಜಲಸಂಪನ್ಮೂಲ ಇಲಾಖೆಯಾದರೆ ರೈತರಿಂದ ನೀರಿನ ತೆರಿಗೆಯನ್ನು ವಸೂಲು ಮಾಡುವುದು ಕಂದಾಯ ಇಲಾಖೆ. ಭೂ ಕಂದಾಯ ವಸೂಲು ಮಾಡುವ ಕ್ರಿಯೆಯಲ್ಲಿ ಅಷ್ಟೋ ಇಷ್ಟೋ ನೀರಿನ ತೆರಿಗೆಯನ್ನು ವಸೂಲು ಮಾಡಲಾಗುತ್ತಿದೆಯೇ ಹೊರತು ನೀರಿನ ಬಳಕೆ ಮತ್ತು ನೀರಿನ ತೆರಿಗೆಯ ವಸೂಲಿಗೆ ಯಾವ ಸಂಬಂಧವೂ ಇಲ್ಲ.
ಬೃಹತ್ ನೀರಾವರಿ ಯೋಜನೆಗಳ ಅನೇಕ ಅಂಸಂಗತಗಳನ್ನು ಒಂದೊಂದಾಗಿ ವಿವರವಾಗಿ ಚರ್ಚಿಸುವ ಅಗತ್ಯವಿದೆ. ಈ ಯೋಜನೆಗಳು ಕೇವಲ ನೀರಿನ ಅಪಬಳಕೆಗಷ್ಟೇ ಕಾರಣವಾಗಿಲ್ಲ. ಜತೆಗೆ ರಾಜ್ಯದ ಆರ್ಥಿಕತೆಯನ್ನೂ ಹಾದಿತಪ್ಪಿಸುತ್ತಿವೆ. ಈ ಲೇಖನದೊಂದಿಗೆ ಆರಂಭವಾಗುತ್ತಿರುವ ಈ ಸರಣಿ ವಿಷಯದ ಒಳ-ಹೊರಗನ್ನು ವಿಶ್ಲೇಷಿಸಲಿದೆ.
- 650 reads
Email this page
Printer-friendly version
ವಿಶೇಷ ಬರಹಗಳು
Recent blog posts
Poll
Recent comments
- ಎಲ್ಲಿರೋದು
1 hour 34 min ago - ಹರಿ, ನೀರು
6 days 12 hours ago - ಕುಡಿಯುವ
6 days 22 hours ago - ಹಳ್ಳಿಗಳಿಂ
1 week 4 days ago - ನಿಮ್ಮ ಸಾಹಸ
1 week 6 days ago - Idu ondu athytammavaada
2 weeks 5 hours ago - Dear Mr. Mallikarjuna,
can
2 weeks 8 hours ago - neevu kalisiro salahe
2 weeks 2 days ago - ಧನ್ಯವಾದ
2 weeks 3 days ago - ಈ ಉಪಯುಕ್ತ
2 weeks 3 days ago










ಬೃಹತ್ ನೀರಾವರಿ ಯೋಜನೆಗಳ ಅಸಂಗತಗಳನ್ನು ಚರ್ಚಿಸುವ ಅಗತ್ಯವಿದೆ. ರೈತರಿಂದ ಶುಲ್ಕ ವಸೂಲು ಮಾಡಲೇಬೇಕೆಂಬ ನಿಮ್ಮ ವಾದ ನವ ಉದಾರವಾದೀ ಆರ್ಥಿಕತೆಯ ಪ್ರೇರಣೆಯಿಂದ ಹುಟ್ಟಿದ್ದು ಅನ್ನಿಸುತ್ತಿದೆ. ರೈತರ ಬೆಳಗಳಿಗೆ ಇರುವ ಸಣ್ಣ ಪ್ರಮಾಣದ ಸಬ್ಸಿಡಿ ಇದು. ಅದನ್ನೂ ಕಿತ್ತುಕೊಳ್ಳುವುದು ಸರಿಯಲ್ಲವೇನೋ? ಇನ್ನು ಯೋಜನಾ ವೆಚ್ಚ ಹೆಚ್ಚುವುದರ ಹಿಂದೆ ರಾಜಕಾರಣಿಗಳ ಕೈವಾಡ, ಸ್ವಾರ್ಥ ಎಲ್ಲವೂ ಇದೆ. ಜತೆಗೆ ನೀರಾವರಿ ಇಲಾಖೆಯ ಭ್ರಷ್ಟಾಚಾರವೂ ಸೇರಿಕೊಂಡಿದೆ. ಅದೇನೇ ಇದ್ದರೂ ಒಂದಂತೂ ನಿಜ. ಬಹಳ ಅಗತ್ಯವಾಗಿ ನಡೆಯಬೇಕಿದ್ದ ಚರ್ಚೆಯೊಂದನ್ನು ಆರಂಭಿಸಿದ್ದೀರಿ. ಮುಂದಿನ ಲೇಖನಗಳನ್ನು ಎದುರು ನೋಡುತ್ತೇನೆ.
-ರಮೇಶ್ ಎಂ.
exess water from krishna basin instead of being let off to AP it should be diverted to fill tanks (kere) in dry areas of the state. These sort of projects must be taken up by the state.
ಯಾವುದಕ್ಕೂ ಪುಕ್ಕಟೆ, ಸಬ್ಸಿಡಿಯಂತಹ ಬಣ್ಣ ಹಚ್ಚುವುದು ಸರಿಯಂತೂ ಅಲ್ಲ. ಆದರೆ, ಕೇವಲ ರೈತ ಸಮುದಾಯದಿಂದ ಸಬ್ಸಿಡಿಯನ್ನು ಕಿತ್ತುಕೊಂಡರೆ, ಅದರ ಲಾಭವೂ ರಾಜ್ಯದ ಆರ್ಥಿಕತೆಯ ಯಾವ ಮೂಲೆಯನ್ನೂ ಸುಧಾರಿಸದು. ಸಮಾನತೆ ಎನ್ನುವುದು, ವರ್ಗ, ಜಾತಿ, ಧರ್ಮಗಳನ್ನು ಮೀರಿ ನಿಲ್ಲಬೇಕು. ಅಂದಾಗಲೇ, ನೀವು ಹೇಳಿದಂತಹ ಕ್ರಮಗಳು ಸಾಧ್ಯ.
ಶ್ರೀ ರಮೇಶ್ ಅವರ ವಾದವೂ ಇಲ್ಲಿ ಸರಿ ಅನ್ನಿಸದೇ ಇರದು. ಹಾಗೆಂದ ಮಾತ್ರಕ್ಕೆ, ಬರೀ ಇಲ್ಲಿಗೇ ಇಂಥ ವಿಷಯಗಳನ್ನು ನಿಲ್ಲಿಸಲಾಗದು. ಆ ನೀರಿನ ಆಸರೆಯಲ್ಲಿ ಬದುಕುತ್ತಿರುವ ರೈತ ಕುಟುಂಬಗಳನ್ನು ಸೇರಿಸಿಕೊಂಡು ಹೋರಾಟಕ್ಕೆ ಇಳಿದರೆ, ಸ್ಠಿತಿ ಸ್ವಲ್ಪವಾದರೂ ಸುಧಾರಿಸೀತು. ಆದರೆ, ಈ ಒಗ್ಗಟ್ಟನ್ನು ಹುಟ್ಟಿಸುವವರಾರು?
ಹೊಸ ಕಾಮೆಂಟ್ ಸೇರಿಸಿ