ಬಯಲುಸೀಮೆಯ ಜಲನಿಧಿ - ತಲಪರಿಗೆ
ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕಿನ ಹಳ್ಳಿಗಳಲ್ಲಿ ಹಿರೀಕರು ತಲಪರಿಗೆ ಎಂಬ ಪದ ಕೇಳಿದರೆ ಸಾಕು! ಅದರ ನೀರಿನ ಸಿಹಿ, ಉಕ್ಕಿ ಹರಿಯುತ್ತಿದ್ದ ರೀತಿ, ಊರವರೆಲ್ಲಾ ಸೇರಿ ಕಾಲುವೆ ತೆಗೆಯುತ್ತಿದ್ದುದು, ಕೆಲಸಕ್ಕೆ ಬರದವರಿಗೆ ದಂಡ ಹಾಕುತ್ತಿದ್ದುದು, ತಲಪರಿಗೆ ನೀರಿನಿಂದ ನಿಶ್ಚಿಂತೆಯಾಗಿ ಬೇಸಿಗೆ ಬೆಳೆ ಆಗುತ್ತಿದ್ದುದ್ದು ... ಹೀಗೆ ಹತ್ತು-ಹಲವಾರು ನೆನಪುಗಳ ಲಹರಿಯೇ ಬಿಚ್ಚಿಕೊಳ್ಳುತ್ತದೆ.
ತಲಪರಿಗೆಗಳೆಂಬ ಪಾರಂಪರಿಕ ಜಲಮೂಲಗಳು ಶತಮಾನಗಳ ಕಾಲ ಆಪತ್ಕಾಲದಲ್ಲಿ ಜನರ ಬದುಕನ್ನು ಪೊರೆದದ್ದಕ್ಕೆ ಉದಾಹರಣೆ ಇದು.
೧೯೫೦-೫೫ರ ಇಸವಿ ೫ ಅಥವಾ ೬ನೇ ತರಗತಿಯ ಭೂಗೋಳ ಪಠ್ಯಪುಸ್ತಕದ ಪಾಠವೊಂದರಲ್ಲಿ ಒಂದು ವಾಕ್ಯ ಹೀಗಿತ್ತು, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ತಲಪರಿಗೆಗಳ ನೀರನ್ನು ಬಳಸಿ ವ್ಯವಸಾಯ ಮಾಡಲಾಗುತ್ತದೆ ಪಾವಗಡದ ಇತಿಹಾಸಕಾರರಾದ ಚಲುವರಾಜನ್‌ರನ್ನು ತಲಪರಿಗೆಗಳ ಬಗ್ಗೆ ಕೇಳಿದಾಗ ಅವರು ಥಟ್ಟನೆ ಇದನ್ನು ನೆನಪಿಸಿಕೊಂಡರು.
ಏನಿದು ತಲಪರಿಗೆ?
ನೋಡಿದ ತಕ್ಷಣ ಒಂದು ಸಾಧಾರಣ ನೀರಿನ ಗುಂಡಿ ಇಲ್ಲವೇ ಪುಟ್ಟ ಬಾವಿ ಎನಿಸುತ್ತದೆ. ಕಲ್ಯಾಣಿ, ಪುಷ್ಕರಣಿಗಳಂತೆ ಭವ್ಯ ಆಕಾರವಾಗಲೀ, ಕಲಾತ್ಮಕ ಕಲ್ಲು ಕಟ್ಟಣೆಯಾಗಲೀ ಇರುವುದಿಲ್ಲ, ತೆರೆದ ಬಾವಿಗಳಿಗಿರುವ ಉದ್ದ-ಅಗಲ, ಆಳವೂ ಇರುವುದಿಲ್ಲ. ಆದರೆ ಆ ಪುಟ್ಟ-ಪುಟ್ಟ ಜ ಸಂಗ್ರಹಾಗಾರಗಳು ನೂರಾರು ಎಕರೆಗೆ ನೀರುಣಿಸುವ ಸಾಮರ್ಥ್ಯವುಳ್ಳವು. ಬೇಸಿಗೆ ಬೆಳೆಗೆ ಮತ್ತು ಇತರ ಉಪಯೋಗಗಳಿಗೆ ಅವೇ ಆಧಾರ. ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ ಹಾಗೂ ಚಿತ್ರದುರ್ಗದ ಕೆಲವು ಭಾಗ, ಬಳ್ಳಾರಿಯ ಕೂಡ್ಲಿಗಿ ತಾಲ್ಲೂಕು, ಕೋಲಾರ ಜಿಲ್ಲೆಗಳ ಕೆಲವು ಭಾಗದ ಹಳೆ ತಲೆಮಾರಿನ ರೈತರಿಗೆ ತಲಪರಿಗೆ ಅತ್ಯಂತ ಪರಿಚಿತ ಪದ. ತಲಪರಿಗೆ ನೀರಾವರಿ, ತಲಪರಿಗೆ ಬೇಸಾಯ ಎಂಬ ಪದವೇ ಈ ಭಾಗದಲ್ಲಿ ಚಾಲ್ತಿಯಲ್ಲಿದೆ.
