ನೀರ ನೆಮ್ಮದಿಗೆ ಶತಮಾನದ ಮಣ್ಣಿನ ವಿದ್ಯೆ
ನಾಲ್ಕು ತಿಂಗಳ ಕಾಲ ನಮ್ಮ ತಲೆಯ ಮೇಲೆ ಸುರಿಯುವ ಮಳೆ "ಸುಲಭಲಭ್ಯನಿದ್ದೇನೆ, ಬೇಕಿದ್ದರೆ ಹಿಡಿದಿಟ್ಟುಕೋ" ಎಂದುಸುರುತ್ತದೆ.
ಮತ್ತೆ ನಾಲ್ಕು ತಿಂಗಳ ಕಾಲ ನಮ್ಮ ತೋಡು-ಹಳ್ಳ-ಹೊಳೆಗಳು "ಒಂದು ಕಟ್ಟ ಕ್ಟ್ಟಿ, ಸಾಕು, ನೀರು ನಿಮ್ಮದು" ಎಂದು ಉಲಿಯುತ್ತವೆ. ಈ ಎರಡು ಸಂದೇಶಗಳಿಗೂ ಬೆಲೆ ಕೊಡದಿದ್ದರೆ ಮುಂದಿನ ನಾಲ್ಕು ತಿಂಗಳ ಕಾಲ ನಮ್ಮ ನಿಷ್ಕ್ರಿಯತೆಗೆ ಬೆಲೆ ತೆರಬೇಕಾಗುತ್ತದೆ.
ಮಳೆಗಾಲದಲ್ಲಿ ಸುರಿದ ನೀರು ಪೋಲಾಗದಂತೆ ಹಿಡಿದಿಟ್ಟು ವರ್ಷವಿಡಿ ಬೆಳೆಗೆ ನೀರು ಹೊಂದಿಸುವ ಪ್ರಯತ್ನವೊಂದರೆ ಕಥೆ ಇಂದು ನಿಮ್ಮ ಮುಂದೆ. ಶಿವಾನಂದ ಕಳವೆಯವರು ಬರೆದಿರುವ ಈ ಲೇಖನ ವಾರಣಾಶಿ ಪ್ರತಿಷ್ಠಾನ ಪ್ರಕಟಿಸಿರುವ "ಕಟ್ಟಗಳು - ಅನುಶೋಧನೆಗಳು ಮತ್ತು ವಾರಣಾಶಿ ಮಾದರಿ"
ಪುಸ್ತಕದಿಂದ.
“ಸಂಕದ ಹೊಳೆಯ ಉತ್ತರ ದಂಡೆಯಲ್ಲಿ ಭಟ್ಕಳ ನಗರವಿದೆ. ಈ ಹೊಳೆ ನೀರು ಗುಡ್ಡದ ತಪ್ಪಲಿನ ಸುಂದರ ಕಣಿವೆಯಲ್ಲಿ ಕೃಷಿಗೆ ಬಳಕೆಯಾಗುತ್ತಿದೆ. ಕೃಷಿಕರು ತಮ್ಮ ಸ್ವಂತ ಶ್ರಮದಾನದಿಂದ ಇದಕ್ಕೆ ಬೇಸಿಗೆಯಲ್ಲಿ ೮ ಒಡ್ಡು ಹಾಕುತ್ತಾರೆ. ಬೇಸಿಗೆ ಭತ್ತದ ಕೃಷಿಗೆ ನೀರು ಬಳಕೆಯಾಗುತ್ತದೆ. ಆದರೆ ಮಳೆಗಾಲದ ಪ್ರವಾಹದಿಂದ ಈ ಮಣ್ಣಿನ ಒಡ್ಡುಗಳೆಲ್ಲ ಒಡೆದು ಹೋಗುತ್ತವೆ. ಪುನಃ ಒಡ್ಡನ್ನು ಪ್ರತಿ ವರ್ಷ ನವೆಂಬರ್ ೧೭ ರಿಂದ ಡಿಸೆಂಬರ್ ೧೬ರ
ಅವಧಿಯಲ್ಲಿ ರೈತರು ದುರಸ್ತಿ ಮಾಡುವರು"
