'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

"೨೦ನೇ ಶತಮಾನದಲ್ಲಿ ತೈಲದ ಮಹತ್ವ ಏನಿತ್ತೋ ಆ ಸ್ಥಾನವನ್ನು ೨೧ನೇ ಶತಮಾನದಲ್ಲಿ ನೀರು ಆಕ್ರಮಿಸಿಕೊಂಡಿದೆ. ಇದು ಶ್ರೀಮಂತ ರಾಷ್ಟ್ರಗಳಿಗೆ ಮಾರಾಟದ ತಾಜಾ ಸರಕಾಗಿ ಪರಿಣಮಿಸಿದೆ. ಇಂದಿಗಾಗಲೇ ಇದು ಜಾಗತಿಕ ಮಾರುಕಟ್ಟೆಯಲ್ಲಿ ೪೦ ಸಹಸ್ರ ಕೋಟಿ ರುಪಾಯಿಗಳ ವ್ಯಾಪಾರವಾಗಿದೆ. ಈ 'ನೀರು' ಎಂಬ ಮಾರಾಟದ ಸರಕಿನ ದಂಧೆಯ ನಿವ್ವಳ ಲಾಭ ಈಗಾಗಲೇ ತೈಲ ಕ್ಷೇತ್ರದ ಶೇ. ೪೦ ರಷ್ಟಿದೆ. ಇದು ಒಟ್ಟು ಔಷಧ ವ್ಯಾಪಾರದ ಮೂರನೇ ಒಂದು ಭಾಗವನ್ನು ಮೀರಿನಿಂತಿದೆ. ಬೇರೆ ಎಲ್ಲ ವ್ಯಾಪಾರಗಳಿಗೆ ಹೋಲಿಸಿದರೆ ವಿಶ್ವ ಆರ್ಥಿಕತೆಯಲ್ಲಿ ಇದಕ್ಕೆ ಪ್ರಮುಖ ಹಾಗು ಪ್ರಖರವಾದ ಭವಿಷ್ಯವಿದೆ"

ಇದು ೨೦೦೨ರ ಡಿಸೆಂಬರ್ ಸಂಚಿಕೆಯಲ್ಲಿ 'ನೇಚರ್' ಪತ್ರಿಕೆ ಪ್ರಕಟಿಸಿದ ವರದಿಯ ಸಾರ!

ವಿಶ್ವ ಬ್ಯಾಂಕ್ ೧೯೯೮ರಲ್ಲಿ ಹೀಗೆ ಹೇಳಿತ್ತು. "ಈ ಜಲ ವ್ಯಾಪಾರ ಶೀಘ್ರದಲ್ಲಿ ೮೦೦ ಬಿಲಿಯನ್ ಅಮೇರಿಕನ್ ಡಾಲರ್ ವಹಿವಾಟು ಸಾಧಿಸಲಿದೆ. ೨೦೦೧ರ ವೇಳೆಗೆ ಒಂದು ಟ್ರಿಲಿಯನ್ ಮೊತ್ತದ ವ್ಯವಹಾರವಾಗಿ ಪರಿಣಮಿಸಲಿದೆ" ಎಂದು ಅಂದಾಜಿಸಿತ್ತು. ೨೦೦೭ರ ವೇಳೆಗೆ ಈ ಜಲ ವ್ಯವಹಾರ ಜಾಗತಿಕವಾಗಿ ೮ ಟ್ರಿಲಿಯನ್ ಅಮೇರಿಕನ್ ಡಾಲರ್ ತಲುಪಿದೆ! ಬಹುಶ: ಈ ಬೆಳವಣಿಗೆಯ ಊಹೆ ನಮ್ಮ ಕಲ್ಪನೆಗೆ ಮೀರಿದ್ದು.

