ಪಾವಗಡದಲ್ಲಿ ನಾವು ತೋಟವುಳಿಸಿದ ಕತೆ
ನಾಗರಾಜ್ ಹೆಚ್.ಕೆ.
ನಮ್ಮದು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕುಗ್ರಾಮ ಹೊಸಹಳ್ಳಿ. ಪಾವಗಡವು ಶಾಶ್ವತ ಬರಪೀಡಿತ ತಾಲ್ಲೂಕುಗಳಲ್ಲೊಂದು ವಾರ್ಷಿಕ ೪೮೦ ರಿಂದ ೫೫೦ ಮಿ.ಮೀ. ಸಾರಾಸರಿ ಮಳೆ. ನದಿ, ಜಲಾಶಯ, ಕಾಲುವೆ ಇತ್ಯಾದಿಗಳಿಲ್ಲ. ಮಳೆ ನೀರೇ ಎಲ್ಲಕ್ಕೂ ಅಧಾರ. ಹಿಂದೆ ತೆರೆದ ಬಾವಿಗಳು ಹಾಗೂ ಕೆರೆ-ಕಟ್ಟೆಗಳು ಜನ-ಜಾನುವಾರು
ಹಾಗೂ ಕೃಷಿಗೆ ನೀರಿನ ಆಶ್ರಯ ತಾಣಗಳಾಗಿದ್ದವು. ಇತ್ತೀಚೆಗೆ ಜನಸಂಖ್ಯೆ ಹೆಚ್ಚಿ ಅಲ್ಲಲ್ಲಿ ಕಂಡು ಬರುತ್ತಿದ್ದ ಕುರುಚಲು ಅರಣ್ಯ ಪ್ರದೇಶಗಳು ಕೃಷಿ ಭೂಮಿಯಾಗಿ
ಮಾರ್ಪಾಡುಗೊಳ್ಳತೊಡಗಿದವು. ಮಳೆಯಾಶ್ರಿತ ಜಮೀನುಗಳಲ್ಲಿ ನಮ್ಮ ತಾತ-ಮುತ್ತಾತಂದಿರ ಕಾಲದಲ್ಲಿ ಇಳಿಜಾರಿಗೆ ಅಡ್ಡಲಾಗಿ ಹಾಕಿದ್ದ ಬದುಗಳು ಕ್ರಮೇಣ ಕಣ್ಮರೆಯಾದವು. ಪರಿಣಾಮ ಮಳೆ ನೀರು ಭೂಮಿಯಲ್ಲಿ ಇಂಗದೆ ಅಂತರ್ಜಲ ತೀವ್ರ ಕುಸಿತ. ಹಳ್ಳಿಗಳ ನೀರಿನ ಮೂಲಗಳಾಗಿದ್ದ ತೆರೆದ ಬಾವಿಗಳು ಒಣಗಿ ಇವುಗಳ ಜಾಗವನ್ನು ಕೊಳವೆ ಬಾವಿಗಳು ಆಕ್ರಮಿಸಿದವು.
ನಮ್ಮೂರ ಸುತ್ತ ೧೯೯೦ ರಲ್ಲಿ ಕೊಳವೆ ಬಾವಿಗಳ ಆಳ ೩೦೦-೩೫೦ ಅಡಿಗಳಷ್ಟಿತ್ತು. ಕಾಲ - ಕ್ರಮೇಣ ಈ ಕೊಳವೆ ಬಾವಿಗಳೂ ಸಹ ಬತ್ತಿ ಹೋಗುವ ಹಂತ ತಲುಪಿದವು. ಆಗ ರೈತರು
ಬೆಳೆಗಳನ್ನು ಉಳಿಸಿಕೊಳ್ಳುವ ಸಲುವಾಗಿ ಕಂಡ-ಕಂಡಲ್ಲಿ ಸಾಲ ಮಾಡಿ ಕೊಳವೆ ಬಾವಿ ಆಳವನ್ನು ೭೫೦-೮೦೦ ಅಡಿಗಳಿಗೆ ಹೆಚ್ಚಿಸಿದರು. ಆದರೆ ಅಂತರ್ಜಲ ಹೆಚ್ಚುಸುವತ್ತ ಮನವನ್ನೇ ನೀಡಲಿಲ್ಲ. ನಮ್ಮ ಗ್ರಾಮದ ಕತೆಯೂ ಇದೇ.