___ ಬುಕಾನನ್, ಕ್ರಿ.ಶ. ೧೮೦೧
ನಮ್ ಕಟ್ಟು ಎಂತಾ ಕೇಳ್‌ತ್ರಿ ! ಬ್ಯಾಸಗೀಗೆ ಹಾಕ್‌ತೀರು. ಮಳೆಗಾಲದಲ್ಲಿ ಎಲ್ಲ ತೊಳದು ಹೋತೀದು. ಹೊಳೆ ದಂಡೆಯಲ್ಲಿ ನಿಂತ ಕೃಷಿಕರಿಗೆ ಬೇಜಾರಿದೆ. ಇನ್ನೆಷ್ಟು ವರ್ಷ ಹೊಳೆ ಒಡ್ಡಿಗೆ ಮಣ್ಣು ಹೊರಬೇಕು ಎಂಬ ಸಹಜ ಪ್ರಶ್ನೆಯಿದೆ. ನಮ್ಮ ಹೊಳೆಗೂ ಒಂದು ಸರಕಾರಿ ಕಾಂಕ್ರೀಟ್ ಒಡ್ಡು ಬಂದರೆ ಕೃಷಿಗೆ ಅನುಕೂಲವೆಂಬ ನಿರೀಕ್ಷೆ ಎಲ್ಲರದು. ಒಡ್ಡು ಹಾಕುವ ಕೆಲಸ ಸರಳ, ಸುಲಭವಾಗಬೇಕು ಎಂಬ ಆಸೆಯಿದೆ. ಕೃಷಿ ಕೂಲಿಕಾರರ ಅಭಾವ, ಪರಿಣಿತರ ಕೊರತೆ ಪರಂಪರೆಯ ಒಡ್ಡಿನ ಪ್ರೀತಿಯನ್ನು ಕಡಿಮೆಗೊಳಿಸಿದೆ.
ಕೃಷಿ ನೀರಾವರಿ, ಭೂಸಾರ ಸಂರಕ್ಷಣೆ, ಅಂತರ್ಜಲ ಸುಧಾರಣೆಗೆ ಕರಾವಳಿ ಮಲೆನಾಡುಗಳ ಳ್ಳಗಳಲ್ಲಿ ಏನು ಮಾಡಬಹುದು ? ಸರಕಾರಿ ಅಧಿಕಾರಿಗಳನ್ನು ಕೇಳಬೇಕು. ಬಾಂದಾರ (ವೆಂಟೆಡ್ ಡ್ಯಾಮ್, ಕಿಂಡಿ ತಡೆ ಆಣೆಕಟ್ಟು ) ಹಾಕಬೇಕು - ತಕ್ಷಣ ಸಿದ್ಧ ಉತ್ತರ. ಕಳೆದ ಸುಮಾರು ೫೦ ವರ್ಷಗಳಿಂದ ಈ ಮಾದರಿ ನಿರ್ಮಾಣ ನಡೆದಿದೆ.
ಕರಾವಳಿಯ ಗಜನಿ ಭೂಮಿಗಳಲ್ಲಿ ಉಪ್ಪು ನೀರು ನಿಯಂತ್ರಣ ಕೆಲಸಗಳಿಗೆ ನಿರ್ಮಿಸುತ್ತಿದ್ದ ಮಾದರಿ ಈಗ ಊರೂರಿನ ಹಳ್ಳಗಳಲ್ಲಿ ನಿರ್ಮಾಣವಾಗಿದೆ. ೧೯೮೫ರ ಹೊತ್ತಿಗೆ ನಮ್ಮ ಜಿಲ್ಲಾ ಪಂಚಾಯತ್ ವ್ಯವಸ್ಥೆ ಜಾರಿಯಾದಾಗ ಕೃಷಿ ನೀರಾವರಿಗೆ ಇದು ಅತ್ಯುತ್ತಮ ಮಾದರಿ ಎಂದು ಭರ್ಜರಿ ಪ್ರಚಾರ ನಡೆಸಿತ್ತು. ಭೂಸಾರ ಸಂರಕ್ಷಣೆ, ಕೃಷಿ ಇಲಾಖೆ ಕೆಲಸಗಳಲ್ಲಿ ಕಿಂಡಿತಡೆ ಆಣೆಕಟ್ಟೆಯ ಒಂದು ಆಂದೋಲನವೇ ನಡೆಯಿತು!