೧೯೯೮ರಲ್ಲಿ ವಿಶ್ವ ಬ್ಯಾಂಕ್ ನಿಂದ ಸಾಲ ಪಡೆದುಕೊಂಡಿದ್ದ ಕಂಪನಿಗಳು ಸರಬರಾಜು ಮಾಡುತ್ತಿದ್ದ ನೀರನ್ನು ಪಡೆಯುತ್ತಿದ್ದ ಜನಸಂಖ್ಯೆ ಜಾಗತಿಕ ಮಟ್ಟದಲ್ಲಿ ಶೇ.೫! ಆದರೆ ಇನ್ನೂ ಉದ್ದೇಶಿತ ಗ್ರಾಹಕರಾಗಿ ೯೫% ಜನ ಉಳಿದಿದ್ದಾರೆ! ಹಾಗಾಗಿ ನೀರು ಉದ್ಯಮ ೨೧ ನೇ ಶತಮಾನದ ಲಾಭದಾಯಕ ಉದ್ದಿಮೆಯಾಗಿ ಬೆಳೆಯಿತು. ಈ ಎಲ್ಲ ಬೆಳವಣಿಗೆಗಳನ್ನು ತೀರ ಹತ್ತಿರದಿಂದ ಗಮನಿಸಿ, ಜಾಗತಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ದಾಖಲಿಸಲು 'ವಿಶ್ವ ಜಲ ಗುಪ್ತಚರ ಸಂಸ್ಥೆ' ಕಾರ್ಯ ನಿರ್ವಹಿಸುತ್ತಿದೆ. ೧೯೯೯ರ ಜನೇವರಿಯಲ್ಲಿ ಈ ಸಂಸ್ಥೆಯ ಮಾಸಿಕ ಪ್ರಕಟಿಸಿದ ವರದಿ ಉಲ್ಲೇಖಿಸಿ ಹೇಳುವುದಾದರೆ, "ಒಂದು ಬ್ಯಾರೆಲ್ ಕುಡಿಯುವ ನೀರಿಗೆ, ಒಂದು ಬ್ಯಾರೆಲ್ ತೈಲದಷ್ಟೆ ಬೆಲೆಯನ್ನು ನೀಡಲು ನೀರಿನ ಕಂಪೆನಿಗಳು ಸದ್ಯದಲ್ಲಿ ಬೇಡಿಕೆ ಮಂಡಿಸಲಿವೆ". ಹಾಗಾಯಿತು ಕೂಡ. ಕೊಲೆರಾಡೋದ ಶಿಲಾವೃತ ಪರ್ವತ ಪ್ರದೇಶಗಳಲ್ಲಿ ಕಳೆದ ಜೂನ್ ೨೦೦೬ ಹಾಗು ೨೦೦೭ರ ಮಧ್ಯೆ ೧,೦೦೦ ಕ್ಯೂಬಿಕ್ ಮೀಟರ್ ನೀರಿನ ಬೆಲೆ ೮,೦೦೦ ಡಾಲರ್ ದಿಂದ ೧೮,೦೦೦ ಡಾಲರ್ ಗಳ ವರೆಗೆ ಏರಿದ್ದನ್ನು ದಾಖಲಿಸಿದೆ!

ಕಳೆದ ಸಪ್ಟೆಂಬರ್ ೨೦೦೭ರಲ್ಲಿ ಯೋಜನಾ ಪತ್ರಿಕೆ ಡಾ. ಶ್ರೀಕಂಠೇಶ್ವರ ಸ್ವಾಮಿ ಅವರು ಬರೆದ ಸಂಶೋಧನಾತ್ಮಕ ಲೇಖನ 'ಫ್ಲೋರೈಡ್ ಸಮಸ್ಯೆ ಹಾಗು ನಿವಾರಣೆ' ಪ್ರಕಟಿಸಿದೆ. ಅವರು ಅಭಿಪ್ರಾಯಪಡುವಂತೆ, "ಇಡೀ ಭೂಮಿಯ ಒಳಗೂ ಹೊರಗೂ ನೀರು ನಿರಂತರವಾಗಿ ಚಲಿಸುತ್ತಿದ್ದರೂ ಸಹ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಶೇ. ೦.೬ ರಷ್ಟು. ಅಂದರೆ ೮,೭೬,೦೦೦ ಘನ ಕಿಲೋ ಮೀಟರ್ ಗಳಷ್ಟು ಮಾತ್ರ. ಕಾರಣ ಶೇ. ೯೭.೨೦ ಭಾಗ ಸಾಗರದ ಉಪ್ಪು (ಗಡುಸು) ನೀರು! ಅರ್ಥಾತ್..೧೪೧,೯೧೨, ೦೦೦೦ ಘನ ಕಿಲೋ ಮೀಟರ್. ಇನ್ನುಳಿದ ಶೇ. ೨.೨ರಷ್ಟು, ಅಂದರೆ ೩೨,೧೨,೦೦೦೦ ಘನ ಕಿಲೋ ಮೀಟರ್ ಹಿಮಗಡ್ಡೆಯ ರೂಪದಲ್ಲಿದೆ. ಹಾಗಾಗಿ ೦.೬% ಮಾತ್ರ ಸಿಹಿ ನೀರು! ಮಳೆಯೇ ಈ ನೀರಿಗೆ ಪ್ರಮುಖ ಆಕರ"