ಈ ಗ್ರಾಮದಲ್ಲಿ ನಮಗೆ
ಪಿತ್ರಾರ್ಜಿತವಾದ ೮ ಎಕರೆ ಜಮೀನಿದೆ. ಇದರಲ್ಲಿ ೩.೫ ಎಕರೆಯಲ್ಲಿ ಅಡಿಕೆ, ತೆಂಗು, ಬಾಳೆ ಹಾಗೂ ವೀಳ್ಯದೆಲೆ ಹಾಗೂ ಉಳಿದ ೪.೫ ಎಕರೆಯಲ್ಲಿ ಮಳೆಗಾಲದಲ್ಲಿ ಮಾತ್ರ ಭತ್ತ, ರಾಗಿ
ಹಾಗೂ ತರಕಾರಿಗಳನ್ನು ಹಾಕುತ್ತೇವೆ. ಒಟ್ಟು ೨೨೦೦ ಅಡಿಕೆ, ೧೧೦ ತೆಂಗು ಮತ್ತು ೧೫೦೦ ಗುಣಿ ವೀಳ್ಯದೆಲೆ ನಮ್ಮ ತೋಟದಲ್ಲಿವೆ.
೧೯೮೦ ರ ದಶಕದಲ್ಲಿ ಈ ೮ ಎಕರೆ ಭೂಮಿಯ ಜೊತೆಗೆ ನಮ್ಮ ಚಿಕ್ಕಪ್ಪ-ದೊಡ್ಡಪ್ಪಂದಿರ ಇನ್ನೂ ೧೦ ಎಕರೆ ಜಮೀನಿಗೂ ಒಂದೇ ಒಂದು ತೆರೆದ ಬಾವಿ ನೀರಿನಾಸರೆಯಾಗಿತ್ತು. ನೂರಾರು ವರ್ಷ ಹಳೆಯದಾದ ೬೦ ಅಡಿ ಆಳದ ಈ ಬಾವಿಯು ಬೇಸಿಗೆ - ಮಳೆಗಾಲವೆನ್ನದೆ ಸಮೃದ್ಧವಾಗಿ ನೀರುಣಿಸುತ್ತಿತ್ತು.
ವರ್ಷಗಳು ಕಳೆದಂತೆ ಈ ಬಾವಿ ಬತ್ತಲಾರಂಭಿಸಿದ್ದರಿಂದ ೧೯೮೪-೮೫ ರಲ್ಲಿ ಈ ಬಾವಿಯ ಒಳಗಡೆಯೇ ೮೦ ರಿಂದ ೧೨೦ ಅಡಿ ಆಳದ ೪ ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ವ್ಯವಸ್ಥೆ ಮಾಡಿಕೊಂಡೆವು. ನಾಲ್ಕೈದು ವರ್ಷಗಳ ನಂತರ ಈ ಕೊಳವೆಬಾವಿಗಳೂ ಸಹ ಬತ್ತಲು ಪ್ರಾರಂಭಿಸಿದವು. ೧೯೮೯ ರಲ್ಲಿ ೪೫೦ ಅಡಿ ಆಳದ ಕೊಳವೆ ಬಾವಿಯೊಂದನ್ನು ಕೊರೆಸಿದೆವು. ಇದರಲ್ಲಿ ಕೇವಲ ಒಂದಿಂಚು ನೀರು ಮಾತ್ರ ಸಿಕ್ಕಿತು. ಈ ನೀರು ತೋಟಕ್ಕೆ ಸಾಕಾಗದ ಕಾರಣ ೧೯೯೧ ರಲ್ಲಿ ೩೧೫ ಅಡಿಯ ಮತ್ತೊಂದು ಕೊಳವೆ ಬಾವಿ ತೆಗೆಸಿದೆವು. ಇದರಲ್ಲಿ ೨.