ಸಮುದಾಯದ ಕಟ್ಟು ಗಿs ಸರಕಾರಿ ಒಡ್ಡು
ಹಳ್ಳದಲ್ಲಿ ಕಾಂಕ್ರೀಟ್ ಕಂಬ ನಿರ್ಮಿಸಿ ಮರ/ ಸಿಮೆಂಟಿನ ಬಾಗಿಲು ಹಾಕಿದರೆ ಸುಲಭದಲ್ಲಿ ನೀರು ನಿಲ್ಲಿಸಬಹುದು ಎಂಬುದು ಇದರ ಸರಳ ಸೂತ್ರ. ಬೇಸಿಗೆಯಲ್ಲಿ ಬಾಗಿಲು ಹಾಕಿ, ಮಳೆಗಾಲದಲ್ಲಿ ತೆಗೆಯುವ ಸುಲಭ ಲೆಕ್ಕಾಚಾರ. ನೀರಾವರಿ ಒಡ್ಡಿನ ಸಮುದಾಯ
ಮಾದರಿಗೂ, ಸರಕಾರಿ ಸ್ವರೂಪಕ್ಕೂ ಅಂತರವಿದೆ. ನಾಲ್ಕು ಕಂಬ ನಿರ್ಮಿಸಿ ಮರದ ಬಾಗಿಲು ಹಾಕುವ ಬಾಂದಾರ ತಂತ್ರ ಎಷ್ಟು ಯಶಸ್ವಿಯಾಗಿದೆ ಎಂದರೆ ಉತ್ತರ ಕಷ್ಟ.
ಬಾಂದಾರಗಳಿಗೆ ನೀಡಿದ ಮರ, ಸಿಮೆಂಟಿನ ಬಾಗಿಲು ಹಾಕಿದರೂ ನೀರು ಸೋರಿಕೆಯಿದೆ. ಕಂಬದ ಬುಡ, ಪಾಯದ ತಳದಿಂದ ನೀರು ಹರಿಯುವುದನ್ನು ತಡೆಯಲಾಗುವದಿಲ್ಲ. ಒಂದೆರಡು ವರ್ಷಗಳಲ್ಲಿ ಬಾಗಿಲು ಹಾಳಾಗುತ್ತದೆ. ಮಳೆಗಾಲದಲ್ಲಿ ಕಸಕಡ್ಡಿಗಳು ಸಿಕ್ಕಿ ಬಾಂದಾರ ಬಾಗಿಲು ಹಾಕಿದಂತಾಗಿ ಪ್ರವಾಹ ಕೃಷಿ ನೆಲ ಕೊರೆದ ಉದಾಹರಣೆಗಳಿವೆ.
ಸ್ಥಳ ಆಯ್ಕೆ, ನಿರ್ಮಾಣ, ನಿರ್ವಹಣೆಯ ಹಂತದಲ್ಲಿ ರೈತ ವಿಶ್ವಾಸ ಪಡೆಯುವ ಯತ್ನವೇ ಮಾಡದ ಈ ಸರಕಾರಿ ಒಡ್ಡುಗಳು ಕಾಕ್ರೀಟ್ ಸ್ಮಾರಕಗಳಾಗಿಬಿಟ್ಟಿವೆ. ಕರಾವಳಿ, ಘಟ್ಟದ ಹೊಳೆ ಹಳ್ಳಗಳಲ್ಲಿ ಕೋಟ್ಯಾಂತರ ರೂಪಾಯಿ ಕಾಮಗಾರಿಗಳು ನಿರುಪಯುಕ್ತವಾಗಿ ನಿಂತಿವೆ. ನಾವು ನಿರ್ಮಿಸಿದ್ದನ್ನು ರೈತರು ಬಳಸುತ್ತಿಲ್ಲ ಎಂಬುದು ಇಲಾಖೆಗಳ ದೂರು. ಮಣ್ಣಿನ ಕಟ್ಟಿನಲ್ಲಿ ನಿಲ್ಲುವಷ್ಟು ನೀರೂ ಸಿಮೆಂಟ್ ಬಾಂದಾರಗಳಲ್ಲಿ ಸಂಗ್ರಹವಾಗುವದಿಲ ಎಂಬ
ಮಾತು ಹಳ್ಳಿಗರದು.
ಹೊಸ ಕಾಂಕ್ರೀಟ್ ಕಟ್ಟು ನಿರ್ಮಾಣದ ಬಳಿಕ ಊರಿನ ಒಗ್ಗಟ್ಟು ಸಡಿಲವಾದ ಉದಾಹರಣೆಗಳಿದೆ. ಸರಕಾರಿ ಕಾಮಗಾರಿ ಊರಿಗೆ ಎಷ್ಟು ಉಪಯುಕ್ತ ಎಂಬುದಕ್ಕಿಂತ ಯಾವ ಪಕ್ಷದವರು ಮಾಡಿದ್ದು ಎಂಬುದು ಚರ್ಚೆಯಾಗುವ ವಿಷಯ. ಕೃಷಿ ಗೆಲುವಿಗಾಗಿ ಸಮುದಾಯದ ಒಗ್ಗಟ್ಟು ಸಾರಿದ ಕಟ್ಟುಗಳು ರಾಜಕೀಯ ದಾಳಕ್ಕೆ ಹಾಳಾದ ದಾಖಲೆಗಳಿವೆ.