ಆಂಧ್ರದ ಅನಂತಪುರ, ಕಡಪ, ಕಲ್ಯಾಣ ದುರ್ಗಗಳಲ್ಲಿಯೂ ಸಹ ತಲಪರಿಗೆಗಳಿರುವ ಮಾಹಿತಿ ಇದೆ. ತಲಪರಿಗೆ ತೆಲುಗು ಭಾಷೆಯ ಶಬ್ಧ ಎಂದು ಹಲವರು ಹೇಳುತ್ತಾರೆ. ಕೆಲವರು ಅಚ್ಚ ದ್ರಾವಿಡ ಪದ ಎಂತಲೂ ಹೇಳುತ್ತಾರೆ. ರೈತರು ಪ್ರದೇಶಕ್ಕನುಗುಣವಾಗಿ ತಲಪರಿಗೆ, ತಲಪುರಿಗೆ, ತಲಪರಿಕೆ ಮುಂತಾಗಿ ಉಚ್ಛರಿಸುವುದೂ ಉಂಟು.
ತಲಪರಿಗೆಗಳು ನೈಸರ್ಗಿಕವಾಗಿ ರೂಪುಗೊಂಡಿರುವಂತಹವು. ಸಾಮಾನ್ಯವಾಗಿ ಬೆಟ್ಟ-ಗುಡ್ಡಗಳ ಬುಡಗಳಲ್ಲಿ, ಅರಣ್ಯಪ್ರದೇಶಗಳ ಇಳಿಜಾರು ಭಾಗದಲ್ಲಿ, ಕೆರೆಗಳಿಗೆ ನೀರು ಬರುವ ವಿಶಾಲವಾದ ಜಲಾನಯನ ಪ್ರದೇಶಗಳ ತಗ್ಗು ಭಾಗದಲ್ಲಿ, ಕೆರೆ-ಕಟ್ಟೆಗಳ ಅಂಗಳ ಅಥವಾ ಹಿಂಭಾಗ, ಅಚ್ಚುಕಟ್ಟು ಪ್ರದೇಶಗಳಲ್ಲಿ, ನದಿ ಮತ್ತು ದೊಡ್ಡ-ದೊಡ್ಡ ಹಳ್ಳಗಳ ಇಕ್ಕೆಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಡುಬರುತ್ತವೆ. ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಬೆಟ್ಟ-ಗುಡ್ಡಗಳು, ಕುರುಚಲು ಕಾಡುಗಳು ಹೇರಳವಾಗಿರುವುದರಿಂದ ಈ ಭಾಗವು ತಲಪರಿಗೆಗಳ ಕೇಂದ್ರಸ್ಥಾನವಾಗಿದೆ.
ತಲಪರಿಗೆಗಳ ಉಗಮ
ಅಂತರ್ಜಲ ರೂಪುಗೊಳ್ಳುವ ವಿಧಾನದ ಬಗ್ಗೆ ತಿಳಿದರೆ ತಲಪರಿಗೆಗಳ ನೀರಿನ ಮೂಲ ಮತ್ತು ಈ ಜಿಲ್ಲೆಗಳಲ್ಲಿಯೇ ನಿರ್ದಿಷ್ಟವಾಗಿ ತಲಪರಿಗೆಗಳಿರುವ ಬಗ್ಗೆ ಸ್ಪಷ್ಟವಾಗುತ್ತದೆ.
