ನೀರ ಸ್ವಾವಲಂಬನೆಯ ಚಿಕ್ಕಣ್ಣನಹಳ್ಳಿ ಶಾಲೆ
ನೀರ ಸ್ವಾವಲಂಬನೆಯ ಚಿಕ್ಕಣ್ಣನಹಳ್ಳಿ ಶಾಲೆ
ಕೊರಟಗೆರೆ ತಾಲ್ಲೂಕು ತೋವಿನಕೆರೆ ಬಳಿಯ ಚಿಕ್ಕಣ್ಣನಹಳ್ಳಿ ಪ್ರೈಮರಿ ಶಾಲೆಯ ಸುತ್ತ ತಂತಿ ಬೇಲಿ. ಕಬ್ಬಿಣದ ಗೇಟು. ಯಾವ ದಿಕ್ಕಿನಿಂದಲೂ ಒಳ ಹೋಗಲು ಸಾಧ್ಯವಿಲ್ಲದಂತಹ ರಕ್ಷಣೆ. ಅರೆ ಶಾಲೆಗೇಕೆ ಈ ಪರಿಯ ಭದ್ರತೆ ಎಂದುಕೊಂಡು ಗ್ರಾಮದ ನಾರಾಯಣಗೌಡರನ್ನು ಕೇಳಿದರೆ ಅವರು " ಸ್ಕೂಲ್ಗೆ ಮಳೆ ನೀರು ಸಂಗ್ರಹಣೆ ಮಾಡೈತೆ, ಮಕ್ಳು ಮರಿ ಹೋಗಿ ಗಲೀಜ್ ಮಾಡ್ದಂಗಿರ್ಲಿ ಮತ್ತೆ ಪೈಪುಗಳ್ನ ಹೊಡಿದಂಗಿರ್ಲಿ ಅಂತ ಬೇಲಿ ಹಾಕಿದಿವಿ" ಎಂದರು.
ಅವರ ಮಾತಿಗೆ ಸಾಕ್ಷಿಯಾಗಿ ಶಾಲೆಯ ಮುಂಭಾಗ ಹತ್ತು ಸಾವಿರ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಣಾ ತೊಟ್ಟಿ ಕಂಡಿತು. ಮುಚ್ಚಳಿಕೆ ಹಾಕಿ ಭದ್ರ ಪಡಿಸಿದ್ದ ಅದಕ್ಕೆ ಶಾಲೆಯ ಛಾವಣಿಯಿಂದ ನೀರು ಹಾಯುವ ಪೈಪುಗಳನ್ನು ಜೋಡಿಸಲಾಗಿತ್ತು. ಪೈಪುಗಳಿಂದ ನೀರು ಬಂದು ತೊಟ್ಟಿಗೆ ಬೀಳುವ ಸ್ಥಳದಲ್ಲಿ ನೀರು ಶೋಧಕವಿದ್ದು ಛಾವಣಿಯ ನೀರಿನಲ್ಲಿರುವ ಕಸ-ಕಡ್ಡಿ, ಧೂಳು, ಕಲ್ಮಶಗಳು ಅಲ್ಲಿ ಶೋಧಗೊಂಡು ತೊಟ್ಟಿಗೆ ಬೀಳುವ ಅಚ್ಚುಕಟ್ಟಾದ ವ್ಯವಸ್ಥೆ. ತೊಟ್ಟಿಯ ಸುತ್ತಲೂ ಸಹ ನೈರ್ಮಲ್ಯತೆ ಇದ್ದು ಅದನ್ನು ಪ್ರತಿ ದಿನ ತಪ್ಪದಂತೆ ಮಾಡಲು ಮಕ್ಕಳ ತಂಡವನ್ನು ರಚಿಸಲಾಗಿದೆ. ಪ್ರತಿದಿನ ಒಂದೊಂದು ತಂಡದವರು ಮಳೆ ನೀರು ಸಂಗ್ರಹದ ಪ್ರತಿಯೊಂದು ಭಾಗವನ್ನೂ ಸಹ ಗಮನಿಸಬೇಕು ಮತ್ತು ಸ್ವಚ್ಚಗೊಳಿಸಬೇಕು ಎಂದು ಅವರಿಗೆ ಮನವರಿಕೆ ಮಾಡಲಾಗಿದೆ ಎನ್ನುತ್ತಾರೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗರಾಜು.