ಹನ್ನೆರಡು ವರ್ಷಗಳ ಹಿಂದೆ ಉತ್ತರ ಕನ್ನಡದ ಕೆಲವು ಹಳ್ಳಿಗಳಲ್ಲಿ ಓಡಾಡಿ ಸರಕಾರೀ ಬಾಂದಾರಗಳ ಕುರಿತು ಸಮೀಕ್ಷೆ ನಡೆಸಿದ್ದೆ. ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪರಿಷತ್ (ಪಂಚಾಯತ್), ಕೃಷಿ ಇಲಾಖೆಗಳು ಭೂಸಾರ ಸಂರಕ್ಷಣೆ, ನೀರಾವರಿ, ಅಂತರ್ಜಲ ಅಭಿವೃದ್ಧಿಗೆಂದು ನಿರ್ಮಿಸಿದ ಬಾಂದಾರಗಳ ಅಧಿಕೃತ ದಾಖಲೆ ಹಿಡಿದು ಹಳ್ಳಿಗಳಿಗೆ ಹೋದರೆ ಅಚ್ಚರಿಯ ಚಿತ್ರಗಳು ಎದುರಾದವು.
ದಂಗಾಗಿಸಿದ ಸಮೀಕ್ಷಾ ಫಲಿತಾಂಶ
ಒಂದು ತಿಂಗಳ ಅವಧಿಯಲ್ಲಿ ಶಿರಸಿ ತಾಲೂಕಿನಲ್ಲಿ ೪೫ ಲಕ್ಷ ರೂಪಾಯಿ ಕಾಮಗಾರಿ ವೀಕ್ಷಣೆ. ಇವುಗಳಲ್ಲಿ ಒಂದು ಬಾಂದಾರ ಹೊರತುಪಡಿಸಿ ೪೭ ಬಾಂದಾರಗಳು ಹಳ್ಳದ ನಡುವಿನ ಸರಕಾರೀ ಕಾಂಕ್ರೀಟ್ ಸ್ಮಾರಕದಂತಿದ್ದವು ! ಉತ್ತರ ಕನ್ನಡದ ಸೂಪಾ ತಾಲೂಕಿನ ರಾಮನಗರ ಎಂಬಲ್ಲಿ ೧.೧೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬಾಂದಾರ ಹುಡುಕಿದರೆ ಒಂದೇ ಒಂದು ಕಾಮಗಾರಿ ಸರಿಯಿರಲಿಲ್ಲ ! ಬಾಂದಾರ ನಿರ್ಮಿಸಿದ ಜಾಗದಲ್ಲಿ ಒಂದಿಷ್ಟು ಕಾಂಕ್ರೀಟ್ ತುಂಡುಗಳಿದ್ದವು, ತಳಪಾಯ ಪ್ರವಹಕ್ಕೆ ಕೊಚ್ಚಿ ಹೋಗಿದ್ದವು. ಕೃಷಿ ನೆಲಕ್ಕಿಂತ ೨೫ ಅಡಿ ತಗ್ಗಿನಲ್ಲಿ ಹರಿವ ಹಳ್ಳದಗುಂಟ ನಿರ್ಮಿಸಿದ ಇಲ್ಲಿನ ನೀರು ಭೂಮಿಗೆ ಹರಿಯಲು ಸಾಧ್ಯವೇ ಇರಲಿಲ್ಲ ! ಹೊಸ ನೆಲೆಯಲ್ಲಿ ಆಗಷ್ಟೇ ಪುನರ್ವಸತಿ ಪಡೆದ ಕೃಷಿಕರಿಗೆ ಈ ಬಾಂದಾರಗಳು ತಮ್ಮ ಅನುಕೂಲಕ್ಕಾಗಿ ನಿರ್ಮಿಸಿದ್ದೆಂಬ ಕನಿಷ್ಠ ಅರಿವು ಇರಲಿಲ್ಲ. ಸರಕಾರಿ ಹಣ ಖರ್ಚು ಮಾಡುವ ಒಂದು ಕಾಮಗಾರಿಯಾಗಿ ಇಲ್ಲಿ ಹಣ ನೀರಾಯಿತು.