ಮಳೆ ಬಿದ್ದಾಗ, ಮಳೆಯ ಸ್ವಲ್ಪ ಪ್ರಮಾಣದ ನೀರು (ಸುಮಾರು ಶೇ.೮ ರಿಂದ ೧೨ ರಷ್ಟು) ಭೂಮಿಯ ಗುರುತ್ವಾಕರ್ಷಣೆಗೊಳಪಟ್ಟು, ಮಣ್ಣಿನ ಪದರಗಳ ಮೂಲಕ ಭೂಮಿಯ ಒಳಗೆ ಜಿನುಗುತ್ತದೆ. ಇದನ್ನು ಬಸಿಯುವಿಕೆ ಎನ್ನುತ್ತಾರೆ. ಮಣ್ಣಿನ ರಂಧ್ರಗಳ ಮೂಲಕ ನಿಧಾನವಾಗಿ ಕೆಳಗಿಳಿಯುವ ನೀರು ಅದನ್ನು ತಡೆದಿಡುವ ಶಿಲಾಪದರದವರೆಗೂ ಜಿನುಗಿ ಅಲ್ಲಿನ ಶಿಲಾರಂಧ್ರಗಳಲ್ಲಿ ಮತ್ತು ಬಿರುಕುಗಳಲ್ಲಿ ಸಂಗ್ರಹವಾಗುತ್ತದೆ. ಇದೇ ಅಂತರ್ಜಲ ಅಥವಾ ಭೂಜಲ. ಹೀಗೆ ಸಂಗ್ರಹವಾದ ಅಂತರ್ಜಲ ಒಂದೇ ಕಡೆ ನಿಶ್ಚಲವಾಗಿರದೆ ಹರಿಯುತ್ತಿರುತ್ತದೆ. ನೀರನ್ನು ಹಿಡಿದಿಟ್ಟಿರುವ ಭೂಗರ್ಭದ ಶಿಲಾರಚನೆಯ ಭಾಗಗಳನ್ನು ಜಲಸ್ಥರ ಅಥವಾ ಜಲಧರಗಳೆನ್ನುತ್ತಾರೆ. ಈ ಜಲಸ್ಥರಗಳು ಭೂಮಿಯ ಒಂದೇ ಆಳದಲ್ಲಿರುವುದಿಲ್ಲ. ಅವು ಒಮ್ಮೊಮ್ಮೆ ಭೂಮಟ್ಟದ ಸನಿಹದಲ್ಲೂ, ಒಮ್ಮೊಮ್ಮೆ ಅತ್ಯಂತ ಆಳದಲ್ಲೂ ಕಂಡುಬರುತ್ತವೆ.
ಈಗ ತುಮಕೂರು ಮತ್ತು ಅಕ್ಕ-ಪಕ್ಕದ ಜಿಲ್ಲೆಗಳ ಜಲಸ್ಥರಗಳ ಬಗ್ಗೆ ಗಮನಹರಿಸೋಣ. ಭೂಗರ್ಭಶಾಸ್ತ್ರದ ಪ್ರಕಾರ ಈ ಭಾಗದ ಭೂಗರ್ಭದಲ್ಲಿ ವಿಶಾಲವಾದ ಬಂಡೆಗಳಿವೆ. ಈ ಬಂಡೆಗಳಲ್ಲಿ ನೀರು ಜಿನುಗಿ ಆಳಕ್ಕಿಳಿಯಲು ಅಗತ್ಯವಾದ ಬಿರುಕುಗಳು ಅತ್ಯಂತ ಕಡಿಮೆ, ಹಾಗಾಗಿ ಇಂಗಿದ ಮಳೆ ನೀರು ಹೆಚ್ಚು ಆಳಕ್ಕಿಳಿಯದೆ ಹತ್ತಿಪ್ಪತ್ತು ಅಡಿ ಆಳದಲ್ಲಿ ಹರಿಯುತ್ತಿದ್ದು ಎಲ್ಲಿ ಮರಳುಮಣ್ಣು ಅಥವಾ ಸಡಿಲಮಣ್ಣು ಸಿಗುತ್ತದೆಯೋ ಅಲ್ಲಿ ಉಕ್ಕುತ್ತದೆ.
ಉಕ್ಕಿ ಹರಿವ ನೀರಿನ ಸಮರ್ಥ ಬಳಕೆ
ಈ ರೀತಿ ಶಿಲಾರಚನೆಗಳ ಕಾರಣದಿಂದ ಉಕ್ಕುವ ನೀರನ್ನು ಸಮರ್ಥವಾಗಿ ಬಳಸಿಕೊಂಡ ನಮ್ಮ ರೈತರ ಜಾಣ್ಮೆ ಅದ್ಭುತ. ನೀರು ಉಕ್ಕುವ ಸ್ಥಳವನ್ನು ಗುರುತಿಸಿ, ಅಲ್ಲೊಂದು ಗುಂಡಿ ತೆಗೆದು, ಕಲ್ಲುಕಟ್ಟಣೆ ಕಟ್ಟಿ, ಕಾಲುವೆ ತೋಡಿ, ಇಂತಿಂಥವರು ಇಷ್ಟಿಷ್ಟು ನೀರು ಬಳಸಬೇಕೆಂಬ ನಿಯಮ ಮಾಡಿ, ನಿರ್ವಹಣೆಗಾಗಿ ಗಂಕಾರನನ್ನು