ಇದನ್ನೆಲ್ಲ ಗಮನಿಸಿದರೆ ಈಗಲಾದರೂ ನಾವು ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದು ಅನಿಸುತ್ತದೆ, ಅಲ್ಲವೆ?

ನಮ್ಮ ದೇಶದಲ್ಲಿ ಹೆಚ್ಚಾಗಿ ಕುಡಿಯಲು ಮತ್ತು ಕೃಷಿಗಾಗಿ ನಾವೆಲ್ಲ ಅಂತರ್ಜಲವನ್ನೇ ಅವಲಂಬಿಸಿದ್ದೇವೆ. ಅತಿ ದೊಡ್ಡ ಧಾನ್ಯ ಉತ್ಪಾದಕ ದೇಶವಾದ ಭಾರತ ೧೯೫೦ರ ಸುಮಾರಿಗೆ ೩೦,೦೦೦ ಕೊಳವೆ ಬಾವಿಗಳನ್ನು ಹೊಂದಿತ್ತು. ೨೦೦೫ರ ವೇಳೆಗೆ ಈ ಕೊಳವೆ ಬಾವಿಗಳ ಸಂಖ್ಯೆ ಏಳು ಮಿಲಿಯನ್ ನಷ್ಟು ಏರಿಕೆ ಕಂಡಿದೆ. ಮತ್ತಷ್ಟು ಬೇಡಿಕೆ ಪೂರೈಕೆಗೆ ಅನುಗುಣವಾಗಿ ಮಂಡಿತವಾಗುತ್ತಲೇ ಇದೆ! ಕೃಷಿ ಕ್ಷೇತ್ರ, ಕಾರ್ಖಾನೆಗಳು ಹಾಗು ಒಳಚರಂಡಿ ಯೋಜನೆ ನಮ್ಮ ದೇಶದ ಅಂತರ್ಜಲಕ್ಕೆ ಮಾರಕವಾಗಿ ಪರಿಣಮಿಸಿದೆ. ವಿಶೇಷವಾಗಿ ಗಮನಿಸುವುದಾದರೆ ೧೯೭೫ರ ಸುಮಾರಿಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದ ಕ್ರಿಮಿನಾಶಕಗಳಿಗಿಂತ ೨೦೦೮ರಲ್ಲಿ ರಸಗೊಬ್ಬರಗಳಾಗಿ ಮಾರಾಟವಾಗುತ್ತಿರುವ ವಸ್ತುಗಳು ೧೦% ರಿಂದ ೧೦೦% ಪಟ್ಟು ಹೆಚ್ಚು ವಿಷಯುಕ್ತ ಎಂದು ವಿಜ್ಞಾನಿಗಳು ಲಿಖಿತವಾಗಿ ಹೇಳಿದ್ದಾರೆ!

ನಮ್ಮ ರಾಜ್ಯ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ್, ಪಂಜಾಬ್ ಹಾಗು ಹರ್ಯಾಣಾ ರಾಜ್ಯಗಳಲ್ಲಿ ಫ್ಲೋರೋಸಿಸ್ ಸಮಸ್ಯೆ ತಾರಕಕ್ಕೇರಿದೆ. ಸಾಲದಕ್ಕೆ ಸಾರ್ವಜನಿಕ ಜೀವನ ತೀರ ಅಸ್ತವ್ಯಸ್ಥಗೊಂಡಿದೆ. ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ಕುಡಿಯುವ ನೀರಿನ ಅಂತರ್ಜಲದಲ್ಲಿ ಸಹ ಫ್ಲೋರೈಡ್ ಇರುವುದು ಪತ್ತೆಯಾಗಿದೆ. ವಿಜ್ಞಾನಿಗಳು ನಿದ್ದೆಗೆಟ್ಟಿದ್ದಾರೆ ಆದರೆ ಸರಕಾರಗಳು ನಿರ್ಲಿಪ್ತವಾಗಿವೆ! ಜನ ಅಷ್ಟೇ ಉದಾಸೀನ ಧೋರಣೆಯಿಂದ ಕಾಲ ನೂಕುತ್ತಿದ್ದಾರೆ.