ಉತ್ತರ ಕನ್ನಡವೊಂದರಲ್ಲೇ ಕಳೆದ ೨೫ ವರ್ಷಗಳ ಅವಧಿಯಲ್ಲಿ ಕನಿಷ್ಠ ೪೦ ಕೋಟಿ ರೂಪಾಯಿ ಕಿಂಡಿ ತಡೆ ಆಣೆಕಟ್ಟಿಗಾಗಿ ವ್ಯಯವಾದ ಅಂದಾಜಿದೆ. ಕಳೆದ ೨೦೦೩ರ ಈಚೆಗೆ ೪ ಕೋಟಿ ರೂಪಾಯಿ ಇದೇ ಕಾರ್ಯಗಳಿಗಾಗಿ ಜಲಾನಯನ ಇಲಾಖೆ ವಿನಿಯೋಗಿಸಿದೆ. ಎಷ್ಟು ಬಾಂದಾರಗಳು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗುತ್ತಿವೆ ? ಉತ್ತರ ಎಲ್ಲರಿಗೂ ತಿಳಿದಿದೆ! ಪ್ರತಿ ಹಳ್ಳಿಯ ಹಳ್ಳದಗುಂಟ ಸಾಗಿದರೆ ಪರಿಸ್ಥಿತಿ ಅರ್ಥವಾಗುತ್ತದೆ.
ನೀರಾವರಿ ಬಾಂದಾರ ಹಾಳಾಗಿದ್ದು ವಿಶೇಷ ಸುದ್ದಿಯೆಂದು ನಾನು ವಿಶೇಷ ಆಸಕ್ತಿಯಿಂದ ಊರೂರು ತಿರುಗುತ್ತಿದ್ದೆ. ಈ ಬಾಂದಾರ ಎಲ್ಲಿ ಸರಿಯಾಗಿ ಬಳಕೆಯಾಗಿದೆ ? ಎಲ್ಲಕಡೆಯೂ ಒಂದೇ ಕತೆ ಎಂದು ಜನ ಮಾತಾಡುತ್ತಿದ್ದರು. ಶಿರಸಿಯ ಕರೂರು ಎಂಬಲ್ಲಿ ಅಧ್ಯಯನಕ್ಕೆ ಹೋದಾಗ ಅಲ್ಲಿನ ಕೃಷಿಕರು ಒಂದು ಸ್ವಾರಸ್ಯಕರ ಘಟನೆ ಹೇಳಿದರು.
ಜಿಲ್ಲಾ ಪರಿಷತ್ ಇಂಜಿನಿಯರ್ ಸಾಹೇಬರು ಬಾಂದಾರ ನಿರ್ಮಿಸುವ ಸಂದರ್ಭದಲ್ಲಿ ಪದೇ ಪದೇ ಊರಿಗೆ ಬರುತ್ತಿದ್ದರು, ನಮ್ಮ ಮನೆಯ ಅಂಗಳದಲ್ಲಿ ಬೈಕ್ ಇಡುತ್ತಿದ್ದರು. ಗೌಡ್ರೇ, ಕವಳಕ್ಕೆ ಕೊಡಿ ಎಂದು ಹೇಳುತ್ತ ತಾಂಬೂಲ ಹಾಕುತ್ತಿದ್ದರು. ಆದರೆ ಬಾಂದಾರ ಎಲ್ಲಿ , ಹೇಗೆ ಕಟ್ಟುತ್ತೇವೆಂದು ನಮಗೆ ಹೇಳಲಿಲ್ಲ! ೫ ಲಕ್ಷ ರೂಪಾಯಿ ಖರ್ಚು ಆಯ್ತಂತೆ ನಮ್ಮ ಜಮೀನಿಗೆ ನೀರು ಹರಿದಿಲ್ಲ ಎಂದು ವಿವರಿಸಿದರು.
ಕುಮಟಾದ ಮಿರ್ಜಾನ್ ಗದ್ದೆ ಬಯಲಲ್ಲಿ ೧.೫೦ ಲಕ್ಷ ವಿನಿಯೋಗಿಸಿ ಬಾಂದಾರ ನಿರ್ಮಾಣವಾಯ್ತು. ಬಾಗಿಲು ಹಾಕಿದರೆ ನೀರು ನಿಲ್ಲುವುದಿಲ್ಲ ! ನಂತರ ರೈತರು ನಾಲ್ಕು ಆಳು ಶ್ರಮದಾನ ನಡೆಸಿ ಮಣ್ಣಿನ ಒಡ್ಡು ಹಾಕಿ ಬೇಸಿಗೆ ಬೆಳೆ ತೆಗೆಯುತ್ತಾರೆ. ಸರಕಾರ ನಿರ್ಮಿಸಿದ ಒಡ್ಡಿನಿಂದ ಏನು ಪ್ರಯೋಜನ ಎಂದು ಹಳ್ಳಿಗರು ಕೇಳುವಂತಾಗಿದೆ.