ನೇಮಿಸಿ, ನೀರಿನ ಪರಿಶುದ್ಧತೆ ಕಾಪಾಡಲು ಆ ಸ್ಥಳಕ್ಕೊಂದು ಪೂಜನೀಯ ಸ್ಥಾನ ಕಲ್ಪಿಸುವ ಮೂಲಕ ಅದಕ್ಕೊಂದು ಸಾಂಸ್ಥಿಕ ರೂಪ ಕೊಟ್ಟ ನಮ್ಮ ಪೂರ್ವಿಕರ ಕ್ರಮ ಶ್ಲಾಘನೀಯ. ಮಳೆಯ ಅಭಾವ, ಅನಿಶ್ಚಿತತೆ ತಲಪರಿಗೆ ಸಂಸ್ಕೃತಿ ಬೆಳೆಯಲು ಕಾರಣವೆಂಬುದರಲ್ಲಿ ಸಂಶಯವಿಲ್ಲ. ರಾಜ್ಯದ ಇತರೆಡೆಗಳಲ್ಲಿಯೂ ಸಹ ಅಲ್ಲಲ್ಲಿ ನೀರಿನ ಬುಗ್ಗೆಗಳನ್ನು ಕಾಣಬಹುದು, ಹೆಚ್ಚಾಗಿ ಅವು ಕುಡಿ ನೀರಿಗೆ ಬಳಕೆಯಾಗುತ್ತವೆ. ಆದರೆ ವ್ಯವಸಾಯಕ್ಕೆ ತಲಪರಿಗೆ ನೀರನ್ನು ಸಮರ್ಥವಾಗಿ ಬಳಸುತ್ತಿರುವುದು ತುಮಕೂರು ಜಿಲ್ಲೆಯಲ್ಲಿ ಮಾತ್ರ.
ತಲಪರಿಗೆಗಳ ರಚನೆ
ಈ ಮೊದಲೇ ಹೇಳಿದಂತೆ ನಿರ್ದಿಷ್ಟ ಸ್ಥಳದಲ್ಲಿ ಸದಾ ನೀರು ಉಕ್ಕುವುದನ್ನು ಗಮನಿಸಿ, ಅಥವಾ ಇಂತಹ ಕಡೆ ಗುಂಡಿ ತೆಗೆದರೆ ನೀರು ಉಕ್ಕಬಹುದೆಂದು ಅಂದಾಜಿಸಿ ನಮ್ಮ ಪೂರ್ವಿಕರು ಅಲ್ಲಿ ಗುಂಡಿ ತೋಡಿ ಅದಕ್ಕೊಂದು ಕಾಲುವೆ ತೆಗೆದು ತಲಪರಿಗೆ ನಿರ್ಮಿಸಿದ್ದಾರೆ. ಬಂಡೆ-ಕಲ್ಲುಗಳಿಂದ ಕೂಡಿದ ಬೆಟ್ಟದ ತಪ್ಪಲುಗಳಲ್ಲಿ ಮತ್ತು ಮಳೆಗಾಲದಲ್ಲಿ ಹರಿದು ಬೇಸಿಗೆಯಲ್ಲಿ ಒಣಗುವ ಅಥವಾ ನೀರು ಕಡಿಮೆಯಾಗುವ ನದಿ, ತೊರೆ, ಹಳ್ಳಗಳ ಇಕ್ಕೆಲಗಳಲ್ಲಿ ಹೆಚ್ಚಾಗಿ ತಲಪರಿಗೆಗಳನ್ನು ಕಾಣಬಹುದು. ಬೆಟ್ಟದ ತಪ್ಪಲುಗಳಲ್ಲಿ ತಲಪರಿಗೆಗಳಿರಲು ಕಾರಣವನ್ನು ಈ ರೀತಿ ನೀಡಬಹುದು. ಮಳೆ ಬಿದ್ದಾಗ ಬೆಟ್ಟದ ಬಂಡೆ-ಕಲ್ಲುಗಳ ಬಿರುಕುಗಳಲ್ಲಿ ಸೇರಿ ಇಂಗುವ ನೀರು ಭೂಗರ್ಭದಲ್ಲಿ ಅಂತರ್ಗತವಾಗಿ ಹರಿಯುತ್ತಿದ್ದು ಮರಳು ನೆಲ ಸಿಕ್ಕ ಕಡೆ ಉಕ್ಕಿ ಮೇಲೆ ಬರುತ್ತದೆ. ಈ ರೀತಿ ನೀರು ಊರುವ, ಜಿನುಗುವ, ಒಸರುವ ಸ್ಥಳವನ್ನು ಗುರುತಿಸಿ ಅಲ್ಲಿ ತಲಪರಿಗೆ ನಿರ್ಮಿಸಿ ಅದಕ್ಕೆ ತಕ್ಕ ಹಾಗೆ ಬೇಸಾಯ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಇದೇ ಅಭಿಪ್ರಾಯವನ್ನು ಹಲವಾರು ಭೂಗರ್ಭ ಶಾಸ್ತ್ರಜ್ಞರು ಹಾಗೂ ರೈತರು ಅನುಮೋದಿಸುತ್ತಾರೆ.