ತೊಟ್ಟಿಯನ್ನು ಗಮನಿಸಬೇಕಾದರೆ ಅಲ್ಲೆಲ್ಲಿಯೂ ನಲ್ಲಿ ಕಾಣಲಿಲ್ಲ. ನಲ್ಲಿಯೇ ಇಲ್ಲದ ಮೇಲೆ ಮಕ್ಕಳು ನೀರು ಹೇಗೆ ಬಳಸುತ್ತಾರೆ? ಅನುಮಾನ ಮುಂದಿಟ್ಟೆ. ಅದಕ್ಕವರು "ಸ್ವಚ್ಚತೆ ಕಾಪಾಡಲು ಮತ್ತು ಇಲ್ಲಿ ಸಂಗ್ರಹವಾದ ಮಳೆ ನೀರು ಪೋಲಾಗದಂತೆ ತಡೆಯಲು ಶಾಲೆಯ ಆಫೀಸ್ ರೂಮಿನ ಒಳಗೆ ಕೈಬೋರು ಜೋಡಿಸಿದ್ದೇವೆ, ಎಲ್ಲರೂ ಅಲ್ಲಿಯೇ ನೀರು ಬಳಸಬೇಕು" ಎಂದರು. ನಿಜಕ್ಕೂ ಅತ್ಯುತ್ತಮ ವಿಧಾನ.
೧ ರಿಂದ ೫ ನೇ ತರಗತಿವರೆಗಿನ ಈ ಶಾಲೆಯಲ್ಲಿ ೪೦ ಮಕ್ಕಳಿದ್ದಾರೆ. ಅವರಿಗೆ ನಿತ್ಯ ಕುಡಿಯಲು, ಕೈ ಕಾಲು ತೊಳೆಯಲು, ಬಿಸಿಯೂಟ ತಯಾರಿಸಲು, ತಟ್ಟೆ ಮತ್ತು ಪಾತ್ರೆಗಳನ್ನು ತೊಳೆಯಲು ಮಳೆ ನೀರನ್ನೇ ಬಳಸಲಾಗುತ್ತಿದೆ. "ಮುಂಚೆ ಈ ಉದ್ದೇಶಗಳಿಗೆ ಮಕ್ಕಳನ್ನು ಹತ್ತಿರದ ಬೋರ್ ವೆಲ್ ಗೆ ಕಳುಹಿಸಬೇಕಾಗುತ್ತಿತ್ತು, ಈಗ ಮಕ್ಕಳಿಗೆ ಆ ಶ್ರಮ ಇಲ್ಲ ಹಾಗೂ ಅಷ್ಟು ಸಮಯವೂ ಸಹ ಉಳಿತಾಯವಾಗುತ್ತಿದೆ, ಎಲ್ಲಕ್ಕಿಂತ ಮುಖ್ಯವಾಗಿ ಮಿನರಲ್ ವಾಟರ್ ಗಿಂತಲೂ ಉತ್ತಮವಾದ ಮಳೆ ನೀರನ್ನು ನಮ್ಮ ಮಕ್ಕಳು ಕುಡಿಯುತ್ತಿದ್ದಾರೆ" ಎಂದು ಅಭಿಮಾನದಿಂದ ನುಡಿಯುತ್ತಾರೆ ಶಾಲೆಯ ಮುಖ್ಯೋಪಾಧ್ಯಯರಾದ ಚಂದ್ರಪ್ಪ. ಇಲ್ಲಿ ಸಂಗ್ರಹವಾಗುವ ನೀರು ವರ್ಷ ಪೂರ್ತಿ ಶಾಲೆಗೆ ಸಾಕಾಗುತ್ತದೆ.
ಸರ್ಕಾರದ ಸುವರ್ಣಜಲ ಯೋಜನೆಯಡಿಯಲ್ಲಿ ಜಿಲ್ಲೆಯ ೧೩೦೦೦ ಶಾಲೆಗಳಲ್ಲಿ ಮಳೆ ನೀರು ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಗಿದೆ. ಅವುಗಳಲ್ಲಿ ಮಧುಗಿರಿಯ ಕೆ.ಟಿ.ಹಳ್ಳಿ, ಪಾವಗಡದ ಕ್ಯಾತಗಾನಕೆರೆ, ಶಿರಾದ ಯಾದಲಡಕು ಮತ್ತು ಸದರಿ ಚಿಕ್ಕಣ್ಣನಹಳ್ಳಿ ಶಾಲೆಗಳನ್ನು ಅರ್ಘ್ಯಂ ಮತ್ತು ಬರ್ಡ್-ಕೆ ಸಂಸ್ಥೆಗಳು ಮಾದರಿಯನ್ನಾಗಿಸಬೇಕೆನ್ನುವ ಹಂಬಲದಿಂದ ಹೆಚ್ಚಿನ ಆದ್ಯತೆ ನೀಡಿವೆ. ಇದಕ್ಕೆ ಅರ್ಘ್ಯಂ ಸಂಸ್ಥೆಯು ಹಣಕಾಸು ಒದಗಿಸುತ್ತಿದೆ. ಯೋಜನೆಯ ಸಮಗ್ರ ದಾಖಲಾತಿ ಮಾಡುವ ಸಲುವಾಗಿ ಎರಡು ಹಂತದಲ್ಲಿ ಈ ಸಂಸ್ಥೆಗಳು ಸರ್ವೆ ನಡೆಸುತ್ತವೆ.