೫ ಇಂಚು ನೀರು ಸಿಕ್ಕಿತಾದರೂ ಮಳೆಗಾಲದಲ್ಲಿ ಮಾತ್ರ ನೀರು ಲಭ್ಯವಾಗಿ ಬೇಸಿಗೆಯಲ್ಲಿ ಒಣಗುತ್ತಿತ್ತು. ಹಾಗಾಗಿ ತೋಟವನ್ನು ಉಳಿಸಲೋಸುಗ ೧೯೯೨ ರಿಂದ ೧೯೯೮ ರವರೆಗೆ ವರ್ಷಕ್ಕೊಂದರಂತೆ ಮತ್ತೆ ೭ ಕೊಳವೆ ಬಾವಿಗಳನ್ನು ಕೊರೆಸುತ್ತಾ ಬಂದೆವು. ಇವುಗಳಲ್ಲಿ ೧೯೯೮ ರಲ್ಲಿ ಹಾಕಿಸಿದ ಕೊಳವೆ ಬಾವಿಯಲ್ಲಿ ಮಾತ್ರ ೨.೫ ಇಂಚಿನಷ್ಟು ಉತ್ತಮ ನೀರಿನ ಸೆಲೆಯು ದೊರೆಯಿತು. ಉಳಿದ ೬ ರಲ್ಲಿ ಸ್ವಲ್ಪವೂ ನೀರು ದೊರಕಲಿಲ್ಲ. (ಕೊಳವೆ ಬಾವಿ ಖರ್ಚು-ವೆಚ್ಚಗಳ ವಿವರಕ್ಕೆ ಬಾಕ್ಸ್ ನೋಡಿ)
ಇಷ್ಟೆಲ್ಲಾ ಮಾಡಿದರೂ ಸಹ
೧೯೯೮ ರಲ್ಲಿ ಎದೆ ನಡುಗಿಸುವ ಘಟನೆಯೊಂದು ನಡೆದು ಹೋಯಿತು. ನೀರಿನ ತೀವ್ರ ಅಭಾವದಿಂದಾಗಿ ನಮ್ಮ ತೋಟದಲ್ಲಿ ಫಲ ಕೊಡುತ್ತಿದ್ದ ೮೦೦ ಅಡಿಕೆ ಮರಗಳು ನೋಡು-ನೋಡುತ್ತಿದ್ದಂತೆಯೇ ಸಂಪೂರ್ಣ ಒಣಗಿ ಹೋದವು. ಇವೆಲ್ಲಾ ೮೦ ರಿಂದ ೯೦ ವರ್ಷ ಹಳೆಯ ಮರಗಳು. ಏಳೆಂಟು ದಶಕಗಳು ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಮರಗಳು ಒಣಗಿದ್ದರಿಂದ ನಮಗೆ ದಿಕ್ಕೇ ತೋಚದಾಯಿತು. ಈವರೆಗೆ ಕೊಳವೆ ಬಾವಿಗಳನ್ನು ಕೊರೆಸಲು ಮತ್ತು ಪಂಪುಸೆಟ್ಟುಗಳಿಗಾಗಿ ಅಂದಾಜು ೨.೫ ಲಕ್ಷ ಹಣ ಕೈಬಿಟ್ಟಿತ್ತು.