ಇನ್ನು ನದಿ, ತೊರೆ, ಹಳ್ಳಗಳ ಇಕ್ಕೆಲಗಳಲ್ಲಿ ತಲಪರಿಗೆಗಳು ಇರಲು ಕಾರಣವೆಂದರೆ, ಬೇಸಿಗೆಯಲ್ಲಿ ಇವು ಒಣಗಿದರೂ ಪದರ-ಪದರವಾಗಿ ಶೇಖರಣೆಗೊಂಡ ಮರಳಿನಲ್ಲಿ ಇಮುರಿದ ಮಳೆಗಾಲದ ನೀರು ದಡದಲ್ಲಿ ಎಲ್ಲೋ ಒಂದು ಕಡೆ ಮರಳಿನ ಪಾಯಿಂಟ್ ಸಿಕ್ಕ ಕಡೆ ಉಕ್ಕಿ ಹೊರಬರುತ್ತದೆ. ಜನರು ಈ ಸ್ಥಳಗಳನ್ನು ಗುರುತಿಸಿ ಅಲ್ಲಿ ತಲಪರಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ.
- 2555 reads
Email this page
Printer-friendly version
ಲೇಖಕರು
ಹೆಸರು
ಮಲ್ಲಿಕಾರ್ಜುನ ಹೊಸಪಾಳ್ಯ
ಪರಿಚಯ
ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ. ನಾಟಿಬೀಜ ಸಂರಕ್ಷಣೆ ಮತ್ತು ದೇಸೀ ರೈತಜ್ಞಾನ ದಾಖಲಾತಿಯಲ್ಲಿ ವಿಶೇಷ ಆಸಕ್ತಿ. ಆ ಹಾದಿಯಲ್ಲಿ ವ್ಯಾಪಕ ಓಡಾಟ, ರೈತರ ಒಡನಾಟ, ಅಧ್ಯಯನ. ನಾಲ್ಕು ವರ್ಷ ‘ಗ್ರಾಮಮಿತ್ರ’ ಕೃಷಿ ಕ್ಯಾಲೆಂಡರ್ ಮತ್ತು ನಾಟಿತಳಿ ಕುರಿತ ‘ಪೈರು ಪಚ್ಚೆ’ ತ್ರೈಮಾಸಿಕದ ಸಂಪಾದಕತ್ವ. ಹವ್ಯಾಸಿ ಬರಹಗಾರ ಮತ್ತು ಛಾಯಾಗ್ರಾಹಕ. ತುಮಕೂರಿನಲ್ಲಿ ‘ಧಾನ್ಯ’ ಸಂಸ್ಥೆ ಸ್ಥಾಪನೆ. ನಿರಂತರ ಜಲ ಜಾಗೃತಿ ಕಾರ್ಯಕ್ರಮಗಳ ಸಂಘಟನೆ. ನೀರಿನ ಸುದ್ದಿಗಳಿಗೇ ಮೀಸಲಾದ ‘ಜಲಸಿರಿ’ ಮಾಹಿತಿ ಪತ್ರದ ಪ್ರಕಟಣೆ. ಕೃಷಿ ಮಾಧ್ಯಮ ಕೇಂದ್ರ, ಧಾರವಾಡ - ಸಂಸ್ಥೆಯಿಂದ ೨೦೦೪ ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಕೃಷಿ ಬರಹಗಾರ ಪ್ರಶಸ್ತಿ. ಕಳೆದೆರಡು ವರ್ಷಗಳಿಂದ ತುಮಕೂರು ಜಿಲ್ಲೆಯ ಪಾರಂಪರಿಕ ಜಲಮೂಲಗಳಾದ ತಲಪರಿಗೆಗಳ ಕುರಿತು ಅಧ್ಯಯನ. ಭೂಷಣ್ ಮಿಡಿಗೇಶಿಯವರ ಜೊತೆಗೂಡಿ ’ತಲಪರಿಗೆ ಜೀವಪೊರೆಯುವ ಜಲನಿಧಿ” ಪುಸ್ತಕ ಸಂಪಾದನೆ. ಪ್ರಕಟಿತ ಇತರ ಪುಸ್ತಕಗಳೆಂದರೆ, •ನಶಿಸುತ್ತಿರುವ ನೀರಿನ ಜ್ಞಾನ - ಕರ್ನಾಟಕದ ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳು (ಸಂಪಾದಕ) •ಕೃಷಿ ಆಚರಣೆ •ಬೀಜದ ಬುಟ್ಟಿ - ನಾಟಿ ತಳಿಗಳ ಲೋಕದಲ್ಲೊಂದು ಸುತ್ತು (ಇತರ ಲೇಖಕರೊಡಗೂಡಿ) •ಬೀಜದ ಹಕ್ಕು (ಸಂಗ್ರಹಾನುವಾದ) •ನೆಟ್ಟಿರಾಗಿ - ರಾಗಿ ಕೃಷಿಕರ ಹೊಸ ಬೆಳಕು •ಭತ್ತ-ಬರಿದಾಗುತ್ತಿರುವ ಅನ್ನದ ಬಟ್ಟಲು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
1 week 5 days ago - Re: ಇಲ್ಲಿ ‘ಕೊಳಚೆ ನೀರು ...