ಮೊದಲನೆಯದು ಯೋಜನೆ ಅಳವಡಿಕೆಗೆ ಮುನ್ನ. ಶಾಲೆ ಚಾವಣಿಯ ಅಳತೆ, ಮಕ್ಕಳ ಸಂಖ್ಯೆ, ಶಿಕ್ಷಕರ ಸಂಖ್ಯೆ ಮುಂತಾದ ಮಾಹಿತಿಯನ್ನು ಈ ಹಂತದಲ್ಲಿ ಸಂಗ್ರಹಿಸಿದರೆ ಯೋಜನೆ ಅನುಷ್ಠಾನಗೊಂಡ ನಂತರ ಆಗಿರುವ ಪರಿಣಾಮಗಳ ಬಗ್ಗೆ ಮತ್ತೊಮ್ಮೆ ಸರ್ವೆ ಮಾಡಲಾಗುತ್ತದೆ. ಇದಲ್ಲದೆ ಯೋಜನೆಯ ಸಫಲತೆಗಾಗಿ ತರಬೆತಿಗಳನ್ನೂ ಸಹ ನಡೆಸಲಾಗುತ್ತಿದೆ. "ಈಗಾಗಲೇ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿ ತಲಾ ೪ ತರಬೆತಿ ನೀಡಲಾಗಿದೆ" ಎನ್ನುತ್ತಾರೆ ಈ ಯೋಜನೆಯ ತಾಲ್ಲೂಕು ಸಂಯೋಜಕರಾದ ನಾಗರಾಜರಾವ್. ಅಂತಿಮವಾಗಿ ನಿರ್ವಹಣೆ ಕುರಿತು ತರಬೇತಿ ನೀಡಿ ಇಡೀ ಘಟಕದ ಉಸ್ತುವಾರಿಯನ್ನು ಎಸ್ ಡಿ ಎಂ ಸಿ ಗೆ ವಹಿಸಲಾಗುತ್ತದೆ. ಅವರ ಪ್ರಕಾರ ಶಾಲೆಯ ಸಿಬ್ಬಂದಿ ಈ ಯೋಜನೆಯನ್ನು ಅಳವಡಿಸಿಕೊಳ್ಳಲು ಮತ್ತಷ್ಟು ಆಸಕ್ತಿ ತೋರಿಸಬೇಕಾಗಿದೆ. ಪ್ರತಿ ವಿದ್ಯಾರ್ಥಿಗೆ ನಿತ್ಯ ಒಂದೂವರೆ ಲೀಟರ್ ನೀರು ಕಲ್ಪಿಸುವ ಉದ್ದೇಶ ಈ ಯೋಜನೆಯದು.
ಶಾಲಾ ಮಕ್ಕಳಿಗೆ ನೀರು ಅತ್ಯಗತ್ಯವಾಗಿ ಬೇಕಾಗಿದೆ. ರಾಜ್ಯದ ಎಷ್ಟೋ ಶಾಲೆಗಳಲ್ಲಿ ಕುಡಿಯಲು ಮತ್ತು ಶೌಚಾಲಯಗಳಲ್ಲಿ ಬಳಸಲು ಅವಶ್ಯ ನೀರೇ ಲಭ್ಯವಿಲ್ಲ. ಆ ಕೊರತೆ ನೀಗಿಸಲು ಬಂದಿರುವ ಈ ಯೋಜನೆಯನ್ನು ಉಪಾಧ್ಯಾಯರು, ಗ್ರಾಮಸ್ಥರು ಉತ್ತಮ ರೀತಿಯಲ್ಲಿ ಬಳಸಿಕೊಂಡು ಚಿಕ್ಕಣ್ಣನಹಳ್ಳಿಯ ಶಾಲೆಯಂತೆ ನೀರ ಸ್ವಾವಲಂಬನೆ ಸಾಧಿಸಬೇಕಿದೆ.