ಇಂತಹ ಪರಿಸ್ತಿತಿಯಲ್ಲಿ
ನಾವು ಮೊರೆಯಿಡದ ದೇವರಿಲ್ಲ, ಕೇಳದ ಶಾಸ್ತ್ರವಿಲ್ಲ. ಭೂಗರ್ಭ ಶಾಸ್ತ್ರಜ್ಞರನ್ನು ಕರೆಸಿದೆವು, ಸ್ಥಳೀಯ ನೀರ ಸೆಲೆ ಪರಿಶೋಧರನ್ನು ಕರೆಸಿದೆವು, ಎಲ್ಲರದೂ ಒಂದೇ ಮಾತು, ನಿಮ್ಮ ಹೊಲದಲ್ಲಿ ಎಲ್ಲಿಯೂ ಉತ್ತಮ ನೀರಿನ ಸೆಲೆಗಳಿರುವುದಿಲ್ಲ! ಆದರೆ ನಮ್ಮ ಪಕ್ಕದ ಹೊಲದಲ್ಲಿ ಯತೇಛ್ಛ ನೀರಿರುವುದಾಗಿ ಅವರೆಲ್ಲಾ ಅಭಿಪ್ರಾಯ ಪಡುತ್ತಿದ್ದರು. ಹತಾಶೆಯ ಸ್ಥಿತಿಯನ್ನು ತಲುಪಿದ್ದ ನಾವು ಹೇಗಾದರೂ ತೋಟವನ್ನು ಉಳಿಸಲೇಬೇಕಾಗಿತ್ತು. ಅದಕ್ಕಾಗಿ ೧೯೯೪ ರಲ್ಲಿ ಕೊಳವೆ ಬಾವಿ ಕೊರೆಸಲೆಂದೇ ಆ ೨ ಎಕರೆ ಹೊಲವನ್ನು ೧.೨೩.೦೦೦ ರೂ.ಗಳಿಗೆ ಖರೀದಿಸಿದೆವು, ಖರೀದಿಸಿದ ಒಂದೇ ತಿಂಗಳಲ್ಲಿ ೪೭೦ ಅಡಿ ಅಳದ ಮತ್ತೊಂದು ಕೊಳವೆ ಬಾವಿಯನ್ನು ತೋಡಿಸಿದೆವು. ೨.೫ ಇಂಚು ನೀರು ಲಭಿಸಿತು. ಈ ನೀರನ್ನು ಬಳಸಿಕೊಡು ಅಳಿದುಳಿದ ೧೪೦೦ ಅಡಿಕೆ ಮರಗಳನ್ನು ಉಳಿಸಿಕೊಂಡೆವು.
ಆದರೆ ಕೊಳವೆ ಬಾವಿಗಳನ್ನು ನಂಬಿಕೊಳ್ಳುವ ಹಾಗಿರಲಿಲ್ಲ. ಅದಕ್ಕಾಗಿ ಒಂದು ಉಪಾಯ ಮಾಡಿದೆವು.
ಹೊಲದ ಪಕ್ಕದಲ್ಲಿ
ಹರಿಯುತ್ತಿದ್ದ ೨ ಹಳ್ಳಗಳನ್ನು ನಮ್ಮ ಹೊಲಕ್ಕೆ ತಿರುಗಿಸುವ ಸಾಹಸಕ್ಕೆ ಕೈಹಾಕಿದೆವು. ಇವು ಸಾಮಾನ್ಯವಾಗಿ ವರ್ಷದಲ್ಲಿ ಮಳೆಯ ಪ್ರಮಾಣವನ್ನಾಧರಿಸಿ ೨ ರಿಂದ ೧೦ ಬಾರಿ