೧ ಲೀಟರ್ ನೀರಿನಲ್ಲಿ ಒಂದು ಮಿಲಿಗ್ರಾಂನಷ್ಟು ಫ್ಲೋರೈಡ್ ಅಂಶವಿರುವ ನೀರನ್ನು ಹೆಚ್ಚು ದಿನಗಳವರೆಗೆ ಕುಡಿಯುತ್ತಿದ್ದರೆ ಹಲ್ಲಿನ ಫ್ಲೋರೋಸಿಸ್ ಕಟ್ಟಿಟ್ಟದ್ದು. ಈ ನೀರನ್ನು ಸೇವಿಸುವುದರಿಂದ ಮೊದಲು ಹಲ್ಲುಗಳ ಮೇಲೆ ಬಿಳಿ ಹಾಗು ಹಳದಿ ಕಲೆಗಳು ಕಾಣುತ್ತವೆ. ನಂತರ ಕಂದು ಬಣ್ಣಕ್ಕೆ ತಿರುಗಿ, ಕಪ್ಪಾಗಿ ಪರಿಣಮಿಸಿ ಗುಳಿಗಳಾಗಿ ಹಲ್ಲು ಹಾಳಾಗುತ್ತವೆ. ಈ ಹಲ್ಲಿನ ಫ್ಲೋರೀಸಿಸ್ ರೋಗ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಎಂದರೆ ನಂಬುತ್ತೀರಾ? ಮದುವೆಯಂತಹ ಸಾಮಾಜಿಕ ಬಂಧನಗಳಿಗೆ ಹಾಗು ಆರ್ಥಿಕ ಸ್ವಾವಲಂಬನೆಗೆ ಈ ಖಾಯಿಲೆ ತಲೆ ಚಿಟ್ ಹಿಡಿಸಿದೆ.

ಅಷ್ಟೇ ಅಲ್ಲ. ನಾವು ಕುಡಿಯುವ ೧ ಲೀಟರ್ ನೀರಿನಲ್ಲಿ ಸುಮಾರು ೩ ರಿಂದ ೬ ಮಿಲಿ ಗ್ರಾಂನಷ್ಟು ಫ್ಲೋರೈಡ್ ಅಂಶವಿದ್ದು, ಸತತವಾಗಿ ೨ ವರ್ಷಗಳ ವರೆಗೆ ಕುಡಿದರೆ ಮೂಳೆಗಳ ಫ್ಲೋರೋಸಿಸ್ ರೋಗಕ್ಕೆ ತುತ್ತಾಗುವ ಭಯಂಕರ ಸಮಸ್ಯೆ ಎದುರಿಸಬೇಕಾಗುತ್ತದೆ. ಕೈ ಹಾಗು ಕಾಲು ಮತ್ತು ಬೆನ್ನಿನ ಮೂಳೆಗಳು ಡೊಂಕಾಗುವುದರಿಂದ ಯುವಕರು ದುಡಿಯಲು ಅಸಮರ್ಥರು ಹಾಗು ದೈಹಿಕವಾಗಿ ಅಪಂಗರು ಸಹ ಆಗುತ್ತಾರೆ. ಇನ್ನು ವಯೋ ವೃದ್ಧರು ಅಂತ್ಯ ಕಾಲದ ವರೆಗೆ ಪರಾವಲಂಬಿಯಾಗಿ ಜೀವಿಸದೇ ವಿಧಿ ಇಲ್ಲ. ಹಾಗೆಯೇ ಗರ್ಭಿಣಿ ಮಹಿಳೆ ಈ ಫ್ಲೋರೈಡ್ ಯುಕ್ತ ನೀರನ್ನು ಸೇವಿಸುತ್ತಿದ್ದರೆ ಬೆಳವಣಿಗೆಯ ಹಂತದಲ್ಲಿರುವ ಭ್ರೂಣ ಅಂಗವಿಕಲವಾಗುವ ಸಾಧ್ಯತೆ ನಿಚ್ಚಳವಾಗಿವೆ. ಇನ್ನು ಹಸು ಗೂಸಿಗೆ ಹಾಲುಣಿಸುವ ತಾಯಿಯಾಗಿದ್ದರೆ ಆಕೆಗೆ ಹಾಗು ಮಗುವಿಗೂ ಸಹ ಎಲುವು-ಕೀಲುಗಳಿಗೆ ಸಂಬಂಧಿಸಿದ ಮಾರಣಾಂತಿಕ ರೋಗಗಳು ತಟ್ಟುವ ಸಾಧ್ಯತೆ ಇದೆ.