- 824 reads
Email this page
Printer-friendly version
ಲೇಖಕರು
ಹೆಸರು
ಮಲ್ಲಿಕಾರ್ಜುನ ಹೊಸಪಾಳ್ಯ
ಪರಿಚಯ
ಹುಟ್ಟೂರು ತುಮಕೂರು ಜಿಲ್ಲೆ ಹೊಸಪಾಳ್ಯ. ಒಕ್ಕಲುತನದ ಕುಟುಂಬ. ನಾಟಿಬೀಜ ಸಂರಕ್ಷಣೆ ಮತ್ತು ದೇಸೀ ರೈತಜ್ಞಾನ ದಾಖಲಾತಿಯಲ್ಲಿ ವಿಶೇಷ ಆಸಕ್ತಿ. ಆ ಹಾದಿಯಲ್ಲಿ ವ್ಯಾಪಕ ಓಡಾಟ, ರೈತರ ಒಡನಾಟ, ಅಧ್ಯಯನ. ನಾಲ್ಕು ವರ್ಷ ‘ಗ್ರಾಮಮಿತ್ರ’ ಕೃಷಿ ಕ್ಯಾಲೆಂಡರ್ ಮತ್ತು ನಾಟಿತಳಿ ಕುರಿತ ‘ಪೈರು ಪಚ್ಚೆ’ ತ್ರೈಮಾಸಿಕದ ಸಂಪಾದಕತ್ವ. ಹವ್ಯಾಸಿ ಬರಹಗಾರ ಮತ್ತು ಛಾಯಾಗ್ರಾಹಕ. ತುಮಕೂರಿನಲ್ಲಿ ‘ಧಾನ್ಯ’ ಸಂಸ್ಥೆ ಸ್ಥಾಪನೆ. ನಿರಂತರ ಜಲ ಜಾಗೃತಿ ಕಾರ್ಯಕ್ರಮಗಳ ಸಂಘಟನೆ. ನೀರಿನ ಸುದ್ದಿಗಳಿಗೇ ಮೀಸಲಾದ ‘ಜಲಸಿರಿ’ ಮಾಹಿತಿ ಪತ್ರದ ಪ್ರಕಟಣೆ. ಕೃಷಿ ಮಾಧ್ಯಮ ಕೇಂದ್ರ, ಧಾರವಾಡ - ಸಂಸ್ಥೆಯಿಂದ ೨೦೦೪ ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಕೃಷಿ ಬರಹಗಾರ ಪ್ರಶಸ್ತಿ. ಕಳೆದೆರಡು ವರ್ಷಗಳಿಂದ ತುಮಕೂರು ಜಿಲ್ಲೆಯ ಪಾರಂಪರಿಕ ಜಲಮೂಲಗಳಾದ ತಲಪರಿಗೆಗಳ ಕುರಿತು ಅಧ್ಯಯನ. ಭೂಷಣ್ ಮಿಡಿಗೇಶಿಯವರ ಜೊತೆಗೂಡಿ ’ತಲಪರಿಗೆ ಜೀವಪೊರೆಯುವ ಜಲನಿಧಿ” ಪುಸ್ತಕ ಸಂಪಾದನೆ. ಪ್ರಕಟಿತ ಇತರ ಪುಸ್ತಕಗಳೆಂದರೆ, •ನಶಿಸುತ್ತಿರುವ ನೀರಿನ ಜ್ಞಾನ - ಕರ್ನಾಟಕದ ಪಾರಂಪರಿಕ ಜಲ ಸಂರಕ್ಷಣಾ ಪದ್ಧತಿಗಳು (ಸಂಪಾದಕ) •ಕೃಷಿ ಆಚರಣೆ •ಬೀಜದ ಬುಟ್ಟಿ - ನಾಟಿ ತಳಿಗಳ ಲೋಕದಲ್ಲೊಂದು ಸುತ್ತು (ಇತರ ಲೇಖಕರೊಡಗೂಡಿ) •ಬೀಜದ ಹಕ್ಕು (ಸಂಗ್ರಹಾನುವಾದ) •ನೆಟ್ಟಿರಾಗಿ - ರಾಗಿ ಕೃಷಿಕರ ಹೊಸ ಬೆಳಕು •ಭತ್ತ-ಬರಿದಾಗುತ್ತಿರುವ ಅನ್ನದ ಬಟ್ಟಲು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
2 weeks 4 days ago - Re: ಇಲ್ಲಿ ‘ಕೊಳಚೆ ನೀರು ...
3 weeks 4 days ago - Re: ‘ಇರುವೆ’; ಅಂತರ್ಜಲ ...
12 weeks 2 days ago - Re: ನಮ್ಮ ಮನೆಯ ತಾರಸಿ ಮೇಲೆ ...
12 weeks 5 days ago - Re: ‘ಕುಡಿಯಲು ಬಿಲ್ಕುಲ್ ...
15 weeks 2 days ago - Re: ಧಾರವಾಡದ ನೆಲ ನುಂಗಿ; ...
16 weeks 4 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 6 days ago - Re: ದೇಸಿ ತಂತ್ರಜ್ಞಾನದಿಂದ ...
18 weeks 3 days ago - Re: ಧಾರವಾಡದ ಮೂಕಾಂಬಿಕಾ ...
22 weeks 6 days ago - Re: ಮಳೆ ಎಂದರೆ ಬಾಲ್ಯದ ...
23 weeks 5 days ago
| Subscribe to IWP Kannada list |
| Visit this group |










Post new comment