ಹರಿಯುತ್ತವೆ. ನಮ್ಮ ಹೊಲದ ೨ ಎಕರೆಯಷ್ಟು ಜಮೀನು ಹಳ್ಳಕ್ಕಿಂತ ತಗ್ಗಿನ ಪ್ರದೇಶದಲ್ಲಿದೆ, ನಾವು ಈಗ್ಗೆ ಸುಮಾರು ೧೮ ವರ್ಷಗಳ ಹಿಂದೆಯೇ ಈ ಹಳ್ಳಗಳ ನೀರನ್ನು ನಮ್ಮ ೨ ಎಕರೆ ತಗ್ಗಿನ ಪ್ರದೇಶಕ್ಕೆ ತಿರುವುದ್ದೆವು. ಹಳ್ಳ ತುಂಬಿ ಹರಿದಾಗ ಅಂದಾಜು ಒಂದರಿಂದ ಒಂದೂವರೆ ಅಡಿಗಳಷ್ಟು ನೀರು ನಿಲ್ಲುತ್ತಿತ್ತು. ಒಂದೆರಡು ದಿನಕಾಲ ನೀರು ಇಲ್ಲಿ ನಿಂತು
ಇಂಗುತ್ತಿತ್ತು. ಇದರಿಂದ ಅಂತರ್ಜಲದ ಮರುಪೂರಣಕ್ಕೆ ಸ್ವಲ್ಪ ಆಸ್ಪದವಾಗಿತ್ತು. ಕೊಳವೆ ಬಾವಿಗಳಿಂದ ಪರಿಹಾರ ಕಾಣದ ನಾವು ಈ ಹಳ್ಳಗಳ ನೀರನ್ನೇ ಹೆಚ್ಚಿಗೆ ನಿಲ್ಲಿಸಿ ಅಂತರ್ಜಲ
ವೃದ್ಧಿಸುವ ತೀರ್ಮಾನ ಮಾಡಿದೆವು. ಅದಕ್ಕಾಗಿ ೨೦೦೫ ರಲ್ಲಿ ಸುಮಾರು ನಾಲ್ಕು ಅಡಿ ಎತ್ತರ ಮತ್ತು ೪೦೦ ಅಡಿ ಉದ್ದದ ಬದುವನ್ನು ನಿರ್ಮಿಸಿದೆವು. ಇದರಿಂದ ೨ ರಿಂದ ೩ ಅಡಿಗಳಷ್ಟು ನೀರು ನಿಲ್ಲಿಸುವ ವ್ಯವಸ್ಥೆಯಾಯಿತು. ನಮ್ಮ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂತು. ೧೯೯೮ ರಲ್ಲಿ ಕೊರೆಸಿದ್ದ ಕೊಳವೆ ಬಾವಿಯಲ್ಲಿ ಒಂದು ಇಂಚಿನಷ್ಟು ಮಾತ್ರ ನೀರು ಬರುತ್ತಿದ್ದುದು ಮತ್ತೆ ಮೊದಲಿನಂತೆಯೇ ೨.೫ ಇಂಚು ಬರಲು ಪ್ರಾರಂಭಿಸಿತು. ಮತ್ತು ನೀರಿನ ರಭಸವೂ ಹೆಚ್ಚಾಯಿತು. ಇಷ್ಟೇ ಅಲ್ಲದೆ ನಮ್ಮ ಊರಿನ ಸುತ್ತ-ಮುತ್ತಲ ಸುಮಾರು ೧೦ ಕೊಳವೆ ಬಾವಿಗಳಲ್ಲಿ ಅಂತರ್ಜಲ ಏರಿಕೆಯಾಯಿತು, ನಮ್ಮ ಇತರೆ ಕೊಳವೆ ಬಾವಿಗಳೂ ಸಹ ಜೀವ ಪಡೆದುಕೊಂಡವು. ಬದು ಹಾಕಿಸಲು ಅಂದಾಜು ೮೦೦೦ ರೂಗಳ ಖರ್ಚಾಯಿತು. ಒಂದು ವೇಳೆ ಈ ಬದುವನ್ನು ಹಾಕಿಸದಿದ್ದರೆ ಅಲ್ಪ-ಸ್ವಲ್ಪ ನೀರು ಕೊಡುತ್ತಿದ್ದ ನಮ್ಮ ಕೊಳವೆ ಬಾವಿಗಳೂ ಒಣಗುತ್ತಿದ್ದವು.