ಕುಡಿಯಲು ಬಳಸುವ ೧ ಲೀಟರ್ ನೀರಿನಲ್ಲಿ ೫೦ ಮಿಲಿ ಗ್ರಾಂ ಗಿಂತ ಹೆಚ್ಚು ಫ್ಲೋರೈಡ್ ಅಂಶ ಕಂಡು ಬಂದರೆ ಥೈರಾಯಿಡ್ ಗ್ರಂಥಿ ಸಮಸ್ಯೆ, ಸ್ನಾಯುಗಳ ಬೆಳವಣಿಗೆಯಲ್ಲಿ ಕುಂಠಿತ, ಕಿಡ್ನಿ ವಿಫಲಗೊಳ್ಳುವ ಖಾಯಿಲೆಯಿಂದ ಬಳಲಬೇಕಾಗುತ್ತದೆ. ಕರ್ನಾಟಕದಲ್ಲಿ ಗುಲ್ಬರ್ಗಾ ಜಿಲ್ಲೆಯ ಉಲಕಲ್ ನಲ್ಲಿ ೧ ಲೀಟರ್ ಕುಡಿಯುವ ನೀರಿನಲ್ಲಿ ೮.೬ ಮಿಲಿ ಗ್ರಾಂ ಗರಿಷ್ಠ ಪ್ರಮಾಣದ ಫ್ಲೋರೈಡ್ ಅಂಶವಿರುವುದು ಪತ್ತೆಯಾಗಿದೆ. ನಾವು ನಿತ್ಯ ಸೇವಿಸಲು ಬಳಸುವ ೧ ಲೀಟರ್ ನೀರಿನಲ್ಲಿ ಫ್ಲೋರೈಡ್ ನ ಅಪೇಕ್ಷಿತ ಮಿತಿ ೧.೦ ಮಿಲಿ ಗ್ರಾಂ ಹಾಗು ಅಡ್ಡಿ ಇಲ್ಲ ಎನ್ನಬಹುದಾದ ಮಿತಿಯನ್ನು ೧.೫ ಮಿಲಿ ಗ್ರಾಂಗೆ ನಿಗದಿ ಪಡಿಸಲಾಗಿದೆ!