ಕರಾವಳಿ ಮಲೆನಾಡಿನ ಪ್ರದೇಶದ ಪ್ರತಿ ಹಳ್ಳಿಯ ಹಳ್ಳಗಳಲ್ಲಿ ಸರಕಾರಿ ಬಾಂದಾರಗಳಿವೆ. ಬಾಗಿಲು ಹಾಕಿ ನೀರು ನಿಲ್ಲಿಸಿದವು ಶೇಕಡಾ ೧೫ಕ್ಕಿಂತ ಹೆಚ್ಚಿಲ್ಲ. ಸಿದ್ದಾಪುರದ ಹೆಗ್ಗರ್ಣಿ ಹೊಸತೋಟದ ಸನಿಹ ಹೊಸ ಬಾಂದಾರ ಕಟ್ಟಲು ರೈತರ ಹಳೆಯ ಒಡ್ಡಿನ ಕಲ್ಲು ಕಿತ್ತರು. ಹೊಸ ಬಾಂದಾರದಲ್ಲಿ ನೀರು ನಿಲ್ಲುವದಿಲ್ಲ, ಹಳೆಯ ಕಟ್ಟು ದುರಸ್ತಿಗೆ ಕಲ್ಲು ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಬೇಸಿಗೆಯಲ್ಲಿ ಬಾಗಿಲು ಹಾಕಿದರೆ ನೀರು
ನಿಲ್ಲದ ಇವು ಮಳೆಗಾಲದಲ್ಲಿ ಪ್ರವಾಹದಲ್ಲಿ ಕಸಕಡ್ಡಿಯಿಂದ ಸರಾಗ ನೀರು ಹರಿವಿಗೆ ತಡೆ ಒಡ್ಡುತ್ತದೆ. ಪಕ್ಕದ ಕೃಷಿ ಭೂಮಿಗೆ ಪ್ರವಾಹ ನುಗ್ಗುತ್ತದೆ, ಬೆಳೆ, ಭೂಮಿ ನಾಶ ಮಾಡುವ ಭೀತಿಯಿಂದ ಶಿರಸಿಯ ಕಲ್ಕುಣಿ, ಯಲ್ಲಾಪುರದ ಚವತ್ತಿಗಳಲ್ಲಿ ಸ್ವತಃ ರೈತರು ಸರಕಾರಿ ಬಾಂದಾರವನ್ನು ಕಿತ್ತು ಹಾಕಿದ್ದಾರೆ!
ಸ್ಥಳದ ಆಯ್ಕೆ, ನಿರ್ಮಾಣದ ಗುಣಮಟ್ಟದಲ್ಲಿ ಸಮಸ್ಯೆಯಿದೆ. ಎಲ್ಲಿ ಲಾರಿ ಹೋಗುತ್ತದೆ, ಯಾರು ಹೆಚ್ಚು ಪ್ರಭಾವಿಗಳು ಎಂಬುದು ಸ್ಥಳ ಆಯ್ಕೆಯ ಮಾನದಂಡ! ನಿರ್ಮಾಣದ ನಂತರ ನಿರ್ವಹಣೆಯ ಬಗೆಗೆ ಗಮನವಿಲ್ಲ, ಹೀಗಾಗಿ ಕಿಂಡಿ ತಡೆ ಆಣೆಕಟ್ಟುಗಳು ಸರಕಾರಿ ಕಾಂಕ್ರೀಟ್ ಸ್ಮಾರಕದಂತಾಗಿವೆ. ಮಣ್ಣಿನ ಒಡ್ಡಿನಲ್ಲಿ ನೀರು ನಿಲ್ಲುವಷ್ಟೂ ಬಾಂದಾರದಲ್ಲಿ ನಿಲ್ಲುವದಿಲ್ಲ ಎಂಬ ಟೀಕೆಯಿದೆ. ಕಳಪೆ ನಿರ್ಮಾಣ ಇದಕ್ಕೆ ಮುಖ್ಯ ಕಾರಣ.