2 weeks 5 days ago - Re: ‘ಇರುವೆ’; ಅಂತರ್ಜಲ ...
11 weeks 3 days ago - Re: ನಮ್ಮ ಮನೆಯ ತಾರಸಿ ಮೇಲೆ ...
11 weeks 6 days ago - Re: ‘ಕುಡಿಯಲು ಬಿಲ್ಕುಲ್ ...
14 weeks 3 days ago - Re: ಧಾರವಾಡದ ನೆಲ ನುಂಗಿ; ...
15 weeks 5 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 12 hours ago - Re: ದೇಸಿ ತಂತ್ರಜ್ಞಾನದಿಂದ ...
17 weeks 4 days ago - Re: ಧಾರವಾಡದ ಮೂಕಾಂಬಿಕಾ ...
22 weeks 9 hours ago - Re: ಮಳೆ ಎಂದರೆ ಬಾಲ್ಯದ ...
22 weeks 6 days ago
| Subscribe to IWP Kannada list |
| Visit this group |










ಬಹಳ ದಿನಗಳಿಂದಲೂ ಈ ತಲಪರಿಗೆಗಳ ಬಗ್ಗೆ ತಿಳಿದುಕೊಳ್ಳಬೇಕೆಂದಿದ್ದೆ, ಪೂರ್ಣ ಮಾಹಿತಿ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
ನಾನು ಕೋಲಾರ ಜಿಲ್ಲೆಯವ. ತುಮಕೂರು, ದುರ್ಗದಂತೆ ನಮ್ಮ ಜಿಲ್ಲೆ ಸಹ ಕೆರೆ ಬಾವಿ (ಈಗಿಲ್ಲ ಬಿಡಿ) ಆಧಾರಿತ ಬೇಸಾಯಕ್ಕೆ ಹೆಸರುವಾಸಿ. ನಮ್ಮ ಕಡೆ ಪಾಲಾರ್, ಪಿನಾಕಿನ ನದಿಗಳಿಗೆ ಕೆರೆ ಕೋಡಿಗಳಿಂದಲೇ ಹೆಚ್ಚಿಗೆ ನೀರು ಬರುತ್ತಿದ್ದುದು. ರಾಜಕೀಯ, ಜಾತಿ ಜಗಳಗಳು, ದುರಾಸೆ ಇವುಗಳಿಂದ ಈ ನದಿಗಳೆಲ್ಲ ಸಿಕ್ಕವರ ಜಮೀನುಗಳಲ್ಲಿ ಸೇರಿ ಹೋಗಿವೆ. ಒಂದೆರಡು ವರ್ಷ ಮಳೆ ಇಲ್ಲದೆ ಹೋದಲ್ಲಿ ಇಡೀ ಜಿಲ್ಲೆಗೆ ಜಿಲ್ಲೆಯೆ ತತ್ತರಿಸುವಂತ ಪರಿಸ್ಥಿತಿ ಬಂದೊದಗಿದೆ.
ಈಗಿನ ಪರಿಸ್ಥಿತಿಯಲ್ಲಿ ಇಂತ ಕಾರ್ಯಗಳು ನಡೆಯುತ್ತವೆಯೆ? ಪ್ರತೀ ರೈತನು ಭೂಜಲ ಸಂವರ್ದನೆ ಕಡೆಗೆ ಗಮನ ಕೊಡದಿದ್ದರೆ ಮುಂದೆ ತೀವ್ರ ಸಂಕಷ್ಟಗಳನ್ನು ಎದುರಿಸಬೇಕಾಗುತ್ತಲ್ಲವೆ?
ಫ್ರಸನ್ನರಿಗೆ ಧನ್ಯವಾದಗಳು, ನಿಮ್ಮ ಕೋಲಾರ ಭಾಗದಲ್ಲೂ ತುಂಬಾ ತಲಪರಿಗೆಗಳಿವೆ. ನಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ, ನಿಮ್ಮ ಗಮನಕ್ಕೆ ಬಂದರೆ ತಿಳಿಸಿ.