ಆದರೆ ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿಯಲ್ಲಿ ಅಂತರ್ಜಲ ಪರೀಕ್ಷಿಸಲಾಗಿ ಕುಡಿಯುವ ನೀರಿನಲ್ಲಿ ಪ್ರತಿ ಲೀಟರ್ ನೀರಿಗೆ ೭.೬ ಮಿಲಿ ಗ್ರಾಂ ಫ್ಲೋರೈಡ್ ಅಂಶ ದಾಖಲಾಗಿದೆ. ಕರ್ನಾಟಕ ಸರಕಾರದ ಭೂ ವಿಜ್ಞಾನ ಮತ್ತು ಗಣಿ ಇಲಾಖೆ ೨೦೦೬ರಲ್ಲಿ ನಡೆಸಿದ ಸಮೀಕ್ಷೆಗಳ ಪ್ರಕಾರ ಧಾರವಾಡ, ಹಾವೇರಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ಬೀದರ್ ಹಾಗು ಚಿತ್ರದುರ್ಗ, ದಾವಣಗೇರಿ, ತುಮಕೂರು, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಕನಿಷ್ಟ ಸುಮಾರು ೪ ತಾಲ್ಲೂಕುಗಳಲ್ಲಿ ಫ್ಲೋರೈಡ್ ಅಂಶ ೧ ಲೀಟರ್ ನೀರಿನಲ್ಲಿ ೧.೫ ಮಿಲಿ ಗ್ರಾಂ ಗಿಂತ ಹೆಚ್ಚಿದ್ದು ಈ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಭೂ ಶಾಸ್ತ್ರಜ್ನರು ಸರಕಾರಕ್ಕೆ ವಿವರವಾದ ವರದಿ ಸಲ್ಲಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ಸುತ್ತಮುತ್ತಲಿನ ಗ್ರ್ಯಾನೈಟ್ ಗಣಿಗಾರಿಕೆ, ಗ್ರ್ಯಾನೈಟ್ ಪಾಲಿಶ್ ಹಾಗು ರಾಸಾಯನಿಕ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಅಲ್ಲಿನ ಅಂತರ್ಜಲದಲ್ಲಿ ಪ್ರತಿ ಲೀಟರ್ ನೀರಿಗೆ ೦.೩ ದಿಂದ ೬.೫ ಮಿಲಿ ಗ್ರಾಂ ಫ್ಲೋರೈಡ್ ಅಂಶವಿರುವುದು ೨೦೦೭ರ ಸಮೀಕ್ಷೆಯಲ್ಲಿ ಕಂಡುಬಂದಿದೆ. ಇಳಕಲ್ ಹಾಗು ಹುನಗುಂದ ಹಳ್ಳಗಳು ನೇರವಾಗಿ ಪಿಗ್ಮಿಟೈಟ್ ಎಳೆಗಳ ಸಂಪರ್ಕದೊಂದಿಗೆ ಕೃಷ್ಣಾ ನದಿಯನ್ನು ಸೇರುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ಪಿಗ್ಮಿಟೈಟ್ ಎಳೆಗಳು ಮುಖ್ಯವಾಗಿ ಫ್ಲೋರೈಡ್ ಅಂಶದ ಖನಿಜಗಳನ್ನು ಒಳಗೊಂಡಿದ್ದು ಆ ಭಾಗದ ಎಲ್ಲ ಹಳ್ಳಗಳಲ್ಲಿ ಹಾಗು ಅಂತರ್ಜಲದಲ್ಲಿ ಬೆರೆತು ಹಳ್ಳಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು, ಫ್ಲೋರೈಡ್ ಅಂಶ ಮಾರಣಾಂತಿಕವಾಗಿ ಪರಿಣಮಿಸಿದೆ.

ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಡಾ.ಜಗದೀಶ ಗುಡಗೂರ ಗದಗ ಜಿಲ್ಲೆಯ ಅಂತರ್ಜಲ ಕುರಿತು ಪಿ.ಎಚ್.ಡಿ ಅಧ್ಯಯನ ಕೈಗೊಂಡು ಸವಿಸ್ತಾರವಾದ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಅವರು ಹೇಳುವಂತೆ, ಗದಗ ಜಿಲ್ಲೆಯ ರೋಣ, ಮುಂಡರಗಿ ತಾಲ್ಲೊಕುಗಳಲ್ಲಿ ಅಂತರ್ಜಲ ಹಾಗು ಕುಡಿಯುವ ನೀರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್ ಕೂಡಿರುವುದು ಪತ್ತೆಯಾಗಿದೆ. ಗಡಿ ಭಾಗದ ತಾಲ್ಲೂಕುಗಳಾದ ಸಿರಾ, ಪಾವಗಡ, ಮಧುಗಿರಿ, ಗುಡಿಬಂಡೆ, ಬಾಗೇಪಲ್ಲಿ, ಸಿಂಧನೂರು, ಮಾನ್ವಿ, ದೇವದುರ್ಗ, ಕುಷ್ಟಗಿ, ಕೊಪ್ಪಳ, ಗಂಗಾವತಿ, ಶೀಡ್ಲಘಟ್ಟ ಚಿಂತಾಮಣಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಭಾಗಗಳಲ್ಲಿ ಫ್ಲೋರೈಡ್ ಅಧಿಕವಾಗಿರುವುದನ್ನು ಗುರುತಿಸಲಾಗಿದೆ. ಜನ-ಜಾನುವಾರು ಅದೇ ನೀರನ್ನು ಕುಡಿದು ಅನೇಕ ರೋಗ-ರುಜಿನಗಳಿಂದ ಬವಣೆಯಲ್ಲಿ ನರಳುತ್ತ ಬದುಕಿದ್ದಾರೆ.

ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಡೆಸಿದ (೨೦೦೨-೦೩ನೇ ಸಾಲಿನಲ್ಲಿ) ಸಮೀಕ್ಷೆಯ ವರದಿ ಆಘಾತಕಾರಿ ಅಂಕಿ-ಅಂಶಗಳನ್ನು ಅರುಹಿದೆ. ೨೧,೦೦೮ ವಸತಿಗಳನ್ನು ಒಳಗೊಂಡ ಇಡೀ ರಾಜ್ಯ ವ್ಯಾಪ್ತಿಯ ಸರ್ವೇಕ್ಷಣೆಯು ೫,೮೩೦ ವಸತಿಗಳು ಫ್ಲೋರೈಡ್ ನಿಂದ, ೬,೬೩೩ ವಸತಿಗಳು ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶದಿಂದ, ೪,೦೭೭ ವಸತಿಗಳು ಹೆಚ್ಚಿನ ನೈಟ್ರೈಟ್ ಮತ್ತು ಲವಣ ಯುಕ್ತ ನೀರಿನಿಂದ ಸದಾಕಾಲ ಪೀಡಿತವಾಗಿವೆ!  

ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಸಚಿವೆ ಶೋಭಾ ಕರಂದ್ಲಾಜೇ ಧಾರವಾಡಕ್ಕೆ ಭೇಟಿ ನೀಡಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಆಘಾತಕಾರಿ ಮಾಹಿತಿ (ಬಹುಶ: ಬಾಯಿ ತಪ್ಪಿ) ನೀಡಿದರು- "ಕರ್ನಾಟಕ ರಾಜ್ಯದಲ್ಲಿ ಕೊನೆ ಪಕ್ಷ ೧೫ ಸಾವಿರ ಜನಸಂಖ್ಯೆ ಇರುವ ಒಟ್ಟು ೫೬ ಸಾವಿರ ಹಳ್ಳಿಗಳಿಗೆ ಇಂದಿಗೂ ಸ್ವಚ್ಛ ಕುಡಿಯುವ ನೀರು ಒದಗಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ!" ಇದಕ್ಕಿಂತ ಕಡಿಮೆ  ಜನಸಂಖ್ಯೆ ಇರುವ ನಮ್ಮ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ 'ಆಹೆಟ್ಟಿ' ಯಂತಹ ಹಳ್ಳಿಗಳೆಷ್ಟು ಇವೆಯೋ..?
ಅವು ಯಾವೂ ಸರಕಾರದ ಲೆಕ್ಕದಲ್ಲಿ ಇದ್ದ ಹಳ್ಳಿಗಳು ಅಂತ ನನಗೆ ಅನ್ನಿಸಿಲ್ಲ.

ನೀರಿಂಗಿಸುವ ಮೂಲಕ ಫ್ಲೊರೈಡ್ ಸಾಂದ್ರತೆಯನ್ನು ತಗ್ಗಿಸಬಹುದೇನೋ!

I thought that America did add flouride to it's water, so what is the amount of flouride that is required or could be tolerated?

ನಿವೇದಿತ,
ನೀವು ಹೇಳುತ್ತಿರುವುದು ಬಹುಶಃ community water fluoridation ಬಗ್ಗೆ.
http://www.cdc.gov/fluoridation/faqs.htm

ನಾನೋದಿಕೊಂಡಂತೆ ಫ್ಲೋರೈಡ್ ಲೆವೆಲ್ ನೀರಿನಲ್ಲಿ ಎಷ್ಟಿರಬೇಕೋ ಅಷ್ಟಿದ್ದರೆ ಒಳ್ಳೆಯದು ಎಂಬುದು. ಕೋಲ್ಗೇಟ್ ಟೂತ್ ಪೇಸ್ಟಿನಲ್ಲಿ ಕೂಡ ಫ್ಲೋರೈಡ್ ಇರುತ್ತದೆ, ಗಮನಿಸಿದ್ದೀರಾ? "contains maximum of 1000 ppm of available fluoride when packed" ಅಂತ ಇರತ್ತೆ, ಪ್ಯಾಕ್ ಮೇಲೆ!

ಹರ್ಷ ಮಾತನಾಡುತ್ತಿರುವುದು ಫ್ಲೋರೈಡ್ ಅಂಶ ಹೆಚ್ಚಿರುವ ನೀರಿನದ್ದು.

Informative article

ಹೊಸ ಕಾಮೆಂಟ್ ಸೇರಿಸಿ

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
1 + 10 =
Solve this simple math problem and enter the result. E.g. for 1+3, enter 4.