ನಮ್ಮ ಹೊಳೆ ಹಳ್ಳಗಳು ಗುಡ್ಡದ ನೀರು ಸರಾಗವಾಗಿ ಸಮುದ್ರ ಸೇರಲು ನಿಸರ್ಗ ನಿರ್ಮಿಸಿದ ದಾರಿಗಳು. ಇವಕ್ಕೆ ಅಡ್ಡವಾಗಿ ಒಡ್ಡು ಹಾಕುವುದು, ಬಾಂದಾರ ಕಟ್ಟುವದು ನಾವು ಕೃಷಿ ಗೆಲ್ಲಿಸಲು ಕಂಡುಕೊಂಡ ಮಾರ್ಗ. ಬೇಸಿಗೆಯಲ್ಲಿ ನೀರು ನಿಲ್ಲಬೇಕು, ಮಳೆಗಾಲದಲ್ಲಿ ಸುಲಭವಾಗಿ ಹರಿಯಬೇಕು ಎಂದರೆ ಮಾದರಿ ನಿರ್ಮಾಣ ಸರಳವಲ್ಲ.
ನಮ್ಮ ಇಂಜಿನಿಯರ್‌ಗಳ ಬಾಂದಾರ ಬಾಗಿಲು ತೆಗೆದರೆ ಅಲ್ಲಿರುವ ಕಂಬಗಳು ಹಳ್ಳದ ಶೇಕಡಾ ೩೦ ಭಾಗ ಆಕ್ರಮಿಸಿ ಪ್ರವಾಹಕ್ಕೆ ತಡೆ ಒಡ್ಡುವ ಶಕ್ತಿ ಉಳಿಸಿಕೊಳ್ಳುತ್ತವೆ. ಆಗ ಹಳ್ಳದ ದಂಡೆ ಕೊರೆತ ಚಾಲೂ ಆಗುತ್ತದೆ. ಪ್ರವಾಹಕ್ಕೆ ತಡೆಯಾಗದೆ, ಬೇಸಿಗೆಯ ಜಲ ಸಂರಕ್ಷಣೆಯ ಬೆಂಬಲವಾಗುವ ಮಾದರಿಗಳು ಅಧಿಕ ಮಳೆ ಸುರಿಯುವ ನಮ್ಮ ಪ್ರದೇಶಗಳಿಗೆ ಬೇಕು.
ಈಗ ಕಾಡು ನಾಶವಾಗಿದೆ. ನೀರು ವೇಗವಾಗಿ ಹರಿಯುತ್ತಿದೆ. ಹಳ್ಳದ ನೀರಿನ ವೇಗ ಆಳ ಹೆಚ್ಚಿಸಿದೆ. ಈಗ ೨೫ ವರ್ಷದ ಹಿಂದೆ ಅಡಿಕೆ ತೋಟದಿಂದ ೧೦ ಅಡಿ ತಗ್ಗಿನಲ್ಲಿ ಹರಿಯುತ್ತಿದ್ದ ಹಳ್ಳ ಭೂ ಕೊರೆತ ಹೆಚ್ಚಿ ಈಗ ೨೫-೩೦ ಅಡಿ ಆಳವಾದ ಉದಾಹರಣೆಯಿದೆ. ಶಿರಸಿಯ ಆಲೇಸರ ಎಂಬಲ್ಲಿ ತೋಟದ ಹಳ್ಳ ಬರೋಬ್ಬರಿ ೮೦-೧೦೦ ಅಡಿ ತಗ್ಗಿನಲ್ಲಿ ಹರಿಯುತ್ತಿದೆ. ಮಳೆಗಾಲದಲ್ಲಿ ಭೂಕುಸಿತ ಭಯ, ಬೇಸಿಗೆ ಬರುತ್ತಲೆ ಆಳದ ಹಳ್ಳ ತೋಟದ
ಬಸಿಗಾಲುವೆಯಂತೆ ನೀರು ಹೀರಿ ಅಂತರ್ಜಲ ಕುಸಿತಕ್ಕೆ ಕಾರಣವಾಗುತ್ತಿದೆ.