ಮಲ್ಲಿಕಾರ್ಜುನ
ನಾನು ತುಮಕೂರಿನವ... ಆದರೆ ಇದರ ಬಗ್ಗೆ ನನಗೆ ಎಳ್ಳಷ್ಟು ಮಾಹಿತಿ ಇರಲಿಲ್ಲಾ... ಮಾಹಿತಿಗಾಗಿ ಧನ್ಯವಾದಗಳು.
ನಿಮ್ಮ,
-ಪಂಚಿ.....
ಹಿಂದೆ ನಮ್ಮ ಅಜ್ಜಿ ಈ ಹೆಸರು ಹೇಳಿದ್ದು ಕೇಳಿದ್ದೆ. ಏನು ಎಂತು ಎಂದು ನೆನಪಿರಲಿಲ್ಲ. ವಿವರಗಳಿಗೆ ಧನ್ಯವಾದಗಳು.
ಧನ್ಯವಾದ ಹಂಸಾನಂದಿಯವರಿಗೆ, ಮತ್ತೇನಾದರೂ ಹೆಚ್ಚಿನ ವಿಷಯಗಳು ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ.
ಮಲ್ಲಿಕಾರ್ಜುನ
ತಲಪರಿಗೆ ಎಂಬ ಶಬ್ದವೇ ನನಗೆ ಗೊತ್ತಿರಲಿಲ್ಲ. ಓದಿ ಸಂತೋಷವೂ ಆಶ್ಚರ್ಯವೂ ಏಕಕಾಲಕ್ಕೆ ಉಂಟಾದವು. ಇಷ್ಟೊಂದು ಉಪಯುಕ್ತ ಯೋಜನೆಗಳು ಜನಮನದಿಂದ ಹೇಗೆ ಮರೆಯಾದವು ?
ಕೊಳವೆ ಬಾವಿ ಸಂಸ್ಕೃತಿ ಬಂದ ನಂತರ ತಲಪರಿಗೆಗಳು ನಾಶದತ್ತ ಸಾಗಿದವು. ದುರಂತವೆಂದರೆ ಸರ್ಕಾರೀ ದಾಖಲೆಗಳಲ್ಲಿ ತಲಪರಿಗೆಗಳ ಬಗ್ಗೆ ಮಾಹಿತಿ ಇಲ್ಲದಿರುವುದು.
ಅಂದ ಹಾಗೆ ತಾವು ಯಾವ ಕಡೆಯವರು?
ಮಿತ್ರರೇ,
ಈ ತಲಪರಿಗೆಗಳ ಪ್ರಪಂಚವೇ ವಿಭಿನ್ನವಾದುದು. ಅದೆಷ್ಟು ಜನ ನಿಸರ್ಗವನ್ನು ಅದೆಷ್ಟು ಪ್ರೀತಿಯಿಂದ ಬಳಸಿಕೊಳ್ಳುತ್ತಿದ್ದರೆಂದು ನೋಡಿದರೆ, ನಾವು ಅದೆಷ್ಟು ಹರಿದು ಕೆರೆಯ ಸೇರುವ ಹಳ್ಳದ ನೀರನ್ನು ಸಲೀಸಾಗಿ ನಮ್ಮ ತೋಟಗಳೊಳಕ್ಕೆ ತಿರುವಿಕೊಳ್ಳುತ್ತೇವೆ ಎಂದು ಗಮನಿಸಿ ನಾಚಿಕೆಯಾಗುತ್ತದೆ.
ಈ ಲೇಖನವನ್ನು ಬರೆದ ಸ್ನೇಹಿತರಾದ ಮಲ್ಲಿಕಾರ್ಜುನ ಹೊಸಪಾಳ್ಯ ಅವರು ಈ ಕುರಿತು ಸಾಕಷ್ಟು ವಿವರವಾಗಿ ಒಂದು ಪುಸ್ತಕವನ್ನೇ ಬರೆದು ಪ್ರಕಟಿಸಿದ್ದಾರೆ. (ತಲಪರಿಗೆ) ಅದನ್ನು ತಾವು ಓದಿಕೊಳ್ಳಬಹುದು. ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಹೇಳಿಕೊಳ್ಳಲು ಸಂಕೋಚಪಟ್ಟಿರಬೇಕು ಎಂದು ನಾನು ಈ ವಿಷಯ ಹೇಳುತ್ತಿದ್ದೇನೆ.
ಧನ್ಯವಾದ ನವೀನ್ ಗೆ, ನೀವು ಹೇಳಿದ್ದು ನೂರಕ್ಕೆ ನೂರರಷ್ಟು ನಿಜ.
ಪುಸ್ತಕದ ಬಗ್ಗೆ ಮುಂದಿನ ದಿನಗಳಲ್ಲಿ ಬರೆಯುತ್ತೇನೆ.