ತೆರೆದ ಬಾವಿಯತ್ತ ಗಮನ:
ಹಳ್ಳದ ನೀರನ್ನು
ತಿರುಗಿಸಿ ಉತ್ತಮ ಫಲಿಂತಾಂಶ ಪಡೆದ ನಂತರ ನಮ್ಮ ಗಮನ ಹೊಲದಲ್ಲಿ ಹಾಳು ಬಿದ್ದಿದ್ದ ಬಾವಿಯತ್ತ ಹರಿಯಿತು. ೬೦ ಅಡಿ ಆಳ ೫೦ ಅಡಿ ಉದ್ದ ಹಾಗೂ ೨೫ ಅಡಿ ಅಗಲದ ಈ ಬಾವಿ ೧೯೯೦ ರಿಂದ ಬತ್ತಿ ಹೋಗಿತ್ತು. ಇದರ ಪಕ್ಕದಲ್ಲಿ ಹರಿಯುವ ಹಳ್ಳದ ನೀರನ್ನು ಈ ಬಾವಿಗೆ ಹರಿಸುವ ವ್ಯವಸ್ಥೆಯನ್ನು ಮಾಡಿದೆವು. ಬಾವಿ ಮತ್ತು ಹಳ್ಳದ ಮಧ್ಯೆ ಅಡ್ಡಲಾಗಿ ದಾರಿಯಿದೆ. ೨೦೦೭ ರ ಡಿಸೆಂಬರ್ನಲ್ಲಿ ಈ ದಾರಿಗೆ ೩ ಅಡಿ ಅಗಲ ೪ ಅಡಿ ಎತ್ತರ ಹಾಗೂ ೨೦ ಅಡಿ ಉದ್ದದ ಅಡಿಸೇತುವೆಯನ್ನು ನಿರ್ಮಿಸಿದೆವು. ಸುಮಾರು ೪೫ ಸಾವಿರ ಖರ್ಚು ಬಂದಿತು. ಪ್ರತಿ ಸಲ ಮಳೆ ಬಂದಾಗಲೂ ಬಾವಿಗೆ ನೀರು ತುಂಬಿ ಸುತ್ತಲ ವಾತಾವರಣವನ್ನು ತಂಪು ಮಾಡುತ್ತಿದೆ.
ಕೊಳವೆ ಬಾವಿಗಳ ಖರ್ಚು-ವೆಚ್ಚ (ಬಾಕ್ಸ್)
| ಕೊಳವೆ ಬಾವಿ ತೆಗೆಸಿದ ಇಸವಿ |
(ನಾಲ್ಕು ಕೊಳವೆಬಾವಿಗಳು)
ಇದಲ್ಲದೆ ೪ ಜೊತೆ ಪಂಪ್
ಸೆಟ್ಟುಗಳ ಖರೀದಿದಾಗಿ ೧.೩೬.೦೦೦ ವ್ಯಯಿಸಲಾಗಿದೆ. ಅಂದರೆ ಕೊಳವೆ ಬಾವಿ ಮತ್ತು ಪಂಪ್
ಸೆಟ್ಟುಗಳಿಗಾಗಿಯೇ ಒಟ್ಟು ೩.೨೪.೦೦೦ ರೂಗಳನ್ನು ವೆಚ್ಚ ಮಾಡಲಾಗಿದೆ.
ಇಷ್ಟು ಪಡಿಪಾಟಲು ಪಟ್ಟ
ನಂತರ ಈಗ ನಮ್ಮ ನೀರಿನ ಕೊರತೆ ತಕ್ಕ ಮಟ್ಟಿಗೆ ಸುಧಾರಿಸಿದೆ. ಒಣಗುವ ಹಂತ ತಲುಪಿದ್ದ
ತೋಟ ಜೀವ ಉಳಿಸಿಕೊಂಡಿದ್ದೇ ಅಲ್ಲದೆ ಉತ್ತಮ ಫಸಲನ್ನೂ ಸಹ ನೀಡುತ್ತಿದೆ.