ಘಟ್ಟ ಪ್ರದೇಶದಲ್ಲಿ ಅಡಿಕೆ ತೋಟದ ನಡುವೆ ಹರಿಯುವ ಹೆಚ್ಚಿನ ಹಳ್ಳಗಳು ಅಗತ್ಯಕ್ಕಿಂತ ಹೆಚ್ಚು ಆಳವಾಗಿ ಸಮಸ್ಯೆ ಬೆಳೆಸಿವೆ. ಇಂತಹ ಸ್ಥಳದಲ್ಲಿ ನೆಲ ಜಲ ಸಂರಕ್ಷಣೆಗೆ ಏನು ಮಾಡಬೇಕು ಎಂದರೆ ಅಧಿಕಾರಿಗಳು ಬಾಂದಾರ ನಿರ್ಮಾಣ, ದಂಡೆಗೆ ಕಲ್ಲು ಕಟ್ಟುವ ವಿಧಾನ ಹೇಳುತ್ತಾರೆ. ಇಂತಹ ಸ್ಥಳದಲ್ಲಿ ಪರಂಪರೆಯ ಜಾರುಕಟ್ಟು ಮಾದರಿ ಬಳಸಿದರೆ ನಿಧಾನಕ್ಕೆ ನೀರಿನ ವೇಗ ನಿಯಂತ್ರಿಸಬಹುದು. ಆಗ ಹಳ್ಳದಲ್ಲಿ ಕ್ರಮೇಣ ಹೂಳು ತುಂಬುವಂತೆ ಗಮನ
ಹರಿಸಿದರೆ ೬-೮ ವರ್ಷಗಳಲ್ಲಿ ಅಂತರ್ಜಲ ಸುಧಾರಣೆ ತರಬಹುದು.
- 976 reads
Email this page
Printer-friendly version
ಲೇಖಕರು
ವಿಶೇಷ ಬರಹಗಳು
ಇತ್ತೀಚಿನ ಬ್ಲಾಗ್ ಬರಹಗಳು
- ಫೊಟೊ ಅಲ್ಬಮ್
- ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)
- ಪ್ರಥಮ್ ಬುಕ್ಸ್ ""ಕಾವೇರಿ" ಪುಸ್ತಕದ ಬಿಡುಗಡೆ ಮತ್ತು "ನಿಮ್ಮ ನದಿಯನ್ನು ಕಾಪಾಡಿ ನೀರನ್ನು ಉಳಿಸಿ" ಆಂದೋಲನ
- ಇಲ್ಲಿ ‘ಕೊಳಚೆ ನೀರು ಕುಡಿಯುವ ನೀರು’!`ಪಲ್ಸಡ್ ಪ್ಲೇಟ್' ತಂತ್ರಜ್ಞಾನ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆವಿಷ್ಕಾರ.
- ಮಳೆ ಬಂದರೆ ಬೆಂಗಳೂರಿಗೆ ಭೇದಿ
- ಮಳೆ ಎಂದರೆ ಬಾಲ್ಯದ ನೆನಪು ಕಣಾ...
- ನಾವು ವೃತ್ತಿ/ಕೆಲಸ ಮಾಡುವಲ್ಲಿ ನೀರಿನ ಮಿತಬಳಕೆಯ ಬಗ್ಗೆ ಜಾಗೃತಿ ಹೇಗೆ ಮೂಡಿಸಬಹುದು ?
- ರೇಡಿಯೋದಲ್ಲಿ K2K
- ಮಡಿವಾಳ ಕೆರೆಯ ಉಳಿಸಿ - ಒಂದು ಕೂಗು
- ಕೆರೆ ಕರಗುವ ಸಮಯ: ನಿಮಗಿದೋ ಆಮಂತ್ರಣ
ಇತ್ತೀಚಿನ ಪ್ರತಿಕ್ರಿಯೆ
- Re: This is very nice in
2 weeks 4 days ago - Re: ಇಲ್ಲಿ ‘ಕೊಳಚೆ ನೀರು ...
3 weeks 4 days ago - Re: ‘ಇರುವೆ’; ಅಂತರ್ಜಲ ...
12 weeks 2 days ago - Re: ನಮ್ಮ ಮನೆಯ ತಾರಸಿ ಮೇಲೆ ...
12 weeks 5 days ago - Re: ‘ಕುಡಿಯಲು ಬಿಲ್ಕುಲ್ ...
15 weeks 2 days ago - Re: ಧಾರವಾಡದ ನೆಲ ನುಂಗಿ; ...
16 weeks 4 days ago - Re: ದೇಸಿ ತಂತ್ರಜ್ಞಾನದಿಂದ ...
17 weeks 6 days ago - Re: ದೇಸಿ ತಂತ್ರಜ್ಞಾನದಿಂದ ...
18 weeks 3 days ago - Re: ಧಾರವಾಡದ ಮೂಕಾಂಬಿಕಾ ...
22 weeks 6 days ago - Re: ಮಳೆ ಎಂದರೆ ಬಾಲ್ಯದ ...
23 weeks 5 days ago
| Subscribe to IWP Kannada list |
| Visit this group |










Post new comment