ಮಲ್ಲಿಕಾರ್ಜುನ ಹೊಸಪಾಳ್ಯ
ಈ ಉಪಯುಕ್ತ ಲೇಖನವನ್ನು ಸಂಪದದ ಮೂಲಕ ಅಂತರ್ಜಾಲದಲ್ಲಿ ಸೇರಿಸಿದ್ದಕ್ಕೆ ಮಲ್ಲಿಕಾರ್ಜುನರಿಗೆ ಧನ್ಯವಾದಗಳು. ತಾವು ತಲಪರಿಗೆಯ ಬಗ್ಗೆ ಪುಸ್ತಕ ಪ್ರಕಟಿಸಿದ ನಂತರ ತಾವೂ, ತಮ್ಮ ಮಿತ್ರ ಗಾಣಧಾಳು ಶ್ರೀಕಂಠರವರೂ ಪ್ರಜಾವಾಣಿ ಮತ್ತಿತರ ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನು ಓದಿ, ತಮ್ಮ ಪುಸ್ತಕವನ್ನು ತಿರುವಿ ಹಾಕಿ, ಈ ಅದ್ಭುತ ವ್ಯವಸ್ಥೆಯ ಬಗ್ಗೆ ಅಚ್ಚರಿಪಟ್ಟಿದ್ದೇನೆ. ಈ ಬಗೆಗೆ ಕೆಲವೇ ಜನರಿಗೆ ಗೊತ್ತಿದ್ದ ವಿಷಯವನ್ನು ತಾವು ಪುಸ್ತಕ, ಲೇಖನಗಳ ಮೂಲಕ ಹಲವರಿಗೆ ತಲುಪುವಂತೆ ಮಾಡಿದ್ದೀರಿ, ಒಳ್ಳೆಯ ಕೆಲಸ.
ತಲಪರಿಗೆಗಳನ್ನು ಮತ್ತೆ ಈ ಪ್ರದೇಶಗಳಲ್ಲಿ ಪುನರುಜ್ಜೀವನಗೊಳಿಸುವಂಥ ಕೆಲಸಗಳನ್ನು ತಾವೂ ತಮ್ಮ ಮಿತ್ರರೂ ಮಾಡುತ್ತಿದ್ದೀರೆಂದು ನಂಬಿದ್ದೇನೆ. ಆ ಕುರಿತು ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವಿರೇ?
ಧನ್ಯವಾದ ಮಧು. ನಮ್ಮ ಮೊದಲ ಆದ್ಯತೆ ತಲಪರಿಗೆಗಳ ಬಗ್ಗೆ ಜನರ ಜ್ಞಾನದ ದಾಖಲಾತಿ ಮಾಡುವುದು ಹಾಗೂ ಅವುಗಳ ಸಂಖ್ಯೆ ತಿಳಿಯುವುದಾಗಿತ್ತು. ಏಕೆಂದರೆ ಈ ಬಗ್ಗೆ ಎಲ್ಲಿಯೂ ಮಾಹಿತಿ ದಾಖಲಾಗಿಲ್ಲ ಹಾಗೂ ಯಾವ ದಾಖಲೆಯಲ್ಲಿಯೂ ತಲಪರಿಗೆಗಳ ಸಂಖ್ಯೆ ನಮೂದಾಗಿಲ್ಲ.
ಅದನ್ನು ತಕ್ಕಮಟ್ಟಿಗೆ ಮಾಡಿದ್ದೇವೆ ಮತ್ತು ಈಗಲೂ ಆ ಪ್ರಕ್ರಿಯೆ ಮುಂದುವರಿದಿದೆ. ತಲಪರಿಗೆಗಳ ಪುನಶ್ಚೇತನಕ್ಕೆ ಸಮುದಾಯಗಳನ್ನು ಹುರಿದುಂಬಿಸುತ್ತಿದ್ದೇವೆ, ಸರ್ಕಾರಿ ಸಂಸ್ಥೆಗಳ ಗಮನಕ್ಕೆ ತರುತ್ತಿದ್ದೇವೆ.
ಯಾರಾದರೂ ಹಣಕಾಸು ಸಹಾಯ ನೀಡಿದರೆ ತುರ್ತು ಜನಬಳಕೆಯ ತಲಪರಿಗೆಗಳನ್ನು ಪುನರುಜ್ಜೀವನಗೊಳಿಸುವ ಆಸೆಯಿದೆ, ನೋಡಬೇಕು. ಒಮ್ಮೆ ಬನ್ನಿ ತುಮಕೂರಿಗೆ ತಲಪರಿಗೆಗಳ ದರ್ಶನ ಮಾಡಿಸುತ್ತೇನೆ.
ಮಲ್ಲಿಕಾರ್ಜುನ
Post new comment