- 397 reads
Email this page
Printer-friendly version
ಲೇಖಕರು
ಹೆಸರು
ಮಲ್ಲಿಕಾರ್ಜುನ ಹೊಸಪಾಳ್ಯ
ಪರಿಚಯ
ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ. ನಾಟಿಬೀಜ ಸಂರಕ್ಷಣೆ ಮತ್ತು ದೇಸೀ ರೈತಜ್ಞಾನ ದಾಖಲಾತಿಯಲ್ಲಿ ವಿಶೇಷ ಆಸಕ್ತಿ. ಆ ಹಾದಿಯಲ್ಲಿ ವ್ಯಾಪಕ ಓಡಾಟ, ರೈತರ ಒಡನಾಟ, ಅಧ್ಯಯನ. ನಾಲ್ಕು ವರ್ಷ ‘ಗ್ರಾಮಮಿತ್ರ’ ಕೃಷಿ ಕ್ಯಾಲೆಂಡರ್ ಮತ್ತು ನಾಟಿತಳಿ ಕುರಿತ ‘ಪೈರು ಪಚ್ಚೆ’ ತ್ರೈಮಾಸಿಕದ ಸಂಪಾದಕತ್ವ. ಹವ್ಯಾಸಿ ಬರಹಗಾರ ಮತ್ತು ಛಾಯಾಗ್ರಾಹಕ. ತುಮಕೂರಿನಲ್ಲಿ ‘ಧಾನ್ಯ’ ಸಂಸ್ಥೆ ಸ್ಥಾಪನೆ. ನಿರಂತರ ಜಲ ಜಾಗೃತಿ ಕಾರ್ಯಕ್ರಮಗಳ ಸಂಘಟನೆ. ನೀರಿನ ಸುದ್ದಿಗಳಿಗೇ ಮೀಸಲಾದ ‘ಜಲಸಿರಿ’ ಮಾಹಿತಿ ಪತ್ರದ ಪ್ರಕಟಣೆ. ಕೃಷಿ ಮಾಧ್ಯಮ ಕೇಂದ್ರ, ಧಾರವಾಡ - ಸಂಸ್ಥೆಯಿಂದ ೨೦೦೪ ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಕೃಷಿ ಬರಹಗಾರ ಪ್ರಶಸ್ತಿ. ಕಳೆದೆರಡು ವರ್ಷಗಳಿಂದ ತುಮಕೂರು ಜಿಲ್ಲೆಯ ಪಾರಂಪರಿಕ ಜಲಮೂಲಗಳಾದ ತಲಪರಿಗೆಗಳ ಕುರಿತು ಅಧ್ಯಯನ. ಭೂಷಣ್ ಮಿಡಿಗೇಶಿಯವರ ಜೊತೆಗೂಡಿ ’ತಲಪರಿಗೆ ಜೀವಪೊರೆಯುವ ಜಲನಿಧಿ” ಪುಸ್ತಕ ಸಂಪಾದನೆ. ಪ್ರಕಟಿತ ಇತರ ಪುಸ್ತಕಗಳೆಂದರೆ, •ನಶಿಸುತ್ತಿರುವ ನೀರಿನ ಜ್ಞಾನ - ಕರ್ನಾಟಕದ ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳು (ಸಂಪಾದಕ) •ಕೃಷಿ ಆಚರಣೆ •ಬೀಜದ ಬುಟ್ಟಿ - ನಾಟಿ ತಳಿಗಳ ಲೋಕದಲ್ಲೊಂದು ಸುತ್ತು (ಇತರ ಲೇಖಕರೊಡಗೂಡಿ) •ಬೀಜದ ಹಕ್ಕು (ಸಂಗ್ರಹಾನುವಾದ) •ನೆಟ್ಟಿರಾಗಿ - ರಾಗಿ ಕೃಷಿಕರ ಹೊಸ ಬೆಳಕು •ಭತ್ತ-ಬರಿದಾಗುತ್ತಿರುವ ಅನ್ನದ ಬಟ್ಟಲು
ಇತ್ತೀಚಿನ ಬ್ಲಾಗ್ ಬರಹಗಳು
ಇತ್ತೀಚಿನ ಪ್ರತಿಕ್ರಿಯೆ
- Re: ವೃಷಭಾವತಿ ಎಂಬ ನದಿ ...
1 week 5 days ago - Re: ವೃಷಭಾವತಿ ಎಂಬ ನದಿ ...
2 weeks 5 hours ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 2 days ago - Re: ವೃಷಭಾವತಿ ಎಂಬ ನದಿ ...
2 weeks 2 days ago - Re: ಕೃಷಿಹೊಂಡಗಳಿಗೆ ...
3 weeks 19 hours ago - Re: ಮಳೆ ಬಂದರೆ ...
3 weeks 1 day ago - Re: ಮಳೆ ನೀರು ಸಂಗ್ರಹಕ್ಕೆ ...
3 weeks 2 days ago - Re: ಅಘನಾಶಿನಿ
3 weeks 6 days ago
| Subscribe to IWP Kannada list |
| Visit this group |









ನಿಮ್ಮ ಸಾಹಸ ಅದ್ಭ್ಹುತವಾಗಿದೆ. ಭಗೀರತನ ಶ್ರಮ ನಿಮ್ಮದು..
Post new comment